ಶಾಸ್ತ್ರರಂಗ ಭಾಗ 4- ಪಶ್ಚಿಮ/ ಆವಂತೀ (Video series)-ಸಂಚಿಕೆ 45 : ಭಾವಭಟ್ಟನ ಸಂಗೀತವಿನೋದ& ಇತರ ಗ್ರಂಥಗಳು

Posted On: Sunday, August 18th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ

ಸಂಚಿಕೆ 45 : ಭಾವಭಟ್ಟ ಅಥವಾ ಅನುಪಸಿಂಹನ ಸಂಗೀತವಿನೋದ, ಅನುಪ ಸಂಗೀತ ವಿಲಾಸ, ಅನುಪ ಸಂಗೀತ ರತ್ನಾಕರ, ಭಾವಮಂಜರಿ ಹಾಗೂ ಪಶ್ಚಿಮ ಭಾರತದ ರಾಜ ಹಮ್ಮೀರನ ಸಂಗೀತಶೃಂಗಾರಹಾರ, ಮೋಕ್ಷದೇವ ಮತ್ತು ನಾಗಮಲ್ಲದೇವನ ಗ್ರಂಥಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 4- Paschima/Āvantī (Western Region of Ancient Bhārata)

Episode 45 : Bhavabhatta or Anupasimha’s Sangīta Vinoda, Anupa Sangīta Vilāsa, Anupa Sangīta Ratnākara, Bhavamanjari. This episode also includes the Sangīta śringārahāra of King Hammira, and Musical treatises authored by Mokshadeva and Nagamalladeva.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಭಾವಭಟ್ಟನ ಸಂಗೀತವಿನೋದ ಮತ್ತು ಇತರ ಗ್ರಂಥಗಳು

ಸಂಗೀತ ಕ್ಷೇತ್ರದ ರಂಜನೀಯವಾದ ಪ್ರಸ್ತುತಿ ಎಂಬ ಅರ್ಥದ ಸಂಗೀತವಿನೋದ, ಸಂಗೀತ ಕ್ಷೇತ್ರದ ಸವಿಲಾಸ, ಸಮುದ್ರ, ಪ್ರೌಢಿಮೆ ಎಂಬ ಅರ್ಥವುಳ್ಳ ಅನುಪ ಸಂಗೀತ ವಿಲಾಸ, ಅನುಪ ಸಂಗೀತ ರತ್ನಾಕರ ಮತ್ತು ಅನುಪ ಸಂಗೀತ ಅಂಕುಶ ಅಥವಾ ಅನುಪಂಕುಶ ಅಥವಾ ಭಾವಮಂಜರಿ ಎಂಬ ಹೆಸರಿನ ಗ್ರಂಥಗಳು ಭಾವಭಟ್ಟನದ್ದೆಂದು ಹೇಳಲಾಗುತ್ತದೆ. ಅಂತೆಯೇ ಭಾವಭಟ್ಟನ ಪೋಷಕನಾದ ರಾಜಸ್ಥಾನದ ಬಿಕಾನೇರ್‌ನ ರಾಜ ಅನುಪಸಿಂಹನ ಹೆಸರಿನಲ್ಲಿಯೂ ಈ ಗ್ರಂಥಗಳ ಕರ್ತೃತ್ವವನ್ನು ಸೂಚಿಸಲಾಗುತ್ತದೆ.  ಈ ರೀತಿಯ ಚರ್ಯೆ ಲಕ್ಷಣಪ್ರಪಂಚದಲ್ಲೇನು ಹೊಸತಲ್ಲ. ಕಾರಣ, ಎಷ್ಟೋ ರಾಜರ ಸಾಂಸ್ಕೃತಿಕ- ಸಾಹಿತ್ಯಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಸ್ಮರಿಸುವಂತೆ ಅವರ ಹೆಸರಿನಲ್ಲಿ ನಮ್ಮ ವಿದ್ವಾಂಸರು ಗ್ರಂಥಗಳನ್ನು ಬರೆದವರಿದ್ದಾರೆ. ಪಂಡಿತಮಂಡಲಿಗಳೂ ಕೂಡಾ ಇದೇ ರೀತಿಯಾಗಿ ಕೆಲಸ ಮಾಡಿ ರಾಜರ ಹೆಸರಿನಲ್ಲಿ ಗ್ರಂಥಗಳನ್ನು ಅಂಕಿತಗೊಳಿಸಿದವರಿದ್ದಾರೆ. ಸ್ವತಃ ಅನುಪಸಿಂಹನೇ ಭಾವ ಭಟ್ಟನಿಗೆ ಅನೇಕ ಸಂಗೀತ ಕೃತಿಗಳನ್ನು ಬರೆಯಲು ಆದೇಶಿಸಿ ಮಾರ್ಗದರ್ಶಿಸಿದ್ದನಂತೆ. ಗೀತಗೋವಿಂದದ ವ್ಯಾಖ್ಯಾನ ಬರೆಯಲೂ ತಿಳಿಸಿದ್ದನಂತೆ. ಹಾಗಾಗಿ ಅನುಪಸಿಂಹನ ಹೆಸರಿನಲ್ಲಿ ಸಂಗೀತವಿನೋದವೇ ಮೊದಲಾದ ಗ್ರಂಥಗಳು ಕಂಡುಬಂದಿದ್ದರೆ ಅದು ಖಂಡಿತಾ ಆಶ್ಚರ್ಯವಲ್ಲ. ಇದು ತನ್ನ ವಿದ್ಯೆಯನ್ನು ಪುರಸ್ಕರಿಸಿ ಆಶ್ರಯವನ್ನಿತ್ತ ಒಡೆಯನ ಕೃತಜ್ಞತಾ ಸಮರ್ಪಣೆಯ ರೀತಿಯೆಂದೇ ತರ್ಕಿಸಬಹುದು. ಹಾಗೆಂದೇ ಅನುಪಸಿಂಹನನ್ನು ಧಾರಾಳವಾಗಿ ಹೊಗಳಿದ್ದಾನೆ ಕೂಡಾ. ಶ್ರೀಮದನೂಪಸಿಂಹಜ್ಞಾಯ ಗ್ರಂಥದ್ವಯಂ ಕೃತಮ್ || ಏಕೋಯನೂಪವಿಲಾಸಖ್ಯೋ ಅನುಪರತ್ನಾಕರಃ ಪರಃ | ಅನೂಪಾಂಕುಶನಾಮಯಂ ಗ್ರಂಥೋ ನಿಷ್ಪಾದ್ಯತೇಯಧುನಾ || ಹೇಳಿಕೊಂಡಿದ್ದಾನೆ. ಇದರೊಂದಿಗೆ ಮುರಳಿಪ್ರಕಾಶ ಎಂಬ ಕೊಳಲಿಗೆ ಮೀಸಲಾದ ಕೃತಿ, ಧ್ರುಪದ್ ಗಾಯನದ ಕುರಿತಾದ ನಷ್ಟೋದ್ದಿಷ್ಟಪ್ರಬೋಧಕ ಶ್ರೌಪದಟಿಕಾ ಎಂಬ ಅನುಷ್ಟುಪ್ ಛಂದಸ್ಸಿನಲ್ಲಿರುವ ಗ್ರಂಥ ಹಾಗೂ ಧ್ರುವಪದ ತಿಲಕ ಎಂಬ ಗ್ರಂಥ ಭಾವಭಟ್ಟನ ರಚನೆಯಾಗಿತ್ತೆಂದು ತಿಳಿಯುತ್ತದೆ.

 

ಭಾವಭಟ್ಟ- ಜೀವನ, ಸಾಧನೆ

ಭಾವಭಟ್ಟನು ತಾನು ಅಭಿರದೇಶದಲ್ಲಿ ಧವಳ ಎಂಬ ಊರಿನವನೆಂದು, ಕೃಷ್ಣಾತ್ರ ಗೋತ್ರಕ್ಕೆ ಸೇರಿದ ಬ್ರಾಹ್ಮಣನೆಂದೂ ಹೇಳುತ್ತಾನೆ. ಭಾವಭಟ್ಟನ ತಾತ ತಾನಾ ಭಟ್ಟ ; ತಂದೆ ಜನಾರ್ದನ ಭಟ್ಟರು. ಮೊಘಲ್ ರಾಜ ಶಹಜಹಾನ್‌ನ ಆಸ್ಥಾನ-ಸಂಗೀತಗಾರರಾಗಿ ಜನಾರ್ದನ ಭಟ್ಟ ಸಂಗೀತರಾಯ ಎಂಬ ಹೆಸರಿನಿಂದ ಖ್ಯಾತರಾಗಿದ್ದರೆಂದೂ ತಿಳಿಯುತ್ತದೆ. ಭಾವಭಟ್ಟನು ಕೂಡಾ ಅನುಷ್ಟುಪ್ ಚಕ್ರವರ್ತಿ ಅಂದರೆ ಅನುಷ್ಟುಪ್ ಛಂದಸ್ಸಿನಲ್ಲಿ ಪ್ರಾವಣ್ಯವುಳ್ಳವ ಎಂಬ ಅರ್ಥದ ಬಿರುದನ್ನು ಘನಶ್ಯಾಮ ಪಂಡಿತ ಎಂಬುವರಿಂದ ಪಡೆದಿದ್ದ. ಅಂದರೆ ಭಾವಭಟ್ಟ ಸಂಗೀತಶಾಸ್ತ್ರದಲ್ಲಷ್ಟೇ ಅಲ್ಲದೆ ಅಲಂಕಾರ ಮತ್ತು ತರ್ಕ ಶಾಸ್ತ್ರಗಳಲ್ಲಿಯೂ ವಿದ್ವಾಂಸ, ಇತಿಹಾಸ ಪುರಾಣಗಳಲ್ಲಿ ವಿದ್ವತ್ತು ಇದ್ದ ಓರ್ವ ಕವಿ ಎನ್ನುವುದೂ ಗ್ರಂಥಗಳಿಂದ ತಿಳಿಯುತ್ತದೆ. ಜೊತೆಗೆ ತನ್ನ ತಂದೆಯಂತೆಯೇ ಸಂಗೀತರಾಯ ಎಂಬ ಬಿರುದಿನಿಂದ ಮಾನ್ಯವಾಗಿದ್ದ. ಹೀಗಾಗಿ ಷಹಜಹಾನ್ ಆಸ್ಥಾನದಲ್ಲಿದ್ದ ಭಾವಭಟ್ಟ ತದನಂತರದಲ್ಲಿ ಅನುಪಸಿಂಹನ ಆಸ್ಥಾನಕ್ಕೆ ತೆರಳಿದ್ದನ್ನೂ ಗುರುತಿಸಬಹುದು.

 

ಗ್ರಂಥ ಲಕ್ಷಣ ಮತ್ತು ಅಧ್ಯಾಯಗಳು

ಜಮ್ಮು ಮತ್ತು ಕಾಶ್ಮೀರದ ಮಹಾರಾಜರ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿರುವ ಅನುಪಂಕುಶ ಗ್ರಂಥದ ಹಸ್ತಪ್ರತಿಯು ಸ್ವರ ಮತ್ತು ರಾಗದ ಕುರಿತಾಗಿ ಎರಡು ಅಧ್ಯಾಯಗಳಲ್ಲಿದೆ. ರಾಗದ ಅಧ್ಯಾಯವನ್ನು ಆಲಾಪನ ಮಂಜರಿ ಎಂದು ಕರೆಯಲಾಗಿದೆ. ಅನುಪ ಸಂಗೀತಾ ರತ್ನಾಕರ ಗ್ರಂಥ ಕೂಡಾ ಸ್ವರ ಮತ್ತು ರಾಗಗಳ ಕುರಿತು ಎರಡು ಅಧ್ಯಾಯಗಳಲ್ಲಿದೆ. ಅನುಪ ಸಂಗೀತ ವಿಲಾಸವು ಶ್ರುತಿ, ಸ್ವರ ಮತ್ತು ರಾಗ ಎಂಬ ಮೂರು ಅಧ್ಯಾಯಗಳಲ್ಲಿದೆ. ಅಂತೆಯೇ ಆ ಕಾಲದ ದ್ರುಪದ್ ಸಂಗೀತದ ಹಲವು ಅಂಶಗಳನ್ನು ಭಾವಭಟ್ಟನ ಗ್ರಂಥಗಳಲ್ಲಿ ಗುರುತಿಸಬಹುದು. ಗೀತಗೋವಿಂದ ಕಾವ್ಯಕ್ಕೆ ಬರೆದ ಭಾವಭಟ್ಟನ ವ್ಯಾಖ್ಯೆ ಜಮ್ಮು ಮತ್ತು ಕಾಶ್ಮೀರದ ಮಹಾರಾಜರ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ.

ಶಾರ್ಙ್ಗದೇವನ ಸಂಗೀತರತ್ನಾಕರವನ್ನು ಬಹುಮಟ್ಟಿಗೆ ಅನುಕರಿಸುವ ಭಾವಭಟ್ಟನ ಗ್ರಂಥಗಳಲ್ಲಿ ಸಂಗೀತ ಪಾರಿಜಾತ, ರಾಗಮಂಜರಿ, ರಾಗಮಾಲಾ, ಸಂಗೀತ ದರ್ಪಣ, ಸದ್ರಾಗಚಂದ್ರೋದಯ, ನರ್ತನನಿರ್ಣಯ, ಹೃದಯಪ್ರಕಾಶ, ರಾಗತತ್ತ್ವವಿಬೋಧ, ರಾಗ ಕುತೂಹಲ ಮತ್ತು ಸಂಕೀರ್ಣ ರಾಗಧ್ಯಾಯ ಎಂಬ ಅನೇಕ ಗ್ರಂಥಗಳಲ್ಲಿರುವ ನಾದ, ರಾಗ, ತಾನ, ಪ್ರಬಂಧ, ಮೂರ್ಛನ, ತಾಲದ ಲಕ್ಷಣಗಳನ್ನು ಗುರುತಿಸಬಹುದು. ಅದರಲ್ಲೂ ಭಾವಭಟ್ಟನ ಸಂಗೀತವಿನೋದ ಗ್ರಂಥವು ದಾಕ್ಷಿಣಾತ್ಯ ಗ್ರಂಥಗಳಾದ ಶಾರ್ಙ್ಗದೇವನ ಸಂಗೀತರತ್ನಾಕರ, ಪಂಡರೀಕವಿಠಲನ ನರ್ತನನಿರ್ಣಯ, ದೇವೇಂದ್ರ ಮತ್ತು ದೇವಣಭಟ್ಟರ ಹೆಸರಿನಲ್ಲಿರುವ ಸಂಗೀತಮುಕ್ತಾವಳಿ, ಚತುರ ದಾಮೋದರನ ಸಂಗೀತದರ್ಪಣ, ವೇದಸೂರಿಯ ಸಂಗೀತಮಕರಂದ ಮುಂತಾದ ದಾಕ್ಷಿಣಾತ್ಯ ಗ್ರಂಥಗಳು ತಿಳಿಸುವ ಕೆಲವು ಲಕ್ಷಣಗಳನ್ನೂ ಹೇಳಿದೆ. ಆ ಪೈಕಿ ಅಭಿನಯ ಹಾಗೂ ನೃತ್ತ ಹಸ್ತಾಭಿನಯಗಳು, ತಿರುಗುವ ಚಲನೆಗಳುಳ್ಳ ಲಾಗಗಳು ಹಾಗೂ ಲಾಸ್ಯಾಂಗಗಳು ಮುಖ್ಯವಾದವು. ಆದರೆ ಅವುಗಳನ್ನು ಹಿಂದಿಗೆ ಹತ್ತಿರವಾದ ಪರಿಭಾಷೆಗಳಿಂದ ಹೆಸರಿಸುತ್ತದೆ. ಅಂತೆಯೇ ಧುವಾಡ ಎಂಬ ಭ್ರಮರಿಯುತವಾದ ನೃತ್ಯವನ್ನು ಭೌರಿ ಎಂಬ ಹೆಸರಿನಿಂದ ಪ್ರತ್ಯೇಕವಾಗಿ ಗುರುತಿಸಿ ಅದರ ವಿವಿಧ ಚಲನೆಗಳನ್ನೂ ತಿಳಿಸಿದೆ. ಇದರಿಂದ ದಾಕ್ಷಿಣಾತ್ಯದ ಎಷ್ಟೋ ಪರಿಭಾಷೆಗಳು ಮತ್ತು ಲಕ್ಷ್ಯ ಲಕ್ಷಣಗಳು ಉತ್ತರದಲ್ಲೂ ಸಮಾನವಾದ ಬರೆವಣಿಗೆಗಳನ್ನು ಕಂಡುಕೊಂಡಿತ್ತು ಎನ್ನುವುದು ತಿಳಿಯುತ್ತದೆ. ಇದರಿಂದ ದಾಕ್ಷಿಣಾತ್ಯ ಗ್ರಂಥಗಳ ಪ್ರಭಾವ, ಪರಿಣಾಮ, ಪ್ರಸಿದ್ಧಿಗಳನ್ನೂ ಮನಗಾಣಬಹುದು. ಒಟ್ಟಿನಲ್ಲಿ ಪ್ರದೇಶಗಳು ಬೇರೆ ಬೇರೆಯಿರಬಹುದು. ಪರಂಪರೆಗಳು ಸಾವಿರವಿರಬಹುದು ಆದರೆ ಭಾರತದ ನಾಡಿ ಒಂದೇ, ನೀತಿ ಒಂದೇ, ಸತ್ಯ ಒಂದೇ, ಅಂತರಂಗ ಒಂದೇ ಎನ್ನುವುದು ಯಾವುದೇ ಕಾಲವಿರಲಿ, ಮನವರಿಕೆಯಾಗುತ್ತದೆ.

ಭಾವಭಟ್ಟನ ಕೃತಿಗಳ ಹಸ್ತಪ್ರತಿಗಳು ಬಿಕಾನೇರ್, ಕಲ್ಕತ್ತಾ ಏಷ್ಯಾಟಿಕ್ ಸೊಸೈಟಿ, ಪೂನಾ ಭಂಡಾರ್ಕರ್ ಸಂಸ್ಥೆಯ ಗ್ರಂಥಾಲಯಗಳಲ್ಲಿವೆ. ಆದರೆ ಇವುಗಳು ಪ್ರಕಟಿತ ರೂಪಕ್ಕೆ ಇನ್ನೂ ಸಮಗ್ರವಾಗಿ ಬಂದಿಲ್ಲ ಎನ್ನುವುದು ಬೇಸರದ ಸಂಗತಿ. ಇಷ್ಟೇ ಅಲ್ಲ., ಇಂಥ ಅಭಾಗ್ಯ ರಾಗ, ತಾಳ, ವಾದ್ಯ, ನೃತ್ಯಗಳ ಬಗ್ಗೆ ಬರೆದ ನೂರಾರು ಪ್ರಾಚೀನ ಗ್ರಂಥಗಳದ್ದು ಕೂಡಾ.

ಆ ಪೈಕಿ ಸಂಗೀತ ಶೃಂಗಾರಹಾರ ಎಂಬ ಗ್ರಂಥ ಉಲ್ಲೇಖನೀಯ. ಇದರ ರಚನಾಕಾರ ರಾಜಸ್ಥಾನ ಮೇವಾರದ ಚೌಹಾನ್ ವಂಶಕ್ಕೆ ಸೇರಿದ ಶಾಕಾಂಭರಿಯ ದೊರೆ ಹಮ್ಮೀರ. ಈತನ ಕಾಲ ೧೨೫೩- ೧೩೬೪ರ ಅವಧಿ. ಈ ಸಂಗೀತಶೃಂಗಾರಹಾರ ಗ್ರಂಥದ ಉಲ್ಲೇಖವನ್ನು ಭಾವಭಟ್ಟನಲ್ಲಿ, ಮಹಾರಾಣಾ ಕುಂಭಕರ್ಣ ತನ್ನ ರಸಿಕಪ್ರಿಯ ವ್ಯಾಖ್ಯೆಯಲ್ಲಿ ಹಾಗೂ ಹಮ್ಮೀರನ ಮಗನಾದ ಅಲ್ಲರಾಜನ ರಸರತ್ನದೀಪಿಕಾ ಎಂಬ ಗ್ರಂಥದಲ್ಲಿ ಕಾಣಬಹುದು. ಈ ಹಮ್ಮೀರನ ಬಗ್ಗೆ ನಯಚಂದ್ರಸೂರಿಯೆಂಬ ಕವಿಯು ಹಮ್ಮೀರಕಾವ್ಯ ಎಂಬುದನ್ನು ಬರೆದಿದ್ದನಂತೆ ಮತ್ತು ಉತ್ತರ ಭಾರತದಲ್ಲಿ ಹಮ್ಮೀರ ಎಂಬ ರಾಗದ ಹೆಸರು ಹೊಸತಾಗಿ ಕಂಡುಬರುವುದೇ ಈತನ ವಿದ್ವತ್ತಿಗೆ ದೊರೆತ ಅಭಿಧಾನವೆಂದರೆ ಈತನ ಕೀರ್ತಿ ಎಷ್ಟಿದ್ದಿರಬೇಕು ಎಂದು ಅರ್ಥ ಮಾಡಿಕೊಳ್ಳಬಹುದು. ಈತನು ಗಂಧರ್ವಾಮೃತಸಾಗರವೆಂಬ ಬ್ರಹ್ಮನ ಗ್ರಂಥವನ್ನು, ಅರ್ಜುನ, ಯಾಷ್ಟಿಕ, ರಾವಣ, ದುರ್ಗಾಶಕ್ತಿ, ಅನಿಲ, ಕೋಹಲ, ಕಂಬಳ, ಜೈತ್ರಸಿಂಹ, ರುದ್ರಟ, ವಿಕ್ರಮ, ಕೇಶೀದೇವ, ಜಗದೇಕಮಲ್ಲ, ಸಿಂಹಣ, ಗಣಪತಿ ಎಂಬ ಅನೇಕ ಲಾಕ್ಷಣಿಕರನ್ನು ಸ್ಮರಿಸಿ ಗ್ರಂಥದಲ್ಲಿ ಕೀರ್ತಿಸಿದ್ದಾನೆಂದರೆ ಈತನ ಓದಿನ ವಿಸ್ತಾರವೂ ಮನನೀಯ. ಜೊತೆಗೆ ಈತ ಕವಿಯೂ, ಪ್ರಕೃತ ಭಾಷೆಯಲ್ಲಿ ವಿದ್ವಾಂಸನೂ ಆಗಿದ್ದನೆಂದು ತಿಳಿದುಬರುತ್ತದೆ. ರಾಗ, ಅಲಂಕಾರ, ನಾಟ್ಯ, ಗತಿ, ಗೀತ, ತಾಲ, ಅಭಿನಯಗಳ ಅಧ್ಯಾಯಗಳುಳ್ಳ ಹಮ್ಮೀರನ ಸಂಗೀತ ಶೃಂಗಾರಹಾರ ಗ್ರಂಥವು ನೃತ್ಯದ ಪುಷ್ಪಾಂಜಲಿ, ದೃಷ್ಟಿಭೇದ, ೧೨೦ ವಿಧವಾದ ತಾಲಗಳು ಹಾಗೂ ನಾಟ್ಯರಂಗಭೂಮಿಯ ವಿವರಗಳನ್ನೂ ಹೊಂದಿದೆ. ಈ ಗ್ರಂಥದ ಒಂದು ಹಸ್ತಪ್ರತಿ ತಿರುಪತಿಯ ಶ್ರೀವೇಂಕಟೇಶ್ವರ ಹಸ್ತಪ್ರತಿ ಸಂಶೋಧನಾಲಯದಲ್ಲಿದೆ.

ಇದೇ ರೀತಿಯಾಗಿ ೧೩೨೦ನೇ ಇಸವಿಗೆ ಸಲ್ಲುವ ಗುಜರಾತಿನ ಶ್ರೀಮಾತಾ ಎಂಬ ವಂಶಕ್ಕೆ ಸೇರಿದ ಭೀಮದೇವನೆಂಬ ಮಂತ್ರಿಯ ಮಗ ಮೋಕ್ಷದೇವನ ಗ್ರಂಥವೂ ಸ್ವರ, ರಾಗ, ಗೀತ, ಗ್ರಹ ಮೂರ್ಛನ, ವಾದ್ಯ, ತಾಲ, ಪಾಟಪ್ರಭೇದಗಳು, ನಾಟ್ಯಶಾಸ್ತ್ರದ ಸ್ಥಾನ- ಚಾರಿ-ಕರಣಾದಿಗಳು, ಹಸ್ತ-ಪಾದ-ದೃಷ್ಟಿ ಮೊದಲಾದ ಅಂಗೋಪಾಂಗ ಚಲನೆಗಳು ಮತ್ತು ಮಾರ್ಗೋತ್ತರ ನೃತ್ತಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಭರತಮುನಿಪ್ರಶಂಸೆಯ ನಾಂದಿಶ್ಲೋಕ, ಶಿವಸ್ತುತಿ, ವಿಷ್ಣುಸ್ತುತಿಯಿಂದ ಆರಂಭವಾಗುವ ಇದರಲ್ಲೂ ಸಂಗೀತರತ್ನಾಕರದ ಛಾಪನ್ನು ಇದರ ಲಕ್ಷಣಶ್ಲೋಕಗಳಲ್ಲೂ ಕಾಣಬಹುದು. ತಿರುಪತಿ ವೇಂಕಟೇಶ್ವರ ವಿಶ್ವವಿದ್ಯಾನಿಲಯದ ಹಸ್ತಪ್ರತಿ ವಿಭಾಗದಲ್ಲಿ ಇದರ ಹಸ್ತಪ್ರತಿಯೊಂದಿದೆ.

ಭಾವಭಟ್ಟ ಉಲ್ಲೇಖಿಸಿರುವ ಮತ್ತೊಂದು ಗ್ರಂಥ ಸಂಗೀತಕಲ್ಪದ್ರುಮ. ಇದರ ಉಲ್ಲೇಖ ಪಂಜಾಬ್ ಕ್ಯಾಟಲಾಗ್‌ನಲ್ಲಿವೆ ಎನ್ನುತ್ತಾರೆ ಪ್ರೊ ವಿ. ರಾಘವನ್. ಮತ್ತೊಂದು ಉಲ್ಲೇಖಾರ್ಹ ನೃತ್ಯಗ್ರಂಥ ಜೋಧಪುರದ ಮಹಾರಾಜಾ ಮಾನ್‌ಸಿಂಗ್ ಸಂಗ್ರಹಗಳಲ್ಲಿ ಇರುವ ಜೋಧಪುರದ ನಾಗಮಲ್ಲದೇವನ ನಾಗೇಂದ್ರಸಂಗೀತ ಎಂಬ ದೇವನಾಗರಿ ಲಿಪಿಯ ಹಸ್ತಪ್ರತಿ. ಇದರ ಕಾಲ ಅಂದಾಜು ೧೭೦೦ನೇ ಇಸವಿಯೆಂದು ತಿಳಿದುಬರುತ್ತದೆ. ಇದನ್ನು ಅಂದಿನ ಸಂಗೀತ-ನೃತ್ಯ ಕಲಾವಿದರಾದ ರೂಪಿಣಿ ಮತ್ತು ಕುಸುಮಾವತಿಯವರ ಕಲಾವಂತಿಕೆಯ ಒತ್ತಾಸೆಯಲ್ಲಿ ಬರೆದನೆಂದೂ, ನೃತ್ಯದ ಕುರಿತು ಅಂಗೋಪಾಂಗ -ಹಸ್ತಾಭಿನಯದ ಸಹಿತ ಇನ್ನೂ ಬಹಳಷ್ಟು ವಿಷಯಗಳನ್ನು ಹೇಳಿದ್ದಾನೆಂದೂ ಹಸ್ತಪ್ರತಿಯಿಂದ ತಿಳಿಯುತ್ತದೆ.

ನಮ್ಮ ಈ ಕಾಲಕ್ಕೆ ಅನೇಕಾನೇಕ ಪುಸ್ತಕಗಳು ಪ್ರಕಟವಾಗುತ್ತವೆ. ಕಥೆ, ಕವನ, ಕಾದಂಬರಿ, ಧಾರಾವಾಹಿ, ಪತ್ರಿಕೆ, ನಿಯತಕಾಲಿಕೆ.. ಹೀಗೆ. ಪುಸ್ತಕಪ್ರಪಂಚ ಸಾಕಷ್ಟು ಬೆಳೆದಿದೆ. ಕೋಟ್ಯನುಗಟ್ಟಲೆ ಹಣಕಾಸಿನ ವಹಿವಾಟೂ ಆಗುತ್ತಿದೆ. ಆದರೆ ಪ್ರಾಚೀನ ಗ್ರಂಥಗಳತ್ತ ಗಮನ ಹರಿಸುವವರು ಕಡಿಮೆ. ಅವರು ಕೊಡದೇ ಇದ್ದಿದ್ದರೆ ನಮಗಿಂದು ಮೆರೆಯಲು ಉಳೀಯುತ್ತಿತ್ತೇ? ಆದರೆ ದುರದೃಷ್ಟವಶಾತ್ ನಮ್ಮ ಭಾರತದಲ್ಲಿ ಪ್ರಕಟವಾಗಿರುವ ಗ್ರಂಥಗಳಿಗೆ ಹೋಲಿಸಿದರೆ ಇನ್ನೂ ಹಸ್ತಪ್ರತಿಯಲ್ಲೇ ಉಳಿದುಹೋಗಿರುವ ಗ್ರಂಥಗಳೇ ಅಧಿಕ. ಇಂಥವುಗಳನ್ನು ಪ್ರಕಟಿಸೋಣವೆಂದುಕೊಳ್ಳುವವರಿಗೂ ಸಹಕಾರ, ಪ್ರೋತ್ಸಾಹಗಳು ದೊರಕುತ್ತಿಲ್ಲ. ಹೀಗಿರುವಾಗ ಭಾರತೀಯ ಜ್ಞಾನರಾಶಿಯ ಭವಿಷ್ಯದ ಕಥೆಯೇನು? ಕೊನೆಯಪಕ್ಷ ಇಂಥ ಅಮೂಲ್ಯ ಗ್ರಂಥಗಳನ್ನು ಗುರುತಿಸಿ ತೆಗೆದು ಡಿಜಿಟಲ್ ಪ್ರತಿಯನ್ನಾಗಿ ಸಮಾಜಕ್ಕೆ ಮುಕ್ತ ಓದಿಗೆ ನೀಡುವ ಕರ್ತವ್ಯ ಇಂದಿನ ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳ ಕರ್ತವ್ಯ. ಇಲ್ಲವಾದರೆ ಮುಂದೊಂದು ಕಾಲಕ್ಕೆ ಭರತದೇಶದ ಅಳಿದುಳಿದ ಗ್ರಂಥಶ್ರೀಮಂತಿಕೆಯೂ ಅವಜ್ಞೆ ಮತ್ತು ಅಜ್ಞಾನವೆಂಬ ಗೆದ್ದಲುಹುಳದ ಆಹಾರವಾಗಿ ನಷ್ಟವಾಗುತ್ತದೆ.

—-

ಪರಾಮರ್ಶನ ಗ್ರಂಥಗಳು

Sangita Ratnakara . Vol 1. Chapter 1 https://archive.org/details/SangitaRatnakara http://musicresearchlibrary.net/omeka/items/show/1901 https://archive.org/details/sangitaratnakaraofsankasangaradevashringyr.k.vol1mlbd

Later sangita literature : Raghavan, V. https://archive.org/details/dli.ministry.16048

Anupasimha, “Sangitavinoda of Anupasimha 1 – SVUORI-7545,” MusicResearchLibrary, accessed August 14, 2024, http://musicresearchlibrary.net/omeka/items/show/1218 http://musicresearchlibrary.net/omeka/items/show/1219

Bhava Bhatta, “AnupasangItavilasa of Bhava Bhatta – 1921,” MusicResearchLibrary, accessed August 14, 2024, http://musicresearchlibrary.net/omeka/items/show/2721

Bhava Bhatta, “Anupasangitaratnakara of Bhava Bhatta – 1919,” MusicResearchLibrary, accessed August 14, 2024, http://musicresearchlibrary.net/omeka/items/show/2720

A comparative study of some of the leading music, systems of the 15th, 16th, 17th and 18th Centuries. by V N Bhatakande. https://www.ibiblio.org/guruguha/MusicResearchLibrary/Books-English/BkE-BhatkhandeVN-ComparativeStudyLeadingMusicSystems-15to18C-0009.pdf

ಮನೋರಮಾ ಬಿ.ಎನ್, ಶಾಸ್ತ್ರರಂಗ ಭಾಗ ೪: ಪಶ್ಚಿಮ/ ಆವಂತೀ ಸಂಚಿಕೆ ೪೫ : – https://www.youtube.com/channel/UCzsvThi5o-5X1-5kp7jaxVQ / @noopurabhramari1212

Leave a Reply

*

code