ಶಾಸ್ತ್ರರಂಗ ಭಾಗ 3- ಉತ್ತರ/ಪಾಂಚಾಲೀ (Video series)-ಸಂಚಿಕೆ 38-ಮಹಮ್ಮದ್ ಷಾನ ಸಂಗೀತ ಮಾಲಿಕಾ

Posted On: Sunday, June 30th, 2024
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಪ್ರಸ್ತುತಿ

ಶಾಸ್ತ್ರರಂಗ
ಭಾಗ 3- ಉತ್ತರ/ಪಾಂಚಾಲೀ
ಸಂಚಿಕೆ 38-  ಮಹಮ್ಮದ್ ಷಾನ ಸಂಗೀತ ಮಾಲಿಕಾ ಮತ್ತು ನೃತ್ಯಶಾಸ್ತ್ರಗ್ರಂಥಗಳ ರಚನೆಯಲ್ಲಿ ಭಾರತೀಯ ಮುಸಲ್ಮಾನರ ಕೊಡುಗೆಗಳು.

ಅಧ್ಯಯನ, ಬರೆವಣಿಗೆ ಮತ್ತು ನಿರೂಪಣೆ
ಡಾ. ಮನೋರಮಾ ಬಿ.ಎನ್,
ಮುಖ್ಯ ಸಂಶೋಧಕರು, ಪ್ರಾಚಾರ್ಯೆ ಮತ್ತು ನಿರ್ದೇಶಕರು, ಸಂಪಾದಕರು ನೂಪುರ ಭ್ರಮರಿ (ರಿ.)

Noopura Bhramari- Centre for Indian Knowledge systems
Śāstra Ranga
Part 3- Uttara/Pāncālī (Northern Region of Ancient Bhārata)

Episode 38- Muhammad Shah’s Sangīta Mālikā and the contribution of Indian Muslim community towards Dance Treatises.

Research, Writing and Presentation by :
Dr Manorama B N,
Principal Investigator, Director and Editor- Noopura Bhramari ®

 

Co-operation by

Dr Dwaritha Viswanatha Smt. Shalini P. Vittal

Co-Principal Investigators, Noopura Bhramari IKS Centre

Smt. Rohini A. R Research Fellow,

& Sri. Vishnuprasad N Trustee, Noopura Bhramari ®

 

Theme Music by

Nirmiti An abode of Arts and Culture, Bengaluru.

(Singer Vid Balasubhramanya Sharma, Bengaluru)

 

Audio and Video Recording by

Prayog studio, Bengaluru

 

 ಲೇಖನ

Authored by ಡಾ.ಮನೋರಮಾ ಬಿ.ಎನ್.

 

ದೇಶಕ್ಕೆ ಪರಕೀಯರಾಗಿ ಆಕ್ರಮಣ ಮಾಡಿ ಭಾರತದಲ್ಲೇ ರಾಜ್ಯಭಾರವನ್ನು ಸ್ಥಾಪಿಸಿದ ಮುಸಲ್ಮಾನ ಮತ್ತು ಪಾಶ್ಚಾತ್ಯ ರಾಜರುಗಳಿಂದ ಉತ್ತರಭಾರತದ ವ್ಯಾಪ್ತಿಯಲ್ಲಿ ಬರೆದ ಅನೇಕ ಮಹತ್ತ್ವಪೂರ್ಣ ಸಂಗೀತ-ನಾಟ್ಯಗ್ರಂಥಗಳು ನಾಶವಾಗಿವೆ. ಅಂತೆಯೇ ವಿಜಯನಗರ ಕರ್ನಾಟ ಸಾಮ್ರಾಜ್ಯದಂಥ ಇನ್ನೂ ಅನೇಕ ರಾಜ್ಯಗಳ ಮೇಲಾದ ಆಕ್ರಮಣದಿಂದ ಸಾಂಸ್ಕೃತಿಕ ಕ್ಷೇತ್ರವೇ ಚ್ಛಿದ್ರವಾಗಿ ಹೋಗಿದೆ. ಇದರಿಂದ ಸಂಪ್ರದಾಯಗಳಲ್ಲಿ ಸಾಕಷ್ಟು ವೈಪರೀತ್ಯಗಳು ಘಟಿಸಿ ಕಲಾಸಂಪ್ರದಾಯದ ಪಾಲಿಗೆ ಮಾಸಲಾರದ ಗಾಯಗಳಾಗಿ ಉಳಿದುಕೊಂಡಿವೆ. ಲಕ್ಷ್ಯ-ಲಕ್ಷಣರಾಶಿಗಳಲ್ಲಿ ಸಾಕಷ್ಟು ಕಂದರಗಳೂ ಘಟಿಸಿವೆ. ಖಂಡತುಂಡವಾದ ಅವುಗಳ ಲಕ್ಷಣವಿಚಾರ ಅಲ್ಲಿಲ್ಲಿ ಶಿಥಿಲರೂಪದಿಂದ ದಕ್ಕುವಂತಾಗಿದೆ.

ಹಾಗೆಂದು ಭಾರತ, ಭಾರತೀಯತೆಗೆ ಒಪ್ಪುವಂತೆ ಸ್ತುತ್ಯರ್ಹವೆನಿಸುವ ಸಂಗತಿಗಳೂ ಅನ್ಯಮತದವರಿಂದ ಸಂದಿದೆ. ಕೆಲವು ಮುಸಲ್ಮಾನ ಸುಲ್ತಾನರು ಕಾವ್ಯ-ಸಂಗೀತ-ನೃತ್ಯಗ್ರಂಥಗಳನ್ನು ಬರೆಸಿದ್ದು, ಬರೆದದ್ದು, ಭಾಷಾಂತರಿಸಿದ್ದು, ಒಂದೂರಿನಿಂದ ಮತ್ತೊಂದೂರಿಗೆ ಗ್ರಂಥಗಳನ್ನು ಸಾಗಿಸಿದ್ದು, ಕಲಾಸಂಪ್ರದಾಯಗಳಿಗೆ ರೂವಾರಿಯಾಗಿ ದುಡಿದ ಉಲ್ಲೇಖಗಳೂ ಕೂಡಾ ದೊರೆಯುತ್ತವೆ. ಆ ಪೈಕಿ ಲಕ್ಷಣಗ್ರಂಥಗಳ ವಿಚಾರವನ್ನೇ ಉಲ್ಲೇಖಿಸುವುದಾದರೆ- ಕರ್ನಾಟಕದ ಪಂಡರೀಕವಿಠಲನು ದೆಹಲಿಯ ಅಕ್ಬರ್ ಸುಲ್ತಾನನ ಆಸ್ಥಾನ ಗೌರವ ಪಡೆದವ, ಸದ್ರಾಗಚಂದ್ರೋದಯ, ರಾಗಮಾಲಾ, ರಾಗಮಂಜರೀ, ನರ್ತನನಿರ್ಣಯ ಮೊದಲಾದ ನಾಲ್ಕಾರು ಗ್ರಂಥಗಳನ್ನು ರಚಿಸಿದವ. ಹಾಗೆಯೇ ಗುಜರಾತಿನ ಕಡ ಎಂಬ ಭಾಗಕ್ಕೆ ಸೇರಿದ್ದ ಮಲಿಕ್ ಷಾ ಎಂಬ ಸುಲ್ತಾನನು ದೇಶದ ಸಂಗೀತ ವಿದ್ವಾಂಸರನ್ನೆಲ್ಲ ಕರೆಯಿಸಿ ಪಂಡಿತಮಂಡಲಿಯೊಂದನ್ನು ಆಯೋಜಿಸಿ ಸಂಗೀತಶಿರೋಮಣಿ ಎಂಬ ಗ್ರಂಥವನ್ನು ೧೪೨೯ನೇ ಇಸವಿಯಲ್ಲಿ ಹೊರತಲು ಸಹಕಾರಿಯಾದನೆಂದು ತಿಳಿದುಬರುತ್ತದೆ. ಈ ಗ್ರಂಥವು ಆರು ಅಧ್ಯಾಯಗಳಲ್ಲಿದ್ದು ಆಗಿನ ಕಾಲದ ಉತ್ತರ ಭಾರತದ ಸಂಪ್ರದಾಯಕ್ಕೆ ಒಪ್ಪುವ ಗೀತ, ರಾಗ, ತಾಲ, ಪ್ರಬಂಧ, ಪ್ರಕೀರ್ಣಕ, ವಾದ್ಯ ಮತ್ತು ನೃತ್ಯ ವಿಷಯಗಳನ್ನು ಹೊಂದಿದೆಯೆಂದು ವಿದ್ವಾಂಸರಾದ ಮಾನವಲ್ಲಿ ರಾಮಕೃಷ್ಣ ಕವಿಗಳು ತಿಳಿಯಪಡಿಸಿದ್ದಾರೆ. ಹಾಗೂ ಇದರ ಅಳಿದುಳಿದ ಹಸ್ತಪ್ರತಿಗಳು ಕಲ್ಕತ್ತಾ, ಬಿಕಾನೇರ್ ಗ್ರಂಥಾಲಯಗಳಲ್ಲಿ ದೊರೆತಿವೆಯೆನ್ನಲಾಗಿದೆ. ಇನ್ನು ಅಕ್ಬರ್ ಷಾ ಎಂಬಾತನು ಶೃಂಗಾರ ಮಂಜರಿ ಎಂಬ ನಾಯಿಕಾ-ನಾಯಕ ಗುಣವಿಶೇಷಗಳ ಅಭಿನಯಗಳ ಕುರಿತು ಪ್ರವರ್ತಕವೆನಿಸುವ ಲಕ್ಷಣಗ್ರಂಥ ಬರೆದಾತ. ಇದೇ ರೀತಿಯಾಗಿ ಕಂಡುಬರುವ ಲಕ್ಷಣಕಾರ ದೆಹಲಿಯ ವ್ಯಾಪ್ತಿಯಲ್ಲಿದ್ದನೆನ್ನಲಾಗುತ್ತಿರುವ ಮಹಮ್ಮದ್ ಷಾ. ಈತನ ರಚನೆಯೆನ್ನಲಾದ ಸಂಗೀತ ಮಾಲಿಕಾ ಸುಮಾರು ೧೬ನೇ ಶತಮಾನದಲ್ಲಿ ಬರೆಯಲ್ಪಟ್ಟದ್ದು. ಹಿಂದಿಯ ವ್ಯಾಖ್ಯಾನವೂ ಜೊತೆಗೆ ಕಂಡುಬಂದಿದೆ.

ಸಂಗೀತ ಮಾಲಿಕಾ- ಗ್ರಂಥಕರ್ತೃ ವಿವರಗಳು

ಈ ಮಹಮ್ಮದ್‌ಷಾ ಎಂದರೆ ಯಾರು- ರಾಜನೇ? ಮಂತ್ರಿಯೇ? ಸಾಮಾನ್ಯನೇ? ಈತನ ನಿರ್ದಿಷ್ಟ ಸ್ಥಳ-ಕಾಲ-ಕಲಾಪರಂಪರೆಯು ಯಾವುದು? – ಎಂದು ಖಚಿತವಾಗಿ ಇಂದಿಗೂ ತಿಳಿದುಬಂದಿಲ್ಲ. ಹಾಗಿದ್ದೂ ಈತ ತತ್ತಾರ್ ಶಾಹಿಯ ಮಗ; ಫರೌಜ್ ಅಥವ ಫಿರೋಜ್ ಷಾನ ವಂಶಸ್ಥ ಎಂಬುದಾಗಿ ಈ ಗ್ರಂಥಾಂತ್ಯಕ್ಕೆ ಕಾಣಸಿಗುವ ಸಾಲುಗಳಿಂದ ತಿಳಿಯುತ್ತದೆ. ಮಾಲಿನೀ ಮನೋಹರ, ಕಾಮಿನೀ ಕಾಮಪೂರಣ, ವಿರಹಿಣೀವಿರಹಭಂಜನ ಸದಾವಸಂತಾನಂದಕಂದಾರಿ ಗಜಮಸ್ತಕಾಂಕುಶ ಶ್ರೀಮತ್ತತಾರಸಾಹ್ಯಾತ್ಮ ಎಂಬೆಲ್ಲ ವಿಶೇಷಣಗಳ ಸಹಿತ ಗ್ರಂಥಕಾರನು ತನ್ನನ್ನು ಪರೌಜ ಸಾಹ್ಯಾ ವಂಶಾನ್ವಯೇ, ಶ್ರೀಮತ್ತತಾರಸಾಹ್ಯಾತ್ಮಜ ಮಹಮದಸಾಹಿವಿರಚಿತಾಯಾಂ-ಸಂಬೋಧಿಸಿರುವುದು ಅಂತ್ಯದ ಸಾಲುಗಳಲ್ಲಿದೆ. ಆದರೆ ಇಲ್ಲಿನ ಪರೌಜ ಎಂಬ ಶಬ್ದಕ್ಕೆ ಶೂರ, ಶತ್ರುಗಳನ್ನು ಸಹಿಸದ ಎಂಬರ್ಥವೂ ಸಲ್ಲುವುದರಿಂದ ಇದು ಮನೆತನದ ಹೆಸರೋ ಅಥವಾ ವಿಶೇಷಣವೋ ಎನ್ನುವುದೇ ಗೊಂದಲದ ಸಂಗತಿ. ಹಾಗಿದ್ದೂ ಸಾಹ್ಯಾ ಎನ್ನುವುದರಿಂದ ಸಾಹಿ, ಶಾಹಿ ಎಂಬ ಹೆಸರುಳ್ಳ ವಂಶವೆನುವುದು ದೃಢಪಡುತ್ತದೆ. ಒಟ್ಟಿನಲ್ಲಿ ಮಹಮ್ಮದ್ ಷಾನ ಕುರಿತ ವೈಯಕ್ತಿಕ ವಿವರಗಳು ಗ್ರಂಥದ ಯಾವ ಭಾಗಗಳಲ್ಲೂ ಸಿಗುವುದಿಲ್ಲ. ಮಹಮ್ಮದ್ ಷಾ ಎಂಬ ಹೆಸರಿನ ಸಂಗೀತ ವಿದ್ವಾಂಸನಿದ್ದ ಎಂಬ ಬಗ್ಗೆಯೂ ಯಾವ ಐತಿಹಾಸಿಕ ವಿವರಗಳೂ ದೊರಕುವುದಿಲ್ಲ. ಇನ್ನು ದೆಹಲಿಯನ್ನು ೧೭ನೇ ಶತಮಾನದಲ್ಲಿ ಆಳಿದ ಮಹಮ್ಮದ್ ಷಾ ಎಂಬ ಮೊಘಲ್ ಸುಲ್ತಾನ ಸಂಗೀತ ಮಾಲಿಕಾ ಎಂಬ ಯಾವುದೇ ಗ್ರಂಥವನ್ನು ಬರೆದವನಲ್ಲ.

ಸಂಗೀತ ಮಾಲಿಕಾ – ಗ್ರಂಥವೈಶಿಷ್ಟ್ಯ

ಸಂಗೀತಮಾಲಿಕಾ- ೨೧ ವಿಭಾಗಗಳಲ್ಲಿ ೨೮೮ ಶ್ಲೋಕಗಳನ್ನು ಒಳಗೊಂಡ ಆಂಗಿಕಾಭಿನಯವನ್ನು ಸೂಚಿಸುವ ಗ್ರಂಥ. ಇದಕ್ಕೆ ಗೀತ- ತಾಲಾಧ್ಯಾಯವು ಇಲ್ಲ. ನೃತ್ಯಾಧ್ಯಾಯವು ಮಾತ್ರ ಸಂಪಾದಿಸಲ್ಪಟ್ಟಿವೆ. ಈ ಕೃತಿಯ ಆರಂಭಕ್ಕೆ ಸಭಾಂಗಣ, ಸಭಾಪತಿ, ಪಾತ್ರವರ್ಣನ, ಪಾತ್ರಗುಣ, ನರ್ತಕಲಕ್ಷಣ ಇತ್ಯಾದಿಗಳ ವಿವರಣೆಯಿದೆ. ದೇಶೀ ಮತ್ತು ಮಾರ್ಗ, ತಾಂಡವ ಮತ್ತು ಲಾಸ್ಯ ಮುಂತಾದ ವಿಭಾಗಗಳ ವಿವರಗಳಿವೆ. ಆ ಬಳಿಕ ಮಾರ್ಗ-ದೇಶೀ ಕರಣಗಳು-ಚಾರಿಗಳು-ಸ್ಥಾನಕ-ಅಂಗಹಾರ-ರೇಚಕಗಳು-ಅಂಗೋಪಾಂಗ ಅಭಿನಯ ಭೇದ ಹಾಗೂ ನವನೃತ್ಯ, ಶಬ್ದನೃತ್ಯ, ಗೀತನೃತ್ಯ, ಬಂಗಾಲಚಿಂದೂ-ಕೋಲಚಿಂದೂ- ಕಲ್ಪನೃತ್ಯ-ನೇರಿ ಮೊದಲಾದ ದಾಕ್ಷಿಣಾತ್ಯ ನೃತ್ಯಪ್ರಬಂಧಗಳ ಲಕ್ಷಣಗಳು ದೊರೆಯುತ್ತವೆ.

ಗ್ರಂಥದ ಬಹಳಷ್ಟು ಭಾಗ ನಷ್ಟವಾಗಿದ್ದು; ಲಕ್ಷಣದಲ್ಲಿ ಸಾಕಷ್ಟು ಅಂತರಗಳು ಇವೆ. ವಿಚಿತ್ರವೆಂದರೆ ಈ ಗ್ರಂಥದ ಮಂಗಲಾಚರಣದಲ್ಲಿ ಶಿವನನ್ನು ಸ್ತುತಿಸಿಯೇ ಗ್ರಂಥಕಾರ ಲಕ್ಷಣಗಳನ್ನು ಬರೆಯಹೊರಡುತ್ತಾನೆ.

‘ಪ್ರಣಮ್ಯ ಪರಮಾನಂದ ಶಂಕರಂ ಲೋಕಶಂಕರಮ್ |

ವಂದಿಪ್ಯಾಮಿ ಸಮಾಸೇನ ನರ್ತಕಂ ತಾಪಕರ್ತನಮ್||’

ಎನ್ನುವುದೇ ನಾಂದೀಶ್ಲೋಕ. ಇಂಥ ವಾಕ್ಯಗಳಿಂದಲೇ ಗ್ರಂಥಕಾರನ ಕುರಿತಾಗಿ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಅಂದರೆ ಸಂಗೀತಮಾಲಿಕಾ ಎಂಬ ಈ ಗ್ರಂಥದ ರಚನೆಯನ್ನು ಮಾಡಿದ್ದು ಮಹಮ್ಮದ್ ಷಾ ಎಂಬ ಮುಸಲ್ಮಾನ ವ್ಯಕ್ತಿಯೇ ಅಥವಾ ಆತನ ಹೆಸರಲ್ಲಿ ಯಾರೋ ಶಿವಭಕ್ತನೇ? ಇಲ್ಲವಾದರೆ ಇಷ್ಟದೈವ ಸ್ತುತಿಯಿರುವ ಜಾಗದಲ್ಲಿ ಶಿವನ ಸ್ತುತಿ ಬಂದಿರುವ ಕಾರಣವೇನು? ಒಂದುವೇಳೆ ಮೂಲ ರಚನಾಕಾರನೇ ಮಹಮ್ಮದ್ ಷಾ ಆಗಿದ್ದಿದ್ದರೆ ಆತ ಸನಾತನ ಧರ್ಮದ ದೇವರು ಮತ್ತು ನೃತ್ಯಸಂಗೀತಗಳ ಲಕ್ಷಣವನ್ನು ಅನುಸರಿಸುವುದಕ್ಕೆ ಪ್ರೇರಣೆಯೇನಿದ್ದಿರಬಹುದು? ಇಲ್ಲವೇ ಮೂಲಗ್ರಂಥ ಬೇರಾರದ್ದೋ ಆಗಿದ್ದು ಕಾಲಾಂತರದಲ್ಲಿ ಮೊಹಮ್ಮದ್ ಷಾನ ಹೆಸರು ಬಂದು ಈ ಗ್ರಂಥಕ್ಕೆ ಸೇರ್ಪಡೆಗೊಂಡಿತೇ? -ತಿಳಿಯುವುದಿಲ್ಲ.

ಮೂಲ ಪ್ರೇರಣೆ, ಸಂಪಾದನೆ

ಇದು ಸಂಗೀತರತ್ನಾಕರ ಸಹಿತ ಅನೇಕ ಶಾಸ್ತ್ರಗ್ರಂಥಗಳಲ್ಲಿ ಕಂಡುಬಂದಿರುವ ಲಕ್ಷಣಗಳನ್ನೇ ಯಥಾವತ್ ಹೋಲುತ್ತದೆ. ಬಳಸಿದ ಸಂಸ್ಕೃತದ ಶೈಲಿಯೂ ಪೂರ್ವಸೂರಿಗಳ ಗ್ರಂಥಗಳ ಭಾಷೆಯ ಪ್ರೌಢಿಮೆಗೆ ನಿಕಟವಾಗಿದೆ. ಒಟ್ಟಿನಲ್ಲಿ ಲಕ್ಷಣಕ್ರಮವನ್ನು ಗಮನಿಸಿದಾಗ ಇದು ಪೂರ್ಣವಾಗಿ ಉತ್ತರ ಭಾರತದ ಗ್ರಂಥವೆನ್ನಲು ಕಷ್ಟವಾಗುವಂತೆ ದಾಕ್ಷಿಣಾತ್ಯ ಗ್ರಂಥಗಳ ಸ್ವರೂಪವನ್ನು ಹೋಲುತ್ತದೆ. ಮತ್ತು ಈ ಗ್ರಂಥದ ರಚನಾಕಾರ ಶಾರ್ಙ್ಗದೇವನ ಸಂಗೀತ ರತ್ನಾಕರದಿಂದ ಪ್ರಭಾವಿತನಾಗಿದ್ದಿರುವಂತೆಯೇ ತೋರುತ್ತದೆ. ಈ ಗ್ರಂಥದ ಹಸ್ತಪ್ರತಿಯನ್ನು ಬಿಕಾನೇರ್ ಗ್ರಂಥಾಲಯದಿಂದ ಸಂಪಾದಿಸಿ ೧೯೪೮ರಲ್ಲಿ ಪ್ರಕಟಿಸಿದವರು ಜತೀಂದ್ರ ಬಿಮಲ್ ಚೌಧರಿ.

ಭಾರತೀಯತೆಯ ಪ್ರತಿರೂಪವೆಂಬಂಥ ಇಂಥ ಲಕ್ಷಣವಿಚಾರ, ಸ್ತುತಿವಾಕ್ಯಗಳು ಮುಸಲ್ಮಾನ ಕರ್ತೃವೊಬ್ಬನಲ್ಲೂ ಕಂಡುಬರುತ್ತದೆಯೆಂದರೆ ಸನಾತನಧರ್ಮದ ಪ್ರಜ್ಞೆ, ಸಾಂಸ್ಕೃತಿಕ ಮೌಲ್ಯಗಳು ಈ ಮಣ್ಣಿನ ಮೂಲಸ್ವಭಾವ, ಮತಭೇದಗಳಿಂದಾಚೆಗೂ ಎಲ್ಲರ ಕಣಕಣಗಳಲ್ಲೂ ಭಾರತೀಯವಾದ ವಂಶವಾಹಿ ಇದ್ದೇ ಇದೆಯೆನ್ನುವುದು ಶತ ಪ್ರತಿಶತ ಸತ್ಯ.

 

ಪರಾಮರ್ಶನ ಗ್ರಂಥಗಳು

Sastri, Subhramanya (Ed.) (1953). Sangeeta Ratnakara of Saranga deva with Kalanidhi of Kallinatha and Sudhakara of Simhabhupala commentaries.  Madras: Adyar Library. https://archive.org/details/SangitaRatnakaraVolume4-chapter7

Kunjunni Raja and Radha Burnier. (Tr.) (1976). Sangita Ratnakara of Sarangadeva. Vol 4. Chapter 7. Adyar : The adyar Library and Research centre. https://ia601407.us.archive.org/6/items/Mus-SourceTexts/TxtSkt-sangItaratnAkara-Sarngadeva-v4-EngTrn-KRajaandRadhaB-AdyarLibrary-1976-0063.pdf

The Sangita Malika Of Mahammad Shah edited by Chaudhuri,jatindra Bimal. Calcutta 1948. https://archive.org/details/in.ernet.dli.2015.406691

Leave a Reply

*

code