ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ (Video series)-ಸಂಚಿಕೆ 52:ತುಳಜ ಮಹಾರಾಜನ ಸಂಗೀತ ಸಾರಾಮೃತ

Posted On: Sunday, December 15th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ

ಸಂಚಿಕೆ 62 : ತಂಜಾವೂರಿನ ಮರಾಠಾ ರಾಜ ತುಳಜ ಮಹಾರಾಜನ ಜೀವನ, ಆತನ ಸಂಗೀತ ಸಾರಾಮೃತ ಗ್ರಂಥ ಮತ್ತು ಇತರ ಕೊಡುಗೆಗಳು. ಭರತನಾಟ್ಯ, ಕೂಚಿಪೂಡಿಗಳಲ್ಲಿರುವ ಅಡವುಗಳ ಆಧಾರಗ್ರಂಥದ ವಿವೇಚನೆಯಿರುವ ಇದು ನೃತ್ಯ ಕಲಾವಿದರು ಅವಶ್ಯವಾಗಿ ಕೇಳಬೇಕಾದ ಸಂಚಿಕೆ. ಜೊತೆಗೆ ಮರಾಠಾ ರಾಜರು ನೀಡಿದ ಕಲಾವಿಷಯಕವಾದ ಕೊಡುಗೆಯ ಕುರಿತ ಪ್ರಸ್ತುತಿಯೂ ಇದೆ.

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 5 : Dākśinātya (Southern Region of Ancient Bhārata)

Episode 62 : The life and achivements of King Tulaja Maharaja of Tanjore Maratha Kingdom, along with his Sangīta Sārāmṛta treatise and other compositions which documents the adavus (basic movements) of Bharatanatya and Kuchipudi, making it an essential reference for dance practitioners. This episode includes a discussion on the artistic contributions made by the Maratha kings.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha &

Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

೧೭ರಿಂದ ೧೯ ನೇ ಶತಮಾನದ ನಡುವೆ ಭಾರತದ ಮುಖ್ಯ ರಾಜಪ್ರಭುತ್ವಗಳಲ್ಲೊಂದಾಗಿ ಹೆಸರಾದವುಗಳಲ್ಲಿ ತಂಜಾವೂರಿನ ಮರಾಠಾ ರಾಜ್ಯವು ಕೂಡಾ ಒಂದು. ಇದನ್ನು ಆಳಿದವರು ಭೋಸ್ಲೆ ಕುಟುಂಬದ ರಾಜರು. ಆ ಪೈಕಿ ಒಂದನೇ ತುಳಜೇಂದ್ರ ಭೂಪಾಲ ಅಥವಾ ಒಂದನೇ ತುಳಜಾಜಿ ಮಹಾರಾಜ ಅಥವಾ ತುಕ್ಕೋಜಿಯು ಪ್ರಖ್ಯಾತನಾದ ಅರಸರಲ್ಲೊಬ್ಬ. ಈ ಮಹಾರಾಜನ ಆಳ್ವಿಕೆಯ ಕಾಲ ೧೭೨೮-೧೭೩೬ ನೇ ಇಸವಿಯ ಆಸುಪಾಸು. ತುಳಜ ರಾಜನು ಬರೆದ ಕಲೆಗಳ ಶಾಸ್ತ್ರ ಗ್ರಂಥವೇ ಸಂಗೀತ ಸಾರಾಮೃತ.

ತುಳಜೇಂದ್ರ ಭೂಪಾಲನ ಹಿನ್ನೆಲೆ, ವಂಶವಿಶೇಷ ಮತ್ತು ಕಲಾಸಕ್ತಿ

ತುಳಜ ಭೂಪಾಲ ಮರಾಠಾ ರಾಜವಂಶೀಯ ಏಕೋಜಿ ಅಥವಾ ವೆಂಕೋಜಿಯ ಮೂರನೇ ಮಗ. ಈ ಏಕೋಜಿ ಹಿಂದವೀ ಸಾಮ್ರಾಜ್ಯ ಸಂಸ್ಥಾಪಕನೆಂದೇ ಖ್ಯಾತನಾದ ಮಹಾಪರಾಕ್ರಮಿ ಧೀಮಂತ ಶಿವಾಜಿ ಮಹಾರಾಜನ ಮಲಸಹೋದರ. ಅಂದರೆ ಒಂದನೇ ಷಹಜಿಯ ಮಕ್ಕಳು ಈ ಏಕೋಜಿ ಮತ್ತು ಶಿವಾಜಿ. ಶಿವಾಜಿ ಮಹಾರಾಜನು ಭಾರತದ ದಕ್ಷಿಣ ಪಶ್ಚಿಮ ರಾಜ್ಯಗಳಲ್ಲಿ ಉತ್ತರಾಧಿಕಾರಿ ಸನಾತನ ಭಾರತದ ಮೌಲ್ಯಗಳನ್ನು ಎತ್ತಿ ಹಿಡಿದರೆ ಏಕೋಜಿಯ ವಂಶ ಕ್ರಮೇಣ ತಂಜಾವೂರಿನಲ್ಲಿ ನೆಲೆ ಪಡೆದು ಆಳಿತು. ಈ ಏಕೋಜಿಯ ಮಕ್ಕಳೇ ಎರಡನೇ ಷಹಜಿ, ಶರಭೋಜಿ ಮತ್ತು ತುಳಜಾಜಿ. ಈ ಮೂವರು ಸಹೋದರರೂ ಪ್ರತಿಭಾಸಂಪನ್ನ ಕವಿಗಳು ಮತ್ತು ವಿದ್ವಾಂಸರು ಕೂಡಾ. ಇಂದಿಗೂ ಇವರು ಮಾಡಿದ ರಚನೆಗಳು ಮತ್ತು ಇವರನ್ನು ಸ್ತುತಿಸಿ ಬೇರೆ ಕವಿವರೇಣ್ಯರು ಬರೆದ ರಚನೆಗಳು ನೃತ್ಯ-ಸಂಗೀತ ಕ್ಷೇತ್ರದಲ್ಲಿ ವಿವಿಧ ರೀತಿಯ ಪದ್ಯ-ಕೀರ್ತನೆಗಳಾಗಿ ಕಂಡುಬರುತ್ತವೆ.

ತಂಜಾವೂರು ಹೇಗಿದ್ದರೂ ತಮಿಳುನಾಡಿನ ಪ್ರಾಂತ್ಯ.. ಆಳಿದವರು ಮರಾಠಿ ಭೋಂಸ್ಲೆ ರಾಜ ಮನೆತನ. ಹೀಗಿದ್ದೂ ರಾಜ ತುಳಜೇಂದ್ರನ ಹಿರಿಯರು ಕರ್ನಾಟಕ-ಕನ್ನಡವನ್ನು ಬಲ್ಲವರೇ ಆಗಿದ್ದರು. ಈ ಭೋಂಸ್ಲೆಗಳು ಮೂಲತಃ ದೇವಗಿರಿಯ ಹೊಯ್ಸಳರು ಮತ್ತು ಹಸುಗಳನ್ನು ಕಾಯುವ ಗೋಪಾಲಕ ಯಾದವರ ಕುಲಸಂಜಾತರು. ಕ್ರಮೇಣ ತುಂಡರಸರಾದರು. ತಂಜಾವೂರು ಪ್ರದೇಶವನ್ನಾಳುತ್ತಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತವರ್ಗವಾದ ನಾಯಕರ ಆಂತರಿಕ ಕೌಟುಂಬಿಕ ಕಲಹವು ಯುದ್ಧಕ್ಕೆ ಕಾರಣವಾಗಿ ಅಸ್ಥಿರವಾಯಿತು. ಹೀಗೆ ನಾಯಕರ ಆಳ್ವಿಕೆ ಕೊನೆಗೊಳ್ಳುತ್ತಲೇ ತಂಜಾವೂರಿನ ಮೇಲೆ ಈ ಭೋಂಸ್ಲೆ ಮರಾಠರ ಪ್ರಭುತ್ವ ಅಧಿಕಾರಕ್ಕೇರಿತ್ತು.

ಈ ತಂಜಾವೂರು ಮರಾಠಾ ಸಂಸ್ಥಾನದ ಮಾತೃಭಾಷೆ ಮರಾಠಿ. ಹೀಗಿದ್ದೂ ಸಂಸ್ಕೃತ, ತಮಿಳು, ತೆಲುಗು, ಕನ್ನಡ, ಪರ್ಶಿಯನ್ ಮೊದಲಾದ ಹಲವು ಭಾಷೆಗಳಲ್ಲಿ ಅವರಿಗೆ ಪ್ರವೇಶವೂ, ಪಾಂಡಿತ್ಯವೂ ಇತ್ತು. ಲಕ್ಷಣಗ್ರಂಥಗಳ ಜೊತೆಗೆ ಗೀತಪ್ರಬಂಧಗಳು, ನೃತ್ಯನಾಟಕಗಳು, ಯಕ್ಷಗಾನ ರೂಪಕಗಳನ್ನು ಬರೆಯುವಷ್ಟರ ಮಟ್ಟಿಗೆ ಲಕ್ಷ್ಯ-ಲಕ್ಷಣಗಳೆರಡರಲ್ಲೂ ಅವರಿಗೆ ಅಪಾರ ವಿದ್ವತ್ತು, ಪರಿಶ್ರಮ ಅವರಿಗಿತ್ತು. ಸುಕೃತವೆಂದರೆ, ಆಗಿನ ಕಾಲಕ್ಕೆ ಇಂದಿಗಿರುವಂತೆ ಭಾಷಾವಾರು ಆದ್ಯತೆಗಳನುಸಾರ ಪ್ರಾಂತ್ಯಗಳ ವಿಭಜನೆಯಿರಲಿಲ್ಲ. ಹಾಗಾಗಿ ಭಾಷೆಗಳಲ್ಲೂ ತರತಮ ಭೇದಗಳಾಗಲೀ, ಮೇಲರಿಮೆ- ಕೀಳರಿಮೆಗಳಾಗಲೀ ಇರಲಿಲ್ಲ. ಫಲವಾಗಿ ರಾಜರಿಗೂ, ಪಂಡಿತ ಪಾಮರರಿಗೂ ಬಹುಭಾಷಾ ನೈಪುಣ್ಯ ಸಹಜವಾಗಿಯೇ ಒಲಿದುಬಂದಿತ್ತು.

ತನ್ನ ಹಿರಿಯ ಸಹೋದರರ ಆಳ್ವಿಕೆಯ ಕಾಲದಲ್ಲಿ ತುಳಜಾಜಿಯು ಮನ್ನಾರ್‌ಗುಡಿಯ ಪಕ್ಕದ ಮಹದೇವಪಟ್ಟಣ ಎಂಬ ಊರಿನ ಸುಪರ್ದಿಯನ್ನು ಗಮನಿಸಿಕೊಳ್ಳುತ್ತಿದ್ದನಂತೆ. ಆ ಸಮಯದಲ್ಲಿ ವೈದ್ಯಕೀಯ ಗ್ರಂಥವೆನಿಸಿಕೊಂಡಿರುವ ಧನ್ವಂತರೀ ಸಾರನಿಧಿ ಮತ್ತು ತೆಲುಗು ಯಕ್ಷಗಾನ ನಾಟಕ ಶಿವಕಾಮಸುಂದರೀ ಪರಿಣಯ ಎಂಬವುಗಳನ್ನು ರಚಿಸಿದ. ಈ ನಾಟಕ ಮಹದೇವಪಟ್ಟಣದ ಆದಿವರಾಹಸ್ವಾಮಿ ದೇವಸ್ಥಾನದ ಜಾತ್ರೆಗಳಲ್ಲಿ ಪ್ರಸ್ತುತಿಗೊಳ್ಳುತ್ತಿತ್ತು ಕೂಡಾ. ಇದಲ್ಲದೆ ಇನಕುಲರಾಜತೇಜೋನಿಧಿ, ಧರ್ಮಸಾರಸಂಗ್ರಹ, ರಾಜಧiಸಾರಸಂಗ್ರಹ, ಮಂತ್ರಸಾರಸಂಗ್ರಹ ಧನ್ವಂತರೀವಿಲಾಸ, ರಾಮಧ್ಯಾನಪದ್ಧತಿ, ಬಹುಲಾಕಥಾಚೂರ್ಣಿಕಾ, ವಾಕ್ಯಾಮೃತ ಮತ್ತು ಇಂದು ವಿಶೇಷವಾಗಿ ಪ್ರಸ್ತುತಿಗೊಳ್ಳುತ್ತಿರುವ ಸಂಗೀತ ಸಾರಾಮೃತ ಎಂಬ ಗ್ರಂಥಗಳೂ ತುಲಜನದ್ದೇ ರಚನೆಯೆಂದು ತಿಳಿದುಬರುತ್ತದೆ. ಇದರೊಂದಿಗೆ ಸಂಸ್ಕೃತ, ತೆಲುಗು, ಮರಾಠೀ ಭಾಷೆಗಳಲ್ಲಿ ಕೆಲವು ಪದ, ಕ್ಯಾಲ್ ಎಂಬ ಪದ್ಯರಚನೆಗಳನ್ನೂ ರಾಗನಿರ್ದೇಶನದ ಸಹಿತವಾಗಿ ಮಾಡಿದ್ದ ತುಳಜ ಮಹಾರಾಜ.

ತನ್ನ ಅಲ್ಪ ಅವಧಿಯ ಆಡಳಿತದಲ್ಲೂ ತುಳಜಾಜಿ ಬಹಳ ದಕ್ಷರಾಜನೆಂಬ ಕೀರ್ತಿ ಪಡೆದಾತ. ಮಧುರೈನ ಮುಸ್ಲಿಂ ಆಕ್ರಮಣವನ್ನು ಹಿಮ್ಮೆಟ್ಟಿಸಿದ ಕೀರ್ತಿಗೆ ತುಳಜಾಜಿ ಪಾತ್ರನಾಗಿದ್ದಾನೆ. ಶರಭೋಜಿಯು ಆರಂಭಿಸಿದ ಮಾರವಾ ಯುದ್ಧವನ್ನು ಮುಕ್ತಾಯಗೊಳಿಸಿದ ಕೀರ್ತಿಯೂ ತುಳಜನದ್ದೇ. ಜೊತೆಗೆ ಮರಾಠ ಶಾಸನಗಳು ತಿರುಚಿರಾಪಳ್ಳಿಯ ರಾಣಿ ಮೀನಾಕ್ಷಿ ವಿರುದ್ಧ ದಂಗೆ ಎದ್ದ ಪಲೈಯಕ್ಕರರ್ ವಿರುದ್ಧ ತುಕ್ಕೋಜಿಯ ಸಹಾಯವನ್ನು ದಾಖಲಿಸುತ್ತವೆ. ತುಳಜಾಜಿ ಮಹಾರಾಜನು ದಕ್ಷಿಣ ಭಾರತದ ಹಿಂದೂ ರಾಜರ ಪರವಾಗಿ ಚಂದಾ ಸಾಹಿಬ್ ವಿರುದ್ಧ ಹೋರಾಡಿ ಆತನ ಮೊದಲ ದಂಡಯಾತ್ರೆಯನ್ನು ಹತ್ತಿಕ್ಕಿದ ಕೀರ್ತಿಯನ್ನೂ ಪಡೆದಿದ್ದ. ತುಳಜಾಜಿ ೧೭೩೬ರಲ್ಲಿ ಕೊನೆಯುಸಿರೆಳೆದದ್ದು.

ತುಕ್ಕೋಜಿ ಉತ್ತಮ ಭಾಷಾಶಾಸ್ತ್ರಜ್ಞ. ತಂಜಾವೂರಿನಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಪರಿಚಯಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಅವರ ಮಂತ್ರಿ ಘನಶ್ಯಾಮ ಪಂಡಿತರು ಭವಭೂತಿಯ ಉತ್ತರರಾಮಚರಿತ್ರೆಗೆ ವ್ಯಾಖ್ಯಾನವನ್ನು ಬರೆದವರು. ತುಳಜಾಜಿಯ ತರುವಾಯ ಒಂದು ವರುಷ ಕಾಲ ರಾಜ್ಯವಾಳಿದ ಆತನ ಮಗ ಎರಡನೇ ಏಕೋಜಿ ಅಥವಾ ಬಾವಾ ಸಾಹೇಬ್ ಕೂಡಾ ಮೂರ್ನಾಲ್ಕು ಪ್ರಮುಖವೆನಿಸುವ ಸಂಗೀತ ನಾಟಕಗಳನ್ನು ರಚಿಸಿದ್ದ.

ತುಳಜನ ಸಹೋದರ ಎರಡನೆಯ ಷಹಜಿ ರಚಿಸಿದ ರಾಗಲಕ್ಷಣಮು – ತೆಲುಗು ಭಾಷೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಲಕ್ಷಣಗ್ರಂಥ. ಇದಲ್ಲದೆ ಶಬ್ದಾರ್ಣವ ಸಮನ್ವಯ, ಶಬ್ದರತ್ನಸಂಗ್ರಹ ಮುಂತಾದ ಲಕ್ಷಣಕೃತಿ, ಚಂದ್ರಶೇಖರ ವಿಲಾಸ, ಶೃಂಗಾರ ಮಂಜರಿ ಯಕ್ಷಗಾನ, ೪೦ ಕ್ಕೂ ಹೆಚ್ಚು ನಾಟಕಗಳು, ಸಾವಿರಾರು ಪದಗಳನ್ನು ಬರೆದು ಪದ ಸಾಹಿತ್ಯದ ಮೂಲಪುರುಷ ಎಂಬ ಹೆಗ್ಗಳಿಕೆಗೆ ಪಾತ್ರವಾದವ ಎರಡನೆಯ ಷಹಜಿ ಮಹಾರಾಜ. ೧೬೯೩ ರಲ್ಲಿ, ಶಹಾಜಿ ತಿರುವಿಸನಲ್ಲೂರು ಗ್ರಾಮವನ್ನು ಷಹಜಿ-ರಾಜಪುರ ನಾಮಕರಣ ಮಾಡಿ ಅಲ್ಲಿ ೪೫ ವಿದ್ವಾಂಸರು ಮತ್ತು ಕವಿಗಳ ಸಭೆಯನ್ನು ಸ್ಥಾಪಿಸಿದ. ಮತ್ತು ಷಹಜಿಯ ಮಂತ್ರಿ, ಆಸ್ಥಾನಿಕರೆಲ್ಲರೂ ವಿವಿಧ ಕ್ಷೇತ್ರ, ಧರ್ಮವಿಚಾರಗಳಲ್ಲಿ ಗ್ರಂಥಗಳನ್ನು ಬರೆದ ಮಹಾಪಂಡಿತರು ಆಗಿದ್ದರು. ತುಳಜನ ಸಂಗೀತಸಾರಾಮೃತದ ಕೆಲವು ಭಾಗಗಳು ಷಹಜಿಯ ಬರೆವಣಿಗೆಗಳನ್ನು ಆಧರಿಸಿ ಬರೆದಿರುವುದನ್ನು ಪತ್ತೆ ಹಚ್ಚಲಾಗಿದೆ.

ಸಂಗೀತ ಸಾರಾಮೃತ – ಗ್ರಂಥವಿಶೇಷ, ಲಕ್ಷಣಕ್ರಮ

ತುಳಜಾಜಿ ಮಹಾರಾಜ ಬರೆದ ಸಂಗೀತ ಸಾರಾಮೃತ ಲಕ್ಷಣಗ್ರಂಥವು ನಾನಾ ಕಾರಣಗಳಿಂದ ಅತ್ಯಂತ ಪ್ರಮುಖವಾದದ್ದು. ಮೊದಲನೆಯದ್ದು ವಿಜಯನಗರ ಕರ್ನಾಟ ಸಾಮ್ರಾಜ್ಯ ಅವಸಾನದ ಬಳಿಕ ರಚನೆಗೊಂಡ ಪ್ರಾಚೀನ ಸಂಸ್ಕೃತ ಗ್ರಂಥಗಳ ಮಾದರಿಯನ್ನೇ ಹೋಲುವ ಗ್ರಂಥ. ಮತ್ತು ಪೂರ್ವಸೂರಿಗಳನ್ನು ನೆನೆಯುತ್ತಲೇ ತನ್ನ ಕಾಲದ ವರೆಗೆ ಬಂದಂತಹ ವಿಶಿಷ್ಟವೆನಿಸುವ ನೃತ್ಯ ಮತು ನೃತ್ತದ ಅಭಿನಯವಿಶೇಷಗಳನ್ನು ದಾಖಲಿಸಿದ ಗ್ರಂಥ. ಆದ್ದರಿಂದಲೇ ಇದು ಸಂಗ್ರಹ ಅಥವಾ ಸಂಕಲನ ಮಾಡಲ್ಪಟ್ಟ ಗ್ರಂಥದಂತೆಯೂ ಕೆಲವೆಡೆ ಭಾಸವಾಗುತ್ತದೆ. ಕಾರಣ, ತುಲಜನು ಆವರೆಗಿನ ಬಹುತೇಕ ಎಲ್ಲ ಲಾಕ್ಷಣಿಕರ ಬರೆವಣಿಗೆಗಳನ್ನೂ ಗಮನಿಸಿ ಬಹುವಾಗಿ ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಅಂದರೆ ಮತಂಗನ ಬೃಹದ್ದೇಶೀ, ಶಾರ್ಙ್ಗದೇವನ ಸಂಗೀತರತ್ನಾಕರ, ಜಾಯಪಸೇನನ ನೃತ್ತರತ್ನಾವಳಿ, ದೇವೇಂದ್ರ ಅಥವ ದೇವಣನ ಸಂಗೀತಮುಕ್ತಾವಲಿ, ನಂದಿಕೇಶ್ವರನ ಅಭಿನಯದರ್ಪಣ, ಪಂಡರೀಕ ವಿಠಲನ ನರ್ತನನಿರ್ಣಯ, ಸಂಗೀತದರ್ಪಣ, ಸಂಗೀತಮಕರಂದ, ವೆಂಕಟಮಖಿಯ ಚತುರ್ದಂಡಿ ಪ್ರಕಾಶಿಕಾ ಮತ್ತು ಅನಾಮಿಕ ಕರ್ತೃವಿನ ನಾಟ್ಯಚೂಡಾಮಣಿಗಳನ್ನು ಪರಿಶೀಲಿಸಿ ಉಲ್ಲೇಖಿಸಿದ್ದಾನೆ. ಆ ಪೈಕಿ ನೃತ್ಯವಿಚಾರವನ್ನಷ್ಟೇ ಇಲ್ಲಿ ಉಲ್ಲೇಖಿಸುವುದಾದರೆ- ನಾಟ್ಯವೇದದ ಹಿನ್ನೆಲೆ, ಸ್ಥಾನಕ, ವಲನ, ಹಸ್ತಾಭಿನಯ, ರೇಚಕ, ರೇಖಾ, ಪಾದನಿಕುಟ್ಟನ, ಪ್ಲುತಿ, ಕರಣ, ಚಾರೀ, ಭ್ರಮರಿ, ಮಂಡಲ, ನ್ಯಾಯಲಕ್ಷಣ, ನಾಟ್ಯಮಂಟಪ ಲಕ್ಷಣ, ಸಭಾಸನ್ನಿವೇಶ, ಹಿಮ್ಮೇಳ ಸಂಪ್ರದಾಯ ಬೃಂದ, ನರ್ತಿಸುವವರ ಅಂದರೆ ಪಾತ್ರಾಪಾತ್ರ ಲಕ್ಷಣ ದೋಷಗಳು, ಸಭಾನಾಯಕ- ಸಭಾಸದ- ಆಚಾರ್ಯರ ಲಕ್ಷಣ, ಅಭಿನಯ ಕ್ರಮ, ನಟ-ನರ್ತಕ-ವೈತಾಳಿಕ- ಕೊಲ್ಲಟಿಕ- ಚಾರಣ ಮೊದಲಾದ ನರ್ತಕರ ವಿಚಾರ .., ಹೀಗೆ ಹಲವು ವಿವರಗಳನ್ನು ಪೂರ್ವಸೂರಿಗಳ ಗ್ರಂಥಗಳಿಂದ ಯಥಾವತ್ ಉಲ್ಲೇಖಿಸಿರುವುದನ್ನು ಕಾಣಬಹುದು. ಪ್ರಾಚೀನ ಪದ್ಧತಿಯಲ್ಲಿದ್ದ ಲಾಸ್ಯಾಂಗ, ಪುಷ್ಪಾಂಜಲಿ, ದರು, ಪದ, ಶುದ್ಧ ಸಾಲಗಸೂಡ ಪದ್ಧತಿ, ಪೇರಣಿ, ಪ್ರೇಂಖಣ, ಗೌಂಡಲಿ ಮೊದಲಾದ ದೇಶೀನೃತ್ಯವಿಧಿಗಳನ್ನೂ ಕೂಡಾ ಚರ್ಚಿಸಿದ್ದಾನೆ.

ತಂಜಾವೂರಿನ ಸರಸ್ವತೀ ಮಹಲ್ ಗ್ರಂಥಾಲಯದಲ್ಲಿ ಇದ್ದ ಸಂಗೀತ ಸಾರಾಮೃತದ ಹಸ್ತಪ್ರತಿಯನ್ನು ವಿದ್ವಾನ್ ಸುಬ್ರಹ್ಮಣ್ಯ ಶಾಸ್ತ್ರಿಗಳು ಸಂಪಾದಿಸಿದ್ದು ಮದ್ರಾಸಿನ ಸಂಗೀತ ವಿದ್ವತ್ಸಭಾದಿಂದ ೧೯೪೨ರಲ್ಲಿ ಮುದ್ರಿತವಾಗಿದೆ. ಹೀಗೆ ದೊರೆತ ಹಸ್ತಪ್ರತಿಯನ್ನು ಗಮನಿಸಿ ವಿಮರ್ಶಾತ್ಮಕ ಟೀಕೆ ಬರೆಯುವುದರೊಂದಿಗೆ ಒಟ್ಟು ೧೪ ಪ್ರಕರಣಗಳೆಂಬ ಅಧ್ಯಾಯಗಳನ್ನು ಮಾಡಲಾಗಿದೆ. ಅವು ಶ್ರುತಿ, ಸ್ವರ, ಗ್ರಾಮಮೂರ್ಛನ, ತಾನ, ಅಲಂಕಾರ, ಜಾತಿ, ಗತಿ, ಮೇಳ, ರಾಗ, ವಾದ್ಯ, ತಾಲ, ಪ್ರಬಂಧಗಳೆಂಬ ರಚನೆಗಳು, ಗಾನ ಗುಣ ಮೊದಲಾದವುಗಳನ್ನು ವಿವರವಾಗಿ ದಾಖಲಿಸುತ್ತದೆ. ಸಂಗೀತ ಸಾರಾಮೃತದ ಆರಂಭಿಕ ಸಾಲುಗಳು ತುಳಜಾಜಿಯ ವಂಶ, ಕುಟುಂಬದ ಹಿರಿಮೆ ಗರಿಮೆಗಳ ವರ್ಣನೆಗಳನ್ನು ಒಳಗೊಂಡಿದೆ.

ಈ ಗ್ರಂಥ ಸಮಕಾಲೀನವಾಗಿಯೂ ಅತ್ಯಂತ ಮಹತ್ತ್ವದ ಗ್ರಂಥ ಎನಿಸಿಕೊಳ್ಳಲು ಕಾರಣವಾದ ಅಂಶ ಮತ್ತೊಂದಿದೆ. ಅದುವೇ ಭರತನಾಟ್ಯ ಮತ್ತು ಕೂಚಿಪೂಡಿಗಳೆಂದು ಪ್ರಖ್ಯಾತವಾಗಿರುವ ಇಂದಿನ ದೇಶೀನೃತ್ಯಶೈಲಿಗಳ ಆಂಗಿಕಾಭಿನಯಕ್ಕೆ ಪ್ರಧಾನ ಆಕರವನ್ನು ಕೊಟ್ಟಿದೆ ಎಂಬುದು. ಅಂದರೆ ಗುರು ಪರಂಪರೆಯ ಮುಖೇನ ಸಾಗುತ್ತಾ ಬಂದಿರುವ ನೃತ್ಯಾಭ್ಯಾಸದ ಮೊದಲ ಹೆಜ್ಜೆಗಳಿಂದ ಅಂದರೆ ಬಾಲಪಾಠದಿಂದ ಮೊದಲ್ಗೊಂಡು ವೇದಿಕೆಯ ಪ್ರದರ್ಶನದಲ್ಲೂ ಅತ್ಯಂತ ಆವಶ್ಯಕವೆನಿಸುವ ಅಡವು ಎಂಬ ಕಾಲಿನ ಚಲನೆಗಳನ್ನು ಲಕ್ಷಣ ರೂಪದಲ್ಲಿ ದಾಖಲಿಸಿದೆ. ಮೋಹಿನಿಯಾಟ್ಟಂನಲ್ಲಿಯೂ ಅಡವುಗಳೇ ಪ್ರಾಥಮಿಕ ಅಭ್ಯಾಸವಿಧಿ. ಅಂತೆಯೇ ಕಳರಿಪಯಟ್ಟಿನಲ್ಲಿಯೂ ಅಡವು ಎಂಬುದು ವಿವಿಧ ಸ್ಥಿತಿ ಮತ್ತು ಗತಿಯ ಸಂಯೋಜನೆಗಳನ್ನೇ ವಿವರಿಸುತ್ತದೆ. ಒಟ್ಟಿನಲ್ಲಿ ದಾಕ್ಷಿಣಾತ್ಯ ಪ್ರವೃತ್ತಿಯ ಬಹುತೇಕ ನೃತ್ಯಕಲೆಗಳ ಪಾದಚಲನೆಗಳ ಆಧಾರ ಸೂಚಿಸುವಾಗ ಸಂಗೀತ ಸಾರಾಮೃತದ ಹೆಸರು ಬಾರದೇ ಹೋಗುವುದಿಲ್ಲ. ಅದರಲ್ಲೂ ಅಡವು ಎಂಬ ದೇಶೀ ಭಾಷೆಯ ಹೆಸರಿನಿಂದಲೇ ಗುರುತಿಸಿ ಅದರ ವಿಧಗಳನ್ನು ಸಂಸ್ಕೃತಭಾಷೆಯ ಲಕ್ಷಣಗ್ರಂಥದಲ್ಲಿ ಬರೆದಿರಿಸಿದ ಮೊದಲ ಮತ್ತು ಕೊನೆಯ ಗ್ರಂಥ ಸಂಗೀತ ಸಾರಾಮೃತ ಎಂದರೂ – ಅದು ಖಂಡಿತಾ ಅತಿಶಯವಲ್ಲ. ಏಕೆಂದರೆ ಈ ಒಂದು ಗ್ರಂಥವನ್ನುಳಿದು ಪಾದಕುಟ್ಟನ ಚಲನೆಯ ಕುರಿತ ಲಕ್ಷಣವಿಚಾರವನ್ನು ಅಡವುಗಳೆಂಬ ಹೆಸರಿನಲ್ಲೇ ಗುರುತಿಸಿಕೊಡುವ ಹಾಗೂ ಸಂಗೀತಸಾರಾಮೃತದ ವಿವರಗಳಿಗೆ ಹೊಂದಿಕೆಯಾಗುವ ಗ್ರಂಥಗಳು ಇಡಿಯ ಲಕ್ಷಣಗ್ರಂಥಗಳಲ್ಲೇ ಮತ್ತೊಂದಿಲ್ಲ.[1]

ಸಂಗೀತ ಸಾರಾಮೃತ ಹಸ್ತಪ್ರತಿಯ ಕಟ್ಟಿನೊಳಗೆ ನೃತ್ಯಕ್ಕೆ ಸಂಬಂಧಿಸಿ ಪ್ರತ್ಯೇಕ ಅಧ್ಯಾಯವಿಲ್ಲ. ನಾಟ್ಯಾಗಮವೆಂಬ ಹೆಸರಿನಿಂದ ತುಳಜ ಮಹಾರಾಜ ಬರೆದಿದ್ದ ಎನ್ನಲಾದ; ಆದರೆ ಇಂದಿಗೆ ಸಂಪೂರ್ಣವಾಗಿ ಕಳೆದೇ ಹೋಗಿದೆಯೆಂದು ನಂಬಿಕೊಂಡಿರುವ ಗ್ರಂಥವೊಂದಿತ್ತೆಂದೂ; ಅದರಲ್ಲಿ ನೃತ್ತಪ್ರಕರಣವೆಂಬ ಅಧ್ಯಾಯವಿದೆಯೆಂದೂ ಒಂದು ಮಾತಿದೆ. ಆದರೆ ಅದರ ಹಸ್ತಪ್ರತಿ ಸಂಗೀತಸಾರಾಮೃತದ ಜೊತೆಯಲ್ಲಿದ್ದ ಕಾರಣ, ಅದು ಸಂಗೀತ ಸಾರಾಮೃತಕ್ಕೆ ಹೊಂದುವ ಅಧ್ಯಾಯವೇ ಆಗಿದೆಯೆಂದು ಗ್ರಹಿಸಿ ; ಹೀಗೆ ದೊರೆತ ಮಾಹಿತಿಗಳನ್ನು ಸುಬ್ರಹ್ಮಣ್ಯ ಶಾಸ್ತ್ರಿಗಳು ಸಂಪಾದಿಸಿ ಗ್ರಂಥಾರಂಭಕ್ಕೆ ಮೊದಲಿನ ಲೇಖಕರ ನುಡಿಯಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿಯೇ ೧೩ ಪ್ರಧಾನವಾದ ಅಡವು ಚಲನೆಗಳೊಂದಿಗೆ ಅವುಗಳ ಐದರಷ್ಟು ಒಳಬಗೆಗಳಿವೆ ಎಂದೂ ಸುಬ್ರಹ್ಮಣ್ಯ ಶಾಸ್ತ್ರಿಗಳು ವಿವರಣೆ ಕೊಟ್ಟಿದ್ದಾರೆ. ಇವುಗಳಲ್ಲಿ ಬಹುತೇಕ ಅಡವುಗಳು ತಕಧಿಮಿ ಇತ್ಯಾದಿ ಪಾಟಾಕ್ಷರ ಅಥವಾ ಸೊಲ್ಕಟ್ಟು ಮತ್ತು ಕಾಲಿನ ಜೊತೆಗೆ ಹಸ್ತಾಭಿನಯದ ವಿವರಗಳನ್ನೂ ಹೊಂದಿವೆ. ಇವುಗಳನ್ನು ಆಚರಿಸುವುದಕ್ಕಿಂತ ಮುಂಚೆ ಅಂದರೆ ನೃತ್ಯದ ಶಿಕ್ಷಾರಂಭಕ್ಕೆ ಶ್ರಮವಿಧಿ ಎಂಬ ಹೆಸರನ್ನು ಹೇಳಲಾಗಿದೆ. ಆ ಬಳಿಕ ಅಡವು ಎಂಬ ಪಾದಚಲನೆಗಳ ವಿವರಗಳು ಆರಂಭವಾಗುತ್ತವೆ.

ಒಟ್ಟಿನಲ್ಲಿ ಸಂಗೀತಸಾರಾಮೃತ ಗ್ರಂಥದ ಎಲ್ಲ ಭಾಗಗಳೂ ಇಂದಿಗೆ ದೊರೆತಿಲ್ಲ. ಅದರಲ್ಲೂ ನೃತ್ತವಿಚಾರ ತಿಳಿಸುವ ಅಧ್ಯಾಯದ ಬಹ್ವಂಶವೂ ತ್ರುಟಿತವಾಗಿದೆ. ದೊರೆತಿರುವ ಅಷ್ಟಿಷ್ಟು ಭಾಗಗಳಲ್ಲಿಯೂ ಎಷ್ಟೋ ಲಕ್ಷಣಗಳು ದೊರೆಯುವುದೇ ಇಲ್ಲ. ಶಿರ ಮತ್ತು ಅಭಿನಯಕ್ರಮವೆಂಬುದು ಉಲ್ಲೇಖಗೊಂಡಿವೆ; ಆದರೆ ಅದರ ಭಾಗಗಳು ಲುಪ್ತವಾಗಿರುವುದರಿಂದ ಸಾಮಾನ್ಯವಾಗಿ ಶಾಸ್ತ್ರಗ್ರಂಥಗಳ ನೃತ್ಯಾಧ್ಯಾಯಗಳು ಉಲ್ಲೇಖಿಸುವ ಅಂಗ-ಪ್ರತ್ಯಂಗ-ಉಪಾಂಗ-ಹಸ್ತಪ್ರಚಾರ-ಹಸ್ತ-ಕರಣ-ಉತ್ಪ್ಲುತಿ-ಅಂಗಹಾರ-ಚಾರೀ-ಸ್ಥಾನಕಾದಿ ಲಕ್ಷಣಗಳು ದೊರೆತಿಲ್ಲ. ಬದಲಾಗಿ ಕೆಲವು ಸೂಚನೆಗಳಷ್ಟೇ ದೊರೆಯುತ್ತವೆ. ಹೀಗೆ ಉಳಿದುಬಂದಿರುವ ಪಾಠ್ಯದಿಂದಾಗಿ ತುಳಜ ಮಹಾರಾಜ ನೃತ್ಯವಿಚಾರವಾಗಿ ಬಹಳಷ್ಟು ಬರೆದಿದ್ದನೆಂಬುದಂತೂ ತಿಳಿಯುತ್ತದೆ. ಜೊತೆಗೆ ಆತನ ಲಕ್ಷಣಕ್ರಮದಿಂದ ಸಂಸ್ಕೃತದಲ್ಲಷ್ಟೇ ಅಲ್ಲದೆ ದಾಕ್ಷಿಣಾತ್ಯ ಭಾಷೆಗಳಾದ ತೆಲುಗು, ತಮಿಳು, ಕನ್ನಡ, ಮರಾಠಿಗಳಲ್ಲಿ ಆತನಿಗೆ ಸಮಾನಪ್ರಭುತ್ವವೂ, ಆ ಭಾಷೆಗಳ ಪ್ರಾಂತಗಳ ಸಂಸ್ಕೃತಿಗಳ ಪರಿಚಯ ಇದ್ದದ್ದೂ ಮನವರಿಕೆಯಾಗುತ್ತದೆ.

 

ಸಮಾಪನ

ಈ ಮರಾಠರ ಆಳ್ವಿಕೆಯ ಕಾಲ ಏನೂ ಸುಗಮದ ದಿನಗಳಾಗಿರಲಿಲ್ಲ. ಒಂದೆಡೆ ಮುಸಲ್ಮಾನ ಸುಲ್ತಾನರ ಕಿರಿಕಿರಿ ಇನ್ನೊಂದೆಡೆ ಪಾಶ್ಚಾತ್ಯರ ಆಕ್ರಮಣದ ಉಚ್ಛ್ರಾಯ ಕಾಲ. ಯುದ್ಧ-ಸಂಧಾನಗಳ ವಿಷಮಪರಿಸ್ಥಿತಿ, ರಾಜ್ಯಸಂರಕ್ಷಣೆಯ ಜೊತೆಗೆ ಪ್ರಜಾಪರಿಪಾಲನೆ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪದ ಅವರ ಅಭಿರುಚಿ, ಕೊಡುಗೆಯನ್ನು ಗಮನಿಸಿದಾಗ ಭಾರತೀಯ ರಾಜರ ಔದಾರ್ಯ, ಶೌರ್ಯಗಳ ಬಗ್ಗೆ ಹೆಮ್ಮೆಯೆನಿಸುತ್ತದೆ. ಅದೇ ಅವರ ಅವನತಿಯಾಗುತ್ತಾ ಬಂದಂತೆಲ್ಲಾ ಅದೇ ಅವರ ಅವನತಿಯಾಗುತ್ತಾ ಬಂದಂತೆಲ್ಲಾ ಭರತಭೂಮಿಯ ಶಾಸ್ತ್ರ-ಪ್ರಯೋಗ ಶ್ರೀಮಂತಿಕೆಯೇ ನಷ್ಟವಾಗುತ್ತಾ ಹೋಗಿದ್ದು ಅರಿವಾಗುತ್ತದೆ. ಉದಾಹರಣೆಗೆ ತುಳಜನ ಸಂಗೀತ ಸಾರಾಮೃತವನ್ನೇ ತೆಗೆದುಕೊಂಡರೆ ಈ ಗ್ರಂಥದ ಬಳಿಕ ಕ್ರಮಬದ್ಧವಾಗಿ ಗೀತ-ನೃತ್ಯ-ವಾದ್ಯಸಂಸ್ಕೃತಿಯ ಕುರಿತ ಸಮಗ್ರ ಲಕ್ಷಣಗ್ರಂಥ ಬರೆಯುವ ಪರಂಪರೆಯೇ ನಿಧಾನವಾಗಿ ಕ್ಷೀಣಿಸುತ್ತಾ ಹೋಯಿತು. ಆ ಬಳಿಕ ಬಂದ ಗ್ರಂಥಗಳಲ್ಲಿ ಬಹುತೇಕವೂ ಸಂಗ್ರಹಗ್ರಂಥಗಳೇ ಆಗಿಹೋಯಿತು. ಇಲ್ಲವೇ ಬಿಡಿಭಾಗಗಳ ಪ್ರತಿಗಳೇ ಕಂಡುಬಂದವು. ಹೀಗಾಗಿ ಪೂರ್ವಸೂರಿಗಳ ಗ್ರಂಥಗಳ ರಚನೆಯ ಭವ್ಯತೆಗೂ, ಅವು ಕ್ರಮೇಣ ಶಿಥಿಲವಾಗುತ್ತಾ ಬಂದಿರುವುದನ್ನು ಗಮನಿಸುವುದಕ್ಕೂ ಸಂಗಿತ ಸಾರಾಮೃತ ಗ್ರಂಥವು ಆಕರವಾಗುತ್ತದೆ.

ಮರಾಠ ರಾಜವಂಶೀಯರಾದ ಎಲ್ಲ ರಾಜರೂ ಕವಿ, ನಾಟಕಕಾರ, ಬಹುಶ್ರುತ ವಿದ್ವಾಂಸರಷ್ಟೇ ಅಲ್ಲ; ಅಪ್ರತಿಮ ಗುಣಸಂಪನ್ನರು ಕೂಡಾ. ಅವರಷ್ಟೇ ಅಲ್ಲ, ಭಾರತದ ಬಹುತೇಕ ಸನಾತನ ಧರ್ಮೀಯ ರಾಜ ಮಹಾರಾಜರೂ ಹೀಗೆಯೇ ಇದ್ದರು. ಸ್ವತಃ ಹಲವು ವಿದ್ಯೆಗಳನ್ನು ಬಲ್ಲ ಪರಾಕ್ರಮಶೀಲರು. ಇವರ ಆಶ್ರಯದಲ್ಲಿ ಅನೇಕಾನೇಕ ಕವಿ-ವಿದ್ವಾಂಸರು- ನಟೋತ್ತಮರು- ರಚನಕಾರರು ಇದ್ದು ನಮ್ಮ ಕಲೆ- ಸಂಸ್ಕೃತಿ-ಗ್ರಂಥಪರಂಪರೆಗಳನ್ನು ಅಪಾರವಾಗಿ ಬೆಳೆಸಿ ಉಳಿಸಿದರು. ಹಾಗೆಯೇ ಈ ತಂಜಾವೂರೂ ಮರಾಠ ರಾಜರು ಮತ್ತು ಈ ರಾಜ ಆಶ್ರಯದಲ್ಲಿದ್ದ ಅನೇಕ ಕವಿ- ವಿದ್ವಾಂಸರ ಕೃತಿಗಳು ಈಗಿನ ಕರ್ನಾಟಕ ಸಂಗೀತ- ಭರತನಾಟ್ಯಾದಿ ನೃತ್ಯಗಳಲ್ಲಿ ಇಂದಿಗೂ ಕಂಡುಬರುತ್ತವೆ. ಅಷ್ಟರಮಟ್ಟಿಗೆ ನಮ್ಮ ಕಲೆಗಳು ರಾಜರ ಮೂಲಕ ಇಂದಿಗೂ ಶ್ರೀಮಂತವಾಗಿವೆ, ಸುಂದರವಾಗಿವೆ, ಅರ್ಥಗರ್ಭಿತವಾಗಿವೆ, ಸನಾತನವೂ ಆಗಿವೆ.

ಪರಾಮರ್ಶನ ಗ್ರಂಥಗಳು

Subrahmanya Sastri, S (Ed), Sangita Saramrta of Tulajajendra Bhupala, 1942,” MusicResearchLibrary, accessed December 11, 2024, <https://musicresearchlibrary.net/omeka/items/show/835>

  1. ಹೆಚ್ಚಿನ ವಿವರಗಳಿಗೆ ಓದಿ ಯಕ್ಷಮಾರ್ಗಮುಕುರ ಗ್ರಂಥ- ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/ಗೆ

Leave a Reply

*

code