ಅಂಕಣಗಳು

Subscribe


 

ಸಿದ್ಧಿ ಎಂಬ ಸೌಭಾಗ್ಯ

Posted On: Saturday, March 4th, 2023
1 Star2 Stars3 Stars4 Stars5 Stars (No Ratings Yet)
Loading...

Author: Dr Pratibha Satyanarayana, Bengaluru

ನೂಪುರ ಭ್ರಮರಿ (ರಿ.)  IKS Centre– ಶಾಸ್ತ್ರರಂಗ ಅಧ್ಯಯನ ತರಬೇತಿಯ (Internship/Fellowship) ಅಂಗಭಾಗವಾಗಿ  ಪ್ರಕಟವಾದ ಲೇಖನ – 1

ಯಾವುದೇ ಕಾರ್ಯವನ್ನು ಮಾಡುವುದು, ಅದರ ಸಿದ್ಧಿಗಾಗಿ ಅಲ್ಲವೇ ? ಹಾಗಾದರೆ, ಸಿದ್ಧಿ ಎಂದರೇನು? ಸಿದ್ಧಿ ಎಂದರೆ ಸಾಫಲ್ಯ. ಒಂದು ಕೆಲಸದ ಉದ್ದೇಶ ಸಾಧಿಸಿದರೆ, ಅದು ಸಫಲವಾಯಿತು, ಎಂದರ್ಥ. ಈ ಸಾಫಲ್ಯ ಅಥವಾ success ಗಾಗಿಯೇ, ಎಲ್ಲರೂ ಶ್ರಮಿಸುತ್ತಾರೆ. “ಪ್ರಯೋಜನಮನುದ್ದಿಶ್ಯ ನ ಮಂದೊsಪಿ ಪ್ರವರ್ತತೆ “, ಎಂಬ ಮಾತಿನಂತೆ, ಸಾಫಲ್ಯದ ಉದ್ದೇಶದಿಂದಲೇ ಎಲ್ಲರೂ ಕೆಲಸದಲ್ಲಿ ತೊಡಗುತ್ತಾರೆ. ಹೀಗಂದ  ಮೇಲೆ, ನಾಟ್ಯ ಅಥವಾ ನಾಟಕದ ವಿಷಯದಲ್ಲಿ ಸಾಫಲ್ಯಾವಿದೆಯೇ? ಯಾರಿಗೆ ಸಾಫಲ್ಯ? ಅಭಿನಯಿಸುವ ನಟನಿಗೋ, ನೋಡುವ ಪ್ರೇಕ್ಷಕನಿಗೋ ಅಥವಾ ಪ್ರಾಶ್ನಿಕನ ಸಮಾಧಾನಕ್ಕೋ, ಎಂಬ ಪ್ರಶ್ನೆಗಳ ಕೂಲಂಕುಶ ವಿಮರ್ಶೆಯು ನಾಟ್ಯಶಾಸ್ತ್ರದ ಒಂದು ಅಧ್ಯಾಯದಲ್ಲಿದೆ.

रसा भावा ह्यभिनया धर्मी वृत्तिप्रवृत्तयः |

सिद्धिस्वरास्तथातोद्यं गानं प्रकृतिरेव च ||

उपचारस्तथा विप्रा मण्डपाश्चेति सर्वशः |

त्रयोदशविधो ह्येष ह्यादिष्टो नाट्य संग्रहः ||

ಎಂದು ಭರತನು, ತನ್ನ ನಾಟ್ಯಶಾಸ್ತ್ರದಲ್ಲಿ ಹದಿಮೂರು ವಿಷಯಗಳನ್ನು ತಿಳಿಸುತ್ತಾನೆ. ಆದರೆ, ಅಭಿನವಗುಪ್ತನು ಇವುಗಳಲ್ಲಿ ಪ್ರಕೃತಿ ಮತ್ತು ಉಪಚಾರ ಎಂಬ ಎರಡು ವಿಷಯಗಳನ್ನು ಬಿಟ್ಟು, ಕೋಹಲನ ಪ್ರಕಾರ ಹನ್ನೊಂದು ವಿಷಯಗಳು ಮಾತ್ರ ಕಾಣುವುದು ಎಂದು ತಿಳಿಸುತ್ತಾನೆ. ಆದರೆ, ಭರತನ ಪ್ರಕಾರವೇ ಸಿದ್ಧಿಯು ಒಂದು ಪ್ರಮುಖ ವಿಷಯವಾಗಿದ್ದು, ಈ ಪದದ ಬಳಕೆಯನ್ನು ಹೀಗೆ, ಮೊದಲ ಅಧ್ಯಾಯದಲ್ಲೇ ಮಾಡುತ್ತಾನೆ.

“सूर्यः छत्रं शिवः सिद्धिं वायुर्व्यजनमेव च “- ಎಂದರೆ, ಶಿವನು ಭರತನ ಮಕ್ಕಳಿಗೆ ಸಿದ್ಧಿಯನ್ನು ಕೊಟ್ಟನು, ಎಂದು.

ಭರತನು, “ಸಿದ್ಧಿವ್ಯಂಜಕಂ” ಎಂಬ ಇಪ್ಪತ್ತೇಳನೇ ಅಧ್ಯಾಯದ ಆರಂಭದಲ್ಲಿಯೇ “ಪ್ರಯೋಗ: ಸರ್ವೋಯಂ ಸಿದ್ಯರ್ಥಂ ಸಂಪ್ರದರ್ಶಿತ :”, ಅಂದರೆ, ಎಲ್ಲಾ ಪ್ರಯೋಗಗಳೂ/ ಪ್ರದರ್ಶನಗಳೂ ಸಾಫಲ್ಯಕ್ಕಾಗಿಯೇ ಮಾಡುವುದರಿಂದ ಅದರ ಬಗ್ಗೆ ವಿಷದಿಸುತ್ತೇನೆ, ಎಂದು ಆರಂಭಿಸುತ್ತಾನೆ. ಭರತನು ಸಿದ್ಧಿಯ ಲಕ್ಷಣವನ್ನು ಕೊಡದಿದ್ದರೂ, ಅಭಿನವಗುಪ್ತನು ” सिद्धिर्नाम साध्यप्रयोजनसंपत्तिः ” ಎಂದು ಲಕ್ಷಣವನ್ನು ನೀಡಿದ್ದಾನೆ. ಹಾಗಾದರೆ, ಯಾರಿಗೆ ಸಿದ್ಧಿಯಾಗುತ್ತದೆ, ಎಂಬ ಪ್ರಶ್ನೆಗೆ “नटानां सामाजिकानां च “, ಅಂದರೆ ನಟರಿಗೂ ಸಾಮಾಜಿಕರಿಗೂ (ಸಹೃದಯರಿಗೂ ) ಇದು ಪ್ರಯೋಜನವಾಗಬೇಕು. ಆಗ ಅದು ಸಿದ್ಧವಾಯಿತು, ಎಂದರ್ಥ.

ಸಿದ್ಧಿಗಳ ಬಗ್ಗೆಯ ಅಧ್ಯಾಯದಲ್ಲಿ, ಮುಖ್ಯವಾಗಿ

1- ಎರಡು ಬಗೆಯ ಸಿದ್ಧಿಗಳು

2- ಘಾತಸ್ಥಾನಗಳು

3- ಪ್ರಾಶ್ನಿಕ ಲಾಕ್ಷಣಗಳು

4- ಪ್ರೇಕ್ಷಕ ಲಕ್ಷಣಗಳು

5- ಪ್ರಾಶ್ನಿಕ ಭೇದಗಳು

6- ಮೂರು ನಾಟ್ಯಗುಣಗಳು

ಈ ವಿಷಯಗಳ ಬಗ್ಗೆ ವಿಶ್ಲೇಷಣವಿದೆ.

1- ಸಿದ್ಧಿಗಳು

ಮಾನುಷಿ ಮತ್ತು ದೈವಿ ಎಂದು ಎರಡು ಬಗೆಯದಾಗಿವೆ. ಮನುಷ್ಯನಿಗೆ ಸಂಬದ್ಧಪಟ್ಟದ್ದು ಮಾನುಷಿ ಸಿದ್ಧಿ. ಅದರಲ್ಲಿ 10 ಪ್ರಕಾರಗಳಿವೆ. ಅದು ಮಾತಿನ ಮೂಲಕ ಮತ್ತು ಶರೀರದ ಅಂಗಾoಗಗಳ ಮೂಲಕ  ಪ್ರದರ್ಶಿತವಾಗುವುದು.

ಪ್ರೇಕ್ಷಕರು ತಮ್ಮ ಆನಂದಯಾನುಭೂತಿಯನ್ನು ನಗುವಿನ ಮೂಲಕ, ಕರತಾಡಣದ ಮೂಲಕ, “ಕಷ್ಟ “, “ಸಾಧು “,ಮುಂತಾದ ಉದ್ಗಾರದಿಂದ, ಪುಳಕಗಳಿಂದ ತೋರಿಸಬೇಕು. ಈ ರೀತಿಯ ನಿಯಮಗಳಿಂದ ಪ್ರೇಕ್ಷಕರ ಬಾಧ್ಯತೆಗಳನ್ನು ಭರತನು ತಿಳಿಸಿದ್ದಾನೆ. ಎಲ್ಲಿ ಮಾನಸಿಕವಾಗಿ, ಭಾವುಕರಾಗಿ ಸಹೃದಯರು ನಾಟ್ಯದಲ್ಲಿ ಒಂದಾಗಿ, ಮತ್ತು ಎಲ್ಲಿ ಯಾವ ಅಧಿದೈವಿಕವಾದ ಅಡಚಣೆಗಳಿಲ್ಲವೋ, ಅಲ್ಲಿ ದೈವಿ ಸಿದ್ಧಿಯಾಗಿದೆ, ಎನ್ನಬಹುದು. ಹೀಗೆ ದೈವಿ ಸಿದ್ಧಿಗಳು ದ್ವಿವಿಧವಾಗಿವೆ.

2- ಘಾತಸ್ಥಾನಗಳು

ಘಾತ ಎಂದರೆ ತೊಂದರೆ, ಅಥವಾ ಅಡಚಣೆಗಳು. ನಾಟ್ಯವು ಸಿದ್ಧಿಯಾಗಲು ಏನೇನು ತೊಂದರೆಯಾಗಬಹುದು? ಅದನ್ನು, ಭರತನು, ದೈವ ಘಾತಗಳು, ಆತ್ಮಘಾತಗಳು ಮತ್ತು ಪರ ಘಾತಗಳು ಎಂದು ತಿಳಿಸಿದ್ದಾನೆ. ಕೆಲವೊಮ್ಮೆ,  ಔತ್ಪಾತಿಕ ಎಂಬ ನಾಲ್ಕನೇ ತೊಂದರೆಯೂ ಒದಗಿಬರಬಹುದು. ಮಳೆ, ಬಿರುಗಾಳಿ,ಮಂಟಪ ಬೀಳುವುದು, ಆನೆ ಮುಂತಾದ ಪ್ರಾಣಿಗಳ ನುಗ್ಗುವಿಕೆ – ಇಂತಹ  ದೈವಿ ತೊಂದರೆಗಳು ಬಂದರೆ, ಸಿದ್ಧಿಯಾಗುವುದಿಲ್ಲ. ನಟನು ಸರಿಯಾಗಿ ಮಾತನಾಡದೆ ಅಥವಾ ಅಭಿನಯಿಸದೆ ಇದ್ದು, ಭೀತಿಗೊಂಡರೆ, ಅದೂ ಆತ್ಮಘಾತ. ಬೇರೆಯವರು,ಅಸೂಯೆಯಿಂದ ನಟರ ಮೇಲೆ ಕಲ್ಲು, ಸಗಣಿ, ಹುಲ್ಲು ಇತ್ಯಾದಿ ಎಸೆಯುವುದರಿಂದ ತರುವ ತೊಂದರೆಗಳು ಪರ ಘಾತ. ಹಾಗೆಯೇ ಭೂಕಂಪ, ಗುಡುಗು ಇತ್ಯಾದಿ ತೊಡಕುಗಳನ್ನು ಔತ್ಪಾತಕ ಎನ್ನಲಾಗುವುದು.

ಈ ನಾಲ್ಕು ಮುಖ್ಯ ಕಾರಣಗಳೊಂದಿಗೆ, ನಟರ ಸ್ವಯಂಕೃತಾಪರಾಧಗಳೂ ಅಡಚಣೆಗಳಾಗಬಹುದು. ತಮ್ಮ ಆಹಾರ್ಯದಲ್ಲಿ, ವಾಚಿಕದಲ್ಲಿ, ಆಂಗಿಕದಲ್ಲೂ, ದೋಷಗಳನ್ನು ಮಾಡಿ ರಸಾಭಾಸವಾಗಬಹುದು. ಆಗ, ಅಲ್ಲಿ ಸಿದ್ಧಿಯಾಗಿದೆಯೋ, ಘಾತವಾಗಿದೆಯೋ ಅಥವಾ ಏಕದೇಶದಲ್ಲಿ ಸಿದ್ಧಿಯೋ ಘಾತವೋ ಎಂದು , ನಾಟ್ಯಕುಶಲರು ಬರೆದಿಡಬೇಕು.

ಈ ವಿವರಗಳೊಂದಿಗೆ, ಇಲ್ಲಿ ದೇಶೀಯ ಭಾಷೆಯ ಬಳಕೆಯ ಪ್ರಾಮುಖ್ಯವನ್ನು ಎತ್ತಿಹಿಡಿದಿರುವುದು ಗಮನಾರ್ಹ.

“यो देशभावरहितं भाषाकाव्यं प्रयोजयेद्बुद्ध्या |

तस्याप्यभिलेख्यः स्याद्घातो देशप्रयोगज्ञैः ||” 44

तस्मात् गम्भीरार्थाः शब्दाः ये लोकवेदसम्सिद्धाः |

सर्वजनेन ग्राह्यास्ते योज्या नाटके विधिवात् ||46

ದೇಶೀಯ ಭಾಷೆಯನ್ನು ಬಳಸದೆ ಇರುವುದೂ ಒಂದು ಘಾತವೆಂದೇ ಪರಿಗಣಿಸಬೇಕು. ಆದ್ದರಿಂದಲೇ, ಎಲ್ಲರಿಗೂ ತಿಳಿಯುವ ಭಾಷೆಯ ಪ್ರಯೋಗವನ್ನೇ ಮಾಡಬೇಕು.

3- ಪ್ರಾಶ್ನಿಕರ ಲಕ್ಷಣಗಳು

ನಾಟ್ಯದ ಗುಣದೋಷಗಳ ಬಗ್ಗೆ ನಿರ್ಧರಿಸುವವರು ಪ್ರಾಶ್ನಿಕರು. ಅವರು ಎಲ್ಲಾ ಕಲೆಗಳಲ್ಲಿ, ಶಾಸ್ತ್ರಗಳಲ್ಲಿ ಮತ್ತು ವಿದ್ಯೆಗಳಲ್ಲಿ ನಿಪುಣರಾಗಿದ್ದು, ಪಕ್ಷಪಾತರಹಿತರಾಗಿರಬೇಕು.

4 – ಪ್ರೇಕ್ಷಕರ ಲಕ್ಷಣಗಳು

ಯಾರು ಬೇಕಾದರೂ ಯಾವ ಕಲೆಯನ್ನು ಬೇಕಾದರೂ ಆಸ್ವಾದಿಸಬಹುದೇ, ಎಂಬ ಪ್ರಶ್ನೆಗೆ, ಪ್ರೇಕ್ಷಕರ ಲಕ್ಷಣಗಳನ್ನು ಮುಂದೆ ತಿಳಿಸುತ್ತಾನೆ. ಉತ್ತಮಗುಣಗಳನ್ನು ಹೊಂದಿವನಾಗಿ, ಅವರ ವಯೋಧರ್ಮಕ್ಕೆ ತಕ್ಕಂತೆ ವಿಭಿನ್ನರಸಗಳನ್ನು ಆಸ್ವಾದಿಸುತ್ತಾರೆ. ಹೀಗೆ “ಭಾವಾನುಕರಣೆ ” ಮಾಡಲು ಸಮರ್ಥನಾದವನು ಪ್ರೇಕ್ಷಕ.  ಕಲೆಯ ಯೋಗ್ಯತೆಯನ್ನು ನಿರ್ಣಯಿಸುವವನು ಪ್ರಾಶ್ನಿಕರ ಅಧಿಕಾರವಾಗಿರುತ್ತದೆ. ಸ್ಪರ್ಧೆಯ ವಿಷಯದಲ್ಲಿಯೋ, ಗುಣದೋಷಗಳ ವಿಷಯದಲ್ಲಿಯೋ ವಾದವು ಬಂದಲ್ಲಿ, ಈ ಪ್ರಾಶ್ನಿಕರು

” साधनं दूषणाभासः प्रयोग समयाश्रितै |

समत्वमङ्गमाधुर्यं पाठ्यं प्रकृतयो रसाः ||80

वाद्यं गानं सनेपथ्यमेतगज्ज्ञेयं प्रयत्नतः |

गीतवादित्रतालेन कालान्तरकलासु च “|| 81

ಈ ಮೇಲಿನ ಅಂಶಗಳನೆಲ್ಲಾ ಪರಿಗಣಿಸಿ, ನಿರ್ಣಯಿಸುತ್ತಾರೆ.

ಈ ಅಧ್ಯಾಯದಲ್ಲಿ ಕಾಲಕ್ಕನುಗುಣವಾದ ಕಥಾಪ್ರಸಂಗವನ್ನು ಅಭಿನಯಿಸುವ ವಿವೇಚನೆಯನ್ನೂ ಮಾಡಿದ್ದಾರೆ.

 

6- ನಾಟ್ಯಗುಣಗಳು

ಪಾತ್ರ, ಪ್ರಯೋಗ ಮತ್ತು ऋद्धि – ಇವೇ ನಾಟ್ಯದ ಮೂರು ಗುಣಗಳು. ಉತ್ತಮನಟನು, ಉತ್ತಮ ಸಂಗೀತದೊಂದಿಗೆ, ಉತ್ತಮ ಉಪಕರಣಗಳೊಂದಿಗೆ ಮಾಡಿದ ನಾಟ್ಯವೇ “ಅಲಂಕೃತ”ವಾಗುತ್ತದೆ, ಎಂದು ಭರತ ಮುನಿಯು, ಸಿದ್ಧಿಯ ವಿಷಯವನ್ನು ಸಮಾಪನಗೊಳಿಸುತ್ತಾನೆ.

 

 

Ref : ನಾಟ್ಯಶಾಸ್ತ್ರ of parimala publication( edited by Nagar), and

natyashastra ( with English translation of Dr Unni)

Leave a Reply

*

code