Author: ಮನೋರಮಾ. ಬಿ.ಎನ್
‘ಯಾಕೆ ಬಾನಿ? ಯಾವುದು ಬಾನಿ? ಅವೆಲ್ಲಾ ಅವರವರ ಸೃಷ್ಠಿ ಅಲ್ಲವೇ? ಅದನ್ಯಾಕೆ ಇನ್ನೊಬ್ಬರ ಮೇಲೆ ಹೇರಬೇಕು? ಯಾಕೆ ತಮ್ಮದನ್ನೇ ಎಲ್ಲರೂ ಕಲಿಯಬೇಕು, ಪ್ರತಿಷ್ಠಾಪಿಸಿಕೊಳ್ಳಬೇಕು ಎಂಬ ಹಠ? ಎಲ್ಲಾ ಗುರುಗಳೂ ಸೇರಿ ಕಲಿಯುವ ವಿದ್ಯಾರ್ಥಿಗಳೆಲ್ಲರಿಗೂ ಅನ್ವಯವಾಗುವ ಹಾಗೆ ಒಂದೇ ಬಗೆಯ ಸಿಲೆಬಸ್ ಅಂತ ಯಾಕೆ ಮಾಡಿಕೊಳ್ಳಬಾರದು? ಎಲ್ಲರಿಗೂ ಅನ್ವಯವಾಗುವ ಹಾಗೆ ಒಂದು ಸಮಗ್ರ ಶಿಕ್ಷಣ ಬೇಕು. ಪಾಪ. ಕಲಿಯುವ ಮಕ್ಕಳಿಗೆ ಗುರುಗಳು ಬದಲಾದಂತೆಲ್ಲಾ ಅವರವರ ಶೈಲಿ ಕಲಿಯಲು ಹೋಗಬೇಕಾದ ಅನಿವಾರ್ಯತೆ. ಹೀಗೆ ಆಗಿ ಮಕ್ಕಳು ಕೊನೆಗೆ ನೃತ್ಯದ ಮೇಲೆ ಆಸಕ್ತಿಯನ್ನೇ ಕಳೆದುಕೊಳ್ತಾರೆ. ’ ಎಂದಿದ್ದರು ದಿ. ದಂಡಾಯುಧಪಾಣಿ ಪಿಳ್ಳೈ ಅವರ ಪಟ್ಟ ಶಿಷ್ಯೆ ಹಿರಿಯ ಕಲಾವಿದೆ ಜಯಲಕ್ಷ್ಮಿ ಆಳ್ವ. ಅವರ ದನಿಯಲ್ಲಿ ವೇದನೆಯಿತ್ತು; ಆಗ್ರಹವಿತ್ತು.
ಹೌದು. ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಸಾಮಾನ್ಯರಿಂದ ಮೊದಲ್ಗೊಂಡು ನೃತ್ಯ ಅದರಲ್ಲೂ ಭರತನಾಟ್ಯವನ್ನು ಕಲಿಯುವ ಪ್ರತೀ ವಿದ್ಯಾರ್ಥಿಗೂ ಇದು ಅನುಭವಕ್ಕೆ ಬಂದಿರುತ್ತದೆ. ಉದಾ : ಅಡವು ಶೈಲಿಯಲ್ಲೇ ಸಾಕಷ್ಟು ವ್ಯತ್ಯಾಸಗಳು, ಅಲರಿಪ್ಪುವಿನಂತಹ ನೃತ್ಯಬಂಧಗಳಲ್ಲಿಯೇ ಸಾಕಷ್ಟು ಮಾರ್ಪಾಡುಗಳು. ಅದರಲ್ಲೂ ಬಹಳ ಸಲ ನಮ್ಮೆಲ್ಲರ ಅನುಭವಕ್ಕೆ ಬರುವಂತೆ ವಿದ್ಯಾರ್ಥಿಗಳು ಗುರುವನ್ನು ಕಾರಣಾಂತರಗಳಿಂದ ಬದಲಾಯಿಸಿ ಮತ್ತೊಬ್ಬರಲ್ಲಿ ವಿದ್ಯಾಭ್ಯಾಸ ಅರಸಿ ಹೊರಟರೆ ರಸಾಸ್ವಾದನೆಗೆ ಅನುಕೂಲವಾಗುವಂತಹ ದಾರಿಯಲ್ಲಿ ನಡೆಯಲು ಕಲಿಸುವುದಕ್ಕಿಂತ ಕುದುರೆ ಕಣ್ಣುಪಟ್ಟಿಯಂತೆ ನಡೆಯಲು ಕಲಿಸುವ, ತಮ್ಮ ಮುದ್ರೆಯನ್ನೊತ್ತಲು ಬಯಸುವವರೇ ಬಹಳ. ಇದು ನಗರ- ಪಟ್ಟಣ-ಗ್ರಾಮವೆನ್ನದೆ ಹರಡಿಕೊಂಡಿರುವುದಲ್ಲದೆ ಅದೆಲ್ಲವನ್ನೂ ಒಳಗೊಂಡ ವಿಶಾಲ ವ್ಯಾಪ್ತಿಯಲ್ಲಿ ಶಿಕ್ಷಣನೀತಿಗಳಲ್ಲೂ ವ್ಯಾಪಕವಾಗಿ ಕಂಡುಬರುತ್ತಲಿದೆ. ಫಲವಾಗಿ ಬಹುಸಾಂಖ್ಯಿಕರ ಕೂಗು ಬಲವಾಗಿ ಕಲೆಯೆಂಬುದು ಪ್ರಲೋಭನೆಗೊಳಗೆ ಮುಳುಗಿ ಅಷ್ಟೇನೂ ಒತ್ತಾಸೆಯಿಲ್ಲದವರು ಬದಿಗೆ ಸರಿದುಹೋಗುತ್ತಲೇ ಇದ್ದಾರೆ.
ಹಾಗೆ ನೋಡಿದರೆ ಇಂತವರ ಪೈಕಿ ಒಂದು ಗುಂಪು ತಮ್ಮದೇ ಆದ ಸ್ವತಂತ್ರ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಹಿಂದುಳಿದ, ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತೇವೆ ಎನ್ನುವಂತವರಾದರೆ; ಮತ್ತೊಂದು ಗುಂಪು ತಮ್ಮದೇ ಆದ ಹೊಸ ಪರಂಪರೆಯನ್ನು ಬೆಳೆಸಿಕೊಳ್ಳುವ ಚಪಲಿಗರು. ಎಲ್ಲರಿಗೂ ಶಿಷ್ಯರ ತಪ್ಪನ್ನು ತಿದ್ದುವುದಕ್ಕಿಂತ ಹೆಚ್ಚಾಗಿ ‘ತಪ್ಪಿರುವುದನ್ನು ಸರಿ ಮಾಡುತ್ತಿದ್ದೇವೆ’ ಎನ್ನುತ್ತಾ ಬಾನಿ/ಶೈಲಿಯ ಮುದ್ರೆಯೊತ್ತುವ ಚಟ. ಇದರ ಫಲವಾಗಿ ಎಷ್ಟೋ ಮಂದಿ ನರ್ತನಾಪೇಕ್ಷಿಗಳು, ವಿದ್ಯಾರ್ಥಿಗಳು ತಮ್ಮ ಗುರುಗಳ, ಶಿಕ್ಷಕರ ಪಡಿಯಚ್ಚಿನಂತೆ ತಯಾರಾಗುತ್ತಾರೆಯೇ ವಿನಾ ತಮ್ಮದೇ ಪ್ರಭಾವಳಿಯನ್ನು ರೂಪಿಸಿಕೊಳ್ಳುವಲ್ಲಿ ಸೋಲುತ್ತಾರೆ. ಕಾರಣ, ಅರ್ಥ, ಔಚಿತ್ಯ ತಿಳಿಯದೆ ಗೊಂದಲದ ಗೂಡುಗಳೊಳಗೆ ಸಿಲುಕುತ್ತಾರೆ. ಇದೊಂದು ಮಾದರಿಯಲ್ಲಿ ಆನೆಗೆ ಸರಪಳಿ ಹಾಕಿ ಹಿಡಿದಿರಿಸಿ ಪಳಗಿಸಿದಂತೆಯೇ.
ಇಂತಹ ಪೂರ್ವಾಗ್ರಹ ಪೀಡಿತ ಗುರುಗಳೇ ಇಂದಿನ ನರ್ತನಕ್ಷೇತ್ರದಲ್ಲಿ ಬಹುಪಾಲು ಮಂದಿ ಎನ್ನುವುದೇ ದೊಡ್ಡ ವೇದನೆ ಮತ್ತು ಅಪಾಯವೂ ಕೂಡಾ. ಒಳ್ಳೆಯದು ಯಾವುದೇ ಆಗಿದ್ದರೂ ಅದನ್ನು ಅಳವಡಿಸಿಕೊಳ್ಳೋಣ ಎಂಬ ವೈಶಾಲ್ಯತೆಯಿಲ್ಲದ ; ಬೇರೊಬ್ಬರ ಅಭಿವ್ಯಕ್ತಿಯಲ್ಲಿ ಲೋಪ ಕಂಡುಹಿಡಿಯುವ ಸಣ್ಣ ಮನಸ್ಸು ; ಎಲ್ಲಿ ತಮ್ಮ ಪ್ರಕಾಶ ಮಂಕಾಗುವುದೋ ಎಂಬ ಆತಂಕ. ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದರೂ ಬೇರೊಬ್ಬರ ಎಲೆಯ ನೊಣ ಹುಡುಕುವ ವಿಚಿತ್ರ ಆನಂದ. ಪ್ರತಿಭೆಯಿದ್ದರೆ ಅದಕ್ಕೆ ಪ್ರಕಾಶಿಸುವ ಶಕ್ತಿಯು ಇರುತ್ತದೆ ಎಂಬ ನಂಬುಗೆಯಿಲ್ಲದವರ ಬಳಿಯಲ್ಲಿ ಕಲಿಯಹೋಗುವುದು ಎಂದರೆ ಆಯ್ಕೆಯ ಪ್ರಶ್ನೆಯೇ ಇಲ್ಲದೆ ತಮ್ಮನ್ನು ತಾವೇ ಬಂಧನದಲ್ಲಿರಿಸಿಕೊಳ್ಳುವುದೆಂದೇ ಅರ್ಥ.
ಈ ಕಬಂಧ ಬಾಹು ಸಂಗೀತಕ್ಕಿಂತಲೂ ಹೆಚ್ಚಾಗಿ ನೃತ್ಯವನ್ನು ಆವರಿಸಿಕೊಂಡಿರುವುದು ಒಂದು ವಿಶೇಷ. ಬಹುಷಃ ಸಂಗೀತದಲ್ಲಿ ನೃತ್ಯದಷ್ಟು ಘೋಷಿತ ಶೈಲಿಗಳು ಬಾರದಿರುವುದೇ ಕಾರಣವೇನೋ ! ಮತ್ತು ಸಂಗೀತ ಕಛೇರಿ ಮತ್ತು ಪರೀಕ್ಷೆಗಳಿಗೆ ನಿರೀಕ್ಷಿತ ಮಟ್ಟದ ಪ್ರತಿಭೆ ಇಲ್ಲದೇ ಹೋದರೆ ಎಂತಹ ಹಿನ್ನೆಲೆ, ಅನುಕೂಲಗಳಿದ್ದರೂ ಅದು ಬಹಳ ಸಮಯ ಪ್ರಯೋಜನಕ್ಕೆ ಬರಲಾರದು. ಆದರೆ ನೃತ್ಯದಲ್ಲಿ ಹಾಗಲ್ಲ; ಪ್ರತಿಭೆಗಿಂತಲೂ ಹೆಚ್ಚಾಗಿ ಮೊದಲೇ ಹಣ, ಪ್ರತಿಷ್ಠೆ, ಖರ್ಚು ಮಾಡುವ ಶಕ್ತಿ-ಆಡಂಬರಗಳಲ್ಲೇ ಮುಳುಗಿ ಹೋಗಿರುವ ನೃತ್ಯಕ್ಕೆ ಬಾನಿ/ಶೈಲಿಯೆಂಬುದು ಅಳತೆಗೋಲಾಗುತ್ತಿದೆ. ಪಂದನಲ್ಲೂರು, ಮೈಸೂರು, ವಳವೂರ್, ಕಲಾಕ್ಷೇತ್ರ,…ಮುಂತಾದವುಗಳಷ್ಟೇ ಅಲ್ಲದೆ ಪ್ರತೀ ಮುಖ್ಯ ಶೈಲಿಗಳೊಳಗೂ ಹಲವು ಶೈಲಿಗಳು, ಅದರಂತೆಯೇ ನಡೆಯಬೇಕೆನ್ನುವ ಹಠ ಕೇವಲ ನೃತ್ಯಪ್ರದರ್ಶನಗಳಲ್ಲಷ್ಟೇ ಅಲ್ಲದೆ; ಪ್ರಾಥಮಿಕ ಪಠ್ಯದೊಳಗೂ ಹೇರಳವಾಗಿ ಇಣುಕುತ್ತಿದೆ.
ಯಾವ ಶೈಲಿಯೂ ಮೇಲಲ್ಲ ಅಥವಾ ಕೀಳಲ್ಲ. ಅದೆಲ್ಲವೂ ಆಯಾಯ ಕಲಾವಿದನ ಪ್ರತಿಭಾ ಸಂಪನ್ನತೆಯ ಕಾಣಿಕೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಶೈಲಿ ನಿಲುವು ಇದೆ. ಅದನ್ನು ಶೋಧಿಸಿಕೊಳ್ಳುವ ಪ್ರಯತ್ನಗಳಾದಾಗಲೇ ಆತ ಸೃಷ್ಟಿಶೀಲ ಕಲಾವಿದನೆನಿಸಿಕೊಳ್ಲಲು ಸಾಧ್ಯ. ಇಲ್ಲದಿದ್ದಲ್ಲಿ ತನ್ನ ಬಾನಿ/ಶೈಲಿಯ ಮಾರ್ಕೆಟಿಂಗ್ ಮ್ಯಾನೇಜರ್‌ನಂತೆ ಆಗುತ್ತಾರೆಯೇ ಹೊರತು ಗುರುವಂತೂ ಅಲ್ಲವೇ ಅಲ್ಲ.
ಬಾನಿ, ಶೈಲಿಗಳಿಗನುಸಾರವಾಗಿ ಪಠ್ಯಪುಸ್ತಕವನ್ನೋ, ಶಿಕ್ಷಣ ಕ್ರಮವನ್ನೋ ಸಿದ್ಧಪಡಿಸುವುದು; ಅದನ್ನೇ ಪರೀಕ್ಷೆ, ವಿದ್ಯಾಭ್ಯಾಸದಲ್ಲಿ ಜಾರಿಗೆ ತರುವಂತೆ ನೋಡಿಕೊಳ್ಳುವುದೋ ಅಥವಾ ಸಿದ್ಧ ಬಾನಿ ಅಥವಾ ಆಚಾರ್ಯ ಪರಂಪರೆಯ ಲೋಪ-ದೋಷಗಳೆನ್ನು ಎಣಿಸದೆ ಯಥಾವತ್ತಾಗಿ ಕಣ್ಣು ಮುಚ್ಚಿಕೊಂಡು ಅನುಸರಿಸುವುದು ನಿಜಕ್ಕೂ ಕಲೆ ತನ್ನ ಸ್ವಾದವನ್ನು ಕಳೆದುಕೊಳ್ಳುವ ದಾರಿಗಳು. ಬಾನಿಯೆಂಬುದು ಕಲಾವಿದನು ಏರಬೇಕಾದ ಎತ್ತರಕ್ಕಿರುವ ಒಂದು ದಾರಿಯೇ ಹೊರತು ಅದೇ ಮೂಲವಲ್ಲ. ಎಲ್ಲಾ ಪರಂಪರೆಗಲೂ ಒಂದೇ ಗಂಗೋತ್ರಿಯ ಹಲವು ನದಿಗಳು, ಅಷ್ಟೇ. ಹಾಗಾಗಿ ಕಲಾವಿದನ ಉದ್ದೇಶ ರಸಾಸ್ವಾದನೆ ಅನುಕೂಲವಾದ ಸೋಪಾನಗಳನ್ನು ಏರುವುದೇ ವಿನಾ ಶೈಲಿ, ಸಂಪ್ರದಾಯ, ಬಾನಿ ಎನ್ನುತ್ತಾ ತನ್ನ ಕುರ್ಚಿಗೇ ಅಂಟಿಕೊಂಡು ಅರಸಿನ ಕಾಮಲೆಯ ಕಣ್ಣುಗಳಿಂದ ನೋಡುವುದಲ್ಲ.
ಈ ನಿಟ್ಟಿನಲ್ಲಿ ಸಾರ್ವಕಾಲಿಕವಾಗಿ ಎಲ್ಲೆಡೆಯೂ ಅನ್ವಯವಾಗುವ, ಮೂಲಭೂತವಾದ, ಒಂದೇ ತಳಹದಿಯುಳ್ಳ ಪ್ರಾಥಮಿಕ ಶಿಕ್ಷಣ ಒದಗಿದರೇನೇ ಕಲಾ ಜಗತ್ತು ಬೇಧನೀತಿಗಳಿಂದ ಮುಕ್ತವಾಗಿ ಸಹೃದಯರಿಗೂ ಉಪಕಾರವಾದೀತು. ಇಲ್ಲವಾದರೆ ಆಯಾಯ ಪರಂಪರೆಗಳನ್ನು ಪುಷ್ಠಿಗೊಳಿಸುವುದೋ, ಕಲಿಯುವುದಕ್ಕೋ ಕಲೆ ಸೀಮಿತವಾದೀತು.
ಪ್ರೀತಿಯಿಂದ,
ಸಂಪಾದಕರು