ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ (Video series)-ಸಂಚಿಕೆ 59 : ಕೇರಳರಾಜ ಬಾಲರಾಮವರ್ಮನ ಬಾಲರಾಮಭರತ & ಕೇರಳದ ಗ್ರಂಥಗಳು

Posted On: Sunday, November 24th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ

ಸಂಚಿಕೆ 59 : ಕೇರಳದ ರಾಜ ಬಾಲರಾಮವರ್ಮರ ಜೀವನ, ಸಾಧನೆ, ಆಡಳಿತ ಸಾಮರ್ಥ್ಯ, ಆದರ್ಶ, ಧಾರ್ಮಿಕತೆ, ಯುದ್ಧ- ಪರಾಕ್ರಮ ಮತ್ತು ಬಾಲರಾಮಭರತ ಗ್ರಂಥದ ಸಮೀಕ್ಷೆ. ಜೊತೆಗೆ ಈ ಸಂಚಿಕೆಯಲ್ಲಿ ಕಥಕಳಿ, ಮೋಹಿನಿಯಾಟ್ಟಂ ಕಲೆಗಳ ಉಗಮ ಮತ್ತು ಸುಧಾರಣೆಗೆ ಬಾಲರಾಮವರ್ಮರ ಕೊಡುಗೆ, ಈ ರಾಜನ ಮತ್ತು ಆತನ ಕವಿಗಳ ಇನ್ನಿತರ ಕಲಾರಚನೆಗಳು ಹಾಗೂ ಕೇರಳದ ಭಾವವಿವೇಕ, ಸಂಗೀತಸಂಗ್ರಹಚೂಡಾಮಣಿ, ಭರತಸಿದ್ಧಾಂತಂ, ಹಸ್ತಲಕ್ಷಣದೀಪಿಕಾ, ನಾಟ್ಯಕಲ್ಪದ್ರುಮ ಮೊದಲಾದ ಗ್ರಂಥವಿಚಾರಗಳ ಚರ್ಚೆಯೂ ಇದೆ.ಹಾಗೂ ಟಿಪ್ಪುಸುಲ್ತಾನ್ ನ ಬಾಲರಾಮವರ್ಮರ ಜೊತೆಗಿನ ಯುದ್ಧ, ಪರಾಭವಗಳ ಐತಿಹಾಸಿಕ ವಿಚಾರಗಳ ಪ್ರಸ್ತಾವವೂ ಇದೆ.

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 5 : Dākśinātya (Southern Region of Ancient Bhārata)

Episode 59 : An analysis on Kerala King Balaramavarma’s Life, Achievements, Administration, Morals, Military tactics and his treatise Bālarāmabharata. In addition, Balaramavarman’s contribution to the origin and improvement of Kathakali, Mohiniyattam artforms and other works of this king and his poets has been discussed. The other musical/dance treatises of Kerala region such as Bhāva viveka, Sangeet sangraha chuḍāmani, Bharata siddhāntam, Hastalaksanadīpikā, Nāṭyakalpadruma are also featured in this episode. This episode also delved the atrocities and war of Tippu sultan over Kodagu and Kerala in precise.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha &

Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಕೇರಳ ರಾಜ್ಯವನ್ನು ಆಳಿದ, ಹಲವು ಪ್ರಮುಖ ಯುದ್ಧಗಳಲ್ಲಿ ಶೌರ್ಯವನ್ನು ಮೆರೆದ ಧೀಮಂತ ಅರಸ, ಧರ್ಮರಾಜನೆಂದೇ ಖ್ಯಾತನಾಗಿದ್ದ ಅಪ್ರತಿಮ ದಾನಿ, ವಾಗ್ಮಿ, ಕವಿ, ಸುಧಾರಕ – ಕಾರ್ತಿಕ ತಿರುನಾಳ್ ಬಾಲರಾಮವರ್ಮ ಕುಲಶೇಖರ ಅಥವಾ ರಾಮವರ್ಮ.

ನೂತನವೆನಿಸುವ ತಿರುವಾಂಕೂರ್ ರಾಜ್ಯವನ್ನು ಸ್ಥಾಪಿಸುವಲ್ಲಿ ಮಾರ್ತಾಂಡ ವರ್ಮರ ಪ್ರಯತ್ನಗಳನ್ನು ಇಂದಿಗೂ ಕೇರಳದ ಜನರು ಬಹಳ ಭಕ್ತಿ ಗೌರವದಿಂದ ಕೊಂಡಾಡುತ್ತಾರೆ. ಒಮ್ಮೆ ರಾಜ ಮಾರ್ತಾಂಡವರ್ಮನು ತಮ್ಮ ಆರಾಧ್ಯದೈವ ಶ್ರೀ ಅನಂತಪದ್ಮನಾಭ ಸ್ವಾಮಿಗೆ ರಾಜ್ಯವನ್ನು ಸಮರ್ಪಿಸಿದ ಬಳಿಕ ಮಾರ್ತಾಂಡ ವರ್ಮರ ನಂತರದಲ್ಲಿ ಆಳ್ವಿಕೆಗೆ ಬರುವ ಎಲ್ಲ ರಾಜರಿಗೂ ಬಾಲ ಎಂಬ ಪೂರ್ವಪ್ರತ್ಯಯ ಇಡುವ ಸಂಸ್ಕೃತಿ ಬೆಳೆದುಬಂತೆನ್ನಲಾಗಿದೆ. ಅವರ ನಂತರದಲ್ಲಿ ಪಟ್ಟಕ್ಕೆ ಬಂದ ರಾಮವರ್ಮರು ಬಾಲರಾಮವರ್ಮರೇ ಆದರು. ರಾಮವರ್ಮರು ತಮ್ಮ ಮನೆತನದ ಹಿರಿಯರ ಆದರ್ಶವನ್ನು ಪಾಲಿಸಿಕೊಂಡು ನಡೆದು ಬೆಳೆದು ರಾಜವಂಶದ ಕೀರ್ತಿಯನ್ನು ಮತ್ತಷ್ಟು ಎತ್ತರಿಸಿದರು. ಅವರು ಹುಟ್ಟಿದ ನಕ್ಷತ್ರ ಕೃತ್ತಿಕಾ. ಹಾಗಾಗಿ ಕಾರ್ತಿಕ ತಿರುನಾಳ್ ಬಾಲರಾಮವರ್ಮ ಎಂದೇ ಸಂಬೋಧಿಸಲಾಗುತ್ತಿತ್ತು.

ಬಾಲರಾಮವರ್ಮರ ಬಾಲ್ಯ ಮತ್ತು ಬೆಳವಣಿಗೆ

ವಂಚಿ ಎಂಬ ರಾಜಮನೆತನಕ್ಕೆ ಸೇರಿದವರು ಎಂದು ಕಾರ್ತಿಕ ತಿರುನಾಳ್ ರಾಮವರ್ಮ. ತಾಯಿ ಅಟ್ಟಿಂಗಲ್‌ನ ರಾಣಿ ಪಾರ್ವತಿ ಬಾಯಿ ಮತ್ತು ತಂದೆ ಕಿಲಿಮಣ್ಣೂರು ರಾಜವಂಶದ ವಲಿಯಕೋಯಿತ್ತಂಪುರನ್. ೧೭೨೪ ರಲ್ಲಿ ಜನಿಸಿದ ರಾಮವರ್ಮ, ನಾಲ್ಕು ವರ್ಷ ವಯಸ್ಸಿನವರಾಗಿದ್ದಾಗ, ಅಂದರೆ ೧೭೨೮ ರಲ್ಲಿ, ತನ್ನ ಹೆತ್ತವರೊಂದಿಗೆ ಪ್ರಯಾಣಿಸುವ ವೇಳೆ ಕಾಯಂಕುಲಂ ರಾಜನು ಮಾಡಿದ ಕೌಟುಂಬಿಕ ಹತ್ಯೆಯ ಪ್ರಯತ್ನವನ್ನು ಹತ್ತಿಕ್ಕಲು ಹೋಗಿ ರಾಮವರ್ಮನ ತಂದೆ ನಿಧನರಾದರು. ಅದೃಷ್ಟವೆಂಬಂತೆ ರಾಮವರ್ಮ ಬದುಕುಳಿದರು. ಅವರ ಚಿಕ್ಕಪ್ಪ ಮಹಾರಾಜ ಮಾರ್ತಾಂಡವರ್ಮ ಪ್ರೀತಿವಿಶ್ವಾಸಗಳಿಂದ ರಾಮವರ್ಮರನ್ನು ಬೆಳೆಸಿದ್ದಷ್ಟೇ ಅಲ್ಲದೆ ನಾನಾ ವಿದ್ಯೆಗಳಲ್ಲಿ ಮಗನು ಪಾರಂಗತನಾಗುವಂತೆ ನೋಡಿಕೊಂಡರು. ಚಿಕ್ಕ ವಯಸ್ಸಿನಿಂದಲೇ ಅಧ್ಯಯನದಲ್ಲಿ ಹೆಚ್ಚಿನ ಶ್ರದ್ಧೆ ರಾಮವರ್ಮರಿಗೆ. ಆರು ವರ್ಷ ವಯಸ್ಸಿನಲ್ಲೇ ಶಸ್ತ್ರಾಸ್ತ್ರಗಳ ಅಭ್ಯಾಸ.

ಚಿಕ್ಕಪ್ಪ ಮಾರ್ತಾಂಡವರ್ಮರ ಅವರ ದಿಗ್ವಿಜಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ; ಸಹಾಯ ಮಾಡಿದರು. ನೆರೆಹೊರೆಯ ಅನೇಕ ಮಹಾರಾಜರೊಂದಿಗೆ ಸ್ನೇಹ ಒಪ್ಪಂದಗಳನ್ನು ಕಾರ್ಯಗತಗೊಳಿಸಿದರು. ಆ ಪೈಕಿ ಕಲ್ಲಿಕೋಟೆಯ ಸಾಮುದ್ರಿನ್ ರಾಜ ಅಂದರೆ ಇಂದಿಗೆ ಝಮೊರಿನ್ ಎಂಬ ಅಪಭ್ರಂಶವಾದ ಹೆಸರಿನಿಂದ ಕರೆಯಲ್ಪಟ್ಟ ರಾಜ ಕೊಚ್ಚಿನ್ ವ್ಯಾಪ್ತಿಗೆ ಮುತ್ತಿಗೆ ಹಾಕಿದಾಗ ಕೊಚ್ಚಿನ್ ರಾಜನ ಬೇಡಿಕೆಯ ಮೇರೆಗೆ ಮಾಡಿದ ಒಪ್ಪಂದ ಮಾತುಕತೆ ಹಾಗೂ ಯುದ್ಧ ಸಂಧಿಯೂ ಒಂದು. ೧೭೫೮ರಲ್ಲಿ ಮಾರ್ತಾಂಡವರ್ಮರ ಮರಣದೊಂದಿಗೆ, ತಿರುವಾಂಕೂರ್ ರಾಜ್ಯದ ಉತ್ತರಾಧಿಕಾರಿಯಾಗಿ ಆಳ್ವಿಕೆಗೆ ಬಂದರು.

ಯುದ್ಧ- ಪರಾಕ್ರಮ- ವಿಜಯ

ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರ ಎದುರಾಳಿ ಆಗಿ ರಾಮವರ್ಮರ ಸೇನೆ ತೋರಿದ ಶೌರ್ಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಟಿಪ್ಪುಸುಲ್ತಾನಿನ ತಂದೆ ಹೈದರ್ ಅಲಿ ೧೭೬೬ ರಲ್ಲಿ ಮಲಬಾರ್ ಮೇಲೆ ಎರಡನೇ ಬಾರಿ ದಾಳಿ ಮಾಡಿದ. ಬಳಿಕ ಹೈದರ್ ಬಯಸಿದ್ದು ಡಚ್ಚರ ಸಹಾಯದಿಂದ ತಿರುವಾಂಕೂರಿನ ಮೇಲೆ ಅತಿಕ್ರಮಣ. ಹೈದರ್ ಅಲಿಯ ಕುತಂತ್ರ ಅರಿತ ರಾಮವರ್ಮರು ಡಚ್ಚರಿಗೆ ತಮ್ಮ ಸಹಾಯವನ್ನು ನಿಲ್ಲಿಸಿ; ಹೈದರ್ ಆಲಿ ಮಲಬಾರ್, ಕಲ್ಲಿಕೋಟೆ, ಕೊಲತುನಾಡು ಪ್ರದೇಶಗಳನ್ನು ಬಿಟ್ಟುಕೊಟ್ಟರೆ ಮಾತ್ರ ಯುದ್ಧವೆಚ್ಚ ಕೊಡಬಲ್ಲೆ ಎಂಬುದಾಗಿ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿ, ಪರೋಕ್ಷವಾಗಿ ಬೆದರಿಸಿದರು. ಇದನ್ನು ಮನಗಂಡ ಹೈದರ್ ಅಲಿ ಶ್ರೀರಂಗಪಟ್ಟಣಕ್ಕೆ ವಾಪಾಸ್ಸಾದ.

೧೭೮೮ ರಲ್ಲಿ, ಹೈದರ್ ಅಲಿಯ ಮಗ ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದ. ಟಿಪ್ಪು ಮಲಬಾರ್ ಮತ್ತು ಕೊಡಗಿಗೆ ಅತಿಕ್ರಮಿಸಿ ಅನೇಕ ಅನ್ಯಾಯಗಳನ್ನು ನಡೆಸಿದ. ಅನೇಕ ಅಮಾಯಕರನ್ನು ಕೊಂದ, ಕೊಲ್ಲಿಸಿದ, ಗಡೀಪಾರು ಮಾಡಿದ ಮತ್ತು ಅನೇಕ ಹಿಂದೂಗಳನ್ನು ಬಲವಂತದಿಂದ ಮತಾಂತರ ಮಾಡಿದ. ಸ್ವತಃ ಟಿಪ್ಪುವೇ ನಾಲ್ಕು ಲಕ್ಷಕ್ಕೂ ಹೆಚ್ಚು ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ್ದೇನೆ ಎಂದೂ ಬರೆದುಕೊಂಡಿರುವುದನ್ನು ಆತನ ಪತ್ರಗಳಲ್ಲಿದೆ.. ಇಂಥ ಕುಕೃತ್ಯದಿಂದ ಮಲಬಾರ್‌ನ ರಾಜ ಕುಟುಂಬಗಳು ಮತ್ತು ಹೆಚ್ಚಿನ ಸಂಖ್ಯೆಯ ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬಗಳು ತಿರುವಾಂಕೂರ್‌ಗೆ ಓಡಿಹೋದರು, ಹೀಗೆ ಮಲಬಾರ್‌ನಿಂದ ಪಲಾಯನ ಮಾಡಿದ ಸಾವಿರಾರು ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ಆಶ್ರಯ ನೀಡಿದರು. ರಾಮವರ್ಮರ ಔದಾರ್ಯದಿಂದಾಗಿ ಪ್ರಜೆಗಳು ಅವರನ್ನು ಧರ್ಮರಾಜ ಎಂದೇ ಸಂಬೋಧಿಸತೊಡಗಿದರು.

ಟಿಪ್ಪು ಸುಲ್ತಾನನು ರಾಮವರ್ಮರನ್ನು ತನ್ನ ಸಾಮಂತನನ್ನಾಗಿ ಮಾಡಿಕೊಳ್ಳಲು ಅನಂತರದಲ್ಲಿ ತಂತ್ರಗಳನ್ನು ರೂಪಿಸಿದ. ಆದರೆ ರಾಮವರ್ಮರು ಟಿಪ್ಪು ಸುಲ್ತಾನನ ದಾಳಿಯನ್ನು ನಿರೀಕ್ಷಿಸಿ ತಿರುವಾಂಕೂರಿನ ರಕ್ಷಣೆಯಲ್ಲಿ ಸಹಾಯ ಮಾಡಲು ಬ್ರಿಟಿಷರೊಂದಿಗೆ ಮಾತುಕತೆ ನಡೆಸಿದರು. ಅಂತಿಮವಾಗಿ ೧೭೮೯ ರಲ್ಲಿ, ಟಿಪ್ಪು ಸುಲ್ತಾನ್ ಮಲಬಾರ್‌ನಲ್ಲಿ ತನ್ನ ಸಂಪೂರ್ಣ ಸೈನ್ಯವನ್ನು ಒಟ್ಟುಗೂಡಿಸಿ ತಿರುವಾಂಕೂರ್ ಅನ್ನು ಆಕ್ರಮಿಸಲು ದಂಡೆತ್ತಿ ಬಂದ. ಆದರೆ ತಿರುವಾಂಕೂರು ಸೈನಿಕರು ಹಿಂದೆ ಸರಿಯಲಿಲ್ಲ. ತಮ್ಮ ೧೪,೦೦೦ ಸೈನಿಕರ ಸಣ್ಣ ಸೇನೆಯಲ್ಲೇ ಟಿಪ್ಪುವನ್ನು ಸಮರ್ಥವಾಗಿ ಎದುರಿಸಿದರು. ಟಿಪ್ಪುವಿನ ಸೈನ್ಯವನ್ನು ಹಿಮ್ಮೆಟ್ಟಿಸಿದ್ದಷ್ಟೇ ಅಲ್ಲದೆ ಅವನ ಸೇನಾಧಿಪತಿಯನ್ನು ಕೊಂದರು. ಜೊತೆಗೆ ಟಿಪ್ಪುವಿನ ಪಲ್ಲಕ್ಕಿ, ಮುದ್ರೆಗಳು, ಉಂಗುರಗಳು, ಖಡ್ಗ ಮತ್ತು ಇತರ ಆಭರಣಗಳು ತಿರುವಾಂಕೂರು ಸೈನ್ಯದ ವಶವಾಯಿತು.

ಟಿಪ್ಪು ಸುಲ್ತಾನ್ ಸುಮ್ಮನೆ ಕೂರಲಿಲ್ಲ. ಬ್ರಿಟೀಷರು ತಿರುವಾಂಕೂರಿಗೆ ಸಹಾಯಕ್ಕೆ ಬರದಂತೆ ಕುತಂತ್ರ ಮಾಡಿ ತಿರುವಾಂಕೂರಿನ ಹತ್ತಿರದ ನೆಡುಮ್ಕೋಟ ಕೋಟೆಯ ಮೇಲೆ ಮತ್ತೆ ದಾಳಿ ಮಾಡಿದ. ಸುಮಾರು ಒಂದು ತಿಂಗಳ ಕಾಲ ಯುದ್ಧ ನಡೆದು, ತಿರುವಾಂಕೂರು ಸೈನ್ಯವು ನೆಡುಮ್ಕೋಟ ಕೋಟೆಗಳನ್ನೂ, ರಾಜ್ಯವನ್ನೂ ರಕ್ಷಿಸುವಲ್ಲಿ ಯಶಸ್ವಿಯಾಯಿತು. ಹಾಗಿದ್ದೂ ಟಿಪ್ಪುವಿನ ಸೈನ್ಯವು ಕುತಂತ್ರದಿಂದ ಸುಮಾರು ೩/೪-ಮೈಲಿ ಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡು ತಿರುವಾಂಕೂರ್ ಅನ್ನು ಪ್ರವೇಶಿಸಿತು. ಅತ್ತ ತಿರುವಾಂಕೂರ್‌ಗೆ ಸಹಾಯ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದ ಬ್ರಿಟಿಷ್ ಪಡೆಗಳು ಕೂಡಾ ತಿರುವಾಂಕೂರ್‌ಗೆ ಸಹಾಯವನ್ನು ನೀಡಲಿಲ್ಲ, ಇದು ರಾಮವರ್ಮ ಮಹಾರಾಜರ ಹತಾಶೆಗೆ ಕಾರಣವಾಯಿತು. ಟಿಪ್ಪುವಿನ ಸೈನ್ಯವು ಉತ್ತರ ತಿರುವಾಂಕೂರ್ ಪ್ರದೇಶವನ್ನು ಧ್ವಂಸಗೊಳಿಸಿತು ಮತ್ತು ಪೆರಿಯಾರ್ ನದಿಯ ಮೇಲೆ ಬೀಡುಬಿಟ್ಟಿತು, ಹಿಂದೂ ದೇವಾಲಯಗಳನ್ನು ನಾಶಪಡಿಸಲಾಯಿತು ಮತ್ತು ಪ್ರಜೆಗಳು ಎಷ್ಟೋ ಮಂದಿ ಓಡಿಹೋದರು. ಇಡೀ ದೇಶವು ಬೆಂಕಿ ಮತ್ತು ಖಡ್ಗದ ಬಾಯಿಗೆ ಸಿಲುಕಿ ನರಳಿತು. ಅಂತೂ ಹಲವು ತಂತ್ರ-ಪ್ರತಿತಂತ್ರಗಳು ಜರುಗಿ ಟಿಪ್ಪು ತಿರುವಾಂಕೂರ್‌ಗೆ ಬರದಂತೆ ತಡೆಯಲು ಸಿದ್ಧರಾದರು. ಟಿಪ್ಪುವಿನ ಸೈನ್ಯದ ಬಹುತೇಕರೂ ಸಾವನ್ನು ಕಂಡರು. ಟಿಪ್ಪುವಿನ ಕೆಲವು ಆಭರಣಗಳು, ಪಲ್ಲಕ್ಕಿ ಮತ್ತು ಕಠಾರಿಗಳು ಮತ್ತೊಮ್ಮೆ ತಿರುವಾಂಕೂರಿನ ವಶವಾದವು. ಇಂಥ ಹಲವು ಸಂಕೀರ್ಣವೆನಿಸುವ ಕಠಿಣ ಪರಿಸ್ಥಿತಿಗಳಲ್ಲಿ ರಾಮವರ್ಮರ ಬಲಗೈ ಭಂಟರೆಂಬಂತೆ ಅನೇಕ ಮಂತ್ರಿಗಳು, ದಳಪತಿಗಳು ದೇಶರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಪೈಕಿ ಅಯ್ಯಪ್ಪನ್ ಮಾರ್ತಾಂಡ ಪಿಳ್ಳ, ಮಹಾದೇವಯ್ಯನ್ ಸುಬ್ಬಯ್ಯನ್ ಮತ್ತು ರಾಜಾ ಕೇಶವದಾಸರಂತಹ ಘನತೆವೆತ್ತ ಚಾಣಾಕ್ಷ ಮಂತ್ರಿಗಳು ಸ್ಮರಣಾರ್ಹರು.

ಬಳಿಕ ಬ್ರಿಟಿಷ್ ಪಡೆಗಳಿಗೆ ಟಿಪ್ಪುವಿನ ತಂತ್ರ ಅರ್ಥವಾಗಿ ಕೆಲವು ಮಹತ್ವದ ನಿರ್ಧಾರವನ್ನು ಕೈಗೊಂಡರು. ಇದನ್ನು ಅರಿತ ಟಿಪ್ಪು ಸುಲ್ತಾನ್ ಬ್ರಿಟಿಷರೊಂದಿಗಿನ ಯುದ್ಧವನ್ನು ತಪ್ಪಿಸಲು ತಿರುವಾಂಕೂರು ಮತ್ತು ಮಲಬಾರ್‌ನಿಂದ ತನ್ನ ಸ್ವಂತ ರಾಜ್ಯಕ್ಕೆ ಹಿಮ್ಮೆಟ್ಟಲು ನಿರ್ಧರಿಸಿದ. ಆದರೆ ಯುದ್ಧವು ಸಂಭವಿಸಿತು, ಇದರಲ್ಲಿ ತಿರುವಾಂಕೂರು ತನ್ನ ಸಹಾಯವನ್ನು ಬ್ರಿಟಿಷರಿಗೆ ಕೊಟ್ಟಿತು. ಮತ್ತು ಮೂರನೇ ಆಂಗ್ಲೋ-ಮೈಸೂರು ಯುದ್ಧವು ಅಂತಿಮವಾಗಿ ೧೭೯೨ ರಲ್ಲಿ ಟಿಪ್ಪು ಸುಲ್ತಾನ್ ಸೋಲಿಗೆ ಕಾರಣವಾಯಿತು. ಮತ್ತು ಟಿಪ್ಪು ಸಾವನ್ನಪ್ಪಿದ.

ಬಾಲರಾಮವರ್ಮರ ಆಡಳಿತ ಕೌಶಲ- ಧಾರ್ಮಿಕತೆ

ಕಾರ್ತಿಕ ತಿರುನಾಳ್ ರಾಮವರ್ಮರ ಆಳ್ವಿಕೆಯು ಕೇರಳಕ್ಕೆ ಸುವರ್ಣ ಯುಗ ಎಂದೆನಿಸಿಕೊಂಡ ಕಾಲ. ರಾಮವರ್ಮರ ರಾಜ್ಯದಲ್ಲಿ ವ್ಯಾಪಾರ, ಸೇತುವೆ, ಕಾಲುವೆಗಳಂತಹ ಮೂಲಸೌಕರ್ಯಗಳು, ಬಂದರುಗಳನ್ನು ಸುಧಾರಿಸಲಾಯಿತು ಮತ್ತು ತಿರುವಾಂಕೂರ್‌ನಿಂದ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿತ್ತು. ಹಡಗು ನಿರ್ಮಾಣಕ್ಕೂ ಪ್ರಾಮುಖ್ಯತೆ ನೀಡಲಾಯಿತು. ಕೋಟೆಗಳನ್ನು ಉತ್ತಮಗೊಳಿಸಲಾಯಿತು ಮತ್ತು ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಹೆಚ್ಚಿನ ಶಕ್ತಿಯಿಂದ ಕೈಗೊಳ್ಳಲಾಯಿತು,

ರಾಮವರ್ಮರ ಕಾಲದಲ್ಲೇ ತಿರುವಾಂಕೂರಿನಲ್ಲಿ ಅನಂತರಾಯನ ಪಣಂ, ’ಚಿನ್ನ ಪಣಂ’ ಮತ್ತು ’ಅನಂತವರಾಹನ್’ ಎಂದು ಕರೆಯಲ್ಪಡುವ ಚಿನ್ನದ ನಾಣ್ಯಗಳನ್ನು ದೊಡ್ಡ ಬೆಳ್ಳಿಯ ಬೆಳ್ಳಿಯ ಜೊತೆಗೆ ಮುದ್ರಿಸಲಾಯಿತು. ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಗೋಪುರಗಳು ಪೂರ್ಣಗೊಂಡವು. ತಮ್ಮ ತಾಯಿಯ ನಿಧನದ ಬಳಿಕ ರಾಮೇಶ್ವರದ ವರೆಗೂ ಯಾತ್ರೆ ಕೈಗೊಂಡರು. ತಿರುವನಂತಪುರದಲ್ಲಿನ ಅವರ ಅರಮನೆ ಗ್ರಂಥಾಲಯವನ್ನು ಶ್ರೀಮಂತಗೊಳಿಸಿದರು. ತಾವು ಗೆದ್ದ ರಾಜ್ಯಗಳನ್ನು ಅನಂತ ಪದ್ಮನಾಭ ಸ್ವಾಮಿಗೆ ಸಮರ್ಪಿಸಿದ್ದಷ್ಟೇ ಅಲ್ಲದೆ; ದೇವರ ಹೆಸರಿನಲ್ಲಿ ಅನೇಕಾನೇಕ ಸೇವೆ, ದಾನ, ಯಾಗ, ತುಲಾಭಾರಗಳನ್ನು ನಡೆಸಿದರು. ತಾವು ಬರೆದ ಎಲ್ಲ ರಚನೆಗಳಲ್ಲೂ ಅನಂತ ಪದ್ಮನಾಭ ಸ್ವಾಮಿ ದೇವರನ್ನು ಬಹಳ ಭಕ್ತಿಯಿಂದ ಕೊಂಡಾಡಿದ್ದಾರೆ. ಮತ್ತು ತಮ್ಮನ್ನೂ “ಶ್ರೀ ಪದ್ಮನಾಭಕರುಣಾರಸಪಾತ್ರ, ಆತನ ಪಾದದ ಮಣಿಗಳೇ ತನ್ನ ಕಿರೀಟದಲ್ಲಿದೆ, ಶ್ರೀಪದ್ಮನಾಭಸ್ವಾಮಿಯ ಕರುಣೆಯಿಂದ ದೊರೆತ ಭೂಮಿಯ ಪಾಲಕನಾಗಿ ತಾನಿದ್ದೇನೆ. ರಾಮಾತ್ಮಭಾವದಿಂದ ಖಡ್ಗವನ್ನು ಹಿಡಿದು ರಾಮಯಾಣವನ್ನು ಕೇಳಿ ಸಿಂಧುಪ್ರವೇಶ ಮಾಡಿದೆ; ರಾಮನೇ ತನ್ನನು ಕೈ ಹಿಡಿದು ಅನುಗ್ರಹಿಸಿ ರಂಗನಾಥನ ಭಕ್ತನಾಗುವಂತೆ ಮಾಡಿದ, ರಾಮನೇ ತನ್ನೊಳಗಿನಿಂದ ರಾಜ್ಯಭಾರ ಮಾಡುತ್ತಿದ್ದಾನೆ” ಎಂಬುದಾಗಿ ಸಂಬೋಧಿಸಿಕೊಂಡಿದ್ದಾರೆ.

ಬಾಲರಾಮವರ್ಮರ ಕಲಾವಂತಿಕೆ ಮತ್ತು ಕಥಕಳಿ- ಮೋಹಿನಿಯಾಟ್ಟಂ ಕಲೆಗಳ ಪುನರುಜ್ಜೀವನಕ್ಕೆ ಕೊಡುಗೆ

ರಾಮವರ್ಮರು ಶೂರ, ಉತ್ತಮ ಆಡಳಿತಗಾರರಷ್ಟೇ ಅಲ್ಲ; ದೈವಭಕ್ತ ಕಲಾವಂತ; ವಿದ್ವಾಂಸ; ಕಲಾಪೋಷಕ ಕೂಡಾ ಕಾಲ ಅದು. ರಾಜಮನೆತನದ ಮೊದಲ ಪಿಟೀಲು ವಾದಕರಾಗಿದ್ದರು ರಾಮವರ್ಮ. ಅವರು ಸಂಗೀತಗಾರರೂ ಹೌದು ಮತ್ತು ನೃತ್ಯದಲ್ಲಿ ವಿದ್ವಾಂಸ ಕೂಡಾ. ೧೦೦ಕ್ಕೂ ಅಧಿಕ ಕೃತಿಸಂಯೋಜನೆಗಳನ್ನು ಮಾಡಿದ್ದಾರೆ. ಹಾಗೆಂದೇ ಸಂಗೀತತಾಲಭರತಾಂಬುಧಿಪೂರ್ಣಚಂದ್ರ ಎಂಬ ಸ್ತುತಿಗಳು ರಾಮವರ್ಮರ ರಚನೆಯ ಬಾಲರಾಮಗ್ರಂಥದಲ್ಲಿ ದೊರಕುತ್ತವೆ.

ರಾಮವರ್ಮರಿಂದಾಗಿ ಕೃಷ್ಣನಾಟ್ಟಂ, ಕಥಕ್ಕಳಿ, ತುಳ್ಳಲ್ ಜನಪ್ರಿಯ ಕಲಾ ಪ್ರಕಾರಗಳಾಗಿ ಮಾರ್ಪಟ್ಟವು. ಕಥಕಳಿ ನಾಟಕಗಳ (ಅಟ್ಟಕಥಾ) ಸಂಯೋಜಕರಾಗಿ ರಾಮವರ್ಮ ಅವರು ಕಥಕಳಿ ಕಲಿಸಲು ವ್ಯವಸ್ಥಿತ ಪಠ್ಯಕ್ರಮವನ್ನು ರೂಪಿಸಿದರು. ಪ್ರತಿ ಪಾತ್ರಧಾರಿಗಳೂ ಶೃಂಗಾರ ಪದಗಳಿಂದಲೇ ರಂಗಪ್ರವೇಶ ಮಾಡಬೇಕೆಂಬ ನಿಯಮವನ್ನು ಅವರು ಪರಿಚಯಿಸಿದರು. ಕಂಪ್ಲಿಗಟ್ಟು ನಂಬೂದಿರಿ ಅವರನ್ನು ಕರೆಸಿ ಆಹಾಯದಿಂದ ಕಥಕ್ಕಳಿ ತೆಕ್ಕಣ ಅಂದರೆ ದಕ್ಷಿಣಭಾಗದ ಶೈಲಿಯ ಪ್ರದರ್ಶನದಲ್ಲಿ ಕೆಲವು ಸುಧಾರಣೆ- ನಿಯಮಗಳನ್ನು ತಂದರು. ಇಂದಿಗೆ ಕಪ್ಲಿಂಗಟ್ಟು ಶೈಲಿಯೆಂದೇ ಖ್ಯಾತವಾದ ಇದರಲ್ಲಿ ರಾಮವರ್ಮರ ಕಾಲಕ್ಕೆ ಆಕರ್ಷಕವಾದ ಪ್ರಸಾಧನವ್ಯವಸ್ಥೆಗಳನ್ನು ರೂಪಿಸಲಾಯಿತು.

ಇದರೊಂದಿಗೆ ರಾಮವರ್ಮರ ರಚನೆಯಲ್ಲಿ ೭ ಅಟ್ಟಕಥಾ ಅಂದರೆ ಪ್ರಸಂಗಗಳು ರಚನೆಯಾದವು. ಅವು – ರಾಜಸೂಯಂ, ಸುಭದ್ರಾಪಹರಣಂ, ಗಂಧರ್ವವಿಜಯಂ, ಪಾಂಚಾಲಿ ಸ್ವಯಂವರಂ, ಬಕವಧಂ, ಕಲಾಯನಸೌಗಂಧಿಕಂ ಮತ್ತು ನರಕಾಸುರವಧಮ್. ರಾಮವರ್ಮರ ಪ್ರಯತ್ನದಿಂದಾಗಿ ಕಥಕಳಿ ಕಲಾವಿದರ ತಂಡವೂ ರೂಪುಗೊಂಡಿತು. ಅವರು ಕಥಕ್ಕಳಿಗಾಗಿ ವೇಷಭೂಷಣಗಳನ್ನು ಕೂಡಾ ವಿನ್ಯಾಸ ಮಾಡಿದ್ದರೆಂಬುದೂ ತಿಳಿಯುತ್ತದೆ. ಇವೆಲ್ಲವೂ ಕಥಕಳಿ ಪ್ರಸ್ತುತಿಗೆ ಅಳವಡಿಸಿಕೊಳ್ಳಬೇಕಾದ ತಂತ್ರಗಳ ಸುಧಾರಣೆಗೂ ಅನುಕೂಲವಾಗಿದೆ. ಹೀಗೆ ಪ್ರಸ್ತುತಿ, ವೈವಿಧ್ಯತೆ ಮತ್ತು ಪಾತ್ರಗಳು ಮತ್ತು ಕಥೆಯಲ್ಲಿನ ವಿನೂತನವಾದ ರಂಗತಂತ್ರಗಳಿಂದಾಗಿ ಇಂದಿಗೆ ಕಥಕ್ಕಳಿಯು ವಿಶ್ವಪ್ರಸಿದ್ಧ ಕಲೆಯಾಗಿ ರೂಪುಗೊಳ್ಳುವುದಕ್ಕೆ ದೊಡ್ಡ ಮಟ್ಟಿನ ಸಹಾಯವಾಗಿದೆ.

ಒಮ್ಮೆ ಅವರು ನೆರೆಯ ಸಾಮ್ರಾಜ್ಯದ ತಂಡದ ದಾಸಿಯಾಟ್ಟಂ ಅಂದರೆ ರಾಜದಾಸಿಯರ ನೃತ್ಯವನ್ನು ನೋಡಿ ಪ್ರದರ್ಶನವನ್ನು ನೋಡಿ, ಹರುಷಪಟ್ಟು ತಮ್ಮ ಆಸ್ಥಾನ ವಿದ್ವಾಂಸರನ್ನು ಕರೆದು ಮೋಹಿನಿಯಾಟ್ಟಂ ಎಂಬುದಾಗಿ ರಚನೆಗಳನ್ನು ಮಾಡಿಸಿ- ನಂತರ ಅವರೇ ನಿರ್ದೇಶಿಸಿದರು. ಅದರ ಫಲವಾಗಿಯೇ ಮೋಹಿನಿಯಾಟ್ಟಂನ ವಿಕಸನಗೊಂಡಿತು ಎನ್ನಲಾಗುತ್ತದೆ. ಮೋಹಿನಿಯಾಟ್ಟಂನ ಉಗಮವನ್ನು ನಿರ್ಣಯಿಸಲಾಗದಿದ್ದರೂ; ರಾಮವರ್ಮರ ಕಾಲ ಮೋಹಿನಿಯಾಟ್ಟಂನ ಬೆಳವಣಿಗೆಯ ದೃಷ್ಟಿಯಿಂದ ಮಹತ್ತ್ವದ ಕಾಲವೆನ್ನುವುದು ಅರ್ಥವಾಗುತ್ತದೆ. ಆ ಬಳಿಕ ರಾಮವರ್ಮರ ತಮ್ಮನ ಮೊಮ್ಮಗನಾಗಿದ್ದ ಕವಿ ಈರಾಯಿಮ್ಮನ್ ಥಂಪಿ ಮಹಾರಾಜ ಮತ್ತು ಸ್ವಾತಿ ತಿರುನಾಳ್ ರಾಮ ವರ್ಮ ಮಹಾರಾಜರ ಕಾಲದಲ್ಲಿ ಮೋಹಿನಿಯಾಟ್ಟಂ ಇನ್ನೂ ಹೆಚ್ಚಿನ ಪ್ರವರ್ಧಮಾನಕ್ಕೆ ಬಂದಿತು.

ಬಾಲರಾಮ ಭರತಮ್ ಗ್ರಂಥ

ರಾಮವರ್ಮ ಬಹುಭಾಷಾ ಪಾರಂಗತರೂ ಕೂಡಾ. ಸಂಸ್ಕೃತ, ಪರ್ಷಿಯನ್, ಹಿಂದೂಸ್ತಾನಿ, ತಮಿಳು, ಫೋರ್ಚುಗೀಸ್, ಇಂಗ್ಲಿಷ್ ಮತ್ತು ಡಚ್ ಕಲಿತಿದ್ದರು. ಅವರನ್ನು ಯೋಗ ಮತ್ತು ಆತ್ಮವಿದ್ಯೆಯಲ್ಲಿ ಪರಿಣಿತರು ಎಂದೂ ಉಲ್ಲೇಖಿಸಲಾಗಿದೆ.

ಬಾಲರಾಮವರ್ಮರು ಬಾಲರಾಮಭರತಮ್ ಈ ಗ್ರಂಥದ ರಚನಾಕಾರ ಕೂಡಾ ಹೌದು. ಭರತನಿಗೆ ಋಣಿಯಾಗಿರುವ ಶಾಸ್ತ್ರ ಎಂಬ ಅರ್ಥದಲ್ಲಿ ಬಾಲರಾಮಭರತಮ್ ಅಥವ ಬಲರಾಮಭರತವೆಂದೇ ಈ ನೃತ್ಯಶಾಸ್ತ್ರಗ್ರಂಥವನ್ನು ಹೆಸರಿಸಲಾಗಿದೆ. ಇದರ ರಚನೆಯ ಕಾಲ ೧೭೫೮-೧೭೯೮ನೇ ಇಸವಿ. ಕೇರಳದ ಎಲ್ಲಾ ಸಾಂಪ್ರದಾಯಿಕ ರಂಗಭೂಮಿಯ ವಿದ್ಯಾರ್ಥಿಗಳು ಮತ್ತು ಕಲಾ ಪ್ರೇಮಿಗಳಿಗೆ ಆಕರ ಗ್ರಂಥವೆಂಬಷ್ಟು ಇದಕ್ಕೆ ಪೂಜ್ಯತೆ ಇದೆ. ರಾಮವರ್ಮರು ಬಹುಶಃ ತಮ್ಮ ೬೦ ವರ್ಷ ವಯಸ್ಸಿನ ಅನಂತರ ಬಾಲ ರಾಮಭರತವನ್ನು ರಚಿಸಿರಬೇಕು.

ಬಾಲರಾಮಭರತಂ ಗ್ರಂಥದಲ್ಲಿ ‘ಲಾಸ್ಯತಂತ್ರಾವಲೋಕ್ಯವಿಶಾಲಂ’ ಅಂದರೆ ಲಾಸ್ಯನೃತ್ಯಕ್ಕೆಂದೇ ಈ ಗ್ರಂಥವನ್ನು ಬರೆಯಲಾಗಿದೆ ಎಂಬ ಶ್ಲೋಕವು ಆರಂಭದಲ್ಲಿ ದೊರಕುತ್ತವೆ. ಈ ಲಾಸ್ಯತಂತ್ರವು ಮೋಹಿನಿಯಾಟ್ಟಂನ್ನೇ ಉದ್ದೇಶಿಸಿದೆ ಎಂದೂ ಮತ್ತು ಬೇರೆ ಬೇರೆ ಸಂದರ್ಭಗಳಲ್ಲೂ ಮೋಹಿನೀ ನೃತ್ಯ ಎಂಬ ಹೆಸರು ಗಮನಕ್ಕೆ ಬರುವಂತೆಯೇ ಶ್ಲೋಕಗಳನ್ನು ರಚಿಸಲಾಗಿರುವುದರಿಂದ ಹಾಗೂ ಮನ್ಮಥ ಮತ್ತು ರತಿದೇವಿಯಂತೆ ಶೋಭಿಸುವ ಸ್ತ್ರೀ ನರ್ತಕರು, ಅವರ ನರ್ತನದಲ್ಲಿ ಬಳಸುವ ಅಂಗೋಪಾಂಗಾಭಿನಯ, ಕಣ್ಣೋಟ, ಭಾವ-ರಸ, ಹಸ್ತಾಭಿನಯಗಳ ವಿಚಾರ ಇಲ್ಲಿದೆಯೆಂದು ಗ್ರಂಥ ಹೇಳಿರುವುದರಿಂದ ಮೋಹಿನಿಯಾಟ್ಟಂನ ಆಧಾರಪ್ರಾಯವೆನಿಸುವ ಗ್ರಂಥವಾಗಿ ಇದನ್ನು ರಚಿಸಲಾಗಿದೆ ಎಂಬ ಅನುಮಿತಿ ಮಾಡಬಹುದು. ಜೊತೆಗೆ ಪಾದಚಲನೆ, ಶ್ರುತಿ, ನಾದ, ಲಯ, ಧ್ವನಿ, ರಾಗ, ತಾಲ, ಸಂಗೀತಗಾರರು, ವಾದ್ಯಗಳು ಮೊದಲಾದ ಎಲ್ಲ ತೌರ್ಯತ್ರಿಕ ವಿಷಯಗಳ ಬಗ್ಗೆಯೂ ಲಕ್ಷಣಗಳನ್ನು ಕಾಣಬಹುದು. ಒಟ್ಟಿನಲ್ಲಿ ಕೇರಳದಲ್ಲಿದ್ದ ೨೦ಕ್ಕೂ ಅಧಿಕ ಕಲಾಪ್ರಕಾರಗಳಿಗೆ ಆಚಾರ್ಯಗ್ರಂಥದಂತೆ ಶೋಭಿಸಿದೆ ಬಾಲರಾಮಭರತ.

ಬಾಲರಾಮ ಭರತ ಗ್ರಂಥ- ಗ್ರಂಥಸಂಪಾದನೆ ಮತ್ತು ಅಧ್ಯಾಯ- ಲಕ್ಷಣಕ್ರಮ

ಬಾಲರಾಮಭರತದ ಮೂಲಪ್ರತಿಯು ತಿರುವಾಂಕೂರಿನ ಗ್ರಂಥಾಲಯದ ಹಸ್ತಪ್ರತಿ ವಿಭಾಗದಲ್ಲಿದ್ದು; ಮಲಯಾಳ ಲಿಪಿಯಲ್ಲಿ ಸಂಸ್ಕೃತ ಗದ್ಯ ಮತ್ತು ಪದ್ಯಶ್ಲೋಕಗಳನ್ನು ಒಳಗೊಂಡಿದೆ. ಈ ಹಸ್ತಪ್ರತಿಯನ್ನು ೧೯೩೫ರಲ್ಲಿ ತಿರುವಾಂಕೂರು ಸಂಸ್ಥಾನವೇ ಪುಸ್ತಕ ರೂಪದಲ್ಲಿ ವಿದ್ವಾನ್ ಕೆ. ಸಾಂಬಶಿವಶಾಸ್ತ್ರಿಗಳ ಸಂಪಾದನೆಯಲ್ಲಿ ಮೊದಲ ಸಲ ಪ್ರಕಟಿಸಿತು. ಮೂಲ ಕೃತಿಯಲ್ಲಿ ಅಧ್ಯಾಯಗಳ ಸ್ವರೂಪ ಇಲ್ಲ. ಆದರೂ ಅನುಕೂಲಕ್ಕಾಗಿ ವಿಷಯಗಳನ್ನು ೬ ಅಧ್ಯಾಯಗಳಲ್ಲಿ ಸಂಪಾದಿಸಲಾಗಿದೆ.

ಬಾಲರಾಮಭರತ ಗ್ರಂಥವು ಸರಸ್ವತಿ, ವಿನಾಯಕ, ಶಿವ, ಪಾರ್ವತಿ, ಆರಾಧ್ಯದೈವ ಅನಂತಪದ್ಮನಾಭ, ರಂಗಲಕ್ಷ್ಮೀ ಮತ್ತು ರಾಜವಂಶದ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಮೊದಲ ೪೨ ಚರಣಗಳಲ್ಲಿ ದೇವರು ಮತ್ತು ದೇವತೆಗಳ ಸ್ತುತಿ ಇದ್ದು; ತದನಂತರ ರಾಮವರ್ಮರ ಆಳ್ವಿಕೆಯಲ್ಲಿ ತಿರುವನಂತಪುರದ ಹಿರಿಮೆ, ಆಡಳಿತ-ಸೈನ್ಯದ ಪರಾಕ್ರಮ ಹಾಗೂ ರಾಮವರ್ಮರ ಬಗೆಗಿನ ಸ್ತುತಿವಾಕ್ಯಗಳು ಇವೆ. ಇದರಿಂದಾಗಿ ಬಾಲರಾವರ್ಮರ ಐತಿಹಾಸಿಕ ವಿವರ- ವೈಭೋಗಗಳೂ ತಿಳಿದುಬರುತ್ತವೆ. “ಸಾವಿರಾರು ಕಲಾಭಿಮಾನಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ವಿದ್ವಾಂಸರ ಕೋರಿಕೆಯ ಮೇರೆಗೆ ಈ ಪುಸ್ತಕವನ್ನು ರಚಿಸಿದ್ದೇನೆ” ಎಂದು ರಾಮವರ್ಮ ಹೇಳುತ್ತಾರೆ.

ಬಾಲರಾಮಭರತ – ಆಂಗಿಕಾಭಿನಯದ ಸೂಕ್ಷ್ಮಾತಿ ಸೂಕ್ಷ್ಮ ವರ್ಗೀಕರಣಗಳನ್ನು ಹೊಸಹೊಸತೆಂಬಂತೆ ಮಾಡುವ ಬೃಹತ್ ಗ್ರಂಥ. ಉದಾಹರಣೆಗೆ : ಬೇರೆಲ್ಲ ಗ್ರಂಥಗಳಿಂದ ಭಿನ್ನವಾಗಿ ಸ್ಥಿರ ಮತ್ತು ಅಸ್ಥಿರ ಪಾದಭೇದಗಳನ್ನು ಪರಸ್ಪರ ಸಂಯೋಜನೆ ಮಾಡುತ್ತಾ ಇವುಗಳಿಂದ ಅಸಂಖ್ಯ ಪಾದಭೇದಗಳ ಹುಟ್ಟನ್ನೂ ಸೂಚಿಸಿದೆ. ಸ್ಥಿರ, ಅಸ್ಥಿರವೆಂಬ ಶಿರೋಕ್ರಮಗಳನ್ನು; ಇವುಗಳೆರಡರ ಸಂಯೋಜನೆಯಲ್ಲಿ ಮತ್ತಷ್ಟು ಶಿರೋಭೇದಗಳನ್ನು ಹೇಳಲಾಗಿದೆ. ಉರಸ್, ಪಾರ್ಶ್ವ, ಕಟಿಭೇದಗಳಲ್ಲಿಯೂ ಒಂದೆರಡು ಹೆಚ್ಚುವರಿ ಲಕ್ಷಣಗಳು ಕಂಡುಬಂದಿವೆ. ಮೊಣಕೈ ಭಾಗಕ್ಕೆಂದೇ ಕೂರ್ಪರಭೇದಗಳು, ವಿವಿಧ ರೀತಿಯಲ್ಲಿ ಸಂಯೋಜನೆಯ ಹಸ್ತಾಭಿನಯ ಭೇದಗಳನ್ನು ಸೂಚಿಸಿದೆ. ದೃಷ್ಟಿಭೇದಗಳಲ್ಲಿಯೂ ಸ್ಥೂಲ, ಸೂಕ್ಷ್ಮ, ಸಮವೆಂಬ ವಿಭಾಗಗಳನ್ನು ಮಾಡಿದಂತಿದೆ. ಜೊತೆಗೆ, ಪ್ರಾಣಿ-ಪಕ್ಷಿ ಮೊದಲಾದ ಜೀವಜಂತುಗಳಲ್ಲಿರುವ ಒಂಬತ್ತು ರಸದೃಷ್ಟಿಗಳನ್ನೂ ಹೇಳುವುದರೊಂದಿಗೆ ಸೂಕ್ಷ್ಮದೃಷ್ಟಿಯು ಪರಬ್ರಹ್ಮವಸ್ತುವನ್ನು ಕಾಣುವುದಕ್ಕಿರುವುದೆಂದೂ ವೇದಾಂತಕ್ರಮವನ್ನು ಹೇಳಿದೆ. ಈ ವಿಚಾರಗಳ ಹೆಚ್ಚಿನ ಅಧ್ಯಯನಗಳಿಗೆ ಲೇಖಿಕೆಯ ಸಂಶೋಧನ ಗ್ರಂಥ ಯಕ್ಷಮಾರ್ಗಮುಕುರವನ್ನು ಪರಿಶೀಲಿಸಬಹುದು.[2]

ಇವೆಲ್ಲವುಗಳ ವಿಭಾಗಕ್ರಮ ಹೊಸತೆನಿಸಿದರೂ ಲಕ್ಷಣವನ್ನು ಪರೀಕ್ಷಿಸಿದಾಗ ನಾಟ್ಯಶಾಸ್ತ್ರದ ಅಂಗೋಪಾಂಗ ಪ್ರಭೇದಗಳನ್ನೇ ವಿವಿಧ ಸಂಯೋಜನೆಗಳಾಗಿಸಿ ಮತ್ತೂ ವಿಸ್ತರಿಸಿರುವ ಒಂದು ದೇಶೀಕ್ರಮ ಎನ್ನುವುದು ಅರ್ಥವಾಗುತ್ತದೆ. ಕಥಕಳಿ, ಮೋಹಿನಿಯಾಟ್ಟಂನಂಥ ಕೆಲವು ಕೇರಳ ನೃತ್ಯಪರಿಚಲನೆಗಳ ಕ್ರಮವನ್ನು ಅನುಸರಿಸಿಯೇ ಈ ಗ್ರಂಥವು ಬರೆದಂತಿದೆಯಾದ್ದರಿಂದ ಇದರ ಪ್ರಯೋಜನವನ್ನು ತೆಗೆದುಹಾಕುವಂತಿಲ್ಲ. ಇದರಲ್ಲಿ ನಂದಿಕೇಶ್ವರನ ಅಭಿನಯದರ್ಪಣ, ಶಾರ್ಙ್ಗದೇವನ ಸಂಗೀತರತ್ನಾಕರ, ಹರಿಪಾಲನ ಸಂಗೀತಸುಧಾಕರದ ಉಲ್ಲೇಖಗಳಿವೆ. ಹಾಗಿದ್ದೂ “ಬಾಲರಾಮಭರತಂ ಪೂರ್ವಸೂರಿಗಳ ಕೃತಿಗಳ ಮೇಲೆ ಅವಲಂಬಿತವಾಗಿದ್ದರೂ, ಇದು ಸ್ವತಂತ್ರ ಸಂಯೋಜನೆಯಾಗಿದೆ. ಬಹುಶಃ ಇದೇ ರೀತಿಯ ಮತ್ತೊಂದು ಗ್ರಂಥ ಕೇರಳದಲ್ಲೇ ಇಲ್ಲ. ಆ ಮಟ್ಟಿಗೆ ರಾಮವರ್ಮರ ಕೆಲಸಗಳು ಕಾವ್ಯ, ರಂಗಭೂಮಿ ಕ್ಷೇತ್ರದಲ್ಲಿ ಅಮೂಲ್ಯ ನಿಧಿಯಂತೆ” ಎಂಬ ಶ್ಲಾಘನೆ ಪಡೆದುಕೊಂಡ ವಿಶಿಷ್ಟ ಗ್ರಂಥವಿದು. [3]

ಬಾಲರಾಮವರ್ಮರ ಕುಟುಂಬ- ಆಸ್ಥೆ- ಆಸಕ್ತಿ ಮತ್ತು ಪರಂಪರೆ

ಕಾರ್ತಿಕ ತಿರುನಾಳ್ ರಾಮವರ್ಮ ಮಹಾರಾಜರಿಗೆ ನಾಲ್ವರು ಪತ್ನಿಯರು. ಸಹೋದರ, ಪುತ್ರ ಪ್ರಪೌತ್ರರಿಂದ ಒಡಗೂಡಿದ ಭವ್ಯ ಸಂಸಾರದ ಬದುಕು ಅವರದ್ದಾಗಿತ್ತು. ನಾಲ್ಕು ದಶಕಗಳ ಕಾಲ ಆಳ್ವಿಕೆ ಮಾಡಿದರು. ಹಾಗೆಂದೇ ರಾಮವರ್ಮರಿಗೆ ಚಿರಂಜೀವಿ ಎಂಬ ಅಭಿಧಾನವೂ ಸಂದಿದೆ. ಅವರ ಮುಂದಿನ ತಲೆಮಾರು ಕೂಡಾ ಸಂಗೀತ, ನೃತ್ಯ, ಕಥಕಳಿ ಕಲೆ, ಕಾವ್ಯಗಳಲ್ಲಿ ಸಾಕಷ್ಟು ಕೆಲಸ ಮಾಡುತ್ತಲೇ ಬಂದಿರುವುದು ವೇದ್ಯ. ಅವರಲ್ಲೂ ಎಷ್ಟೋ ಮಂದಿ ರಾಮವರ್ಮ ಎಂಬ ಹೆಸರಿನಿಂದಲೇ ಗುರುತಿಸಿಕೊಳ್ಳುವುದು ಪರಂಪರೆಯ ಮೇಲಿನ ರಾಜಮನೆತನದ ಪ್ರೀತಿಯನ್ನು ಸಾರುತ್ತದೆ.

ಪ್ರಜೆಗಳ ಕಲ್ಯಾಣವೇ ರಾಮವರ್ಮರ ಗುರಿಯಾಗಿತ್ತು. ಜೊತೆಗೆ ದೇಶದ ಔನ್ನತ್ಯವನ್ನು ಸಾರುವಲ್ಲಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಜವಾಬ್ದಾರಿಯಿದೆ ಎನ್ನುವುದನ್ನು ಅರಿತ ರಾಜರು ಅವರು. ರಾಮವರ್ಮರ ಪ್ರೋತ್ಸಾಹವನ್ನು ಪಡೆದ ಕವಿಗಳು ಮತ್ತು ಕಲಾವಿದರು ಹಲವಾರು ಅನೇಕ ರಚನೆಗಳನ್ನು ಮಾಡಿದರು. ಅವರ ಮಂತ್ರಿ, ಸೇನಾಧಿಪತಿಗಳೂ ಕೂಡಾ ಕಲಾಪೋಷಕರಾಗಿದ್ದರು, ಕವಿಗಳಾಗಿದ್ದರು. ಎನ್ನುವುದು ತಿಳಿದುಬರುತ್ತದೆ. ರಾಮವರ್ಮರ ರಾಜ್ಯವು ಸದಾ ಕರ್ಣಾನಂದಕರವಾದ ಸಂಗೀತ, ವೀಣೆ-ಮೃದಂಗ ವಾದ್ಯಗಳ ನಿನಾದಗಳಿಂದ ತುಂಬಿತ್ತು, ಗಂಧರ್ವರ ಗಾಯನವನ್ನು ಹೋಲುವ ಗಾಯಕರಿದ್ದರು, ರಾಜನ ಆಸ್ಥಾನವು ಹಲವಾರು ಪ್ರತಿಭಾನ್ವಿತ ನರ್ತಕ-ನರ್ತಕಿಯರೆಂಬ ಧರ್ಮ ಸಂಪತ್ತುಳ್ಳ ರಂಗಲಕ್ಷ್ಮಿಯ ಆವಾಸಸ್ಥಾನ ಎಂಬ ವರ್ಣನೆಗಳೂ ಬಾಲರಾಮಭರತದಲ್ಲಿವೆ.

ಬಾಲರಾಮವರ್ಮರ ಗೆಳೆಯ, ವಿದ್ವಾಂಸ ದೇವರಾಜ, ಮೊಮ್ಮಗ ಅಶ್ವತಿ ತಿರುನಾಳ್ ಮಹಾರಾಜರ ಸಹಿತ ಇನ್ನೂ ಅನೇಕ ವಿದ್ವಾಂಸರ ನಾಟಕ-ಕಾವ್ಯಗಳಿವೆ. ಅಲ್ಲಿಯೂ ಬಾಲರಾಮವರ್ಮರ ಬಗ್ಗೆ ಅನೇಕ ಮೆಚ್ಚುಗೆಯ ಮಾತುಗಳನ್ನು ಗುರುತಿಸಬಹುದು. ಪಂದಳಂ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಸದಾಶಿವ ದೀಕ್ಷಿತರು ಅವರು ವಿದ್ಯಾನಾಥರ ಪ್ರತಾಪರುದ್ರನ ಯಶೋಭೂಷಣವನ್ನು ಅನುಕರಿಸಿ ಬಾಲರಾಮವರ್ಮ ಯಶೋಭೂಷಣಗಳನ್ನು ಬರೆದಿದ್ದಾರೆ. ಹಾಗೆಯೇ ರಾಮವರ್ಮರ ಬದುಕು- ಭಾವದ ಬಗ್ಗೆ ಕುರಿತಂತೆ ನಾಟಕವೊಂದು ರಚಿತವಾಗಿದೆ.

ಸಮಾಪನ

ದೆಹಲಿಯ ಸುಲ್ತಾನರ ಪರವಾಗಿ ಹೈದರಾಬಾದ್ ನಿಜಾಮರು ‘ಕಿರೀಟಪತಿ ಮನ್ನೇ ಸುಲ್ತಾನ್ ಮಹಾರಾಜ ರಾಜ ರಾಮ ರಾಜ ಬಹದ್ದೂರ್ ಶಂಶೇರ್ ಜಂಗ್’ ಎಂದು ಹೊಗಳಿ ಬಿರುದು ಕೊಟ್ಟರೆ; ರಾಮವರ್ಮರ ಆಶ್ರಯಕ್ಕೆ ಬಂದ ಕ್ರಿಶ್ಚಿಯನ್ನರು, ಡಚ್ಚರು, ಬ್ರಿಟಿಷ್ ಕಮಿಷನರ್‌ಗಳು ಕೂಡಾ ರಾಮವರ್ಮರ ಗುಣ-ಪರಾಕ್ರಮದ ಬಗ್ಗೆ ಮೆಚ್ಚುಗೆಯನ್ನು ಮುಕ್ತಕಂಠದಿಂದ ಸೂಚಿಸಿದ ಉಲ್ಲೇಖಗಳು ದೊರಕುತ್ತವೆ. ಸಮೃದ್ಧವಾದ ಸುದೀರ್ಘ ಆಳ್ವಿಕೆಯ, ಸಾಕಷ್ಟು ಸುಧಾರಣೆಗಳನ್ನು, ಲಕ್ಷ್ಯ-ಲಕ್ಷಣಗ್ರಂಥರಚನೆಗಳನ್ನು ಕೈಗೊಂಡ ನಂತರ, ರಾಮವರ್ಮ ಮಹಾರಾಜರು ೧೭೯೮ ರ ಫೆಬ್ರವರಿ ೧೭ ರಂದು, ೭೪ ನೇ ವಯಸ್ಸಿನಲ್ಲಿ, ನಿಧನರಾದರು. ಅಂದು ಶಿವರಾತ್ರಿಯ ವಿಶೇಷ ಪರ್ವದ ದಿನ ಕೂಡಾ.

ಧಾರಾನಗರದ ಭೋಜ, ಕನೌಜ್‌ನ ಹರ್ಷವರ್ಧನ ಮತ್ತು ವಿಜಯನಗರದ ಕೃಷ್ಣದೇವರಾಯರಂತಹ ಶ್ರೇಷ್ಠ ಭಾರತೀಯ ಆಡಳಿತಗಾರರಿಗೆ ರಾಮವರ್ಮರನ್ನು ಹೋಲಿಸಿ ಬಾಲರಾಮ ಗ್ರಂಥದ ಸಂಪಾದಕರಾದ ವಿದ್ವಾನ್ ಸಾಂಬಶಿವ ಶಾಸ್ತ್ರಿಗಳು ಕೊಂಡಾಡಿದ್ದಾರೆ.[1] ಒಟ್ಟಿನಲ್ಲಿ ಭಾರತದ ಘನತೆವೆತ್ತ ರಾಜರ ಸಾಲಿನಲ್ಲಿ ಕಾರ್ತಿಕ ತಿರುನಾಳ ಬಾಲರಾಮವರ್ಮರ ಹೆಸರೂ ಚಿರಸ್ಥಾಯಿಯಾಗಿದೆ. ತಿರುವಾಂಕೂರಿನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವಲ್ಲಿ, ಟಿಪ್ಪು ಸುಲ್ತಾನನ ಕ್ರೌರ್ಯವನ್ನು ಹಿಮ್ಮೆಟ್ಟಿಸುವಲ್ಲಿ, ತಿರುವಾಂಕೂರಿನ ಮತ್ತು ಅದೆಷ್ಟೋ ಸುತ್ತುಮುತ್ತಲಿನ ಪ್ರದೇಶದ ಪ್ರಜೆಗಳ ಕುಟುಂಬಗಳು ಇಂದಿಗೂ ಬಾಳಿಕೊಂಡು ಬರುವಲ್ಲಿ, ಭಾರತೀಯವಾದ ಕಲೆಗಳ ಸುಧಾರಣೆಯಲ್ಲಿ ಬಾಲರಾಮವರ್ಮರ ಕೊಡುಗೆ ಅಸಾಮಾನ್ಯ.

ಪರಾಮರ್ಶನ ಗ್ರಂಥಗಳು

K Sambasiva Sastri, 1935, The Balarama Bharatam. Published by Travancore Maharaja Govt. https://archive.org/details/in.ernet.dli.2015.283004
  1.  ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ ಸಂಚಿಕೆ 59 : ಶಾಸ್ತ್ರರಂಗ ಯೂಟ್ಯೂಬ್ ಸೀರಿಸ್ . ಭಾಗ ೫: ದಾಕ್ಷಿಣಾತ್ಯ (Video series)-ಸಂಚಿಕೆ ೫೯ @noopurabhramari1212
  2.  ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/yakshamargamukura/
  3.  K Sambasiva Sastri, 1935, The Balarama Bharatam. Published by Travancore Maharaja Govt.
  4.  K Sambasiva Sastri, 1935, The Balarama Bharatam. Published by Travancore Maharaja Govt.

Leave a Reply

*

code