ಅಂಕಣಗಳು

Subscribe


 

ಶ್ರೀರಾಮಾಯಣ ಮಹಾಭಾರತದಲ್ಲಿ ಪಿತಾಪುತ್ರ ಸಂಬಂಧ -ಭ್ಹಾಗ 1

Posted On: Wednesday, January 29th, 2014
1 Star2 Stars3 Stars4 Stars5 Stars (No Ratings Yet)
Loading...

Author: Vidwan Korgi Venkateshwara Upadhyaya, Kateel

ಯಕ್ಷಗಾನ ಅರ್ಥಧಾರಿ, ಕಲಾವಿದ, ಪ್ರಸಂಗಕರ್ತ, ಸಾಹಿತಿ, ವಿಮರ್ಶಕ, ಶಿಕ್ಷಕ, ವೇದ ವ್ಯಾಖ್ಯಾನಕಾರ, ದ್ವಿವೇದಿ, ವಿದ್ವಾಂಸ, ಗುರು…ಹೀಗೆ ನಾಮವಿಶೇಷಣಗಳಿಗೆ ಅನ್ವರ್ಥ ಅಭಿದಾನಪ್ರಾಯರಾದ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರ ಭೌತಿಕ ದೇಹ ಮರೆಯಾದರೂ ಅವರ ಬರೆವಣಿಗೆಗಳು, ಅರ್ಥವೈಭವಗಳು ಸದಾ ಮನದಂಗಣದ ನಂದಾದೀಪ. ಇವರ ಒಂದೊಂದು ಲೇಖನಗಳ ಮೌಲ್ಯವೂ ಅವನ್ನು ಹಿಡಿದಿಟ್ಟ ಪದವೈದುಷ್ಯ-ವಾಕ್ಯ ವ್ಯುತ್ಪತ್ತಿ- ಅರ್ಥಗಾಂಭೀರ್ಯಗಳಿಂದ ಬೆಳಗುತ್ತವೆ. ಅವರ ನೆನಪಿಗೆ ಅವರಿಂದಲೇ ಲಿಖಿಸಲ್ಪಟ್ಟ ‘ಶ್ರೀರಾಮಾಯಣ ಮಹಾಭಾರತದಲ್ಲಿ ಪಿತಾಪುತ್ರ ಸಂಬಂಧ’ ಎಂಬ ವಿಸ್ತಾರವಾದ ಅಧ್ಯಯನಪೂರ್ಣ ಲೇಖನವನ್ನು ಕಂತುಗಳಾಗಿ ಪ್ರಕಟಿಸುತ್ತಿದ್ದೇವೆ. ಕಲಾವಿದರಿಗೆ ಅಂತಃಸ್ಫುರಣೆಯಾಗಬಲ್ಲ ಸನಾತನ ಮೌಲ್ಯ ಪರಂಪರೆಯ ಕಥೆ-ವಾಚಿಕ-ಅರ್ಥವ್ಯುತ್ಪತ್ತಿ-ಅಭಿನಯಾಂಶಗಳ ಗರಿಷ್ಠ ಸಾಧ್ಯತೆಯನ್ನೀಯುವ ಈ ಲೇಖನದ ಪ್ರಯೋಜನವನ್ನು ತಾವು ಪಡೆದುಕೊಳ್ಳುತ್ತೀರೆಂಬ ನಂಬುಗೆ ನಮ್ಮದು. -ಸಂ.

 

ಪಿತೃ ಶಬ್ದವ್ಯುತ್ಪತ್ತಿ
ಪಿತೃಶಬ್ದವು ಪಾರಕ್ಷಣೇ ಎಂಬ ಧಾತುವಿಗೆ ತೃಚ್ ಪ್ರತ್ಯಯ ಬಂದು ಸಿದ್ಧವಾಗುತ್ತದೆ. ಪಾತಿ ಪುತ್ರಾ ದೀನ್ ಇತಿ ಪಿತಾ. ಮಕ್ಕಳನ್ನು ಕಾಪಾಡುವುದರಿಂದ ತಂದೆ ಪಿತಾ ಎಂಬ ಶಬ್ದದಿಂದ ವಾಚ್ಯನಾಗುತ್ತಾನೆ. ತಾತಸ್ತು ಜನಕಃ ಪಿತಾ ಎಂಬುದು ಅಮರಕೋಶ. ತಾತ, ಜನಕ ಎಂಬವು ಪಿತೃ ಶಬ್ದದ ಪರ್ಯಾಯ ಪದಗಳು. ಜನಯ ತೀತಿ ಜನಕಃ-ಅರ್ಥಾತ್ ಹುಟ್ಟಿಗೆ ಕಾರಣನಾದವನು; ತನೋತಿ ಇತಿ ತಾತಃ-ಮಗನ(ಳ) ಬಾಳನ್ನು ವಿಸ್ತರಿಸುವಂತೆ ಮಾಡುವುದರಿಂದ (ಆಹಾರ ಪಾನೀಯ ವಿದ್ಯಾದಾನಗಳಿಂದ) ತಾತ. ಮನುಸ್ಮೃತಿಯೂ ಇದೇ ಮಾತನ್ನು ಹೇಳುತ್ತದೆ.

ಜನಕೋ ಜನ್ಮದಾತಾಚ ರಕ್ಷಣಾಚ್ಚ ಪಿತಾನೃಣಾಮ್ |
ತಾತಃ ವಿಸ್ತೀರ್ಣಕರಣಾತ್ ಕಲಯಾ ಸ ಪ್ರಜಾಪತಿಃ ||
ಯಾರು ಗರ್ಭಾದಾನವನ್ನು ಮಾಡಿ ಜನಿಸಿದ ಬಳಿಕ ಸಂಸ್ಕಾರಾದಿಗಳನ್ನು ಮಾಡಿ ಅನ್ನದಾನಾದಿಗಳನ್ನಿತ್ತು ಪೋಷಿಸುತ್ತಾನೋ ಆತನನ್ನು ಗುರುವೆಂದು ಕರೆಯಬೇಕು.
ನಿಷೇಕಾದಿನಿ ಕರ್ಮಾಣಿ ಯಃ ಕರೋತಿ ಯಥಾವಿಧಿ |
ಸಂಭಾವಯತಿಚಾನ್ನೇನ ಸವಿಪ್ರೋಗುರುರುಚ್ಯತೇ ||

ವಿಭಾಗ
ಸ್ಮೃತಿಕಾರರ ಅಭಿಮತದಂತೆ ತಂದೆಯಂದಿರು ಐದುಮಂದಿ
ಜನಿತಾಚೋಪನೇತಾಚ ಯಶ್ಚವಿದ್ಯಾಂಪ್ರಯಚ್ಛತಿ |
ಅನ್ನದಾತಾ ಭಯತ್ರಾತಾ ಪಂಚೈತೇ ಪಿತರಃ ಸ್ಮೃತಾಃ ||
1.ಜನ್ಮವಿತ್ತವ 2.ಮಂತ್ರೋಪದೇಶ ನೀಡಿದವ 3.ವಿದ್ಯಾದಾನ ಮಾಡಿದವ 4.ಅನ್ನವಿಕ್ಕಿದವ 5.ಆಪತ್ಕಾಲದಲ್ಲಿ ರಕ್ಷಿಸಿದವ- ಇವರೂ ಪಿತೃಗಳೇ ಸರಿ.
ಹನ್ನೊಂದು ಮಂದಿ ಗುರುಗಳಲ್ಲಿ ತಂದೆಯೂ ಒಬ್ಬ. ಇನ್ನುಳಿದವರು 1.ಆಚಾರ್ಯ 2.ಹಿರಿಯಣ್ಣ 3.ರಾಜ 4.ಮಾತುಲ (ಸೋದರಮಾವ) 5.ಹೆಂಡತಿಯ ತಂದೆ 6.ರಕ್ಷಕ 7.ತಾಯಿಯ ತಂದೆ 8.ವರ್ಣ ಜ್ಯೇಷ್ಠ(ಬ್ರಾಹ್ಮಣ) 9. ಚಿಕ್ಕಪ್ಪ (ಪಿತೃವ್ಯ) 10.ತಂದೆಯ ತಂದೆ. ಕೊನೆಯದಾಗಿ ಹನ್ನೊಂದನೆಯವ ತಂದೆ. ಉಳಿದ ಹತ್ತುಮಂದಿಯೂ ತಂದೆಗೆ ಸಮಾನರು. ಹನ್ನೆರಡನೆಯ ವಿಭಾಗಕ್ರಮವೊಂದಿದ್ದು ಕೆಲವರು ಬಂಧುವನ್ನೂ ಸೇರಿಸುತ್ತಾರೆ. ಆಗ ಹನ್ನೊಂದು ಮಂದಿಗಳ ಗುರುಪಂಕ್ತಿಗೆ ತಂದೆ ಸೇರುತ್ತಾನೆ.

ಉತ್ಪಾದಕ ಬ್ರಹ್ಮದಾತ್ರೋಃಗರೀಯಾನ್ ಬ್ರಹ್ಮದಃ ಪಿತಾ |
ತಸ್ಮಾನ್ಮನ್ಯೇತಸತತಂ ಪಿತುರಪ್ಯಧಿಕಂ ಗುರುಮ್ ( ತಂತ್ರಸಾರ)
ಉತ್ಪಾದಕ ಹಾಗೂ ಉಪದೇಶಕ (ಗಾಯತ್ರೀ) ಪಿತೃಗಳಲ್ಲಿ ಮಂತ್ರೋಪದೇಶವಿತ್ತ ಗುರುವೇ ಹೆಚ್ಚಿನವನು.
ಮಾನ್ಯಃ ಪೂಜ್ಯಶ್ಚ ಸರ್ವೇಭ್ಯಃ ಸರ್ವೇಷಾಂ ಜನಕೋಭವೇತ್ |
ಅಹೋ ತಸ್ಯ ಪ್ರಸಾದೇನಿ ಸರ್ವಾನ್ ಪ್ರಶ್ಯತಿ ಮಾನವಃ ||
ಜನ್ಮವಿತ್ತ ತಂದೆಯನ್ನು ಎಲ್ಲರೂ ಗೌರವಿಸಬೇಕು. ಆತನ ಪ್ರಸನ್ನತೆಯಿಂದ ಮಾನವನಿಗೆ ಸಕಲವೂ ಸಿದ್ಧಿಸುತ್ತದೆ.
ಮಾತೃ ಶಬ್ದವ್ಯುತ್ಪತ್ತಿ ಮತ್ತು ವಿಭಾಗ
ಮಾನ ಪೂಜಾಯಾಂ-ಎಂಬ ಧಾತುವಿಗೆ ತನ್ ಪ್ರತ್ಯಯ ಬಂದು ಮಾತೃ ಶಬ್ದ ಸಿದ್ಧವಾಗುತ್ತದೆ. ಯಾವ ಕಾಲಕ್ಕೂ ತಾಯಿಯನ್ನು ಅವಮಾನಮಾಡಕೂಡದು. ಸಂನ್ಯಾಸಿಗಳಾದರೂ ತಾಯಿ ಬಂದಾಗ ಎದ್ದು ನಿಂತು ಗೌರವಿಸಬೇಕು. ಆದ್ಯ ಶಂಕರಾಚಾರ್ಯರು ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ‘ನಮಾತುಃ ಪರದೈವತಮ್’-ತಾಯಿಗಿಂತ ಮಿಗಿಲಾದ ದೇವರಿಲ್ಲ. ಜಗತ್ತಿನ ಪ್ರತಿ ಜೀವಕ್ಕೂ ತಾಯಿಯೇ ಪ್ರಥಮಗುರು. ಜನಯಿತ್ರೀ, ಪ್ರಸೂರ್ಮಾತಾ, ಜನನೀ – ಇವು ಪರ್ಯಾಯ ಪದಗಳು. ಜನಯತಿ ಇತಿ ಜನಯಿತ್ರೀ, ಜನನೀ; ಸೂಯತೇ ಇತಿ ಪ್ರಸೂಃ- ಈ ಎಲ್ಲ ಪದಗಳಿಗೂ ಹೆತ್ತವಳು ಎಂದರ್ಥ.

ರಾಜಪತ್ನೀ –ಗುರೋಪತ್ನೀ-ಭ್ರಾತೃಪತ್ನೀ ತಥೈವಚ |
ಪತ್ನೀಮಾತಾ ಸ್ವಮಾತಾಚ ಪಂಚೈತೇ ಮಾತರಃ ಸ್ಮೃತಾಃ ||
ದೊರೆಯ ಮಡದಿ, ಗುರುಗಳ ಮಡದಿ, ಅಣ್ಣನ ಹೆಂಡತಿ, ಹೆಂಡತಿಯ ತಾಯಿ, ತನ್ನ ತಾಯಿ-ಹೀಗೆ ಐದು ಮಂದಿಯೂ ತಾಯಂದಿರೇ ಸರಿ.
ಸಂಸ್ಕೃತದಲ್ಲಿ ಅಂಬಃ ಎಂಬ ಪುಲ್ಲಿಂಗಪದಕ್ಕೆ ಅಪ್ಪ, ಅಮ್ಮೆ ಎಂದರ್ಥ. ಅಂಬಾ ಎಂಬ ಸ್ತ್ರೀಲಿಂಗಪದಕ್ಕೆ ಅವ್ವೆ, ಅಬ್ಬೆ, ಅಮ್ಮಾ, ಅಪ್ಪೆ ಎಂದರ್ಥ. ಹಳಗನ್ನಡದಲ್ಲಿ ಅಮ್ಮ ಎಂದರೆ ತಂದೆ. ‘ಣಿನಕ್ಕೆ ನಿನ್ನಮ್ಮನಕ್ಕೆ’ ಎಂಬುದು ರನ್ನನ ಪ್ರಯೋಗ. ತುಳು ಭಾಷೆಯಲ್ಲೂ ಅಮ್ಮೆ ಎಂದರೆ ತಂದೆ; ಅಪ್ಪೆ ಎಂದರೆ ತಾಯಿ. ಒಟ್ಟಿಗೆ ಈ ಶಬ್ದಗಳು ಅಂಬಃ ಹಾಗೂ ಅಂಬಾ ಎಂಬುದರ ಅಪಭ್ರಂಶ ಅಥವಾ ತದ್ಭವರೂಪಗಳು.

ಅಂಬಾ-ಅಂಬಿಕಾ-ಅಂಬಾಲಾ-ಅಂಬಾಡಾ-ಅಕ್ಕಾ- ಈ ಎಲ್ಲ ಪದಗಳ ಅರ್ಥ ತಾಯಿ. ತಾಯñಸಂತಾನಪಾಲನಯೋಃ ಎಂಬ ಧಾತು ಭ್ವಾದಿ, ಆತ್ಮನೇಪದ, ಸಕರ್ಮಕ, ಸೇಟ್, ‘ತಾಯತೇ’ ಎಂಬುದು ಲಡ್ರೂಪ. ತಾಯ ಧಾತುವಿಗೆ ಣಿನಿ ಪ್ರತ್ಯಯ ಬಂದಾಗ ‘ತಾಯೀ’ ಎಂಬ ನಾಂತ ಶಬ್ದ ವ್ಯುತ್ಪನ್ನವಾಗುತ್ತದೆ. ತಾಯೀ ತಾಯಿನ್ ತಾಯಿನಃ –ವಸ್ತುತಃ ಕನ್ನಡದ ತಾಯಿ ಸಂಸ್ಕೃತದ್ದು. ಆದರೆ ತಾಯಿನ್ ಶಬ್ದ ಸಂಸ್ಕೃತದಲ್ಲಿ ಪುಲ್ಲಿಂಗ. ಹೆಂಡತಿ ಎಂಬರ್ಥ ಕೊಡುವ ದಾರಾಃ ಎಂಬ ಶಬ್ದ ಪುಲ್ಲಿಂಗ ಬಹುವಚನವಾದಂತೆ ಮಾತ್ರರ್ಥದ ತಾಯಿನ್ ಶಬ್ದ ಪುಲ್ಲಿಂಗವಾಗುತ್ತದೆ. ಸಂಸ್ಕೃತದಲ್ಲಿ ಲಿಂಗವಿಧಾನ ವ್ಯಕ್ತಿಗಲ್ಲ;ನಾಮಕ್ಕೆ.

ಏಕಶೇಷವೃತ್ತಿಯನ್ನು ಹೊಂದುವ ಪಿತರೌ ಎಂಬ ಶಬ್ದಕ್ಕೆ ತಾಯ್ತಂದೆಯರೆಂದೂ, ತಂದೆಯಂದಿರೆಂದೂ ಉಭಯಾರ್ಥ. ಹಾಗಾಗಿಯೇ ಕಾಲಿದಾಸನ ವಾಗರ್ಥಾವಿವ ಶ್ಲೋಕದಲ್ಲಿರುವ ಪಿತರೌ ಎಂಬುದಕ್ಕೆ ಉಭಯಾರ್ಥ ಮಾಡಿದ್ದಾರೆ. ಪಾರ್ವೆತೀಪಶ್ಚರಮೇಶಶ್ಚ= ಪಾರ್ವತೀಪರಮೇಶ್ವರೌ. ಜಗತ್ ಪಿತರೌ ಶಿವಕೇಶವರು ಪ್ರಪಂಚದ ಅಪ್ಪಂದಿರು ಎಂದೂ ಒಂದರ್ಥ. ಪಿತಾಚ ಪಿತಾಚ ಪಿತರೌ ಎಂದು ಸಮಾಸ. ‘ಸರೂವಾಣಃ ಏಕಶೇಷಃ’ ಹಾಗಾಗಿ ಪಿತರೌ ಎಂದು ಉಳಿಯುತ್ತದೆ. ಮಾತಾ ಚ ಪಿತಾಚ | ಪಿತರೌ | ಮಾತರಪಿತರೌ – ಮಾತಾಪಿತ ಎಂಬಂತೆ ಮೂರು ರೂಪಗಳು. ಆಗ ಪಾರ್ವತೀಚ ಪರಮೇಶ್ವರಶ್ಚ-ಮಾತಾಚಪಿತಾಚ ಪಿತರೌ-ಜಗತಃ ಪಿತರೌ, ಪಾರ್ವತೀ ಪರಮೇಶ್ವರೌ, ಉಮಾಶಂಕರರು ಪ್ರಪಂಚದ ತಾಯ್ತಂದೆಯರು ಎಂಬ ನೇರವಾದ ಅರ್ಥ. ಅರ್ಥಾತ್ ಪಿತೃಶಬ್ದದಲ್ಲೇ ಮಾತೃಶಬ್ದವೂ ಘಟಿತವಾಗಿದೆ.

(…ಮುಂದಿನ ಸಂಚಿಕೆಯಲ್ಲಿ.. ತಾಯ್ತಂದೆಯರ ಸ್ಥಾನ ಸ್ಮೃತಿಗಳ ಪ್ರಕಾರ ಮತ್ತು ತಾಯ್ತಂದೆಯರ ಕರ್ತವ್ಯ)

Leave a Reply

*

code