Author: ದಿವಾಕರ ಹೆಗಡೆ, ಕವಿಗಳು, ಆಕಾಶವಾಣಿ ಉದ್ಯೋಗಿ, ಧಾರವಾಡ
ಕಳೆದ ಸಂಚಿಕೆಗಳಲ್ಲಿ ಧಾರವಾಡದ ಆಕಾಶವಾಣಿ ಉದ್ಯೋಗಿ ದಿವಾಕರ ಹೆಗಡೆ ರಚಿತ
ಗಿರಿಜಾಕಲ್ಯಾಣ, ಮೇನಕೆಯ ಮಗಳು ರೂಪಕದ ಲಯ-ಗತಿಗಳ ಸೊಬಗನ್ನು ಕಂಡಿದ್ದೀರಿ.
ಈ ಸಂಚಿಕೆಯಲ್ಲಿ ಅವರಿಂದ ರಚಿತಗೊಂಡ ಮತ್ತೊಂದು ರೂಪಕ ವಿಶ್ವ ಗೋಪಾಲ.
( ಈ ರೀತಿಯ ಕಾವ್ಯ- ರಚನೆ-ಕವನಗಳಿದ್ದರೆ ಲೇಖಕರು ಕಳಿಸಬಹುದು.)
ಗಣಪತಿ ಪೂಜೆ
ಮೈಯ ಮಣ್ಣಿನ ಗೊಂಬೆ ಅಯ್ಯ ನಾ ಬಲಗೊಂಬೆ
ಅಮ್ಮನು ಜಗದಂಬೆ ಮಗ ನೀ ಮೋದಕ ತಿಂಬೆ
ಅಪ್ಪತಾಂಡವದಲ್ಲಿ ಅಮ್ಮ ಸಂಗಡದಲ್ಲಿ
ನಿಮ್ಮ ಚೆಂದದ ಕುಣಿತ ನಮ್ಮ ಕಾಯಲಿ ಗಣಪ
ಆನೆ ಸೊಂಡಿಲನೆತ್ತಿ ಇಲಿಯ ಬೆನ್ನನ್ನು ಹತ್ತಿ
ನೀ ನಮ್ಮ ಗಣಪತಿ ನೀಡೀಗ ಶುಭಮತಿ
ಕಾಲಿಗೆ ಕಿರು ಗೆಜ್ಜೆ ಕಾಲಕ್ಕೆ ಹೊಸ ಹೆಜ್ಜೆ
ಮೇಳ ಮೇಳನ ಬಿಜ್ಜೆ ಹೇಳಪ್ಪ ಹೊಸ ಪಜ್ಜೆ
ಸಣ್ಣಕಣ್ಣಿನ ದೇವ ಬಿನ್ನಣೆಯಲಿ ಕಾವ
ಬಣ್ಣ ತುಂಬಿದ ಭಾವ ಹಣ್ಣಾಗಲೀ ಜೀವ
*******
ಗೋಪ ಗೋಪಿಯರು ( ಕೋಲಾಟ) : ಆಟವೆಂದರು ಕೃಷ್ಣ ಊಟವೆಂದರು ಕೃಷ
ಮಾಟಾದ ಮಳೆಬಿಲ್ಲ ನೋಟವೆಂದರು ಕೃಷ್ಣ
ಹೂಟವೆಂದರು ಕೃಷ್ಣ ಬೇಟವೆಂದರು ಕೃಷ್ಣ
ಕೂಟದೊಳಗೆ ರಸದೂಟವೆಂದರು ಕೃಷ್ಣ
ಕಳ್ಳ ಕತ್ತಲೆ ಕೃಷ್ಣ ಬೆಳ್ಳಂ ಬೆಳಗು ಕೃಷ್ಣ
ಮಳ್ಳ ಕಾಲವ ಹಿಂದೆ ತಳ್ಳಿದ ಕೃಷ್ಣ
ಸುಳ್ಳೆ ಕಾಡುವ ಕೃಷ್ಣ ಮಳ್ಳ ಮಾಡುವ ಕೃಷ್ಣ
ಬಳ್ಳ ಪ್ರೀತಿಯ ಬಾಚಿ ನೆಳ್ಳ ನೀಡುವ ಕೃಷ್ಣ
ಗೋಪಿಯ ಮನ ಕೃಷ್ಣ ಗೋಪರ ಧನ ಕೃಷ್ಣ
ಪಾಪ ಪುಣ್ಯಗಳಾಚೆ ನೀನೇ ಕೃಷ್ಣ
ಲೇಪವಿಲ್ಲದ ಕೃಷ್ಣ ತಾಪವಿಲ್ಲದ ಕೃಷ್ಣ
ಕಾಪಿಡುವ ಸರಸ ಸಲ್ಲಾಪದಿ ಕೃಷ್ಣ.
ಕೃಷ್ಣನ ಪ್ರವೇಶ : ಬಾಲ ಬಂದ | ಗೋ | ಪಾಲ ಬಂದ ||
ಆಲದೆಲೆಯ ಮೇಲೆ ಮಲಗಿ ನಲಿವನು ಬಂದ |
ಕಾಲದಾಚೆಗೆ ನಿಂತು ಹೊಳೆವ ಮೂಲನೆ ಬಂದ |
ದನವ ಕಾಯುವ ಸಿರಿ ಲೋಲ ಶ್ರೀ ಹರಿ ಬಂದ |
ಮನವ ಗೆಲ್ಲುವ ಜನದರಸ ನಂದನ ಕಂದ |
ತುಂಗೆ ಕರುವ ಗಂಗೆದೊಗಲ ನೇವರಿಸುವನು
ರಂಗ ತಾನೆ ಹೆಸರ ಹಿಡಿದು ಬಳಿಗೆ ಕರೆವನು
ಯಮುನೆ ಬಾರೆ ಗೌರಿ ಬಾರೆ ಬಾರೆ ಶಾರದೆ
ಕಾಮಧೇನು ಕೌಲೆ ಬಾರೆ ಬಾರೆ ವರದೆಯೆ
ನೀನು ಹಸಿರು ಹುಲ್ಲ ತಿನ್ನು ವತ್ಸ ತಾಯ ಹಾಲನುಣ್ಣು
ನಾನು ನೀರ ತೋರಲೇನು ನಿನ್ನ ಮೈಯ ತಿಕ್ಕ್ಕಲೇನು
ಮಣ್ಣು ಮೈಗೆ ಮೆತ್ತಿತೇನು ತಣ್ಣ ಗಾಳಿಚುಚ್ಚಿತೇನು
ಉಣ್ಣಿ ರಕ್ತ ಹೀರಿತೇನು ಕಾಡ ಮುಳ್ಳು ಕಪ್ಪಿತೇನು
ಕೃಷ್ಣ : ಗೆಳೆಯರೆ ಬನ್ನಿರಿ ಎಳೆಯರೆ ಬನ್ನಿರಿ
ಗೋವನು ಕಾಯೋಣ ||
ನಲಿಯುತ ಬನ್ನಿರಿ ಒಲಿಯುತ ಬನ್ನಿರಿ
ಆವನು ಕಾಯೋಣ ||
ಗಿರಿಯ ಹತ್ತಿ ಆ ಬೆಟ್ಟ ಸುತ್ತಿ ಈ
ಹಸುವನು ಕಾಯೋಣ ||
ಧರೆಯ ಬುತ್ತಿ ಪಾವನದ ವೃತ್ತಿ ನಾ
ವಾಕಳ ಕಾಯೋಣ ||
ಕೃಷಿಯಾದರು ಗೋವು ಹಸಿವಾದರು ಗೋವು
ಜಸವ ನೀಡುವ ದೇವಿ ಕಾಮಧೇನು
ನೊಸಲ ಭಸ್ಮವು ಗೋವು ಮೊಸರು ತುಪ್ಪವು ಗೋವು
ಹಸಿ ಹುಲ್ಲ್ಲ ರಸದಲ್ಲಿ ಜೀವ ಜೇನು || ೧ ||
ದೇವತೆಗಳಾವಾಸ ಭಾವಶ್ರದ್ಧೆಯ ಸ್ರೋತ
ಯಾವಾಗಲು ನಮ್ಮ ಕಾವ ಆವೇ
ಜೀವ ಸಂಕುಲದೀವೆ ಪಾವನ ಪದವೀವೆ
ನೋವ ಕಳೆದು ಹೊಸ ಸೊಗವನೀವೆ || ೨||
ಹಾಲೆಂಬ ಅಮೃತವೆ ಆಲದಂತಹ ನೆರಳೆ
ಮೇಲಾದ ಪಂಚಾಮೃತ ಭವ್ಯರಸವೆ
ಬಾಲವೃದ್ಧರ ತಾಯೆ ಕಾಲದಾಚೆಯ ಮಾಯೆ
ಲಾಲನದಲಿ ಪಂಚಗವ್ಯದ ಕಸುವೆ || ೩ ||
ವತ್ಸಾಸುರ ವಧೆ
ಗೋಪರು : ನೋಡು ಕೃಷ್ಣ ಹೋರಿಯೊಂದು ನೆಗೆವ ರಭಸವ
ಓಡಿ ಕುಣಿವ ದೂಡಿ ಬಡಿವ ಹೊಸ ರಹಸ್ಯವ
ಬೇಡ ಬೇಡ ಕಾಡಬಹುದು ಇದು ವಿಚಿತ್ರವು
ಗೂಢವಾಯ್ತು ಪೀಡೆಯಾಯ್ತು ವತ್ಸ ರೂಪವು
ಕೃಷ್ಣ : ಬೆದರದಿರಿ ಓಡಿ ಬಹ ಕರುವ ಹಿಡಿಯುವೆನೀಗ |
ಕದಲದಿರಿ ಪೀಡೆಯನು ತಡೆದು ನೋಡುವೆನೀಗ ||
ಕೆದರಿ ಕಾಲೆತ್ತಿ ಹೂಂಕರಿಸುತಿಹ ಹೋರಿಯನು |
ಎದುರಿಸಿದ ಕೃಷ್ಣ ತಾನೆತ್ತಿ ಧರೆಗೆಸೆದ ||
ಗೋಪರು : ಆಟವೆಂದರು ಕೃಷ್ಣ ಊಟವೆಂದರು ಕೃಷ್ಣ
ಮಾಟಾದ ಮಳೆಬಿಲ್ಲ ನೋಟವೆಂದರು ಕೃಷ್ಣ
ಕೃಷ್ಣಲೀಲೆ:
ಗೋಪಿಯರು : ಕಾಸಿದ ಹಾಲೇ ಕಾಣದು ಮನೆಯಲಿ ಕುಡಿದವರಾರದನು |
ಕಾಸದ ಬೆಣ್ಣೆಯ ಮೀಸಲ ಮುರಿದರು ತಿಂದವರಾರದನು |
ಮೋಸದೊಳಗೆ ಒಳನುಗ್ಗಿದ ಚೋರನ ಹಿಡಿಯಲುಬೇಕವನ |
ಸಾಸಿರನಾಮದ ಯಶೋದೆ ಕಂದನ ನೆನೆಯುವದೇಕೆ ಮನ |
ಗೋಪಿಯರು : ಕೊಳಲ ಗಾನ ಕೇಳುತಿಹುದು ಯಮುನೆ ತಟದಲಿ
ಮಳಲ ತಡಿಯ ರಾಸವಿಹುದು ಬೃಂದಾವನದಲಿ
ಕೋದ ತುಳಸಿ ಬಾಡದಂತೆ ಹೇಗೆ ಆಡುವ
ಹಾದಿಯಲ್ಲಿ ಅಡ್ಡಗಟ್ಟಿ ಯಾಕೆ ಕಾಡುವ
ಬಾಲೆ ಕೇಳು ನಾನು ನೀನು ಆಕಳಾಗುವ |
ಲೀಲೆಯಿಂದಲೋಡಿ ಬಂದು ನಮ್ಮ ಕಾಯುವ |
ಕೇಳಿಯಲ್ಲಿ ಕರಿಯನೊಡನೆ ಎಂಥ ಸೊಗಸಿದೆ |
ಮೇಳದಲ್ಲಿ ಮೈಯು ಮನಸು ಏಕವಾಗಿದೆ |
ರಾಧೆಯೊಳಾಡುವ ನಮ್ಮನು ಕಾಡುವ ಜಾರನು ಈ ಕೃಷ್ಣ
ಕಾದಲನಾದನು ಮೋದದಿ ನೋಡನು ಚೋರನು ಈ ಕೃಷ್ಣ
ಬಾಧೆಯ ತಾಳೆನು ಭೇದವ ತಾಳೆನು ಕರೆವೆನು ಬಾ ಕೃಷ್ಣ
ಕಾದರು ಬಾರನು ಚಾದಗೆಯಾದೆನು ಹೋದೆಯ ಏ ಕೃಷ್ಣ
ಯಮುನೆಯ ಮಡಿಲಲಿ ನೀರಾಡಲು ತಾ ಕರೆದನು ಗೋವಿಂದ |
ರಮಣಿಯರಾನನಕುದಕವ ಚೆಲ್ಲುವ ಓಕುಳಿ ಏನಂದ |
ಕಮನೀಯನು ಕುಣಿದಾಡುತ ವಾರಿಯ ಸೋಕುವುದೇ ಚೆಂದ |
ರಮಣೀಯವು ನಾರಿಯರೊಡನಾಟವು ಬೃಂದಾವನದಂದ |
ನೀರಾಟಕಿಳಿದವರು ನಾಚಿನೀರಾಗಿಹರು |
ಸೀರೆ ಕಾಣದು ಇಟ್ಟ ತಾವಿನಲ್ಲಿ ||
ಮಾರಜನಕನೆ ಕೇಳು ನೀಡೆಮ್ಮ ಸೀರೆಯನು |
ನೂರು ನಮನವು ಕೃಷ್ಣ ನಿನ್ನ ದಮ್ಮಯ್ಯ ||
ನಾರಿಯರೆ ನಾಚದಿರಿ ಸೀರೆ ನೀಡುವ ನಿಮವೆ |
ಸಾರಿದಡದಲಿ ನಿಂತು ಮೇಲೆ ಕೈ ನೀಡಿ |
ಜಾರ ನೀನೆಂಥವನು ಮರ್ಯಾದೆಯನು ಕಳೆವೆ |
ಚೋರತನಕೊಂದಿಷ್ಟು ಮಿತಿ ಬೇಡವೆ ||
ಮೈದೊಗಲ ಮರ್ಯಾದೆಗೇನರ್ಥವಿದೆ ಹೇಳಿ |
ಕೈಯೆತ್ತಿ ಕೇಳುವುದು ಮುಗ್ಧ ಭಕ್ತಿಯಲಿ ||
ಸೈಯೆಂದರೊಲಿದು ನಾರಿಯರು ಬೇಡಿದರಾಗ |
ಜೈ ವಾಸುದೇವ ಶ್ರೀ ಹರಿಯೆ ಗೋವಿಂದ ||
ಆಟವೆಂದರು ಕೃಷ್ಣ ಊಟವೆಂದರು ಕೃಷ್ಣ
ಮಾಟಾದ ಮಳೆಬಿಲ್ಲ ನೋಟವೆಂದರು ಕೃಷ್ಣ
*********
ಕಾಲೀಯ ವಧೆ
ಗೋಪರು : ಘೋರ ಕಾಲಿಯ ತನ್ನ ವಿಷದಲಿ |
ವಾರಿಧಿಯ ಮಡುವನ್ನು ಕೆಡಿಸಿದ |
ನೀರ ಕೆಡಿಸಿದ ಗೋವ ಕೊಲ್ಲುವ | ಸಾರಿ ನೋಡಿಗ ||
ಕೃಷ್ಣ : ನೀರಲಿ ಧುಮುಕಿದ ಮಡುವಲಿ ಹುಡುಕಿದ |
ಹಾವನು ಹಿಡಿದೆಳೆದ ||
ಕಾರುವ ವಿಷ ವೈಷಮ್ಯದ ಹೆಡೆಯನು |
ಮೆಟ್ಟುತ ಹರಿ ಕುಣಿದ ||
ಭಾಮಿನಿ –
ಕರಿಯ ನೀ ಸಾಮನ್ಯನಲ್ಲವೊ |
ಬರಿಯ ಗೋವಳನಲ್ಲ ಹೆಮ್ಮೆಯ |
ಕಿರಿಯ ನೀನಾರೆಂದೆನುತಲರುಹುವುದು ಪೊರೆಯುವುದು ||
ಮತ್ಸ್ಯ ಆದಿಯೊಳಗೆ ಆವರಿಸಿದ ನೀರಿಗೆ ತೇಲಿದ ಶಿಶು ನಾನು
ವೇದವನೆತ್ತಿದ ಮೊದಲವತಾರದ ಮತ್ಸ್ಯನಿಹೆನು ನಾನು
ಕೂರ್ಮ ವಾರಿಧಿ ಮಥಿಸಿದ ಮೇರು ಪರ್ವತದ ಭಾರಕೆ ಬೆನ್ನಿತ್ತೆ
ಸೇರಿದ ದೈತ್ಯಾದಿತ್ಯರು ಕಡೆಯಲು ಕೂರ್ಮನಾಗಿ ನಿತ್ತೆ
ಮೀರಿದ ಮೋಹಿನಿ ವೇಷದಿ ಅಮೃತ ದಿವಿಜರ ಕೈಗಿತ್ತೆ
ಏರುವ ಮತ್ತಿನ ಸಾರವ ತೆಗೆದಾ ದೈತ್ಯರ ಬಣಕಿತ್ತೆ
ವರಾಹ ಘೋರ ಹಿರಣ್ಯಕ ಗಾಬರಿಗೆಡಿಸಿದ ವಸುಧೆಯ ತಾನೊದ್ದು
ಕೋರಿದೊಡನೆ ಭೂದೇವಿಯನೆತ್ತಿದೆ ಸೂಕರನಾಗಿದ್ದು
ನಾರಸಿಂಹ ಕಾಡಿದನು ವಸುಮತಿಯನಂದಾ ಹಿರಣ್ಯಕಶ್ಯಪನು |
ರೂಢಿಸಿದ ಕಂಬವನು ಒಡೆದು ಮೈ ದೋರಿದೆನು |
ಕೇಡಿಗನ ಬಡಿದು ಬಗೆದವನ ಸಂಹರಿಸಿದೆನು |
ಬೇಡಿದವ ಪ್ರಹ್ಲಾದ ನಾ ನಾರಸಿಂಹ ||
ವಾಮನ ಬಲಿಯ ನೊಲಿದು ಬೇಡಿ ಬಂದ ಕಿರಿಯ ವಾಮನ |
ಸಲುವ ದಾನ ಬೆಳೆದು ನಿಂದ ಆ ತ್ರಿವಿಕ್ರಮ |
ವ್ಯೊಮಪಾದ ಭೂಮಿಪಾದ ಬಲಿಯ ಮೆಟ್ಟಿದೆ |
ಭೂಮ ಮೆರೆದು ವಸುಂಧರೆಯನಂದು ಕಾದಿಹೆ ||
ಪರಶುರಾಮ ಪರಶುಧರನಾಗಿರ್ದೆ ಕ್ಷತ್ರಕುಲ ಸೂದನಕೆ |
ಧರೆಯಾಳ್ವ ದುಷ್ಟರನು ಸದೆದು ಮರೆದಿರ್ದೆ ||
ಹತ್ತೆರಡು ಮೊತ್ತೊಂದು ಬಾರಿ ಭೂಮಿಯ ಸುತ್ತಿ |
ಮತ್ತರನು ಕಡಿದು ಮೇದಿನಿಯ ಕಾದೆ ||
ರಾಮ ದಶರಥನಣುಗನು ತ್ರೇತಾಯುಗದಲಿ ದಶಶಿರ ನಿಗ್ರಹಕೆ
ಪೊಸತೆನಿಸಿತು ಮಾನುಷ ಜನ್ಮದ ಪರಿ ಭಕ್ತರನುಗ್ರಹಕೆ
ಭರತನ ಬಂಧುತ್ವಕೆ ಮನಸೋತೆನು ಪಾದುಕೆಗಳನಿತ್ತೆ
ದೊರೆತನದಲಿ ಧಾರಿಣಿಯನು ರಂಜಿಸಿ ಆದರ್ಶವನಿತೆ
ಕೃಷ್ಣ ಇಳೆಯ ಮೊರೆಗೆ ಇಳಿದು ಬರುವೆ ಧರೆಯೆ ಕಾಮಧೇನು |
ಕಳೆದು ಕಷ್ಟ ಬೆಳೆದು ಹರ್ಷ ಕುಣಿವ ನಮ್ಮದೇನು |
ದೇವನಲ್ಲ ಭಾವ ಹಿರಿದು ಕಾವ ಗೋವ ನಾವು |
ಸೇವೆಯಲ್ಲಿ ಜೀವವೊಲಿದರಾವ ನಲಿವು ನೋವು ||
ಆಟವೆಂದರು ಕೃಷ್ಣ ಊಟವೆಂದರು ಕೃಷ್ಣ
ಮಾಟಾದ ಮಳೆಬಿಲ್ಲ ನೋಟವೆಂದರು ಕೃಷ್ಣ ||