ಶಾಸ್ತ್ರರಂಗ ಭಾಗ 3- ಉತ್ತರ/ಪಾಂಚಾಲೀ (Video series)-ಸಂಚಿಕೆ 36-ಸಾಗರನಂದಿಯ ನಾಟಕಲಕ್ಷಣರತ್ನಕೋಶ

Posted On: Sunday, June 16th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ 3- ಉತ್ತರ/ಪಾಂಚಾಲೀ
ಸಂಚಿಕೆ 36- ಸಾಗರನಂದಿಯ ನಾಟಕಲಕ್ಷಣರತ್ನಕೋಶ ಮತ್ತು ಭಾರತೀಯ ದಶರೂಪಕ ಮತ್ತು ಉಪರೂಪಕಗಳ ವೈಶಿಷ್ಟ್ಯವನ್ನು ದಾಖಲಿಸುವಲ್ಲಿ ಈ ಗ್ರಂಥದ ಅನನ್ಯವೆನಿಸುವ ಕೊಡುಗೆಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 3- Uttara/Pāncālī (Northern Region of Ancient Bhārata)

Episode 36- Sāgaranandi’s Nāṭakalakshana Ratnakosha and its specialty in mentioning the Indian Theatre tradition (Dasha Rupaka and Upa Rupaka traditions)

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಸಾಗರ ನಂದಿಯ ನಾಟಕಲಕ್ಷಣರತ್ನಕೋಶ

ನಾಟಕ ಅಂದರೆ ರಂಗಭೂಮಿಯ ಲಕ್ಷಣಗಳ ಅಮೂಲ್ಯ ರತ್ನಗಳ ಒಂದು ಕೋಶ ಇಲ್ಲವೇ ನಾಟಕ ಕ್ಷೇತ್ರಕ್ಕೆ ಸಂದ ಅಮೂಲ್ಯಲಕ್ಷಣಭಂಡಾರ ಎಂಬರ್ಥದ ಗ್ರಂಥವಿದು. ನಂದಿ ವಂಶ ಅಥವಾ ನಂದಿನ್ ಎಂಬ ಬಿರುದುಳ್ಳ ವೀಸೀ ಮನೆತನದಲ್ಲಿ ಹುಟ್ಟಿದ ಸಾಗರ ಇದರ ರಚನಾಕಾರ.

ಸಾಗರ ನಂದಿ- ಗ್ರಾಂಥಿಕ ವಿವರಗಳು

ನಂದಿನ್ ಎನ್ನುವುದು ಜೈನ ಅಥವಾ ಬೌದ್ಧ ವಾಂಶಿಕರನ್ನು ಸೂಚಿಸುತ್ತದೆ ಎಂಬ ಅನುಮಿತಿಗಳನ್ನು ಇತಿಹಾಸಕಾರರು ಮಾಡಿದ್ದಾರೆ. ಆದರೆ ಗ್ರಂಥವು ಶಿವನಸ್ತುತಿಯೊಂದಿಗೆ ಆರಂಭಗೊಳ್ಳುವುದನ್ನು ಗಮನಿಸಿದಾಗ ರಾಜವಂಶದಲ್ಲಿ ಜನಿಸಿದ ಕ್ಷತ್ರಿಯ ಪುರುಷ ಈ ಸಾಗರನಂದಿಯಾಗಿದ್ದಿರಬಹುದು ಎಂಬ ಅನುಮಾನ ಮೂಡುತ್ತದೆ. ಆದರೆ ಈತ ಇದ್ದ ನಿರ್ದಿಷ್ಟ ಪ್ರದೇಶ ಯಾವುದೆಂದು ತಿಳಿದುಬರುವುದಿಲ್ಲ. ಹಾಗಿದ್ದೂ ಉತ್ತರ ಭಾರತಕ್ಕೆ ಸಲ್ಲುವವನೆಂದೇ ಲಕ್ಷಣವಿವರಗಳಿಂದ ಅಂದಾಜಿಸಬಹುದು.

ನಾಟಕಲಕ್ಷಣರತ್ನಕೋಶದ ರಚನೆಯ ಕಾಲ ಹತ್ತು-ಹನ್ನೊಂದನೇ ಶತಮಾನದ ಆಸುಪಾಸಿನಲ್ಲಿ ಅಗಿರುವಂತಿದೆ. ಹಾಗೆಂದೇ ಅಭಿನವಗುಪ್ತನ ಅಭಿನವಭಾರತೀ ಮತ್ತು ಭೋಜರಾಜನ ಗ್ರಂಥ ಶೃಂಗಾರಪ್ರಕಾಶಕ್ಕೂ ನಾಟಕಲಕ್ಷಣರತ್ನಕೋಶಕ್ಕೂ ಹಲವು ಲಕ್ಷಣಗಳಲ್ಲಿ ಸಾಮ್ಯತೆಯನ್ನು ಗುರುತಿಸಬಹುದು. ಅಂತೆಯೇ ಕೋಹಲೋಕ್ತವೆನ್ನಬಹುದಾದ ಅನೇಕ ಲಕ್ಷಣಗಳನ್ನು ಬರೆದಿದ್ದಾನೆ ಸಾಗರನಂದಿ. ಮಾತೃಗುಪ್ತ, ರಾಹುಲ, ಕಾತ್ಯಾಯನ, ನಖಕುಟ್ಟ, ಅಶ್ಮಕುಟ್ಟ, ಗರ್ಗ, ಬಾದರಾಯಣ, ಶಾತಕರ್ಣಿ, ಚಾರಾಯಣ, ಶ್ರೀಹರ್ಷ, ವಿಕ್ರಮ ಮೊದಲಾದ ಪೂರ್ವಸೂರಿ ಭರತಶಾಸ್ತ್ರಜ್ಞರನ್ನು ಕೂಡಾ ಹೇರಳವಾಗಿ ಉಲ್ಲೇಖಿಸಿದ್ದಾನೆ.

ನಾಟಕಲಕ್ಷಣರತ್ನಕೋಶ- ಗ್ರಂಥವೈಶಿಷ್ಟ್ಯ

ಸಂಧಿ-ಸಂಧ್ಯಂಗ- ಅವಸ್ಥಾಭೇದ-ಅರ್ಥಪ್ರಕೃತಿ ವಿವರಗಳು; ಭಾವ-ರಸ-ಅಲಂಕಾರ-ನಾಯಕ ನಾಯಿಕಾ ಗುಣನಿರೂಪಣ- ಸಾತ್ತ್ವತೀ, ಆರಭಟೀ, ಕೈಶಿಕೀ, ಭಾರತೀ ಎಂಬ ಚತುರ್ವೃತ್ತಿಗಳು, ದಶರೂಪಕಾದಿಭೇದಗಳು ಮೊದಲಾದ ರಂಗಭೂಮಿಗೆ ಸಂಬಂಧಿಸಿದ ನಾಟ್ಯಶಾಸ್ತ್ರೀಯ ವಿವರಗಳನ್ನು ಒಳಗೊಂಡಿದೆ ಈ ಕೃತಿ. ಈ ಲಕ್ಷಣ ವಿವರಗಳಿಗೆ ಉದಾಹರಣೆ ಅಥವಾ ವಿನಿಯೋಗ ಎಂಬಂತೆ ಸಾಗರನಂದಿಯು ನಾಟಕಲಕ್ಷಣರತ್ನಕೋಶವೆಂಬ ಗ್ರಂಥದಲ್ಲಿ ಉಲ್ಲೇಖಿಸಿದ ನಾಟಕಾದಿ ರಂಗಭೂಮಿಯ ರಚನೆಗಳ ಬಗ್ಗೆ ಒಂದು ಸಲ ದೃಷ್ಟಿ ಹಾಯಿಸುವುದಾದರೆ -ಕಾಳಿದಾಸನ ವಿಕ್ರಮೋರ್ವಶೀಯ, ಶಾಕುಂತಲಾ, ಭವಭೂತಿಯ ಉತ್ತರರಾಮಚರಿತ, ಮಾಲತೀಮಾಧವ, ಶ್ರೀಹರ್ಷನ ರತ್ನಾವಲೀ ಮತ್ತು ನಾಗಾನಂದ, ಭಾಸನ ಸ್ವಪ್ನವಾಸವದತ್ತ-ಚಾರುದತ್ತ, ವಿಶಾಖದತ್ತನ ಮುದ್ರಾರಾಕ್ಷಸ, ರಾಘವಾಭ್ಯುದಯ ಮತ್ತು ದೇವೀಚಂದ್ರಗುಪ್ತಮ್, ಶೂದ್ರಕನ ಮೃಚ್ಛಕಟಿಕ, ದಿಙಗನ ಕುಂದಮಾಲಾ, ರಾಜಶೇಖರನ ಕರ್ಪೂರಮಂಜರೀ, ವಿದ್ಧಶಾಲಭಂಜಿಕಾ, ಭಟ್ಟನಾರಾಯಣನ ವೇಣೀಸಂಹಾರ, ಮಾಯುರಾಜನ ಉದಾತ್ತರಾಘವ ಮತ್ತು ತಾಪಸವತ್ಸರಾಜ, ಸುಭಟ ಕವಿಯ ದೂತಾಂಗದ, ಯಶೋವರ್ಮನ ರಾಮಾಭ್ಯುದಯ. ಇಷ್ಟೇ ಅಲ್ಲ, ಉಪಾಹರಣ, ಊರ್ವಶೀಮರ್ದನ, ಕನಕಾವತೀಮಾಧವ, ಕಾಲವತೀ, ಕಾಮದತ್ತಾ, ಕೇಲಿರೈವತಕ, ಕ್ರೀಡಾರಸಾತಲ, ಕೃತ್ಯರಾವಣಮ್, ಕೀಚಕ ಭೀಮ, ಛಲಿತರಾಮ, ಜಾನಕೀರಾಘವ, ದೇವದತ್ತಕೃತಿ, ದೇವೀಮಹಾದೇವ, ನಲವಿಜಯ, ನರಕೋದ್ಧರಣ, ಪದ್ಮಾವತೀ ಪರಿಣಯ, ಪತ್ರಲೇಖ, ಪಾಲಚರಿತ, ಪ್ರ್ರಾಮೇಯಿ, ಪುಷ್ಪದೂಪಿತಕ, ಭಗವದಜ್ಜುಕೀಯ, ಭೀಮವಿಜಯ, ಮದನಮಂಜುಲಾ, ಮದನಿಕಾಕುಮುಕ, ಮಾರೀಚವಂಚಿತಕ, ಮಾಯಾಕಾಪಾಲಿಕ, ಮಾಯಾಮದಾಲಸಾ, ರಂಭಾನಳಕುಬರ, ರಾಧಾ, ರಾಮವಿಕ್ರಮ, ರಾಮಾನಂದ, ರೇವತೀಪರಿಣಯ, ಲಲಿತ ನಾಗರ, ವಕುಲವೀಥೀ, ವಾಲೀವಧ, ವಿಂದುಮತಿ, ವಿಲಾಸವತೀ, ವೀಣಾವತೀ, ವೃತ್ರೋದ್ಧರಣ, ಶಕಾನಂದ, ಶರ್ಮಿಷ್ಠಾಪರಿಣಯ, ಶಶಿವಿಲಾಸ, ಶಶಿಕಾಮದತ್ತಾ, ಶೃಂಗಾರತಿಲಕಾ, ಸತ್ಯಭಾಮಾ ಎಂಬುದಾಗಿ ಪ್ರಾಚೀನ ಭಾರತ ರಂಗಭೂಮಿಯಲ್ಲಿ ಬಳಕೆಯಲ್ಲಿದ್ದ ಅನೇಕಾನೇಕ ರಚನೆಗಳನ್ನು ಲಕ್ಷಣಸಂಬಂಧಿಯಾಗಿ ಉಲ್ಲೇಖಿಸಿದ್ದಾನೆ. ಅಬ್ಬಾ.., ಈತ ಎಷ್ಟು ನಾಟಕಾದಿ ರೂಪಕಗಳನ್ನು ನೋಡಿದ್ದಿರಬೇಡ ಮತ್ತು ಓದಿದ್ದಿರಬೇಡ?

ಇವುಗಳಲ್ಲಿ ನಾಟಕ, ಪ್ರಕರಣ, ಸಮವಕಾರ, ಈಹಾಮೃಗ, ವ್ಯಾಯೋಗ, ಪ್ರಹಸನ, ಡಿಮ, ಭಾಣ, ವೀಥೀ, ಅಂಕ ಎಂಬಿತ್ಯಾದಿ ದಶರೂಪಕಗಳಷ್ಟೇ ಅಲ್ಲದೆ ಉಪರೂಪಕ ಪ್ರಭೇದಗಳೂ ಇರುವುದು ತಿಳಿಯುತ್ತದೆ. ಈ ಉಪರೂಪಕಗಳು ಅಂದರೆ ಏನು ಗೊತ್ತೇ? ಭರತನ ನಾಟ್ಯಶಾಸ್ತ್ರದ ಅನಂತರದ ಕಾಲದಲ್ಲಿ ದಶರೂಪಕವನ್ನೇ ಹೋಲುವ ಆದರೆ ಕಥಾವಸ್ತು ಮತ್ತು ಕೆಲವೊಂದು ಸನ್ನಿವೇಶಗಳಲ್ಲಿ ಭಿನ್ನವೆನಿಸಿಕೊಂಡವು. ಕೊಂಚ ಮಟ್ಟಿಗೆ ನೃತ್ಯಪ್ರಧಾನವಾಗಿದ್ದ ರಂಗಭೂಮಿಯ ರಚನೆಗಳು ಇವು. ಅಭಿನವಗುಪ್ತನ ಅಭಿನವಭಾರತೀ, ಭೋಜರಾಜನ ಶೃಂಗಾರಪ್ರಕಾಶ, ಹೇಮಚಂದ್ರನ ಕಾವ್ಯಾನುಶಾಸನ, ರಾಮಚಂದ್ರ ಗುಣಚಂದ್ರರ ನಾಟ್ಯದರ್ಪಣ, ಶಾರದಾತನಯನ ಭಾವಪ್ರಕಾಶ, ವಿಶ್ವನಾಥ ಕವಿರಾಜನ ಸಾಹಿತ್ಯದರ್ಪಣ ಕೂಡಾ ಇಂಥ ಉಪರೂಪಕಗಳ ವಿಚಾರವನ್ನು ಲಕ್ಷಣೀಕರಿಸಿದೆ. ಹೀಗೆ ಕಂಡುಬರುವ ಉಪರೂಪಕಗಳ ಪೈಕಿ ಉಲ್ಲೋಪ್ಯಕ, ಗೋಷ್ಠಿ, ಭಾಣೀ, ಭಾಣಿಕಾ, ತ್ರೋಟಕ, ಧುರ್ಮೀಲಿಕಾ, ರಾಸಕ, ನಾಟ್ಯರಾಸಕ, ಪ್ರಸ್ಥಾನ, ಪ್ರೇಕ್ಷಣಕ, ಶ್ರೀಗದಿತ, ಹಲ್ಲೀಸಕ, ಶಿಲ್ಪಕ, ಸಟ್ಟಕ, ಸಲ್ಲಾಪಕ ಮೊದಲಾದ ಅನೇಕ ಉಪರೂಪಕಗಳ ಲಕ್ಷಣಗಳನ್ನು ಗಮನಿಸುವುದಕ್ಕೆ ನಾಟಕಲಕ್ಷಣರತ್ನಕೋಶವು ಕೂಡಾ ಮಹತ್ತ್ವದ ಗ್ರಂಥ.

ಭರತನ ನಾಟ್ಯಶಾಸ್ತ್ರವೇ ಹೇಳುವಂತೆ ನಾಟ್ಯವೇದವೆನ್ನುವುದು ಇತಿಹಾಸಗಳ ಸಂಕಲನ. ಅಂದರೆ ಹಿಸ್ಟರಿ, ಲೆಜೆಂಡ್, ಟ್ರೆಡಿಷನ್‌ಗಳ ಒಂದು ಸಮಗ್ರ ಗ್ರಂಥ. ನಾಟ್ಯಾಖ್ಯಂ ಪಂಚಮಂ ವೇದಂ ಸೇತಿಹಾಸಂ ಕರೋಮ್ಯಹಂ ಎಂದು ಸ್ವತಃ ಬ್ರಹ್ಮದೇವನಿಂದಲೇ ಉಕ್ತವಾಗುವ ಸಾಲುಗಳು ನಾಟ್ಯಶಾಸ್ತ್ರದ ಪ್ರಥಮಾಧ್ಯಾಯದಲ್ಲಿದೆ. ಈ ಇತಿಹಾಸ- ಇತಿ+ ಹ+ ಆಸ ಅಥವಾ ಇತಿಹ ಅಸ್ತೇಸ್ಮಿನ್ -ಅಂದರೆ ಹೀಗೆ ಆಯಿತು, ಹೀಗಿತ್ತು ಎನ್ನುವುದನ್ನು ತಿಳಿಯಪಡಿಸುವ ನಮ್ಮದೇ ಜೀವನದ ಹಿಂದಿನ ಸ್ಮರಣೆ. ಜೊತೆಗೆ ಈಗಿರುವ ನಾವು ನಾವೇನು? ನಮ್ಮತನ ಯಾವುದು? ನಮ್ಮ ಮೂಲ ಎಲ್ಲಿ? ಹೇಗೆ ಬದುಕಿದ್ದೆವು? ಯಾವ ರೀತಿ ಬದುಕಬಹುದು? ಯಾವುದಕ್ಕೆ ಯಾವುದು ಪರಿಣಾಮ – ಎಂಬೆಲ್ಲ ಹತ್ತು ಹಲವು ದಿಶೆಗಳಲ್ಲಿ ನಮ್ಮ ವರ್ತಮಾನ, ಭವಿಷ್ಯವನ್ನು ಅರಿತು ಬೆಳೆಸಿ ಭವ್ಯವಾಗಿಸುವ ಪ್ರಯತ್ನವೂ ಹೌದು. ಅದರಲ್ಲೂ ನಮ್ಮ ಭಾರತಕ್ಕಂತೂ ರಾಮಾಯಣ, ಮಹಾಭಾರತ, ಪುರಾಣ ಮೊದಲಾಗಿ ಇತಿಹಾಸದ ದೊಡ್ಡ ಬಲವೇ ಇದೆ. ಅಷ್ಟೇ ಅಲ್ಲ, ಇಂಥ ಎಷ್ಟೋ ಆಗಿಹೋದ ಘಟನೆಗಳನ್ನು ನಮ್ಮ ಶಾಸ್ತ್ರ ಮತ್ತು ಪ್ರಯೋಗಪ್ರಪಂಚಗಳು ಬಹಳ ಅಚ್ಚುಕಟ್ಟಾಗಿ ದಾಖಲಿಸುತ್ತಲೇ ಬಂದಿವೆ. ಹೇಗೆ ಅಂತೀರಾ? ಇಂಥ ದಶರೂಪಕ, ಉಪರೂಪಕಗಳೆಂಬ ಕಲಾತ್ಮಕ ಅಭಿವ್ಯಕ್ತಿಯ ಮೂಲಕ.

ಹಾಗಂತಲೇ ಅಭಿನವಗುಪ್ತಪಾದಾಚಾರ್ಯನ ನಾಟ್ಯಶಾಸ್ತ್ರ ವ್ಯಾಖ್ಯಾನವಾದ ಅಭಿನವಭಾರತಿಯು ಇತಿಹಾಸವೆಂದರೆ ದಶರೂಪಕಗಳು ಅಂದರೆ ವಿವಿಧ ಇತಿವೃತ್ತ ಕಥೆಗಳು ಎಂದೇ ಹೇಳುತ್ತದೆ. ಅಮರಕೋಶವೂ ಆಖ್ಯಾನ, ಪ್ರಾಚೀನವೃತ್ತಾಂತ, ವ್ಯಾಸಾದಿಪ್ರಣೀತಭಾರತಾದಿಗ್ರಂಥ, ಪೂರ್ವಚರಿತಪ್ರತಿಪಾದಕ, ಪುರಾವೃತ್ತಪ್ರತಿಪಾದಕ ಎನ್ನುತ್ತದೆ. ಈ ಕಥೆಗಳು ಕೇವಲ ಇಂದಿನ ಆಧುನಿಕ ಯುಗದ ಕಾರ್ಟೂನ್ ಕಥೆಗಳಂತಲ್ಲ ಅಥವಾ ನಮ್ಮ ಸಂಸ್ಕೃತಿಯನ್ನು ಜರೆಯುವವರು ಹೇಳುವಂಥ ಹುಟ್ಟಿಸಿದ ಕಥೆಗಳಲ್ಲ.- ಬದಲಾಗಿ ಧರ್ಮ- ಅರ್ಥ- ಕಾಮ- ಮೋಕ್ಷ ಎಂಬ ಚತುಷ್ಟಯಗಳ ಕುರಿತ ಉಪದೇಶ ಸಮನ್ವಿತವಾದ ಈ ಮಣ್ಣಿನಲ್ಲಿ ಆಗಿಹೋದ ಕಥೆಗಳು, ಹಾಗಾಗಿ ಇತಿಹಾಸವನ್ನೂ ಪಂಚಮವೇದ ಎನ್ನುತ್ತದೆ ವಾಚಸ್ಪತ್ಯ ಕೋಶ. ಅಷ್ಟಕ್ಕೂ ವೇದಗಳಿಂದ ಮೊದಲ್ಗೊಂಡು ರಾಮಾಯಣ, ಮಹಾಭಾರತ, ಪುರಾಣ, ನಾಟ್ಯಶಾಸ್ತ್ರ ಮೊದಲಾದವು ಭಾರತದ ಇತಿಹಾಸವೇ ಆಗಿದೆ. ಇನ್ನು ಕತೆಗಳಿಗೂ ಕಲೆಗಳಿಗೂ ಏನು ಸಂಬಂಧ ಅಂತೀರಾ?

ಅನೇಕಾನೇಕ ಕಥಾ ಪ್ರಪಂಚಗಳೊಂದಿಗೆ ಸದಾ ಬಾಂಧವ್ಯ ಹೊಂದಿರುವವು ನಮ್ಮ ಪ್ರದರ್ಶಕ ಕಲೆಗಳು ಅಥವಾ ಸಾಂಪ್ರದಾಯಿಕ ರಂಗಭೂಮಿ. ಇವು ಯಾವುದೇ ಉಪದೇಶಾತ್ಮಕ ಕಥೆಗಳನ್ನು ಅತ್ಯಂತ ರಮ್ಯವಾಗಿ ಆಸ್ವಾದನೀಯವಾಗಿ ಪ್ರೇಕ್ಷಕರ ಮನಕ್ಕೆ ಹೊಗಿಸುವಂಥ ಶಕ್ತಿಯುಳ್ಳವು. ನಮ್ಮೆಲ್ಲರ ಚಿತ್ತದ ಭಾವದ ನಂಟು ಇವುಗಳಿಗಿದೆ. ಹಾಗಾಗಿ ಸಾಂಪ್ರದಾಯಿಕ ಕಲೆ, ಕಥಾವಸ್ತು ಅವುಗಳ ಬಗೆಗಿನ ಗ್ರಂಥಗಳನ್ನು ಅಧ್ಯಯನ ಮಾಡುವುದೆಂದರೆ ನಮ್ಮ ಭಾರತವನ್ನು ಅರಿಯುವುದೇ ಆಗಿದೆ. ಭರತನೇ ಹೇಳುವಂತೆ ಇಲ್ಲಿರುವುದು ಬೇರೆಲ್ಲೂ ಇಲ್ಲ. ಇಲ್ಲಿಲ್ಲವೆಂದರೆ ಅದು ಲೋಕದಲ್ಲೆಲ್ಲೂ ಇಲ್ಲ. ಇಂಥ ಇತಿಹಾಸವನ್ನು ಓದಿ ಅರಿಯುವ ಪ್ರಯತ್ನ ನಿತ್ಯ ನಮ್ಮದಾಗಬೇಕು. ಆಗಲೇ ಭಾರತೀಯರಾದದ್ದಕ್ಕೂ ಸಾರ್ಥಕ ಮತ್ತು ಈ ಪುಣ್ಯಭೂಮಿಯ, ನಮ್ಮ ಪೂರ್ವಜರಾದ ಋಷಿಗಳ ಋಣ ಸಂದಾಯವಾಗುತ್ತದೆ. ಮತ್ತು ಶಾಲಾ ಶಿಕ್ಷಣದಲ್ಲಿ ಉದ್ದೇಶಪೂರ್ವಕವಾಗಿ ಹೊಗಿಸಲಾದ ಇತಿಹಾಸಕ್ಕೆ ಪೂರ್ಣವಿರಾಮ ಬೀಳುತ್ತದೆ. ಹಿಸ್ಟರಿ ಅಂದರೆ ಮೂಗು ಮುರಿಯುವ ಮನಸ್ಸೂ ಕೂಡಾ ಮೂಗಿನ ಮೇಲೆ ಬೆರಳಿಟ್ಟು ಕೇಳುತ್ತದೆ. ಇದು ಭಾರತವು ನಿರೀಕ್ಷಿಸುತ್ತಿರುವ ನಿಜವಾದ ಶಿಕ್ಷಣ, ಬುದ್ದಿ ಪ್ರಕಾಶವಾಗುವ ವಿದ್ಯೆ.

ಒಟ್ಟಿನಲ್ಲಿ ತಂತು ಕಡಿಯದ ಅನೂಚಾನವಾದ, ಅವಿಚ್ಛಿನ್ನವಾದ ಭಾರತದೃಷ್ಟಿಯ ವಿದ್ಯೆಯಾಗಿ ವೇದವಾಗಿ ನಾಟ್ಯವು ಪ್ರವಹಿಸಿಕೊಂಡೇ ಬಂದಿದೆ. ಅದರ ಅಂಗಭಾಗಗಳಾದ ನೃತ್ತ-ನೃತ್ಯ, ಕಾವ್ಯ, ಗೀತ, ಅಲಂಕಾರ, ಶಿಲ್ಪಕ್ಷೇತ್ರಗಳು ಅಮೂಲ್ಯವೂ ಅರ್ಥಗರ್ಭಿತವೂ ಆದ ಭಾರತದರ್ಶನಕ್ಕೆ ಸಹಕರಿಸುವಂಥ ಶಾಖೆಗಳು. ಇವುಗಳನ್ನು ಸಾದರಪಡಿಸುವಂತೆ ಭಾರತದ ಬಹುತೇಕ ಎಲ್ಲ ಲಾಕ್ಷಣಿಕರ ಗ್ರಂಥಗಳ ಕಡೆಗೂ ನಮ್ಮ ಶಾಸ್ತ್ರರಂಗದ ಮೂಲಕ ಪಕ್ಷಿನೋಟ ಮಾಡಿಕೊಂಡು ಬರುವುದು ನೂಪುರ ಭ್ರಮರಿಯ ಹೆಮ್ಮೆಗಳಲ್ಲೊಂದು.

 

Reference books

Natakalakshanaratnakosha of Sagaranandin. 1972. Babulal Shukla Shastri (Ed). Chowkambha Sanskrit Series. https://archive.org/details/in.ernet.dli.2015.408248

Nataka Lakshan Ratna Kosha. 1974. Ed Siddheshwar Chattopadhyaya. Calcutta : Punthi Pusthak

Natyashastra with Abhinavabharati Commentary. 2012. Ed R S Nagar. Delhi : Parimal Publication

Leave a Reply

*

code