Author: 'ಮನೂ' ಬನ
ನೃತ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡವರಿಗೆ ಚಿದಂಬರಂನ ನಟರಾಜ, ತಂಜಾವೂರಿನ ಬೃಹದೀಶ್ವರ ದೇಗುಲಗಳಲ್ಲಿ ನೃತ್ಯಸೇವೆ ನಡೆಸಬೇಕೆಂಬುದು ಜೀವಿತದ ಕನಸು. ಅಂತಹ ಕನಸೊಂದು ಅದ್ಭುತವೆನಿಸುವ ಮಟ್ಟಿಗೆ ನನಸಾದ ಸಂಭ್ರಮ ೨೫ ಸೆಪ್ಟೆಂಬರ್, ೨೦೧೦.
ಅಂದು ತಂಜಾವೂರು ಬೃಹದೀಶ್ವರನಿಗೆ ಭರತನಾಟ್ಯದ ಬೃಹತ್ ಆರಾಧನೆ. ತಮಿಳುನಾಡಿನ ಬೃಹದೀಶ್ವರ ದೇವಸ್ಥಾನಕ್ಕೆ ೧೦೦೦ ವರ್ಷ ತುಂಬಿದ ನೆನಪಿಗಾಗಿ ‘ಬೃಹನ್-ನಾಟ್ಯ-ಯಜ್ಞ’. ಅಸೋಸಿಯೇಷನ್ ಆಫ್ ಭರತನಾಟ್ಯಂ ಆರ್ಟಿಸ್ಟ್ ಆಫ್ ಇಂಡಿಯಾ( ಅಭಯ್) ನ ಆಶ್ರಯದಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಹಲವು ಊರು, ದೇಶಗಳಿಂದ ಬಂದಿದ್ದ ೧೦೦೦ ಭರತನಾಟ್ಯ ಗುರು-ಕಲಾವಿದರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ದೂರದರ್ಶನ ಪೊದಿಗೈ ವಾಹಿನಿಯು ನೇರಪ್ರಸಾರ ಮಾಡಿದ್ದ ಈ ಕಾರ್ಯಕ್ರಮವನ್ನು ವೀಕ್ಷಿಸುವುದೇ ಒಂದು ಹಬ್ಬ. ನೆರೆದ ಲಕ್ಷಾಂತರ ಜನರ ಮಧ್ಯೆ ಮುಸ್ಸಂಜೆ ಹೊತ್ತಿಗೆ ಶುಭಾರಂಭ ಹೊಂದಿದ ಕಾರ್ಯಕ್ರಮದ ಒಟ್ಟಾರೆ ಸಂಯೋಜನೆ, ಕೊರಿಯೋಗ್ರಫಿಯನ್ನು ಸ್ವತಃ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರೇ ಯೋಜಿಸಿದ್ದರು.
ಚೋಳರ ಅರಸ ರಾಜ ರಾಜ ಚೋಳನಿಂದ ಕ್ರಿ.ಶ.೧೦೧೦ನೇ ಇಸವಿಯಲ್ಲಿ ನಿರ್ಮಿತವಾದ ಈ ದೇವಾಲಯಕ್ಕೆ ರಾಜರಾಜೇಶ್ವರನ್ ದೇವಸ್ಥಾನವೆಂಬ ಹೆಸರೂ ಇದ್ದು ; ಇದು ವಿಶ್ವದ ಪ್ರಪ್ರಥಮ ಸಂಪೂರ್ಣ ಅಮೃತಶಿಲಾ ದೇಗುಲವಾಗಿದೆ. ನಂದಿ ಮಂಟಪದಲ್ಲಿ ಅಲಂಕೃತ ಬೃಹತ್ ನಂದಿ ವಿಗ್ರಹದ ಸುತ್ತಲೂ ಆಯೋಜಿಸಲಾಗಿದ್ದ ಈ ಬೃಹನ್‌ನಾಟ್ಯಯಜ್ಞದಲ್ಲಿ ಗಣೇಶ ಕೌತ್ವಂನಿಂದ ಮೊದಲ್ಗೊಂಡು ನಂತರ ಕರೂರು ತಿರುವಿಸೈಯಪ್ಪ ಕಾವ್ಯದಿಂದ ಆಯ್ದ ೧೦ ಸಾಲುಗಳನ್ನು, ಶಂಕರಾಚಾರ್ಯ ವಿರಚಿತ ಶಿವ ಪಂಚಾಕ್ಷರಿ ಮುಂತಾದ ಭಕ್ತಿಪೂರಿತ ನೃತ್ಯ ಬಂಧಗಳನ್ನು ಕಲಾವಿದರು ಏಕಪ್ರಕಾರವಾಗಿ ನರ್ತಿಸಿದರು.
ಎಲ್ಲಾ ಕಲಾವಿದರನ್ನು ಒಗ್ಗೂಡಿಸುವ, ಅರಿವು ಬೆಳೆಸುವ ಮತ್ತು ದೇವಾಲಯಗಳೊಂದಿಗೆ ಉತ್ತಮ ಬಾಂಧವ್ಯ ನಿರೂಪಿಸುವ ದೃಷ್ಟಿ ಈ ಯಜ್ಞದ ಗುರಿ ಎಂಬುದು ಡಾ. ಪದ್ಮಾ ಅವರ ಅನಿಸಿಕೆ. ಈ ಮೂಲಕ ನಾಟ್ಯ ಸೇವೆಯು ಬೃಹದೀಶ್ವರನಿಗೆ ಅರ್ಪಿತವಾದುದು ನಿಜಕ್ಕೂ ದಾಖಲಾರ್ಹ ಮತ್ತು ಪಾಲ್ಗೊಂಡ ಕಲಾವಿದರೆಲ್ಲರಿಗೂ ಅವರ್ಣನೀಯ ಸಂತೋಷವಾಗಿದೆ ಎಂಬುದು ಭಾಗವಹಿಸಿದ ಕಲಾವಿದರ, ಸಂಘಟಕರ ಅಭಿಪ್ರಾಯ. ಈ ಕಾರ್ಯಕ್ರಮದ ಅಂಗವಾಗಿ ಜೂನ್‌ನಿಂದಲೇ ಡಾ. ಪದ್ಮಾ ಅವರ ಮುಂದಾಳತ್ವದಲ್ಲಿ ದೇಶಾದ್ಯಂತ ಹಲವು ನೃತ್ಯ ಸಂಸ್ಥೆಗಳು ಒಗ್ಗೂಡಿ ವಿವಿಧ ಕಲಾವಿದರಿಗೆ ಜಾತಿ-ಮತ-ಪ್ರದೇಶ-ದೇಶದ ಬೇಧವಿಲ್ಲದೆ ನೃತ್ಯಬಂಧದ ಮಾರ್ಗದರ್ಶನ ನೀಡುತ್ತಾ ಬಂದಿದ್ದು; ಸಿನಿಮಾ ತಾರೆಗಳು, ಎಳೆಯ ಮಕ್ಕಳು, ಹಿರಿಯ ಗುರುಗಳು, ಯುವ ನೃತ್ಯಪಟುಗಳು ಸೇರಿ ಯಾವುದೇ ಹಮ್ಮು ಬಿಮ್ಮಿಲ್ಲದೆ ಭಾಗವಹಿಸಿ ನರ್ತಿಸಿದ್ದು ವಿಶೇಷವೆನಿಸಿತ್ತು. ತಮಿಳುನಾಡು ಸರ್ಕಾರ ಈ ಕಾರ್ಯಕ್ರಮಕ್ಕೆ ಬರುವವರೆಲ್ಲರಿಗೂ ಸೂಕ್ತ ವಸತಿ, ಆಹಾರ ವ್ಯವಸ್ಥೆಯನ್ನು ಆಯೋಜಿಸಿತ್ತಲ್ಲದೆ ; ಸ್ವತಃ ಪಾಲ್ಗೊಂಡು ಧನ್ಯವಾಯಿತು. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಕುರಿತಂತೆ ಡಿವಿಡಿಯು ಬಿಡುಗಡೆಯಾಗಲಿದೆ.
ಇದನ್ನು ನೋಡಿ ಕರ್ನಾಟಕದ ನೃತ್ಯ ಕಲಾವಿದರು, ಸಂಸ್ಥೆಗಳು, ಅಕಾಡೆಮಿ ಮತ್ತು ಸ್ವತಃ ತಾನೇ ಆಯೋಜನೆ ಮಾಡಿದ ಸಂಗೀತ-ನೃತ್ಯ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುವ ಸರ್ಕಾರ ಸಾಕಷ್ಟು ಕಲಿಯಬೇಕಿದೆ. ಅಲ್ಲವೇ?
******