ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 18- ನಾರದ & ವೇದಸೂರಿಯ ಸಂಗೀತಮಕರಂದ

Posted On: Sunday, February 11th, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೮- ನಾರದ & ವೇದಸೂರಿ ರಚನೆಯ ಸಂಗೀತಮಕರಂದ ಎಂಬ ವಿಭಿನ್ನ ಗ್ರಂಥಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 18- SangītaMakaranda treatises of Nārada & Vedasūri of different ages.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

ಗೀತ-ವಾದ್ಯ-ನರ್ತನವೆಂಬ ಸಂಗೀತಕ್ಷೇತ್ರದ ಮಕರಂದ ಅಂದರೆ ಹೂವಿನೊಳಗಿನ ಮಧುಮೃಧುರ ಭಾಗವೆಂಬ ಅರ್ಥದಲ್ಲಿ ಸಂಗೀತದ ಸಿಹಿ, ಜೇನು, ಮುಖ್ಯಹೃದಯ ಭಾಗ, ಸತ್ತ್ವವಿರುವ ಸಂಗತಿ ಎಂಬುದನ್ನು ಸೂಚಿಸುವ ಹೆಸರನ್ನುಳ್ಳ ಗ್ರಂಥವೇ ಸಂಗೀತಮಕರಂದ. ಇದು ಒಂದೇ ಗ್ರಂಥವಲ್ಲ. ಬದಲಾಗಿ ಸುಮಾರು ೧೬೦೦ನೇ ಇಸವಿಯ ಆಸುಪಾಸಿನಲ್ಲಿ ರಚಿತವಾದ ಎರಡು ಗ್ರಂಥಗಳು ಇವು. ಒಂದು ಗ್ರಂಥವು ನಾರದ ಎಂಬ ಲಾಕ್ಷಣಿಕನ ರಚನೆಯಲ್ಲಿದ್ದು ಪ್ರಸಿದ್ಧವಾದರೆ; ಮತ್ತೊಂದು ವೇದಸೂರಿಯೆಂಬುವನ ಹೆಸರಿನಲ್ಲಿದೆ. ರದನ ಸಂಗೀತಮಕರಂದ -೭ರಿಂದ ೧೧ನೇ ಶತಮಾನದ್ದೆಂದು ತರ್ಕಗಳಿದ್ದರೂ ೧೭ನೇ ಶತಮಾನಕ್ಕೆ ಸಲ್ಲುವಂತೆ ಸಾಕಷ್ಟು ಪರಿಷ್ಕಾರಗಳನ್ನು ಕಂಡಿದೆ ನಿರ್ಣಯವೂ ಇದೆ. ವೇದಸೂರಿಯ ಸಂಗೀತಮಕರಂದ ಸುಮಾರು ೧೬೦೦-೧೬೪೦ ನೇ ಇಸವಿಯಲ್ಲಿ ರಚನೆಗೊಂಡ ಗ್ರಂಥ- ಇದು ಎರಡು ಭಾಗಗಳಲ್ಲಿ ಮುದ್ರಿತವಾಗಿದೆ.

ನಾರದದ ಸಂಗೀತ ಮಕರಂದ-ವೈಯಕ್ತಿಕ ವಿವರ, ಗ್ರಂಥವಿಶೇಷ, ಅಧ್ಯಾಯ ಮತ್ತು ಲಕ್ಷಣಗಳು

ಲೋಕಸಂಚಾರಿಯಾದ ಬ್ರಹ್ಮಮಾನಸಪುತ್ರ ನಾರದ ಪೌರಾಣಿಕ ಪುರುಷ. ನಾರದನನ್ನು ಸಾಕಷ್ಟು ಲಾಕ್ಷಣಿಕರು ತಮ್ಮ ಗ್ರಂಥಗಳಲ್ಲಿ ಸಂಗೀತಶಾಸ್ತ್ರಕ್ಕೆ ಆಧಾರಪ್ರಾಯನಾದ ಮುನಿ ಎಂಬರ್ಥದಲ್ಲಿ ಸ್ಮರಿಸಿಕೊಂಡಿದ್ದಾರೆ. ಭರತನೂ ನಾಟ್ಯಶಾಸ್ತ್ರದಲ್ಲಿ ನಾರದನನ್ನು ಉಲ್ಲೇಖಿಸಿದ್ದಾನೆ. ಸಂಗೀತಕ್ಷೇತ್ರದ ಪೂರ್ವಸೂರಿಗಳ ಪೈಕಿ ಭರತ, ಕಾಶ್ಯಪ, ಯಾಷ್ಟಿಕ, ವಿಶ್ವಾಖಿಲ, ತುಂಬುರು, ವಾಯು, ಅಶ್ವತರ, ಕಂಬಲ, ವಿಶ್ವಾವಸು, ಅರ್ಜುನ, ಹನುಮಂತ, ಶಾರ್ದೂಲ, ಯಾಜ್ಞವಲ್ಕ್ಯ, ಕೋಹಲ, ಸ್ವಾತಿ, ನಂದಿಕೇಶ್ವರ ಮೊದಲಾದ ಪುರಾಣಪುರುಷರೆನಿಸಿಕೊಳ್ಳುವವರ ಸಾಲಿನಲ್ಲಿ ನಾರದನ ಹೆಸರೂ ಕಾಣಸಿಗುತ್ತದೆ. ಆದರೆ ನಾರದೀಶಿಕ್ಷಾ, ರಾಗನಿರೂಪಣ, ಪಂಚಮಸಾರಸಂಹಿತಾಗಳೆಂಬ ಗ್ರಂಥಗಳ ಸಹಿತ ಇನ್ನೂ ಅನೇಕ ಗ್ರಂಥಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಾರದನ ಹೆಸರಲ್ಲಿ ರಚನೆಯಾಗಿವೆ. ಆದ್ದರಿಂದಲೇ ಈ ನಾರದನು ಪೌರಾಣಿಕ ಪುರುಷನಲ್ಲ. ಬದಲಾಗಿ ಐತಿಹಾಸಿಕ ವ್ಯಕ್ತಿಯೆಂದೇ ತೋರುತ್ತದೆ.

ನಾರದನ ಸಂಗೀತ ಮಕರಂದವು ಶಿವನ ಕುರಿತಾದ ನಾಂದೀಸ್ತುತಿಯೊಂದಿಗೆ ಆರಂಭಗೊಳ್ಳುತ್ತದೆ. ಇದು ಸಂಗೀತ ಮತ್ತು ನರ್ತನ ಎಂಬ ಅಧ್ಯಾಯಗಳನ್ನು ಹೊಂದಿದ್ದು ಪ್ರತೀ ಅಧ್ಯಾಯವೂ ತಲಾ ನಾಲ್ಕು ಪಾದಗಳನ್ನು ಹೊಂದಿದೆ. ಇದೂ ನಾದ, ಶ್ರುತಿ, ಸ್ವರ, ಗ್ರಾಮ, ವಾದಿ, ಅಲಂಕಾರ, ರಾಗ, ವೀಣೆ, ತಾಳ, ನರ್ತನಗಳನ್ನು ಚರ್ಚಿಸುತ್ತದೆ. ಸ್ವರಗಳನ್ನು ಹೇಳುವಾಗ ಅವುಗಳಿಗೆ ಸ್ವರದೇವತೆ, ಛಂದಸ್ಸು, ಗೋತ್ರ, ದ್ವೀಪ, ನಕ್ಷತ್ರಪುಂಜ, ನಕ್ಷತ್ರ, ರಾಶಿ, ರಾಗರಾಗಿಣಿಗಳನ್ನು ವಿಶೇಷವಾಗಿ ಸೂಚಿಸುತ್ತದೆ, ೯೩ ರಾಗಗಳನ್ನು ಚರ್ಚಿಸುವಾಗ ಪುರುಷ-ಸ್ತ್ರೀ-ನಪುಂಸಕ ಎಂಬ ರಾಗವಿಭಾಗಗಳನ್ನು ಮಾಡುತ್ತದೆ. ೨೨ ಶ್ರುತಿಗಳನ್ನು ಉಳಿದ ಸಂಗೀತ ಗ್ರಂಥಗಳಿಗಿಂತ ಬೇರೆಯದೇ ರೀತಿಯಲ್ಲಿ ಹೆಸರಿಸುತ್ತದೆ.

ನಾರದನ ಸಂಗೀತಮಕರಂದದ ನರ್ತನಾಧ್ಯಾಯದಲ್ಲಿ ನಾಟ್ಯಶಾಲಸಭಾ ಸಭಾಪತಿ ಪಾತ್ರಪುಷ್ಪಾಂಜಲಿ ಪಂಚತಾಲೋತ್ಪತ್ತಿ ನಿರೂಪಣ, ಏಕೋತ್ತರ ಶತತಾಲ ಮಾತ್ರಾನಿರ್ಣಯ, ತಾಲದಶನಿರೂಪಣ, ಮೃದಂಗೋತ್ಪತ್ತಿದ್ವಾದನಪ್ರಕಾರಾದಿಕಥನಮ್ ಮತ್ತು ನಟೀಭಾವನಿರೂಪಣ-ಹಸ್ತಪ್ರಕರಣ ಎಂಬ ೪ ಪಾದಗಳಿವೆ. ಆ ಪೈಕಿ ಕೊನೆಯದಾದ ಹಸ್ತಪ್ರಕರಣವೆಂಬ ನರ್ತನವಿಭಾಗದಲ್ಲಿ ವೀಣಾ-ಮೃದಂಗ ವಿಷಯಗಳು ಬೆರಕೆಯಾಗಿರುವಂತೆ ಕಾಣಿಸುತ್ತದೆ. ಉಳಿದ ಯಾವ ಗ್ರಂಥಗಳಲ್ಲೂ ಕಂಡುಬರದ ಲಕ್ಷಣಗಳನ್ನು ಪಾದಭೇದ, ಶಿರೋಭೇದ, ಅಷ್ಟಭ್ರಮರಿ ಮತ್ತು ಗಮನಕ್ರಮದಲ್ಲಿ ಸೂಚಿಸಿದೆ. ಕೆಲವು ಶ್ಲೋಕಭಾಗಗಳು ನಷ್ಟಗೊಂಡಿವೆಯಾದರೂ ಇದರಲ್ಲಿ ಪ್ರಸ್ತಾವಗೊಂಡ ಅನೇಕ ಹೆಸರುಗಳು ಪ್ರಾಕೃತ; ಅದರಲ್ಲೂ ಕನ್ನಡ/ಮರಾಠೀ ಭಾಷೆಯದ್ದೆಂದು ತೋರುತ್ತದೆ. ಶಾಸ್ತ್ರಗ್ರಂಥಗಳ ಪೈಕಿ ಈ ಮಾದರಿಯಾದ ದೇಶೀ ಉಲ್ಲೇಖಗಳು ದೊರಕುವುದು ಸುಮಾರು ೧೧ನೇ ಶತಮಾನದ ಅನಂತರದಲ್ಲಿಯೇ. ಪಂಡರೀಕವಿಠಲನ ನರ್ತನನಿರ್ಣಯ, ವೇದನ ಸಂಗೀತಮಕರಂದದಂತಹ ಗ್ರಂಥಗಳಲ್ಲೂ ಈ ಬಗೆಯ ಪ್ರಾಂತೀಯ ಪರಿಭಾಷೆಗಳನ್ನು ಮಿಶ್ರ ಮಾಡಿದ ಸಂಸ್ಕೃತ ಲಕ್ಷಣಗಳಿವೆ. ಮತ್ತು ವಿಜಯನಗರ ಕರ್ನಾಟ ಸಾಮ್ರಾಜ್ಯದ ಆಸುಪಾಸಿನಲ್ಲಿ ಪ್ರಖ್ಯಾತವಾದ ತಾಲದಶಪ್ರಾಣಗಳನ್ನು, ಸೂಲಾದಿ ತಾಳಗಳನ್ನು ಇದರಲ್ಲಿ ಕಾಣಬಹುದು. ನಾಟ್ಯಶಾಲಸಭಾ ಸಭಾಪತಿ ಪಾತ್ರಪುಷ್ಪಾಂಜಲಿ ಪಂಚತಾಲೋತ್ಪತ್ತಿ ಎಂಬ ಎಂಬ ಅಧ್ಯಾಯ ಪಾದವೂ ಹೀಗೆಯೇ.. ನರ್ತಕ, ಪಾತ್ರ, ಸಭಾಪತಿ, ಸಭಾಸದ, ಇತಿಹಾಸ, ವೈದ್ಯ, ಪುರಾಣಿಕ, ಪರಿಹಾಸ, ಕವಿ, ಭಟ, ಗಾಯಕ, ವಿದ್ವಾಂಸ.. ಹೀಗೆ ಎಷ್ಟೋ ಮಧ್ಯಕಾಲೀನ ಯುಗದ ಬಳಿಕ ಕಂಡುಬರುವ ದೇಶೀ ಎನಿಸುವ ಸಂಗತಿಗಳನ್ನು ಚರ್ಚಿಸುತ್ತದೆ.[1] ಈ ಎಲ್ಲ ಮಾದರಿಗಳಿಂದ ಇದು ಒಂದೋ ಸಂಗೀತರತ್ನಾಕರಕ್ಕಿಂತ ಮೊದಲೇ ರಚನೆಯಾಗಿದ್ದರೂ ಸಾಕಷ್ಟು ಲಕ್ಷಣಗಳು ಅನಂತರದಲ್ಲೂ ಸೇರಿಕೊಂಡ ಅರ್ವಾಚೀನ ಗ್ರಂಥವೆಂದೇ ಎಣಿಸಬೇಕಾಗುತ್ತದೆ. ಅದರಲ್ಲೂ ವಿಜಯನಗರ ಅವಸಾನ ಕಾಲಕ್ಕೆ ಸುಮಾರು ೧೬-೧೭ನೇ ಶತಮಾನದ ಅಂದಾಜಿಗೆ ಕರ್ನಾಟಕ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಇದರ ರಚನೆಯಾಗಿದ್ದಿರಬಹುದು. ವಿಜಯನಗರಸಾಮ್ರಾಜ್ಯಕ್ಕೆ ಸೇರಿದ ಕೃಷ್ಣಾಜಿ ದತ್ತ ಎಂಬವನು ಈ ಗ್ರಂಥವನ್ನು ೧೬೭೭ರಲ್ಲಿ ಪ್ರತಿ ಮಾಡಿಟ್ಟದ್ದು ಗ್ರಂಥ ಸಂಪಾದನೆಯ ವೇಳೆ ಕಂಡುಬಂದಿದೆ.

ವೇದಸೂರಿಯ ಸಂಗೀತಮಕರಂದ : ವೈಯಕ್ತಿಕ ವಿವರ, ಗ್ರಂಥವಿಶೇಷ, ಅಧ್ಯಾಯ ಮತ್ತು ಲಕ್ಷಣಗಳು

ಸಂಗೀತಮಕರಂದವೆಂಬ ಮತ್ತೊಂದು ಗ್ರಂಥ ವೇದಸೂರಿಯ ಹೆಸರಿನಲ್ಲಿದೆ. ಈ ಲಕ್ಷಣಕಾರನ ಜನ್ಮನಾಮವು ಅನಂತ ಎಂಬುದಾಗಿ. ವೇದನ ಆಶ್ರಯದಾತ ಮರಾಠಾ ಅರಸ ಶಾಹಜಿ. ಈತ ಛತ್ರಪತಿ ಶಿವಾಜಿಯ ತಂದೆ. ಶಿವಾಜಿಯ ಅಣ್ಣ ಶಾಂಭಾಜಿಯು ವೇದನ ಸಂಗೀತೋಪಾಧ್ಯಾಯನೆಂದು ತಿಳಿದುಬರುತ್ತದೆ. ಹಾಗಾಗಿ ಷಹಜಿಯ ವಂಶಾವಳಿ, ಆತನ ಗುಣ ಪ್ರತಾಪಕೀರ್ತಿಗಳನ್ನು ಮುಕ್ತಕಂಠದಿಂದ ಗ್ರಂಥಾಂತ್ಯಕ್ಕೆ ವೇದನು ಪ್ರಶಂಸಿಸಿದ್ದನ್ನೂ ಕಾಣಬಹುದು. ಜೊತೆಗೆ ತಾನು ಲಾಕ್ಷಣಿಕನಾದ ಚತುರದಾಮೋದರನ ಮಗನೆಂದೂ ರಾಜ ಶಾಹಜಿಯ ಆಸ್ಥಾನ ಪಂಡಿತನೆಂದೂ ಅವನ ಆಣತಿಯಂತೆ ಸಂಗೀತಮಕರಂದವನ್ನು ರಚಿಸಿ, ಮಕರಂದಭೂಪನೆಂದು ಹೆಸರುಳ್ಳ ರಾಜ ಶಹಜಿಗೆ ಅಂಕಿತಗೊಳಿಸಿ ಸಂಗೀತಮಕರಂದ ಸಮರ್ಪಿಸಿದ್ದೇನೆಂದು ಸ್ವತಃ ವೇದನೇ ಹೇಳಿಕೊಂಡಿದ್ದಾನೆ. ಆಗಾಗ್ಗೆ ದರ್ಪಣ ಸಂಮತಿ ಎಂದು ತನ್ನ ಲಕ್ಷಣರಚನೆಯೊಳಗೆ ಹೇಳಿರುವುದರಿಂದ ತಂದೆ ಚತುರ ದಾಮೋದರನ ಸಂಗೀತದರ್ಪಣವು ಈತನಿಗೆ ಮಾದರಿಯಾಗಿದೆಯೆಂದೇ ತೋರುತ್ತದೆ. ಜೊತೆಗೆ, ತನ್ನ ತಂದೆಯನ್ನು ಸಂಗೀತಸಿಂಧುತರಣೀಕರಣಪ್ರವೀಣನೆಂದು ಕೊಂಡಾಡಿದ್ದಾನೆ.

ವೇದಸೂರಿಯು ತನ್ನ ಆಶ್ರಯದಾತಾರನ ಸುಪರ್ದಿಯಲ್ಲಿ ನಡೆಯುತ್ತಿದ್ದ ಪುಷ್ಪಾಂಜಲಿನೃತ್ಯದ ವಿಧಿಗಳನ್ನು ತನ್ನ ಗ್ರಂಥ ಸಂಗೀತಮಕರಂದದಲ್ಲಿ ಪ್ರಸ್ತಾವಿಸಿದ್ದಾನೆ. ತನ್ನ ಗ್ರಂಥದ ಆದ್ಯಂತವೂ ನಾಟ್ಯಶಾಸ್ತ್ರ ಮತ್ತು ಉತ್ಪ್ಲುತಿ ಕರಣ-ಚಾರಿಗಳ ಅನೇಕ ಲಕ್ಷಣಗಳನ್ನು ಹೇಳಿದ್ದಾನೆ. ಈ ಮರಾಠಾ ಅರಸರು ಮೊದಲಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಆಡಳಿತಾಧಿಕಾರಿಗಳಾಗಿದ್ದುದರಿಂದ ಕರ್ಣಾಟ ಅರಸರ ಕಾಲದ ನೃತ್ಯಸಂಗೀತ ವಿಚಾರಗಳಿಗೂ ಈತನ ಗ್ರಂಥ ದಿಕ್ಕು ತೋರುತ್ತದೆ. ಜೊತೆಗೆ ವೇದಸೂರಿಯು ಪಂಡರೀಕ ವಿಠ್ಠಲನ ನರ್ತನನಿರ್ಣಯವನ್ನು ಅನುಸರಿಸಿದ್ದಾನೆ ಎಂಬುದನ್ನೂ ಗುರುತಿಸುವಂತೆ ಪೇರಣಿ, ಪ್ರೇಂಖಣೀ, ಗೌಂದಲೀ ಮೊದಲಾದ ದೇಶೀನೃತ್ಯಗಳಿದ್ದದ್ದು, ಉರುಪ- ತಿರಿಪ-ಲಾಗ- ಧುವಾಢಗಳ ಕ್ರಮಕ್ಕೆ ನರ್ತನ, ದೇಶೀಕಟ್ಟರಿಗಳ ನೃತ್ಯಗಳ ಲಕ್ಷಣಗಳೆಲ್ಲವೂ ಕಂಡುಬಂದಿದೆ. ಈ ಗ್ರಂಥದ ನೃತ್ಯಸಂಬಂಧಿತ ಅಧ್ಯಾಯಗಳಷ್ಟೇ ಇಂದಿಗೆ ಲಭ್ಯ. ಗೀತ ವಾದ್ಯ ತಾಲಾಧ್ಯಾಯಗಳು ಬಹುಶಃ ನಷ್ಟವಾಗಿವೆ.

ವೇದನ ಸಂಗೀತಮಕರಂದವು ಎರಡು ಭಾಗಗಳಲ್ಲಿ ಸಂಪಾದಿಸಲ್ಪಟ್ಟಿದೆ. ಒಂದು ತಂಜಾವೂರು ಸರಸ್ವತಿ ಮಹಲ್ ಗ್ರಂಥಾಲಯದಿಂದ. ಮತ್ತೊಂದು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ. ಎರಡೂ ಹಸ್ತಪ್ರತಿಗಳಲ್ಲಿ ಗಣಪತಿ ಮತ್ತು ಸರಸ್ವತಿಯರಿಗೆ ಅಭಿವಂದಿಸಿದ ನಾಂದೀಸ್ತುತಿಯನ್ನು ಗುರುತಿಸಬಹುದು. ಮೊದಲ ಭಾಗವು ನೃತ್ಯಪುಷ್ಪಾಂಜಲಿಯೆಂಬ ಹೆಸರಿನಿಂದ ನೃತ್ಯದ ಪೂರ್ವರಂಗಕ್ಕೆ ಸಂಬಂಧಿಸಿದ ರಂಗಭೂಮಿ, ಪ್ರಭುಲಕ್ಷಣ, ಬೃಂದಲಕ್ಷಣ, ಮೇಲಾಪಕ, ಜವನಿಕಾ, ಪಾತ್ರಲಕ್ಷಣ, ಸಭಾಸನ್ನಿವೇಶ, ದಿಕ್ಪಾಲಕಪೂಜೆ, ತ್ರಿಮೂರ್ತಿ ವಂದನ ಮತ್ತು ಪುಷ್ಪಾಂಜಲಿ ನೆರವೇರಿಸುವಾಗ ಬಳಸುವ ಹಸ್ತ- ಸ್ಥಾನಕ- ಚಾರಿ-ಕರಣಗಳ ಲಕ್ಷಣಗಳನ್ನೇ ಬರೆದಿದೆ. ಎರಡನೆಯ ಭಾಗದಲ್ಲಿ ವಿವಿಧ ದೇಶೀನೃತ್ಯಪದ್ಧತಿಗಳ ಕ್ರಮವನ್ನು ವಿಸ್ತಾರವಾಗಿ ಬರೆಯಲಾಗಿದೆ. ಇಲ್ಲಿಯೂ ಮುಖಚಾಲೀ ಎಂಬ ಪುಷ್ಪಾಂಜಲಿ ವಿಧಿಯ ವಿವರಣೆಯಿದೆ. ಅದಾಗಿ ಗತಿಶೃಂಖಲೆ, ನೀರಾಜನ ಪದ್ಯ, ದೇಶೀಲಾಸ್ಯಾಂಗಗಳು, ಯತಿನೃತ್ಯ, ಶಬ್ದಚಾಲೀನೃತ್ಯ, ದ್ವಾಢ, ತಿರಿಪ- ಉರುಪಗಳು, ಸೂಡಾದಿ ಶಬ್ದ ನೃತ್ಯ, ಕ್ವಾಡನೃತ್ಯ, ಪ್ರಬಂಧ ನೃತ್ಯ, ಗೌಂಡಲೀನೃತ್ಯ, ಚಿಂದು, ಧರುನೃತ್ಯ, ಕರ್ನಾಟಕದ ವಿಶೇಷ ಕಟ್ಟರೀ[2] ನೃತ್ಯಗಳು, ವಿವಿಧ ಶಬ್ದನರ್ತನ, ವೈಪೋತಾಖ್ಯ ನೃತ್ಯ, ಜಕ್ಕರಿ, ಧ್ರುವಪದ ನೃತ್ಯ, ಬಹುರೂಪ ಪೇರಣಿ, ಚರ್ಚರೀ, ಕಲ್ಪನೃತ್ತ, ಬಂಧನೃತ್ತ, ಕೌಚಟ, ರವಭೇದ ನೃತ್ಯ ಹೀಗೆ ಸುಮಾರು ೫೦ಕ್ಕೂ ಹೆಚ್ಚು ನೃತ್ಯತಂತ್ರಗಳನ್ನು ಚಾರಿ, ಸ್ಥಾನಕ, ಹಸ್ತ, ಮಾರ್ಗ ಕರಣ, ಉತ್ಪ್ಲುತಿ ಕರಣ, ಲಾಗ, ನೇರಿ, ತಾಲ, ಪಾಟಾಕ್ಷರಗಳನ್ನು ಸೂಚಿಸುತ್ತಾ ವಿವರಿಸಿದ್ದಾನೆ.[3]

ಸಂಗೀತಮುಕ್ತಾವಳಿ, ನರ್ತನನಿರ್ಣಯ, ಸಂಗೀತದರ್ಪಣಗಳಲ್ಲಿ ನೇರವಾಗಿ ಅಂಗೋಪಾಂಗ ವಿಧಿ-ನಿಯಮಗಳಾದ ಚಾರಿ, ಸ್ಥಾನಕ, ಕರಣ ಮೊದಲಾದವನ್ನು ಬೇರೆ ಬೇರೆಯಾದ ವರ್ಗೀಕರಣಗಳಂತೆ ಹೇಳಿಲ್ಲ. ಬದಲಾಗಿ ಆಯಾ ನೃತ್ಯಪ್ರಯೋಗಕ್ರಮಗಳು ಹೇಗೆ ಜರುಗುತ್ತಿದ್ದವೋ ಅದಕ್ಕೆ ಅನುಸಾರವಾಗಿ ಲಕ್ಷಣಗಳನ್ನು ಬರೆದ ಪದ್ಧತಿಯಿದೆ. ಕೋಹಲ, ಮತಂಗ, ಹನುಮ, ತಂಡು, ಶಾಙ್ಗದೇವ, ದಾಮೋದರರನ್ನು ಉಲ್ಲೇಖಿಸುತ್ತಲೇ ಸಂಸ್ಕೃತ- ಪ್ರಾಕೃತಮಿಶ್ರವಾಗಿ ಹಲವು ದೇಶೀ ಪರಿಭಾಷೆಗಳನ್ನು ಉಪಯೋಗಿಸಿ ಲಕ್ಷಣವನ್ನು ಟಂಕಿಸಿದ್ದಾನೆ.

ಸಮಾರೋಪ

ಒಟ್ಟಿನಲ್ಲಿ ಭಾರತವು ಅನೇಕ ಸಂಪಧ್ಭರಿತ ನೃತ್ಯ-ಗೀತ-ವಾದ್ಯ-ತಾಲಗಳಿಗೆ ಆಶ್ರಯಿಯಾಗಿತ್ತು. ಪ್ರತಿಯೊಂದು ಪ್ರಾಂತಗಳೂ ಈ ನಿಟ್ಟಿನಲ್ಲಿ ಶ್ರೀಮಂತವೇ. ಅಂತೆಯೇ ಅವನ್ನು ದಾಖಲಿಸಿದ ಕ್ರಮಗಳೂ ಒಂದಕ್ಕಿಂತ ಒಂದು ವಿಶೇಷ. ಇವನ್ನು ಗುರುತಿಸುತ್ತಾ ಹೋದಂತೆಲ್ಲ ನಮ್ಮ ಪ್ರಾಚೀನರ ಕಲಾವೈಭೋಗ ನಿಬ್ಬೆರಗಾಗಿಸುವಂತೆ ಮಾಡುತ್ತದೆ. ಎಷ್ಟೋ ದಾಳಿ, ಶೈಥಿಲ್ಯ, ಸ್ಥಿತ್ಯಂತರ, ನಷ್ಟಳಿಂದಾಚೆಗೂ ಉಳಿದು ಬೆಳೆದು ಬಂದಿರುವ ಅವಿಚ್ಛಿನ್ನವೆನಿಸುವ ಈ ಪರಂಪರೆ, ಸಂಪ್ರದಾಯಗಳನ್ನು ಎಷ್ಟು ಧನ್ಯತೆಯಿಂದ ಕೊಂಡಾಡಿ ಮಣಿದರೂ ಸಾಲದೆನಿಸುತ್ತದೆ.

  1. For More Information ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ ರಚಿತ- 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ.
  2. Read the research article on Kaṭṭari Dances with special mention on Yakshagana. Authored by Dr Manorama B N; Published by Bhavan’s Journal Newdelhi. Uparūpaka.
  3. ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/↵↵ಹಾಗೂ ನೃತ್ಯಮಾರ್ಗ ಮುಕುರ ಡಾ. ಮನೋರಮಾ ಬಿ.ಎನ್. ಸಾನಿಧ್ಯ ಪ್ರಕಾಶನ. ೨೦೧೧.

ಪರಾಮರ್ಶನ ಗ್ರಂಥಗಳು

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library. https://archive.org/details/SangitaRatnakaraVolume4-chapter7

Sastri, Vasudeva ( 1952). Sangita Darpana of Damodara TMSSML 1952 0101. madars Governmental oriental series. https://archive.org/details/TxtSktSangItaDarpaNaDamodaraTMSSML19520101_201508/page/n3/mode/2up

Sastri, Vasudeva,K (Ed and Tr.) (1965). Nrtya Pushpanjali By Vedasuri. Tanjore: Darpana Publication. https://musicresearchlibrary.net/omeka/items/show/2962

Sangita Muktavali by Chintamani Devendra (Devanagari Manuscript). 1 and 2 – RSN-TMSSML-6646B, Tanjore: Maharaja Serfoji Saraswati Mahal Library. https://musicresearchlibrary.net/omeka/items/show/1255

Telang, Ramakrishna, Mangesha (Ed.) (1920). Sangita Makaranda of Narada. Baroda: Central Library. https://musicresearchlibrary.net/omeka/items/show/822

Venkataramanan, N (Ed.) (1991). Sangita Muktavali of Devanacharya- Natyashastra. Tanjavur: Maharaja Serfoji’s Sarasvati Mahal Library. https://archive.org/details/sangeetha-muktavali-of-devanacharya-series-no.-322-thanjavur-sarasvati-mahal-series

ರಾಮಚಂದ್ರ, ತುಳಸೀ. (೨೦೧೧). ವೇದವಿರಚಿತ ಸಂಗೀತ ಮಕರಂದ. ಮೈಸೂರು : ಕರ್ನಾಟಕ ಪತ್ರಾಗಾರ ಇಲಾಖೆ.

ಸತ್ಯನಾರಾಯಣ, ರಾ. (೧೯೮೬). ಪುಂಡರೀಕಮಾಲಾ-ಶ್ರೀ ಪಂಡರೀಕ ವಿಠ್ಠಲನ ಸದ್ರಾಗ ಚಂದ್ರೋದಯ, ರಾಗಮಾಲಾ, ರಾಗಮಂಜರೀ, ಮತ್ತು ನರ್ತನನಿರ್ಣಯ. ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

Leave a Reply

*

code