ಅಂಕಣಗಳು

Subscribe


 

ಶ್ರೀರಾಮಾಯಣ ಮಹಾಭಾರತದಲ್ಲಿ ಪಿತಾಪುತ್ರ ಸಂಬಂಧ-ಭಾಗ 4

Posted On: Monday, July 28th, 2014
1 Star2 Stars3 Stars4 Stars5 Stars (No Ratings Yet)
Loading...

Author: Vidwan Korgi Venkateshwara Upadhyaya, Kateel

ವಿಶ್ವಾಮಿತ್ರರು ರಾಮಲಕ್ಶ್ಮಣರನ್ನು ಅಯೋಧ್ಯೆಯಿಂದ ಸಿದ್ಧಾಶ್ರಮಕ್ಕೆ ಕರೆದುಕೊಂಡು ಹೋಗುವಾಗ ದಾರಿಗಡ್ಡ ಬಂದ ತಾಟಕೆಯನ್ನು ಹೆಣ್ಣೆಂದು ಗಣಿಸಿದೇ ವಧಿಸಬೇಕೆಂದು ರಾಮನಲ್ಲಿ ಹೇಳಿದಾಗ ರಾಮನ ಮಾತು

ಪಿತುರ್ವಚನನಿರ್ದೇಶಾತ್ ಪಿತುರ್ವಚನ ಗೌರವಾತ್
ವಚನಂ ಕೌಶಿಕಸ್ಯೇತಿ ಕರ್ತವ್ಯಮವಿಶಂಕಯಾ (ರಾಮಾಯಾಣ ಬಾಲಕಾಂಡ 26-2)
ಅನುಶಿಷ್ಯೇಸ್ಮ್ಯಯೋಧ್ಯಾಯಾಂ ಗುರುಮಧ್ಯೇಮಹಾತ್ಮನಾ
ಪಿತ್ರಾದಶರಥೇನಾಹಂ ನಾವಜ್ಞೇಯಂಚ ತದ್ವಚಃ (ರಾಮಾಯಾಣ ಬಾಲಕಾಂಡ 26-3)
ಸೋṣಹಂ ಪಿತುರ್ವಚಃ ಶ್ರುತ್ವಾ ಶಾಸನಾದ್ಬ್ರಹ್ಮವಾದಿನಃ
ಕರಿಷಮಿನ ಸಂದೇಹಃ ತಾಟಕಾವಧಮುತ್ತಮವತ್ (ರಾಮಾಯಾಣ ಬಾಲಕಾಂಡ 26-4)

ಭಗವನ್ ನನ್ನ ತಂದೆ ವಸಿಷ್ಠ ವಾಮದೇವಾದಿಗಳ ಸಮಕ್ಷ ನನಗೆ ಆಜ್ಞೆ ಮಾಡಿದ್ದಾರೆ ‘ವಿಶ್ವಾಮಿತ್ರನು ಹೇಳಿದಂತೆ ಕೇಳು’ ಎಂದು. ಅವರ ಮಾತಿನ ಮೇಲಿನ ಗೌರವದಿಂದ ಹಾಗೂ ಅವರ ಆದೇಶದಿಂದಾಗಿ ನಾನು ತಮ್ಮ ಮಾತನ್ನು ನೆರವೇರಿಸಲೇಬೇಕು. ತಮ್ಮ ಮಾತು ನನ್ನ ಪಾಲಿಗೆ ಪಿತ್ರಾದೇಶ ಹೀಗೆಂದು ಹೇಳಿ ರಾಮ ತಾಟಕೆಯ ಭುಜಗಳನ್ನು ಕತ್ತರಿಸಿದ ಲಕ್ಷ್ಮಣ ಕಿವಿಮೂಗುಗಳನ್ನು ಕತ್ತರಿಸಿ ಕೊನೆಗೆ ರಾಮ ತಾಟಕೆಯನ್ನು ಕೊಂದುಹಾಕಿದ. ಇಲ್ಲಿ ಪುತ್ರನ ಪಿತೃನಿಷ್ಠೆ, ಗೌರವಭಕ್ತಿಗಳು ಸುವ್ಯಕ್ತವಾಗುತ್ತಿವೆ. ವಿಶ್ವಾಮಿತ್ರರು ರಾಮನನ್ನು ಕಳುಹಿಸುವಂತೆ ಕೆಳಿದಾಗ ದಶರಥನ ಭಯ ಕಳವಳಗಳೂ ಪುತ್ರ ವಾತ್ಸಲ್ಯವನ್ನು ಸೂಚಿಸುತ್ತವೆ.

ಸುಮಂತ್ರ ಕರೆದಾಗ ರಾಮ ಕೈಕೇಯಿಯ ಅಂತಃಪುರಕ್ಕೆ ಬರುತ್ತಾನೆ. ಕೈಕೇಯಿ ವರಗಳ ವಿಷಯವನ್ನು ತಿಳುಹಿಸುತ್ತಾಳೆ.-

ಯಾವತ್ತ್ವಂ ನವನಂಯಾತಃ ಪುರಾದಸ್ಮಾದಭಿತ್ವರನ್
ಪಿತಾತವನ್ನತೇರಾಮ ಸ್ನಾಸ್ಯತೇ ಭೋಕ್ಷ್ಯತೇಪಿವಾ (ರಾಮಾಯಾಣ ಅಯೋಧ್ಯಾಕಾಂಡ 19-16)

‘ನೀನು ವನವಾಸಕ್ಕೆ ಹೋಗುವತನಕ ದೊರೆ ಸ್ನಾನಮಾಡುವುದಿಲ್ಲ, ಊಟ ಮಾಡುವುದಿಲ್ಲ’ ಎಂದು ಹೇಳುತ್ತಾಳೆ. ಆಗ ರಾಮನು ಹೇಳುವ ಮಾತು-

ನಹ್ಯತೇ ಧರ್ಮಚರಣಂ ಕಿಂಚಿದಸ್ತಿಮಹತ್ತರಂ
ಯ ಪಿತರಿಶುಶ್ರೂಷಾತಸ್ಯವಾ ವಚನಕ್ರಿಯಾ (ರಾಮಾಯಾಣ ಅಯೋಧ್ಯಕಾಂಡ 19-22)

ತಂದೆಯ ಶೂಶ್ರುಷೆ ಮಾಡುವುದು ಹಾಗೂ ತಂದೆಯ ಮಾತಿನಂತೆ ನಡೆದುಕೊಳ್ಳುವುದು ಇವೆರಡಕ್ಕಿಂತ ಮಿಗಿಲಾದ ಧರ್ಮಾಚರಣೆಯಾವುದಿದೆ?

ಗವನಂಗಂತುಕಾಮಸ್ಯ ತ್ಯಜತಶ್ಚವಸುಂಧರಾಂ
ಸರ್ವಲೋಖಾತಿಗಸ್ಯೇವ ಲಕ್ಷ್ಯತೇ ಚಿತ್ತವಿಕ್ರಿಯಾಮ್(ರಾಮಾಯಾಣ ಅಯೋಧ್ಯಕಾಂಡ 19-23)

ಸಮಸ್ತ ಸಾಮ್ರಾಜ್ಯ ತೊರೆದು ವನಾಭಿಮುಖನಾಗಲು ಸಂಕಲ್ಪಿಸಿದ ರಾಮನಿಗೆ ಪರಮ ಯೋಗಿಯಂತೆ ಒಂದಿನಿತೂ ಚಿತ್ತವಿಕಾರ ಉಂಟಾಗಲಿಲ್ಲ. ತಂದೆಯ ಮಾತನ್ನು ನೆರವೇರಿಸುವ ಸಂತೋಷವೇ ಆತನಲ್ಲಿ ತುಂಬಿಕೊಂಡಿತು.
ರಾಮ ಕೌಸಲ್ಯೆಯ ಬಳಿಗೆ ಬಂದಾಗ ‘ನೀನು ವನಕ್ಕೆ ಹೋದರೆ ನಾನು ಸಾಯುತ್ತೇನೆ’ ಎನ್ನುತ್ತಾಳೆ. ‘ನಾನೂ ನಿನ್ನೊಂದಿಗೆ ಬರುತ್ತೇನೆ’ ಎಂದು ಗೋಳಾಡುತ್ತಾಳೆ. ಲಕ್ಷ್ಮಣನು ‘ದಶರಥನನ್ನೇ ನಿಗ್ರಹಿಸಿ ನಿನ್ನನ್ನು ಸಿಂಹಾಸನದಲ್ಲಿ ಕೂರಿಸುತ್ತೇನೆ’ ಎನ್ನುತ್ತಾನೆ. ಆಗ ರಾಮ ಹೇಳುವ ಮಾತು-

ನಾಸ್ತಿಶಕ್ತಿಃ ಪಿತುರ್ವಾಕ್ಯಂ ಸಮತಿಕ್ರಮಿತುಂ ಮಮ
ಪ್ರಸಾದಯೇ ತ್ವಾಂಗಿರಸಾಗಂತುಮಿಚ್ಛಾಮ್ಯಹಂ ವನವತ್ (ರಾಮಾಯಾಣ ಅಯೋಧ್ಯಕಾಂಡ 21-30)
‘ಅಪ್ಪನ ಮಾತನ್ನು ಮೀರುವ ಶಕ್ತಿ ನನಗಿಲ್ಲ. ತಲೆಬಾಗಿ ಬೇಡುತ್ತೇನೆ ಅಪ್ಪಣೆ ಕೊಡು.’
ಋಷೀಣಚ ಪಿತುರ್ವಾಕ್ಯಂ ಕುರ್ವತಾವ್ರತಚಾರಿಣಾ
ಗೌರ್ಹತಾ ಜಾನತಾಧರ್ಮಂ ಕಂಡುನಾಪಿ ವಿಪಶ್ಚಿತಾ || ರಾಮಾಯಾಣ ಅಯೋಧ್ಯಕಾಂಡ 31)
ಅಸ್ಮಾಕಂಚ ಕುಲೇಪೂರ್ವಾಂ ಸಗರಸ್ಯಾಜ್ಞಯಾಪಿತುಃ |
ಖನದ್ಧಿಃ ಸಾಗರೈಃ ಭೂಮಿಮಾವಾಪ್ತಃ ಸುಮಹಾನ್ವಧಃ || ರಾಮಾಯಾಣ ಅಯೋಧ್ಯಕಾಂಡ 32)
ಜಾಮದಶ್ಯೇನರಾಮೇಣ ರೇಣುರಾ ಜನನೀಸ್ವಯಂ
ಕೃತ್ತಾ ಪರಶುನಾರಣ್ಯೀ ಪಿತುರ್ವಚನಕಾರಿಣೌ || ರಾಮಾಯಾಣ ಅಯೋಧ್ಯಕಾಂಡ 33)

‘ಕಂಡುಮಹರ್ಷಿಯು ಅಪ್ಪನ ಮಾತುಳಿಸಲು ಗೋಹತ್ಯೆ ಮಾಡಿದ. ನಮ್ಮ ಕುಲದ ಸಗರಪುತ್ರರು ತಂದೆಯ ಅಪ್ಪಣೆಯಂತೆ ಕುದುರೆಯನ್ನರಸುತ್ತಾ ಭೂಮಿಯನ್ನಗೆದು ಸಾಗರವನ್ನು ನಿರ್ಮಿಸಿ ಕಪಿಲನ ಕ್ರೋಧಕ್ಕೆ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಭಾರ್ಗವರಾಮ ತಂದೆಯ ಪ್ರೀತಿಗಾಗಿ ತಾಯಿಯ ಕೊರಳನ್ನೇ ಕೊಡಲಿಯಿಂದ ಕತ್ತರಿಸಿದ- ಈ ಉದಾಹರಣೆಗಳು ಇರುತ್ತಿರಲು ನಾನು ಎಂದಿಗೂ ತಂದೆಯ ಮಾತನ್ನು ಮೀರಲಾರೆ. ನೀನು ನನ್ನೊಡನೆ ಬರಕೂಡದು. ಪತಿಸೇವೆಯೇ ನಿನಗೆ ಧರ್ಮ’ ಎನ್ನುತ್ತಾನೆ.

ಆದರೆ ಒಂದೇ ತಂದೆಯ ಮಕ್ಕಳಾದರೂ ರಾಮನ ನೆರಳಿನಂತೆ ಲಕ್ಶ್ಮಣನಿದ್ದರೂ ಆತ ರಾಮನಿಗಿಂತ ಭಿನ್ನವಾಗಿ ಆಲೋಚಿಸುತ್ತಾನೆ. ಅದಕ್ಕೆ ಕಾರಣ ಆತನಿಗೆ ಅಣ್ಣನ ಮೇಲಿರುವ ಪ್ರೀತಿ. ಆ ಅಪಾರ ಪ್ರೀತಿಯೇ ದಶರಥನ ಬಗೆಗೆ ಕಟುವಾದ ಮಾತನ್ನು ಲಕ್ಷ್ಮಣನಿಂದ ಆಡಿಸುತ್ತದೆ. ದಶರಥನಾದರೂ ರಾಮಲಕ್ಷ್ಮಣರು ತೆರಳಿದ ಬಳಿಕ ಪುತ್ರವಿರಹ ತಾಳಲಾಗದೇ ಪ್ರಾಣವನ್ನೇ ಬಿಡುತ್ತಾನೆ.

ಇದಕ್ಕೆ ಕೊಂಚ ವ್ಯತಿರಿಕ್ತವಾಗಿ ವಿಭಾಂಡಕಮುನಿ ಸ್ತ್ರೀಯರ ಸಂಸ್ಪರ್ಶವಾಗದಂತೆ ಋಷ್ಯಶೃಂಗನನ್ನು ಬೆಳೆಸಿದನಾದರೂ ರೋಮಹರ್ಷಣ ಮಹಾರಾಜನ ಉಪಾಯದಿಂದ ಆತನ ಬಯಕೆ ವಿಫಲವಾಯ್ತು. ಋಷ್ಯಶೃಂಗ ಗೃಹಸ್ಥನಾದ.

( ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.. ಮಹಾಭಾರತದಲ್ಲಿ ಪಿತಾಪುತ್ರಸಂಬಂಧ)

Leave a Reply

*

code