ಅಂಕಣಗಳು

Subscribe


 

‘ಸಮೂಹ’ದ ಸಮ್ಮೋಹ

Posted On: Sunday, September 16th, 2012
1 Star2 Stars3 Stars4 Stars5 Stars (No Ratings Yet)
Loading...

Author: ಜ್ಯೋತಿ ಮಹಾದೇವ್, ಮಣಿಪಾಲ

ಸಾಹಿತ್ಯ-ಸಂಸ್ಕೃತಿ ಎರಡರಲ್ಲಿಯೂ ತೊಡಗಿಸಿಕೊಂಡು, ಕಿರಿಯರನ್ನು ಪಳಗಿಸಿಕೊಂಡು ನಿರಂತರ ಕಲಾಸೇವೆ ಮಾಡುತ್ತಾ ಬಂದಿರುವ ಉಡುಪಿಯ ‘ಸಮೂಹ’ ಒಂದು ವಿಶಿಷ್ಟ ಸಂಸ್ಥೆ. ಇದರ ಚುಕ್ಕಾಣಿ ಹಿಡಿದು ಜಾಗರೂಕತೆಯಿಂದ ಅಷ್ಟೇ ನಿಷ್ಠೆಯಿಂದ ಈ ಕಲಾಹರಿಗೋಲನ್ನು ನಡೆಸುತ್ತಿರುವ ಶ್ರೀ ಉದ್ಯಾವರ ಮಾಧವ ಆಚಾರ್ಯರಷ್ಟೇ ಇದೂ ಅನನ್ಯವಾದುದು. ‘ಸಮೂಹ’ ತನ್ನೆಲ್ಲಾ ಕಾರ್ಯಕ್ರಮಗಳಲ್ಲೂ ಯಾವುದೋ ಒಂದು ವಿಧದಲ್ಲಾದರೂ ರೂಢಿಗೆ ಹೊರತಾದ ವಿನೂತನವೊಂದನ್ನು ಪ್ರಸ್ತುತಿಗೊಳಿಸುವುದು ಪದ್ಧತಿ. ಅದು ಇವರಿಗೆ ಪರಂಪರೆಯಾದರೆ, ನೋಡುಗರಿಗೆ/ ಕೇಳುಗರಿಗೆ ರಸದೌತಣ. ಅಂಥ ಮತ್ತೊಂದು ಪ್ರಯೋಗದ ಕುರಿತು ಹೇಳದೇಹೋದರೆ ಕಲಾಪ್ರಪಂಚದ ಒಂದು ಪುಟ ಬರಿದಾದೀತು.

ಈಗಾಗಲೇ ಸಾಹಿತ್ಯಲೋಕದಲ್ಲಿ ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ ಹೆಸರು ಮಾಡಿರುವ ಶ್ರೀ ಉದ್ಯಾವರ ಮಾಧವ ಆಚಾರ್ಯರ ಗೀತರೂಪಕಗಳಲ್ಲಿ ವಿಶಿಷ್ಟವಾದುದು ‘ಹಂಸನಾದ’. ಈ ಕೃತಿಯ ಬಗ್ಗೆ ಅವರೇ ಹೇಳಿಕೊಳ್ಳುವಂತೆ, “ಪುರಾಣ ನಾಮ ಚೂಡಾಮಣಿಯಲ್ಲಿರುವ ನಳ-ದಮಯಂತಿಯರ ಪೂರ್ವಜನ್ಮ ವೃತ್ತಾಂತವನ್ನು ಕಲ್ಪನಾತ್ಮಕವಾಗಿ ಪ್ರಾರಂಭದಲ್ಲಿ ಬಳಸಿಕೊಂಡು… ಸಾಂಕೇತಿಕತೆಯ ಲೇಪನದೊಂದಿಗೆ ತಾತ್ತ್ವಿಕವಾಗಿ ಅಭಿವ್ಯಕ್ತಿಗೊಳಿಸಲಾಗಿದೆ. …ಪ್ರೇಮಕ್ಕೆ ಸೇತುವೆಯಾದ ಹಂಸದ ಹಾರಾಟವನ್ನು ಚಾಂಚಲ್ಯ ಹಾಗೂ ಚಿಂತನ ಸ್ಥಿರತೆಯ ಮಾಧ್ಯಮವಾಗಿ ಕಾಣಲಾಗಿದೆ. ಬಟ್ಟೆ ಹಾರಿಹೋಗಿ (ಬೆತ್ತಲಾಗುವ, ಕಾರ್ಕೋಟಕ ವಿಷಸ್ಪರ್ಶದಿಂದ) ವಿಕೃತನಾಗುವ ನಳ ಬಾಹುಕನಾಗಿ ಋತುಪರ್ಣನ ದಾರ್ಶನಿಕತೆಯ ನೆರಳಿನಲ್ಲಿ ಆತ್ಮವಿಮರ್ಶೆಯ ಅಡುಗೆಯಿಂದ ಶಾಶ್ವತ ಸ್ವಯಂವರಕ್ಕೆ ಬಡಕಲು ಕುದುರೆಯ ಓಟವನ್ನು ಪಡೆಯುವುದೇ ಮೊದಲಾದ ಕಥಾಭಾಗಗಳನ್ನು ರಂಗಾಭಿನಯಕ್ಕೆ ಅನುಕೂಲವಾಗುವಂತೆ ದುಡಿಸಿಕೊಳ್ಳಲಾಗಿದೆ. ಹಿನ್ನೋಟ ತಂತ್ರದ ಏಕವ್ಯಕ್ತಿ ನೃತ್ಯ ಪ್ರಸ್ತುತಿಯಿದು.”
ಇಂಥ ವಿಭಿನ್ನ ಆಯಾಮವುಳ್ಳ ಈ ಹಂಸನಾದದ ಎಲ್ಲ ಸ್ತರಗಳನ್ನು ನೋಡುಗರ ಮುಂದೆ ಸುಸ್ವರ-ಸಹಿತ ಸಮರ್ಥ ನೃತ್ಯಾಭಿನಯದ ಮೂಲಕ ಬಿತ್ತರಿಸಿದವರು ತಂದೆಯ ನೆರಳಿನಲ್ಲಿ ಅಭಿನಯದ, ಡಾ. ವಸುಂಧರಾ ದೊರೆಸ್ವಾಮಿಯವರಲ್ಲಿ ನೃತ್ಯಾಭ್ಯಾಸದ ತರಬೇತಿ ಪಡೆದ ಶ್ರೀಮತಿ ಭ್ರಮರಿ ಶಿವಪ್ರಕಾಶ್. ಕಲಾಲೋಕ ಈಕೆಯ ನೃತ್ಯಕೌಶಲ ಕಂಡುಂಡು ಖುಷಿಪಟ್ಟಿದೆ. ಇದಂತೂ ಷಡ್ರಸೋಪೇತ ಭೋಜನದಲ್ಲಿ ಅತ್ಯಂತ ರುಚಿಕರವಾದ ಪ್ರಿಯವಾದ ತಿನಿಸಿನಷ್ಟೇ ಹಿತ, ಮುದ ನೀಡುವಂಥ ಪ್ರಸ್ತುತಿ. ನಳ-ದಮಯಂತಿಯರ ಪೂರ್ವಜನ್ಮದ ವೃತ್ತಾಂತದಲ್ಲಿನ ಕಾಡಿನ ಬೇಡ-ಬೇಡತಿಯರಾಗಿ, ಋಷಿಯಾಗಿ, ಹುಲಿಯಾಗಿ, ತದನಂತರದಲ್ಲಿ ಕಥಕ, ನಳ, ದಮಯಂತಿ, ಹಂಸ, ಪುಷ್ಕರ, ಬಾಹುಕ, ಕಲಿ, ಕಾರ್ಕೋಟಕ, ಇತ್ಯಾದಿಯಾಗಿ ಪ್ರತಿಯೊಂದು ಪಾತ್ರಗಳ ಮನೋಭೂಮಿಕೆಯನ್ನು ನಿಭಾಯಿಸುತ್ತಲೇ ರಂಗದ ಮೇಲೆ ಹಂಸಲಾಸ್ಯದ ಹಾರಾಟವನ್ನು, ಬಾಹುಕನ ವಿಕೃತಿಯನ್ನು, ದಮಯಂತಿಯ ಅಳಲನ್ನು, ಪಗಡೆಯಾಟದ ಬೀಸನ್ನು, ಕುದುರೆಯೋಟದ ಸೊಗಡನ್ನು ನೋಡುಗರ ಕಣ್ಣೆದುರು ದೃಶ್ಯಾವಳಿಯಾಗಿಸಿದ ರೀತಿ ಅಗ್ಗಳಿಕೆಗೆ ಪಾತ್ರವಾಗುವಂಥದು. ಭ್ರಮರಿಯವರ ಭಾವಾಭಿವ್ಯಕ್ತಿಯ ಜೊತೆಗೆ ನೃತ್ಯಾಭಿನಯಗಳ ಸಮ್ಮಿಳನ, ಹೊಸದನ್ನು ಹೊಸೆಯುವ ಕ್ರಮ ಅನನ್ಯವಾದುದು. ಭರತಶಾಸ್ತ್ರದ ಚೌಕಟ್ಟಿನೊಳಗೆ ತಾಳ-ಲಯ-ಬಂಧಗಳ ಬಿಗುವಿನಲ್ಲೇ ಹೊಸ ರೀತಿಯ ಪ್ರಯೋಗಗಳಿಗೆ ಪಣವಿಟ್ಟುಕೊಂಡು ತನ್ನ ಪರಿಧಿಯನ್ನು ತಾನೇ ಮೀರುವ ಪ್ರೌಢ ಕಲಾವಿದೆ ಈಕೆ.

Bhramari Shivaprakash In ‘Hamsanada’

‘ಹಂಸನಾದ’ದ ಪ್ರಸ್ತುತಿಯ ಹಿಮ್ಮೇಳದಲ್ಲಿ, ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆಯಲ್ಲಿ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ, ನಟ್ಟುವಾಂಗದಲ್ಲಿ ರಾಮಕೃಷ್ಣ ಕೊಡಂಚ, ಮೃದಂಗ ವಾದಕರಾಗಿ ಭಾಲಚಂದ್ರ ಭಾಗವತ್, ವಯೊಲಿನ್ ನುಡಿಸಿದ ರವಿಕುಮಾರ್, ತಬಲಾ ವಾದಕರಾಗಿ ಮಾಧವ ಆಚಾರ್ಯ, ಕೊಳಲು ನುಡಿಸಿದ ನಿತೀಶ್ ಅಮ್ಮಣ್ಣಾಯ, ಚೆಂಡೆ ವಾದಕ ಅಜಿತ್ ಅಂಬಲಪಾಡಿ- ಎಲ್ಲರ ಸಹಕಾರವೂ ಸ್ತುತ್ಯರ್ಹ. ಹಿನ್ನೆಲೆಯಲ್ಲಿ ಕಥಕನ ಮಾತುಗಳಿಗೆ ತಂದೆ ಉ.ಮಾ.ಆಚಾರ್ಯರ ಜೊತೆ ಸ್ವರ ಜೋಡಿಸಿದ ಡಾ. ಭಾಮಿನಿ ರಾವ್ ರೂಪಕದ ಧ್ವನಿಗೆ ಭಾವತುಂಬಿದರು. ಈ ತಂದೆ-ಮಕ್ಕಳಿಂದ ಕಲಾಪ್ರಪಂಚ ಇನ್ನಷ್ಟು ಸಮೃದ್ಧವಾಗಲಿ ಎನ್ನುವ ಹಾರೈಕೆ ನನ್ನದು.


ಅಂದೇ ಪ್ರದರ್ಶಿತಗೊಂಡ ಇನ್ನೊಂದು ಪ್ರಯೋಗ ಮತ್ತೂ ವೈಶಿಷ್ಟ್ಯಪೂರ್ಣವಾದುದು. ಮಾಧವ ಆಚಾರ್ಯರ ನಾಟಕ- ‘ಮಹಾಕಾವ್ಯದ ಮರೆಯಲ್ಲಿ ಸಾಮಾನ್ಯನೊಬ್ಬನ ಪ್ರಸಂಗ’, ಮಹಾಕಾವ್ಯ ಪರಂಪರೆಯೊಳಗೆ ಮಹಾನ್ ನಾಯಕರ ಧೀರ-ಶೂರರ ನಡುವೆ ಅಡ್ಡಾಡುತ್ತಿದ್ದ, ಅಲ್ಲೇ ಸುತ್ತಮುತ್ತಲಲ್ಲಿ ಜೀವಂತಿಕೆಯ ಪ್ರತೀಕವಾಗಿರುತ್ತಿದ್ದ ಆದರೂ ಇದ್ದೂ ಇಲ್ಲದಂತಿರುತ್ತಿದ್ದ ಸಾಮಾನ್ಯನೊಬ್ಬನ ಹಳಹಳಿಕೆಯಿಂದ ಮೊದಲ್ಗೊಂಡು ನೋಡುಗ ಕೇಳುಗರನ್ನು ಮಹಾಕಾವ್ಯದೊಳಗೆ ಪಯಣಿಸುವಂತೆ ಮಾಡುತ್ತಾ ಕೊನೆಯಲ್ಲಿ ಆ ಅಸಾಮಾನ್ಯ ಸಾಮಾನ್ಯನ ನಿಜರೂಪ ಅನಾವರಣಗೊಳ್ಳುವಲ್ಲಿ ಈ ಅಸಂಗತ ನಾಟಕ ಕೊನೆಗೊಳ್ಳುತ್ತದೆ. ಇಲ್ಲಿ ನಟನೆ, ಹಾಡುಗಾರಿಕೆ (ಯಕ್ಷಗಾನ ಶೈಲಿಯ ಭಾಗವತಿಕೆ), ನಾಟಕ ರೂಪದ ಮಾತುಗಾರಿಕೆ, ಹಿಮ್ಮೇಳದಲ್ಲಿ ಚೆಂಡೆಯ ವಾದನ, ವೇದಿಕೆಯಲ್ಲಿ ರಂಗಪರಿಕರಗಳಾಗಿ ಯಕ್ಷಗಾನ ಶೈಲಿಯ ಮೇಜು, ಅದರ ಮೇಲೆ ಮದ್ದಲೆ, ಮೇಜಿನ ಎಡಬಲಗಳಲ್ಲಿ ಕುರ್ಚಿಗಳಲ್ಲಿ ಭಾಗವತ-ನಟ ಪಾತ್ರಧಾರಿಗಳೂ ಆಸೀನರಾಗಿರುವುದು- ಎಲ್ಲವೂ ಅಮೂರ್ತ.
ಹೊಸತೊಂದು ರಂಗಪ್ರಯೋಗದ ದೃಷ್ಟಿಯಿಂದ ಕುತೂಹಲ ಗಳಿಸಿಕೊಳ್ಳುತ್ತಾ ಮುನ್ನಡೆಯುವ ಕಥನ ಒಂದೇ ಓಟದಲ್ಲಿ ನೋಡುಗನ ಗಮನ ಹಿಡಿದಿಡುವುದಲ್ಲ. ಬದಲಾಗಿ ತನ್ನ ಏರಿಳಿತಗಳ ಜಿಗಿನಡೆಯಲ್ಲಿ ಕೌತುಕ ಸೃಷ್ಟಿಸಿ ನಿಭಾಯಿಸಿ ಪ್ರೇಕ್ಷಕನನ್ನು ಬೆರಗುಗೊಳಿಸುತ್ತಾ ಸಾಗುತ್ತದೆ. ಮಹಾಕಾವ್ಯದ ಕಥೆಗಳನ್ನು ಈ ಸಾಮಾನ್ಯನ ನೋಟದಲ್ಲಿ ಕಾಣಿಸುವ ಪ್ರಯತ್ನ ಹೊಸದೇ ಆಯಾಮವನ್ನು ಒದಗಿಸಿಕೊಡುತ್ತದಾದರೂ ಎಲ್ಲ ಪ್ರೇಕ್ಷಕವರ್ಗವನ್ನೂ ತಲುಪಲಾರದೆನ್ನುವ ಅಂಜಿಕೆಯೂ ಕಾಡುತ್ತದೆ.
ಅದೇ ಸಂಜೆಯಲ್ಲಿ ಕಲಾರಸಿಕರ ಕಣ್ಮನ ಸೆಳೆದ ಇನ್ನೋರ್ವ ಕಲಾವಿದ ಈಗಿನ್ನೂ ಪುಟ್ಟ ಬಾಲಕ. ಖ್ಯಾತ ಭಾಗವತರಾದ ಕೆ.ಜೆ. ಗಣೇಶ್ ಮತ್ತು ಶ್ರೀಮತಿ ವಸಂತಿಯವರ ಪುತ್ರ, ಒಂಭತ್ತರ ಎಳೆಯ. ಯಕ್ಷಗಾನ ವೇಷಭೂಷಣಗಳಲ್ಲಿ ವೇದಿಕೆಯ ಮೇಲೆ ಬಾಲಕ ಏಕಲವ್ಯನನ್ನು ಸಾಕಾರಗೊಳಿಸಿದ ಕುಮಾರ ದೀಪ್ತನ ಈ ಯಕ್ಷಪ್ರತಿಭೆ ಇನ್ನಷ್ಟು ಉಜ್ವಲವಾಗಿ ಮುಂದರಿದು, ಬೆಳಗುವ ಎಲ್ಲ ಸಾಧ್ಯತೆಗಳನ್ನೂ ಈತನ ಯಕ್ಷನೃತ್ಯ ಕೌಶಲ್ಯ ಎತ್ತಿ ತೋರುತ್ತದೆ. ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿಗೆ ಸಾಕ್ಷಾತ್ ಪ್ರಮಾಣ ಈತನೆನ್ನಬಹುದು. ಏಕಲವ್ಯನಲ್ಲಿ ಬಿಲ್ವಿದ್ಯೆ ಕಲಿಯಲು ಉಂಟಾಗುವ ಉತ್ಕಟ ಅಪೇಕ್ಷೆ, ಅದಕ್ಕಾಗಿ ಗುರು ದ್ರೋಣರ ಭೇಟಿ, ಅವರಿಂದ ತಿರಸ್ಕೃತನಾಗಿಯೂ ದುಃಖಿತನಾಗದೆ ದೃಢಚಿತ್ತದಿಂದ ಗುರುಗಳ ಮೃಣ್ಮಯ ಮೂರ್ತಿ ಮಾಡಿ ತದೇಕಚಿತ್ತದಿಂದ ಮಾಡುವ ಸಾಧನೆ, ಎಲ್ಲವನ್ನೂ ಸಮರ್ಪಕವಾಗಿ ನರ್ತಿಸಿ ಅಭಿನಯಿಸಿದ ದೀಪ್ತ, ಕೊನೆಯಲ್ಲಿ ಗುರುಕಾಣಿಕೆಯಾಗಿ ಏಕಲವ್ಯ ತನ್ನ ಹೆಬ್ಬೆರಳನ್ನು ಒಪ್ಪಿಸುವ ದೃಶ್ಯದಲ್ಲಿ ತೋರುತ್ತಿದ್ದ ಧೀರತೆಯ ಮುಖಭಾವ ಆದರಣೀಯ. ಈ ಪೋರನ ಅಮೋಘ ಅಭಿನಯಕ್ಕೆ ಸಭಾಂಗಣ ಮರುಳಾಗಿತ್ತೆಂದರೆ ಅತಿಶಯೋಕ್ತಿಯಲ್ಲ.

 

yaksha nritya by Deepta

 

ಉಡುಪಿಯ ‘ಸಮೂಹ’ ಸಂಸ್ಥೆಯ ಸಾಂಸ್ಕೃತಿಕ ಸಾಧನೆಯ ಸಮೀಕ್ಷೆ ಹಾಗೂ ಅಧ್ಯಯನ ಯೋಜನೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಈಯೆಲ್ಲ ರಂಗಪ್ರಸ್ತುತಿಗಳನ್ನು ಆಯೋಜಿಸಲಾಗಿತ್ತು. ಈ ಅಧ್ಯಯನ ಸಾಧ್ಯತೆಯ ರೂಪುರೇಷೆಗಳ ರೂವಾರಿ, ಮುಂಬಯಿಯ ರಂಗಕರ್ಮಿ ಡಾ. ಭರತ್ ಕುಮಾರ್ ಪೊಲಿಪು ಹಾಗೂ ಸಮೂಹ ರಂಗ ಕಲ್ಪನೆಗಳ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿದವರು ಮಂಗಳೂರಿನ ‘ನಾದ ನೃತ್ಯ’ದ ಗುರು, ಭ್ರಮರಿ ಶಿವಪ್ರಕಾಶ್. ಈ ದ್ವಿಮುಖ ಯೋಜನೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ನೆರೆದ ಕಲಾಸಕ್ತರಿಗೆಲ್ಲ ನಿಜಕ್ಕೂ ಕಲಾರಸದೌತಣವೇ ಲಭಿಸಿತ್ತು.
********


********

Leave a Reply

*

code