ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ (Video series)-ಸಂಚಿಕೆ 61; ಹಸ್ತಮುದ್ರಾ ಶಾಸ್ತ್ರವಿಚಾರದ ಗ್ರಂಥಗಳು

Posted On: Sunday, December 8th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ

ಸಂಚಿಕೆ 61 : ಕೇರಳದ ಹಸ್ತಲಕ್ಷಣದೀಪಿಕಾ, ಶುಭಂಕರನ ಹಸ್ತಮುಕ್ತಾವಳಿ, ರಾಜಾ ರಾಘವರಾಯನು ಬರೆದ ಶ್ರೀಹಸ್ತರತ್ನಾವಳಿ, ಘನಶ್ಯಾಮನ ಹಸ್ತಮುಕ್ತಾವಳೀಸಾರಸಮುದ್ರಿತಿಕಾ ಮೊದಲಾದ ಹಸ್ತಾಭಿನಯ ಶಾಸ್ತ್ರಗ್ರಂಥಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 5 : Dākśinātya (Southern Region of Ancient Bhārata)

Episode 61 : Unique Texts on Hastābhinaya such as Hasthalaksanadīpika from Kerala, Hastamuktāvali by Shubhankara, Srihastaratnāval̥i by Raja Raghavaraya, Hastamuktavali sāra samudritika by Ghanshyama.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha &

Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಅಭಿನಯವೆಂದರೇನೇ ಸಂವಹನ ಕಲೆ. ನಮ್ಮ ಅಭಿಪ್ರಾಯ-ಉದ್ದೇಶ-ಮಾತುಗಳನ್ನು ಮತ್ತೊಬ್ಬರಿಗೂ ಅರ್ಥವಾಗುವಂತೆ ಮಾಡುವ ಕ್ರಮವೇ ಅಭಿನಯ. ಆದ್ದರಿಂದ ದೇಹದ ಅಂಗೋಪಾಂಗಗಗಳನ್ನು ಹಸ್ತದ ಜೊತೆ ಹೇಗೆ ಹೊಂದಿಸಿ ಇನ್ನೊಬ್ಬರಿಗೆ ಅರ್ಥವಾಗುವಂತೆ ಬಳಸುತ್ತೇವೆ ಎನುವುದು ಹಸ್ತಾಭಿನಯದ ಮರ್ಮ.

ಇಂದಿಗೆ ಹಸ್ತಾಭಿನಯವನ್ನೇ ಪ್ರಮುಖತಃ ಆಚರಿಸುವ ಎಷ್ಟೋ ಕಲೆಗಳು ಇವೆ. ಅದರಲ್ಲೂ ಆಂಗಿಕಾಭಿನಯವನ್ನೇ ಪ್ರಧಾನವಾಗಿ ಆಚರಿಸುವ ನೃತ್ಯದಂಥ ಕಲೆಗಳಿಗೆ ತಮ್ಮ ಅಭಿವ್ಯಕ್ತಿಯ ಸಂವಹನಕ್ಕೆ ಇರುವ ಕೀಲಿಕೈ ಹಸ್ತಾಭಿನಯವೇ ಆಗಿದೆ.

ಹಸ್ತ- ಮುದ್ರೆಗಳ ವ್ಯತ್ಯಾಸ- ಶಾಸ್ತ್ರ ಲಕ್ಷಣ

ಹಸ್ತಾಭಿನಯವು ದೇಹದ ಶಾಖೆಗಳಲ್ಲಿ ಒಂದು ಅಂದರೆ ಅಂದರೆ ದೇಹವೆಂಬ ಮರಕ್ಕೆ ಕೊಂಬೆಗಳು ಇದ್ದಂತೆ ಈ ಹಸ್ತಗಳು ಎಂಬ ಅರ್ಥದಲ್ಲಿ ನಾಟ್ಯಶಾಸ್ತ್ರದಿಂದ ಮೊದಲ್ಗೊಂಡು ಈ ಕ್ಷೇತ್ರ ಪ್ರಸಿದ್ಧವಾಗಿದೆ. ಇದೇ ಹಸ್ತಗಳನ್ನು ನಿರ್ದಿಷ್ಟ ಉದ್ದೇಶ, ಪ್ರಯೋಜನಕ್ಕೆಂದು ಬಳಸುವಾಗ ಮುದ್ರೆಗಳು ಎಂಬ ಪರಿಭಾಷೆಯನ್ನು ಬಳಸಲಾಗುತ್ತದೆ. ಅಂದರೆ ಚಿಕಿತ್ಸೆಯ ಉದ್ದೇಶದಿಂದ ಇಲ್ಲವೇ ಯೋಗ-ಆಗಮ ಪೂಜಾಪದ್ಧತಿಗಳಿಗೆ ಹಸ್ತಗಳನ್ನು ಬಳಸುವಾಗ ಕೈಯ ವಿವಿಧವಿಧವಾದ ಸಂಯೋಗದಿಂದ ನಿರ್ದಿಷ್ಟ ಪರಿಣಾಮಗಳು ಉಂಟಾಗುವುದಲ್ಲ; ಅವೇ ಮುದ್ರೆಗಳು. ಅಭಿನಯಕ್ಕಾಗುವಾಗ ಹಸ್ತಗಳು. ನಿರ್ದಿಷ್ಟ ಉದ್ದೇಶ, ಪ್ರಯೋಜನಕ್ಕೆ ಸಾಧನೆ ಮಾಡುವಾಗ ಅವು ಮುದ್ರೆಗಳು. ಹಸ್ತ ಮತ್ತು ಮುದ್ರೆ- ಈ ಎರಡೂ ಪರಿಭಾಷೆಗೂ ಅದರದ್ದೇ ಆದ ಅರ್ಥವ್ಯತ್ಯಾಸ ಇದೆ.

ಬಹುತೇಕ ಲಕ್ಷಣಗ್ರಂಥಗಳಲ್ಲೂ ಹಸ್ತಗಳ ವಿನಿಯೋಗದಲ್ಲಿ ಆರು ಆಚಾರ್ಯರಾದ ಬೃಹಸ್ಪತಿ, ಶುಕ್ರ, ಆಂಜನೇಯ, ದತ್ತಿಲ, ನಾರದ, ಕೋಹಲರೆಂಬ ಐತಿಹಾಸಿಕ ಪುರುಷರ ಉಲ್ಲೇಖಗಳು ಪ್ರಧಾನವಾಗಿ ಕಂಡುಬಂದಿವೆ. ಕೆಲವೊಮ್ಮೆ ಅರ್ಜುನ, ಯಾಜ್ಞವಲ್ಕ್ಯ, ರಾವಣ, ಉಷೆ, ವಿಘ್ನೇಶ್ವರ, ಸುಬ್ರಹ್ಮಣ್ಯ, ಗರುಡ ಮೊದಲಾದ ಅನೇಕ ಪುರಾಣ ಪುರುಷರು ಹೇಳಿದ್ದಾರೆ ಎಂಬ ಉಲ್ಲೇಖಗಳನ್ನೂ ಗುರುತಿಸಬಹುದು.

ಹಸ್ತಾಭಿನಯ ಪ್ರಾಶಸ್ತ್ಯದ ಗ್ರಂಥಗಳು ಮತ್ತುಗಳ ಲಕ್ಷಣ ವಿಚಾರ

ಸರ್ವೇಸಾಮಾನ್ಯವಾಗಿ ಎಲ್ಲ ನೃತ್ಯಲಕ್ಷಣಗ್ರಂಥಗಳಲ್ಲೂ ಹಸ್ತಾಭಿನಯದ ಪ್ರತ್ಯೇಕ ಅಧ್ಯಾಯವನ್ನು ಗುರುತಿಸಬಹುದು. ಅದರಲ್ಲೂ ಹಸ್ತಾಭಿನಯಕ್ಕೆ ಪ್ರಾಶಸ್ತ್ಯ ಇರುವ ನಂದಿಕೇಶ್ವರನ ಸಂಪ್ರದಾಯ, ಅದರಲ್ಲೂ ಅಭಿನಯದರ್ಪಣ, ಭರತಾರ್ಣವದಲ್ಲಿದೆ[1]. ಅದಲ್ಲದೆ, ಓಡ್ರಮಾಗಧೀ ಪ್ರವೃತ್ತಿಯ ಗ್ರಂಥಗಳ ಬಗ್ಗೆ ಹೇಳುವಾಗ ಹಸ್ತಾಭಿನಯವನ್ನೇ ಪ್ರಧಾನವಾಗಿ ಲಕ್ಷಣೀಕರಿಸಿ ಬರೆದ ಶುಭಂಕರನ ಹಸ್ತಮುಕ್ತಾವಳಿ ಗ್ರಂಥವೂ ಇದೆ. ಕುಶೀನರ ಅಥವಾ ಕುಶೀನಗರವೆಂಬ ತನ್ನ ಪ್ರದೇಶದ ಜನರು ಹಸ್ತಶಾಸ್ತ್ರವನ್ನು ಅರಿತಿದ್ದಾರೆ ಎಂಬ ಅಂಶವನ್ನು ಶುಭಂಕರನ ಗ್ರಂಥವು ಹೇಳಿದೆ. ಶುಭಂಕರನ ಅನಂತರಕ್ಕೆ ನವದ್ವೀಪದ ರಾಜಾ ರಾಘವರಾಯನು ಬರೆದ ಶ್ರೀಹಸ್ತರತ್ನಾವಳಿ, ಘನಶ್ಯಾಮನ ಹಸ್ತಮುಕ್ತಾವಳೀಸಾರಸಮುದ್ರಿತಿಕಾ ಗ್ರಂಥಗಳು ಈ ಕ್ಷೇತ್ರದಲ್ಲಿ ಮುಖ್ಯವೆನಿಸುತ್ತವೆ. ಇವುಗಳಲ್ಲಿ ರಾಜಾ ರಾಘವರಾಯನ ಗ್ರಂಥ ಸಂಪೂರ್ಣವಾಗಿ ದೊರಕುವುದಿಲ್ಲ.

ಹಸ್ತಲಕ್ಷಣದೀಪಿಕಾ

ವರ್ತಮಾನದಲ್ಲಿ ಹಸ್ತಲಕ್ಷಣದೀಪಿಕಾ ಎಂಬುದು ಕಥಕಳಿ- ಮೋಹಿನಿಯಾಟ್ಟಂ ಕಲೆಗಳಿಗೆ ಆಧಾರಪ್ರಾಯಿಯೆನಿಸುವ ಗ್ರಂಥ. ಹಸ್ತಲಕ್ಷಣಗಳಿಗೆ ಹಿಡಿದ ಬೆಳಕು ಎಂಬರ್ಥದ ಈ ಗ್ರಂಥ ಕೇರಳ ರಾಜ್ಯದ್ದು. ಬಹಳ ಪ್ರಾಚೀನದ್ದೆಂದು ಅನಿಸುವುದಿಲ್ಲ. ಬದಲಾಗಿ ಇತ್ತೀಚಿನ ಶತಮಾನಗಳಲ್ಲಿ ಸಂಗ್ರಹವಾದದ್ದು ಎಂಬುದಾಗಿ ಲಕ್ಷಣವಿಚಾರಗಳನ್ನು ಗಮನಿಸಿದಾಗ ತಿಳಿಯುತ್ತದೆ. ಕಡತನಾಟ್ಟ್ ಉದಯವರ್ಮ ತಂಪೂರನ್ ಸಂಕಲಿಸಿದ ಈ ಗ್ರಂಥವನ್ನು ಮೂಲದಲ್ಲಿ ಬರೆದವರು ಯಾರೆಂಬುದು ಈವರೆಗೆ ತಿಳಿದುಬಂದಿಲ್ಲ. ಈ ಅರ್ವಾಚೀನ ಗ್ರಂಥವು ೧೮೯೨ನೇ ಇಸವಿಯಲ್ಲಿ ಪ್ರಕಟವಾಗಿದೆ.

ಈ ಹಸ್ತಲಕ್ಷಣದೀಪಿಕಾ ಗ್ರಂಥದಲ್ಲಿ ಕೇವಲ ೨೪ ಹಸ್ತಗಳನ್ನು ಮೂಲಹಸ್ತಗಳೆನ್ನಲಾಗಿದೆ. ಇವುಗಳ ವಿನಿಯೋಗದಲ್ಲಿ ಅಸಂಯುತ- ಅಂದರೆ ಒಂದೇ ಕೈಯಿಂದ ಮಾಡುವ ಹಸ್ತಗಳು, ಸಂಯುತ- ಎರಡೂ ಕೈಗಳನ್ನು ಬಳಸಿ ಮಾಡುವಂಥವು ಹಾಗೂ ಮಿಶ್ರ ಎಂಬ ಮೂರು ವಿಂಗಡಣೆಗಳಿದ್ದು, ಈ ವಿಭಜನೆಗೆ ಅನುಗುಣವಾಗಿ ೮೦೦ಕ್ಕೂ ಹೆಚ್ಚು ಪ್ರಯೋಗಗಳನ್ನು ಉಳ್ಳ ಒಂದು ಹಸ್ತಭಾಷಾ ನಿಘಂಟು ಎಂದೇ ಇದನ್ನು ಕರೆಯಬಹುದು. ಈ ೨೪ ಹಸ್ತಗಳ ಹೆಸರುಗಳು ಅದೆಷ್ಟೋ ಗ್ರಂಥಗಳಲ್ಲಿರುವ ಪರಿಭಾಷೆಗಳೇ ಆಗಿದ್ದರೂ ಇವುಗಳ ಲಕ್ಷಣ ಮತ್ತು ವಿನಿಯೋಗಗಳಲ್ಲಿ ಬಹಳ ವ್ಯತ್ಯಾಸವನ್ನು ಕಾಣಬಹುದು. ಉದಾಹರಣೆಗೆ ಪತಾಕವೆಂಬ ಹಸ್ತ. ಹಸ್ತಲಕ್ಷಣದೀಪಿಕಾದಲ್ಲಿ ಪತಾಕ ತ್ರಿಪತಾಕವೆಂಬ ಹೆಸರನ್ನೂ ತ್ರಿಪತಾಕ ಹಸ್ತವು ಪತಾಕ ಎಂಬ ಹೆಸರನ್ನು ತಾಳುವ ಮಟ್ಟಿಗೆ ವ್ಯತ್ಯಾಸಗಳು ಸ್ಪಷ್ಟವಾಗಿವೆ. ಹೀಗೆ ನಾಟ್ಯಶಾಸ್ತ್ರ ಮತ್ತು ಉಳಿದ ಮಾರ್ಗೋತ್ತರ ಹಸ್ತಲಕ್ಷಣಗಳಿಗಿಂತ ಸಾಕಷ್ಟು ರೀತಿಗಳಲ್ಲಿ ಭಿನ್ನ ಲಕ್ಷಣವುಳ್ಳ ಇದು ಕೇರಳ ಭಾಗಕ್ಕೇ ಮೀಸಲಾದದ್ದು ಎಂದು ಅರ್ಥವಾಗುತ್ತದೆ. ಏಕೆಂದರೆ ಕೇರಳದ ಕಲೆಗಳನ್ನು ಹೊರತುಪಡಿಸಿ ಉಳಿದ ನೃತ್ಯ ಅಥವಾ ರಂಗಭೂಮಿ ಈ ಗ್ರಂಥವನ್ನು ಅನುಸರಿಸುವುದಿಲ್ಲ.

ಸಮಾಪನ

ದೇಹಭಾಷೆಯಲ್ಲಿ ಹಸ್ತಗಳು ಮುಖ್ಯವೆನ್ನುವುದೇನೋ ನಿಜ. ಹಾಗೆಂದು ಹಸ್ತಗಳನ್ನು ಪ್ರದರ್ಶಿಸಿದಾಕ್ಷಣ ಅದು ಅಭಿನಯವಾಗದು. ಹಾಗೆಯೇ ನೃತ್ಯದ ಶಾಸ್ತ್ರವೆಂದರೆ ಹಸ್ತ-ವಿನಿಯೋಗಗಳಷ್ಟೇ, ಅವನ್ನು ಮಾಡಿದಲ್ಲಿಗೆ ಅಭಿನಯದ ಕೆಲಸ ಮುಗಿಯಿತು ಎಂಬ ಅಭಿಪ್ರಾಯಗಳೂ – ಅಭಿನಯದ ವ್ಯಾಪ್ತಿಯನ್ನು ಸೀಮಿತ ಮಾಡಿಸಿಬಿಡುತ್ತದೆ. ಎಷ್ಟರಮಟ್ಟಿಗೆಂದರೆ ಹಸ್ತವಿನಿಯೋಗಗಳನ್ನು ಪ್ರತಿಪಾದಿಸುವ ಗ್ರಂಥವನ್ನೇ ಆಧಾರಗ್ರಂಥವಾಗಿಸಿಕೊಳ್ಳಬೇಕು, ಆಗಷ್ಟೇ ಕಲೆ ಬೆಳೆಯುತ್ತದೆ ಎಂಬಷ್ಟರ ಮಟ್ಟಿಗೆ ಯೋಚಿಸುವಂತಾದರೆ ಮಿಕ್ಕೆಲ್ಲ ಅಭಿನಯಗಳೂ ಕ್ಷೀಣವಾಗುತ್ತವೆ. ಇರಲಿ, ಹಸ್ತದ ಮೂಲಕ ದೇಹವನ್ನು ಸರಿಯಾಗಿ ಕಲಾಭಿವ್ಯಕ್ತಿಗೆ ಬಳಸಿಕೊಳ್ಳುವ ಅಭಿನಯಕಲೆ ನಿತ್ಯವೂ ಪ್ರವರ್ಧಿಸಲಿ ಎಂದು ನಮ್ಮ ಆಶಯ ಕೂಡಾ. ಈ ಕುರಿತಾಗಿ ಇದೇ ಲೇಖಿಕೆಯ ಸಂಶೋಧನೆಯಲ್ಲಿ ಮೂಡಿಬಂದ ತೌಲನಿಕ ಅಧ್ಯಯನ ಗ್ರಂಥ ‘ಮುದ್ರಾರ್ಣವ’ ಹಾಗೂ ‘ಯಕ್ಷಮಾರ್ಗಮುಕುರ’ ಮೊದಲಾದ ಶಾಸ್ತ್ರಶೋಧ ಪುಸ್ತಕಗಳನ್ನು  ಪರಿಶೀಲಿಸಬಹುದು.

ಪರಾಮರ್ಶನ

श्रीहस्तमुक्तावली, 1991. Maheswar Neog Editor, Publication : Indira Gandhi National Centre for the Arts

Hastha Lakshana Deepika, 1892, collected by Kadathanattu Udyavarma Thampuran https://archive.org/details/HasthaLakshanaDeepika

ಯಕ್ಷಮಾರ್ಗಮುಕುರ ಗ್ರಂಥ- ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/

ಮುದ್ರಾರ್ಣವ ಗ್ರಂಥ- ಮನೋರಮಾ ಬಿ.ಎನ್ 2010- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/want-to-subscribe-noopura-bhramari-and-purchase-the-dance-books/

  1. ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ ಸಂಚಿಕೆ 61 : ಹಸ್ತಮುದ್ರಾ ಶಾಸ್ತ್ರವಿಚಾರದ ಗ್ರಂಥಗಳು. ಶಾಸ್ತ್ರರಂಗ ಯೂಟ್ಯೂಬ್ ಸೀರಿಸ್ . ಭಾಗ ೫: ದಾಕ್ಷಿಣಾತ್ಯ (Video series)-ಸಂಚಿಕೆ 61 @noopurabhramari1212
  2. ನಂದಿಕೇಶ್ವರನ ಅಭಿನಯದರ್ಪಣ ಗ್ರಂಥ ಮತ್ತು ನಂದಿಕೇಶ್ವರನ ಭರತಾರ್ಣವ

Leave a Reply

*

code