ಅಂಕಣಗಳು

Subscribe


 

ವಿರಹಿ

Posted On: Saturday, June 15th, 2013
1 Star2 Stars3 Stars4 Stars5 Stars (No Ratings Yet)
Loading...

Author: Shatavadhani Dr.R.Ganesh

ಅಷ್ಟನಾಯಿಕೆಯರ ಅವಸ್ಥೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅಷ್ಟನಾಯಕಾವಸ್ಥೆಯನ್ನು ರೂಪಿಸಬಹುದಾಗಿದ್ದರೂ ಯಾವ ಲಾಕ್ಷಣಿಕರೂ ಅಂತಹ ಅಭೂತಪೂರ್ವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಶತಾವಧಾನಿ ಡಾ. ಆರ್. ಗಣೇಶರು ನಾಯಕರ ಸಾಲಿಗೆ ಹೊಸ ಸಂವಿಧಾನವನ್ನೇ ನೀಡಿದ್ದು ; ನಾಯಕಭಾವಕ್ಕೆ ಲಕ್ಷಣಗಳನ್ನೂ, ಲಕ್ಷ್ಯಗೀತಗಳನ್ನೂ ರಾಗ-ತಾಳಬದ್ಧವಾಗಿ ರಚಿಸಿದ್ದಾರೆ. ಈಮೂಲಕ ಇದುವರೆವಿಗೂ ಲಕ್ಷಣಬದ್ಧವಾಗದ ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಕ್ರೋಢೀಕರಿಸಲಾಗಿದೆ. ರಾಗ-ತಾಳಗಳನ್ನೂ ಸ್ವತಃ ಶತಾವಧಾನಿ ಗಣೇಶರೇ ಸಂಯೋಜಿಸಿದ್ದು ; ನಾಯಕರ ಕುರಿತಾಗಿ ಕಾಡುತ್ತಿರುವ ಸಾಹಿತ್ಯದ ಕೊರತೆಯನ್ನು ತುಂಬಿಕೊಡುವಲ್ಲಿ ಇದು ನಿಜಕ್ಕೂ ಅಸಾಧಾರಣ ಪ್ರಯತ್ನವೇ ಸರಿ. ಇದು ಸಾಂಸ್ಕೃತಿಕ ಪತ್ರಿಕಾಲೋಕದಲ್ಲಿ ಹಿಂದೆಂದೂ ಇಲ್ಲದಂತೆ ನೂಪುರಭ್ರಮರಿಯ ಪಾಲಿಗೆ ವಿಶೇಷವಾಗಿ ಒದಗಿದ್ದು ನಿಜಕ್ಕೂ ಒಂದು ಹೆಮ್ಮೆ ಮತ್ತು ಅಪೂರ್ವ ಅವಕಾಶ. ಪಾಂಥ, ಭಾಮೀನೀಭೀತ, ಅಭಿಸಾರಕ, ನಿರೀಕ್ಷಕರ ನಂತರ ಇದೀಗ ನ ಸರದಿ. ನಮ್ಮ ಈ ಪ್ರಯತ್ನ ನಿಮ್ಮಿಂದ ಸದ್ವಿನಿಯೋಗವಾಗಲಿ…

 

ಎಲ್ಲ ಕಾರ್ಯಭಾರಗಳನ್ನು ಬದಿಗೊತ್ತಿ, ಸಂಕೇತಸ್ಥಳದಲ್ಲಿ ಕಾಯುತ್ತಿದ್ದ ನಿರೀಕ್ಷಕನು ಇದೀಗ ವಿರಹಿಯಾಗಿದ್ದಾನೆ. ವಿರಹೋತ್ಕಂಠಿತಾ ನಾಯಿಕೆಯಂತೆಯೇ ಈತನೂ ಸಮಾನದುಃಖಿ. ನಾಯಿಕೆಯಿಂದ ಬೇರೆಯಾಗಿ ಅಥವಾ ದೀರ್ಘ ಕಾಯುವಿಕೆಯಿಂದಾಗಿ ಇಲ್ಲವೇ ಅನೈಚ್ಛಿಕ-ಆಕಸ್ಮಿಕ ಅನಾಗಮನದಿಂದ ಈತ ವಿರಹಿಯಾಗಿದ್ದಾನೆ. ಮಿತ್ರರ ಮತುಗಳು, ಅನುಮಾನ, ಪ್ರೀತಿಯ ಪರೀಕ್ಷೆ, ಮಿತ್ರಾಗಮನ, ನೆರೆ ಮುಂತಾದ ವಿಕಲ್ಪ, ಮನಸ್ತಾಪ, ಕತ್ತಲೆ, ದಾರಿ ತಪ್ಪುವಿಕೆ, ಇತರರ ತಂತ್ರಗಳು ವಿರಹಕಾರಕ ಅಥವಾ ಉದ್ದೀಪಕವಾಗುತ್ತವೆ. ಪ್ರಸ್ತುತ ಸಾಹಿತ್ಯದಲ್ಲಿ ನಾಯಿಕೆಯ ಮೈತ್ರಿ ನಾಯಕನ ಕೈತಪ್ಪಿದೆ. ಆಕೆಯ ತಿರಸ್ಕಾರ, ವ್ಯಥೆಯು ಆತನ ಸ್ಮೃತಿಯ ಸವಿಯನ್ನು ಕಿತ್ತು ತಿನ್ನುತ್ತಿವೆ. ಆತನ ನಡೆ-ನುಡಿಗಳೆಲ್ಲದರಲ್ಲೂ ತೀವ್ರ ಋಣಾತ್ಮಕ ಭಾವನೆ ಇಣುಕುತ್ತಿದೆ. ಬಾಳೇ ಕೊನೆಯಾಯಿತು ಎಂಬಷ್ಟರ ಮಟ್ಟಿಗೆ ಖಿನ್ನನಾಗಿದ್ದಾನೆ. ಪ್ರಿಯೆಯ ವಿನಾ ಯಾವುದರಲ್ಲೂ ಆಸಕ್ತಿಯಿಲ್ಲ. ಆದರೆ ನಾಯಿಕೆ ತನಗೆ ಸಿಗುವಳೋ ಇಲ್ಲವೋ ಎಂಬುದು ನಿಶ್ಚಯವಿಲ್ಲದೆ ಆತಂಕದಿಂದ ಪರಿತಪಿಸುತ್ತಿದ್ದಾನೆ. ವನಿತಾಹೃದಯದ ಕೋಮಲತೆಯ ಬಗ್ಗೆ ವ್ಯಂಗ್ಯವಾಡುತ್ತಾ ಪುರುಷನ ಅನುರಾಗದ ಸಂಗೀತ ಕೊನೆಗೆ ವಿರಹಾಪಶ್ರುತಿಯ ಸಂಕೇತವೇ ಆಗುತ್ತದೆ ಎಂಬಲ್ಲಿಗೆ ಅನುಕಂಪವನ್ನೂ ವ್ಯಕ್ತಪಡಿಸುತ್ತ್ತಾನೆ.

ಇಲ್ಲಿ ರತಿ ಸ್ಥಾಯಿಭಾವ. ನಾಯಕನ ಪ್ರಿಯೆ ಇಲ್ಲಿನ ಆಲಂಬನ ವಿಭಾವ. ಆಕೆಯ ಪ್ರೀತಿ-ನಡವಳಿಕೆ, ನೆನಪು, ಸುತ್ತಮುತ್ತಲ ಪ್ರಕೃತಿ, ಈತನಿಗೆ ಉದ್ದೀಪನ ವಿಭಾವ. ಶಂಕೆ, ಆತಂಕ, ಚಿಂತನ, ವ್ಯಥೆ, ನಿರೀಕ್ಷೆ, ಸಂತಾಪ, ದೇಹಕ್ಷೀಣ, ನಿಡುಸುಯ್ಲು, ನಿರುತ್ಸಾಹ, ಕಣ್ಣೀರು, ಚಾಂಚಲ್ಯತೆ, ಮರೆವು, ರೋದನ, ದೂರು ಹೇಳುವುದು, ಅನಾಸಕ್ತಿ, ಭ್ರಾಂತಿ, ಮೂರ್ಚೆ, ಮರಣ ಇತ್ಯಾದಿ ಈತನಲ್ಲಿ ಕಂಡುಬರಬಹುದಾದ ವ್ಯಭಿಚಾರಿಭಾವಗಳು. ಇಲ್ಲಿನ ಸಾಹಿತ್ಯವು ಕಂದಪದ್ಯದಿಂದ ಪ್ರಾರಂಭವಾಗಿ ನಾಯಕನ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತದೆ. ನಂತರದ ಲಕ್ಷ್ಯಗೀತೆಯಲ್ಲಿ ನಾಯಕನಿಗೆ ಸಂಬಂಧಿಸಿದ ಉದ್ದೀಪನ ವಿಭಾವಗಳ ಸೂಕ್ಷ್ಮಗಳಿವೆ.

  

ರಾಗ : ಕಾನಡಾ ; ತಾಳ : ರೂಪಕ

ನಲ್ಲೆಯ ನಲ್ಮೆಯ ಸವಿಯಂ

ಬಲ್ಲವನೆಂತೋ ತದೀಯ ಮೈತ್ರೀದೂರಂ |

ತಲ್ಲಣಗೊಳ್ಳುತಲಿರ್ಪೀ

ನಲ್ಲಂ ತಾನಲ್ತೆ ವಿರಹಿನಾಯಕನುಚಿತಂ ||

ದಕ್ಕುವಳೇ ಅವಳು-ವಯಸ್ಯ !

ಸಿಕ್ಕುವುದೇ ಸೊಗವು ||ಪ||

ನಕ್ಕು ನಿವಾರಿಸಿ ದೂರಾದವಳು ತಾ-

ಪಕ್ಕೆ ಸಿಲ್ಕಿಸಿ ಮರೆಯಾದವಳು ||ಅ.ಪ||

ತನ್ನ ಶರೀರದ ಸೊಬಗನೆಲ್ಲ ಸಂ-

ಪನ್ನಪ್ರಕೃತಿಯಲಿ ಮುಡಿಪಿರಿಸಿ |

ಖಿನ್ನತೆಯೊಂದನ್ನೆನ್ನಲ್ಲಿ ಮೂಡಿಸಿ

ಮನ್ನಣೆ ಮೀರಿ ದೂರಾದವಳು || ೧ ||

ಸ್ಮೃತಿಗಳ ಸವಿಗೆ ತಿರಸ್ಕೃತಿ ತಿಕ್ತ-

ವ್ಯಥೆಗಳ ಸೇರಿಸಿ ತಿನಲಿತ್ತು |

ಜೊತೆಗಾರಿಕೆಯನು ಸೀಳಿ ಬಾಳಿನೀ

ಕಥೆಯನಳಿಸಿ ಕೊರೆಯಾದವಳು || ೨ ||

ವನಿತಾಹೃದಯವು ಮೃದುವೆನ್ನುವರು ಮುಗ್ಧರು

ಘನತಾನ್ವಿತಪುರುಷತ್ವವೆ ವಿಫುಲಪೇಶಲ |

ಅನುರಾಗದ ಸಂಗೀತವ ರಚಿಸುವ ಧಾತ

ಕೊನೆಯಿಲ್ಲದ ವಿರಹಾಪಶ್ರುತಿ ಸಂಕೇತ || ೩ ||

 

Leave a Reply

*

code