Author: 'ಮನೂ' ಬನ
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹೆಸರಾಂತ ಕೂಚಿಪುಡಿ ಕಲಾವಿದೆ, ಶಾಂಭವಿ ನೃತ್ಯ ಸಂಸ್ಥೆಯ ನಿರ್ದೇಶಕಿ, ಡ್ಯಾನ್ಸ್ ಜಾತ್ರೆಯ ರೂವಾರಿ, ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ವೈಜಯಂತಿ ಕಾಶಿ ಆಯ್ಕೆಯಾಗಿದ್ದಾರೆ. ಗುರುತರವಾದ ಜವಾಬ್ದಾರಿಗಳೆಡೆಯಲ್ಲಿ ಹೊಸತಾದ ಯೋಚನೆಗಳೊಂದಿಗೆ ವೈಜಯಂತಿ ಕಾಶಿ ನೂಪುರ ಭ್ರಮರಿಯೊಂದಿಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಮಾತಿಗಿಳಿದಿದ್ದಾರೆ. ಬನ್ನಿ. ಅವರನ್ನು ಆಲಿಸೋಣ.
· ಅಭಿನಂದನೆಗಳು. ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಅಧ್ಯಕ್ಷರಾಗಿ ನಿಮ್ಮ ಮುಂದಿನ ಗುರಿ?
ಕಲಾವಿದೆಯಾಗಿ ನಾನು ವಸ್ತುತಃ ಎದುರಿಸುತ್ತಿರುವ ಸವಾಲೇ ಪ್ರೇಕ್ಷಕರ ಸ್ಥಿತ್ಯಂತರ ಮನಸ್ಥಿತಿ ಮತ್ತು ಕಡಿಮೆಯಾಗುತ್ತಿರುವ ಪ್ರೇಕ್ಷಕರು. ಕರ್ನಾಟಕದಲ್ಲಿ ಮಾತ್ರವಲ್ಲ; ನೆರೆರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಆದರೆ ಸಮ್ಮೇಳನದಂತಹ ಸಂದರ್ಭಗಳಲ್ಲಿ ಪ್ರೇಕ್ಷಕರ ನೆರೆಯೇ ಇರುತ್ತದೆ. ಹಾಗಾಗಿ ಯಾವ ರೀತಿ ಪ್ರೇಕ್ಷಕರನ್ನು ಗಮನಿಸಿಕೊಳ್ಳಬೇಕು ಎಂಬುದೇ ದೊಡ್ಡ ಪ್ರಶ್ನೆ ಮತ್ತು ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಇಂತಹ ಸಂದರ್ಭದಲ್ಲಿ ಗುಣಮಟ್ಟದ ಕಾರ್ಯಕ್ರಮಗಳು, ಸಂಗೀತ ನೃತ್ಯದೆಡೆಗೆ ಜಾಗೃತಿ, ಯುವ ಜನತೆಯಲ್ಲಿ ಆಳವಾಗಿ ನಮ್ಮ ಸಂಗೀತ ನೃತ್ಯಗಳ ಕುರಿತು ಆಸಕ್ತಿ ಬೆಳೆಯುವಂತೆ ಮಾಡುವುದು; ಶಾಲೆ, ಶಿಕ್ಷಣ ಇಲಾಖೆ ಮುಂತಾದವರೊಂದಿಗೆ ಜೊತೆಗೂಡಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಯತ್ನಿಸುವುದು, ಹಳ್ಳಿಯ ಮಕ್ಕಳಲ್ಲಿ ಜಾಗೃತಿ ತರುವುದು; ಯುವ ಜನರಿಗೆ, ಮಕ್ಕಳಿಗೆ ಸಂಗೀತ ನೃತ್ಯಗಳೆಡೆಗೆ ಪ್ರೀತಿ ಬೆಳೆಸಿ ಅವುಗಳನ್ನು ಹವ್ಯಾಸಕ್ಕಿಂತಲೂ ವೃತ್ತಿಯನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರೇರಣೆ, ಹಳ್ಳಿಮಟ್ಟದಿಂದಲೇ ಹರಡಿ ಹೋಗಿರುವ ಹಲವು ನೃತ್ಯ ಶಿಕ್ಷಕರಿಗೆ ಉಚಿತ ತರಬೇತುಗೊಳಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಮಾಡುವ ಇಚ್ಛೆಯಿದೆ. ಅಕಾಡೆಮಿಯ ಕೆಲಸ-ಕಾರ್ಯ-ಅವಕಾಶ-ಮಾಹಿತಿಗಳ ಕುರಿತಂತೆ ಅಂತರ್ಜಾಲ ತಾಣ ರೂಪಿಸುವ ಇರಾದೆಯಿದೆ. ಕರ್ನಾಟಕದಲ್ಲಿ ಇಂದಿಗೆ ಹಿರಿಯ ಗುರುಗಳ ಬಗೆಗೆ ಗೊತ್ತಿರುವಷ್ಟು ಯುವ ಕಲಾವಿದರ ಕುರಿತ ಸಂಪರ್ಕ ವಿಳಾಸ, ಮಾಹಿತಿಗಳ ಸುಧಾರಿತ ಕ್ರೋಢೀಕರಣವಿಲ್ಲ. ಹಾಗಾಗಿ ಪ್ರತೀ ಜಿಲ್ಲೆಗೂ ತೆರಳಿ ಕಲಾವಿದರನ್ನು ಕಂಡು ಅವರ ಕುರಿತು ಉತ್ತಮ ದಾಖಲೆ ಮಾಡಬೇಕೆಂದಿದ್ದೇನೆ. ಗುರುಶಿಷ್ಯ ಪರಂಪರೆಯನ್ನು ದಾಖಲಿಸುವ ಮಟ್ಟಿಗೂ ಯೊಚನೆಗಳಿವೆ. ಕನಸುಗಳು ಅನಂತ. ಮಿತಿಗಳು ಸಾಕಷ್ಟು.
· ನಿಮ್ಮ ಈ ಹಂಬಲಕ್ಕೆ ಪೂರಕವಾದ ಸಂದರ್ಭಗಳಿದ್ದಾವೆಯೇ?
ಅಕಾಡೆಮಿಯಲ್ಲಿ ಹಣದ ಕೊರತೆಯಿದೆ. ಆದರೂ ಇರುವ ಇತಿಮಿತಿಗಳಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ಹಂಬಲವಿದೆ. ನನ್ನೊಂದಿಗೆ ಅಕಾಡೆಮಿ ಸದಸ್ಯರೂ ಜೊತೆಗೂಡಿ ಯೋಚನೆಗಳನ್ನಿತ್ತರೆ ಅವರೊಂದಿಗೆ ಒಡಗೂಡಿ ಪೂರ್ವಾಗ್ರಹವಿಲ್ಲದ ಯೋಜನೆಗಳನ್ನು ಹಾಕಿಕೊಳ್ಳಬೇಕೆಂಬ ಗುರಿ ನನ್ನದು.
· ಕಲಾಶಿಕ್ಷಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕರ್ನಾಟಕದಲ್ಲಿ ಇರುವ ಪರೀಕ್ಷೆಗಳ ಕುರಿತು ಏನು ಹೇಳುತ್ತೀರಿ?
ಕಲಾವಿದರು ಗುಣಾತ್ಮಕವಾಗಿ ಬೆಳೆಯಬೇಕೇ ಹೊರತು ಸಂಖ್ಯಾತ್ಮಕವಾಗಿ ಅಲ್ಲ. ಪರೀಕ್ಷೆ, ಪದವಿಗಳಲ್ಲಿ ಹೆಮ್ಮೆ, ಮೌಲ್ಯ, ವೃತ್ತಿಪರತೆ ಇರಬೇಕು. ಆದರೆ ಅವ್ಯವಸ್ಥೆ ಹಲವು ಬಗೆಯಲ್ಲಿ ತಾಂಡವವಾಡುತ್ತಿದೆ. ಈ ನಿಟ್ಟಿನಲ್ಲಿ ಪರೀಕ್ಷೆ, ಕಾಲೇಜುಗಳಿಗೆ ಸಂಬಂಧಿಸಿದಂತೆ ಒಂದಷ್ಟು ಕಲಾತ್ಮಕವಾದ ಶಿಸ್ತು ಬರಬೇಕಾಗಿದೆ. ಗುಣಮಟ್ಟದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಒಂದಷ್ಟು ಗುಣಮಟ್ಟ ತರುವಲ್ಲಿ ಮಾನದಂಡಗಳನ್ನೂ ಹಾಕಬೇಕಾಗಿದೆ. ಅಕಾಡೆಮಿ ಅಧ್ಯಕ್ಷೆಯಾಗಿ ಇದು ನನ್ನ ವಿನಂತಿಯಷ್ಟೇ. ಆರೋಪವಲ್ಲ. ಒಂದಷ್ಟು ಪ್ರಸ್ತಾಪಗಳನ್ನು ನಾನು ಖಂಡಿತಾ ಮುಂದಿಡುವವಳಿದ್ದೇನೆ.
· ಸಂಶೋಧನೆಗಳ ಅಗತ್ಯದ ಹಿನ್ನೆಲೆಯಲ್ಲಿ ಅಕಾಡೆಮಿ ಯಾವ ಪಾತ್ರ ನಿರ್ವಹಿಸ್ತಾ ಇದೆ?
ಸಂಶೋಧನೆ ನಡೆಸುವವರೂ ಮುಂದೆ ಬಂದರೆ ಅವರಿಗೆ ಅನುಕೂಲ ಮಾಡಿಕೊಡಬಹುದು. ಆದರೆ ಆ ಕ್ಷೇತ್ರದವರೇ ಮುಂದೆ ಬರದೇ ಹೋದರೆ ಹಣವನ್ನು ಅದಕ್ಕಾಗಿಯೇ ಎಂದು ಇಟ್ಟುಕೊಂಡು ಎಷ್ಟು ದಿನ ಕುಳಿತುಕೊಳ್ಳಲಿಕ್ಕೆ ಸಾಧ್ಯ? ಈಗಾಗಲೇ ವಿದ್ಯಾರ್ಥಿವೇತನ, ಸಂಶೋಧನಾ ಫೆಲೋಶಿಫ್‌ಗಳನ್ನು ಅಕಾಡೆಮಿ ಪ್ರತಿವರ್ಷ ನೀಡುತ್ತಿದೆ. ಸಂಶೋಧನೆ ಎಂದ ಮಾತ್ರಕ್ಕೆ ಸೈದ್ಧಾಂತಿಕವಾಗಿಯೇ ಆಗಬೇಕೆಂದೇನೂ ಇಲ್ಲ. ಪ್ರಾಯೋಗಿಕವಾಗಿಯೂ ಆಗಬಹುದಲ್ಲಾ? ಹಾಗಾಗಿ ಅಡಿಪಾಯ ಗಟ್ಟಿ ಮಾಡಿಕೊಳ್ಳಬೇಕು. ವಿದ್ಯಾರ್ಥಿವೇತನಗಳಿರುವುದೇ ಅಂತಹ ಸಂಶೋಧನಾ ಮನಸ್ಸುಗಳನ್ನು ಬೆಳೆಸಲು. ಆದರೆ ಬೆಳೆಯುತ್ತಾ ಹೋದಂತೆ ಅವರ ಗುರಿ, ಕನಸುಗಳು ಬದಲಾಗಿ ಸಂಗೀತ ನೃತ್ಯಗಳನ್ನು ಕೈಬಿಟ್ಟರೆ ಏನು ಫಲ? ಇದು ಜಾಗೃತಿಯಿಲ್ಲದಿರುವುದರಿಂದಾಗಿ.
· ಅಕಾಡೆಮಿಗೆ ಸಂಬಂಧಿಸಿದಂತೆ ನಿಯತಕಾಲಿಕೆ ಬರುತ್ತಿದ್ದದ್ದು ಕೆಲವು ವರ್ಷಗಳಿಂದ ಸ್ಥಗಿತವಾಗಿದೆ. ಪುನಃ ಆರಂಭಿಸುವ ಯೋಜನೆಗಳಿವೆಯೇ?
ನಿಯತಕಾಲಿಕೆಯಿಂದಾಗಿ ನಿಶ್ಚಿತ ಪ್ರಯೋಜನ ಸಾಧಿತವಾಗುತ್ತದೆ ಎಂದಾದರೆ ಖಂಡಿತಾ ಅದನ್ನು ಮುಂದುವರೆಸುವಲಿ ಶ್ರಮವಹಿಸುತ್ತೇನೆ. ಆದರೆ ಅದರ ಬದಲಾಗಿ ಹಳ್ಳಿಗಳಿಗೆ ತೆರಳಿ ತರಬೇತಿ ಕೊಡುವುದೋ ಅಥವಾ ಇನ್ನಾವುದೋ ಪ್ರಯೋಜನಕಾರಿ ಕೆಲಸವಾಗುತ್ತದೆ ಎಂದಾದರೆ ಅದರ ಕುರಿತು ಹೆಚ್ಚು ಗಮನ ಕೊಡುತ್ತೇನೆ. ಯಾಕೆಂದರೆ ಹಳ್ಳಿಗಳಲ್ಲಿ ಇಂದಿಗೆ ಏನು ಹಾಡುತ್ತಾರೋ, ಕುಣಿಯುತ್ತಾರೋ ‘ಅದೇ ನಿಜವಾದ ಸಂಗೀತ, ನೃತ್ಯ’ ಎಂದುಕೊಂಡ ಸಂದರ್ಭಗಳೇ ಹೆಚ್ಚು. ಅವರಲ್ಲಿ ಹೊರ ಪ್ರಪಂಚದ ಕಲೆಯ ಕುರಿತು ಅರಿವು ಹೆಚ್ಚಿಸುವ ಕೆಲಸ ಆಗಬೇಕಿದೆ.
· ಅಕಾಡೆಮಿಯ ಕಾರ್ಯನಿರ್ವಹಣೆಯ ಕುರಿತಂತೆ ಸಾಕಷ್ಟು ಆರೋಪಗಳಿವೆಯಲ್ಲ? ನಿಮ್ಮ ಅಭಿಪ್ರಾಯ?
ಸಾಮಾನ್ಯವಾಗಿ ಬೆಂಗಳೂರಿನವರಿಗೇ, ಸರ್ಕಾರಕ್ಕೆ ಹೆಚ್ಚು ಹತ್ತಿರವಾದವರಿಗೆ ಅವಕಾಶ ಸಿಗುತ್ತದೆ ಎಂಬ ಆರೋಪವಿದೆ. ಆದರೆ ಈ ಮಾತಿನಲ್ಲಿ ಹುರುಳಿಲ್ಲ. ಆದರೆ meಜioಛಿಡಿe ಚಿಡಿಣisಣಗಳು ಹೆಚ್ಚಿರುವಾಗ ಗುಣಮಟ್ಟವನ್ನು ಅಳೆಯಲು ಅಷ್ಟು ಸುಲಭಸಾಧ್ಯವಿಲ್ಲ. ಆಸಕ್ತಿ, ಇಚ್ಛೆ ಇದ್ದವರು, ಪ್ರಯತ್ನ ಮಾಡುವವರು ಖಂಡಿತಾ ಹುಡುಕಿ ಮುಂದೆ ಬಂದು ಪರಿಚಯ ಮಾಡಿಕೊಂಡು ಅವಕಾಶ ಪಡೆಯುತ್ತಾರೆ. ಇದು oಟಿe ತಿಚಿಥಿ ಖಂಡಿತಾ ಅಲ್ಲ. ಬೆಂಗಳೂರಿಗೆ ಬಂದಾಗ ಅಕಾಡೆಮಿಯಲ್ಲೋ ಅಥವಾ ಕನ್ನಡ ಸಂಸ್ಕೃತಿ ಇಲಾಖೆ ಮೂಲಕವೋ ತಮ್ಮನ್ನು ಪರಿಚಯಿಸಿಕೊಂಡು ತಮ್ಮ bio-ಜಚಿಣಚಿ ಕೊಡೋದೋ ಮಾಡಬಹುದಲ್ಲಾ? Passion, Professionalism ಇದ್ದರೆ ಏನೂ ಕೊರತೆಯೂ ಇರೋದಿಲ್ಲ. ಹಾಗಂತ ‘ಕೆಲಸವಾಗಿಲ್ಲ’ಎಂದೆಲ್ಲಾ ಅಕಾಡೆಮಿ, ಅಧ್ಯಕ್ಷರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಎಲ್ಲದಕ್ಕೂ ಅಕಾಡೆಮಿಯೇ ಆಗಬೇಕೆ?
ಹಾಗೆ ನೋಡಿದರೆ grantsಗಳನ್ನು ಕೇಳಿಕೊಂಡು ಬಂದ ಅರ್ಜಿಗಳು,ಬಂದ ಅರ್ಜಿಗಳ waiting lists ನಮ್ಮಲ್ಲಿ ಸಾಕಷ್ಟಿವೆ. ನಮಗೆ ಸಿಗುವ ಹಣದಲ್ಲಿ, ಇರುವ ಮಿತಿಯಲ್ಲಿ ಮಾಸಾಶನ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ, ಫೆಲೋಶಿಫ್ ಅಂತೆಲ್ಲಾ ಸಮನಾಗಿ ಹಂಚಿ ಕೊಡಲಾಗುತ್ತಿದೆ. ಕೆಲವರಿಗೆ ಬೇಗ ಅವಕಾಶಗಳು ಸಿಗಬಹುದು; ಕೆಲವರಿಗೆ ತಡವಾಗಿ. ಎಲ್ಲರಿಗೂ ನೇರವಾಗಿ ಸಹಾಯಧನ ಕೊಡಲಾಗದಿದ್ದರೂ ಒಂದಷ್ಟು ಪೂರಕವಾಗಿ ಸಹಾಯ ಮಾಡಬಹುದು. ಜೊತೆಗೆ ವಿದ್ಯಾರ್ಥಿ ವೇತನ, ಮಾಸಾಶನ, ಫೆಲೋಶಿಫ್, ಕಾರ್ಯಕ್ರಮ, ಕಾರ್ಯಾಗಾರ, ಸಮ್ಮೇಳನ, ಉತ್ಸವ, ಪ್ರಕಟಣೆ ಎಂದೆಲ್ಲಾ ಎಲ್ಲಾ ವಿಷಯಗಳನ್ನು ಹೊಂದಿಸಿಕೊಂಡು ಒಂದಕ್ಕೊಂದು ಸರಿತೂಗಿಸಿಕೊಂಡು ಹೋಗಬೇಕು.
ಅಂದಹಾಗೆ ವೈಜಯಂತಿ ಕಾಶಿ ಅವರ ನೇತೃತ್ವದ ‘ಡ್ಯಾನ್ಸ್ ಜಾತ್ರೆ-೨೦೧೨’ ಜನವರಿ ಮೊದಲ ವಾರದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಜರುಗಲಿದೆ. ಕಲಾವಿದರು, ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಪಾಲ್ಗೊಳ್ಳಲು ಕೋರಿದ್ದಾರೆ.