ಅಂಕಣಗಳು

Subscribe


 

ತಾಮ್ರಚೂಡ ಹಸ್ತ

Posted On: Wednesday, June 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ತಾಮ್ರಚೂಡ ಎಂದರೆ ಕೋಳಿ ಎಂದರ್ಥ. ಇದು ಮಿಶ್ರಹಸ್ತ ಪ್ರಕಾರಕ್ಕೆ ಸೇರಿದ್ದು. ಅಭಿನಯದರ್ಪಣದ ಪ್ರಕಾರ ಲಕ್ಷಣ: ಮಧ್ಯ ಮತ್ತು ಹೆಬ್ಬೆರಳ ತುದಿಯನ್ನು ಕೂಡಿಸಿ ತೋರುಬೆರಳನ್ನು ಬಾಗಿಸಬೇಕು. ಉಳಿದ ಉಂಗುರ ಮತ್ತು ಕಿರುಬೆರಳನ್ನು ಅಂಗೈ ತಳದಲ್ಲಿ ಮಡಿಸಿ ಹಿಡಿಯಬೇಕು. ಸಾರಸಂಗ್ರಹದ ಪ್ರಕಾರ ಹೆಬ್ಬೆರಳು ಕಿರುಬೆರಳನ್ನು ಕೂಡಿಸಿ ಉಳಿದ ಮೂರು ಬೆರಳನ್ನು, ನೀಡಿ ಹಿಡಿಯಬೇಕು. ಸಂಗೀತ ರತ್ನಾಕರದಲ್ಲಿ ಈ ಹಸ್ತಕ್ಕೆ ಎರಡೂ ಲಕ್ಷಣಗಳಿವೆ. ಹಸ್ತ ಮುಕ್ತಾವಳಿ ಮತ್ತು ಸಂಗೀತ ರತ್ನಾಕರದಲ್ಲಿ ಮಧ್ಯ ಮತ್ತು ಹೆಬ್ಬೆರಳನ್ನು ಮಾತ್ರ ಸೇರಿಸಿ ತೋರು ಮತ್ತು ಕಿರುಬೆರಳನ್ನು ಅಂಗೈಯೊಳಗೆ ಮಡಚುವಂತೆ ಮಾಡುವುದು ಒಂದು ವಿಧವಾದರೆ, ಕಿರುಬೆರಳನ್ನು ನಿಡಿದಾಗಿರಿಸುವುದು ಮತ್ತೊಂದು ವಿಧ. ಸಾರಂಗದೇವನು ಇದನ್ನು ಚೋಟಿಕಾ ಎಂದು ಕರೆದಿದ್ದರೆ, ಅಭಿನವಗುಪ್ತನು ಚೂಡಾಮುಕ್ತ, ಕುಕ್ಕುಟಕಾರತ್ವಾತ್ತಮ್ರಚೂಡಾ ಎಂದಿದ್ದಾನೆ.

ಮೂರು ವೇದಗಳು ಬ್ರಹ್ಮನಿದಿರು ಮನುಷ್ಯರೂಪದಲ್ಲಿ ಬಂದು ನಿಂತಾಗ ಉಂಟಾದ ಹಸ್ತ. ದೇವ ವರ್ಣ, ಈ ಹಸ್ತದ್ದು ಕಪ್ಪೆಚಿಪ್ಪಿನ ಬಿಳಿ ಬಣ್ಣ, ಋಷಿ : ಇಂದ್ರ, ಅಧಿದೇವತೆ : ಬೃಹಸ್ಪತಿ.

Copyrights reserved. No use Without prior permission.

ಶಾಸ್ತ್ರೀಯ ಮುದ್ರೆಗಳ ಪೈಕಿ ಅಂಕುಶ ಮುದ್ರಾ ಎಂಬುದು ತಾಮ್ರಚೂಡವೇ ಆಗಿದ್ದು; ತೋರು ಬೆರಳನ್ನು ಮೇಲಿನಿಂದ ಬಗ್ಗಿಸಿ ಉಳಿದ ಬೆರಳುಗಳನ್ನು ಹೆಬ್ಬೆರಳಿಗೆ ಕೆಳಭಾಗದಲ್ಲಿ ಬಗ್ಗಿಸಿ ಸೇರಿಸುವುದು ಇದರ ಲಕ್ಷಣ. ಈ ಮುದ್ರೆಯು ಆಕರ್ಷಣ ಮತ್ತು ಮೋಹಿನಿಮಂತ್ರಗಳಪಠಣಫಲಕಾರಿಗೆ ಸಹಕಾರಿ ಎಂದು ನಂಬಲಾಗಿದೆ.

ಭರತಾರ್ಣವದಲ್ಲಿ ತಿಳಿಸುವ ಸ್ಥಾನಕ ವಿಧಗಳ ಪೈಕಿ ಒಂದಾದ ಚಂದ್ರಿಕಾಕ್ಕೆ ತಾಮ್ರಚೂಡದ ಸಹಕಾರ ಬೇಕು. ಅಂತೆಯೇದೇಹದ ಅವಯವ ಚಲನೆಗಳ ಅಂದರೆಅಡವಿನ ಪೈಕಿ ಒಂದಾದ ತಟ್ಟುಮೆಟ್ಟಡವಿನ ಸೌಂದರ್ಯಕ್ಕೆತಾಮ್ರಚೂಡದ ಬಳಕೆಯಿದೆ.

ವಿನಿಯೋಗ : ಕೋಳಿ, ಬಕಪಕ್ಷಿ, ಕಾಗೆ, ಒಂಟೆ, ಕರು, ಬರೆವಣಿಗೆ, ಮತ್ತು ಕುಕ್ಕುಟ ವರ್ಗದ ಪಕ್ಷಿಗಳು.

ಇತರೇ ವಿನಿಯೋಗ : ಬೈಯ್ಯುವುದು, ಕಾಲಸೂಚನೆ, ಮಂತ್ರದ ಚಿಟಿಕೆಹಾಕುವುದು, ಕೋಳಿ-ನಾಯಿಯನ್ನು ಕರೆಯುವುದು, ಯಾರನ್ನಾದರೂ ಛೀ’ ಹಾಕುವುದು, ತಾಳ ಹಿಡಿಯುವುದು, ವಿಶ್ವಾಸ ಸೂಚನೆ ಅಥವಾ ಹುಟ್ಟಿಸುವುದು, ಹುಂ, ಬೇಗ ಎಂದು ಸೂಚಿಸಲು, ಹುಡುಗರನ್ನು ಕರೆಯುವುದು, ಸಂಗೀತದ ಮಟ್ಟುಗಳು, ಶೈಘ್ರ್ಯ, ೩ ವೇದಗಳು, ಆಶ್ವಾಸನೆ, ಸಾವಿರ ಮೊದಲಾದ ಸಂಖ್ಯೆಗಳನ್ನು ತೋರಿಸುವಾಗ, ತ್ರಿಮೂರ್ತಿಗಳು, ಹೆಣ್ಣುಕುರಿ, ಮೂರುಲೋಕ, ಚತುರ್ವರ್ಣಗಳು, ಪಣನೋಟ, ತ್ರಿಕೂಟ ಪರ್ವತ, ತ್ರಿಮೂರ್ತಿಗಳ ದರ್ಶನ, ಗದ್ದೆಯಲ್ಲಿ ಬೀಜವಿಡು, ಅರುಣಪರ್ವ, ಜಾಗ್ರತೆಯಾಗಿ ಉಸಿರುಬಿಡುವುದು, ಮೂರು ಶಬ್ದಗಳು, ದೇವ ಜಾತಿ, ಬಿಳಿ ಬಣ್ಣ, ಕಿಡಿಗಳು, ಬಿಂದುಗಳು, ಬಾಲೆಯೊಡನೆ ಮಾತು, ಆಹ್ವಾನ, ಬತ್ತಿ ಮಾಡುವುದು, ನೂರು-ಸಾವಿರ- ಲಕ್ಷ ಚಿನ್ನದ ವರಹಗಳು ಇತ್ಯಾದಿಗಳ ಸೂಚನೆಗೆ ಉಪಯೋಗವಾಗುತ್ತದೆ.

ಮುದ್ರೆ, ಆಕಳಿಸುವುದು, ಶೀಘ್ರ, ಬೆಂಕಿಕಿಡಿ, ನೀರಿನ ಅಥವಾ ಯಾವುದೇ ದ್ರವದ ಹನಿ, ಬೆಳ್ಳಿ, ಗರ್ಜನೆ, ಮಕ್ಕಳ ನೃತ್ಯ, ಗುಡುಗು-ಮಿಂಚು, ಮಕ್ಕಳನ್ನು ಎಬ್ಬಿಸುವುದು, ಚಿನ್ನ, ಕೆಂಪು ಕಡ್ಡಿ, ಕಾಳಿ ಯುಗ, ತಾಮ್ರ, ಕಂಚು, ಸೀಸ, ಕಬ್ಬಿಣ, ಲೋಹಗಳು, ಎಣಿಸುವುದು, ಕೂದಲು, ನವಿಲಿನ ಬಾಲ, ಗಂಟೆಗಳನ್ನು ಮಾಡುವ ಮಿಶ್ರಲೋಹ, ನೂರು, ಸಾವಿರ, ಲಕ್ಷ, ಕೋಟಿ, ದಶಲಕ್ಷ, ದಶಕೋಟಿ, ಶತಕೋಟಿ, ಸಾವಿರಕೋಟಿ, ಲಕ್ಷಕೋಟಿ, ದಶಲಕ್ಷಕೋಟಿ, ಅಪರಿಮಿತ, ೧/೬ ಭಾಗ, ೧/೧೩ ಭಾಗ, ನಿಮಿಷ, ಸೂಕ್ಷ್ಮ, ನೀರಿನ ಸಣ್ಣ ಅಂಶ, ಆಗ ತಾನೇ ಹೆತ್ತ ಬಾಣಂತಿಯ ನೋಟ, ಮಳೆ, ಕಣ್ರೆಪ್ಪೆ ಮುಚ್ಚು-ತೆರೆಯುವುದು, ಜನ್ಮ, ವಾಮನಾವತಾರ, ಪ್ರಾಣಿಗಳ ಜುಟ್ಟು ಇತ್ಯಾದಿಗಳ ಸಂವಹನಕ್ಕೆ ಬಳಸಲಾಗುತ್ತದೆ.

ಸಂಕರ ಹಸ್ತ ವಿಭಾಗದಲ್ಲಿ ತಾಮ್ರಚೂಡವನ್ನು ಅಡ್ಡಲಾಗಿ ಹಿಡಿದರೆ ಕೆಂಪು ಬಣ್ಣ ಎಂದು ಅರ್ಥ. ಭರತಾರ್ಣವ ಹೇಳುವ ಅರ್ಧನಾರೀಶ್ವರ ಹಸ್ತಕ್ಕೆ ಬಲಗೈಯ್ಯಲ್ಲಿ ಪದ್ಮಕೋಶವನ್ನೂ, ಎಡಗೈಯ್ಯಲ್ಲಿ ತಾಮ್ರಚೂಡವನ್ನೂ ಹಿಡಿದು ನಿಲ್ಲಬೇಕು.ಭರತಸಾರ ಹೇಳುವಂತೆ ಶನೈಶ್ಚರ ಹಕ್ಕೆ ಶುಕತುಂಡ ಹಸ್ತವನ್ನು ಎಡಕೈಯ್ಯಲ್ಲಿ ಹಿಡಿದು, ಎಡ ತೊಡೆಯ ಮೇಲಿರಿಸಿ ಮುಷ್ಟಿ ಹಸ್ತಕ್ಕೆ ಬದಲಾಯಿಸಿ ಹಸ್ತವನ್ನೂ ಅಂಗೈನ ಮೇಲೂ ಕೆಳಗೂ ಆಗುವಂತೆ ಚಲಿಸುವುದು. ಬಲಕೈಯ್ಯಲ್ಲಿ ತಾಮ್ರಚೂಡವನ್ನು ಹಿಡಿಯಬೇಕು. ಶ್ಯಾಲಕಹಸ್ತ (ಹೆಂಡತಿಯ ಸಹೋದರ; ಭಾವಮೈದುನ)ಕ್ಕೆ ಮೊದಲು ಕಟಕಾಮುಖ ಹಸ್ತವನ್ನು ಹಿಡಿದು, ಆನಂತರ ತಾಮ್ರಚೂಡ ಹಸ್ತವನ್ನು ಪ್ರದರ್ಶಿಸಬೇಕು. ಸಮಯಸೂಚಿ ಹಸ್ತಗಳಲ್ಲಿ ಒಂದಾದ ತ್ರಿಯಾಮ ಅಂದರೆ ೯ ಗಂಟೆಯನ್ನು ಸೂಚಿಸಲು, ಗಂಗಾನದೀ, ಅಶ್ವಿನೀ ಮತ್ತು ಪೂರ್ವ( ಹುಬ್ಬಾ) ನಕ್ಷತ್ರದ ಸೂಚನೆಗೆ ತಾಮ್ರಚೂಡವನ್ನು ಹಿಡಿಯಬೇಕು. ತಾಮ್ರಚೂಡವನ್ನು ಒಂದು ಬದಿಗೆ ಹಿಡಿಯುವುದು ಕೆಂಪುಬಣ್ಣವನ್ನು ಸೂಚಿಸಿದರೆ; ಖದಿರವೃಕ್ಷ ಸೂಚನೆಗೆ ಎರಡೂ ಕೈಯಲ್ಲಿ ತಾಮ್ರಚೂಡ ಹಿಡಿದು ಅಧೋಮುಖವಾಗಿರಿಸಬೇಕು.

ಒಡಿಸ್ಸಿಯಲ್ಲಿ ತಾಮ್ರಚೂಡಕ್ಕೆ ಶುಕಚಂಚು ಆಥವಾ ಅಂಕುಶವೆಂದು ಹೆಸರು. ಇದು ಗಣೇಶನ ಮುದ್ರೆಯೆಂದು ಬಳಕೆಯಲ್ಲಿದೆ. ಯಕ್ಷಗಾದಲ್ಲಿ ಗಿಳಿ, ಹಕ್ಕಿ, ಕರುಗಳ ಸೂಚನೆಗೆ ಬಳಸುತ್ತಾರೆ.

ಕಥಕಳಿಯಲ್ಲಿ ತಾಮ್ರಚೂಡಕ್ಕೆಶುಕತುಂಡವೆನ್ನುತ್ತಾರೆ. ವಿನಿಯೋಗ : ಗಜಕುಂಭ, ಪಕ್ಷಿ, ನಿಶ್ಚಯ.

ನಿತ್ಯಜೀವನದಲ್ಲಿ ಈ ಹಸ್ತವನ್ನು ತುರಿಸಲು, ವಸ್ತುವನ್ನು ಕೆರೆಯಲು, ಕೊಂಕು ಎನ್ನಲು, ಹಂಗಿಸಲು, ಕೊಕ್ಕೆ ಎನ್ನಲು, ಕುಣಿಕೆ, ತಲೆ ತುರಿಸುತ್ತಾ ಯೋಚನೆ ಮಾಡಲು, ಹೀನವಾಗಿ ಕರೆಯಲು ಬಳಸುತ್ತಾರೆ.

Leave a Reply

*

code