Author: - ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು
ಶ್ರೀರಾಮನ ಅನನ್ಯಭಕ್ತ ತುಲಸೀದಾಸ. ರಾಮಚರಿತಮಾನಸದ ಕರ್ತೃ. ರಾಮಾಯಣದ ಹಲವು ಭಾವುಕ ಸನ್ನಿವೇಶಗಳನ್ನು ಸ್ವಂತಕಲ್ಪನೆಯಿಂದ ಆರ್ದ್ರಗೊಳಿಸಿದ ಭಕ್ತಕವಿ. ಈ ಅನುಭಾವಿಯ ಬಗೆಗೇ ಅನೇಕ ಕಿಲವದಂತಿ ಪ್ರಚಲಿತವಾಗಿದೆ. ಹಲವು ಹರಿದಾಸರ ಕುರಿತು ಇರುವಂತೆಯೇ. ಅಂತಹ ಲೋಕಕತೆಗಳಲ್ಲಿ, ತುಲಸೀದಾಸನಿಗೆ ಚಿತ್ರಕೂಟದಲ್ಲಿ ಶ್ರೀರಾಮ್ನ ದರ್ಶನ ಆದದ್ದೂ ಸ್ವಾರಸ್ಯಕರವಾಗಿದೆ. ನಾಟ್ಯಾಯಮಾನತೆಯನ್ನು ಹೊಂದಿದ ಸುಂದರ ರಂಗಾಕ್ಷರ. ತುಲಸೀದಾಸನಿಗೆ ಶ್ರೀರಾಮಚಂದ್ರನನ್ನು ಭೇಟಿ ಮಾಡಿಸುವಲ್ಲಿ ಪ್ರಧಾನಪಾತ್ರ ವಹಿಸಿದ್ದು ಹನೂಮಂತ. ಅದೂ ತನ್ನ ನಿಜಸ್ವರೂಪವನ್ನು ಮರೆಮಾಚಿ, ಗಿಣಿಯ ರೂಪದಲ್ಲಿ ಶುಕಚಂಚುಮುಖಿಯಾಗಿ ಹನೂಮಂತನು ತುಲಸೀದಾಸನಿಗೆ ರಂಗನಿರ್ದೇಶನ ಮಾಡುವ ಕಲ್ಪನೆಯು ಇಲ್ಲಿ ರಂಗಪ್ರಸ್ತುತಿಗೆ ರಂಗನ್ನೇರಿಸುವಂತಿದೆ. ಬಿಹಾರದ ಚಿತ್ರಕೂಟದ ಬಳಿ, ಈ ಕಲ್ಪಕತೆಗೆ ಶ್ರದ್ಧಾನಿದರ್ಶನವಾಗಿ ತೋತಾಹನೂಮಾನ್ ಮಂದಿರ ಇವತ್ತಿಗೂ ಭತಜನರ ಸಂದರ್ಶನೀಯ ಕ್ಷೇತ್ರವಾಗಿ ಮೆರೆದಿದೆ. ಆನಪದರ ನಂಬಿಕೆಯಲ್ಲಿ ನೆಟ್ಟುಹೋದ ಬಾಯ್ಗತೆಯನ್ನುಆಧರಿಸಿ ಈ ರೂಪಕವನ್ನು ರಚಿಸಲಾಗಿದೆ. ನೃತ್ಯಕ್ಕೂ ರೂಪಕಕ್ಕೂ ಮೆಯ್ಯಾನುವ ಈ ರಸೋದ್ಗಮ ವಸ್ತುವಿನ ರಂಗರೂಪಕದ ಗೀತವಿನ್ಯಾಸ ಹೀಗಿದೆ.
(ತುಲಸೀದಾಸನ ಕಥಾಪ್ರವಚನ. ವ್ಯಾಸಪೀಠದಲ್ಲಿ ರಾಮಾಯಣದ ಗ್ರಂಥವ್ವಿಟ್ಟು ಉಪನ್ಯಾಸ ಮಾಡುವ ತುಲಸೀದಾಸ. ಪ್ರವಹನ ಆಲಿಸಿ ಆಸ್ವಾದಿಸುವ ಭಕ್ತವೃಂದ. ಮುಂದಿನ ಪದ್ಯ ಹಿನ್ನೆಲೆಯಲ್ಲಿ ಹಾಡುತ್ತಿರುವಾಗ ತುಲಸೀದಾಸನಿಂದ ಪ್ರವಚನಕ್ಕೆ ಮೂಕಾಭಿನಯ; ಭಕ್ತರಿಂದ ಆಹಾ, ಓಹೋ ಪ್ರತಿಕ್ರಿಯೆ)
(ತ್ರಿಪುಟತಾಳ ): ಶ್ರೀ-ರಾಮಚಂದ್ರ ಕೃಪಾಳು ಭಜಮನಹರಣಭವಭಯದಾರುಣಂ
ಶ್ರೀ-ಕಂಜಲೋಚನ ಕಂಜಮುಖ ಕರಕಂಜ ಪದಕಂಜಾರುಣಂ
(ಪದ್ಯ ಮುಗಿಯುವಾಗ, ಭಕ್ತಜನರು ಸಾಷ್ಟಾಂಗ ವಂದಿಸಿ ತೆರಳುತ್ತಾರೆ. ತುಲಸೀದಾಸ ಅವರನ್ನು ಬೀಳ್ಕೊಟ್ಟು, ಒಂದು ಬಿಂದಿಗೆ ನೀರನ್ನು ಹೆಗಲಲ್ಲಿಟ್ಟು ರಂಗದ ಬಲಮೂಲೆಯಲ್ಲಿರುವ ಅರಳಿಮರಕ್ಕೆ ನೀರು ಹೊಯ್ಯುತ್ತಾನೆ.ಮತ್ತೆ ದಯನೀಯವಾಗಿ ಆ ಮರವನ್ನೇ ದಿಟ್ಟಿಸುತ್ತಾನೆ.)
(ರೂಪಕತಾಳ): ಇನ್ನು ಎಷ್ಟು ಕಾಯುವುದು ನಿನ್ನ ಕಾಣಲು |ರಾಮಾ..
ಕಾಯ ಕರಗುತಿಹುದು ಕೊರಗಿ ಕವಿದು ಕತ್ತಲು |ರಾಮಾ..
ನಾಮಕೋಟಿ ಜಪಿಸಿದರೂ ನೇಮದಿಂದ ನುತಿಸಿದರೂ
ರಾಮ ನೋಟ ಬೀರಲಿಲ್ಲ ರಾಮ ರೂಪ ತೋರಲಿಲ್ಲ
(ಅರಳಿಮರದಲ್ಲಿದ್ದ ಬ್ರಹ್ಮರಾಕ್ಷಸನ ಮಾತು-ಏಕತಾಳ)
ಅರಳಿಮರದೊಳಿಹ ಬ್ರಹ್ಮರಾಕ್ಷಸವು
ಕೊಂಬೆಯ ಬಾಯಲಿ ಎಲೆಮಾತುಲಿಯಿತು
(ಗದ್ಯ) ತುಲಸೀದಾಸ ! ರಾಮನು ಬೇಕೇ ? (ಹೌದು)
ರಾಮದಾಸ ಹನುಮನ ಬೆಂಬತ್ತು (ಎಲ್ಲಿದ್ದಾನೆ?)
ದಿನದಿನವು ನೀನೊರೆವ ರಾಮಕತೆಯಾಲಿಸುವ
ಎಲ್ಲಾ ತೆರಳಿದ ಮೇಲೆ ಅಳುತ ನಡೆವ
(ಮುಂದಿನ ದೃಶ್ಯ- ದಾಸನ ಪ್ರವಚನ. ಮುಂದೆ ಕುಳಿತ ಭಕ್ತಸಮೂಹದಲ್ಲಿ ಕಣ್ಣುನೆಟ್ಟು ಹನುಮನನ್ನು ಹುಡುಕುವ ದಾಸನ ತೀಕ್ಷ್ಣದೃಷ್ಟಿ. ಆನರ ಮಧ್ಯದಲ್ಲಿ ವಕ್ರಾಂಗನಾಗಿ ಹನುಮ ಕುಳಿತು ತಲ್ಲೀನನಾಗಿರುತ್ತಾನೆ. ನೋಡಲು ವಿಕಾರಿ, ಹುಚ್ಚ, ರೋಗಿಯಂತಿರುವ ಮಾರುವೇಷದ ಹನುಮನನ್ನು ಆಚೀಚೇ ಕುಳಿತ ಆಢ್ಯರು ಆಗಾಗ ‘ಹಚೋ’ ಅಂತ ದೋರ ಸರಿಸುವುದು, ಹನುಮ ಹೆದರುವುದು ನಡೆಯುತ್ತದೆ. ದಾಸನ ಪ್ರವಚನ ಮುಗಿದು, ಎಲ್ಲರೂ ನಮಸ್ಕರಿಸಿ ಹೊರಡುತ್ತಾರೆ. ಹ್ನುಮನನ್ನು ಕೆಕ್ಕರಿಸಿ ತಳ್ಳುತ್ತಾ ಜನ ಹೋಗುತ್ತಾರೆ. ಹನುಮ ಪರಮವ್ಯಥೆಯಿಂದ ಕಂಬನಿಯೊರೆಸಿಕೊಳ್ಳುತ್ತಾ ಕುಂಟುಗಾಲಲ್ಲಿ ಸಾಗುತ್ತಿರುತ್ತಾನೆ. ಇವನನ್ನು ಗಮನಿಸಿದ ದಾಸ ಹಿಂಬಾಲಿಸುತ್ತಾನೆ. ಹನುಮ ಓಡುತ್ತಾನೆ. ಒಂದಷ್ಟು ದೋರ ಬೆನ್ನಟ್ಟಿ ಆದ ಮೇಲೆ, ಹನುಮನ ಕಾಲು ಹಿಡಿದು ಗೋಗರೆಯುತ್ತಾನೆ.)
(ತ್ರಿಪುಟ): ರಾಮನನು ತೋರಯ್ಯ ಹನುಮಾ | ತೋರಿ ಕಾಣಿಸು ನಿನ್ನ ಮಹಿಮಾ |
ರಾಮನೆಲಿಹ? ಅವನ ಮುಟ್ಟುವ | ಮಾರ್ಗ ತಿಳಿಸೈ ಪಾವಮಾನಿ ! ಬಿಡೆನು ಪಾವನ ಪಾದವ||
(ತನ್ನ ಕಾಲನ್ನು ಹಿಡಿದು ಹೊರಳುವ ದಾಸನನ್ನೂ ಎಳೆಯುತ್ತಾ ಹನುಮ ಓಡಲು ಪ್ರಯತ್ನಿಸುತ್ತಾನೆ. ಈ ಎಳೆದಾಟದ ಕೊನೆಗೆ ನಿಜಹನೂಮಂತನಾಗಿ ದಾಸನನ್ನು ಸಾಂತ್ವನಿಸುತ್ತಾನೆ.)
(ಝಂಪೆತಾಳ ) ಚಿತ್ತದಲಿ ನೀ ಕಂಡ ಶ್ರೀರಾಮ ಸಾಲದೆ? ವಿ-
ಚಿತ್ರ ಹಠ ಹಿಡಿದ ಹಸುಗೂಸೇ ! ಹಿಂದಡಿಯಿಡದೆ
ಚಿತ್ರಕೂಟಕೆ ತೆರಳು, ತೇಯ್ದು ಗಂಧವ ಕಾಯಿ, ಬರುವನಾ ಗಂಧಪ್ರಿಯ
(ಕತ್ತಲು) ( ಬೆಳಕು ಬಂದಾಗ- ದಾಸ ತನ್ನ ಕುಟೀರದಲ್ಲಿ ರೋಮಾಂಚಿತನಾಗಿ ಚಿತ್ರಕೂಟಕ್ಕೆ ತೆರಳಲು ತಯಾರಾಗುತ್ತಾನೆ. ಗಂಧದ ಕಲ್ಲು, ಕೊರಡು, ಬುಟ್ಟಿಗಳನ್ನೆಲ್ಲಾ ಒಟ್ಟುಗೂಡಿಸುತ್ತಿರುವಾಗ)
(ರೂಪಕತಾಳ) ಕಲ್ಲು ರಾಮ ಕೊರಡು ರಾಮ | ತಟ್ಟೆ ರಾಮ ಬುಟ್ಟಿ ರಾಮ
ಇಟ್ಟು ತಲೆಯ ಮೇಲೆ ಹೊರಟ ಚಿತ್ರಕೂಟಕೆ
(ತುಲಸೀದಾಸ ಚಿತ್ರಕೂಟಕ್ಕೆ ಬರುತ್ತಾನೆ. ನೀರಿನ ಝರಿ, ಮರ, ಬೆಟ್ಟಗಳನ್ನೆಲ್ಲಾ ಎದೆಬಾಯಾಗಿ ಮುಟ್ಟುವಾಗ)
(ತ್ರಿಪುಟ) ರಾಮ ಹೆಜ್ಜೆಯನಿಟ್ಟ ಮಣ್ಣಿದು ಮಿಂದ ಮಂದಾಕಿನಿಯಿದು
ಕುಳಿತ ಕಲಿದು ಕಂಡ ಗಿರಿಯಿದು ಮುಟ್ಟಿ ತಬ್ಬಿದ ಮರವಿದು
(ದಾಸ ಗಂಧ ತೇಯಲು ಆರಂಭಿಸುತ್ತಾನೆ- ರಾಮ ನಿರೀಕ್ಷೆಯಲ್ಲಿ)
(ಝಂಪೆತಾಳ) ಬಂದನೇ ಶ್ರೀರಾಮ ! ಬರುತಿಹನೆ ಶ್ರೀರಾಮ-
ನೆಂದು ಒಂದೊಂದೂ ನಿಮಿಷಕು ಕತ್ತನೆತ್ತೆತ್ತಿ
ತೇದು ತೇದೇ ತೇಯ್ದ ಅಂದಂದು ಅಂದಂದು | ಶ್ರೀರಾಮಗಂಧಬಂಧ
(ಇನ್ನು ಮುಂದೆ, ರಾಮನೇ ಒಬ್ಬ ರಾಜಕುಮಾರನಾಗಿ, ರೋಗಿಷ್ಠನಾಗಿ ಬರುವುದು. ಗಂಧವನ್ನು ಕೊಡು ಎಂದು ಕೇಳುವುದು. ದಾಸ ನಿರಾಕರಿಸುವುದು. ಒಂದು ಮರದ ಮರೆಯಲ್ಲಿ ಗಿಣಿಮೂತಿ ಹನುಮನ ಚಡಪಡಿಕೆ)
(ಏಕತಾಳ) ಗಂಧವ ಕೇಳಿದ ರಾಜಕುಮಾರ | ರಾಮನಿಗೆಂದನು ತುಲಸೀದಾಸ
ಗಂಧವ ಕೇಳಿದ ಇಡಿಮೈಡೊಂಕ | ರಾಮನಿಗೆಂದನು ತುಲಸೀದಾಸ
(ಕೊನೆಯದಾಗಿ ತುಂಟ ಬಾಲಕ ಬರುತ್ತಾನೆ. ತುಲಸೀದಾಸನನ್ನು ಗೋಳುಹೊಯ್ಯುತ್ತಾನೆ. ತೇದಿಟ್ಟ ಗಂಧವನ್ನೆಲ್ಲಾ ಪೋಸಿಕೊಳ್ಳುತ್ತಾನೆ. ತುಲಸೀದಾಸನ ಸಹನೆಯ ಕಟ್ಟೆ ತುಯ್ಯಲಾಡುತ್ತದೆ. ಹೊಡೆಯಹೋಗುತ್ತಾನೆ, ಗದರುತ್ತಾನೆ. ಹನೂಮಂತನು ಮರದೆಡೆಯಿಂದ ತುಲಸೀದಾಸನಿಗೆ ಸನ್ನೆ ಮಾಡಲು ಒದ್ದಾಡುತ್ತಾನೆ. ಹುಡುಗನ ತುಂಟಾಟ ಮೇರೆ ಮೀರುತ್ತದೆ. ದಾಸನ ಅಸಹನೆಯ ಒಡ್ಡು ಬಿರಿಯುತ್ತದೆ.)
(ಅಷ್ಟತಾಳ) ಹಣೆ ಹಣೆ ಚಚ್ಚಿದ ಗಿಣಿಮೂತಿ ಹನುಮಾ
ದಾಸನ ಗಂಧಾಂಧ ನಿಷ್ಠೆಗೆ ನೊಂದ
ಚಡಪಡಿಸಿ ಚೀರಿ ಲೀಲಾಶುಕದಂದ
ಇವ ರಾಮ ಇವ ರಾಮ ಇವ ರಾಮನೆಂದ
(ಗಿಣಿಯ ದನಿಯಲ್ಲಿ ‘ಇಂವ ರಾಮ’ ಅಂತ ಕೂಗುತ್ತಾನೆ ಹನುಮ. ದನಿ ದಾಸನ ಕಿವಿಗೆ ಬಿದ್ದಾಗ ನಿಶ್ಚಲ ನಿಲ್ಲುತ್ತಾನೆ. ಮೂರ್ಛಿತನಾಗಿ ಬೀಳುತ್ತಾನೆ. ಶ್ರೀರಾಮ-ಲಕ್ಷ್ಮಣರು ಸಹಜರೂಪದಲ್ಲಿ ಪ್ರವೇಶಿಸುತ್ತಾರೆ. ಶ್ರೀರಾಮನು ಮೂರ್ಛಿತನಾದ ತುಲಸೀದಾಸನ ತಲೆಯನ್ನು ತೊಡೆಯ ಮೇಲಿಟ್ಟು ನೇವರಿಸುತ್ತಾನೆ. ಕಣ್ಣುಬಿಟ್ಟ ದಾಸನಿಗೆ ರಾಮನ ರೂಪ ಕಂಡು, ಐಹಿಕ ಮರೆತು ಬದ್ಧಾಂಜಲಿಯಾಗಿ ನಿಮೀಲಿತನೇತ್ರನಾಗಿ ರಾಮನ ಪಾದದ ಮೇಲೆ ಕೆಡೆದು ಬೀಳುತ್ತಾನೆ. ಇದಿಷ್ಟು ಆಗುವ ತನಕವೂ ‘ಶ್ರೀರಾಮಚಂದ್ರ ಕೃಪಾಳು..’ ಹಾಡಿನ ಗುನುಗು. ಈ ದೃಶ್ಯವನ್ನು ನೋಡುತ್ತಾ ಕಣ್ಣೀರಾಗುವ ಹನೂಮಂತ. ‘ಶ್ರೀರಾಮ ಜಯರಾಮ ಜಯ ಜಯ ರಾಮ’ ದೊಂದಿಗೆ ದೃಶ್ಯಾಂತ.