ಅಂಕಣಗಳು

Subscribe


 

ಶಾಸ್ತ್ರರಂಗ ಭಾಗ 4- ಪಶ್ಚಿಮ/ ಆವಂತೀ (Video series)-ಸಂಚಿಕೆ 44-ಮಹಾರಾಣಾ ಕುಂಭನ ಜೀವನ, ಸಾಧನೆ ಮತ್ತು ಸಂಗೀತರಾಜ ಗ್ರಂಥ

Posted On: Sunday, August 11th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ ಭಾಗ 4 : ಪಶ್ಚಿಮ/ ಆವಂತೀ

ಸಂಚಿಕೆ 44 : ಮಹಾರಾಣಾ ಕುಂಭನ ಜೀವನ, ಸಾಧನೆ ಮತ್ತು ಸಂಗೀತರಾಜ ಗ್ರಂಥ ಸಹಿತ ಇನ್ನಿತರ ಕಲಾ ಕೊಡುಗೆಗಳು

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 4- Paschima/Āvantī (Western Region of Ancient Bhārata)

Episode 44 : Maharana Kumbha’s Life, achievement and contributions towards Indian Art, tradition and culture focusing his Sangīta Raja and other texts

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

ಹಿಂದೂ ಸುರತ್ರಾಣ/ಹಿಂದೂ ಸುಲ್ತಾನ ಎಂಬ ಹೆಸರಿನಿಂದಲೇ ಪ್ರಸಿದ್ಧನಾದ ಚಿತ್ರಕೂಟಾಧಿಪತಿ, ರಜಪೂತರ ಸಿಸೋಡಿಯಾ ಕುಲಕ್ಕೆ ಸೇರಿದ, ಮೇವಾರ್ ಸಾಮ್ರಾಜ್ಯದ ಮಹಾರಾಣಾ ಕುಂಭಕರ್ಣ ಸಿಂಗ್ ಅಥವಾ ಮಹಾರಾಣಾ ಕುಂಭ. ಇತಿಹಾಸಕಾರರು ಈತನ ಆಳ್ವಿಕೆಯ ಅವಧಿಯನ್ನು ’ಮೇವಾರದ ಸುವರ್ಣ ಯುಗ’ ಎಂದು ಕೊಂಡಾಡಿದ್ದಾರೆ. ಕುಂಭನ ಆಳ್ವಿಕೆಯಲ್ಲಿ ಮೇವಾರ್ ಪ್ರದೇಶವು ಉತ್ತರ ಭಾರತದ  ಶಕ್ತಿಶಾಲಿ ಸಾರ್ವಭೌಮತ್ವಗಳಲ್ಲೊಂದಾಗಿತ್ತು.

ಮಹಾರಾಣಾ ಕುಂಭ – ಬದುಕು ಮತ್ತು ಸಾಧನೆಗಳು

ಈತನದ್ದು ರಾಣಾ ಹಮ್ಮೀರನ ವಂಶಪಾರಂಪರ್ಯ ರಾಜಮನೆತನ. ರಾಣಾ ಮತ್ತು ಮಹಾರಾಣಾ ಎಂಬ ಬಿರುದು ಈ ರಾಜವಂಶದ ಆಡಳಿತಗಾರರದ್ದು. ೧೩ನೇ ಶತಮಾನದ ತಿರುವಿನಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯದ ದಾಳಿಯ ಬಳಿಕ ಚಿತ್ತೋರ್‌ನ ಎರಡನೇ ಗುಹಿಲ ರಾಜವಂಶವನ್ನು ಸ್ಥಾಪಿಸಿದ ಕೀರ್ತಿ ರಾಣಾ ಹಮ್ಮೀರನಿಗೆ ಸಲ್ಲುತ್ತದೆ.

ಮೇವಾರ್‌ನ ರಾಣಾ ಮೋಕಲ್ ಸಿಂಗ್ ಮತ್ತು ಪತ್ನಿ ಸೌಭಾಗ್ಯ ದೇವಿ ಅವರ ಪುತ್ರನಾಗಿದ್ದ ರಾಣಾ ಕುಂಭ. ೧೪೩೩ರಲ್ಲಿ ರಾಣಾ ಹಮ್ಮೀರನ ಮೊಮ್ಮಗನಾದ ಮಹಾರಾಣಾ ಮೋಕಲ್, ತನ್ನ ಇಬ್ಬರು ಸಹೋದರರಾದ ಚಾಚಾ ಮತ್ತು ಮೇರಾರಿಂದ ಹತ್ಯೆಗೀಡಾದ. ತನ್ನ ತಂದೆಯ ಹತ್ಯೆಯ ನಂತರ ಸಿಂಹಾಸನವನ್ನು ಏರಿ ತಂದೆಯ ಹತ್ಯೆಯ ಸೇಡನ್ನೂ ತೀರಿಸಿ, ಮೂವತ್ತೈದು ವರ್ಷಗಳ ಕಾಲ ಅಂದರೆ ೧೪೩೩ ರಿಂದ ೧೪೬೮ವರೆಗೂ ಮೇವಾರವನ್ನು ಆಳಿದ ರಾಣಾ ಕುಂಭ. ಹದಿನೈದನೇ ಶತಮಾನದ ಪೂರ್ವ ಭಾರತದ ಕಪಿಲೇಂದ್ರದೇವ, ದಕ್ಷಿಣ ಭಾರತದ ಎರಡನೇ ದೇವರಾಯ ಮತ್ತು ಮಧ್ಯ ಭಾರತದ ಮಾನ್ ಸಿಂಗ್ ತೋಮರ್ ಮುಂತಾದ ಹಲವಾರು ಹಿಂದೂ ರಾಜರ ಪ್ರದೇಶಗಳು ಮುಸಲ್ಮಾನ ಸುಲ್ತಾನರ ಅಡಿಯಲ್ಲಿದ್ದ ಸಮಯದಲ್ಲೇ ವಾಯುವ್ಯ ಭಾರತದಲ್ಲಿ ಹಿಂದೂ ಪುನರುತ್ಥಾನದ ಮುಂಚೂಣಿಯಲ್ಲಿದ್ದ ಪರಾಕ್ರಮಿ ರಾಜ ಮಹಾರಾಣಾ ಕುಂಭ.

ಸುಮಾರು ೮ ಅಡಿ ಎತ್ತರದ ಆಜಾನುಬಾಹು ವ್ಯಕ್ತಿತ್ವ ಕುಂಭನಾಗಿತ್ತಂತೆ. ಈತನ ರಾಣಿಯರು ಕುಂಭಳದೇವಿ ಮತ್ತು ಅಪೂರ್ವದೇವಿ. ವೀರನೂ, ಪ್ರಚಂಡ ಆಡಳಿತಗಾರನೂ ಆಗಿದ್ದ ರಾಣಾ ಕುಂಭ ಕರುಣಾಹೃದಯಿಯೂ ಕೂಡಾ. ಪ್ರಜಾವತ್ಸಲ. ಆತನ ಆಡಳಿತದ ಸಮಯದಲ್ಲಿ ನೆರೆಹೊರೆಯ ಮುಸಲ್ಮಾನ ಸುಲ್ತಾನರ ಅಡಿಯಲ್ಲಿ ಕಠಿಣ ದಿನಗಳನ್ನು ದೂಡುತ್ತಿದ್ದ ಹಿಂದೂಗಳ ವೇದನೆ ಆತನ ನೆಮ್ಮದಿಯನ್ನು ಇರಿಯುತ್ತಿತ್ತು. ಮತ್ತು ತನ್ನ ತಂದೆಯ ಕೊಲೆಯ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡು ಸುಲ್ತಾನರ ಆಶ್ರಯದಲ್ಲಿದ್ದ ಅಪರಾಧಿಗಳನ್ನು ತನ್ನ ವಶಕ್ಕೆ ಒಪ್ಪಿಸಲು ಒತ್ತಾಯ ಮಾಡಿದ್ದ. ಆದರೆ ಸುಲ್ತಾನರು ಕುಂಭನ ವಿನಂತಿಯನ್ನು ಪುರಸ್ಕರಿಸಲಿಲ್ಲ. ಹಾಗಂತಲೇ ಮಾಲ್ವಾ, ನಾಗೂರ್ ಮತ್ತು ಗುಜರಾತಿನ ಸುಲ್ತಾನರ ವಿರುದ್ಧ ಯುದ್ಧ ಸಾರಿದ. ಮುಸ್ಲಿಂ ಸಂಸ್ಥಾನಗಳು ಒಗ್ಗೂಡಿದವು. ಅವರೂ ದಂಡೆತ್ತಿ ಬಂದು ಹಲವು ಬಾರಿ ಕುಂಭನನ್ನು ಮಟ್ಟ ಹಾಕಲು ಪ್ರಯತ್ನಿಸಿದರು. ಹಾಗಿದ್ದರೂ ಹಲವು ಯುದ್ಧಗಳಲ್ಲಿ ಜಯಗಳಿಸಿದ್ದಷ್ಟೇ ಅಲ್ಲದೆ ಸುಲ್ತಾನನಿಗೆ ಜೀವದಾನ ಭಿಕ್ಷೆ ನೀಡಿದ ಉದಾರಿ ಮಹಾರಾಣಾ ಕುಂಭ. ಅನಂತರದ ದಿನಗಳಲ್ಲಿ ದೆಹಲಿ ಮತ್ತು ಗುಜರಾತಿನ ಮುಸಲ್ಮಾನ ಆಡಳಿತಗಾರರು ರಾಣಾ ಕುಂಭನಿಗೆ ಹಿಂದೂ-ಸುರತ್ರಾಣ (ಹಿಂದೂ ಸುಲ್ತಾನ್) ಎಂಬ ಬಿರುದನ್ನು ನೀಡಿದ್ದರು. ಹೀಗೆ ಮುಸ್ಲಿಂ ಸುಲ್ತಾನರಿಂದ ಈ ಗೌರವವನ್ನು ಪಡೆದ ಮೊದಲ ಹಿಂದೂ ದೊರೆ ಈತ.

ರಾಣಾ ಕುಂಭನ ಸಾವು ಸ್ವಂತದವರಿಂದಲೇ ಆಯಿತೆನ್ನುವುದು ದುರಂತ. ೧೪೬೮ನೇ ಇಸವಿಯ ಒಂದು ದಿನ ಕುಂಭಸ್ವಾಮಿ ದೇವಾಲಯದ ಅಂಚಿನಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಕುಂಭನನ್ನು ಅವನ ಮಗ ಉದಯಸಿಂಹನೇ ಕೊಂದನೆಂದು ಹೇಳಲಾಗುತ್ತದೆ. ಸಾಯುವ ಕಾಲಕ್ಕೆ ಕುಂಭನ ವಯಸ್ಸು ಕೇವಲ ೫೧. ಕುಂಭನ ನಿಧನದ ಬಳಿಕ ಮೇವಾರ್ ಛಿದ್ರವಾಗಿ ಹೋದದ್ದು ದುರಂತ. ಸ್ವತಃ ಉದಯ್ ಸಿಂಗ್ ನನ್ನು ಕೂಡಾ ವೈರಿಗಳು ಕೊಂದುಹಾಕಿದರು. ಬಹುಶಃ ದೊಡ್ಡ ಷಡ್ಯಂತ್ರದ ಕುಂಭನ ಸಾವಿನ ಹಿನ್ನೆಲೆಯಲ್ಲಿತ್ತು ಎನಿಸುತ್ತದೆ.

ಕುಂಭಳಗಢ ಕೋಟೆ ನಿರ್ಮಾರ್ತೃ

ಭಾರತದೇಶದ ರಾಜರ ಪರಾಕ್ರಮ ಸೀಮಾತೀತವಾದದ್ದು ಮತ್ತು ರಾಜರ ಶೌರ್ಯವೆನ್ನುವುದು ಕಲಾತ್ಮಕವಾದ ಅಭಿರುಚಿಗಳಿಂದಲೂ ಕೂಡಿದೆ ಎನ್ನುವುದಕ್ಕೆ ಮಹಾರಾಣಾ ಕುಂಭನಂಥ ಅನೇಕ ರಾಜರು ಉದಾಹರಣೆಯಾಗಿ ಸಿಗುತ್ತಾರೆ. ಮಾಲ್ವಾದ ಮಹಮೂದ್ ಖಾಲ್ಜಿ, ಗುಜರಾತ್ ಸುಲ್ತಾನ ಎರಡನೇ ಕುತುಬುದ್ದೀನ್ ಅಹ್ಮದ್ ಷಾ, ನಾಗೌರ್‌ನ ಶಮ್ಸ್ ಖಾನ್ ಮತ್ತು ಮಾರ್ವಾರ್‌ನ ರಾವ್ ಜೋಧಾ ಮುಂತಾದ ವೈರಿಗಳಿಂದ ಸುತ್ತುವರೆದಿದ್ದ ಕಠಿಣ ಸಮಯದಲ್ಲೇ, ಅಂದರೆ ೧೪೪೩ರಿಂದ ೧೪೫೯ರ ಇಸವಿಯ ನಡುವೆ ರಾಣಾ ಕುಂಭನು ರಚಿಸಿದ ಒಂದು ವಿನ್ಯಾಸ ಆತನ ಧೀಮಂತಿಕೆಯನ್ನು ಇಂದಿಗೂ ಸಾರುತ್ತದೆ. ಅದುವೇ ರಾಜಸ್ಥಾನದ ರಾಜ್ ಸಮಂದ್ ಜಿಲ್ಲೆಯ ಕುಂಭಳಗಢ ಕೋಟೆ. ಮೇವಾರದ ರಕ್ಷಣೆಯನ್ನು ಮಾಡಬೇಕಂತಲೇ ನಿರ್ಮಿಸಿದ ವಾಸ್ತುವರೇಣ್ಯ ಮಹಾರಾಣಾ ಕುಂಭ. ಸಮುದ್ರಮಟ್ಟದಿಂದ ೧,೧೦೦ ಮೀಟರ್ ಎತ್ತರದಲ್ಲಿರುವ ಈ ಭವ್ಯವಾದ ರಚನೆಯು ೩೬ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಈ ಕೋಟೆಯ ಮುಂಭಾಗದ ಗೋಡೆ ೧೫ ಅಡಿ ಎತ್ತರವನ್ನು ೭ ಪ್ರಮುಖ ದ್ವಾರಗಳನ್ನೂ ಹೊಂದಿದೆ. ಕೋಟೆಯ ಮೇಲಿನಿಂದ ಗಮನಿಸಿದಾಗ ಅರಾವಳಿ ಪರ್ವತಶ್ರೇಣಿಗಳ ವಿಹಂಗಮ ನೋಟ ದಕ್ಕುತ್ತದೆ. ಕೋಟೆಯ ಮೇಲೆ ರಥಗಳ ಸಂಚಾರಕ್ಕೂ ಹಾದಿಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ ಗಣಪತಿ, ಚತುರ್ಭುಜ, ನೀಲಕಂಠ, ಮಾತಾಜಿ ದೇವಿ, ಸೂರ್ಯ ಮೊದಲಾಗಿ ಸನಾತನ ಶ್ರದ್ಧೆಯ ದೇವತೆಗಳ ಮತ್ತು ಜೈನಪಂಥದ ೩೬೦ ದೇವಾಲಯಗಳಿವೆ. ಒಟ್ಟಿನಲ್ಲಿ ರಾಜವೈಭವ, ಪರಾಕ್ರಮ, ರಕ್ಷಣಾತಂತ್ರದ ಕೌಶಲ್ಯ, ಅದ್ಭುತ ರಸ ಮತ್ತು ಭವ್ಯತೆಯ ಪ್ರತೀಕವಾಗಿರುವ ಕುಂಭಳಗಢದ ಕೋಟೆಯಂತೆ ಮತ್ತೊಂದು ಕೋಟೆಯೇ ಪ್ರಪಂಚದಲ್ಲಿ ಇಲ್ಲ. ಹಾಗೆಂದೇ ಕುಂಭಳಮೇರುವನ್ನು ಕಟ್ಟಿಸುವ ಮೂಲಕ ಮೇರುಪರ್ವತವನ್ನು ಸೋಲಿಸಿದ ಎಂಬ ಶಾಸನ ಪ್ರಶಸ್ತಿಗಳು ರಾಣಾ ಕುಂಭನಿಗೆ ಸಂದಿವೆ. ಈ ಕೋಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಸುಲ್ತಾನರೆಲ್ಲರೂ ವಿಫಲವಾದದ್ದು ಈ ಕೋಟೆಯ ಬಲಿಷ್ಠತೆಗೆ ಸಾಕ್ಷಿ. ಕೊನೆಗೆ ಕುಂಭನ ಮರಣ ಕಾಲದ ಅರ್ಧಶತಮಾನದ ಬಳಿಕ ಅಕ್ಬರನ ಸೈನ್ಯ ಈ ಕೋಟೆಗೆ ಸತತವಾಗಿ ಆರು ತಿಂಗಳ ಕಾಲ ಮುತ್ತಿಗೆ ಹಾಕಿ ಯುದ್ಧ ಮಾಡಿದ್ದರಿಂದಲೇ ಈ ಕೋಟೆ ಅವರ ಸುಪರ್ದಿಗೆ ಬಂತು. ಹಾಗಿದ್ದೂ ಮಹಾರಾಣಾ ಪ್ರತಾಪನ್ನು ತನ್ನ ಜನ್ಮಸ್ಥಾನವಾದ ಈ ಕೋಟೆಯನ್ನು ಪಡೆಯಲೇಬೇಕೆಂದು ಮತ್ತೆ ಯುದ್ಧ ಮಾಡಿ ೧೫೭೮ರಲ್ಲಿ ಸ್ವಾಧೀನಕ್ಕೆ ಪಡೆದನಂತೆ. ಇಂದಿಗೆ ಈ ಕುಂಭಳಗಢ ಕೋಟೆ ಎಂಬ ಚೀನಾದ ಮಹಾಗೋಡೆಯನ್ನು ಹೊರತುಪಡಿಸಿದರೆ ಪ್ರಪಂಚದ ಎರಡನೇ ಅತೀ ಉದ್ದದ ಗೋಡೆ, ಭಾರತದ ಅತೀ ಉದ್ದದ ಕೋಟೆಯೆಂಬ ಹೆಸರಿನಿಂದ ಮಾನ್ಯವಾಗಿದೆ. ಇದನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು; ರಾಣಾ ಕುಂಭನ ಹೆಸರಿನಲ್ಲಿ ರಾಜಸ್ಥಾನ ಪ್ರವಾಸೋದ್ಯಮ ಇಲಾಖೆಯು ಮೂರು ದಿನದ ಉತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ದೇವಾಲಯ ನಿರ್ಮಾರ್ತೃ

ಮಹಾರಾಣಾ ಕುಂಭನ ಪರಾಕ್ರಮದ ಕೌಶಲ್ಯ ಇಷ್ಟಕ್ಕೆ ಮುಗಿಯುವುದಿಲ್ಲ. ರಾಜಸ್ಥಾನದ ೮೪ ಕೋಟೆಗಳ ಪೈಕಿ ೩೨ ಕೋಟೆಗಳು ಕುಂಭನಿಂದ ನಿರ್ಮಾಣವಾದಂಥವು. ರಣಕ್‌ಪುರ ತ್ರೈಲೋಕ್ಯ-ದೀಪಕ ಜೈನ ದೇವಾಲಯ, ಕುಂಭಳಗಡ್‌ನ ಮಾಮ್ದೇವ ಅಥವಾ ಕುಂಭಸ್ವಾಮಿ ದೇವಾಲಯ, ಆದಿವರಾಹನ ದೇವಾಲಯ ಮತ್ತು ಚಿತ್ತೋರ್‌ನ ಆದಿವರ್ಷ ದೇವಾಲಯಗಳು ಮತ್ತು ಶಾಂತಿನಾಥ ಜೈನ ದೇವಾಲಯಗಳು ರಾಣಾ ಕುಂಭನ ಆಳ್ವಿಕೆಯಲ್ಲಿ ನಿರ್ಮಿಸಲಾದವು ಎಂದೂ ತಿಳಿದುಬರುತ್ತದೆ. ಅಂತೆಯೇ ಹಲವಾರು ದೇವಾಲಯ ಜೀರ್ಣೋದ್ಧಾರಗಳನ್ನು ಮಾಡಿಸಿದ, ಕೆರೆಕಟ್ಟೆಗಳು, ಕುಂಡಗಳು, ಬಾವಿಗಳನ್ನೂ ನಿರ್ಮಿಸಿದನೆಂಬುದು ತಿಳಿಯುತ್ತದೆ.

ಜಯ ಸ್ತಂಭ ನಿರ್ಮಾರ್ತೃ

ಮಹಮೂದ್ ಖಿಲ್ಜಿಯನ್ನು ಸೋಲಿಸಿ ಮಾಲ್ವಾ ಮತ್ತು ಗುಜರಾತ್‌ನ ಸಂಯೋಜಿತ ಸೈನ್ಯದ ಮೇಲೆ ವಿಜಯದ ಸ್ಮರಣಾರ್ಥವಾಗಿ ೧೪೩೮ರಿಂದ ೧೪೪೯ರ ಇಸವಿಯ ನಡುವೆ ಮಹಾರಾಣ ಕುಂಭ ನಿರ್ಮಿಸಿದ ’ಜಯ ಸ್ತಂಭ ’ ಇಂದಿಗೂ ತಲೆ ಎತ್ತಿ ತನ್ನ ಇತಿಹಾಸವನ್ನು ಸಾರಿ ಹೇಳುತ್ತಲಿದೆ. ಇದು ದೇವತೆಗಳ ಶಿಲ್ಪ, ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಚಿತ್ರಿಸಿದ್ದು; ಸ್ತಂಭದ ಮೇಲೆ ಕುಂಭನ ಕಾಲದ ಅನೇಕ ಶಾಸನಗಳಿವೆ. ಆ ಪೈಕಿ ಜಯ ಮತ್ತು ಅಪರಾಜಿತ ಪೃಚ್ಛವೆಂಬ ವಾಸ್ತುಶಾಸ್ತ್ರ ಗ್ರಂಥಗಳನ್ನು ಹೋಲುವ ವಾಸ್ತು ವಿವರಗಳನ್ನು ಕೀರ್ತಿಸ್ತಂಭದ ಶಾಸನಗಳಲ್ಲಿ ಕೆತ್ತಿಸಿದ್ದಾನೆಂಬುದು ತಿಳಿದುಬರುತ್ತದೆ. ಜೊತೆಗೆ ‘ಮಾಳವ ಸಮುದ್ರಮಂಥನಕ್ಕೆ ಕುಂಭನು ಸುಮೇರು ಪರ್ವತದಂತೆ. ಅವನು ಮ್ಲೇಚ್ಛ ಆಡಳಿತಗಾರರೆಂಬ ಬೇರುಗಳನ್ನು ಕಿತ್ತುಹಾಕಿದ. ಸುಲ್ತಾನರಿಂದ ಹನ್ನೆರಡು ಲಕ್ಷ ಹಸುಗಳನ್ನು ರಕ್ಷಿಸಿದ, ಗೋ-ಬ್ರಾಹ್ಮಣರನ್ನು ಪೊರೆದ’ ಎಂಬ ಕೀರ್ತಿ ಪದ್ಯಗಳನ್ನೂ ಕಾಣಬಹುದು.

ಮಹಾಪೋಷಕ

ಮಹಾರಾಣಾ ಕುಂಭನ ಕಾಲದಲ್ಲಿ ಸ್ಥಾಪತ್ಯಶಾಸ್ತ್ರದ ಪ್ರಸಿದ್ಧ ಲಾಕ್ಷಣಿಕರನ್ನು ಕಾಣಬಹುದು. ಆ ಪೈಕಿ ಆಗಿನ ಮೇಸ್ತ್ರಿಯೆನ್ನಬಹುದಾದ ಅಪ್ರತಿಮ ವಾಸ್ತುಶಿಲ್ಪಿ ಮಂಡನ ಮತ್ತು ಆತನು ಬರೆದ ರೂಪಮಂಡನ ಗ್ರಂಥ ಪ್ರಮುಖವಾದದ್ದು. ಜೊತೆಗೆ ದೇವತಾಮೂರ್ತಿ ಪ್ರಕರಣ, ವಾಸ್ತುಮಂಡನ, ಪ್ರಾಸಾದಮಂಡನ, ರಾಜವಲ್ಲಭ, ವಾಸ್ತುಸಾರ, ರೂಪಾವತಾರ ಎಂಬ ಗ್ರಂಥಗಳೂ ಆತನಿಂದ ರಚನೆಯಾದವು. ಕೆಲವರು ಮಂಡನನು ಮುಸಲ್ಮಾನ ಸುಲ್ತಾನನ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದ ಎನ್ನುತ್ತಾರಾದರೂ ಈತನ ನೇತೃತ್ವದಲ್ಲಿ ಕುಂಭಳಗಢ ಕೋಟೆ ಮತ್ತು ಒಂಬತ್ತು ಮಹಡಿಗಳುಳ್ಳ ವಿಜಯಸ್ತಂಭವೂ ನಿರ್ಮಾಣವಾಗಿತ್ತೆಂದು ಮಂಡನನ ಗ್ರಂಥ ರಾಜವಲ್ಲಭ ಹಾಗೂ ಶಾಸನಗಳಿಂದ ತಿಳಿಯುತ್ತದೆ. ಅದರಲ್ಲೂ ರೂಪಮಂಡನ ಗ್ರಂಥದಲ್ಲಿ ಪ್ರತಿಪಾದಿಸಲ್ಪಟ್ಟ ಲಕ್ಷಣಗಳನ್ನಾಧರಿಸಿ ನಿರ್ಮಿಸಲಾದ ಇನ್ನೂ ಕೆಲವು ದೇವಾಲಯಗಳನ್ನು ಗಮನಿಸಿದಾಗ ಅವು ಕುಂಭನ ಕಾಲದಲ್ಲಿ ಮತ್ತು ಅವನಿಂದ ನಿರ್ಮಿಸಲ್ಪಟ್ಟಿರಬೇಕು, ಮಂಡನನ ಆಶ್ರಯದಾತಾರ ಕುಂಭನೇ ಆಗಿದ್ದ ಎಂದು ಊಹಿಸಬಹುದು. ಇನ್ನು ಮಂಡನನ ಮಗ ಗೋವಿಂದನೂ ಉದ್ಧಾರಧೋರಣೀ, ಕಲಾನಿಧಿ ದ್ವಾರದೀಪಿಕಾ ಎಂಬ ಗ್ರಂಥಗಳನ್ನು ರಚಿಸಿದರೆ; ಮಂಡನನ ಸಹೋದರ ನಾಥನಿಂದ ವಾಸ್ತುಮಂಜರಿ ಎಂಬ ಗ್ರಂಥ ಬರೆದಿದ್ದ. ಕುಂಭನ ಆಸ್ಥಾನದಲ್ಲಿ ಕಲಾವಿದರ ದಂಡೇ ನೆರೆಯುತ್ತಿತ್ತು ಎನ್ನುವುದೂ ಕೂಡಾ ತಿಳಿಯುತ್ತದೆ.

ಮಹಾರಾಣಾ ಕುಂಭನ ಕಲಾವಂತಿಕೆ ಮತ್ತು ವಿದ್ವತ್ತು

ಮಹಾರಾಣ ಕುಂಭನು ಸ್ವತಃ ವೀಣಾವಾದನದಲ್ಲಿ ಪಾರಂಗತ. ಕುಂಭಲಗಢದ ಶಾಸನಗಳು ಯುದ್ಧಕ್ಕೆ ಹೋಗುವಂತೆಯೇ ಕಾವ್ಯವನ್ನು ಬರೆಯುವುದು ಅವನಿಗೆ ಸುಲಭ ಎಂದು ಹೇಳುತ್ತದೆ. ಇನ್ನು ನೃತ್ಯ-ನಾಟ್ಯಗಳ ವಿಚಾರಕ್ಕೆ ಬರುವುದಾದರೆ- ಕುಂಭನಿಗೆ ‘ಅಭಿನವಭರತಾಚಾರ್ಯ’ ಎಂಬ ಬಿರುದು ಕೂಡಾ ಸಂದಿತ್ತು. ಕುಂಭನನ್ನು ಶ್ರೀ ಸರಸ್ವತೀರಸಸಮುದ್ರಸಮುದ್ಭೂತ ಕೈರವೋದ್ಯಾನನಾಯಕಂ ಅಂದರೆ ಸರಸ್ವತಿಯ ರಸಸಮುದ್ರದಿಂದ ಉದ್ಭವಿಸಿದ ಕಮಲದ ಉದ್ಯಾನದ ನಾಯಕ, ಪ್ರಜ್ಞಾಸ್ಫುರತ ಕೇಸರಿ– ಅಂದರೆ ಪ್ರಜ್ಞೆ- ವಿವೇಕ – ವೈದುಷ್ಯಗಳಿಂದ ಮೆರೆಯುವ ಸಿಂಹ ಎಂದೆಲ್ಲಾ ಉಲ್ಲೇಖಿಸಿದ ಹಲವು ಬಗೆಯ ಬಿರುದಾವಳಿ- ಪ್ರಶಸ್ತಿಗಳನ್ನು ಈತನ ಗ್ರಂಥಗಳಲ್ಲಿ ಗಮನಿಸಬಹುದು. ಆದರೆ ಕುಂಭನ ಕಾಲದಲ್ಲಿ ಬರೆಯಲ್ಪಟ್ಟ ಚಿತ್ರಕಲೆಗಳಿಗೆ ಕುಂಭಲ್‌ಗಡ್‌ನಲ್ಲಿರುವ ಕುಂಭದ ಅರಮನೆಗಳ ಗೋಡೆಗಳ ಚಿತ್ರಣದ ಮಸುಕಾದ ಗೆರೆಗಳನ್ನು ಹೊರತುಪಡಿಸಿ ಯಾವುದೇ ಬೇರೆ ದೊಡ್ಡ ಸಾಕ್ಷ್ಯವು ಈಗ ಲಭ್ಯವಿಲ್ಲ.

ವಿವಿಧ ಗ್ರಂಥರಚನೆಗಳು

ಮಹಾವಿದ್ವಾಂಸನಾಗಿದ್ದ ಮಹಾರಾಜ ಕುಂಭ ಹಲವು ಗ್ರಂಥರಚನೆಯನ್ನು ಮಾಡಿದ್ದಾನೆ.

೧. ಓಡಿಶಾದ ಜಯದೇವನ ಗೀತಗೋವಿಂದ ಭಾರತದ ಕಾವ್ಯ ಮತ್ತು ಅಭಿನಯ ಕಲೆಗಳ ಲೋಕದಲ್ಲಿ ಬಹುಪ್ರಸಿದ್ಧವಾದ ರಚನೆ. ಕುಂಭನು ಈ ಸುಂದರವಾದ ಕಾವ್ಯಕ್ಕೆ ರಸಿಕಪ್ರಿಯಾ ಎಂಬ ಮತ್ತಷ್ಟೇ ಸುಂದರವಾದ ವ್ಯಾಖ್ಯೆ ಬರೆದಿದ್ದಾನೆ.

೨. ಇದಲ್ಲದೆ ಬಾಣಭಟ್ಟನ ಚಂಡೀಶತಕಕ್ಕೆ ವ್ಯಾಖ್ಯೆ

೩. ದಾಕ್ಷಿಣಾತ್ಯ ದೇಶದವನಾದ ಶಾರ್ಙ್ಗದೇವನ ಲಕ್ಷಣಗ್ರಂಥ- ಸಂಗೀತರತ್ನಾಕರಕ್ಕೆ ವಾಖ್ಯೆ ಸಂಗೀತಕ್ರಮದೀಪಿಕಾ

೪. ಸಂಸ್ಕೃತ, ಮೇವಾರಿ, ಮಹಾರಾಷ್ಟ್ರ ಮತ್ತು ಕನ್ನಡಗಳಲ್ಲಿ ರಚಿಸಿರುವ ಚತುರ್ಭಾಷಾರೂಪಕ ಅಥವಾ ನಾಟಕರಾಜಚತುಷ್ಪಯ.

೬. ಮೇವಾರೀ ಭಾಷೆಯಲ್ಲಿ ಕೆಲವು ಕಾವ್ಯಗಳು

೭. ಏಕಲಿಂಗಮಾಹಾತ್ಮದಲ್ಲಿ ಸಂಕಲಿಸಿರುವ ಕಾವ್ಯಗೇಯ ಪ್ರಬಂಧಗಳು

೮. ಸಂಕ್ಷೇಪ ಕಾಮಶಾಸ್ತ್ರ ಎಂಬ ಕೃತಿ.

೯. ಅತ್ಯಂತ ವಿಸ್ತಾರವೂ ಪ್ರಮುಖವೂ ಆದ ಗೀತ-ವಾದ್ಯ-ತಾಲ-ನೃತ್ಯಗಳ ಕುರಿತ ಉದ್ಗ್ರಂಥ – ಸಂಗೀತರಾಜ.

ಸಂಗೀತರಾಜ

ರಾಣಾ ಕುಂಭ ಬರೆದ ಗೀತ-ವಾದ್ಯ-ತಾಲ-ನೃತ್ಯ ವಿಷಯದ ಉದ್ಗ್ರಂಥ ಸಂಗೀತರಾಜ. ಇದಕ್ಕೆ ಸಂಗೀತ ಮೀಮಾಂಸಾ ಎಂಬ ಮತ್ತೊಂದು ಹೆಸರೂ ಕೂಡಾ ಇದೆಯೆನ್ನುವುದು ತಿಳಿಯುತ್ತದೆ. ಆದರೆ ಕಾಲಸೇನ ಎಂಬ ರಾಜನೋರ್ವನ ಉಲ್ಲೇಖ ಈ ಗ್ರಂಥದ ಮೊದಲ ಪಠ್ಯರತ್ನಕೋಶದಲ್ಲಿ ಅಲ್ಲಲ್ಲಿ ಪ್ರಸ್ತಾವವಾಗುತ್ತದೆ. ಈ ಕಾಲಸೇನನೆಂಬವ ತಾಮರಾಜನ ಮಗನೆಂದೂ, ಬ್ರಹ್ಮಾದ್ರಿ ಅಥವಾ ಮಹಾರಾಷ್ಟ್ರದ ನಾಸಿಕ್‌ನಲ್ಲಿದ್ದು ಆಳುತ್ತಿದ್ದ ೧೩ನೇ ಶತಮಾನಕ್ಕೆ ಸಲ್ಲುವ ಸೂರ್ಯವಂಶೀಯ ಮಹಾರಾಜನೆಂದು ಇತಿಹಾಸಕಾರ ವಿದ್ವಾಂಸರು ಪತ್ತೆ ಹಚ್ಚಿದ್ದು; ಈತ ಈ ಗ್ರಂಥವನ್ನು ಬರೆದಿರಬಹುದೇ ಎಂಬ ಅಭಿಪ್ರಾಯಗಳನ್ನು ಹುಟ್ಟುಹಾಕಿಸಿದ್ದಾರೆ. ಈತನು ಕುಂಭನಂತೆ ಹಲವು ಸುಲ್ತಾನರನ್ನು ಸೋಲಿಸಿದ ಗರಿಮೆಯುಳ್ಳವನೇ ಆಗಿದ್ದನಂತೆ. ಹಾಗೂ ನಾಟಕಕಾರನೂ ಆಗಿದ್ದ. ಹಾಗಾಗಿ ಕುಂಭನ ಗ್ರಂಥವೇ ಅಥವಾ ಕಾಲಸೇನನ ಗ್ರಂಥವೇ? ಇಲ್ಲವೇ ಕಾಲಸೇನನನ್ನು ಉದ್ಧರಿಸಿದ ಲಕ್ಷಣಗಳು ಇಲ್ಲಿ ಪುನರುಕ್ತಿಯಾಗಿದ್ದಿರಬಹುದೇ, ಇಲ್ಲವಾದರೆ ಕುಂಭನೇ ಸ್ವತಃ ಕಾಲಸೇನನೆಂಬ ಪ್ರಶಸ್ತಿಯುಳ್ಳವನಾಗಿದ್ದಿರಬಹುದೇ ಎಂಬ ಸಂದೇಹಗಳು ಕಾಡುತ್ತವೆ. ಆದರೆ ಕುಂಭನ ಪರವಾದ ಅನೇಕ ಸಾಕ್ಷ್ಯಗಳು ಗ್ರಂಥದೊಳಗೆ ಸಾಕಷ್ಟು ಸಿಗುವುದರಿಂದ ವಿದ್ವಾಂಸರು ಸಂಗೀತರಾಜ ಗ್ರಂಥವನ್ನು ಕುಂಭಕರ್ಣನದ್ದೇ ಎನ್ನಲು ಹಿಂದೇಟು ಹಾಕಿಲ್ಲ.

ಸಂಗೀತರಾಜ- ಗ್ರಂಥ ರಚನೆಯ ಕಾಲ ಸಾಮಾನ್ಯ ಶಕ ೧೪೩೩-೧೪೬೮ನೇ ಇಸವಿ. ಸುಮಾರು ೧೬,೦೦೦ ಶ್ಲೋಕಗಳುಳ್ಳ, ಐದು ಅಧ್ಯಾಯಗಳನ್ನು ಉಳ್ಳ ಗ್ರಂಥವಿದು. ಶಾರ್ಙ್ಗದೇವನ ಸಂಗೀತ-ರತ್ನಾಕರವನ್ನು ನಿಕಟವಾಗಿ ಅನುಸರಿಸುವ ಗ್ರಂಥ. ಕರ್ನಾಟ ಪ್ರದೇಶದ ಹೊಗಳಿಕೆಯೂ ಗ್ರಂಥದಲ್ಲಿದೆ. ಕುಂಭ ಮಹಾರಾಜನ ಇಷ್ಟದೈವವಾದ ಶಿವನ ಸ್ತುತಿಯಿಂದ ಇದು ಆರಂಭಗೊಳ್ಳುತ್ತದೆ. ಇದರಲ್ಲಿ ಪದ-ವಾಕ್ಯ-ಸಂಜ್ಞೆ-ವ್ಯಾಕರಣ-ವೃತ್ತ-ಅಲಂಕಾರ- ಪರಿಭಾಷೆ-ಪ್ರಸ್ತಾರಗಳ ವಿಷಯವುಳ್ಳ ಪಠ್ಯರತ್ನಕೋಶ, ಶ್ರುತಿ-ಸ್ವರ-ನಾದ-ಮೂರ್ಛನ-ಗ್ರಾಮ-ಗೀತ-ತಾನ-ವರ್ಣಾಲಂಕಾರ-ರಾಗ-ತಾಲ-ಪ್ರಬಂಧ-ಭಾಷಾ-ವಿಭಾಷಾ-ವಾಗ್ಗೇಯಕಾರ-ಗಮಕಗಳ ವಿವರವುಳ್ಳ ಗೀತರತ್ನಕೋಶ, ವಾದ್ಯವಿವರವುಳ್ಳ ವಾದ್ಯರತ್ನಕೋಶ ಮೊದಲಿನ ಮೂರು ಅಧ್ಯಾಯಗಳಾದರೆ ರಸರತ್ನಕೋಶವೆನ್ನುವುದು ಐದನೆಯ ಅಧ್ಯಾಯ. ಇನ್ನು ಸಂಗೀತರಾಜದ ಬಹಳ ದೊಡ್ಡ ಭಾಗವಾಗಿರುವ ನೃತ್ಯರತ್ನಕೋಶವು ನಾಲ್ಕನೇ ಅಧ್ಯಾಯವಾಗಿದ್ದು; ಈ ನೃತ್ಯರತ್ನಕೋಶವನ್ನು ನಾಲ್ಕು ಉಲ್ಲಾಸಗಳು ಅಂದರೆ ಭಾಗಗಳಲ್ಲಿ ವಿಂಗಡಿಸಲಾಗಿದೆ; ಪ್ರತಿಯೊಂದೂ ಉಲ್ಲಾಸಗಳೂ ನಾಲ್ಕು ಪರೀಕ್ಷಣಗಳು ಎಂಬ ವಿಭಾಗಗಳನ್ನು ಒಳಗೊಂಡಿದೆ.

ನೃತ್ಯರತ್ನಕೋಶದ ಮೊದಲ ವಿಭಾಗವು ನಾಟ್ಯೋತ್ಪತ್ತಿ, ಪ್ರದರ್ಶನ ಸಭಾಂಗಣವನ್ನು ನಿರ್ಮಿಸುವ ನಿಯಮಗಳು; ಅಧ್ಯಕ್ಷತೆ ವಹಿಸುವ ವ್ಯಕ್ತಿಯ ಅರ್ಹತೆಗಳು; ಸಹೃದಯರ ಅರ್ಹತೆ ಹಾಗೂ ನೃತ್ತ, ನೃತ್ಯ ಮತ್ತು ನಾಟ್ಯ ಮೊದಲಾದ ಕೆಲವು ಮೂಲಭೂತ ಪದಜಿಜ್ಞಾಸೆ, ಶಾಸ್ತ್ರಸಂಗ್ರಹ, ಪೂರ್ವರಂಗ, ಅಭಿನಯ, ಭಾವ-ರಸ, ವಿವಿಧ ನೃತ್ಯ, ನಾಟ್ಯಶಾಸ್ತ್ರ ಹಾಗೂ ನಾಟ್ಯಶಾಸ್ತ್ರೋತ್ತರದ ದೇಶೀ ಅಂಗೋಪಾಂಗ ಅಭಿನಯ, ಸ್ಥಾನಕ, ಚಾರಿ, ಮಂಡಲ ಇತ್ಯಾದಿಗಳ ಲಕ್ಷಣವನ್ನು ಹೇಳುತ್ತದೆ.

ಎರಡನೆಯ ಭಾಗದಲ್ಲಿ ನಾಟ್ಯಶಾಸ್ತ್ರ ಸೂಚಿಸಿದ ಕರಣಗಳು ಮತ್ತು ಮಾರ್ಗೋತ್ತರ ಕಾಲದ ಉತ್ಪ್ಲುತಿ ಕರಣ, ಅಂಗಹಾರ, ಭ್ರಮರಿ, ರೇಚಕ, ನಾಟ್ಯದ ಚತುರ್ವೃತ್ತಿ-ಪ್ರವೃತ್ತಿ, ಕಲಾಸ, ನ್ಯಾಯ, ಪೇರಣಿ, ಕೊಲ್ಲಟಿಕ ಶಿವಪ್ರಿಯ, ರಾಸಕನೃತ್ಯಗಳು, ಚರ್ಚರೀ, ದೋಹಕ, ಮಂಠಕ, ರೂಪಕ, ಅಡುತಾಲ, ಯತಿನೃತ್ತ ಮೊದಲಾದ ವಿವಿಧ ನೃತ್ಯಪದ್ಧತಿ, ಮಾರ್ಗ ಮತ್ತು ದೇಶೀ ಲಾಸ್ಯಾಂಗ, ನವರಸ- ಭಾವಗಳು, ಪಾತ್ರಗುಣದೋಷಗಳು ಸಂಪ್ರದಾಯ ಲಕ್ಷಣ, ಗೌಂಡಲೀ ವಿಧಿ, ಶುದ್ಧಪದ್ಧತಿ, ಶ್ರಮವಿಧಿಗಳ ವಿಚಾರಗಳಿವೆ.[1]

ಆವಂತೀ ಎಂಬ ಪಶ್ಚಿಮ ಭಾರತದ ನಾಟ್ಯಪ್ರವೃತ್ತಿಯಲ್ಲಿ ಭ್ರಮರಿಗಳ ಕ್ರಮ ವಿಶಿಷ್ಟ. ಅಂತೆಯೇ ನೃತ್ಯರತ್ನಕೋಶ ಹೇಳಿದ ಭ್ರಮರಿಗಳೂ ವಿಶಿಷ್ಟವಾಗಿವೆ. ಇದು ಉತ್ಪ್ಲುತಿಕರಣ ಅಂದರೆ ನೆಗೆಯುವ ಹಾರುತ್ತಾ ತಿರುಗುವ ಚಲನವಲನಗಳಿಂದ ಹೊರತಾದ ೧೩ ಬಗೆಯ ಭ್ರಮರೀಭೇದಗಳನ್ನು ಪಟ್ಟಿ ಮಾಡಿದೆ. ಜೊತೆಗೆ ದೆಹಲಿಯ ಮದನಪಾಲ ಎಂಬ ರಾಜನು ಬರೆದಿದ್ದ ಆನಂದಸಂಜೀವನ ಎಂಬ ಗ್ರಂಥದ ಉಲ್ಲೇಖಗಳು ನೃತ್ಯರತ್ನಕೋಶದಲ್ಲಿ ಕಾಣಸಿಗುತ್ತದೆ.

ಸಂಗೀತರಾಜ ಗ್ರಂಥದ ಪಠ್ಯರತ್ನಕೋಶದ ಭಾಗಗಳನ್ನು ವಿದ್ವಾನ್ ಕುಂಞ ರಾಜ ಅವರು ಮೊದಲು ಸಂಪಾದಿಸಿದರು. ಬಳಿಕ ೧೯೬೩ರಲ್ಲಿ ಪಠ್ಯರತ್ನಕೋಶದ ಸಹಿತ ಗೀತರತ್ನಕೋಶವನ್ನು ಡಾ. ಪ್ರೇಮಲತಾ ಶರ್ಮಾ ಅವರು ಸಂಪಾದಿಸಿ ವಿಮರ್ಶಾತ್ಮಕ ಆವೃತ್ತಿಯನ್ನು ಸಿದ್ಧಪಡಿಸಿದ್ದಾರೆ. ಇನ್ನು ನೃತ್ಯರತ್ನಕೋಶದ ಎರಡು ಮುಖ್ಯ ಅಧ್ಯಾಯಗಳು ಎರಡು ಸಂಪುಟಗಳ ರೂಪದಲ್ಲಿ ರಾಜಸ್ಥಾನದ ಪುರತತ್ತ್ವಾಚಾರ್ಯ ಮುನಿ ಜಿನವಿಜಯ ಮತ್ತು ರಸಿಕಲಾಲ್ ಚೋಟಾಲಾಲ್ ಪರೀಖ್‌ರ ಸಂಪಾದನೆಯಲ್ಲಿ ೧೯೫೭ ಹಾಗೂ ೨೦೦೦ನೇ ಇಸವಿಗಳಲ್ಲಿ ಪ್ರಕಟವಾಗಿದೆ.

ಸಮಾಪನ

ಮಹಾರಾಣಾ ಕುಂಭನ ಸಾಧನೆಗಳು ಭಾರತೀಯರಿಗೆ ಹಲವು ತಲೆಮಾರುಗಳ ವರೆಗೂ ಸ್ಫೂರ್ತಿ ನೀಡುವಂತಿದೆ. ಅದರಲ್ಲೂ ನಿರಂತರವಾಗಿ ಅಂತರ್ಯುದ್ಧಗಳಿರುವಾಗ ವೈರಿಗಳ ವಿರುದ್ಧ ಎದುರಾಡಿ ತನ್ನ ಸಾಮ್ರಾಜ್ಯವನ್ನು ರಕ್ಷಿಸುವುದು, ಹೊಸ ಪ್ರದೇಶಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸುವುದು, ಸುಭಿಕ್ಷವಾದ ಪ್ರಜಾಪಾಲನೆಗಾಗಿ ಕೋಟೆಗಳನ್ನು ನಿರ್ಮಿಸುವುದು, ದೇಶದ ರಕ್ಷಣೆಯ ಜೊತೆಜೊತೆಗೆ ಅದನ್ನು ಕಲಾಕೃತಿಗಳಿಂದ ಅಲಂಕರಿಸುವುದು, ಸಾಹಿತ್ಯಿಕ ಮತ್ತು ಕಲೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು, ವೇದ, ತತ್ತ್ವ, ಸ್ಮೃತಿ, ಮೀಮಾಂಸಾ, ನಾಟ್ಯಶಾಸ್ತ್ರ, ಅರ್ಥಶಾಸ್ತ್ರ-ರಾಜನೀತಿ, ದರ್ಶನ, ಗಣಿತ, ವ್ಯಾಕರಣ, ಉಪನಿಷತ್ತುಗಳು, ತರ್ಕಶಾಸ್ತ್ರ, ಭಾಷ್ಯ, ಸಂಸ್ಕೃತ, ಕನ್ನಡ, ಪ್ರಾಕೃತ, ಮೊದಲಾದ ಅನೇಕ ಭಾಷೆಗಳಲ್ಲಿ ಪ್ರೌಢಿಮೆ ಮತ್ತು ಅನೇಕ ವಿಷಯಗಳ ಬಗ್ಗೆ ಅಧ್ಯಯನ ಉದ್ಗ್ರಂಥ- ವ್ಯಾಖ್ಯಾನಗಳನ್ನು ಬರೆಯುವ ಮಹಾರಾಣಾ ಕುಂಭನಂಥ ರಾಜ ಮಹಾರಾಜರನ್ನು ನೋಡಿದಾಗ ಭಾರತ ದೇಶದ ರಾಜರಲ್ಲಿ ಅದೆಷ್ಟು ಕಸುವು, ವಿದ್ವತ್ತು, ಪ್ರತಿಭಾಶಕ್ತಿ, ಬಹುತತ್ತ್ವ-ವಿಷಯಗಳ ಜ್ಞಾನ, ಧರ್ಮದೃಷ್ಟಿ ಇತ್ತೆನ್ನುವುದು ಅರಿವಾಗುತ್ತದೆ. ಕುಂಭನ ಗ್ರಂಥಗಳ ಮೂಲಕ ಸಮಗ್ರ ಭಾರತದಲ್ಲಿ ಇದ್ದ ಕಾವ್ಯ-ಕಲೆ- ಲಕ್ಷಣ ವಿಚಾರಗಳ ಕೊಡುಕೊಳುವಿಕೆಗಳ ರೀತಿಯೂ ವಿಶಿಷ್ಟವೆನಿಸುತ್ತದೆ.

ಪರಾಮರ್ಶನ ಗ್ರಂಥಗಳು

Sangitaraja Of Maharana Kumbha With Dr. Premlata Sharma By Dr. V. S. Agrawala Vol. 1. https://archive.org/details/OTND_sangitaraja-of-maharana-kumbha-with-dr.-premlata-sharma-by-dr.-v.-s.-agrawala-vo

Pathyaratnakosa Sangitaraja Kumbhakarna 1968. https://archive.org/details/TxtSktPAThyaratnakOSaSangItarAjaKumbhakarna19680100

Sangitaraja of Kalasena (Maharana Kumbha), vol.1, Pathyaratnakosa, edited by C Kunhan Raja, 1946. http://musicresearchlibrary.net/omeka/items/show/1902

Nrtyaratnakosa Kumbhakarna Pt 1 1957 Rajasthan. https://archive.org/details/TxtSktNrtyaratnakOSaKumbhakarnaPt11957Rajsthn0099

Nritya Ratna Kosha II Kumbha Karna. https://archive.org/details/NrityaRatnaKoshaIIKumbhaKarna

ಈ ಗ್ರಂಥದಲ್ಲಿರುವ ಆಂಗಿಕಾಭಿನಯದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಓದಿ. ಯಕ್ಷಮಾರ್ಗಮುಕುರ ಗ್ರಂಥ- ಡಾ.ಮನೋರಮಾ ಬಿ.ಎನ್ 2022- ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಕಟಣೆ. https://www.noopurabhramari.com/want-to-subscribe-noopura-bhramari-and-purchase-the-dance-books/

Leave a Reply

*

code