Author: ವಿಶ್ವೇಶ್ವರ ಹೆಗಡೆ, ಕುಮಟಾ
ಫೆಬ್ರವರಿ ೨೦೧೩ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ನೃತ್ಯ ಸಂಶೋಧನ ಸಮ್ಮೇಳನದ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ನೃತ್ಯ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಮಟಾ ತಾಲ್ಲೂಕಿನ ವಿಶ್ವೇಶ್ವರ ಹೆಗಡೆ ಅವರ ಭಾಷಣಪ್ರತಿಯನ್ನು ಪ್ರಕಟಿಸಲಾಗುತ್ತಿದೆ. ಇವರು ಹುಬ್ಬಳ್ಳಿಯ ನಾಟ್ಯಾಂಜಲಿಯ ಗುರು ವಿದುಷಿ ಸಹನಾ ಭಟ್ ಅವರ ಶಿಷ್ಯ. ಪ್ರಸ್ತುತ ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆ ಬರೆಯುತ್ತಿರುವ ಇವರು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಎ ಪದವಿ ವಿದ್ಯಾರ್ಥಿ. ಹೊಸನಗರ ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಶ್ರೀಗಳ ಕನಸಿನ ಕೂಸಾದ ‘ರಾಮಕಥಾ’ ರಂಗರೂಪಕದ ಕಲಾವಿದ.
ಜಗತ್ತಿನ ಸಂಸ್ಕೃತಿಗೆ ಹಾಗೂ ಮಾನವ ಕುಲಕ್ಕೆ ದೇವರಿತ್ತ (ಪ್ರಕೃತಿಯಿತ್ತ) ವರವೇ ‘ಕಲೆ’. ಕಲೆ ಎಂಬುದು “ಪರಿಪಕ್ವಗೊಂಡ ಮನಸ್ಸಿನ ಸೃಜನಶೀಲ ಸೌಂದರ‍್ಯದ ಕೃತಿಯ ಸೃಷ್ಟಿ”. ಶಾಸ್ತ್ರಗ್ರಂಥಗಳ ನಾಡಾದ ಭಾರತದ ಅಲಂಕಾರ ಶಾಸ್ತ್ರಗ್ರಂಥಗಳು ೬೪ ಕಲೆಗಳಿವೆಯೆಂದು ಉಲ್ಲೇಖಿಸಿವೆ. ‘ಪಂಚಮವೇದ’, ‘ಉಪವೇದ’ ಎಂದು ಸಂಬೋಧಿಸಲ್ಪಡುವ ಕಲೆಗಳಲ್ಲಿ ನೃತ್ಯಕಲೆಯು ಪ್ರಮುಖವಾದದು. ಏಕೆಂದರೆ ನೃತ್ಯ ಕಲೆಯು ವಿಶ್ವದಲ್ಲಿನ ಎಲ್ಲಾ ಸಂಸ್ಕೃತಿಗಳಲ್ಲೂ ಕಂಡುಬರುವ ವೈಶಿಷ್ಟ್ಯಪೂರ್ಣವಾದ ಪವಿತ್ರ ಕಲೆ.
‘ನೃತ್ಯಕಲೆ’ ಎಂದರೆ ‘ವ್ಯಕ್ತಿಯು (ನರ್ತಕ/ನರ್ತಕಿ) ತನ್ನ ಅನುಭವಗಳಿಂದ ಪಕ್ವಗೊಂಡ ಮನಸ್ಸಿನ್ನಾಳದ ಭಾವವನ್ನು ಸೃಜನಶೀಲ ಹಾಗೂ ಕ್ರಿಯಾತ್ಮಕವಾದ ಆಂಗಿಕಾಭಿನಯದ ಮೂಲಕ ಪ್ರದರ್ಶಿಸುತ್ತಾ ಅದನ್ನು ಆಸ್ವಾದಿಸುತ್ತಿರುವ ರಸಜ್ಞರಲ್ಲಿ ರಸಾನುಭವವನ್ನುಂಟು ಮಾಡುತ್ತಾ ಆತ್ಮ ಸಂತೃಪ್ತಿಯನ್ನು ಹೊಂದುವುದೇ ಆಗಿದೆ’.
‘ಪಂಚಮವೇದ’ ಎಂದು ವಿಶೇಷವಾಗಿ ಪರಿಗಣಿಸಲ್ಪಡುವ ನೃತ್ಯಕಲೆಯು ಕೇವಲ ಮನೋರಂಜನಾ ಉದ್ದೇಶಕ್ಕಾಗಿ ಮಾತ್ರ ಎಂದು ಮೇಲ್ನೋಟಕ್ಕೆ ತೋರ್ಪಡುತ್ತದೆ. ಆದರೆ ನೃತ್ಯ ಕಲೆಯು ಒಂದು ಸರಳ, ಸುಂದರ ವ್ಯಕ್ತಿತ್ವದ ಆರೋಗ್ಯಪೂರ್ಣ ವ್ಯಕ್ತಿಯನ್ನು ರೂಪುಗೊಳಿಸಬಲ್ಲದು ಎಂದು ನೃತ್ಯವನ್ನು ಅನುಭವಿಸಿ ಅಧ್ಯಯಿಸುತ್ತಾ ಬಂದಂತೆ ತಿಳಿದು ಬರುವ ಘನಸತ್ಯ. ಅದರಂತೆ ನೃತ್ಯಕಲೆಯಿಂದಾಗುವ ಪ್ರಮುಖ ಪ್ರಯೋಜನಗಳನ್ನು ನನ್ನ ಅನಿಸಿಕೆಗೆ ತಿಳಿದಂತೆ ನಿಮ್ಮ ಮುಂದಿಡುತ್ತಿದ್ದೇನೆ.
೧. ನೃತ್ಯವು ಸಧೃಢ ಹಾಗೂ ಸೌಂದರ‍್ಯಯುತ ದೇಹಾರೋಗ್ಯವನ್ನು ನೀಡುತ್ತದೆ. : ಆಂಗಿಕವೇ ನೃತ್ಯದ/ನೃತ್ಯಕಲೆಯ ಜೀವಾಳ. ಆದುದರಿಂದ ನೃತ್ಯದಲ್ಲಿ ಅಂಗ, ಪ್ರತ್ಯಾಂಗ, ಉಪಾಂಗಗಳ ಬಳಕೆ ಅನಿವಾರ‍್ಯ. ಪಾದದಿಂದ ಶಿರದ ವರೆಗಿನ ಅಂಗಗಳನ್ನು ಹಿತಮಿತವಾಗಿ ಅಭಿನಯಕ್ಕಾಗಿ ವಿನಿಯೋಗಿಸುತ್ತೇವೆ. ನೃತ್ಯಕಲೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯೋಗಕಲೆಯೂ ಮಿಳಿತಗೊಂಡಿರುವ ಸತ್ಯ ಅನುಭವಕ್ಕೆ ಬರುತ್ತದೆ. ವೇದಾಂತತತ್ವಗಳು ದೇಹವು ೫ ರೀತಿಯ ಕೋಶಗಳಿಂದಾವೃತವಾಗಿದೆ ಎಂದು ತಿಳಿಸುತ್ತದೆ. ಅವು ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಹಾಗೂ ಆನಂದಮಯಕೋಶ. ಈ ಪಂಚಕೋಶಗಳ ಸಮತೋಲನವು ಉತ್ತಮ ಆರೋಗ್ಯವನ್ನೀಯುತ್ತದೆ. ನೃತ್ಯಾಭ್ಯಾಸವು ಇವುಗಳ ಸಮತೋಲನತೆಯನ್ನು ಕಾಯ್ದಿರಿಸುವ ಮಾರ್ಗವಾಗುವುದೆಂದು ನನ್ನ ಅಭಿಪ್ರಾಯ. ನರ್ತಿಸುವಾಗ ಪದವನ್ನು ತಟ್ಟುವುದರ ಮೂಲಕ, ವಿವಿಧ ಆಯಾಮಗಳಲ್ಲಿ ವಿಸ್ತರಿಸುವ ಮೂಲಕ, ವಿವಿಧ ಭಂಗಿಗಳ ಮೂಲಕ ನಾವು ದೇಹವನ್ನು ಅರಿವಿಲ್ಲದೆಯೇ ಯೋಗಿಕ ದಂಡನೆಗೆ ಒಳಪಡಿಸುತ್ತೇವೆ. ಇದರಿಂದಾಗಿ ದೇಹದಲ್ಲಿನ ನರಗಳು, ರಸಗ್ರಂಥಿಗಳು, ಸೂಕ್ಷ್ಮನರಗಳು ಚೈತನ್ಯಪೂರ್ಣವಾಗುತ್ತವೆ. ರಕ್ತಪರಿಚಲನಾವ್ಯೂಹವು ಚುರುಕುಗೊಂಡು ದೇಹದ ಎಲ್ಲಾ ಬಾಗಗಳಿಗೂ ನಿಯಮಿತವಾದ ರಕ್ತಪರಿಚಲನಾ ಕಾರ‍್ಯವು ನಡೆಯುವುದು. ರಸಗ್ರಂಥಿಗಳು ನಿಯಮಿತವಾಗಿ ಹಾರ್ಮೋನುಗಳನ್ನು ಸ್ರವಿಸಿ ದೇಹದ ಬೆಳವಣಿಗೆಗೆ, ಮೊದಲಾದ ಕ್ರಿಯೆಗಳು ಸಮಯಕ್ಕನುಸಾರವಾಗಿ ನಡೆಯುವಂತೆ ಕಾಯ್ದುಕೊಳ್ಳುತ್ತವೆ. ಜ್ಞಾನವಾಹಿ, ಕ್ರಿಯಾವಾಹಿ ಹಾಗೂ ಮಿದುಳಿನ ನರವ್ಯೂಹವು ಚುರುಕುಗೊಂಡು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ. ಅಂತೆಯೇ ನೃತ್ಯಾಭ್ಯಾಸದಿಂದ ಸ್ನಾಯುಗಳು ಹಾಗೂ ಮೂಳೆಗಳು ಸಂವೃದ್ಧಿಗೊಂಡು ದೇಹಕ್ಕೆ ಸದಢತೆಯನ್ನೀಯುತ್ತದೆ ಹಾಗೂ ಸುಂದರ ಆಕಾರವನ್ನು ನೀಡುತ್ತದೆ. ನಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಪೂರ್ಣರನ್ನಾಗಿಸುತ್ತದೆ. ಭಾವವಿಲ್ಲದ ನೃತ್ಯವಿಲ್ಲ. ಭಾವ ಪ್ರಕಟಣೆಗೆ ಮುಖವನ್ನೇ ಬಳಸುತ್ತೇವೆ. ಅದರ ಪರಿಣಾಮ ಮುಖದ ಸ್ನಾಯುಗಳು ಚೈತನ್ಯಗೊಂಡು ಮುಖದ ಸೌಂದರ‍್ಯವನ್ನು ಹೆಚ್ಚಿಸಿ ಕಾಂತಿಯುಕ್ತಿಗೊಳಿಸುತ್ತದೆ. ಸತತ ನೃತ್ಯಾಭ್ಯಾಸದಿಂದ ಬೆವರಿನ ರೂಪದಲ್ಲಿ ಕಶ್ಮಲಗಳು ದೇಹದಿಂದ ಹೊರಹೋಗುವುದಲ್ಲದೇ, ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ. ನೃತ್ಯಾಭ್ಯಾಸದ ಸಂದರ್ಭದಲ್ಲಿ ಉಸಿರಾಟವು ನಮಗರಿವಿಲ್ಲದಂತೆಯೇ ಯೋಗಿಕ ರೂಪದಲ್ಲಿ ನಡೆಯುತ್ತಿರುತ್ತದೆ. ಇದು ನಮ್ಮ ಶ್ವಾಸಕೋಶಾಂಗಗಳ ಮೇಲೆ ಪ್ರಾಣಾಯಾಮದಂತೆ ಪ್ರಭಾವಿಸಿ ಅವುಗಳನ್ನು ಪರಿಶುದ್ಧವಾಗಿರಿಸುತ್ತವೆ. ದೇಹದ ಪ್ರತಿಯೊಂದು ಅಂಗಗಳೂ ಚೈತನ್ಯವಾಗಿದ್ದಲ್ಲಿ ಹೃದಯವೂ ಚೈತನ್ಯದಿಂದಿರುತ್ತದೆ ಹಾಗೂ ಆರೋಗ್ಯಪೂರ್ಣವಾಗಿರುತ್ತದೆ. ಇದಲ್ಲದೇ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಸುಂದರ ದೇಹಾಕೃತಿಯನ್ನೀಯುತ್ತದೆ. ಆದ್ದರಿಂದ ನೃತ್ಯವು ಪರಿಪೂರ್ಣ ಆರೋಗ್ಯಕ್ಕೆ ಉತ್ತಮ ಮಾರ್ಗವೆಂದು ನನ್ನ ಅನಿಸಿಕೆ.
೨. ನೃತ್ಯವು ಉತ್ತಮ, ಸದೃಢ, ಹಾಗೂ ಚೈತನ್ಯಮಯವಾದ ಮಾನಸವನ್ನೀಯುತ್ತದೆ : ಆಧುನಿಕ ಜಗದ ದೈನಂದಿನ ಜಂಜಾಟದಿಂದಾಗಿ ಮಾನಸಿಕ ಅಸ್ಥಿರತೆ, ಖಿನ್ನತೆ ಮೊದಲಾದ ಮಾನಸಿಕ ಸಮಸ್ಯೆಗಳು ಕಂಡುಬರುತ್ತವೆ. ಮೊದಲೇ ಹೇಳಿದಂತೆ ನೃತ್ಯ ಎಂಬುದು ಮನಸ್ಸಿನಿಂದ ರೂಪುಗೊಂಡ ಆಂಗಿಕ ಕ್ರಿಯೆ. ಇದಲ್ಲದೇ ನೃತ್ಯಕ್ಕೆ ಸಂಗೀತವೂ ಒಂದು ಅವಿಭಾಜ್ಯ ಅಂಗವಾಗಿದೆ. ಹಿತವಾದ ಸಂಗೀತದೊಡನೆ ಸಂದರ್ಭೋಚಿತ ಆಂಗಿಕವು ಮನಸ್ಸನ್ನು ತನ್ಮಯಗೊಳಿಸುತ್ತಾ ಭಾವಲೋಕಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಆ ವ್ಯಕ್ತಿಯ ಆನಂದಮಯಕೋಶವು ಜಾಗೃತಗೊಂಡು ಆತ್ಮಸಂತೃಪ್ತಿಯನ್ನು ಹೊಂದುತ್ತದೆ. ನೃತ್ಯಾಭ್ಯಾಸವು ಈ ರೀತಿಯಲ್ಲಿ ನಮ್ಮ ಮನಸ್ಸನ್ನೂ ಆಹ್ಲಾದಮಯವಾಗಿರಿಸಿ ಉತ್ತಮ ಚಿಂತನೆಗಳು ಮೂಡುವಂತೆ ಸಹಕರಿಸುತ್ತದೆ. ನೃತ್ಯವು ಕೇವಲ ಕಲೆಯಲ್ಲ ಅದು ನಮ್ಮ ಜೀವನಕ್ಕೊಂದು ನಿಜಸ್ನೇಹಿತ. ನೃತ್ಯವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಮೊದಲಿನಿಂದಲೂ ಹೊಂದಿದೆ. ಸಮಾಜವು ನೃತ್ಯಪಟುವನ್ನು ಉತ್ತಮ ಹಾಗು ಉನ್ನತ ದೃಷ್ಟಿಯಿಂದ ಕಾಣುತ್ತದೆ. ಇದು ಆ ವ್ಯಕ್ತಿಯಲ್ಲಿ ಆತ್ಮಸ್ಥೈರ‍್ಯವನ್ನು ತುಂಬಿ ಮಾನಸಿಕವಾಗಿ ಸದೃಢಗೊಳಿಸುವುದರಲ್ಲಿ ಸಂಶಯವಿಲ್ಲ. ಅಲ್ಲದೇ ನೃತ್ಯವು ಮನಸ್ಸನ್ನು ಏಕಾಗ್ರಗೊಳಿಸಿ ಸೃಜನಶೀಲ ಚಿಂತನೆಗಳಿಗೆ ಮಾರ್ಗವಾಗುತ್ತದೆ. ಮನದ ಶಾಂತಿಯನ್ನು ಕಾಪಾಡುವುದರಲ್ಲಿ ನೃತ್ಯವು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ಸುಸ್ಥಿರ ಮನಸ್ಸಿಗೆ ಉತ್ತಮ ರಹದಾರಿಯಾಗಿದೆ.
೩. ನೃತ್ಯವು ಜ್ಞಾನವನ್ನೀಯುವ ವಿದ್ಯೆ: ಸಾಹಿತ್ಯಿಕ, ಪೌರಾಣಿಕ,ಸಾಮಾಜಿಕ, ಧಾರ್ಮಿಕ ಹೀಗೆ ನಮಗೆ ಹಲವಾರು ವಿಷಯಗಳ ಜ್ಞಾನವನ್ನೀಯುವ ಜ್ಞಾನಸರಸ್ವತಿ. ನೃತ್ಯವು ಸಾಹಿತ್ಯವನ್ನು ಒಂದು ಭಾಗವಾಗಿ ಹೊಂದಿದೆ. ನೃತ್ಯದಲ್ಲಿ ಬಳಕೆಗೊಳ್ಳುವ ಸಾಹಿತ್ಯವು ಪ್ರಾಚೀನ ಸಂಸ್ಕೃತಿಯ ಜ್ಞಾನವನ್ನಿತ್ತು ನವಚಿಂತನೆಗಳನ್ನು ನಮ್ಮಲ್ಲಿ ಮೂಡಿಸುತ್ತದೆ. ಪ್ರಾಪಂಚಿಕ ಜಗದ ಪೂರ್ಣ ಕಲ್ಪನೆಯನ್ನಿತ್ತು ಸುಂದರ ಜಗವನ್ನು ಆಸ್ವಾದಿಸುವ ಗುಣಗಳನ್ನು ಬೆಳೆಸುತ್ತದೆ. ವೈಚಾರಿಕತೆ ಹಾಗೂ ಆದರ್ಶ ತತ್ವಗಳನ್ನು ನಮ್ಮದಾಗಿಸುತ್ತದೆ. ಜ್ಞಾನವನ್ನೀಯುವ ಮಾತೆ ಈ ನೃತ್ಯಕಲೆ ಎಂಬುದು ಅನುಭವ ಸಿದ್ಧ.
೪. ನೃತ್ಯವು ಸನ್ನಡತೆ, ಸಹೃದಯತೆಯನ್ನು ಮೂಡಿಸುವ ಕಲೆ: ಜ್ಞಾನಿಯಾದವನು ವಿನಯದ ಸಾಕಾರ ರೂಪವಾಗಿರುತ್ತಾನೆ. ನೃತ್ಯವು ನೀಡುವ ಜ್ಞಾನವೇ ಅಂತಹುದು. ಆದರ್ಶ ಪುರುಷರ ಜೀವನವನ್ನು, ಸದ್ವಿಚಾರಗಳನ್ನು ನೃತ್ಯದಲ್ಲಿ ಬಳಸುವುದರಿಂದ ಆ ಪಾತ್ರಗಳು ನೃತ್ಯಪಟುವಿನ ಜೀವನದ/ಸ್ವಭಾವಗಳ ಮೇಲೆ ತನ್ನ ಪ್ರಭಾವವನ್ನು ಉಂಟುಮಾಡಿರುತ್ತದೆ; ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿಸುತ್ತದೆ. ಪ್ರಶಾಂತ ಮನದ ಹಸನ್ಮುಖ ವರ್ತನೆಯನ್ನು ಅವನದ್ದಾಗಿಸಿ ಸಹೃದಯಿಯನ್ನಾಗಿಸುತ್ತದೆ. ಗುರು ಹಿರಿಯರನ್ನು ಗೌರವಿಸುವ, ಎಲ್ಲರನ್ನು ಸಮಾನವಾಗಿ ಪ್ರೀತಿಸುವ, ಇನ್ನೊಬ್ಬರಿಗೆ ಸಹಕರಿಸುವ ಅಮೂಲ್ಯ ಗುಣಗಳನ್ನು ಬೆಳೆಸುತ್ತದೆ. ಇವುಗಳು ಆ ವ್ಯಕ್ತಿಯನ್ನು ಗೌರವ ಭಾವದಿಂದ ಕಾಣುವಂತೆ ಮಾಡುತ್ತದೆ ಹಾಗೂ ಅವನನ್ನು ಆದರ್ಶ ಪೂರ್ಣನನ್ನಾಗಿಸುವುದು ನಿಸ್ಸಂದೇಹ.
ನೃತ್ಯಕಲೆಯ ಉಪಯೋಗಗಳನ್ನು ವಿವರಿಸಹೊರಟರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕ್ರಿಯಾಶೀಲತೆ, ಕಾರ‍್ಯತತ್ಪರತೆ ಹೀಗೇ ಅನೇಕಾನೇಕ ಜೀವನಮೌಲ್ಯ ಕೌಶಲ್ಯಗಳನ್ನು ನೃತ್ಯಾಭ್ಯಾಸಿಯಲ್ಲಿ ಮೂಡಿಸುತ್ತದೆ. ಅದರಲ್ಲೂ ಶಾಸ್ತ್ರೀಯ ನೃತ್ಯ ಪದ್ಧತಿಗಳು ಸಮಾಜಕ್ಕೆ ಉತ್ತಮ ನಾಗರೀಕನನ್ನು ನೀಡುವಲ್ಲಿ ಮಹತ್ತರವಾದ ಸ್ಥಾನವನ್ನು ನಿರ್ವಹಿಸಬಲ್ಲದು ಎಂಬುದು ನನ್ನ ಮನದ ಇಂಗಿತ. ಅದಕ್ಕಾಗಿ ನಮ್ಮ ಈ ಯುವ ಪೀಳಿಗೆಯಲ್ಲಿ ಕಳಕಳಿಯ ವಿನಂತಿಯೇನೆಂದರೆ ನೃತ್ಯವನ್ನು ಹಾಗೂ ಅದರ ಶಾಸ್ತ್ರೀಯತೆಯನ್ನು ಕಾಪಾಡಿ ಅದನ್ನು ಪರಿಪೂರ್ಣವಾಗಿ ಅಧ್ಯಯಿಸಿ ಉತ್ತಮ ಮೌಲ್ಯಗಳನ್ನು ನಮ್ಮದಾಗಿಸಿಕೊಂಡು ಗೌರವಾನ್ವಿತರಾಗೋಣ; ಸ್ವಾಸ್ವ್ಥ್ಯ ಸಮಾಜವನ್ನ ನಿರ್ಮಿಸೋಣ.