ಅಂಕಣಗಳು

Subscribe


 

ಮುಕ್ತಾಯಕ್ಕೆ ಮುನ್ನ ನಿರ್ಗಮಿಸಿದ ನಾಟ್ಯತಪಸ್ವಿನಿ : ಶ್ರೀಮತಿ ಸುಂದರೀ ಸಂತಾನಂ

Posted On: Saturday, October 17th, 2009
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ಕವಿಗಳು, ಅವಧಾನ ಪೃಚ್ಛಕರು, ಬೆಂಗಳೂರು

ಶ್ರೀಮತಿ ಸುಂದರೀ ಸಂತಾನಂ

ಶ್ರೀಮತಿ ಸುಂದರೀ ಸಂತಾನಂ

ಕಲೆ ಕೆಲವರಿಗೆ ಖಯಾಲಿ. ಕೆಲವರಿಗೆ ಗೀಳು. ಕೆಲವರಿಗೆ ಪ್ರತಿಷ್ಠೆ. ಕೆಲವರಿಗೆ ಐಡೆಂಟಿಟಿ. ಕೆಲವರಿಗೆ ಕಾಲಹರಣ. ಕೆಲವರಿಗೆ ಪ್ರದರ್ಶನ. ಕೆಲವರಿಗೆ ತಪಸ್ಸು. ಒಬ್ಬ ವ್ಯಕ್ತಿಯನ್ನು ಆವರಿಸಿಕೊಳ್ಳುವುದಕ್ಕೆ ಕಲೆಗೆ ಎಲ್ಲಾ ಚಹರೆ-ಚಪಲತೆಗಳೂ ಇರುತ್ತವೆ. ಆದರೆ ತನ್ನ ಆಯ್ಕೆ-ಆಶಯ-ಕಲಾಸ್ವರೂಪದ ಅನನ್ಯತೆಯ ಬಗ್ಗೆ ವಿಸ್ಮಯಗಳನ್ನು ಉಳಿಸಿಕೊಂಡು, ಸಾಧ್ಯತೆಯ ಆಳಕ್ಕೆ ಪಾತಾಳಗರಡಿ ಹಾಕಿ ಶೋಧಿಸುತ್ತಲೇ ಸಾಯುವ ಶ್ರದ್ಧಾವಂತರು ತಮ್ಮ ಜೀವಮಾನವಿಡೀ ಕಲಾಸೂಕ್ಷ್ಮದ ಸಿದ್ಧಿಗಾಗಿ ತಪಸ್ಸು ಮಾಡುತ್ತಲೇ ಇರುತ್ತಾರೆ. ಅಂತಹ ತಪೋಜೀವಿಕೆ ಶ್ರೀಮತೀ ಸುಂದರೀ ಸಂತಾನಂ ಅವರದು.

In karanaviniyoga malika- sundari santhanam

In karanaviniyoga malika- sundari santhanam

ಇತ್ತೀಚೆಗಷ್ಟೇ (೨೪ ಆಗಸ್ಟ್ ೨೦೦೯) ತಮ್ಮ ಜೀವನ-ನೃತ್ಯರಂಗದಲ್ಲಿ ಬೆಳ್ಳಿಗೆಜ್ಜೆ ಬಿಚ್ಚಿಟ್ಟು ಇಹಲೋಕಕ್ಕೆ ವಿದಾಯ ಹೇಳಿ ಕೃತಜ್ಞತೆಯ ಪುಷ್ಪಾಂಜಲಿ ಸಲ್ಲಿಸಿ ನಿರ್ಗಮಿಸಿದ ಭರತನೃತ್ಯ ಕಲಾವಿದೆ ಸುಂದರೀಸಂತಾನಂ ಅವರಿಗೆ ನೃತ್ಯಕಲೆ ವಂಶವಾಹಿಯಾಗಿ ಬಂದ ಬಳುವಳಿ ಅಲ್ಲ. ಚೆನ್ನೈವಾಸಿಗಳಾದ ಅರುಣಾಚಲಂ-ಚೆಲ್ಲಮ್ಮಾಳ್ ಮಗಳಾದ ಸುಂದರಿಗೆ ಹುಟ್ಟಿನಿಂದ ರಕ್ತದೊಟ್ಟಿಗೆ ಹರಿದದ್ದು ವೀಣಾಧುನಿ. ಅದಕ್ಕೆ ತಾಯಿ ಸಂಗೀತಜ್ಞೆಯಾದದ್ದೇ  ಕಾರಣ. ಸಂಗೀತವೂ ನೃತ್ಯವೂ ಒಂದೇ ಕುಟುಂಬದ ಕುಡಿಯಾದ್ದರಿಂದಲೋ ಏನೋ ತನ್ನ ಅಕ್ಕ ಉಮಾಶ್ರೀರಾಮ್ ಹಾಕುತ್ತಿದ್ದ ನೃತ್ಯದ ಹೆಜ್ಜೆ, ಸುಂದರಿಯ ಕಾಲಲ್ಲಿ ಗೆಜ್ಜೆದನಿ ಮೂಡಿಸಿತು. ಪೂರ್ವಪುಣ್ಯ ಎಂಬಂತೆ ಪದ್ಮಾಸುಬ್ರಹ್ಮಣ್ಯಂ ಅವರ ಗುರುತನವೂ ನಾಟ್ಯದ ನೋಂಪಿಗೆ ಗುರುತಾಗಿ ದೊರಕಿತು. ಹನ್ನೆರಡರ ಹರೆಯದಲ್ಲಿ ವೀಣೆಯ ಮೆಟ್ಟಿಲಲ್ಲಿ ಕೈಯೂ ನೃತ್ಯದ ಮೆಟ್ಟಿಲಲ್ಲಿ ಕಾಲೂ ಕುಣಿಯತೊಡಗಿತು. ಕ್ರಮೇಣ ವೀಣೆಯಿಂದ ಜಾರಿದ ಬೆರಳು ಪೂರ್ತಿಯಾಗಿ ನೃತ್ಯದ ಹಸ್ತಕಲಾಪಕ್ಕೆ ಮುಡಿಪಾಯಿತು. ಸಂಗೀತಕ್ಷೇತ್ರಕ್ಕೆ ಇದೊಂದು ಕೊರೆಯಾದರೂ ನಾಟ್ಯಕ್ಷೇತ್ರದ ಶಾಸ್ತ್ರೀಯ ಶೋಧನೆಯ ನವಾಂಕುರಕ್ಕೆ ನಾಂದಿಯಾಯಿತು.
ಅಭಿನವ ಭರತ ಎಂಬ ಸಾರ್ಥಕ ಪ್ರಶಸ್ತಿಗೆ ಭಾಜನರಾದ ಡಾ.ಪದ್ಮಾಸುಬ್ರಹ್ಮಣ್ಯಂ ಮೊದಲಿಂದಲೂ ಭರತನ ನಾಟ್ಯಶಾಸ್ತ್ರದ ತಥ್ಯಾನ್ವೇಷಣೆಯಲ್ಲಿ  ಏಕಲಕ್ಷ್ಯದಿಂದ ನಿಶ್ಚಲನಿಷ್ಠೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದವರು. ರೂಢಮೂಲ ಪದ್ಧತಿಗೂ ಭರತನಿಗೂ ಸಮನ್ವಯ ಕಾಣುವುದಿಲ್ಲವೆಂದು ಮನವರಿಕೆಯಾಗುತ್ತಿದ್ದಂತೆ ಸಮಗ್ರನಾಟ್ಯಶಾಸ್ತ್ರದ ಗಂಭೀರ ಅಧ್ಯಯನಕ್ಕೆ ತೊಡಗಿ, ನೃತ್ಯಪ್ರಯೋಗದಲ್ಲಿ ಭರತಮಾರ್ಗವನ್ನು ರೂಪಿಸುವ ಛಲ ತೊಟ್ಟಿದ್ದರು. ಅವರ ಪ್ರಯೋಗಶಿಲ್ಪದ ಮೊನಚು ಚಾಣದ ಒರಟು ಸುತ್ತಿಗೆಯ ನಿರ್ಘಾತಕ್ಕೆ ಮೈಯಾದವರು ಸುಂದರೀಸಂತಾನಂ. ನಾಟ್ಯಶಾಸ್ತ್ರದ ಪದ್ಮಾಭಾಷ್ಯಕ್ಕೆ ಅಕ್ಷರಶಃ ಹಗಲಿರುಳು ಅನ್ನಾಹಾರನಿದ್ರೆ ತೊರೆದು ತಮ್ಮನ್ನು ತೇದುಕೊಂಡರು. ಅದರ ಪರಿಣಾಮವೇ ಭರತನ ನಾಟ್ಯಶಾಸ್ತ್ರದ ಕರಣವಿಭಾಗಕ್ಕೊಂದು ವ್ಯಾಕರಣ ನಿರ್ಮಾಣವಾಗಿ ಪದ್ಮಾ ಅವರಿಂದ ಮಹಾಸಂಪ್ರಬಂಧ (ಪಿ‌ಎಚ್ ಡಿ) ಹೊರಬಂತು.
ಪದ್ಮಾ ಅವರಂತೆ ಶೈಕ್ಷಣಿಕವಾಗಿ ಪ್ರಬುದ್ಧವಾದ ಹಿನ್ನೆಲೆ ಸುಂದರಿಯವರಿಗೆ ಇರಲಿಲ್ಲವಾದರೂ, ಸೂಕ್ಷ್ಮಗ್ರಹಿಕೆ ಜನ್ಮಜಾತವಾಗಿ ಬಂದದ್ದರಿಂದ ಗುರುವಿನ ನಾಟ್ಯಕ್ರಮಣದ ಪ್ರತಿಹಂತವೂ ಸುಂದರಿಗೆ ಶ್ವಾಸಗತವೇ ಆಗಿಬಿಡುತ್ತಿತ್ತು. ಇದರಿಂದಲೇ ಈ ಗುರುಶಿಷ್ಯರ ಜೋಡಿ ಜರ್ಮನಿಯ ಅಂತಾರಾಷ್ಟ್ರಿಯ ನೃತ್ಯೋತ್ಸವದಲ್ಲಿ(೧೯೭೦) ಸಿಂಗಾಪುರದ ಕಲೋತ್ಸವದಲ್ಲಿ (೧೯೮೨) ಗ್ರೀಸ್ ನೃತ್ಯೋತ್ಸವದಲ್ಲಿ (೧೯೮೩) ಭಾರತವನ್ನು ಪ್ರತಿನಿಧೀಕರಿಸಿತು. ಪದ್ಮಾ ಅವರ ಹಲಕೆಲವು ರಂಗರಚನೆಯ ವಿನ್ಯಾಸ ಕೊರಿಯೋಗ್ರಫಿ ಪೂರ್ಣಶಃ ಸುಂದರಿಯ ಸ್ವತಂತ್ರ ನಿರ್ವಹಣೆಗೆ ಒಳಪಡುತ್ತಿತ್ತು. ತಾವೇ ಪೂರ್ತಿಯಾಗಿ ರಂಗರೂಪ ಸಿದ್ಧಪಡಿಸಿ ನಿರ್ದೇಶಿಸಿ ಪ್ರಸ್ತುತಪಡಿಸಿದ ರಾಜರಾಜಚೋಳ ಎಂಬ ನೃತ್ಯನಾಟಕ ಸುಂದರಿಯವರ ನಾಟ್ಯಶಾಸ್ತ್ರಾಭಿಜ್ಞತೆಗೆ ಒಂದು ನಿತಾಂತ ನಿದರ್ಶನ. ಈಚಿನ ಇಪ್ಪತ್ತೈದು ವರ್ಷಗಳಿಂದ ಬೆಂಗಳೂರಲ್ಲೇ ನೆಲೆಸಿ ಕನ್ನಡಿಗರೇ ಆಗಿಹೋಗಿದ್ದ ಸುಂದರಿಯವರಿಗೆ ನೃತ್ಯ ಒಂದು ತಪಸ್ಸು. ಹಣ ಹೆಸರು ಗಳಿಕೆಗಳತ್ತ ಅಗಳಿ ಹಾಕಿ ಮನೋಬುದ್ಧಿದೇಹ ಸಾಮರ್ಥ್ಯವನ್ನು ಗುರೂಪದಿಷ್ಟವಾದ ಮಾರ್ಗದಲ್ಲಿ ನಾಟ್ಯಶಾಸ್ತ್ರದ ಒಳಸುಳಿಗಳ ಸೌಂದರ್ಯದ ಶಿಲ್ಪನಿರ್ಮಾಣದ ಸಂಶೋಧನೆಯಲ್ಲಿ – ತಮ್ಮ ಆರೋಗ್ಯವನ್ನು ನಿರ್ದಯವಾಗಿ ಒತ್ತೆಯಿಟ್ಟು – ತೊಡಗಿಸಿಕೊಂಡಿದ್ದರು.

sundari santhanm

sundari santhanm

ಕಾಲಪುರುಷ ಕ್ಯಾನ್ಸರಿನ ಮುಂಗಡ ನೋಟೀಸು ಜಾರಿ ಮಾಡಿದ್ದು ತಿಳಿದೂ ದೇಹ ದಿನೇದಿನೇ ಕರಗುತ್ತಿದ್ದರೂ ಭಾಗ್ಯವನ್ನು ಬೈಯದೇ, ದೈವವನ್ನು ದೂಷಿಸದೇ ಪಾಪವೆಂದು ಪರಿತಪಿಸದೇ ಕ್ಯಾನ್ಸರಿನ ಮೃತ್ಯುಮಾಲಿಕೆಯನ್ನು ಧರಿಸಿಯೇ ನಂದದ ಕಲಾನಂದದ ಮಂದಹಾಸದಲ್ಲಿ, ಐತಿಹಾಸಿಕ ಎನಿಸುವ ಘಟನೆಗಾಗಿ ಸುಂದರಿ ಗೆಜ್ಜೆ ಕಟ್ಟಿದರು. ಅದು ಕರಣವಿನಿಯೋಗಮಾಲಿಕಾ ಎಂಬ ಡಾಕ್ಯುಮೆಂಟರಿಗಾಗಿ. ಗುರು ಪದ್ಮಾ ಕಂಡರಸಿದ ಕರಣಗಳ ವಿನಿಯೋಗದ ನೃತ್ಯಸಾಧ್ಯತೆಗಳ ಕುರಿತಾದ ಸ್ವಂತ ಶೋಧ. ಸುಂದರಿಯವರನ್ನು ಕಲಾಲೋಕದಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಧ್ರುವಸಿದ್ಧಿ- ಕರಣವಿನಿಯೋಗಮಾಲಿಕಾ. ದೇಶವಿದೇಶಗಳಲ್ಲೂ ಇದರ ಡಿವಿಡಿ ಇವರನ್ನು ಜೀವಂತಗೊಳಿಸಿದೆ.
ಕಲೆಯಲ್ಲಿ ನಿತ್ಯಕುತೂಹಲಿಯಾಗಿದ್ದ ಬಾಲಸಹಜ ಉತ್ಸಾಹ ಹೊಂದಿದ್ದ ಸುಂದರಿ ಯಕ್ಷಗಾನದ ಹೆಜ್ಜೆಗಾರಿಕೆಗೆ ಖುಷಿಪಟ್ಟು, ಪಟ್ಟುಹಿಡಿದು ಕಲಿತು ಕೇದಗೆಮುಂದಲೆ ಕಸೆ ಕಟ್ಟಿ ಮೀಸೆ ತೀಡಿ ನಲನಾಗಿ ನಲಿದದ್ದೂ ಒಂದು ಆದರ್ಶವೇ. ಈ ನೃತ್ಯಗಾತಿಯ ಒಳಗೆ ಒಬ್ಬ ಲೇಖಕಿಯೂ ಹಲಗೆ-ಬಳಪ ಹಿಡಿದು ಕಾಯುತ್ತಿದ್ದವಳು ; ಪದ್ಮಾ ಅವರ ಜೀವನಕಥೆ ಬರೆವ ಮೂಲಕ ಹೊರತೋರಿದ್ದಾಳೆ. ಪದ ಕುಸಿಯೆ ನೆಲವಿಹುದೆಂದು ಪ್ರಬಲವಾಗಿ ನಂಬಿದ್ದ ಸುಂದರಿ ಅಸ್ತಮಾನದ ಮಬ್ಬುಗತ್ತಲಲ್ಲಿ ಬಣ್ಣಹಚ್ಚಿ ಗೆಜ್ಜೆ ಘಲ್ಲಿಸಿದ್ದು, ಅವರ ಜೀವಮಾನದ ಮಹತ್ವಾಕಾಂಕ್ಷೆಯ ಅಸೀಮ ಸಂಶೋಧನೆಯ ದೇಸೀಕರಣಕ್ಕಾಗಿ. ಕರ್ನಾಟಕದ ದೇವಾಲಯದ ಗೋಡೆಗಳ ಜೀರ್ಣಸಾಲಭಂಜಿಕೆಗಳನ್ನು ಕಂಡು ಅಧ್ಯಯನ ಮಾಡಿ ೧೦೮ ದೇಸೀ ಕರಣಗಳನ್ನು ನಿರೂಪಿಸಿದ್ದರು. ಆ ಕುರಿತು ಮಹಾಪ್ರಬಂಧದ ರಚನೆಗೂ ತೊಡಗಿದ್ದರು. ಕ್ಯಾನ್ಸರಿನ ವಿಕಿರಣ ಚಿಕಿತ್ಸೆಯಿಂದ ಎಲುಬು ರಕ್ತ ಮಾಂಸ ನರ ನಾಡಿಗಳೆಲ್ಲ ಯುದ್ಧರಂಗದ ಪ್ರೇತಭೂಮಿಯಾಗಿದ್ದರೂ ಲ್ಯಾಪ್‌ಟಾಪ್ ಎದೆಯ ಮೇಲಿಟ್ಟುಕೊಂಡು ಅದುರುವ ತೋರ್ಬೆರಳಿನಲ್ಲಿ ಅಕ್ಷರ ಅಕ್ಷರವನ್ನು ಜೋಡಿಸಿ ನಿಟ್ಟುಸಿರಲ್ಲಿ ನಗೆ ಹಾಯಿಸುತ್ತಿದ್ದರು. ದೇಸೀಕರಣಕ್ಕೆ ಸಂಬಂಧಿಸಿದಂತೆ ಶಾಸ್ತ್ರಭಾಗ ಪೂರ್ಣಗೊಳಿಸಿದ್ದರೂ ಪ್ರಯೋಗದ ಭಾಗ ಮುಕ್ಕಾಲು ಬಾಕಿಯಾದ ಕುರಿತು ಕಳವಳವಿತ್ತು. ದೇಸೀಕರಣ ಪೂರ್ಣಮಾಡದೆ ತಾನು ಸಾಯುವುದಿಲ್ಲ ಅಂತ ಭೇಟಿ ಅದಾಗಲೆಲ್ಲಾ ಸಾವನ್ನು ಛೇಡಿಸುತ್ತಿದ್ದರು. ಆದರೆ ಮರಣ ಮೃದಂಗದ ನಡೆಯ ಮುಕ್ತಾಯ ನಾಟ್ಯಮೃದಂಗದಷ್ಟು ಮೃದುವೂ ಅಲ್ಲ ಮೋಹಕವೂ ಅಲ್ಲ.
ಮುಂದಿನ ಕಲಾಕ್ಷೇತ್ರದ ಆಸಕ್ತ ವಿದ್ಯಾರ್ಥಿಗಳಿಗೆ ಜನ್ಮಕ್ಕಾಗುವಷ್ಟು ಸಂಶೋಧನ ಸಾಮಗ್ರಿಯನ್ನು ಕೈಮೊಗೆದು ನೀಡಿ ಕಣ್ಣುಮುಚ್ಚಿದ ಸುಂದರೀಸಂತಾನಂ ಅವರಂಥ ನಾಟ್ಯೋಪಾಸಕರು ನಾಟ್ಯತಪಸ್ವಿಗಳು ವಿರಳಾತಿವಿರಳ. ನೆತ್ತರು ಬಸಿದು ಅವರು ಅನ್ವೇಷಿಸುತ್ತಿದ್ದ ನಾಟ್ಯಶಾಸ್ತ್ರೀಯ ಶೋಧನೆಯ ಹೆದ್ದೇರಿನ ಮಿಳಿ ಹಿಡಿದು ಸಾಧ್ಯವಾದಷ್ಟೂ ದೂರ ಸಂಭ್ರಮದಿಂದ ಕ್ರಮಿಸುವಂತೆ ಶಿಷ್ಟಲೋಕ ಕೈಜೋಡಿಸಿದರೆ ಗತಿಸಿದ ಕಲಾವಿದೆಯ ಕನಸಿಗೊಂದು ಕಳೆ ಬರುತ್ತದೆ. ಕಲೆ ಇರುತ್ತದೆ.


(ಲೇಖಕರು ಖ್ಯಾತ ಚಿಂತಕರು, ವಿಮರ್ಶಕರು)

Leave a Reply

*

code