ಅಂಕಣಗಳು

Subscribe


 

ಠಾಗೂರರ ನೃತ್ಯಪ್ರೇಮ

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ವೇಮಗಲ್ ಸೋಮಶೇಖರ್, ಬೆಂಗಳೂರು.

Ravindranatha Tagore

ಕಳೆದ ಶತಮಾನದ ಪ್ರಾರಂಭದಲ್ಲಿ ಭಾರತೀಯ ಜೀವನವನ್ನು ಹಿಂದುಳಿದದ್ದೆಂದೂ, ಕೀಳುಮಟ್ಟದ್ದೆಂದೂ ಕಾಣುಲಾಗುತ್ತಿದ್ದಾಗ ವಿದ್ಯಾವಂತರ ಹೃದಯಕ್ಕೆ ತಮ್ಮ ಸಂಸ್ಕೃತಿಯ ಬಗೆಗೆ ಹೆಮ್ಮೆಯನ್ನೂ, ವಿದ್ಯಾಹೀನರೆನಿಸಿಕೊಂಡವರ ಹೃದಯಕ್ಕೆ ಭರವಸೆಯನ್ನೂ ತಂದುಕೊಟ್ಟವರು ಮಹಾಕವಿ ರವೀಂದ್ರನಾಥ ಠಾಗೂರ್. ಪ್ರತಿಯೊಬ್ಬ ತರುಣನೂ ತರುಣಿಯೂ ಉತ್ಕೃಷ್ಟ ಭಾರತೀಯ ಸಂಸ್ಕೃತಿಯ ಆವರಣದಲ್ಲಿ ಪ್ರವರ್ಧಿಸನುವಾಗುವಂತಹ ಒಂದು ಕೇಂದ್ರವನ್ನು ಶಾಂತಿನಿಕೇತನದ ಆಶ್ರಯದಲ್ಲಿ ಠಾಗೂರರು ಸ್ಥಾಪಿಸಿದರು. ಮಣಿಪುರಿನೃತ್ಯ ಪದ್ಧತಿಗೆ, ಭಾರತೀಯ ಮೌಲ್ಯ, ಸಂಸ್ಕೃತಿಯ ಸೆಲೆಗಳಿಗೆ ಹೊಸ ನೆಲೆ ಕೊಟ್ಟರು. ಅದೇ ವಿಶ್ವಭಾರತಿ.

ಠಾಗೂರರು ಬಹುವಾಗಿ ಗೌರವಿಸುತ್ತಿದ್ದದ್ದು ಮನೆಯಲ್ಲಿನ ಉನ್ನತಶಿಕ್ಷಣದಲ್ಲಿ ಸಂಸ್ಕೃತಿವಂತರಾಗುತ್ತಿದ್ದ ಭಾರತೀಯ ಮಹಿಳೇಯರನ್ನು. ತಪ್ಪುದಾರಿ ಹಿಡಿದ ಶಿಕ್ಷಣದ ಮತ್ತು ಅಭಿಪ್ರಾಯಗಳ ಮೂಲಕ ತಮ್ಮ ದೇಶಕ್ಕೆ ಪರಕೀಯರಂತಾಗುತ್ತಿದ್ದ ಆಧುನಿಕ ತರುಣಿಯರಿಗಿಂತ ಬೆಡಗು ಬಿನ್ನಾಣವಿಲ್ಲದ ಅವಿದ್ಯಾವಂತ ಸಂಸ್ಕೃತಿಶೀಲರನ್ನೇ ಠಾಗೂರರು ಮೆಚ್ಚಿಗೊಂಡಿದ್ದರು.

ಅಂತಹ ಠಾಗೂರರು ಮದರಾಸ್‌ಗೆ ಆಗಮಿಸಿದಾಗಲೆಲ್ಲಾ ಅಡಿಯಾರ್‌ನಲ್ಲಿನ ಆನಿಬೆಸೆಂಟರ ಅತಿಥಿಯಾಗಿರುತ್ತಿದ್ದರು. ಆನಿಬೆಸೆಂಟರು ಅವರನ್ನು ತಮಗೆ ಸಾಧ್ಯವಾದಷ್ಟು ಸಮಸ್ತ ಗೌರವದಿಂದ ಸ್ವಾಗತಿಸುತ್ತಿದ್ದರು. ಒಂದು ಸಲ ಠಾಗೂರರು ಅಡಿಯಾರಿನಲ್ಲಿನ ದೊಡ್ಡ ಆಲದ ಮರದ ಕೆಳಗೆ ಬೆಸೆಂಟರ ಪಕ್ಕದಲ್ಲಿ ಕುಳಿತಿದ್ದಾಗ ಬೆಸೆಂಟರೇ ಠಾಗೂರರಿಗೆ ರುಕ್ಮಿಣೀದೇವಿಯನ್ನು ಪರಿಚಯಿಸಿದರು. ಆಗ ಠಾಗೂರರು ಮಾತನಾಡಿ ತಮ್ಮ ಕವನಗಳನ್ನು ಹಾಡಿದರು. ಆ ಸಂದರ್ಭ ರುಕ್ಮಿಣಿದೇವಿಯವರ ಮೇಲೆ ಗಾಢವಾದ ಪ್ರಭಾವ ಬೀರಿತು. ಆನಂತರದಲ್ಲಿ ರುಕ್ಮಿಣೀದೇವಿ, ಠಾಗೂರರು ಮದರಾಸ್‌ಗೆ ಆಗಮಿಸಿದ್ದಾಗ ಅನೇಕ ಬಾರಿ ಭೇಟಿಯಾಗಿ ಅವರ ಸಮ್ಮುಖದಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದರು.ಆಗಿನ್ನೂ ರುಕ್ಮಿಣಿದೇವಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ.

ಠಾಗೂರರು ಐಹಿಕಯಾತ್ರೆ ( ೭-೮-೧೯೪೧)ಮುಗಿಸುವುದರೊಳಗೆ ರುಕ್ಮಿಣಿ ದೇವಿಯವರು ತಮ್ಮ ಪತಿ ಜಾರ್ಜ್ ಅರುಂಡೇಲ್‌ರೊಡನೆ ಶಾಂತಿನಿಕೇತನಕ್ಕೆ ಭೇಟಿ ನೀಡಿದರು. ೮೦ ವರ್ಷ ವಯಸ್ಸಿನ ಠಾಗೂರರ ದೇಹಸ್ಥಿತಿ ನೃತ್ಯಪ್ರದರ್ಶನವನ್ನು ನೋಡುವಷ್ಟು ಸರಿಯಾಗಿರಲಾರರೆಂದು ಊಹಿಸಿ ಪಕ್ಕವಾದ್ಯಗಳಿಲ್ಲದೆ ತೆರಳಿದ್ದರು. ಆದರೆ ಇವರನ್ನು ಬಹುಸಂತೋಷದಿಂದ ಸ್ವಾಗತಿಸಿದ ಠಾಗೂರರು ಒಂದು ನೃತ್ಯ ಪ್ರದರ್ಶನವನ್ನು ಕೊಡುವಿರಾ? ಎಂದು ಕೇಳಿದರು. ಪಕ್ಕವಾದ್ಯಗಳಿಲ್ಲವಾದ್ದರಿಂದ ನೃತ್ಯವನು ಮಾಡಲಾರೆನೆಂದು ರುಕ್ಮಿಣೀದೇವಿ ತಿಳಿಸಿದರು. ಆದರೂ ಠಾಗೂರರು ಬಹುವಾಗಿ ಒತ್ತಾಯಿಸುವಾಗ ಅವರ ಕೋರಿಕೆಯನ್ನು ನಿರಾಕರಿಸುವಂತಿರಲಿಲ್ಲ.

ತರುವಾಯ ಶಾಂತಿನಿಕೇತನದ ಒಬ್ಬಿಬ್ಬರು ತರುಣಗಾಯಕರಿಗೆ ಹಾಡುಗಳನ್ನು ಹೇಳಿಕೊಡಲು ಪ್ರಯತ್ನಪಟ್ಟು ಠಾಗೂರರ ನಿವಾಸವಾದ ಉತ್ತರಾಯನದ ಮುಂದೆ ನೆರೆದಿದ್ದ ಜನಸಮೂಹದಲ್ಲಿ ಎರಡು ನೃತ್ಯಪ್ರಕರಣಗಳನ್ನು ಪ್ರದರ್ಶಿಸಿದರು. ಆ ಗಾಯಕರಿಗೆ ಅಷ್ಟು ಸ್ವಲ್ಪ ಸಮಯದಲ್ಲಿ ಹಾಡಬೇಕಾದಷ್ಟನ್ನೂ ಕಲಿಯಲು ಸಾಧ್ಯವಾಗದೇ ಹೋದದ್ದರಿಂದ ರುಕ್ಮಿಣೀದೇವಿಯವರೇ ಹಾಡುತ್ತಾ ಕುಣಿಯಬೇಕಾಯಿತು.

ನೃತ್ಯ ಮುಗಿದ ಮೇಲೆ ವೇದಿಕೆಯಲ್ಲಿ ಸುಖಾಸೀನರಾಗಿದ್ದ ಠಾಗೂರರು ರುಕ್ಮಿಣೀದೇವಿಯನ್ನು ಬಳಿಗೆ ಕರೆದು ಹೊಗಳಿಕೆ, ಅಭಿಮಾನದ ಮಳೆಗರೆದು ಮಾಳವಿಕಾಗ್ನಿಮಿತ್ರದ ಕೆಲವು ಪಂಕ್ತಿಗಳನ್ನು ಸ್ಮರಿಸಿಕೊಂಡು ನಾಟ್ಯದ ಮಹತ್ತ್ವದ ಬಗೆಗೆ ಕಾಳಿದಾಸನು ಹೊಂದಿದ್ದ ಅಭಿಪ್ರಾಯ ನನಗೆ ಅರ್ಥವಾದದ್ದು ಈಗಲೇ ಎಂದರು. ಜೊತೆಗೆ ಮದರಾಸಿನಲ್ಲಿ ತಾವು ಒಂದು ಸಲ ನೋಡಿದ್ದ ಭರತನಾಟ್ಯವನ್ನು ಹಿಂದೆಂದೂ ಮೆಚ್ಚಿರಲಿಲ್ಲವೆಂದೂ ಹೇಳಿದುದಲ್ಲದೆ ನೃತ್ಯಕಲೆ ಇತ್ತೀಚೆಗೆ ಮಾರ್ಪಾಟು ಹೊಂದಿದೆಯೆಂದೂ ಹೇಳಿದರು. ರುಕ್ಮಿಣೀದೇವಿಯವರಿಗಂತೂ ಅಂದು ಮಹರ್ಷಿಯೊಬ್ಬರು ಮುಂದೆನಡೆ ಎಂದು ಆe ಮಾಡಿ ಆಶೀರ್ವದಿಸಿದಂತೆ ಇತ್ತಂತೆ!

ಆಧಾರ : ರವೀದ್ರ ಪೂಜನ(ಕವಿವರರಿಗೆ ಪ್ರಪಂಚದ ಲೇಖಕರ ಕಾಣಿಕೆ) ೧೯೬೩. ಸಂಪಾದಕರು: ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುಟ ೮೭,೮೮,೮೯. ಲೇಖನ ಠಾಗೂರರು ಮತ್ತು ಭಾರತೀಯ ಸಂಸ್ಕೃತಿ. ಮೂಲಲೇಖಕರು : ಶ್ರೀಮತಿ ರುಕ್ಮಿಣಿದೇವಿ ಅರುಂಡೇಲ್. ಅನುವಾದಕರು : ಕೆ.ಎಸ್.ನರಸಿಂಹಸ್ವಾಮಿ.

(ಲೇಖಕರು ಹಿರಿಯ ಚಿಂತಕರು, ಸಹೃದಯಿ ಓದುಗರು, ಬೆಂಗಳೂರು ನಿವಾಸಿ)

Leave a Reply

*

code