Author: ಸಂಪಾದಕರು
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ
ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ 7- ಜೈನ ಮುನಿ ಪಾರ್ಶ್ವದೇವನ ಸಂಗೀತಸಮಯಸಾರ
ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)
Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 7- Sangīta Samayasāra text by a Jain sage Parśwadeva of medieval India
Research, Writing and Presentation by :
Dr Manorama B N,
Principal Investigator, Director and Editor- Noopura Bhramari ®
Co-operation by
Dr Dwaritha Viswanatha Smt. Shalini P. Vittal
Co-Principal Investigators, Noopura Bhramari IKS Centre
Smt. Rohini A. R Research Fellow,
& Sri. Vishnuprasad N Trustee, Noopura Bhramari ®
Theme Music by
Nirmiti An abode of Arts and Culture, Bengaluru.
(Singer Vid Balasubhramanya Sharma, Bengaluru)
Audio and Video Recording by
Crossfade studio, Bengaluru
ಲೇಖನ
ಪಾರ್ಶ್ವದೇವನು ೧೨-೧೩ನೇ ಶತಮಾನದ ಅವಧಿಯಲ್ಲಿದ್ದ ಓರ್ವ ಸಂಗೀತ ಶಾಸ್ತ್ರಕಾರ ಜೈನಮುನಿ. ಈತ ಬರೆದ ಗ್ರಂಥ ಸಂಗೀತ ಸಮಯಸಾರ. ಇದು ರಚಿತಗೊಂಡ ಕಾಲ ಅಂದಾಜು ೧೧೬೫ರಿಂದ ೧೩೩೦ನೇ ಇಸವಿಯ ಮಧ್ಯಭಾಗ. ತನ್ನ ಸಂಗೀತ ಜ್ಞಾನಕ್ಕಾಗಿ ಈತ ಪಡೆದ ಬಿರುದು ಸಂಗೀತ-ಆಕಾರ (ಸಂಗೀತದ ಸಾಗರ).
ಆದಿದೇವ ಮತ್ತು ಗೌರಿ ಎನ್ನುವ ಬ್ರಾಹ್ಮಣ ದಂಪತಿಗಳ ಮಗ. ವಯಸ್ಕನಾಗುತ್ತಾ ಜೈನ ಮತದತ್ತ ಆಕರ್ಷಿತನಾಗಿ ಅಭಯಚಂದ್ರ ಮುನಿಯ ಶಿಷ್ಯರಾಗಿದ್ದ ಶ್ರೀ ಮಹಾದೇವ ಆರ್ಯರಲ್ಲಿ ಶಿಷ್ಯತ್ವ ಸ್ವೀಕರಿಸಿದ. ಜೈನ ದಿಗಂಬರ ಮುನಿಯಾದ. ಪಾರ್ಶ್ವದೇವ ಬರೆದ ಸಂಗೀತಗ್ರಂಥ ಸಂಗೀತಸಮಯಸಾರ.
ಸಂಗೀತ-ಸಮಯಸಾರ- ಹೆಸರೇ ಸೂಚಿಸುವಂತೆ ಸಂಗೀತಸಮಯವೆಂಬುದರ ಸಾರವಿದು. ಸಂಗೀತ ಸಮಯಸಾರವು ಸಂಸ್ಕೃತದಲ್ಲಿದೆಯಾದರೂ, ಇದು ಮಹಾರಾಷ್ಟ್ರ ಮೂಲದ ಸ್ಥಳೀಯ ಭಾಷೆಯ ಅನೇಕ ಪದ-ಪರಿಭಾಷೆಗಳನ್ನು ಒಳಗೊಂಡಿದೆ. ಇದರಿಂದ ಪಾರ್ಶ್ವದೇವನು ಮರಾಠಿ ಸಾಮಾನ್ಯ ಜನರ ಭಾಷೆಯಾಗಿದ್ದ ಸ್ಥಳದಲ್ಲಿ ವಾಸಿಸುತ್ತಿದ್ದನೆಂದೂ ತಿಳಿಸುತ್ತದೆ.
ಇದು ಸುಮಾರು ೧೪೦೦ ಶ್ಲೋಕಗಳೊಂದಿಗೆ ಹತ್ತು ಅಧಿಕಾರ ಅಂದರೆ ಅಧ್ಯಾಯಗಳನ್ನು ಹೊಂದಿದೆ. ಸಂಗೀತ-ಸಮಯಸಾರದ ಮೊದಲ ಅಧ್ಯಾಯವು ಭಗವಾನ್ ವಾಸುದೇವನಿಗೆ ಮಾಡುವ ನಮಸ್ಕಾರದೊಂದಿಗೆ ಪ್ರಾರಂಭವಾಗುತ್ತದೆ. ಶ್ರುತಿ, ಸ್ವರ, ಅದರ ಸ್ಥಾನಗಳು, ಗ್ರಾಮ-ಮೂರ್ಚನಗಳು, ತಾನಗಳು, ಜಾತಿಗಳು, ಗ್ರಾಮ ರಾಗಗಳು ಮತ್ತು ಗೀತಕಗಳು ಮೊದಲಾದವುಗಳ ಬಗ್ಗೆ ಹೇಳುತ್ತದೆ. ಎರಡನೇ ಅಧ್ಯಾಯದಲ್ಲಿ ಪಾರ್ಶ್ವದೇವನು ಮಾನವ ಭ್ರೂಣದ ರಚನೆಯ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತಾ ಅದು ಧ್ವನಿಯ ಮೂಲವಾದ ಬಗೆಯನ್ನು ವಿವರಿಸಿದ್ದಾನೆ. ಅದಾಗಿ ಶುದ್ಧ ಮತ್ತು ಸಾಲಗ ಅಥವ ದೇಶೀ ಎಂಬ ಸಂಗೀತಪ್ರಕಾರಗಳನ್ನು ವಿವರಿಸುತ್ತಾನೆ. ಮೂರನೆಯ ಅಧ್ಯಾಯವು ಠಾಯ ಮತ್ತು ಅಲಾಪ್ತಿಗಳೆಂಬುದರ ರಾಗಸಂಬಂಧೀ ವಿಚಾರಗಳ ಅಧ್ಯಾಯವಾಗಿದೆ. ನಾಲ್ಕನೇ ಅಧ್ಯಾಯವು ರಾಗಗಳು, ಅವುಗಳ ವರ್ಗೀಕರಣದ ವಿವರಣೆಯಾಗಿದೆ. ಐದನೇ ಅಧ್ಯಾಯವು ನಿಬದ್ಧ ಸಂಗೀತವನ್ನು ನಿರೂಪಿಸಿದೆ. ಇದು ಪ್ರಬಂಧಗಳೆಂಬ ರಚನಾ ಪದ್ಧತಿಗಳ ವರ್ಗೀಕರಣವನ್ನು ಚರ್ಚಿಸುವ ಸುದೀರ್ಘ ಅಧ್ಯಾಯವೂ ಆಗಿದೆ.
ಆರನೇ ಅಧ್ಯಾಯವು ಸಂಗೀತ ವಾದ್ಯಗಳು, ಅವುಗಳ ವರ್ಗೀಕರಣ ಮತ್ತು ನುಡಿಸುವ ತಂತ್ರಗಳ ವಿವರಣೆಯನ್ನು ಹೊಂದಿದೆ. ಸಂಗೀತ ಸಮಯಸಾರದ ಏಳನೇ ಅಧ್ಯಾಯವು ಸಂಪೂರ್ಣವಾಗಿ ನೃತ್ಯಕ್ಕೆ ಮೀಸಲಾಗಿದೆ. ಪೇರಣ, ಪೆಕ್ಕಣ, ಗೊಂಡಲಿ ಮತ್ತು ದಂಡರಾಸ ಮೊದಲಾಗಿ ಅನೇಕ ನೃತ್ತಗಳನ್ನೂ, ಅವುಗಳಿಗೆ ಬೇಕಾದ ಕರಣ, ಚಾರಿ ಮೊದಲಾದ ನಾಟ್ಯಶಾಸ್ತ್ರೋಕ್ತ ಚಲನವಲನಗಳನ್ನು ಪ್ರಸ್ತಾವಿಸುತ್ತದೆ. ಜೊತೆಗೆ ಉತ್ತಮ ನರ್ತಕಿಯ ಗುಣಲಕ್ಷಣ, ಸಂಕೀರ್ಣವಾದ ಚಮತ್ಕಾರಿಕ ಚಲನೆಗಳನ್ನೂ, ದೇಶೀ ಭ್ರಮರಿಗಳನ್ನೂ ವಿವರಿಸಿದೆ.[1] ಎಂಟನೇ ಅಧ್ಯಾಯವು ಲಯದ ಮಾದರಿ ಮತ್ತು ಅದರ ಪ್ರಭೇದಗಳ ಸಹಿತ ವಿವಿಧ ತಾಳಗಳ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. ಒಂಬತ್ತನೇ ಅಧ್ಯಾಯ, ವಾದ ನಿರ್ಣಯ ವಾದಿ, ಪ್ರತಿವಾದಿ, ಸ್ಪರ್ಧೆಗಳ ವಿಚಾರವನ್ನು ಸೂಚಿಸಿದೆ. ಹತ್ತನೇ ಅಧ್ಯಾಯದಲ್ಲಿ ಘನವಾದ್ಯ ತಾಳದ ಕೆಲವು ಲಕ್ಷಣಗಳನ್ನು ಚರ್ಚಿಸಲಾಗಿದೆ.
ತನ್ನ ಕೃತಿಯಲ್ಲಿ ಸಂಗೀತರತ್ನಾಕರದಂತೆಯೇ ಕಶ್ಯಪ, ಯಾಸ್ತಿಕ, ಕೋಹಲ, ತುಂಬುರು, ದತ್ತಿಲ, ಆಂಜನೇಯ, ಮತಂಗ, ರಾಜ ಭೋಜ, ರಾಜ ಸೋಮೇಶ್ವರರನ್ನು ಉಲ್ಲೇಖಿಸಿದ್ದಾನೆ. ಆದರೆ ಪೂರ್ವಸೂರಿಗಳ ಪಟ್ಟಿಯಲ್ಲಿ ಅಭಿನವಗುಪ್ತ ಮತ್ತು ಶಾರ್ಙ್ಗದೇವರ ಹೆಸರನ್ನು ಹೊರಗಿಟ್ಟಿರುವುದು ತಿಳಿಯುತ್ತದೆ. ಆದರೆ ಸಂಗೀತ ರತ್ನಾಕರದ ಪ್ರಸಿದ್ಧ ವ್ಯಾಖ್ಯಾನಕಾರ ಸಿಂಹಭೂಪಾಲನು ತನ್ನ ವ್ಯಾಖ್ಯಾನದಲ್ಲಿ ಪಾರ್ಶ್ವದೇವನನ್ನು ಆಗಾಗ್ಗೆ ಉಲ್ಲೇಖಿಸುತ್ತಾನೆ. ಇದರ ಅಧ್ಯಾಯಗಳಲ್ಲಿ ಹೇಳಲಾದ ರಾಗಗಳು, ಪ್ರಬಂಧಗಳು ಮುಂತಾದ ಅನೇಕ ವಿಷಯಗಳ ಕುರಿತು ಪಾರ್ಶ್ವದೇವ ಅನುಸರಿಸಿದ ಗ್ರಂಥ ಚಾಳುಕ್ಯ ಅರಸ ಜಗದೇಕಮಲ್ಲನ ಸಂಗೀತ ಚೂಡಾಮಣಿ. ದುರದೃಷ್ಟವಶಾತ್ ಜಗದೇಕಮಲ್ಲನ ಗ್ರಂಥ ಇಂದಿಗೂ ಪೂರ್ಣಪ್ರಮಾಣದಲ್ಲಿ ದೊರೆತಿಲ್ಲ. ಈ ಗ್ರಂಥವು ಸಂಗೀತರತ್ನಾಕರದಷ್ಟೂ ಸಮಗ್ರವಾಗಿಲ್ಲ. ಹಾಗಿದ್ದೂ ಕೆಲವು ಮುಖ್ಯಪಟ್ಟ ಪರಿಭಾಷೆ ವಿವರಣೆಗಳಿಗೆ ಮುಖ್ಯ ಆಕರ ಗ್ರಂಥವಾಗಿದೆ.
Vijayalakshmi. (Ed.) (2003). Sri Parsvadeva’s Sangita Samayasara. Delhi: Shivalik Prakashan.
Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries. Madras: Adyar Library.