ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ (Video series)-ಸಂಚಿಕೆ 56 : ಭರತ ಹೆಸರಿನಿಂದ ಕೊನೆಗೊಳ್ಳುವ ಅರ್ವಾಚೀನ ಶಾಸ್ತ್ರಗ್ರಂಥಗಳು

Posted On: Sunday, November 3rd, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ

ಸಂಚಿಕೆ 56 : ಭರತ ಪದದ ನಿರ್ವಚನ, ಭರತ ಹೆಸರಿನಿಂದ ಕೊನೆಗೊಳ್ಳುವ ಆದಿ, ಸದಾಶಿವ, ನಂದಿ, ಅರ್ಜುನ, ಹನುಮ, ಗುಹೇಶ, ಮತಂಗ, ವಿನಾಯಕ, ಬಾಲರಾಮ ಭರತ ಎಂಬ ವಿವಿಧ ಅರ್ವಾಚೀನ ಶಾಸ್ತ್ರಗ್ರಂಥಗಳು ಮತ್ತು ಅವುಗಳ ವೈಶಿಷ್ಟ್ಯ, ಕ್ರಮಗಳು ಹಾಗೂ ಪಂಚಭರತವಾದ

 

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 5 : Dākśinātya (Southern Region of Ancient Bhārata)

Episode 56 : Bharata – word definition, various scriptures/texts ending with Bharata such as Ādi, Sadāshiva, Nandi, Arjuna, Hanuma, Guhesha, Matanga, Vinayaka, Bālarāma Bharata and their ideas, patterns and Pancha Bharata argument

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha &

Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಭರತರು- ಯಾರು, ಎಷ್ಟು ಮಂದಿ?

ಭರತಖಂಡದಲ್ಲಿ ಹಲವು ಭರತರು ಆಗಿಹೋಗಿದ್ದಾರೆ. ಭರತ ಎಂಬ ಹೆಸರಿನ ವ್ಯಕ್ತಿಗಳ ಕೀರ್ತಿಯು ಅಚಂದ್ರಾರ್ಕವಾಗಿ ಹಬ್ಬಿದೆ. ಹೀಗಾಗಿ ಭರತಮುನಿ ಕಲ್ಪಿತ ವ್ಯಕ್ತಿಯಾಗಿರಲು ಸಾಧ್ಯವಿಲ್ಲ. ದಶರಥ ಪುತ್ರ-ರಾಮಸಹೋದರ ಭರತನಂತೂ ವಿಶ್ವಪ್ರಸಿದ್ಧ. ದುಷ್ಯಂತನ ಮಗನೂ ಭರತ. ಮಾಂಧಾತೃವಿನ ಮೊಮ್ಮಗ ಭರತ, ಋಷಭದೇವನ ಮಗ ಭರತ. ಇನ್ನು ವೇದಾಂತರಹಸ್ಯವನ್ನು ಅರುಹಿದ ಜಡಭರತನ ಕತೆಯನ್ನೂ ಕೇಳಿ ಬಲ್ಲೆವು. ಸರಸ್ವತಿ ನದಿತೀರದಲ್ಲಿ ವಾಸಿಸುತ್ತಿದ್ದ ವೇದಕಾಲಕ್ಕೆ ಸೇರಿದ ಭರತರೆಂದೇ ಹೆಸರಾದ ಜನಾಂಗವೂ ಅಗ್ನಿಯನ್ನು ಭಾರತಿಯೆಂದೇ ಕರೆದು ಪೂಜಿಸುತ್ತಿತ್ತು. ಮಹಾಭಾರತದ ಕಥೆ ‘ಭರತರ ಕಥೆ’ಯೆಂದೇ ಪ್ರಸಿದ್ಧ. ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನನ್ನು ‘ಭರತರ್ಷಭ’, ‘ಭಾರತ’ನೆಂದೇ ಅಂದರೆ ಭಾರತದೇಶಕ್ಕೆ ಸೇರಿದವನೆಂದು, ಭರತವಂಶೀಯನೆಂದು ಕರೆಯುವ ಉಲ್ಲೇಖವಿದೆ. ಇನ್ನು ಬ್ರಹ್ಮನಿರ್ಮಿತ ಬೃಹತ್ ವಿಶ್ವವನ್ನು ರಂಗವೆಂಬ ಸೂಕ್ಷ್ಮರೂಪದಲ್ಲಿ ಪುನರ್ ನಿರ್ಮಿಸಿದ ಗುರುವರೇಣ್ಯನೂ ಕೂಡಾ ಮಹಾಮುನಿ ಭರತ.

 

ಮಹಾಮುನಿ ಭರತನ ನಾಟ್ಯಶಾಸ್ತ್ರ ಮತ್ತು ಅರ್ವಾಚೀನ ಭರತನಾಮಕ ಗ್ರಂಥಗಳ ವೈಶಿಷ್ಟ್ಯ

‘ಭೃಂಞ ಭರಣೇ’ ಎಂಬ ಧಾತುವಿನಿಂದ ಹುಟ್ಟಿದ ಸಂಸ್ಕೃತ ಶಬ್ದವೇ ಭರತ. ಇದರ ಅರ್ಥವೇ ಭರಿಸುವುದು, ತುಂಬಿಸುವುದು ಎಂಬುದಾಗಿ. ‘ಭ’ ಅಕ್ಷರ ಬ್ರಹ್ಮನನ್ನೇ ಸೂಚಿಸಿದರೆ ‘ರತ’ ಎಂಬುದು ಬ್ರಹ್ಮನಿಗೆ ಒಳಪಡುವ ಎಲ್ಲದೂ ಅಥವಾ ಭರಿಸಿದ್ದು ಎಂಬರ್ಥವಾಗುತ್ತದೆ. ಅದಲ್ಲದೆ ನಾಟ್ಯಶಾಸ್ತ್ರದ ೩೫ನೇ ಅಧ್ಯಾಯದಲ್ಲಿ ‘ಭರತ’ ಎಂಬ ಶಬ್ದಕ್ಕೆ ನಿರ್ದೇಶಕ ಎಂಬ ಅರ್ಥವನ್ನೂ ಗಮನಿಸಬಹುದು. ನೊಗವನ್ನು ಹೊತ್ತ ಎತ್ತಿನಂತೆ ಎಲ್ಲ ಭಾರವನ್ನು ಹೊತ್ತು, ಅನೇಕ ಪಾತ್ರಗಳಿಗೆ ಉಪಯುಕ್ತವೆನ್ನಿಸಿ, ಸಂಗೀತ, ನಾಟ್ಯಗಳಲ್ಲಿ ತಜ್ಞನಾಗಿದ್ದು ಅನೇಕ ವಾದ್ಯಗಳನ್ನು ನುಡಿಸಲು ಸಮರ್ಥನಾದವನು ‘ಭರತ’ ಎನ್ನಲಾಗಿದೆ. ಅದಲ್ಲದೆ ಸ್ವತಃ ಭರತನ ಮಕ್ಕಳು ಅಂದರೆ ಆತನ ಪೀಳಿಗೆಯಲ್ಲಿ ಮುಂದುವರಿದು ಬಂದ ಕಲಾವಿದರ ವಂಶವೂ ಭರತರೆಂದೇ ಕರೆದುಕೊಳ್ಳಲು ಅರ್ಹರು. ಮಹಾಮುನಿ ಭರತನ ನೂರಾರು ಮಂದಿ ಮಕ್ಕಳನ್ನು ಭರತರೆಂದೇ ಕರೆದ ಉಲ್ಲೇಖಗಳಿವೆ.

ಮೂಲತಃ ನಾಟ್ಯಶಾಸ್ತ್ರದಲ್ಲಿ ದ್ವಾದಶಸಾಹಸ್ತ್ರೀ ಷಟ್‌ಸಾಹಸ್ರೀ ಎಂಬ ೧೨ಸಾವಿರ, ೬ ಸಾವಿರ ಶ್ಲೋಕಗಳ ಪ್ರತಿಯಿದ್ದವಂತೆ. ಆ ಪೈಕಿ ಈಗ ಬರೆವಣಿಗೆಯ ರೂಪದಲ್ಲಿ ದೊರೆತು ಉಳಿದುಬಂದಿರುವುದು ಆರು ಸಾವಿರ ಶ್ಲೋಕಗಳ ಷಟ್ಸಾಹ್ಸ್ತ್ರೀ. ಇದಲ್ಲದೆ ಮೂವತ್ತೆರಡು ಸಾವಿರ ಶೋಕಗಳದ್ದೂ ಒಂದು ಪರಂಪರೆಯಿತ್ತಂತೆ. ಇಂಥ ಗ್ರಂಥಪರಂಪರೆಗೆ ಅಧಿಕಾರಿಗಳೆಂಬಂತೆ ಸದಾಶಿವ, ಬ್ರಹ್ಮ ಮತ್ತು ಭರತ ಎಂಬ ಮೂರು ಸಂಪ್ರದಾಯಗಳಿಂದ ಹುಟ್ಟಿದವೆಂದು ಹೇಳಲಾಗುತ್ತದೆ. ಅಭಿನವಗುಪ್ತನ ಅಭಿನವಭಾರತಿಯೂ ಮೂರು ಪರಂಪರೆಗಳಿತ್ತೆಂದು ಸುಳುಹು ಕೊಡುತ್ತದೆ. ಹೇಗಿದ್ದರೂ ಭರತನೇ ನಾಟ್ಯಶಾಸ್ತ್ರದ ನಾಂದಿ ಶ್ಲೋಕದಲ್ಲಿ ಪಿತಾಮಹನಾದ ಬ್ರಹ್ಮ, ಮಹೇಶ್ವರರಿಗೆ ವಂದಿಸಿಯೇ ಗ್ರಂಥಾರಂಭವನ್ನು ಮಾಡುತ್ತಾನಾದ್ದರಿಂದ ಬ್ರಹ್ಮ, ಸದಾಶಿವರ ಹೆಸರಿನಲ್ಲಿಯೂ ನಾಟ್ಯ ಮತ್ತು ಸಂಗೀತದ ಮೇಲಿನ ದೊಡ್ಡದಾದ ಭರತನಾಮಕ ಗ್ರಂಥಗಳಿವೆ ಎನ್ನಲಾಗುತ್ತದೆ. ಬಹುಶಃ ಈ ಕಾರಣಕ್ಕೇ ಭರತನ ಪೀಳಿಗೆಯಲ್ಲಿ ವೃದ್ಧಭರತ, ಆದಿಭರತ ಎಂಬ ಹೆಸರುಗಳೂ ಆಗಿಹೋಗಿದ್ದಿರಬಹುದು. ಮತ್ತು ಹಲವು ಭರತರು ನಾಟ್ಯಶಾಸ್ತ್ರವನ್ನು ಬರೆದರು ಎಂಬ ಜನಜನಿತ ಅಭಿಪ್ರಾಯ ಬೆಳೆದುಬಂದಿದೆ.

ಆ ಪೈಕಿ ಆದಿಭರತ, ವೃದ್ಧಭರತ, ಬ್ರಹ್ಮಭರತ, ಸದಾಶಿವಭರತ, ಹನುಮದ್ ಭರತ್, ಅರ್ಜುನ ಭರತ, ಗುಹೇಶ ಭರತ, ನಂದಿಭರತ, ವಿನಾಯಕ ಭರತ ಮುಂತಾದ ಗ್ರಂಥ ಮತ್ತು ಲಾಕ್ಷಣಿಕರನ್ನು ಗುರುತಿಸಬಹುದು. ಈ ಭರತಗ್ರಂಥಗಳ ಮುಖ್ಯ ಹೂರಣ ನೃತ್ತ, ನೃತ್ಯ ಮತ್ತು ಅವುಗಳಿಗೆ ಬೇಕಾದ ವಿವಿಧ ಅಂಗೋಪಾಂಗ ಅಭಿನಯ, ಹಸ್ತಾಭಿನಯ, ಚಾರಿ, ಸ್ಥಾನಕ, ಕರಣ, ಅಂಗಹಾರಗಳು, ಸ್ವರ, ರಾಗ, ತಾಳ, ಪ್ರಬಂಧ, ರಸ-ಭಾವ ಲಕ್ಷಣಗಳು.

 

ಹನುಮದ್ಭರತ

ನಂದಿಭರತ, ಗುಹೇಶ ಭರತ ಮತ್ತು ಹನುಮದ್ಭರತ ಎಂಬ ಮೂರು ಗ್ರಂಥಗಳ ಉಲ್ಲೇಖ ಸಿಗುತ್ತದಲ್ಲದೆ ದುರದೃಷ್ಟವಶಾತ್, ಈ ಗ್ರಂಥಗಳು ನಷ್ಟವಾಗಿ ಹೋಗಿವೆಯೆಂದೇ ಹೇಳಬೇಕಾಗುತ್ತದೆ. ಹನುಮ ಭರತವು ಹನುಮಂತನ ಹೆಸರನ್ನು ಕರ್ತೃವೆಂಬಂತೆ ಅಂಕಿತಗೊಂಡ ಗ್ರಂಥ. ಸಂಗೀತಜ್ಞ ಎಂಬ ಅಭಿಮಾನದಲ್ಲಿ ರಾಗಗಳ ವಿಚಾರವಾಗಿ ಹನುಮಂತನನ್ನು ಒಬ್ಬ ಶಾಸ್ತ್ರಲಕ್ಷಣಕಾರ ಎಂದು ಉಲ್ಲೇಖಿಸಲಾಗಿದೆ. ಅಹೋಬಲನ ಸಂಗೀತ ಪಾರಿಜಾತ, ಚತುರ ದಾಮೋದರನ ಸಂಗೀತದರ್ಪಣ ಸಹಿತ ಇನ್ನೂ ಹಲವು ಗ್ರಂಥಗಳು ಹನುಮಂತ, ಆಂಜನೇಯ ಎಂಬ ಹೆಸರಿನ ಲಾಕ್ಷಣಿಕರನ್ನು ನೆನೆಯುತ್ತಾರೆ. ಆದರೆ ಈ ಹನುಮಂತ ಅಥವಾ ಆಂಜನೇಯ ರಾಮಾಯಣದ ಕಪಿಶ್ರೇಷ್ಠ ಅಂಜನಾಸುತ ರಾಮಭಂಟನಾಗಿರಲಿಕ್ಕಿಲ್ಲ ; ಬದಲಾಗಿ ಐತಿಹಾಸಿಕವಾಗಿ ಸಂದುಹೋದ ಸಂಗೀತ ವಿಶಾರದನಿದ್ದಿರಬೇಕು ಎಂದೇ ಅನಿಸುತ್ತದೆ.

ನಂದಿಭರತ

ನಾಟ್ಯಶಾಸ್ತ್ರದಲ್ಲಿ ನಂದಿಯ ಉಲ್ಲೇಖ ಕುರಿತಾಗಿ ಬರುವುದೇ ಇಲ್ಲ. ಆದರೆ ಮಾನವಲ್ಲಿ ರಾಮಕೃಷ್ಣ ಕವಿಗಳು ಭರತನಿಗೆ ಕರಣಾಂಗಹಾರಗಳ ಪಾಠ ಮಾಡಿದ ತಂಡುಮುನಿಯೇ ನಂದಿ ಎಂಬ ಅಭಿಪ್ರಾಯ ಸೂಚಿಸಿದ್ದಾರೆ. ಆದರೆ ಎಲ್ಲಿಯೂ ತಂಡುವನ್ನು ನಂದಿ ಎಂಬುದಾಗಿ ಸಂಭೋದಿಸಿಯೇ ಇಲ್ಲ ಎಂಬುದರ ಸಹಿತ ಇನ್ನೂ ಬೇರೆಬೇರೆ ಸಾಕ್ಷ್ಯ ಹಾಗೂ ಕಾರಣಗಳಿಗಾಗಿ ಡಾ. ರಾಘವನ್ ತಂಡುವೇ ನಂದಿ ಎಂಬ ಅಭಿಪ್ರಾಯವನ್ನು ಅಲ್ಲಗಳೆದಿದ್ದಾರೆ. ಈ ಲೇಖಿಕೆಯ ಅಧ್ಯಯನದ ವೇಳೆಯೂ ಈ ವಿಚಾರದ ಸಹಿತ ಹಲವಾರು ಸಾಕ್ಷ್ಯಗಳು ಬೆಳಕಿಗೆ ಬಂದಿದ್ದು; ನಂದಿಕೇಶ್ವರ, ಯಕ್ಷಮಾರ್ಗಮುಕುರ ಎಂಬ ಅವರ ಸಂಶೋಧನಕೃತಿಗಳೊಂದಿಗೆ ಭರತಾರ್ಣವ ಮತ್ತು ಅಭಿನಯದರ್ಪಣದ ಕುರಿತಾದ ನೂಪುರ ಭ್ರಮರಿಯ ಎರಡು ಶಾಸ್ತ್ರರಂಗ ಸಂಚಿಕೆಗಳಲ್ಲಿ ಕಾಣಬಹುದು.[1] ಹೀಗಾಗಿ ನಂದಿಯು ಭರತನಷ್ಟು ಪ್ರಾಚೀನನಲ್ಲ ಮತ್ತು ಆತನ ಹೆಸರಿನಲ್ಲಿ ದೊರಕುವ ಯಾವುದೇ ಗ್ರಂಥಗಳಿಗೂ ಭರತನಷ್ಟು ಪ್ರಾಚೀನದ ಹಣೆಪಟ್ಟಿಯನ್ನು ಅಂಟಿಸುವುದು ಬೇಡ ಎಂದು ಲೇಖಿಕೆ ಹೇಳಲು ಇಚ್ಛಿಸುತ್ತಾರೆ.

ಕಾವ್ಯಮಾಲಾ ಆವೃತ್ತಿಯಲ್ಲಿ ನಾಟ್ಯಶಾಸ್ತ್ರದ ಕೊನೆಯ ಭಾಗವನ್ನು ನಂದಿ ಭರತ ಕರೆಯಲಾಗುತ್ತದೆ ಎಂದಿದೆ. ಆದರೆ ಸ್ವತಃ ನಾಟ್ಯಶಾಸ್ತ್ರದ ಇನ್ನೂ ನಾಟ್ಯಶಾಸ್ತ್ರದ ಹಲವು ಆವೃತ್ತಿಗಳು ಕೋಹಲನ ಹೆಸರನ್ನೇ ಭರತನ ಉತ್ತರಾಧಿಕಾರಿಯೆಂಬಂತೆ ಹೇಳುತ್ತದೆ. ಇರಲಿ., ಇಂದಿಗೆ ನಂದಿಭರತ ಎಂಬ ಹೆಸರಿನಲ್ಲಿ ಎರಡು ಗ್ರಂಥಗಳ ಉಲ್ಲೇಖ ದೊರಕುತ್ತದೆ. ಒಂದು ಸಂಗೀತ ಗ್ರಂಥ ನಂದಿಭರತವನ್ನು ಸಂಶೋಧಕರಾಗಿದ್ದ ರೈಸ್ ಅವರು ಮೈಸೂರು ಮತ್ತು ಕೊಡಗಿನ ಕ್ಯಾಟಲಾಗ್ ನಲ್ಲಿ ಗುರುತಿಸಿದ್ದರು. ಇದಲ್ಲದೆ ನಂದಿಭರತೋಕ್ತಹಸ್ತಾಧ್ಯಾಯ ಎಂಬ ಗ್ರಂಥವು ಮದ್ರಾಸಿನ ಹಸ್ತಪ್ರತಿ ಕ್ಯಾಟಲಾಗ್‌ನಲ್ಲಿದೆ ಎಂಬ ವಿವರ ನೀಡಿದ್ದಾರೆ ಡಾ. ರಾಘವನ್. ಇದು ಹಸ್ತಾಧ್ಯಾಯಕ್ಕೆ ಮೀಸಲಾದ ಗ್ರಂಥವಾಗಿತ್ತು ಎನ್ನುವುದು ಅರಿವಾಗುತ್ತದೆ. ನಂದಿಭರತೋಕ್ತಸಂಕರಹಸ್ತಾಧ್ಯಾಯ ಎಂಬ ಗ್ರಂಥಪ್ರತಿಯಲ್ಲಂತೂ ಒಂದೊಂದು ಹಸ್ತದೊಳಗೂ ಹಲವಾರು ಬಗೆಗಳನ್ನು ಹೊಸಹೊಸತಾಗಿ ಟಂಕಿಸಿದ ಪ್ರಕರಣವನ್ನು ಗಮನಿಸಬಹುದು. ಅಂದರೆ ಭರತಾರ್ಣವ ಉಲ್ಲೇಖಿಸುವ ಸಂಕರ-ನಾನಾರ್ಥ ಹಸ್ತಗಳಿಗೆ ಮೂಲ ನಂದಿಭರತದಲ್ಲಿದ್ದಂತಿದೆ. ಆದರೆ ಭರತಾರ್ಣವದ ಕಾಲ ಹನ್ನೊಂದನೇ ಶತಮಾನದಿಂದ ೧೬ನೇ ಶತಮಾನದ ಒಳಗೆ ಸಲ್ಲುವಂತದ್ದು.

ಗುಹೇಶಭರತ

ಭರತಾರ್ಣವವು ತನ್ನ ಲಕ್ಷಣವಿಚಾರಗಳಿಗೆ ಆಕರ ಎಂದು ಪರಿಗಣಿಸುವ ಈ ಗುಹೇಶಭರತ ಮತ್ತು ನಂದಿಭರತವು ಭರತನಾಮಕ ಗ್ರಂಥಗಳಲ್ಲೇ ಪ್ರಾಚೀನ ಎಂದು ಅಂದಾಜಿಸಬಹುದು.

ಸುಬ್ರಹ್ಮಣ್ಯದೇವರ ಹೆಸರು ಗುಹೇಶ ಎಂಬುದನ್ನೇ ಅಂಕಿತವಾಗಿಸಿಕೊಂಡ ಗ್ರಂಥವಿದು. ಇದಕ್ಕೆ ಸ್ಕಂದಭರತ ಎಂಬ ಇನ್ನೊಂದು ಹೆಸರೂ ಇದ್ದಂತೆ ತೋರುತ್ತದೆ. ಭರತಾರ್ಣವ ಗ್ರಂಥ ಮುಕ್ತಾಯದ ಭಾಗಗಳಲ್ಲಿ ಗುಹೇಶಭರತ ಲಕ್ಷಣ ಸಮಾಪ್ತಂ ಎನ್ನಲಾಗಿರುವುದನ್ನು ಗಮನಿಸಿದರೆ ಸ್ವತಃ ಭರತಾರ್ಣವವು ಈ ಗ್ರಂಥವನ್ನು ಪರಿಶೀಲಿಸಿ ಅಳವಡಿಸಿಕೊಂಡಂತಿದೆ. ವಿಚಿತ್ರವೆಂದರೆ, ಭರತಾರ್ಣವ ಗ್ರಂಥದ ಸಂಪಾದಕರಾದ ವಾಸುದೇವ ಶಾಸ್ತ್ರಿಗಳು ಭರತ ಸೇನಾಪತಿಯೆಂಬ ತಮಿಳು ಗ್ರಂಥವೂ ಗುಹೇಶಭರತಲಕ್ಷಣಮ್ ಎಂಬಂತೆಯೇ ಕಂಡುಬಂದಿದೆ ಎಂದಿದ್ದಾರೆ. ಹಾಗಿದಲ್ಲಿ ಇದು ದ್ರವಿಡಮೂಲದ ಗ್ರಂಥವಾಗಿರುವ ಸಾಧ್ಯತೆಗಳಿವೆ. ಆದರೆ ಡಾ. ರಾಘವನ್ ಅವರು ಗುಹ್ಯಕೇಶಭರತ ಎಂಬ ಗ್ರಂಥವೇ ಅಪಭ್ರಂಶಗೊಂಡು ಗುಹೇಶಭರತ ಎಂದಾಗಿದೆ; ಈ ಗುಹ್ಯಕೇಶನು ಸುಮತಿ ಎಂಬ ಗುಹ್ಯಕರೆಂಬ ಅರ್ಧದೇವಪುರುಷರ ರಾಜ; ಈತನಿಗೆ ನಂದಿಯು ಪಾಠ ಮಾಡಿರುವ ಸಂಗತಿ ಭರತಾರ್ಣವ ಗ್ರಂಥದಲ್ಲಿದೆ; ಹಾಗಾಗಿ ಇದು ಗುಹ್ಯಕೇಶ ಭರತ ಎಂದೇ ಹೇಳಿದ್ದಾರೆ.

ಗುಹೇಶಭರತದ ಬಳಿಕದ ಸ್ಥಾನದಲ್ಲಿ ಅರ್ಜುನಭರತ ಮತ್ತು ಆದಿಭರತ ಎಂಬ ಎರಡು ಕೃತಿಗಳನ್ನು ಪರಿಗಣಿಸಬಹುದು.

ಅರ್ಜುನ ಭರತ

ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿರುವ ಸಂಸ್ಕೃತ/ತೆಲುಗು ಹಸ್ತಪ್ರತಿಯ ಅರ್ಜುನ ಭರತ ಗ್ರಂಥವು ಮಹಾಭಾರತದ ಪಾಂಡುಪುತ್ರ, ನಾಟ್ಯವಿಶಾರದನಾದ ಅರ್ಜುನನ ಹೆಸರಿನಿಂದ ಅಂಕಿತಗೊಂಡಿದೆ. ಆದರೆ ಇದರ ದೇಶೀ ಲಕ್ಷಣಕ್ರಮಗಳನ್ನು ರಚನಾಕಾರ ಐತಿಹಾಸಿಕವಾಗಿ ಸಂದುಹೋದ ಅರ್ಜುನ ಅಥವಾ ನಾಗಾರ್ಜುನ ಎಂಬುವವನಾಗಿರಬೇಕು ಎಂದೇ ಅನಿಸುತ್ತದೆ. ಜೊತೆಗೆ ಹಸ್ತಪ್ರತಿಯಲ್ಲಿ ರಘುನಾಥ ಪ್ರಸಾದ ಎಂಬುವನ ಸಂಕಲನ ಆಗಿದೆಯೆಂಬ ವಿಚಾರವೂ ತಿಳಿಯುತ್ತದೆ. ಸಂಗೀತ ವಿದ್ಯಾವಿನೋದ, ತಾಲಕಲಾವಿಲಾಸ ಮೊದಲಾದ ಇನ್ನೂ ಅನೇಕ ವಿಜಯನಗರ ಕರ್ನಾಟ ಸಾಮ್ರಾಜ್ಯ ಕಾಲದ ಗ್ರಂಥ ಉಲ್ಲೇಖಗಳು ಈ ಅರ್ಜುನಭರತದಲ್ಲಿವೆ. ಹೀಗೆ ಅನೇಕ ಆಂತರಿಕ ಸಾಕ್ಷ್ಯಗಳಿಂದಾಗಿ ಅಂದಾಜು ೧೫-೧೬ನೇ ಶತಮಾನದ ಅನಂತರ ರಚನೆಗೊಂಡ ಗ್ರಂಥವಿದು ಎಂಬುದಾಗಿ ನನಗನಿಸುತ್ತದೆ. ಅದಲ್ಲದೆ ಅರ್ಜುನನ ಹೆಸರಿನಲ್ಲಿ ಶುದ್ಧಸತ್ತ್ವ ವೆಂಕಟಾಚಾರ್ಯ ಎಂಬುವರಿಂದ ಸಂಕಲಿಸಲ್ಪಟ್ಟ ಅರ್ಜುನಾದಿಮತಸಾರ ಎಂಬ ಹಸ್ತಪ್ರತಿಯೂ ಗೀತ-ನೃತ್ಯ ವಿಷಯಕವಾಗಿ ಇದ್ದು; ನಾಟ್ಯ ಪ್ರಯೋಜನ, ಪೂರ್ವರಂಗವಿಧಿ, ಸಭಾಲಕ್ಷಣ, ಪಾತ್ರಲಕ್ಷಣ, ತಾಲ, ಲಯ ಮೊದಲಾದ ವಿಷಯಗಳನ್ನು ಒಳಗೊಂಡಿದೆ.

ವೃದ್ಧಭರತ ಮತ್ತು ಆದಿಭರತ

ವೃದ್ದಭರತನ ಬಗ್ಗೆ ಶಾರದಾತನಯನ ಭಾವಪ್ರಕಾಶದಲ್ಲಿ ರಸವಿಚಾರದ ವೇಳೆ ಉಲ್ಲೇಖವೊಂದನ್ನು ಕಾಣುತ್ತೇವೆ. ಅದನ್ನು ಹೊರತುಪಡಿಸಿ ವೃದ್ಧಭರತನ ಹೆಸರಿನಲ್ಲಿ ಯಾವ ಗ್ರಂಥಗಳೂ ಇಲ್ಲ. ಕೆಲವರು ಈತನೇ ನಾಟ್ಯಶಾಸ್ತ್ರ ರಚನಾಕಾರನಾದ ಮಹಾಮುನಿ ಎಂದಿದ್ದಾರಾದರೂ ಅ ಮಾತಿಗೆ ಪೂರಕವಾದ ಯಾವುದೇ ಸಾಕ್ಷ್ಯವಿಲ್ಲ.

ಶಾಕುಂತಲ ಕಾವ್ಯಕ್ಕೆ ಬರೆಯಲಾದ ರಾಘವ ಭಟ್ಟರ ಭಾಷ್ಯದಿಂದ ಆದಿಭರತದ ಬಗ್ಗೆ ತಿಳಿಯುತ್ತದೆ. ಹಾಗಾಗಿಯೇ ಆದಿಭರತ ಮತ್ತು ವೃದ್ಧಭರತರ ಹೆಸರಿನ ಉಲ್ಲೇಖಗಳು ಪ್ರಾಚೀನದಿಂದಲೇ ಬಂದಿವೆ ಎನಿಸುತ್ತದೆ. ಆದರೆ ಇಂದಿಗೆ ಲಭ್ಯವಿರುವ ಆದಿಭರತ ಅಷ್ಟು ಪ್ರಾಚೀನ ಕೃತಿಯಂತೆ ಕಾಣಿಸುವುದಿಲ್ಲ.ಇವೂ ಕೂಡಾ ಪ್ರಕಟವಾಗಿಲ್ಲ.

ಈಗ ದೊರಕುತ್ತಿರುವ ಆದಿಭರತ ಸುಮಾರು ೧೬-೧೭ನೇ ಶತಮಾನದ ಹೊತ್ತಿಗೆ ಕಂಡುಬರುವ ಮತ್ತೊಂದು ಗ್ರಂಥ. ಪುಣೆಯ ಭಂಡಾರ್ಕರ್ ಓರಿಯಂಟಲ್ ಸಂಸ್ಥೆಯಲ್ಲಿ ತೆಲುಗು ವ್ಯಾಖ್ಯಾನಸಹಿತವಾಗಿ ಹಸ್ತಪ್ರತಿಯಲ್ಲಿ ಕಂಡುಬರುವ ಇದಕ್ಕೆ ನಾಟ್ಯಸರ್ವಸ್ವದೀಪಿಕಾ ಎಂಬ ಮತ್ತೊಂದು ಹೆಸರೂ ಇದೆ. ವರಕಟಿಕಲ್ಪೂಢ ವಂಶದ ಆಪಸ್ತಂಭ ಸೂತ್ರ ಶ್ರೀವತ್ಸಗೋತ್ರೀಯರಾದ ವೈದ್ಯಪ್ಪ ಮತ್ತು ಕೋಕಿಲಾಂಬಾ ಅವರ ಮಗ ನಾರಾಯಣ ಶಿವಯೋಗಿ ಅಥವಾ ಸಿದ್ಧಶಿವಶ್ರೀರಾಮಾನಂದಯೋಗಿ ಅಥವಾ ವಾಮಾನಂದಯೋಗಿ ಎಂಬೆಲ್ಲ ಮೂರ್ನಾಲ್ಕು ಹೆಸರಿನಿಂದ ತನ್ನನ್ನು ಕರೆದುಕೊಂಡವನೇ ಆದಿಭರತದ ರಚನಾಕಾರ – ಎಂದು ಪ್ರೊ ವಿ. ರಾಘವನ್ ಅವರು ಸಂಶೋಧಿಸಿದ್ದಾರೆ. ಈ ಗ್ರಂಥವು ಸಂಗೀತರತ್ನಾಕರ, ಸಂಗೀತಮಣಿದರ್ಪಣ, ಸಂಗೀತವಿದ್ಯಾವಿನೋದ, ತಾಲಕಲಾವಿಲಾಸ, ಸಂಗೀತಾರ್ಣವ ಮತ್ತು ಕೋಹಲಮತ ಗ್ರಂಥಗಳನ್ನು ಉಲ್ಲೇಖಿಸಿ ನೃತ್ಯ, ಗೀತ, ವಾದ್ಯ, ತಾಲಗಳ ಬಗ್ಗೆ ಲಕ್ಷಣಗಳನ್ನು ಬರೆದಿದೆ. ನೃತ್ಯದಲ್ಲಿ ಅಂಗೋಪಾಂಗ ಅಭಿನಯ, ಸ್ಥಾನ, ಚಾರಿ ಇತ್ಯಾದಿ ಲಕ್ಷಣಗಳನ್ನು ಕಾಣಬಹುದು.

ವಿನಾಯಕ ಭರತ

ಭರತಾರ್ಣವಕ್ಕೆ ತೆಲುಗು ಭಾಷೆಯಲ್ಲಿ ಬರೆಯಲಾದ ವಿನಾಯಕ ಭರತ ಎಂಬ ವ್ಯಾಖ್ಯಾನವೂ ಇದೆ. ಇದರ ಹಸ್ತಪ್ರತಿಯು ತಿರುಪತಿಯ ಶ್ರೀವೇಂಕಟೇಶ್ವರ ಹಸ್ತಪ್ರತಿ ಸಂಶೋಧನಾಲಯದಲ್ಲಿ ದೊರಕಿದೆ. ವಿನಾಯಕ ಎಂಬುವನಿಂದ ಬರೆದಿರಬಹುದಾದ ಈ ವ್ಯಾಖ್ಯಾನವನ್ನು ಪ್ರಕಟಿಸುವ ಕೆಲಸ ಇನ್ನೋ ಆಗಬೇಕಿದೆ. ಒಟ್ಟಿನಲ್ಲಿ ನಾಟ್ಯಶಾಸ್ತ್ರವಲ್ಲದೆ ಇವು ಯಾವುವೂ ಪುರಾಣಪುರುಷರ ಗ್ರಂಥವಲ್ಲ ಎಂಬಿತ್ಯಾದಿ ವಿವರಗಳ ಸಹಿತ ಇನ್ನೂ ಹೆಚ್ಚಿನ ವಿಶ್ಲೇಷಣೆಯನ್ನು ನಂದಿಕೇಶ್ವರ ಪರಂಪರೆಯ ಗ್ರಂಥಗಳ ಕುರಿತ ಪ್ರತ್ಯೇಕವಾದ ಸಂಚಿಕೆಗಳಲ್ಲಿ ಶಾಸ್ತ್ರರಂಗದಲ್ಲಿದೆ.[2]

ಮತಂಗ ಭರತ ಮತ್ತು ಬಾಲರಾಮ ಭರತ

ಮತಂಗ ಭರತ ಎಂಬ ಹೆಸರುಳ್ಳ ಮತಂಗ ಮುನಿಯ ಅಂಕಿತದ ಗ್ರಂಥ ನಿಜವಾಗಿಯೂ ಮತಂಗನದ್ದಲ್ಲ ಬದಲಾಗಿ ಬಂಡಾರು ಲಕ್ಷ್ಮೀನಾರಾಯಣ ಎಂಬ ವಿಜಯನಗರ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಭರತಾಚಾರ್ಯ ವಿದ್ವಾಂಸ ಬರೆದ ಸಂಗೀತ ಸೂರ್ಯೋದಯದ ಹಸ್ತಪ್ರತಿಯ ಮತ್ತೊಂದು ನಕಲು ಎನ್ನುವುದನ್ನು ಈಗಾಗಲೇ ಪತ್ತೆಹಚ್ಚಲಾಗಿದ್ದು; ವಿವರವಾದ ಸಂಚಿಕೆಯನ್ನು ಶಾಸ್ತ್ರರಂಗದ ಕಾರ್ಯಕ್ರಮದಲ್ಲಿ ಕಾಣಬಹುದು[3]. ಬಾಲರಾಮಭರತ ಎಂಬುದು ಕೇರಳದ ರಾಜ ಬಲರಾಮವರ್ಮ ೧೮ನೇ ಶತಮಾನದಲ್ಲಿ ಬರೆದ ಗ್ರಂಥವಾಗಿದೆ.

ಸದಾಶಿವಭರತ

ಇರುವ ಭರತನಾಮಕ ಗ್ರಂಥಗಳ ಪೈಕಿ ಅತ್ಯಂತ ಹೊಸತು ಎನ್ನಬಹುದಾದದ್ದು ಸದಾಶಿವಭರತ. ಈಗ ದೊರೆಯುತ್ತಿರುವ ಸದಾಶಿವ ಭರತವೆನ್ನುವ ಗ್ರಂಥದ ಹಸ್ತಪ್ರತಿ ತೆಲುಗು ಲಿಪಿಯಲ್ಲಿದ್ದು ೧೮-೧೯ನೇ ಶತಮಾನದ ಆಸುಪಾಸಿನದ್ದೆಂದು ಇದರ ಲಕ್ಷಣಗಳನ್ನು ಗಮನಿಸಿದಾಗ ಹೇಳಬಹುದು. ಆದರೆ ಇದನ್ನು ಪಂಚ ಭರತರ ಒಳಗೆ ಸೇರಿಸಿ ಪ್ರಾಚೀನ ಗ್ರಂಥ ಎಂದೆನ್ನುವ ಪರಿಪಾಠ ಬಂದಂತಿದೆ ಎಂಬುದು ಲೇಖಿಕೆಯ ಅಭಿಪ್ರಾಯ. ಈ ಗ್ರಂಥಗಳ ವಿವರವಾದ ಅಧ್ಯಯನಕ್ಕೆ ವಿಮರ್ಶಸಹಿತವಾದ ಸಂಪಾದನೆ, ಪ್ರಕಟಣೆಗಳು ಅವಶ್ಯ ಆಗಬೇಕಿದೆ.

 

ಪಂಚಭರತವಾದ

ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಶರ್ಮರು ಮತಂಗನ ಬೃಹದ್ದೇಶಿ ಗ್ರಂಥಕ್ಕೆ ಬರೆದ ಪೀಠಿಕೆಯಲ್ಲಿ ಈ ಗ್ರಂಥಗಳ ಬಗ್ಗೆ ಚರ್ಚಿಸುತ್ತಾರೆ. ಆದರೆ ಭರತರ ಸಂಖ್ಯೆ ಕನಿಷ್ಟಪಕ್ಷ ಐದು ಮಂದಿಯಷ್ಟಾದರೂ ಇದ್ದಿರಬಹುದು ಎಂಬುದಾಗಿ ತಮಿಳು ಕಾವ್ಯ ಸಿಲಪ್ಪದಿಕಾರದ ವ್ಯಾಖ್ಯಾನಕಾರ ಅಡಿಯಾರ್ಕುನಲ್ಲರ್ ಉಲ್ಲೇಖಿಸುತ್ತಾನೆಂದೂ, ಇವರು ಪಂಚಭರತರೆಂದೂ ವಿದ್ವಾಂಸರಾದ ಮಾನವಲ್ಲಿ ರಾಮಕೃಷ್ಣಕವಿಗಳು ಹೇಳಿದ್ದಾರೆ. ಹೀಗೆ ಪಂಚಭರತಮ್‌ನಲ್ಲಿ ಬರುವ ಹೆಸರುಗಳು ಆದಿಭರತ, ನಂದಿ ಭರತ, ಮತಂಗ ಭರತ, ಅರ್ಜುನ ಭರತ, ಹನುಮತ್ ಭರತ. ಹಾಗೂ ಮಹಾಮುನಿ ಭರತನ ಶಿಷ್ಯರೇ ಈ ಪಂಚ ಭರತರೆಂಬ ಶ್ಲೋಕಗಳು ಶಾರದಾತನಯನಿಂದ ದೊರಕಿವೆ, ಮನುವಿನ ಜೊತೆಗೆ ಆರು ಭರತರು ಅಯೋಧ್ಯೆಗೆ ಬಂದು ನಾಟ್ಯವನ್ನು ಭೂಮಿಯಲ್ಲಿ ಪ್ರಚುರಗೊಳಿಸಿದರು ಎಂಬ ವಿವರಗಳಿವೆ ಎಂದು ರಾಮಕೃಷ್ಣಕವಿಗಳು ಪಂಚ ಭರತರ ಕುರಿತ ತಮ್ಮ ವಾದಕ್ಕೆ ಬಳಸಿದ್ದಾರೆ.

ಆದರೆ ಕೀರ್ತಿಶೇಷ ವಿದ್ವಾಂಸರಾದ ಡಾ. ವಿ. ರಾಘವನ್ ಅವರು ಈ ಮಾತನ್ನು ನಿರಾಕರಿಸುತ್ತಾ ಅಡಿಯಾರ್ಕುನಲ್ಲರ್‌ನ ಮಾತಿನಲ್ಲಿರುವ ಉಲ್ಲೇಖ ಪಂಚಭರತರದ್ದಲ್ಲ; ಬದಲಾಗಿ ಅವನು ಹೆಸರಿಸಿರುವುದು ಬೇರೆ ಐದು ತಮಿಳು ನಾಟ್ಯಗ್ರಂಥಗಳನ್ನು, ನಾರದನು ರಚಿಸಿದ್ದು ಒಂದು ಗ್ರಂಥ ಮಾತ್ರ, ಶಾರದಾತನಯನ ಉಲ್ಲೇಖದಲ್ಲಿರುವ ಐದು ಶಿಷ್ಯರು ಪಂಚಭರತರೇ ಎನ್ನಲು ಯಾವ ಸಾಕ್ಷ್ಯಗಳೂ ಇಲ್ಲ. ಹೀಗೆ ಅಡಿಯಾರ್ಕುನಲ್ಲರ್ ಉಲ್ಲೇಖಿಸುವ ’ಪಂಚ ಭಾರತೀಯಂ’ ಎಂಬ ನಾರದನ ಐದು ಕೃತಿಗಳನ್ನ ನಾಟ್ಯದ ಐದು ಅಂಗಾಂಶಗಳೆಂಬಂತೆಯೂ ಪರಿಗಣಿಸಬಹುದು. ಇಲ್ಲವೇ ಪಂಚ ಮರಬು ಎಂಬ ತಮಿಳುಗ್ರಂಥವೂ ಕೂಡಾ ಐದು ವಿವಿಧ ಮುಖ್ಯ ಅಧ್ಯಾಯಗಳಾಗಿ ತನ್ನನ್ನು ವರ್ಗೀಕರಿಸಿಕೊಂಡಿದೆಯಾದ್ದರಿಂದ ಪಂಚ ಭರತ ವಿಚಾರ ಪ್ರಸಿದ್ಧಿಗೆ ಬಂದದ್ದಿರಬಹುದು ಎನ್ನಿಸುತ್ತದೆ. ಇನ್ನು ಕೋಹಲನೇ ಭರತೋತ್ತರ ಕಾಲದಲ್ಲಿ ಉತ್ತರ ತಂತ್ರಗಳನ್ನು ಬರೆದಿದ್ದ ಎನ್ನುವುದನ್ನು ಸ್ವತಃ ನಾಟ್ಯಶಾಸ್ತ್ರ ಸೂಚಿಸಿದೆ ಬೇರೆ. ಹಾಗಾಗಿ ಕೋಹಲನ ಹೆಸರೂ ಇಲ್ಲದಿರುವ ಈ ಪಂಚ ಭರತವಾದವನ್ನು ಒಪ್ಪಲಾಗದು, ಅದು ತೀರಾ ಅರ್ವಾಚೀನ ಸೇರ್ಪಡೆ ಎಂದು ಹೇಳಿ ಪಂಚಭರತವಾದವನ್ನು ನಿರಾಕರಿಸುತ್ತಾರೆ. ಲೇಖಿಕೆಯಾದ ಡಾ. ಮನೋರಮಾ ಅವರೂ ತಮ್ಮ ಅಧ್ಯಯನಮುಖೇನ ಮತ್ತೊಮ್ಮೆ ಡಾ. ರಾಘವನ್ ಅವರ ಮಾತನ್ನೇ ಸಮರ್ಥಿಸಿ, ಪಂಚ ಭರತವಾದಕ್ಕೆ ಬೆಲೆಯಿಲ್ಲವೆನ್ನುತ್ತಾರೆ.

 

ಸಮಾಪನ

ಭರತನ ನಾಟ್ಯಶಾಸ್ತ್ರ ಎಲ್ಲ ಕಲೆ- ಕಲಾಶಾಸ್ತ್ರಗ್ರಂಥಗಳ ತಾಯಿಬೇರು. ಅದನ್ನನುಸರಿಸಿ ಅಥವಾ ನಾಟ್ಯಶಾಸ್ತ್ರವನ್ನು ವ್ಯಾಖ್ಯಾನಿಸಿ ಇಲ್ಲವೇ ಅದರ ವಿವರಗಳನ್ನು ಬೆಳೆಯಿಸಿ ಅನೇಕ ಗ್ರಂಥಗಳು ಅನಂತರದ ಕಾಲಗಳಲ್ಲಿ ಬರೆಯಲ್ಪಟ್ಟಿವೆ. ಹೀಗೆ ರಚನೆಗೊಂಡ ಗ್ರಂಥಗಳು ಭರತಮುನಿಗೆ ಋಣಿಯಾಗಿದ್ದೇವೆ ಎಂಬರ್ಥದಲ್ಲಿಯೋ ಅಥವಾ ಭರತ ಹೇಳಿದ್ದನ್ನೇ ತಾವು ಹೇಳುತ್ತಿದ್ದೇವೆ ಎಂಬರ್ಥದಲ್ಲಿ ಭರತ ಎಂದೇ ತಮ್ಮನ್ನು ಹೆಸರಿಸಿಕೊಂಡಿವೆ. ಭರತನ ನಾಟ್ಯವೇದವನ್ನು ಯಾರು ಭರಿಸುವರೋ ಅವರು ಭರತರು ಎಂದುಕೊಳ್ಳಬಹುದು. ಇಲ್ಲವೇ ಭರತನ ಭೂಮಿಯೇ ಭಾರತವಾಗಿದೆ ಎಂದ ಮೇಲೆ ಭರತಪುತ್ರರಾದ ನಾವು ನೀವುಗಳೂ ಭರತರೇ ಹೌದು. ಹಾಗೆಂದೇ ಬಾಲರಾಮವರ್ಮನ ಬಾಲರಾಮಭರತ ಎಂಬ ಸ್ವತಂತ್ರಗ್ರಂಥದಿಂದ ಮೊದಲ್ಗೊಂಡು ಅದೆಷ್ಟೋ ಸಂಗ್ರಹ-ಸಂಕಲನಗ್ರಂಥಗಳೂ ಭರತಶಾಸ್ತ್ರಸಂಗ್ರಹ, ಭರತಸಾರಸಂಗ್ರಹ, ಭರತಸಂಗ್ರಹ ಎಂದೆಲ್ಲ ಭರತ ಎಂಬ ಹೆಸರನ್ನೂ ಜೊತೆಗಿಟ್ಟುಕೊಂಡಿವೆ.

ಇದರಿಂದಾಗಿ ಎಷ್ಟೋ ಮಂದಿಗೆ ಹಲವು ಭರತರಿದ್ದರು; ಹಲವು ಭರತನ ನಾಟ್ಯಶಾಸ್ತ್ರಗಳಿದ್ದವು ಎಂಬ ಭ್ರಮೆಯನ್ನೂ ಉಂಟುಮಾಡಿವೆ. ಎಷ್ಟೆಂದರೆ ಹೀಗೆ ಹೆಸರಾದ ಗ್ರಂಥಗಳೆಲ್ಲವೂ ಪೌರಾಣಿಕ ವ್ಯಕ್ತಿಗಳ ಹೆಸರನ್ನು ಹೋಲುವ ಶೀರ್ಷಿಕೆಯನ್ನು ಪಡೆದಿವೆಯಾದ್ದರಿಂದ ನಾಟ್ಯಶಾಸ್ತ್ರಕ್ಕಿಂತಲೂ ಇವು ಪ್ರಾಚೀನ ಎಂಬ ಅಭಿಪ್ರಾಯಗಳನ್ನೂ ಹುಟ್ಟುಹಾಕಿಸಿವೆ. ಇದೇನು ಅಪರಾಧವಲ್ಲ. ಭರತನ ನಾಟ್ಯಶಾಸ್ತ್ರವನ್ನು ಆಧರಿಸಿ ಬರೆದ ಗ್ರಂಥಗಳು ಕೂಡಾ ಅದೇ ಸಂಪ್ರದಾಯದ ಕೂಸುಗಳು. ಅವುಗಳ ಕಾಲ, ದೇಶ, ಆಕಾರ, ಗಾತ್ರಗಳು ಭಿನ್ನವಾಗಿರಬಹುದು. ಆದರೆ ಅವು ಭರತನ ಆಶಯವನ್ನೇ ತಮ್ಮಿಂದಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವ ಧ್ಯೇಯದಲ್ಲಿ ಬರೆಯಲ್ಪಟ್ಟವು. ಹಾಗೆಂದು ಇವು ನಾಟ್ಯಶಾಸ್ತ್ರದಷ್ಟು ಸಮಗ್ರವೂ ಅಲ್ಲ; ವಿಸ್ತಾರವಾಗಿಯೂ ಇಲ್ಲ. ಬದಲಾಗಿ ನೃತ್ಯವೆಂಬ ಕ್ಷೇತ್ರಕ್ಕೆ ಅಧಿಕಾರಿಗಳಂತೆ ಅದರಲ್ಲೂ ದಾಕ್ಷಿಣಾತ್ಯ ಪರಂಪರೆಯ ಪ್ರವೃತ್ತಿಭೇದಗಳಂತೆಯೇ ವರ್ತಿಸುತ್ತವೆ.

ವಿಶೇಷವೆಂದರೆ ಈ ಗ್ರಂಥಗಳು ಭರತ, ಹನುಮ, ಗುಹ ಎಂಬುದಾಗಿ ತಮ್ಮನ್ನು ಹೆಸರಿಸಿಕೊಂಡಿದ್ದರೂ ಇವುಗಳು ಅಭಿನಯದರ್ಪಣ, ಭರತಾರ್ಣವ ಎಂಬ ನಂದಿಕೇಶ್ವರನ ಗ್ರಂಥಗಳ ಲಕ್ಷಣಗಳನ್ನೇ ಹೋಲುತ್ತವೆ. ಮತ್ತು ತೆಲುಗು-ಸಂಸ್ಕೃತ ಭಾಷೆಯಲ್ಲೇ ಇವುಗಳ ಹಸ್ತಪ್ರತಿಗಳು ದೊರಕುತ್ತವೆ. ಇದರಿಂದಾಗಿ ದಾಕ್ಷಿಣಾತ್ಯ ಪರಂಪರೆಗೆ ಸೇರಿದ ಗ್ರಂಥಗಳಿವು ಎಂದು ನಿಸ್ಸಂಶಯವಾಗಿ ಹೇಳಬಹುದು. ಗ್ರಂಥಗಳ ಹೆಸರಿನಂತೆಯೇ ಲಕ್ಷಣಗಳಲ್ಲೂ ಪುರಾಣೋಕ್ತವೆನಿಸುವಂಥ ವಿವರಗಳಿವೆ. ಆದರೆ ಇದು ಗ್ರಂಥವನ್ನು ಪೂಜ್ಯ, ಪ್ರಾಚೀನ ಅಥವಾ ಲಕ್ಷಣಗಳಲ್ಲಿ ಕಾಲಾತೀತವಾದ ಸಾಧಾರಣೀಕರಣ ಕಾಣಿಸುವ ಗ್ರಂಥಕಾರರ ಉಪಾಯವೆಂದೇ ಲೇಖಿಕೆ ಪ್ರತಿಪಾದಿಸುತ್ತಾರೆ. ಹೀಗಿದ್ದೂ ಭರತ ಎಂಬ ಹೆಸರಿನಿಂದ ತಮ್ಮ ಕೃತಿಗಳನ್ನು ಕರೆದುಕೊಂಡಿರುವ ಹಿನ್ನೆಲೆಯಲ್ಲಿ ಆ ಗ್ರಂಥಕರ್ತೃಗಳಿಗೆ ತಾವು ಭರತಮುನಿಯ ಮಕ್ಕಳು, ಪೀಳಿಗೆಯವರು ಎಂತಲೋ ಅಥವಾ ತಾವು ಭರತನಿಗೆ ಋಣಿ ಎಂಬ ಧನ್ಯತೆಯೋ ಇರುವಂತಿದೆ. ಈ ಕುರಿತಾದ ಹೆಚ್ಚಿನ ವಿವರಗಳು ಲೇಖಿಕೆಯ ಯಕ್ಷಮಾರ್ಗಮುಕುರ, ಮಹಾಮುನಿ ಭರತ[4] ಮತ್ತು ನಂದಿಕೇಶ್ವರ ಎಂಬ ಅಧ್ಯಯನಕೃತಿಗಳಲ್ಲಿದೆ.

ಪರಾಮರ್ಶನ ಗ್ರಂಥಗಳು

Nagar, R, S and Joshi (Ed.) (2012). Natyashastra of Bharatamuni with the commentary of Abhinavabharati by Abhinavagupta. 1-2-3-4 volumes.  Delhi: Parimal Publication.

Raghavan, V. 1956. Some names in early sangita literature. Sangeet Natak Akademi, New Delhihttps://archive.org/details/dli.ministry.22954

Raghavan, V, Later sangita literature : .https://archive.org/details/dli.ministry.16048

Gode P K , “The Bharata Adi-Bharata Problem and the Ms of Adibharata, by P K Gode,” MusicResearchLibrary, accessed November 3, 2024, http://musicresearchlibrary.net/omeka/items/show/367.

K Sambasiva Sastri, 1935. The Balarama Bharatam https://archive.org/details/in.ernet.dli.2015.283004

K Vasudeva Sastri, 2016 Bharatarnava Of Nandikeshwara Series No. 74 Thanjavur Sarasvati Mahal Series. https://archive.org/details/bharatarnava-of-nandikeshwara-series-no.-74-thanjavur-sarasvati-mahal-series/page/n1/mode/2up

U Ve Saminathayyar Library, “Bharata Senapatiyam,” MusicResearchLibrary, accessed November 3, 2024, http://musicresearchlibrary.net/omeka/items/show/2639.

Jayalakshmi R S, “bharata sEnApatIyam, by R S Jayalakshmi,” MusicResearchLibrary, accessed November 3, 2024, http://musicresearchlibrary.net/omeka/items/show/2485.

Adibharatam of Bharata -1 – MORI, MusicResearchLibrary, accessed November 3, 2024, http://musicresearchlibrary.net/omeka/items/show/1339.

Anon, “Matanga Bharatamu – RSN-TMSSML-B11526-D10667,” MusicResearchLibrary, accessed November 3, 2024, http://musicresearchlibrary.net/omeka/items/show/1269

Raghunatha Prasada, “Arjuna Bharatam of Raghunatha Prasada – RSN-TMSSML-B6643a,” MusicResearchLibrary, accessed November 3, 2024, http://musicresearchlibrary.net/omeka/items/show/1250.

Anon, “Sadasiva Bharata 1 – MORI-B941,” MusicResearchLibrary, accessed November 3, 2024, http://musicresearchlibrary.net/omeka/items/show/1348.

Vinayaka, “Vinayakabharata : Commentary on Bharatarnava – SVUORI,” MusicResearchLibrary, accessed November 3, 2024, http://musicresearchlibrary.net/omeka/items/show/145.

 

ಮತ್ತು ಉಲ್ಲೇಖಿತ ಲಿಂಕ್ ಗಳು

  1. ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ ಶಾಸ್ತ್ರರಂಗ ಭಾಗ 5 : ದಾಕ್ಷಿಣಾತ್ಯ/ ದಕ್ಷಿಣ ಭಾರತ ಸಂಚಿಕೆ 55 : @noopurabhramari1212
  2. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. ↵↵ಮತ್ತು ನಂದಿಕೇಶ್ವರ. ಡಾ.ಮನೋರಮಾ ಬಿ.ಎನ್. ಶ್ರೀಭಾರತೀ ಪ್ರಕಾಶನದ ಪ್ರಕಟಣೆ↵↵https://www.noopurabhramari.com/yakshamargamukura/
  3. ನಂದಿಕೇಶ್ವರನ ಭರತಾರ್ಣವ ಮತ್ತು ನಂದಿಕೇಶ್ವರನ ಅಭಿನಯದರ್ಪಣ ಗ್ರಂಥ
  4. ಬಂಡಾರು ಶ್ರೀಲಕ್ಷ್ಮೀನಾರಾಯಣ ಸಂಗೀತಸೂರ್ಯೋದಯ ಗ್ರಂಥ
  5. https://www.noopurabhramari.com/mahamuni-bharata-book-order/ಮಹಾಮುನಿ ಭರತ ಪುಸ್ತಕ. ಶ್ರೀ ಭಾರತೀ ಪ್ರಕಾಶನ. ಗುರುಗ್ರಂಥಮಾಲಿಕೆ ೪೦. ಬೆಂಗಳೂರು. ೨೦೨೪

Leave a Reply

*

code