ಶಾಸ್ತ್ರರಂಗ ಭಾಗ ೧ : ದಾಕ್ಷಿಣಾತ್ಯ (Video series)-ಸಂಚಿಕೆ 19-ನಿಜಗುಣಶಿವಯೋಗಿಗಳ ವಿವೇಕಚಿಂತಾಮಣಿ

Posted On: Sunday, February 18th, 2024
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ ೧ : ದಾಕ್ಷಿಣಾತ್ಯ
ಸಂಚಿಕೆ ೧೯- ಕನ್ನಡದ ವಿಶ್ವಕೋಶ ಗ್ರಂಥ ನಿಜಗುಣಶಿವಯೋಗಿಗಳ ವಿವೇಕಚಿಂತಾಮಣಿ

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 1- Dākșiṇātya
Episode 19- 19- Kannada encyclopedic treatise Nijaguna Shivayogi’s Viveka Cintamaṇi

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Crossfade studio, Bengaluru

 

ಲೇಖನ

Authored by ಡಾ.ಮನೋರಮಾ ಬಿ.ಎನ್.

 

ಕರ್ನಾಟಕದ ಕೊಳ್ಳೇಗಾಲ ತಾಲೂಕು ಯಳಂದೂರು ಚಿಲಕವಾಡಿ ಬಳಿಯ ಶಂಭುಲಿಂಗ ಬೆಟ್ಟದಲ್ಲಿ ತಪೋಗೈದು ಶಿವಯೋಗಿಗಳಾಗಿದ್ದ ನಿಜಗುಣರು ಬರೆದ ಗ್ರಂಥ ವಿವೇಕ ಚಿಂತಾಮಣಿ. ವಿವಿಧ ಶಾಸ್ತ್ರವಿವೇಕವನ್ನೀಯುವ ಅನರ್ಘ್ಯ ರತ್ನ ಎಂಬ ಅರ್ಥದ ಹೆಸರುಳ್ಳದ್ದು. . ಸೋಮೇಶ್ವರನ ಮಾನಸೋಲ್ಲಾಸದ ಬಳಿಕ ಕಾಣಸಿಗುವ ವಿಶ್ವಕೋಶವಿದು. ಮಾನಸೋಲ್ಲಾಸದ ಭಾಷೆ ಸಂಸ್ಕೃತ. ಆದರೆ ವಿವೇಕ ಚಿಂತಾಮಣಿಯು ಕನ್ನಡದಲ್ಲೇ ಬರೆಯಲಾದ ಪ್ರಪ್ರಥಮ ವಿಶ್ವಕೋಶ. ಇದರ ಕಾಲಮಾನ ಅಂದಾಜು ೧೬೦೦ನೇ ಇಸವಿ. ಶಿವಯೋಗಿಗಳಾಗಿದ್ದ ನಿಜಗುಣರು ಕೈವಲ್ಯ ಪದ್ಧತಿ, ಪರಮಾನುಭವ ಬೋಧ, ಪರಮಾರ್ಥಗೀತೆ ಮತ್ತು ಪರಮಾರ್ಥ ಪ್ರಕಾಶಕ ಎಂಬ ಗ್ರಂಥಗಳನ್ನೂ ಬರೆದಿದ್ದಾರೆ.

ಗ್ರಂಥವಿಶೇಷ, ಅಧ್ಯಾಯ ಕ್ರಮ

ವಿವೇಕ ಚಿಂತಾಮಣಿ ಗ್ರಂಥವು ೧೬, ೧೭ ಮತ್ತು ೧೮ನೇ ಶತಮಾನಗಳಲ್ಲೇ ಮರಾಠಿ, ತಮಿಳು, ಸಂಸ್ಕೃತಕ್ಕೂ ಅನುವಾದಗೊಂಡಿದೆ. ಇದು ಒಟ್ಟು ಹತ್ತು ಪರಿಚ್ಛೇದ ಅಂದರೆ ಅಧ್ಯಾಯಗಳನ್ನು ಹೊಂದಿದ್ದು, ಅಲೌಕಿಕವೂ ಲೌಕಿಕವೂ ಎನಿಸುವ ೭೬೫ ವಿಷಯಗಳನ್ನು ವಿವರಿಸಿದೆ. ಆ ಪೈಕಿ ವೇದ, ಪುರಾಣ, ಉಪನಿಷತ್, ಶಾಸ್ತ್ರಾದಿಗಳು, ಇತಿಹಾಸ, ಚತುರ್ದಶವಿದ್ಯೆಗಳು, ಅಧಿಕಾರ ಚತುಷ್ಟಯ, ವಿವಿಧ ಸಿದ್ಧಾಂತ ಮತ್ತು ಮೀಮಾಂಸೆಗಳು, ನ್ಯಾಸಭೇದಗಳು, ದರ್ಶನತತ್ತ್ವಗಳು, ವರ್ಣಾಶ್ರಮ, ಷೋಡಶಕರ್ಮಗಳು, ಗಾಯತ್ರೀ ಜಪವಿಧಾನವೇ ಮೊದಲಾಗಿ ವಿವಿಧ ಮಂತ್ರಾಂಗ-ಧ್ಯಾನ- ಜಪ-ಪೂಜಾಲಕ್ಷಣಗಳು, ಯಜನಪ್ರಕ್ರಿಯೆ, ಶೈವ ಆಗಮಗಳು, ವೀರಶೈವ ಪೂಜಾವಿಧಿಗಳು, ಯೋಗ ಮತ್ತು ದೋಷಾದಿ ಲಕ್ಷಣಗಳು, ವಿವಿಧ ದೇವತೆಗಳು, ಆಯುಧಭೇದಗಳು, ವೇದಾಂತ, ಅದ್ವೈತಗಳನ್ನು ವಿವರಿಸಿದೆ. ಅಂತೆಯೇ ಜ್ಯೋತಿಷ್ಯ, ಶಕುನಗಳು, ನರಕಸ್ವರೂಪ- ಪಾತಕವಿಚಾರಗಳು, ಸುಖಸಾಧನಗಳು, ವೈಕಲ್ಯಗಳು, ಸೃಷ್ಟಿ ಮತ್ತು ವಿವಿಧ ಲೋಕವಿಚಾರ, ಸಪ್ತದ್ವೀಪಗಳು, ಗ್ರಹವ್ಯವಸ್ಥೆ, ಭೂಲೋಕದ ವಿವಿಧ ಮಾಹಿತಿಗಳು, ಪಂಚಭೂತ, ಸಂವತ್ಸರಾದಿ ಕಾಲಭೇದಗಳು, ಛಪ್ಪನ್ನಾರು ದೇಶಗಳು, ಭರತವರುಷ- ಭರತಖಂಡದ ವ್ಯವಸ್ಥೆ, ಜನರು, ನದಿ-ಸಮುದ್ರ-ದ್ವೀಪ-ವೃಕ್ಷ- ಮೃಗ ಸ್ವರೂಪಗಳು, ಪುಣ್ಯಕ್ಷೇತ್ರಗಳು- ಶಕ್ತಿಪೀಠಗಳು- ಮುಕ್ತಿಕ್ಷೇತ್ರಗಳೇ ಮೊದಲಾಗಿ ಆಧಿದೈವಿಕ ಆಧಿಭೌತಿಕ, ಆಧ್ಯಾತ್ಮಿಕವೆನಿಸುವ ಎಲ್ಲ ವಿಚಾರಗಳನ್ನೂ ಚರ್ಚಿಸಿದೆ. ಜೊತೆಗೆ ಉಪಭೋಗಗಳು, ವಿನೋದಗಳು ಎನಿಸುವ ರಾಜನ ಆಸ್ಥಾನ-ರಾಜಸಭೆ-ಸ್ವರ- ರಾಗ- ಸಂಗೀತ-ನೃತ್ಯ-ಗಮಕ-ಛಂದಸ್ಸು-ಮಹಾಕಾವ್ಯ- ಅಲಂಕಾರ- ಸಾಹಿತ್ಯಿಕ ವಿಷಯಗಳು- ವಿವಿಧ ಭಾವಗಳು-ನವರಸ- ನಾಯಿಕಾ ನಾಯಕ ಸಖ್ಯಾದಿ ಭೇದಗಳು, ನಾನಾ ಮತವಾದಿಗತಿಗಳು ವಿಷಯಪ್ರಪಂಚವೆಲ್ಲವನ್ನೂ ಸಂಕ್ಷಿಪ್ತವಾಗಿ ಹೇಳಿದೆ.

ಈ ಗ್ರಂಥದ ಬರೆವಣಿಗೆ ನಡುಗನ್ನಡದಲ್ಲಿದ್ದು ಗದ್ಯಭಾಗಗಳೇ ಹೆಚ್ಚಿವೆ. ಉದಾಹರಣೆಗೆಂದು ಗಮನಿಸುವುದಾದರೆ- ಭರತಖಂಡದ ಭರತದೇಶದ ಜನರ ಬಗ್ಗೆ ಶಿವಯೋಗಿಗಳು ಬರೆದ ಭಾಗದಲ್ಲಿ ನಾಲ್ಕು ಸಾಲುಗಳು ಹೀಗಿವೆ-

ನೂರಯಿಪ್ಪತ್ತೆರಡು ಯೋಜನದ ವರ್ಗಮಾದ ನಾಲ್ಕುಲಕ್ಷದೈವತ್ತೊಂದು ಸಾವಿರದೈನೂರೊಂಭತ್ತು ಯೋಜನಂಗಳ ಚತುರಮಷ್ಟ ರಾಮಸೇತು ಹಿಮಾಚಲಮಧ್ಯದೊಳು ಚಾತುರ್ವರ್ಣಿಕರುಂ ಹದಿನೆಂಟುಜಾತಿಗಳವರುಂ ನೂರೊಂದುಕುಲದವರುಂ ಸಾವಿರದೆಂಟುನೂರಬಗೆಯವರುಂ ತೊಂಭತ್ತೆರಡು ವಿಭಿನ್ನವಾದಿಗಳುಂ ಕೂಡಿದಾರು ಮತದವರುಂ ಇವರೆಲ್ಲರೊಳು ಚರಮಶರೀರಗಳೆನಿವ ಸಿದ್ಧಾಂತಿಗಳುಂ ಮತ್ತು ಕ್ಷೇತ್ರಯೋನಿವಿಕಲ್ಪಗಳಿಂ ಸಂಕರಜಾತೀಯರು ಪೇಳ್ದೆಲ್ಲರೊಳುಂ ಬೇರೆ ಬೇರೆ ಸಾರಿಪ್ರದಾಯಿಕರೆಂಬಾಸ್ತಿಕಸಂಬಂಧಿಗಳುಮಲ್ಲದೆ ನಾಸ್ತಿಕರೊಳು ಯವನ ಮ್ಲೇಚ್ಛ ತುರುಷ್ಕ ಪಾಶ್ಚಾತ್ಯರೆಂಬ ಚತುರ್ವಿಧಘಾತದಕ ಜಾತೀಯರುಂ

ಎಂದೆಲ್ಲಾ ಹೇಳುತ್ತಾ ವಿವಿಧ ಮತ- ನೀತಿ-ನಡತೆ-ವಿದ್ವತ್ತು ಇರುವ ಜನರನ್ನೆಲ್ಲ ಶ್ರೇಣೀಕರಿಸುತ್ತಾ ಸಾಗುತ್ತಾರೆ.

ಸಮಾರೋಪ

ಶಿವಯೋಗಿಗಳಿಗೆ ಇದ್ದ ತ್ರಿಕಾಲಪರಿಜ್ಞಾನ, ಲಕ್ಷ್ಯ-ಲಕ್ಷಣ ಶಾಸ್ತ್ರಪರಿಚಯವನ್ನು ಗಮನಿಸಿದಾಗ ನಮ್ಮ ಭಾರತ, ಭಾರತ ದೇಶದ ವಿದ್ಯೆ- ವಿವೇಕಗಳ ಅಗಾಧತೆ, ಸನಾತನಧರ್ಮದ ವೈಶಾಲ್ಯವೆಲ್ಲವೂ ಶ್ರೀಮಂತ-ಸಂಪದ್ಭರಿತ- ಪುಣ್ಯದೇಶವೆಂದು ಸಾರಿ ಹೇಳುತ್ತಲೇ ಇರುತ್ತದೆ. ಅದರಲ್ಲೂ ಎಲ್ಲ ಪ್ರಾಂತ್ಯಕ್ಕಿಂತಲೂ ಒಂದು ಪಟ್ಟು ಮಿಗಿಲೆಂಬಂತೆ ಕರ್ನಾಟಕದ, ಕರ್ನಾಟಕದಿಂದ ಬಂದ ಶಾಸ್ತ್ರಪ್ರಪಂಚವು ಅನುಪಮ, ಅನನ್ಯವೆನಿಸುವ ಶಾಸ್ತ್ರ-ಪ್ರಯೋಗಗಳ ಸಮಾಹಾರವಾದ ರತ್ನಗಳನ್ನೇ ಕೊಟ್ಟಿದೆ.

ಪರಾಮರ್ಶನ ಗ್ರಂಥಗಳು

ಶ್ರೀ ಸೋಮೇಶ್ವರ ಭೂಪತಿ ವಿರಚಿತ ಮಾನಸೋಲ್ಲಾಸ, ಪ್ರಧಾನ ಸಂಪಾಕದರು – ಪ್ರೊ ಮಲ್ಲೇಪುರಂ ವೆಂಕಟೇಶ. 2015. ಕರ್ನಾಟಕ ಸಂಸ್ಕೃತವಿಶ್ವವಿದ್ಯಾನಿಲಯ ಮತ್ತು ದರೇಸ ಪಬ್ಲಿಕೇಶನ್ ನ ಪ್ರಕಟಣೆ.

ನಿಜಗುಣಶಿವಯೋಗೀಂದ್ರವಿರಚಿತಮಾದ ವಿವೇಕಚಿಂತಾಮಣಿ. (೧೯೦೯). ಬೆಂಗಳೂರು: ಎಂ. ವೆಂಕಟಾಚಲ ಶೆಟ್ಟರು, ಚಿಕ್ಕಪೇಟೆ ಬುಕ್ ಡಿಪೋ.

https://archive.org/details/OYOz_vivek-chintamani-of-nijagun-shivayogi-by-pt.-avalikar-series-no.-1-pune-vidyalay

https://archive.org/details/dli.ernet.554363

Leave a Reply

*

code