Author: ಮನೋರಮಾ. ಬಿ.ಎನ್
ಭರತಕಲಾಪ್ರವೀಣ ನಾಟ್ಯಾಚಾರ್ಯ ಕೌಶಿಕ್ (ನೆನಪಿನ ಹೊನಲು)
ಲೇಖಕರು : ಗೀತಾ ವಿಶ್ವನಾಥ್
ಸಂಪಾದಕರು :ಗೌರೀ ಸುಂದರ್
ಪ್ರಕಾಶನ : ಸುಂದರ ಸಾಹಿತ್ಯ, ಬೆಂಗಳೂರು
ಪುಟ : ೧೦೭+೨೦
ಬೆಲೆ : ೧೦೦ ರೂ.
ಕರ್ನಾಟಕದ ಕಂಡ ಅಪರೂಪದ ನರ್ತಕ, ಪ್ರತಿಭಾಶೀಲ ಗುರು, ಮುಕ್ತ ಆಯಾಮದ ಕಲಾಚಿಂತಕ, ‘ಭರತನಾಟ್ಯ ದಿಗ್ಧರ್ಶನ’ದ ರೂವಾರಿ, ‘ಸನಾತನಿ’ಯ ಸಂಘಟನಾಶೀಲ, ‘ಕನಕಸಭೆ’ಯ ಕನಸುಗಾರ ದಿವಂಗತ ವಿ.ಎಸ್.ಕೌಶಿಕ್ ಅವರ ಭಾವ-ಸ್ವಭಾವ-ಬದುಕು-ನಿಲುವು-ನರ್ತನ-ನೆನಪುಗಳನ್ನು ಕಟ್ಟಿಕೊಡುವಲ್ಲಿ ಅವರ ಶಿಷ್ಯೆ ಗೀತಾ ವಿಶ್ವನಾಥ್ ಅವರ ಪ್ರಯತ್ನ ಕೊನೆಗೂ ಸಾಕಾರರೂಪ ಪಡೆದಿದೆ. ಶಿಷ್ಯೆಯ ಕಣ್ಣಲ್ಲಿ ಗುರುವಿನ ಬದುಕು ಕಂಡ ಬಗೆಯೊಂದಿಗೆ ಕೌಶಿಕರ ಪೂರ್ವೇತಿಹಾಸ, ನೃತ್ಯಕಲಿಕೆ, ಬದುಕಿನ ಕಷ್ಟ-ಸುಖ-ಸವಾಲು-ಸಾಧನೆ-ಪ್ರವಾಸ-ಪರಿತಾಪ ಹದವಾಗಿ ಅನಾವರಣಗೊಳ್ಳುತ್ತವೆ.
ಅವರ ನೃತ್ಯ ಪ್ರಯೋಗಗಳ ಲಕ್ಷಣಗಳು, ಸಾಧ್ಯತೆಗಳು ಅಲ್ಲಲ್ಲಿ ಇಣುಕಿದ್ದು ಇಂದಿನ ಕಲಿಕಾಭ್ಯಾಸಿಗಳಿಗೂ ಸೂಚನೆಯನ್ನೂ ನೀಡುತ್ತದೆ. ಜೊತೆಗೆ ಕೌಶಿಕರ ಭಾಷಣವೊಂದರ ಹಸ್ತಪ್ರತಿಯನ್ನೂ ಮುದ್ರಿಸಲಾಗಿದ್ದು; ಅವರ ಯೋಚನಾ ಲಹರಿ, ಓದುವಿಕೆಯ ಹಿನ್ನೆಲೆ, ಬರೆವಣಿಗೆಯ ಧಾಟಿಯನ್ನೂ ಹೇಳುವುದರೊಂದಿಗೆ ಒಂದಷ್ಟು ನೃತ್ಯೋಚಿತವಾದ ಓದನ್ನು ದೊರಕಿಸಿಕೊಡುವ ಪ್ರಯತ್ನ ನಡೆದಿದೆ. ಇದರೊಂದಿಗೆ ಸಾ.ಕೃ.ರಾಮಚಂದ್ರರಾಯರು ಕಂಡಂತೆ ಕೌಶಿಕರ ಸ್ಮರಣೆ ಕೃತಿಯ ಜರೂರತ್ತನ್ನು ಹಾರೈಸಿದೆ. ಅಷ್ಟೇ ಅಲ್ಲದೆ ಹಿರಿಯರಾದ ಎಸ್.ಆರ್.ರಾಮಸ್ವಾಮಿ ಅವರ ಮುನ್ನುಡಿಯಲ್ಲೂ ಕೌಶಿಕ್ ಅವರೊಂದಿಗಿನ ಒಡನಾಟದ ನೆನಪು ಗಾಢವಾಗಿಯೇ ಮೂಡಿದೆ. ಆದರೆ ಬಹುಪಾಲು ಕನ್ನಡದಲ್ಲಿಯೇ ಮುದ್ರಿತಗೊಂಡ ಈ ಕೃತಿಯ ಕೊನೆ ಭಾಗಗಳು ಪರಿಚಯದ ದೃಷ್ಟಿಯಿಂದ ಇಂಗ್ಲೀಷಿನಲ್ಲಿ ಪುನರಾವರ್ತನೆಗೊಂಡು; ಕೃತಿಯ ಒಟ್ಟು ಸೌಂದರ್ಯಕ್ಕೆ ತೊಡಕನ್ನುಂಟುಮಾಡಿದೆ. ಜೊತೆಗೆ ಇಂಗ್ಲೀಷಿನಲ್ಲಿರುವ; ಕನ್ನಡಕೃತಿಯಲ್ಲಿ ಕೈಬಿಟ್ಟುಹೋದ ಸಂಗತಿಗಳನ್ನು ಪರಿಣಾಮಕಾರಿಯಾಗಿ ಕನ್ನಡದಲ್ಲೇ ಅಚ್ಚೊತ್ತಿದ್ದರೆ ಮುಕ್ತಾಯ ಸ್ಮರಣೀಯವಾಗುತ್ತಿತ್ತು.
ಆರಂಭದ ‘ಲೇಖಕರ ಮಾತು’ ಈ ಕೃತಿಯ ಹಿನ್ನೆಲೆಯ ಅಗತ್ಯಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಿದೆ. ಇದಕ್ಕೆ ಪೂರಕವಾಗಿ ಕೃತಿಯ ಬರೆವಣಿಗೆಯಲ್ಲಿ ತಕ್ಕಮಟ್ಟಿನ ಗಾಂಭೀರ್ಯವಿದ್ದರೂ ಹೇಳಲಾದ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಮನಮುಟ್ಟಿಸುವಲ್ಲಿ ಮುದ್ರಣದ ಗುಣಮಟ್ಟ, ಸಣ್ಣ ಅಕ್ಷರಗಳು ಮತ್ತು ಅಲ್ಲಲ್ಲಿ ಕಂಡುಬರುವ ಅಕ್ಷರ-ವ್ಯಾಕರಣದೋಷಗಳು ಓದಿನ ಹರಿವಿಗೆ ಅಡ್ಡಿಯನ್ನುಂಟುಮಾಡುತ್ತವೆ. ಜೊತೆಗೆ ಕೌಶಿಕರ ವ್ಯಕ್ತಿತ್ವ ಪರಿಚಯಿಸುವಂತಹ ಫೋಟೋಗಳ ಬಳಕೆ ಸೂಕ್ತ ವಿನ್ಯಾಸದೊಂದಿಗೆ ಇನ್ನಷ್ಟು ಇರಬಹುದಿತ್ತು ಎಂಬ ನಿರೀಕ್ಷೆಯೂ ಕಾಡುತ್ತದೆ. ಈ ಹಿನ್ನೆಲೆಯಲ್ಲಿ ಕೃತಿಯ ಸಂಪಾದಕರು ಕೊಂಚ ಗಮನ, ಶ್ರಮವಿತ್ತಿದ್ದರೆ ಒಳ್ಳೆಯದಿರುತ್ತಿತ್ತು ಎನ್ನಿಸುವುದು ಸಹಜ. ಅಷ್ಟಕ್ಕೂ ಕೌಶಿಕರಂತಹ ಕೀರ್ತಿವೆತ್ತ ಗುರುಗಳ ಬಗ್ಗೆ ಬರೆಯಲಾದ ಮೊದಲ ಪುಸ್ತಕದ ಮುದ್ರಣ ಮತ್ತು ವಿನ್ಯಾಸದ ಗುಣಮಟ್ಟ ಮೌಲಿಕ ಮತ್ತು ಸಮಗ್ರವಾಗಿರಬೇಕೆಂದು ಕನ್ನಡದ ಓದುಗಮಹಾಶಯ ಅಪೇಕ್ಷೆ ಪಟ್ಟರೆ ಅದು ತಪ್ಪ್ಪಲ್ಲ.
ಆದಾಗ್ಯೂ ಇಂತಹ ನೆನಪಲ್ಲುಳಿಯುವ ಮೇರು ವ್ಯಕ್ತಿತ್ವಗಳ ಬಗೆಗಿನ ಕಲಾ-ಕೃತಿಗಳು ಒಂದಲ್ಲ ಒಂದು ಬಗೆಯಲ್ಲಿ ಮೂಡಿಬರಬೇಕಾದದ್ದು ಕಲಾಜಗತ್ತಿನ ಇಂದಿನ ಆವಶ್ಯಕತೆಗಳಲ್ಲೊಂದು.