Author: ಡಾ.ಪ್ರಭಾಕರ ಜೋಷಿ, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಮಂಗಳೂರು
ಯಕ್ಷಗಾನದಲ್ಲಿ ವೀರಪಾತ್ರ ಪ್ರತಿಪಾದಕವಾದ ಏರುಪದ್ಯದ ಭಿನ್ನವಾಗುವ ಹಾಡುವಿಕೆಗೆ ಮೌಲಿಕ ಚಿಂತನೆ ಅಗತ್ಯ. ಬೊಬ್ಬೆ ಅನಗತ್ಯ. ಆದರೆ ಈಗಲೂ ಅದೇ ಹೆಚ್ಚಿಗೆ ಇದೆ. ತೆಂಕಲ್ಲೂ-ಬಡಗಿನಲ್ಲೂ ಏರುಪದ್ಯಗಳಲ್ಲಿ ಬಡಗು ತಿಟ್ಟಿನ ಹಳೆ ವಿಧಾನ ಸುವ್ಯವಸ್ಥಿತವಲ್ಲ. ಆದರೆ ಒಟ್ಟಿನಲ್ಲಿ ಏರುಪದಗಳ ಕುರಿತು ವಿವೇಚನೆ ಮಾಡುವಾಗ ದಿ. ಮಂಡೆಚ್ಚ, ಮಾಂಬಾಡಿ, ಉಪ್ಪೂರು, ನಾವಡ, ನೆಬ್ಬೂರು, ಪದ್ಯಾಣ, ಹೊಳ್ಳ ಭಾಗವತರ ಕೆಲವು ಧ್ವನಿ ಮುದ್ರಣ ಕೇಳಿ ಹೋಲಿಸಿ ನೋಡುವುದು; ಕಲೆಯಲ್ಲಿ ನಮಗೆ ವ್ಯಕ್ತಿಗಳ ಬಗೆಗೆ ಎಷ್ಟೇ ಅಭಿಮಾನವಿದ್ದರೂ ಯಾವುದು ಸರಿಯೆಂಬುದೇ ಮುಖ್ಯ ಹೊರತು ಯಾರು ಸರಿಯೆಂಬುದಲ್ಲ.
ಸಂಪುಟ ೫/೧ರ ಪುಟ ೩೭ರಲ್ಲಿ ಕಾಣುವ ಒಂದು ವಿಚಾರ ನನಗೆ ಸ್ಪಷ್ಟವಾಗದೇ ಬರೆಯುತ್ತಿದ್ದೇನೆ. ಭಾಗವತನೊಬ್ಬ ಹಾಡನ್ನು ಆವರ್ತನ ಮಾಡಿ ಹಾಡುವಾಗ ಮುಂದಿನ ಹಂತಕ್ಕೆ ಹೋಗುವುದನ್ನು ಯಾರು ನಿರ್ಣಯಿಸಬೇಕು? ಭಾಗವತನು ಮುಂದಿನ ಎತ್ತುಗಡೆ ಮಾಡಿದ ಮೇಲೆ ನಟ ಅಥವಾ ಪಾತ್ರವೇ ಹೊಂದಿಕೊಳ್ಳಬೇಕು ಅಲ್ಲವೇ? ಇಲ್ಲವಾದರೆ ನಟನಿಂದ ಭಾಗವತನಿಗೆ ಪಾಠ ಆಗಿ; ಪಾತ್ರ, ಕಥೆಗಳ ಅಭಿವ್ಯಕ್ತಿ ಹೋಗಿ ಪ್ರಾತ್ಯಕ್ಷಿಕೆ ಆಗಿಬಿಡುತ್ತದೆ. ಬಡಗು ತಿಟ್ಟಿನ ಗಧಾಯುದ್ಧವನ್ನು ಬಹಳ ಕಾಲದಿಂದ ಬಹಳ ಬಾರಿ ನೋಡಿದ ನನಗೆ ಈ ವಿಲಕ್ಷಣ ಸ್ಥಿತಿ ಕಂಡುಬಂದಿದೆ. ರಂಗದ ನಿರ್ವಹಣೆಗೆ ನಿರ್ಣಾಯಕ ಯಾರು? ನಟನೇ? ಭಾಗವತನೇ? –ಅಲ್ಲ ಅಥವಾ ಇಬ್ಬರೂ ಹೌದೇ? ಭಾಗವತನೇ ಆಗಬೇಕಿಲ್ಲ; ಪೂರ್ವ ನಿರ್ಣಯ ಮಾಡದೆ ರಂಗದಲ್ಲೇ ನಿಶ್ಚಯಿಸಿ ಹೊರಟರೆ ಸರಿಯೇ? ಕಲಾನುಭವವೆಂಬುದು ಸಲೀಸಾಗಿ ಸಾಗಬೇಕಲ್ಲವೇ? ಬಲ್ಲವರು ತಿಳಿಸಿ.
– ಡಾ. ಪ್ರಭಾಕರ ಜೋಷಿ, ಯಕ್ಷಗಾನ ವಿದ್ವಾಂಸರು, ಮಂಗಳೂರು.