Author: ಮನೋರಮಾ. ಬಿ.ಎನ್
(ಸೆಪ್ಟೆಂಬರ್ ೧೫-ಸೆಪ್ಟೆಂಬರ್ ೨೦ )ಸ್ಥಳ: ಮಲ್ಲೇಶ್ವರಂನ ಸೇವಾಸದನ
ಭಾರತದೆಲ್ಲೆಡೆ ವರ್ಷದ ೩೬೫ ದಿನಗಳಲ್ಲೂ ಸಾಂಸ್ಕೃತಿಕ ರಸಧಾರೆಯನ್ನೇ ಹರಿಸುತ್ತಾ ಜಗತ್ತಿನಲ್ಲಿ ಅತೀ ಹೆಚ್ಚು ಸಮಯದ ಸಾಂಸ್ಕೃತಿಕ ಸಂಜೆಗಳನ್ನೀಯುತ್ತಿರುವ ಕಾರ್ಯಕ್ರಮ ಸರಣಿ ಎಂದು ಗಿನ್ನಿಸ್ ರೆಕಾರ್ಡ್ಗೆ ಸೇರ್ಪಡೆಯಾದ ಅತ್ಯಪೂರ್ವ ಶ್ರಮ ‘ಸೂರ್ಯ ಫೆಸ್ಟಿವಲ್’. ಈ ಹಿನ್ನಲೆಯಲ್ಲಿ ಅದರ ಆಯೋಜಕರಿಗೂ, ಸಹಭಾಗಿತ್ವವನ್ನಿತ್ತು ಪ್ರೋತ್ಸಾಹಿಸುತ್ತಿರುವ ಕಲಾರಾಧಾಕರಿಗೂ ಅಭಿನಂದನೆಗಳು ಸಲ್ಲಲೇಬೇಕು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅನನ್ಯ ಸಂಸ್ಥೆಯ ಆಶ್ರಯದಲ್ಲಿ ೫ ದಿನಗಳ ಸಂಗೀತ-ನೃತ್ಯ ಸರಣಿ ನಡೆಯಿತು. ಕಾರ್ಯಕ್ರಮಕ್ಕೆ ಉತ್ತಮ ಆರಂಭವನ್ನು ಒದಗಿಸಿ ಶಾಸ್ತ್ರ ಮತ್ತು ಪ್ರಯೋಗದ ನೆಲೆಗಳನ್ನು ಹೊಂದಾಣಿಕೆ ಮಾಡಿ ತಮ್ಮ ನಿಯಮಿತ ಅಭಿನಯದಲ್ಲೇ ಪರಿಣಾಮಕಾರಿ ಸಂವಹನವನ್ನಿತ್ತವರು ತಮಿಳ್ನಾಡಿನ ರಮಾ ವೈದ್ಯನಾಥನ್.
ಅಲರಿಪ್ಪುವಿನ ಸಾಧ್ಯತೆಗಳನ್ನು ‘ಸನ್ನಿಧಾನಂ’ ಎಂಬ ಹೆಸರಿನಿಂದ ವಿನೂತನವಾದ ರೀತಿಯೆಂಬಂತೆ ಶಿಲ್ಪ, ಕಲೆ, ದೇವಾಲಯ ವಾಸ್ತು, ಧ್ವಜಸ್ತಂಭ, ಪ್ರಕಾರ ಮುಂತಾಗಿ ಆಕಾರಸ್ವರೂಪವಾಗಿ ವಿಸ್ತರಿಸಿ ಸಭಾ ನಮಸ್ಕಾರ ಮಾಡಿದ ರಮಾ, ದೇವಿ ಬೀಜಮಂತ್ರದ ಮತ್ತು ಪಾಟಾಕ್ಷರಗಳ ಸಂಯೋಜನೆಗೆ ಚುರುಕು ಗತಿಯ, ಉತ್ಸಾಹಪೂರ್ಣ ಚಲನೆಯನ್ನು ನೀಡಿ ದೇವರ ಸನ್ನಿಧಾನವನ್ನು ಕಾಣಿಸಿಕೊಡುವಲ್ಲಿ ಯಶಸ್ವಿಯಾದರು. ತಂಜಾವೂರು ವಡಿವೇಲು ರಚನೆಯ ರೀತಿಗೌಳ ರಾಗದ ವರ್ಣವನ್ನು ಉಪಮೆಗಳ ಮುಖಾಂತರ ಪುನರಾವರ್ತನೆಯಿಲ್ಲದಂತೆ ವಿವರವಾದ ಸಂಚಾರೀಭಾವಗಳಲ್ಲಿ ವಿಸ್ತರಿಸಿದರು. ವರ್ಣದ ಜತಿ ಸಂಯೋಜನೆ ಅತ್ಯಾಕರ್ಷಕವಾದರೂ ಅದರ ಕ್ಲಿಷ್ಟತೆಗೆ ಎರಡು ಬಾರಿ ಲಯ ತಪ್ಪುವಂತಾಗಿತ್ತು. ವರ್ಣದ ಮುಖ್ಯಗುರಿಯಾದ ಸ್ಥಾಯೀ ಭಾವವನ್ನು ಕಾಪಾಡಿಕೊಳ್ಳುವುದು ವರ್ಣದುದ್ದಕ್ಕೂ(ನೃತ್ತವನ್ನು ಹೊರತುಪಡಿಸಿ) ಜರುಗಿತಾದರೂ; ಅವರಲ್ಲಿನ ಭಾವಸ್ಫುಟತೆ ವಿಷಯದ ಸಂವಹನಕ್ಕಷ್ಟೇ ಸೀಮಿತವಾಗಿ ವರ್ಣದ ಅಂತ್ಯಕ್ಕೆ ಅವರ ಭಾವವು ರಸದ ಮಟ್ಟವನ್ನು ಮುಟ್ಟುವಲ್ಲಿ ಸೋತಿದ್ದು ಹೌದು.
ರಮಾ ಅವರೊಳಗಿದ್ದ ಕಲಾವಿದೆ ಸ್ಪಷ್ಟವಾಗಿ ಜಾಗೃತವಾದದ್ದು ಮುತ್ತು ತಾಂಡವರ್ ರಚನೆಯ ಕಮಾಸ್ ರಾಗದ ಪದಕ್ಕೆ. ಆದರೆ ಪದಾಭಿನಯದಲ್ಲಿ ವಾಸಕಸಜ್ಜಿಕೆಯ ನಾಯಿಕೆಯ ಸೂಕ್ಷ್ಮ ಅನುಭವ, ಕ್ರಿಯೆ-ಪ್ರತಿಕ್ರಿಯೆಗಳನ್ನಿತ್ತ ಕಲಾವಿದೆ; ನಂತರದ ಪಾಪನಾಶಂ ಶಿವನ್ ರಚನೆಯ ‘ಕೃಷ್ಣನಂತಹ ಮಗನನ್ನು ಪಡೆಯಲು ಏನು ಪುಣ್ಯ ಮಾಡಿರುವೆಯೇ ಯಶೋದಾ’ ಎಂಬ ಭಾವದ ‘ಎನ್ನ ತವಂ ಸೈದನೈ’ ಕಾಪಿ ರಾಗದ ಪದಕ್ಕೆ ಇಹವನ್ನು ಮರೆಯದೆ, ಪರಕ್ಕೇ ಏರದ ಸಂಧಿಗ್ಧ ಬಗೆಯ ಪ್ರಸ್ತುತಿಯನ್ನಿತ್ತದ್ದು ಕೊಂಚ ಹಿನ್ನೆಡೆ ಕಂಡರು. ಕೊನೆಯ ಭಾಗದಲ್ಲಿ ಸೂರದಾಸ್ ಮತ್ತು ಚೈತನ್ಯ ಪ್ರಭುಗಳ ರಚನೆಗೆ ರಾಸಲೀಲಾ ಮತ್ತು ಕೃಷ್ಣನು ಬೃಂದಾವನವನ್ನು ತೊರೆದರೂ ಆತನ ಅಸ್ತಿತ್ವ ಉಳಿದ ಬಗೆಯನ್ನು ತೋರಿದ ನೃತ್ಯಬಂಧ ಅಷ್ಟೇನೂ ತೃಪ್ತಿದಾಯಕವಾಗಿರಲಿಲ್ಲ.
ವಿವರವಾದ ನಡೆ-ಅಡವುಗಳ ಸಮ್ಮಿಲನದ ನೃತ್ತ, ನಿಧಾನವಾಗಿ ವಿಸ್ತಾರಗೊಳ್ಳುತ್ತಾ ಸಣ್ಣ, ಸಣ್ಣ ಅಂಶಗಳನ್ನೂ ದಾಖಲಿಸುವ ಅಭಿನಯ ಅವರ ಪ್ಲಸ್ ಪಾಯಿಂಟ್. ಒಂದರ್ಥದಲ್ಲಿ ಅವರ ಅಭಿನಯ ಪ್ರಿಯದರ್ಶಿನಿ ಗೋವಿಂದ್ ಅವರನ್ನೂ ನೆನಪು ಮಾಡಿಕೊಡುತ್ತದೆ. ಆದರೂ ಮುಖಜಾಭಿನಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿಕೊಂಡು, ಹೆಚ್ಚಿನ ಭಾವಪ್ರದರ್ಶನವನ್ನಿತ್ತು, ನೃತ್ತ ಮತ್ತು ಅಭಿನಯದ ಸಾಂಗತ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವಲ್ಲಿ ಶ್ರಮವಿದ್ದರೆ ರಂಗವನ್ನು ಮತ್ತಷ್ಟು ತನ್ಮಯವಾಗಿ ಬೆಳಗಿಸಬಹುದು. ಕಾರ್ಯಕ್ರಮಕ್ಕೆ ಸೂಕ್ತ ವಾತಾವರಣವನ್ನು ಕಲ್ಪಿಸಿದ್ದು ಸಾಯಿ ವೆಂಕಟೇಶ್ ಅವರ ಬೆಳಕು ಸಂಯೋಜನೆ. ಕಾರೈಕುಡಿ ಶಿವಕುಮಾರ್ ಅವರ ನಟುವಾಂಗ ಗಟ್ಟಿತನದಿಂದ ಕೂಡಿದರೆ; ಇಂದು ನಾಯರ್ ಅವರ ಹಾಡುಗಾರಿಕೆ ನಿರೀಕ್ಷಿತ ಮಟ್ಟ ಮುಟ್ಟಲಿಲ್ಲ.