Author: ಮನೋರಮಾ. ಬಿ.ಎನ್
ಶ್ರೀ ಸುಬ್ಬುಕೃಷ್ಣ- ನಿಮ್ಮೊಂದಿಗೆ ಪಡೆದ ನಲಿವಿನ ಕ್ಷಣಗಳೂ ಹರಿಸಿರುವಾಗಲೇ ಮರೆಯಾಗಿದ್ದೀರಿ. ನಿಮ್ಮ ದಿವ್ಯಾತ್ಮಕ್ಕೆ ಸದ್ಗತಿಯನ್ನು ಕೋರಿ ನೂಪುರ ಭ್ರಮರಿ ಆತ್ಯಂತಿಕ ಪ್ರೀತಿಯಿಂದ ನುಡಿನಮನ ಅಂಜಲಿಯನ್ನು ಅರ್ಪಿಸುತ್ತಿದೆ.
ಮಹಾನಗರದ ದೈನಂದಿನದ ಒಂದಲ್ಲೊಂದು ಕಲಾಂಗಣದಲ್ಲಿ ಕಾಣಿಸುತ್ತಿದ್ದ ಸುಬ್ಬುಕೃಷ್ಣರಿಗೆ ಸಂಗೀತ-ನೃತ್ಯ-ನಾಟಕಾದಿ ಕಲೆಗಳು, ಕೇವಲ ಪ್ರದರ್ಶನದ ಸರಕಲ್ಲ; ಪ್ರಾಣೋಜ್ಜೀವನ ಪ್ರಸೂನಗಳು. ಪ್ರತಿಯೊಂದು ಕಲಾಕಾರ್ಯಕ್ರಮವನ್ನೂ ಬಿಡುಗಣ್ಣಿನಿಂದ ಕಂಡು, ತೆರೆಗಿವಿಯಿಂದ ಈಂಟಿ, ಆಕಂಠವಾಗಿ ಆಸ್ವಾದಿಸಿ, ಭಾವಾರ್ಣವದಲ್ಲಿ ಸಾನಂದವಾಗಿ ಸ್ವಚ್ಛಂದವಾಗಿ ವಿಹರಿಸುವ ಮನೋಮೀನ- ಸುಬ್ಬಣ್ಣ. ತಾನು ಮಾತ್ರ ಕಲೆಯಿಂದ ಖುಷಿ ಪಡುವ ಭಾವಲೋಭಿಯಲ್ಲ ಇವರು. ತನ್ನ ಸಂತೋಷಾನುಭವವನ್ನು ಅಕ್ಷರೀಕರಿಸಿ ನೂರಾರು ಜನರಿಗೆ ಹಂಚುತ್ತಿದ್ದವರು.
ಇವರ ಹೃದಯ ಒಂದು ಅಚ್ಛೋದಸರಸ್ಸು. ಸ್ಪಷ್ಟ-ಶುಭ್ರ-ನಿರ್ಮಲ-ಪ್ರಶಾಂತ. ಪೂರ್ವಗ್ರಹದ ಕುರುಡು ನೆರಳೂ ಇಲ್ಲದೇ ಕಲಾಪ್ರಸ್ತುತಿಯನ್ನು ಕಾಣುತ್ತಿದ್ದವರು. ಆದ್ದರಿಂದಲೇ ಕಲೆಯನ್ನು ಆದರಿಸುತ್ತಿದರು, ಆರಾಧಿಸುತ್ತಿದ್ದರು, ಆಮೋದಿಸುತ್ತಿದ್ದರು. ತಾನು ಕಂಡುದರ ಧನಾಂಶಗಳನ್ನು ಹೆಕ್ಕಿ ಹೆಣೆದು ಕಲಾವಿದರನ್ನು ಮುಕ್ತವಾಗಿ ಶ್ಲಾಘಿಸಿ, ವಿವರವಾದ ಕಲಾವಲೋಕಲೇಖವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಾತಿವಿಲಂಬಕಾಲದಲ್ಲಿ ಪ್ರಚುರಪಡಿಸುತ್ತಿದ್ದರು.
ಕಲೆಯನ್ನೂ ಕಲಾವಿದರನ್ನೂ ಸ್ವಲಾಭಸಂತುಷ್ಟಿದೂರರಾಗಿ ಸುಬ್ಬುಕೃಷ್ಣರಂತೆ ಸರ್ವಾತ್ಮನಾ ಪ್ರೋತ್ಸಾಹಿಸುವ ಹೃದಯವಂತರು ವಿರಳಾತಿವಿರಳ. ಆದ್ದರಿಂದಲೇ ಸಂಸ್ಕಾರವಂತ-ಸಹೃದಯ-ಸ್ನೇಹಶೀಲ-ಸಜ್ಜನ ಸುಬ್ಬುಕೃಷ್ಣ ಕಲಾಲೋಕದ ಕಲಾಕಲಾಪಗಳಿಗೆ ಚೈತನ್ಯವನ್ನು ಚಿಮ್ಮಿಸುವ ಚಿರಂತನ ಚಿಲುಮೆಯಂತಿದ್ದವರು. ಸಭಾಸದರಲ್ಲಿ ಸುಬ್ಬುಕೃಷ್ಣರ ಉಪಸ್ಥಿತಿ ಇದೆ ಎಂದರೆ ಇರುವ ಪ್ರೇಕ್ಷಕರಿಗೆ ಇನ್‌ನೂರು ಸೇರ್ಪಡೆ ಆದಂತಿರುತ್ತಿತ್ತು.
ನೈಷೇಧಿಕದೃಷ್ಟಿಯ ಕಿಲುಬೂ ಇಲ್ಲದೇ ಕಲಾಕಾರನ ಪ್ರಯೋಗಪ್ರಯತ್ನವನ್ನು ಆತ್ಮೀಯವಾಗಿ ಗುರುತಿಸಿ ಮೆಚ್ಚಿ ಮುದ್ದುಗರೆವ ಸುಬ್ಬುಕೃಷ್ಣರ ಮೃದುಮನಸ್ಸಿನ ಹಿಂದಿರುವುದು ಅವರ ಲೋಕಪ್ರೀತಿ,
ಜೀವನೋತ್ಸಾಹ, ಆತ್ಮವಿಕಸನಗುಣ. ಸುಬ್ಬುಕೃಷ್ಣರ ಸಹೃದಯತೆಯ ಸತ್ತ್ವಸಂಪನ್ನತೆಯನ್ನು ವಿನಯದಿಂದ ಅನುಲಕ್ಷಿಸಿ,
‘ಸಹೃದಯಸದ್ರತ್ನ’ ಎಂಬ ಬಿರುದನ್ನು
ನೂಪುರಭ್ರಮರಿಯು ತನ್ನ ದಶಮಾನೋತ್ಸವ ಪೂರ್ಣತೆಯ ಸಂಭ್ರಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನೃತ್ಯಸಂಶೋಧನಾ ವಿಚಾರಸಂಕಿರಣದ ಸಮಾರೋಪ ಸಂಧ್ಯೆಯಲ್ಲಿ ನೀಡಿ ಧನ್ಯರಾಗಿದ್ದೆವು. ಭಗವಂತನು ದೀರ್ಘಾಯುಷ್ಯ-ಆರೋಗ್ಯ-ಭಾಗ್ಯ-ಸುಖಸಂಪದಗಳನ್ನಿತ್ತು ನಿಮ್ಮನ್ನು ಅನವರತ ಪೊರೆಯಲಿ ಎಂದು ಸಾದರವಾಗಿ ಪ್ರಣಾಮಗಳೊಂದಿಗೆ ಆಶಿಸಿದ್ದೆವು.
ಆನಂತರವೂ ಬಹಳ ಸಲ ನೂಪುರ ಭ್ರಮರಿಯ ಬಳಗದೊಂದಿಗೆ ಹಾರ್ದ ಸಂವಾದಗಳು ನಡೆದಿತ್ತು. ಅವರೊಂದಿಗೆ ಬಹಳಷ್ಟು ವರುಷಗಳ ಒಡನಾಟ ಇಲ್ಲದಿದ್ದರೂ ಪರಿಚಯವಾದ ತಿಂಗಳಿನ ಅಂತರದಲ್ಲಿಯೇ ವಿಸ್ತರಿಸಿದ ಕಲಾಬಂಧುತ್ವವೇ ಹೃದಯಕ್ಕೆ ಹತ್ತಿರವನ್ನಾಗಿಸಿತು. ಆದರೆ ಭಗವಂತನ ಇಚ್ಛೆಯೇ ಬೇರೊಂದಿತ್ತು. ನಾಲ್ಕೈದು ತಿಂಗಳುಗಳ ಅನಂತರದಲ್ಲಿ ತನ್ನ ನೃತ್ಯವಿಶೇಷಕ್ಕೆ ಸಹೃದಯನನ್ನು ಕರೆಸಿಕೊಂಡಿದ್ದಾನೆ. ಬಹಳ ವರುಷಗಳಿಂದ ಸೆಣೆಸುತ್ತಿದ್ದ ಕ್ಯಾನ್ಸರ್ ಎಂಬ ನೆಪದಲ್ಲಿ ಬರಮಾಡಿಸಿಕೊಂಡಿದ್ದಾನೆ. ಸುಬ್ಬುಕೃಷ್ಣರ ದೇಹಕ್ಕೆ ಅಂತ್ಯವಿರಬಹುದು. ಆದರೆ ಅವರ ಆತ್ಮ ಕಲಾವರಣದ ಸುತ್ತಲಿನ ಆಯಾಮಗಳನ್ನು ನಿರಂತರವೂ ಆಶೀರ್ವದಿಸುತ್ತಿರುತ್ತದೆ.