ಅಂಕಣಗಳು

Subscribe


 

ಯಕ್ಷಗಾನ ಎಂದರೆ ಸುಖವೀಯುವ ಗಾನಾದಿಗಳುಳ್ಳದ್ದು ಎಂದರ್ಥವೇ?

Posted On: Saturday, February 11th, 2017
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಇ. ಮಹಾಬಲ ಭಟ್ಟ,ಉಜಿರೆ

 

ಕರಾವಳಿ ವಿದ್ಯಾವಂತ ಬುದ್ಧಿವಂತರ ರಂಗಭೂಮಿ. ಯಾವುದೇ ನಿಯಮ-ರೀತಿರಿವಾಜುಗಳಿಲ್ಲದ ಅರ್ಥಪರಂಪರೆಯನ್ನು ಒಪ್ಪುವ ಅರ್ಥವಾದಿಗಳಲ್ಲ ಇಲ್ಲಿನವರು. ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ವಿಚಾರಗಳನ್ನು ಮನ್ನಿಸುವ ಮೂಢರಲ್ಲ ಕರಾವಳಿಯ ಜನತೆ. ಯಕ್ಷಗಾನ ಕರಾವಳಿಯ ರಾಜಕಲೆ. ನೃತ್ಯನಾಟಕಗಳಲ್ಲಿ ಯಾವೆಲ್ಲಾ ಅಂಶಗಳು ಬೇಕೆಂದು ಭರತಮುನಿಯಾದಿಗಳು ಪ್ರತಿಪಾದಿಸಿದ್ದಾರೋ ಆ ಎಲ್ಲಾ ಅಂಗಗಳನ್ನು ಹೊಂದಿರುವ ಬಾಲಕರಿಂದ ಮುದುಕರವರೆಗೂ ಸುಖ, ಜ್ಞಾನವನ್ನು ಕೊಡುವ ಕಲಾಪ್ರಕಾರ. ಆದರೆ ‘ಯಕ್ಷಗಾನ’- ಈ ಪದವು ಪ್ರಕೃತ ಬಹಳಷ್ಟು ಅರ್ಥಗಳಿಂದ ವಿವಿಕ್ತವಾಗಿದ್ದು ಈವರೆಗೂ ಪರಿಪೂರ್ಣ ಆನ್ವಯಿಕ ಅರ್ಥ ಸಿಗದಿರುವುದೇ ಸಮಸ್ಯೆ. ಯಕ್ಷಗಾನ ಎಂಬ ಈ ಹೆಸರು ಯಾವುದರಿಂದ ಬಂದಿರಬಹುದು, ಈ ಕಲೆಗೆ ರೂಢವಾಗಿ ಆ ಹೆಸರು ಬಂದಿದೆಯೇ? -ಹೀಗೆ ಇಂದಿಗೆ ಹೊಸ ನೇರ ಅರ್ಥವನ್ನು ಹೇಗೆಲ್ಲಾ ಪರಿಭಾವಿಸಬಹುದು ಎಂಬುದೇ ಪ್ರಕೃತ ವಿಷಯ.

ಸಾಮಾನ್ಯವಾಗಿ ಬಹುಶ್ರುತರು ಯಕ್ಷಕಿನ್ನರಾದಿಗಳು, ರಾತ್ರಿಸಂಚಾರಕರು/ನಿಯಾಮಕರು ಈ ಕಲೆಯನ್ನು ಮೊದಲಿಗೆ ರಾತ್ರಿಯಲ್ಲೇ ರಂಗದಲ್ಲಿ ಕಾಣಿಸುತ್ತಿದ್ದುದು ಎಂಬುದು ಜನಪ್ರಿಯ ನಂಬಿಕೆ. ಸಂಗೀತವನ್ನು ಯಕ್ಷಕಿನ್ನರಾದಿಗಳು ಬಹಳ ವಿಶೇಷವಾಗಿ ವಿಶೇಷ ಸಂದರ್ಭಗಳಲ್ಲಿ ಹಾಡುತ್ತಿದ್ದವರಾಗಿದ್ದು; ರಾತ್ರಿಯ ಕಾಲಕ್ಕೇ ಕೇಳಿ ನುಡಿಸಲ್ಪಡುತ್ತಿದ್ದುದರಿಂದ ಯಕ್ಷಗಾನ ಬಂದಿದೆ ಎಂಬ ಸುಲಭಸೂತ್ರ ಯಕ್ಷಗಾನ ಪದಜಿಜ್ಞಾಸೆಗೆ ಪೂರಕವಾಗಿ ಒದಗಿಬಂದಿದೆ. ಆದರೆ ಇವೆಲ್ಲಾ ಸಕಾರಣವಾಗಿ ಯಕ್ಷಗಾನಕ್ಕೆ ನಿಜವಾದ ಅರ್ಥವನ್ನು ತಿಳಿಸುತ್ತಿಲ್ಲ. ಸಂಸ್ಕೃತ, ಕನ್ನಡ ಭಾಷಾ ನಿಘಂಟುಗಳೂ ಕೂಡಾ ಯಕ್ಷ ಎಂಬ ಪದಕ್ಕೆ ಕುಬೇರ, ದೇವಯೋನಿ ವಿಶೇಷ ಎಂಬಿತ್ಯಾದಿ ಅರ್ಥಗಳನ್ನು ಹೇಳುವಲ್ಲಿ ಪರ್ಯಾವಸಾನವಾಗುತ್ತವೆಯೇ ಹೊರತು ಸ್ಪಷ್ಟಾರ್ಥ ತಿಳಿಸುವುದಿಲ್ಲ. ಹಾಗಾಗಿ ಇಂದಿಗೆ ರೂಢಾರ್ಥವನ್ನು ಮೆಲುಕು ಹಾಕುವುದೇ ಆಗಿದೆ. ಹಾಗೆಯೇ ಭಾಷಾ ವಿದ್ವಾಂಸರೂ ಆನ್ವಯಿಕ ಅರ್ಥವನ್ನು ಸ್ಪಷ್ಟವಾಗಿ ಪ್ರತಿಪಾದಿಸದೇ ಇರುವುದು ಶಬ್ದಾರ್ಥಚಿಂತನೆಯ ಅವಶ್ಯಕತೆಯನ್ನು ಬಲಪಡಿಸುತ್ತದೆ.

ಯಕ್ಷ ಎಂಬ ಪದಕ್ಕೆ ಸುಖ ಎಂಬ ಅಪರೂಪವಾದ ಅರ್ಥವೂ ಇದೆ. ಮಹರ್ಷಿ ವಾತ್ಸಾಯನನ ಸೂತ್ರವೊಂದು (ಕಾಮಸೂತ್ರ-ಅಧಿಕರಣ ೧, ಅಧ್ಯಾಯ ೪, ಸೂತ್ರ ೨೭) ‘ಯಕ್ಷರಾತ್ರಿಃ’ ಕೌಮುದೀ ಜಾಗರಃ’ ‘ಸುವಂಸಂತಕಃ’ ಎಂದು ಪ್ರಸ್ತಾಪಿಸುತ್ತದೆ. ಈ ಅಧಿಕರಣದಲ್ಲಿ ಹೇಳಿರುವ ನಾಯಕ-ನಾಯಿಕೆಯ ಕೃತ್ಯಗಳು, ಜೀವನ, ನಡತೆ, ಭಾವಾನುಭಾವಗಳೆಲ್ಲವೂ ಸುಖಕ್ಕೆ ಉಪಪತ್ತಿ(ಕಾರಣ)ವನ್ನು ಕೊಡುತ್ತವೆ. ಇನ್ನು ಶಾಸ್ತ್ರಸಂಗತಿಯೂ (ಉದ್ದೇಶ) ಕೂಡಾ ಸುಖವನ್ನು ಕೊಡುವಂತಹ ವಿಧಾನವನ್ನೇ ಉಪಪಾದಿಸುವಂತಹುದಾಗಿದ್ದು ಉಪಸಂಹಾರ, ವ್ಯಾಖ್ಯಾನಾದಿಗಳಲ್ಲೂ ಕೂಡಾ ಸುಖದ ವಿಚಾರವೇ ಮಂಡಿತವಾಗಿದೆ. ಆದ್ದರಿಂದ ಇಲ್ಲಿ ಯಕ್ಷ ಎಂಬ ಪದಕ್ಕೆ ‘ಸುಖ’ ಎಂಬ ಅರ್ಥ ಸಾಧುವಾಗಿದೆ ; ಹಾಗಾಗಿ ‘ಸುಖ’ ಎಂಬ ಅರ್ಥವನ್ನು ಸ್ವೀಕಾರ ಮಾಡಿದರೆ ವಿಶೇಷವಾದ ಫಲವನ್ನು ಕೊಡುತ್ತದೆ ಎಂಬುದು ನನ್ನ ಖಚಿತ ಅನಿಸಿಕೆ.

ಕಾರಣ, ‘ಯಕ್ಷಗಾನ’ ಎಂಬಲ್ಲಿಯೂ ಕೂಡಾ ‘ಯಕ್ಷ’ ಎಂದರೆ ಸುಖ ಎಂಬ ಅರ್ಥವೇ ಗ್ರಾಹ್ಯವಾಗಿದೆ. ಈ ಕಲೆಯ ಆರಾಧನೆ, ಅಭಿನಯ ಮತ್ತು ರಸಾಸ್ವಾದನದಿಂದ ಸುಖವೇ ಸಿಗುವುದರಿಂದ ಮತ್ತು ಗಾನ-ನಾದಕ್ರಮವೂ ಅದೇ ಭಾವವನ್ನು ಹೊಮ್ಮಿಸುವುದರಿಂದ ಯಕ್ಷಗಾನ ಎಂದರೆ ಸುಖಗಾನ ಎಂದೂ ಅರ್ಥವಿಸಬಹುದು. ಸಂಸ್ಕೃತದ ‘ಯೇ ಯೇ ಗತ್ಯಾರ್ಥಕಾಃ ತೇ ಜ್ಞಾನಾರ್ಥಕಾಃ’ ಎಂಬಲ್ಲಿ ಗತ್ಯರ್ಥಕ ಧಾತುವಿನಿಂದ ಹುಟ್ಟಿರುವ ಗಾನ ಎಂಬ ಶಬ್ದವೂ ಕಣ್ಣುಗಳಿಗೆ ಜ್ಞಾನವನ್ನು ಕೊಡುವ ಮೂಲಕ ಸುಖವನ್ನು ಅನುಗ್ರಹಿಸುತ್ತವೆ. ಅಷ್ಟೇ ಅಲ್ಲ, ಈ ಅರ್ಥಶೋಧನೆಯ ಹಿನ್ನೆಲೆಯಿಂದ ಕಲಾವಿದರೂ ಕೂಡಾ ಜನರಿಗೆ ಸುಖವನ್ನು ಪ್ರಸಾದಿಸಬೇಕಾದ ಅಗತ್ಯತೆ ಇಂದಿಗಿದ್ದು; ಕಲೆಯಲ್ಲಿ ಸುಖಪರಿಜ್ಞಾನವನ್ನು ಅಭಿನಿವೇಶ ಮಾಡಿಕೊಂಡು ರಸಾಸ್ವಾದ ಕೊಡಬೇಕೆಂದು ಇಲ್ಲಿನ ಮುಖ್ಯ ಅಂಶ. ಅದರಲ್ಲೂ, ಇಂದಿಗೆ ಜನರು ವಿಚಿತ್ರಾರ್ಥಗಳಿಂದ ಕಲೆಯಿಂದ ವಿಮುಖರಾಗುತ್ತಿದ್ದರೆ ಮಾನಸಿಕ ಸುಖ, ಜ್ಞಾನಾದಿಗಳನ್ನು ಯಕ್ಷಗಾನ ಕೊಡಬೇಕು ಎಂಬ ವಿವೇಕದಲ್ಲಿ ಈ ಕಲೆಯನ್ನು ಬೆಳೆಸಬೇಕಾಗಿದೆ. ಇದು ಯಕ್ಷಗಾನದ ಹುಟ್ಟಿನ ಆಶಯಕ್ಕೂ ಸಾರ್ಥಕ್ಯಭಾವ ನೀಡುತ್ತದೆ ಮತ್ತು ಅದನ್ನು ಬೆಳೆಸಿದವರಿಗೂ ಕೃತಕೃತ್ಯತೆ ಸಲ್ಲುತ್ತದೆ. ಆದ್ದರಿಂದ ಯಕ್ಷಗಾನಕ್ಕೆ ಕೇವಲ ರೂಢಾದಿ ಅರ್ಥಗಳು ಮಾತ್ರವಿದೆ ಎಂಬ ವಾದ ವಿಚಾರ ತಥ್ಯವಲ್ಲ ಎಂಬುದು ನನ್ನ ಅಭಿಪ್ರಾಯ. ‘ಯಕ್ಷಗಾನಂ ಗೆಲ್ಗೆ’

ಲೇಖಕರು ಸಂಸ್ಕೃತ ಪ್ರಾಧ್ಯಾಪಕರು, ಮುಖ್ಯ ಸಂಶೋಧನಾಧಿಕಾರಿ, (ಯುಜಿಸಿ ಮೇಜರ್ ರೀಸರ್ಚ್ ಪ್ರೊಜೆಕ್ಟ್), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ಬೆಳ್ತಂಗಡಿ

Leave a Reply

*

code