Author: ಮನೋರಮಾ. ಬಿ.ಎನ್
ಲಕ್ಷಣ: ಎಡಗೈ ಮಧ್ಯದಲ್ಲಿ ಬಲ ಹೆಬ್ಬೆರಳನ್ನು ಇಟ್ಟು, ಎಡಗೈಯನ್ನು ಶಿಖರಹಸ್ತವನ್ನಾಗಿ ಮಾಡಿ, ಬಲಗೈಯಿಂದ ಉಳಿದ ನಾಲ್ಕು ಬೆರಳುಗಳನ್ನು ಸಮವಾಗಿ ನೆಟ್ಟಗೆ ಜೋಡಿಸಿ ಮಧ್ಯಮ ಬೆರಳಿನ ಅಗ್ರಭಾಗಕ್ಕೆ ಎಡಗೈ ಹೆಬ್ಬೆರಳ ತುದಿಯನ್ನು ಬಾಗಿಸಿ ಮುಟ್ಟಿಸುವುದು. ಇದು ಧಾರಕ ಮುದ್ರೆಯಾಗಿದ್ದು ಬಹುಪಾಲು ದೇವ-ದೇವತೆಗಳಲ್ಲಿ ಕಂಡುಬರುತ್ತದೆ. ನವದ್ವೀಪದ ರಾಜಾ ರಾಘವರಾಯನು ಬರೆದ ಹಸ್ತರತ್ನಾವಳಿಯಲ್ಲಿ ಹಸ್ತಗಳ ವರ್ಣನೆಯ ಅನಂತರ ಅವು ಪ್ರಸ್ತಾಪಿಸುವ ೪೦೫ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅವು ಒಂದರ್ಥದಲ್ಲಿ ವಿನಿಯೋಗವೂ ಆಗಿದ್ದು, ಅದರಲ್ಲಿ ಶಂಖಹಸ್ತದ ಉಲ್ಲೇಖವಿದೆ.
ವಿನಿಯೋಗ : ಶಂಖ, ಚಿಪ್ಪು ಮುಂತಾದ ವಸ್ತುಗಳು, ಶಂಖದಿಂದ ಅಭಿಷೇಕ ಮಾಡುವುದು.
ಶಂಖಹಸ್ತವನ್ನು ಶಿವ, ಈಶಾನ ಮತ್ತು ಶೂದ್ರಹಸ್ತಗಳಲ್ಲೂ ಬಳಸುವ ಪ್ರಸ್ತಾಪ ಕೇಳಿಬಂದಿದೆ. ಕಥಕ್, ಒಡಿಸ್ಸಿ ನೃತ್ಯಗಳಲ್ಲಿ ಮತ್ತು ಕಥಕಳಿ ಸೂಚಿಸುವ ಕರ್ತರೀ ಎಂಬ ಮಿಶ್ರ ಮುದ್ರೆಗಳಲ್ಲಿ ಶಂಖಹಸ್ತದ ಬಳಕೆಯಿದೆ. ಆದರೆ ಯಕ್ಷಗಾನವು ಬಳಸುವ ಶಂಖ ಹಸ್ತವು ಕರ್ಕಟ ಹಸ್ತ ಅಥವಾ ಇಲ್ಲಿ ತಿಳಿಸಲಾದ ಶಂಖಪದ್ಮನಿಧಿ ಮುದ್ರೆಯನ್ನು ಹೋಲುತ್ತದೆ.
ಕಾಳಿಕಾ ಪುರಾಣವು ತಿಳಿಸುವ ೧೦೮ ಮುದ್ರೆಗಳ ಪೈಕಿ ಶಂಖಮುದ್ರೆಯೂ ಒಂದು. ಸನಾತನ ಹಿಂದೂ ಧರ್ಮದ ಆಗಮೋಕ್ತ ಕಲಶಪೂಜಾ ವಿಧಾನದಲ್ಲಿ ‘ಪವಿತ್ರೀಕರಣಾರ್ಥಂ’ ಎಂದು ಸೂಚಿಸುವ ವಿಧಿಯಲ್ಲಿ ಶಂಖಮುದ್ರೆಯ ಬಳಕೆಯಿದೆ. ಈ ಪೂಜಾಮುದ್ರೆಯು ಅಪಾರಶಕ್ತಿ ಸಾಮರ್ಥ್ಯದ ವೃದ್ಧಿಗೆ, ವಿವಿಧ ತತ್ವಗಳ ಸಮತೋಲನೆಗೆ, ಮನೋಚಂಚಲತೆಯ ನಿವಾರಣೆಗೆ ಸಹಾಯಕ. ಶಂಖಮುದ್ರೆಯಷ್ಟೇ ಅಲ್ಲದೆ, ಶಂಖಪದ್ಮನಿಧಿ ಮುದ್ರೆಯೆಂಬ ಮತ್ತೊಂದು ಮುದ್ರೆಯಿದ್ದು ಎದೆಯ ಬಳಿ ಎರಡೂ ಕೈಗಳ ಹೆಬ್ಬೆರಳು, ತೋರು, ಮಧ್ಯ ಮತ್ತು ಉಂಗುರ ಬೆರಳನ್ನು ಸೇರಿಸಿ ಕಿರು ಬೆರಳನ್ನು ನೀಡುವುದು ಇದರ ಕ್ರಮ.
ಗಾಯತ್ರೀ ನ್ಯಾಸವು ಉಲ್ಲೇಖಿಸುವ ೨೪ ಮುದ್ರೆಗಳಷ್ಟೇ ಅಲ್ಲದೆ, ವೈಖಾನಸ, ಪಾಂಚರಾತ್ರ ಆಗಮಗಳಲ್ಲಿ ಮತ್ತೂ ೮ ಮುದ್ರೆಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಶಂಖಮುದ್ರೆಯೂ ಒಂದು.
ಆರೋಗ್ಯವರ್ಧನೆಗೂ ಶಂಖ ಮುದ್ರೆಯನ್ನು ಸೂಚಿಸಲಾಗಿದ್ದು ; ಆಗಾಗ ಬಲಗೈ ಅನಂತರ ಎಡಕೈಯಿಂದ ಅದಲುಬದಲು ಎಂಬಂತೆ ಮುದ್ರೆಯನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಇದು ಹೊಕ್ಕಳು-ಥೈರಾಯ್ಡ್-ಯಕೃತ್ತು-ಪಿಟ್ಯುಟರಿ ಗ್ರಂಥಿ-ಮೂತ್ರಪಿಂಡಗಳ ತೊಂದರೆ, ಜೀರ್ಣಾಂಗದ ಕಾಯಿಲೆಗಳ ಗುಣಕ್ಕೆ, ವೀರ್ಯವೃದ್ಧಿಗೆ, ಟಾನ್ಸಿಲ್ ನಿವಾರಿಸಿ ಧ್ವನಿಯ ಗುಣಮಟ್ಟ ವೃದ್ಧಿಗೆ, ಸ್ವರ ಮಾಧುರ್ಯಕ್ಕೆ, ಪಚನ ಕ್ರಿಯೆಯ ಸುಧಾರಣೆಗೆ, ಉಗ್ಗುವಿಕೆ-ತೊದಲುವಿಕೆ – ಮೂಲವ್ಯಾಧಿ- ಧೂಳಿನ ಅಲರ್ಜಿ-ಶರೀರದ ಉರಿ ನಿವಾರಣೆಗೆ, ನಾಭಿ ಕೇಂದ್ರದ ೭೨,೦೦೦ ನಾಡಿಗಳ ಶುದ್ಧೀಕರಣಕ್ಕೆ, ಪ್ರಾರ್ಥನೆ-ಧ್ಯಾನಕ್ಕೆ ಸಹಕಾರಿ.
ಇನ್ನೊಂದು ಬಗೆಯ ಸಹಜಶಂಖ ಮುದ್ರೆ ಎರಡೂ ಹಸ್ತಗಳ ಬೆರಳುಗಳನ್ನು ಹೊಸೆದು, ಅಮುಕುತ್ತಾ, ಎರಡೂ ಹೆಬ್ಬೆಟ್ಟುಗಳನ್ನು ಸಮಾನಾಂತರವಾಗಿ ಒಂದಕ್ಕೊಂದು ಜೋಡಿಸಿ ಮೇಲಕ್ಕೆತ್ತುವ ಕ್ರಮ ಸೂಚಿಸಿದೆ. ಇದು ದೇಹದ ಹತ್ತು ನಾಡಿಗಳ ಚಟುವಟಿಕೆಗೆ, ಕುಂಡಲಿನಿ ಶಕ್ತಿ-ಶಂಖಿನೀ ನಾಡಿಯ ಜಾಗೃತಿಗೆ, ತೊದಲುವಿಕೆ-ಉಗ್ಗುವಿಕೆಯ ನಿವಾರಣೆಗೆ, ಧ್ವನಿ ಹದಗೊಳಿಸಿ ಮಾತು ಮಧುರವಾಗಲು, ಕರುಳು-ಜಠರಗಳ ಕ್ಷಮತೆ, ಜೀರ್ಣಶಕ್ತಿ ವೃದ್ಧಿಗೆ, ವಾಯುಪ್ರಕೋಪ, ಮಲವಿಸರ್ಜನೆಯ ಸಂದರ್ಭದ ರಕ್ತಸ್ರಾವ ಮತ್ತು ಮೂಲವ್ಯಾಧಿ ನಿವಾರಣೆಗೆ, ವೀರ್ಯಶಕ್ತಿ ವೃದ್ಧಿಯಾಗಿ, ಉತ್ತಮ ಸಂತಾನಕ್ಕೆ ಬೆನ್ನು ಹುರಿಯ ಕಾರ್ಯಕ್ಕೆ ಚೈತನ್ಯದಾಯಕ.