Author: Editor
ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರಕಟಿತವಾದ ಅಪೂರ್ವ ಗ್ರಂಥ
ಕಲಾಸಂಶೋಧಕಿ ಡಾ. ಮನೋರಮಾ ಬಿ ಎನ್ ಅವರು ಹತ್ತು ವರುಷಗಳ ಕಾಲ ಸಂಶೋಧನೆ ನಡೆಸಿ ಬರೆದ ಭಾರತದ ನಾಟ್ಯಕಲೆಗಳ ಆಂಗಿಕಾಭಿನಯದ ವಿಶ್ವಕೋಶವೆಂದೇ ಮಾನ್ಯಗೊಂಡ ಗ್ರಂಥ
ಕರ್ನಾಟಕ ಯಕ್ಷಗಾನ ಅಕಾಡೆಮಿ, ಹಾಗೂ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ಪುಸ್ತಕ ಪ್ರಶಸ್ತಿಗಳಿಗೆ ಭಾಜನವಾದ ಗ್ರಂಥ.
ಪುಟಗಳು : ೮೨೪; ರೇಖಾಚಿತ್ರಗಳ ಸಂಖ್ಯೆ : ೩೨೦ಕ್ಕೂ ಮಿಗಿಲು
ಮುಖಬೆಲೆ : ೧೬೦೦ರೂ. (ಕೊರಿಯರ್ ವೆಚ್ಚ ಪ್ರತ್ಯೇಕ)
“ಯಕ್ಷಮಾರ್ಗಮುಕುರ”- ಕೃತಿಯ ಹೆಸರೇ ಸೂಚಿಸುವಂತೆ ಸಮಸ್ತ ಯಕ್ಷಗಾನ ಸಂಪ್ರದಾಯದ ಆಧಾರಶ್ರುತಿಯಲ್ಲಿ ಇಡಿಯ ಭಾರತೀಯ ರಂಗಭೂಮಿಯನ್ನು ಸೋದಾಹರಣವಾಗಿ ಮನಗಾಣಿಸಿದೆ. ಕಲಾವಿದರಿಗೂ, ಕಲಾಭಿಮಾನಿಗಳಿಗೂ ಉಪಯುಕ್ತ ಮಾಹಿತಿಯ ಕಣಜವಾಗಿದೆ. ನಮ್ಮ ನಾಡಿನ ಕಲೆ ಎಷ್ಟೊಂದು ವೈಜ್ಞಾನಿಕ ಮತ್ತು ಶಾಸ್ತ್ರೀಯ ಎಂಬುದನ್ನು ತೋರಿಸಿಕೊಟ್ಟಿದೆ. ಶಾಶ್ವತಕೀರ್ತಿ-ಅಭಿಮಾನದ ಕಾರ್ಯವಿದು. ಇದು ಕಲಾಮಾತೆಯು ನಿರೀಕ್ಷಿಸುತ್ತಿದ್ದ ಶಾಸ್ತ್ರ ಮತ್ತು ಪ್ರಯೋಗ ಪರಂಪರೆಯ ಸಮಗ್ರ ಪರಿಚಯವುಳ್ಳ ಅಪೂರ್ವ ಕಲಾಕೃತಿ. ಎಲ್ಲ ಕಲಾವಿದರೂ ಓದಬೇಕಾದ ಗ್ರಂಥವಿದು. ವಿಶ್ವದ ಎಲ್ಲ ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನಕ್ಕೆಂದು ಇರಲೇಬೇಕಾದದ್ದು. ಧರ್ಮಸ್ಥಳದಿಂದ ನಾಡಿನ ಎಲ್ಲ ವಿಶ್ವವಿದ್ಯಾನಿಲಯಗಳಿಗೆ, ನಮ್ಮ ಯಕ್ಷಗಾನ ಮೇಳದ ಕಲಾವಿದರಿಗೆ ಒಂದು ಪ್ರತಿಯನ್ನು ಉಚಿತವಾಗಿ ನೀಡುವ ಯೋಚನೆ ಮಾಡಿದ್ದೇವೆ.
– ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ, ಪೂಜ್ಯ ಧರ್ಮಾಧಿಕಾರಿಗಳು. ಶ್ರೀಕ್ಷೇತ್ರ ಧರ್ಮಸ್ಥಳ.
“ಯಕ್ಷಮಾರ್ಗಮುಕುರ”- ಈ ಗ್ರಂಥ ಯಕ್ಷಕಲೆಗೊಂದು ದರ್ಪಣಾದರ್ಶ. ಸಂಶೋಧಕಿ ಡಾ. ಮನೋರಮಾ ಬಿ. ಎನ್ ಅವರು ನಿರಂತರ ಅಧ್ಯಯನ, ಸಾಧನೆ, ಶೋಧನೆಗಳಿಂದ ಭಾರತೀಯ ನಾಟ್ಯ/ನೃತ್ಯಕಲೆಗಳಲ್ಲಿರುವ ವೈವಿಧ್ಯ ಮತ್ತು ಸಾಮರಸ್ಯಗಳೆರಡನ್ನೂ ಗುರುತಿಸಿದ್ದಾರೆ. ಕಲೆಗಳನ್ನು ಅಭೇದ ದೃಷ್ಟಿಯಿಂದ ನೋಡುವಂತೆ ಮಾಡಿದ್ದಾರೆ. ಪುರುಷರಿಗೂ ಅಸಾಧ್ಯವೆನಿಸುವಂಥ ಇಂಥ ಕಾರ್ಯಗಳನ್ನು ಮಹಿಳೆಯಾಗಿ ಸಂಸಾರದ ಕರ್ತವ್ಯಗಳ ನಡುವೆ ಸರಿತೂಗಿಸಿಕೊಂಡು ಮಾಡುವುದೆಂದರೆ ಖಂಡಿತವಾಗಿಯೂ ಇದು ಶ್ಲಾಘನೀಯವಾದ ದಿಟ್ಟತನದ ಕಲಾಕಾಯಕ.
-ಮಾತೃಶ್ರೀ ಹೇಮಾವತೀ ವೀ. ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ.
‘ಯಕ್ಷಮಾರ್ಗಮುಕುರ’ವು ಕಲೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ದಾರಿದೀಪವಾಗುವ ಮಾರ್ಗಪ್ರವರ್ತಕ ಗ್ರಂಥ. ಈ ಗ್ರಂಥ ಮಹತ್ತು ಮತ್ತು ಬೃಹತ್ ಕೂಡಾ ಆಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಸಂಶೋಧಕ ಲೇಖಕಿಯರ ಕೊರತೆಯಿದ್ದದ್ದನ್ನು ನೀಗಿಸಿದ್ದಾರೆ. ನೀರ್ನಳ್ಳಿ ಗಣಪತಿ ಅವರು ಬಿಡಿಸಿದ ಎಲ್ಲ ರೇಖಾಚಿತ್ರಗಳು ಈ ಗ್ರಂಥವನ್ನು ಅರ್ಥೈಸಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ನೆರವಾಗಿವೆ. ಮುಂದಿನ ಪೀಳಿಗೆಗೆ ಎಲ್ಲ ಅರ್ಥದಲ್ಲೂ ಈ ಗ್ರಂಥವು ಬಹು ದೊಡ್ಡ ಕೊಡುಗೆ. ಈ ಮಹತ್ಕಾರ್ಯಕ್ಕೆ ಕೈಜೋಡಿಸಲು ಕರ್ನಾಟಕ ಬ್ಯಾಂಕ್ ಬಹಳ ಹೆಮ್ಮೆ ಪಡುತ್ತದೆ.
– ಶ್ರೀ ಮಹಾಬಲೇಶ್ವರ ಎಂ.ಎಸ್, ನಿರ್ದೇಶಕರು ಮತ್ತು ಸಿ.ಇ.ಒ., ಕರ್ನಾಟಕ ಬ್ಯಾಂಕ್, ಮಂಗಳೂರು.
‘ಸಹಸ್ರಾರು ವರುಷಗಳ ಚರಿತ್ರೆ ಯಕ್ಷಗಾನಕ್ಕಿದೆ’ ಎಂಬುದನ್ನು ಮಾತ್ರವಲ್ಲದೆ ‘ಯಕ್ಷಗಾನ ಕಲೆಯು ಶಾಸ್ತ್ರೀಯ’ವೆನ್ನುವುದನ್ನು ಇನ್ನೂ ಮುಂದಿನ ಸಾವಿರಾರು ವರುಷಗಳವರೆಗೂ ಸಾಬೀತುಪಡಿಸುವ ಗ್ರಂಥ ‘ಯಕ್ಷಮಾರ್ಗಮುಕುರ’. ಇದು ಶಾಶ್ವತ ಸಾಹಿತ್ಯ. ಯಕ್ಷಗಾನ ಉಳಿಯುವವರೆಗೂ ಇದು ಉಳಿಯುತ್ತದೆ. ವಿಶ್ವವಿದ್ಯಾನಿಲಯಗಳು ತೊಡಗಿಸಿಕೊಳ್ಳುವ ಮಟ್ಟಿನ ಬೃಹತ್ ಕೆಲಸವನ್ನು ಒಬ್ಬರೇ ಏಕದೀಕ್ಷೆಯಿಂದ ತೊಡಗಿಸಿಕೊಂಡು ಮಾಡಿದ್ದಾರೆ ಮನೋರಮಾ. ಅವರೇ ಒಂದು ವಿಶ್ವವಿದ್ಯಾನಿಲಯದ ಕಾರ್ಯವನ್ನು ಮಾಡಿದ್ದಾರೆ. ಅಂತೆಯೇ ಚಿತ್ರರಚನೆ, ಪ್ರಕಾಶನದ ಸಾಮರ್ಥ್ಯ-ಧೈರ್ಯವೂ ಮೆಚ್ಚುವಂಥದ್ದು. ಎಲ್ಲ ನಿಟ್ಟಿನಿಂದ ಈ ಗ್ರಂಥರಚನೆಯು ಅತ್ಯಪೂರ್ವ, ಅಮೋಘವಾದ ತಪಸ್ಸು.
– ಪ್ರೊ. ನಿರಂಜನ ವಾನಳ್ಳಿ, ಉಪಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ (ಉತ್ತರ), ಕೋಲಾರ.
ಐತಿಹಾಸಿಕ ಕಾರ್ಯವಿದು. ಗ್ರಂಥ ಅನಾವರಣದ ಕಾರ್ಯಕ್ರಮವೂ ಕೂಡಾ ಅಭೂತಪೂರ್ವ. ಎಲ್ಲರೂ ಮಾಡುವಂಥದ್ದಲ್ಲ. ಸುಯೋಗದಿಂದ ಕೂಡಿ ಸ್ಮರಣೀಯವಾದದ್ದು.
– ಶ್ರೀ ಪ್ರತಾಪಸಿಂಹ ನಾಯಕ್, ಕರ್ನಾಟಕ ವಿಧಾನಪರಿಷತ್ ಸದಸ್ಯರು, ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ.
ವಿದ್ವಾಂಸರ ಅಭಿಪ್ರಾಯಗಳು
ಡಾ. ಮನೋರಮಾ ಬಿ. ಎನ್ ಅವರು ಗುಣ-ಗಾತ್ರಗಳಲ್ಲಿ ವಿಸ್ಮಯಾವಹವೆನಿಸುವ ಮಹಾಗ್ರಂಥವನ್ನೇ ರಚಿಸಿದ್ದಾರೆ. ಇಲ್ಲಿ ಕೇವಲ ಯಕ್ಷಗಾನದ ಆಂಗಿಕವಷ್ಟೇ ಅಲ್ಲ, ಇಡಿಯ ಭಾರತದ ಎಲ್ಲ ಬಗೆಯ ರಂಗಕಲೆಗಳ, ನೃತ್ಯಪದ್ಧತಿಗಳ, ಜಾನಪದನರ್ತನಗಳ ಚಲನ-ವಲನಗಳ ವಿವೇಚನೆಯೂ ಹಾಸುಹೊಕ್ಕಾಗಿ ಬಂದಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಇದನ್ನು ಭಾರತದೇಶದ ನೃತ್ತ-ನೃತ್ಯ-ನಾಟ್ಯಗಳ ಆಂಗಿಕವಿಶ್ವಕೋಶವೆನ್ನಬಹುದು. ಯಕ್ಷಮಾರ್ಗಮುಕುರ ಎಂಬ ಈ ಗ್ರಂಥವು ಸಮಗ್ರಭಾರತೀಯ ರಂಗಪ್ರಪಂಚಕ್ಕೇ ಸಲ್ಲಿಸಿದ ನಿರುಪಮಸೇವೆ; ಯಕ್ಷಗಾನದ ಮೂಲಕ ಜಗತ್ತಿನ ಕಲೆಗಳಿಗೆ ನೀಡುವ ಬೆಲೆಯುಳ್ಳ ಕೊಡುಗೆಯೆನ್ನುವುದರಲ್ಲಿ ಸಂದೇಹವಿಲ್ಲ.
– ಶತಾವಧಾನಿ ಡಾ. ಆರ್. ಗಣೇಶ್, ಬಹುಶ್ರುತ ವಿದ್ವಾಂಸರು, ಅವಧಾನಿಗಳು.
ಡಾ. ಮನೋರಮಾ ಬಿ.ಎನ್ ಅವರು ಅಪರಿಮಿತವಾದ ಪರಿಶ್ರಮದಿಂದ ಈ ಆಚಾರ್ಯಕೃತಿ ‘ಯಕ್ಷಮಾರ್ಗಮುಕುg’ವನ್ನು ಸಂರಚಿಸಿದ್ದಾರೆ. ಈ ಶೋಧಾಯನದಲ್ಲಿ ಸುಮಾರು ನೂರಾಮೂವತ್ತಕ್ಕೂ ಹೆಚ್ಚು ಆಕರಗ್ರಂಥಗಳನ್ನು ಆಲೋಡಿಸಿದ್ದಾರೆ. ಯಕ್ಷಗಾನಕಲಾಕ್ಷೇತ್ರಕ್ಕೆ ಸಾರ್ವಕಾಲಿಕವಾದ ಉಲ್ಲೇಖ್ಯಗ್ರಂಥವನ್ನು ನೀಡಿದ್ದಷ್ಟೇ ಅಲ್ಲದೆ ಇನ್ನಷ್ಟು ಶೋಧನೆಯ ಹೊಳಹುಗಳನ್ನು ಹರಿಸಿದ್ದಾರೆ. ಅಧ್ಯಯನಾಸಕ್ತರಿಗೆ ಶೋಧಶೀಲರಿಗೆ ಶಾಸ್ತ್ರಕುತೂಹಲಿಗಳಿಗೆ ಈ ಕೃತಿಯು ಅಮೂಲ್ಯ ನಿಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
– ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ರಂಗಕರ್ಮಿ.
ವ್ಯಾಪಕವಾದ ಅಧ್ಯಯನ ಮತ್ತು ವಿಸ್ತಾರವಾದ ವಿವಿಧ ಪ್ರಕಾರಗಳ ಅನುಶೀಲನ ಅನ್ವಯಗಳ, ಶಾಸ್ತ್ರ ಮತ್ತು ಪ್ರಯೋಗಗಳ ಹಿತವಾದ ಸಮನ್ವಯವುಳ್ಳ ಗ್ರಂಥ. ಯಕ್ಷಗಾನ, ಭರತನಾಟ್ಯಸಹಿತ ಎಲ್ಲ ಬಗೆಯ ನೃತ್ಯ-ನಾಟ್ಯ ಸಂಶೋಧಕರಿಗೂ ಹಾಗೂ ಕಲಾವಿದರಿಗೂ ಪ್ರಯೋಜನ ನೀಡುವ ಮಹತ್ತ್ವದ ಕೃತಿ.
ಡಾ. ಎಂ. ಪ್ರಭಾಕರ ಜೋಷಿ, ಹಿರಿಯ ಯಕ್ಷಗಾನ ವಿದ್ವಾಂಸರು ಮತ್ತು ಸಂಶೋಧಕರು.
ಡಾ. ಮನೋರಮಾ ಅವರು ದೀರ್ಘಕಾಲದ ಪರಿಶ್ರಮಗೈದು ವಿವಿಧ ನೃತ್ಯ-ನಾಟ್ಯಪದ್ಧತಿಗಳನ್ನು ಯಕ್ಷಗಾನದೊಂದಿಗೆ ತೌಲನಿಕವಾಗಿ ಇರಿಸಿ ಯಕ್ಷಗಾನದ ಶಾಸ್ತ್ರೀಯತೆ, ಪ್ರಾಚೀನತೆ ಮತ್ತು ಶ್ರೀಮಂತಿಕೆಗಳನ್ನು ಆಂಗಿಕಾಭಿನಯ ಅಪಾರ ವ್ಯಾಪ್ತಿಯ ಆಯತನದಲ್ಲಿ ಕಾಣಿಸಿದ ಶ್ರೇಷ್ಠವೆನಿಸುವ ಹೊತ್ತಗೆ. ಕಲಾಸಕ್ತರ ಬಳಿ ಇರಲೇಬೇಕಾದ ಮತ್ತು ಪರಾಮರ್ಶನಕ್ಕೆ ಎಂದೆಂದಿಗೂ ಅರ್ಹವಾದ ಕೃತಿ.
– ಕೆ. ಗೋವಿಂದ ಭಟ್, ಯಕ್ಷ ದಶಾವತಾರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತರು.
May 31st, 2016 at 2:29 pm
ಉತ್ಕೃಷ್ಟ ಕೆಲಸ. ಕನ್ನಡ ನಾಡಿನ ಕೀರ್ತಿಗೆ ಇನ್ನೊಂದು ಮುಕುರವಾಯಿತು. ಅತ್ಯಗತ್ಯವಿರುವ ಇಂತಹ ಗ್ರಂಥಗಳು ಡಾ. ಮನೋರಮ ರವರಿಂದ ಇನ್ನಷ್ಟು ಬರಲಿ ಎಂದು ಆಶಿಸುತ್ತೇನೆ.