Author: ಡಾ.ಮನೋರಮಾ ಬಿ.ಎನ್
#ಮಹಾಮಹೋಪಾಧ್ಯಾಯ ಡಾ. #ರಾ_ಸತ್ಯನಾರಾಯಣ ಅವರ ಕರಕಮಲದಲ್ಲಿ #ಭರತನಾಟ್ಯಬೋಧಿನಿ #ನೃತ್ಯಪಠ್ಯಪುಸ್ತಕ .
Photo ಕೃಪೆ – Rohini Kanchana Subbarathnam
ಅಂದು ನಮ್ಮ ಜನ್ಮಪಾವನ ವಾಗಿತ್ತು🙏🙏🙏
ವಯೋಸಹಜವಾದ ಅವರ ಅನಾರೋಗ್ಯದ ನಡುವೆಯೂ ರೋಹಿಣಿಯಮ್ಮ ಕೈಗಿಟ್ಟ #ಭರತನಾಟ್ಯಬೋಧಿನಿ ಪುಸ್ತಕವನ್ನು ಮೊದಲಿಂದ ಕೊನೆಯವರೆಗೂ ಓದಿ ಮುಗಿಸಿದ್ದರಂತೆ. ಬಿಡುವಿನಲ್ಲಿ ಒಮ್ಮೆ ಪಕ್ಕದಲ್ಲಿಟ್ಟರೂ ಅವರಾಗಿಯೇ ಪುನಾ ಕೇಳಿ ಪಡೆದು ಓದಿದ್ದಾರೆಂದರೆ ಅದಕ್ಕಿಂತ ದೊಡ್ಡ ಆಶೀರ್ವಾದ ಮತ್ತೊಂದೆನಿದೆ ಎಂದು ನೆನಪಿಸಿಕೊಳ್ಳುತ್ತಲೇ ನಮ್ಮ ಇಡೀ ಬಳಗ ಕೃತಾರ್ಥರಾಗಿದ್ದೆವು. ನತಮಸ್ತಕರಾಗಿದ್ದೆವು.
ಅದಕ್ಕಿಂತಲೂ ಹಿಂದೊಮ್ಮೆ #ನಂದಿಕೇಶ್ವರ ಪುಸ್ತಕವನ್ನೂ ಪೂರ್ತಿ ಓದಿ, ಮೆಚ್ಚುಗೆ ಸೂಚಿಸಿ ಶಾಸ್ತ್ರವಿಚಾರದ ಬರೆವಣಿಗೆಯ ಆಸಕ್ತಿಗೆ ಆಶೀರ್ವಾದ ನೀಡಿದ್ದರು. ಅದನ್ನು ಕಂಡು, ಕೇಳಿ ಆನಂದಿತರಾಗಿ ವೀಕ್ಷಿಸುತ್ತಿದ್ದ ರೋಹಿಣಿಯಮ್ಮರ ಮೂಲಕ ಅವರದೇ ಎರಡು ಸಂಶೋಧನಾ ಗ್ರಂಥಗಳನ್ನ ಹಸ್ತಾಕ್ಷರ ಹಾಕಿ ಕಳಿಸಿ ಉಡುಗೊರೆಯಾಗಿತ್ತಾಗ ಅದೊಂದು ಜೀವಮಾನಕ್ಕೇ ಪ್ರಶಸ್ತಿ ಪಡೆದ ಸಂಭ್ರಮ.
ಅವರ ಒಡನಾಟ ಅವರ ಗ್ರಂಥಗಳ, ವ್ಯಾಖ್ಯಾನಗಳ, ಸಂಶೋಧನಾ ಲೇಖನಗಳ ಮೂಲಕವೇ ನನಗೆ ಹೆಚ್ಚು ಆದದ್ದು. ನನ್ನ ಪ್ರತಿಯೊಂದು ಶೋಧಲೇಖನಗಳ ಹಿನ್ನೆಲೆಯಲ್ಲಿ ಗುರು #ರಾಸ ರಿಲ್ಲದ ಜಾಗವನ್ನು ಕಲ್ಪಿಸಿಕೊಳ್ಳಲೇ ನನಗೆ ಆಗದು.. ಅಷ್ಟೊಂದು ಆಪ್ತ ನಿಚ್ಚಣಿಕೆ ನನ್ನ ಬದುಕಿನ ದಾರಿಗೆ ಅವರು.. ಅಕ್ಷರಗಳ ಮೂಲಕ ಇತ್ತ ದೀವಿಗೆ.
ಬಹುಶಃ ಮೈಸೂರಿನ ಕಲಾಮಿತ್ರ ಸಂದೇಶ ಭಾರ್ಗವರ ಕಲೋತ್ಸವದಲ್ಲಿ ಅವರಿಂದ ಆಶೀರ್ವಾದ ಪಡೆದು ಅವರ ಮಾತುಗಳನ್ನು ಕೇಳಿದ್ದೆ ಕೊನೆ…
ಇಂಥ ವಿದ್ವಾಂಸರ, ಗುರುವರೇಣ್ಯ ಸಾಧಕರ ಕಾಲದಲ್ಲಿ ಕೊಂಚ ಕಾಲವಾದರೂ ನಾವಿದ್ದೆವಲ್ಲ ಎಂಬುದೇ ನಮ್ಮ ಸುಕೃತ..
ಕಣ್ಣಾಲಿಗಳು ತೇವವಾಗಿವೆ. ಹೆಚ್ಚೇನೂ ಬರೆಯಲು ತೋಚುತ್ತಿಲ್ಲ….
ನಮ್ಮನ್ನು ಅಗಲಿದ ಹಿರಿಯ ಚೈತನ್ಯಕ್ಕೆ ಸದ್ಗತಿ ಹಾರೈಸುವಷ್ಟು ನಾನು ದೊಡ್ಡವಳಲ್ಲ.ಅಂತೆಯೇ ಅವರ ವಿದ್ವತ್ತು, ಸಾಧನೆ ಮತ್ತು ಕೊಡುಗೆಗಳ ಬಗ್ಗೆ ಬರೆಯಲು ಹೊರಟರೆ ಕೃತಿಯೇ ಬೃಹತ್ತಾದೀತು. ಅವರ ಆತ್ಮಶಕ್ತಿಯ ಕೃಪೆ ನಮ್ಮನ್ನು ಪೊರೆಯಲಿ ಎಂದಷ್ಟೇ ಬೇಡಿಕೊಳ್ಳಬಲ್ಲೆ. ಅವರು ನಂಬಿದ ಆ ದೇವಿ ಲಲಿತೆಯೇ ಅವರನ್ನು ಬರಮಾಡಿಕೊಂಡಿರುತ್ತಾಳೆಂದಮೇಲೆ ಹುಲು ಮಾನವರು ಏನು ಆಶಿಸಿದರೂ ಅದು ಸೂರ್ಯನೆದುರು ಹಣತೆ ಹಿಡಿದಂತೆ..
ವೈಯಕ್ತಿಕವಾಗಿ ನನ್ನ ಮತ್ತು ನೂಪುರಭ್ರಮರಿಯ ಸಮಸ್ತರ ಶತನಮನಗಳು ಸಲ್ಲುತ್ತವೆ.