ಅಂಕಣಗಳು

Subscribe


 

ಉಳಿಸಿ ಹೋದ ಮಾತುಗಳು ಮತ್ತು ಭಾರವಾದ ಹೃದಯ : ಪ್ರೊ. ಎಂ.ಎ ಹೆಗಡೆಯವರಿಗೆ ಅಶ್ರುತರ್ಪಣ

Posted On: Sunday, April 18th, 2021
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಮನೋರಮಾ ಬಿ.ಎನ್

೨೦೧೩-೧೪ನೇ ವರ್ಷ. ಅಗಲಿದ ಹಿರಿಯ ಕಲಾಚೇತನಗಳನ್ನು ನೆನಪು ಮಾಡಿಕೊಳ್ಳಬೇಕೆಂದು, ಕೀರ್ತಿಶೇಷ ಡಾ. ಮಾಯಾರಾವ್ ಅವರ ಕುರಿತಾಗಿ ಮಾತಾಡಬೇಕೆಂದೂ ಕೆರೆಮನೆ ನಾಟ್ಯೋತ್ಸವದಲ್ಲಿ ನನ್ನನ್ನು ಆಹ್ವಾನಿಸಿದ್ದರು. ನನ್ನ ಸರದಿ ಬಂದು ಮಾತಾಡಿ, ಅದಾಗಿ ಬೇರೆ ಬೇರೆ ಗೋಷ್ಠಿಗಳು. ಹಿರಿಯ ವ್ಯಕ್ತಿಯೊಬ್ಬರು ಪಕ್ಕದ ಕುರ್ಚಿಯಲ್ಲಿ ಬಂದು ಕುಳಿತು ಮಾತಾಡುತ್ತಾ ನಾಟ್ಯ-ನೃತ್ಯಾದಿಗಳ ಪತ್ರಿಕೆಯಾಗಿ ಒಳ್ಳೆಯ ಹೆಸರಿದೆ ನೂಪುರಭ್ರಮರಿಗೆ. ನಾನೂ ಚಂದಾದಾರನಾಗುತ್ತೇನೆ ಎಂದವರೇ ಹಣವನ್ನು ಕೈಗಿತ್ತರು. ಕಿರಿಯವಳ ಸಂಪಾದಕತ್ವದ ಪತ್ರಿಕೆಯೆಂದರೆ ಉಚಿತವಾಗಿಯೇ ಓದಬಹುದು ಎಂದೇ ಭಾವಿಸುತ್ತಿದ್ದ ಅನೇಕರ ನಡುವೆ ಇವರ ಹಾರ್ದ ನಡವಳಿಕೆ ಅಚ್ಚರಿಯನ್ನೂ, ಸಂತೋಷವನ್ನೂ ತಂದಿತ್ತು. ಆಗಲೇ ನಾಟ್ಯಶಾಸ್ತ್ರವನ್ನು ಕನ್ನಡೀಕರಿಸುವ ಕಾರ್ಯಕ್ಕೆ ಅವರು ಉದ್ಯುಕ್ತವಾದ ವಿಚಾರ ಹೇಳಿಕೊಂಡರು. ಸಂಸ್ಕೃತ ಬಲ್ಲವರಿಂದ ನಾಟ್ಯಶಾಸ್ತ್ರದ ಸರಿಯಾದ ಅಧ್ಯಯನ ಕನ್ನಡಕ್ಕೆ ದಕ್ಕದೆ ಪೂರ್ಣಗ್ರಂಥಸಂಪಾದನೆ ಆವರೆಗೂ ಆಗದಿರುವ ಕೊರಗಿದ್ದದ್ದನ್ನ ಮರೆಸುವ ಮಾರ್ಗ ದೊರಕಿತ್ತು, ಪುಳಕಗೊಂಡಿದ್ದೆ……

ಅಲ್ಲಿಂದ ಮೊದಲ್ಗೊಂಡ ನಮ್ಮ ಮಾತುಕತೆಗಳು ಮೊನ್ನೆ ಮೊನ್ನೆ ಕಳೆದ ವಾರದವರೆಗೂ ಮುಂದುವರಿಯುತ್ತಲೇ ಬಂದದ್ದು, ಕಳೆದೊಂದು ವಾರದ ಅಂತರದಲ್ಲಿ ಅವರ ಸಂಪರ್ಕ ಮಾಡಲಾಗದೆ, ಇಂದು ಬೆಳಗ್ಗೆ ಚಿರಮೌನದ ವಿಶ್ರಾಂತಿಯ ಆಘಾತದಲ್ಲಿ ಕೊನೆಯಾಯಿತು. ಎಂ.ಎ. ಹೆಗಡೆಯವರೇ.., ಈ ಸಂಕಟದ ದಿನಕ್ಕೆ ಶಾಪ ಹಾಕುವುದೇ? ಒತ್ತರಿಸಿಕೊಂಡುಬರುತ್ತಿರುವ ದುಃಖದ ಹನಿಗಳನ್ನು ಮತ್ತಷ್ಟು ಕಣ್ಣಂಚಿನಲ್ಲಿ ತುಂಬಿಕೊಳ್ಳುತ್ತಲೇ ಇರುವುದೇ? ಏನೊಂದೂ ತಿಳಿಯದಾಗಿದೆ.

***

 

ನಂದಿಕೇಶ್ವರನ ಅಭಿನಯದರ್ಪಣ, ಅಭಿನವಗುಪ್ತನ ಲೋಚನಸಹಿತವಾದ ಆನಂದವರ್ಧನನ ಧ್ವನ್ಯಾಲೋಕವನ್ನು ಕನ್ನಡಕ್ಕೆ ತಂದದ್ದು- ಮೊದಲಾಗಿ ಅನೇಕ ಕೃತಿ, ಪ್ರಸಂಗಗಳ ರಚನೆ, ಸಂಪಾದನೆಯಲ್ಲಿ ಎಂ.ಎ ಹೆಗಡೆ ಅವರಿಂದ ದಕ್ಕಿದ ಸಂಪತ್ತು ಯಕ್ಷಗಾನವಲ್ಲದೆ ಭರತನಾಟ್ಯಾದಿ ನೃತ್ಯಲೋಕವೂ ನೆನಪಿಡಬೇಕಾದಂಥವು. ಯಕ್ಷಗಾನದ ಅನೇಕ ಕಲಾವಿದರಿಗೆ, ವಿದ್ವಾಂಸರಿಗೂ ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ಲಕ್ಷಣಗ್ರಂಥಗಳ ಅಧ್ಯಯನವೆನ್ನುವುದು ಕಬ್ಬಿಣದ ಕಡಲೆ ಯಾಗಿರುವಾಗ ಇವರೊಬ್ಬರು ಅವರ ನಡುವಿನಲ್ಲಿದ್ದ ಅಮೂಲ್ಯ ರತ್ನ. ಅವರಿದ್ದ ಸಂಪಾದಕ ಮಂಡಲಿಯ ಮೂಲಕ ಕನ್ನಡಕ್ಕೆ ಅನುವಾದಿಸುತ್ತಿದ್ದ ಅಭಿನವಭಾರತೀ ಸಮೇತವಾದ ನಾಟ್ಯಶಾಸ್ತ್ರದ ಸಮನ್ವಯಕಾರ್ಯ ಎಲ್ಲಿವರೆಗೆ ಬಂತೆಂದು ಆಗಾಗ್ಗೆ ವಿಚಾರಿಸುತ್ತಲೇ ಇದ್ದೆ. ಆ ಕೆಲಸ ಸ್ಥಗಿತವಾಗುತ್ತಿದ್ದ ಸವಾಲುಗಳನ್ನು ಅವರು ಹೇಳಿಕೊಂಡಾಗೆಲ್ಲ; ಎಷ್ಟು ಕೆಲಸ ಆಗಿದೆಯೋ ಅದನ್ನಷ್ಟಾದರೂ ಶೀಘ್ರನೆ ಪ್ರಕಟಿಸಿ ಉಪಕರಿಸಬೇಕೆಂಬ ಬಿನ್ನಹವನ್ನು ಹೊತ್ತು ಅವರ ಬೆಂಬತ್ತುತ್ತಿದ್ದೆ. ನಾಟ್ಯಶಾಸ್ತ್ರ ಸನ್ನಿವೇಶಗಳನ್ನಾಧರಿಸಿದ ಯಕ್ಷಗಾನ ಪ್ರಸಂಗ ಬರೆಯುವ ಬಗ್ಗೆ ಲೇಖನ ಬರೆದು ನೂಪುರಭ್ರಮರಿಯಲ್ಲಿ ಪ್ರಕಟಿಸಿದಾಗ ಒಳ್ಳೆಯ ಚಿಂತನೆ. ಆ ಕುರಿತು ಯೋಚಿಸುತ್ತೇನೆ ಎಂತಲೂ ಅಂದಿದ್ದರು.. ಅದಾಗಿ ಅವರೂ ತಮ್ಮನ್ನು ಹಿಂಬಾಲಿಸಿದ ಅನೇಕ ಹೊತ್ತಗೆಗಳ ಕೆಲಸ, ಅಕಾಡೆಮಿಯ ಜವಾಬ್ದಾರಿಯನ್ನು ತಿಳಿಸುತ್ತಲೇ ಮತ್ತೆ ಶಾಸ್ತ್ರಸಂಪಾದನೆಯಲ್ಲಿ ಕಾರ್ಯೋನ್ಮುಖರಾಗುವ ಹುಮ್ಮಸ್ಸನ್ನು ಹೇಳಿಕೊಳ್ಳುತ್ತಿದ್ದರು. ಫೋನಾಯಿಸಿದಾಗೆಲ್ಲಾ ಕಾಲುಗಂಟೆಗೆ ಕಡಿಮೆ ಮಾತಾಡಿದ ಇತಿಹಾಸವೇ ಇಲ್ಲ. ಒಂದಷ್ಟು ಸಮಯ ನಮ್ಮ ಕಲಾಕೀಲಕದಲ್ಲಿಯೂ ಇದ್ದರು.. ಮೊತ್ತಮೊದಲ ಕನ್ನಡದ ( ರಾ. ಗಣೇಶರ ಸಾವಿರದ ಅವಧಾನ) ಶತಾವಧಾನದ ಪೃಚ್ಛಕವೇದಿಕೆಯನ್ನು ಹಂಚಿಕೊಂಡಿದ್ದು; ಯಾವುದನ್ನು ಹೇಳೋಣ. ಯಾವುದನ್ನು ಬಿಡೋಣ.???

ಆದರೆ… ಇದೀಗ ಅಂಥ ಅದೆಷ್ಟೋ ಸಂಸ್ಕೃತ ಗ್ರಂಥಾಧ್ಯಯನವನ್ನು, ಪ್ರಾಚೀನ ವಿಶೇಷಗಳನ್ನು ಯಕ್ಷಗಾನಕ್ಕೂ ನಿಕಟವಾಗಿ ಕಂಡುಕೊಳ್ಳುವ ನಿರೀಕ್ಷೆಗಳೆಲ್ಲವೂ ಕಮರಿಹೋದ ಹೊತ್ತಿದು ಎಂದು ನನ್ನ ಮಟ್ಟಿಗಂತೂ ಅನಿಸುತ್ತಿದೆ. 

***

ಸಹಪಿಡಿಯಾದಲ್ಲಿ ಕ್ಯೂರೇಟರ್ ಆಗಿ ಯಕ್ಷಗಾನವಲಯದ ದಾಖಲೀಕರಣಕ್ಕೆಂದು ಎರಡು ವರುಷಗಳ ಕಾಲ ಕರ್ತವ್ಯ ನಿರ್ವಹಿಸಿದ ಫಲಶ್ರುತಿಯಾಗಿ ಅದೆಷ್ಟೋ ಅಧ್ಯಯನಸಂಬಂಧಿ ಹೊಳಹುಗಳು ಬಳಿಯಿತ್ತು. ಎಂ.ಎ. ಹೆಗಡೆಯವರಲ್ಲಿಯೂ ಒಂದು ಇಂಗ್ಲೀಷ್ ಲೇಖನವನ್ನು ಬರೆಸಿ ಪ್ರಕಟಿಸುವ ಸೌಭಾಗ್ಯವೂ ದೊರೆತಿತ್ತು. ಹೀಗೆ ಅಧ್ಯಯನದಲ್ಲಿ ಒದಗಿದ ಲೇಖನಗಳ ಜೊತೆಗೆ, ನನ್ನ ಅಧ್ಯಯನಾಂಶವನ್ನ ಕನ್ನಡಕ್ಕೂ ತರುವ ನನ್ನ ಆಶಯಕ್ಕೆ ಒತ್ತಾಸೆಯಾದವರು ಎಂ.ಎ.ಹೆಗಡೆಯವರು. ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಂದ ಮೇಲಂತೂ ಅದನ್ನು ಆದಷ್ಟು ಬೇಗನೆ ಪ್ರಕಟಿಸುವ ಇರಾದೆ ಅವರದ್ದಾಗಿತ್ತು. ಆದರೆ ಅಡ್ಡಿಗಳು ಹಲವಾರು. ಮೊದಲ ಸಲ ಮುದ್ರಕರ ಸಮಸ್ಯೆ, ಎರಡನೇ ಸಲ ಲಾಕ್‌ಡೌನ್, ಅದು ಮುಗಿದು ಮತ್ತೊಬ್ಬ ಮುದ್ರಕರಲ್ಲಿ ಅದನ್ನೊಪ್ಪಿಸಿ ಇನ್ನೇನು ಪ್ರಿಂಟ್ ಆಗುವ ಹೊತ್ತಿಗೂ ಹಲವು ಸವಾಲುಗಳು.., ಹಾಗಿದ್ದೂ ನನ್ನ ಸಂಕಲ್ಪಕ್ಕೆ ಅವರ ಬೆಂಬಲ ಒಂದಿನಿತೂ ಮೊಟಕಾಗಲಿಲ್ಲ. ಒಮ್ಮೆ ಅವರು ಮಾತು ಕೊಟ್ಟರೆಂದರೆ ಆಯಿತು. ಅಷ್ಟೊಂದು ಬದ್ಧತೆ ! ಹೀಗೆ ನನ್ನೊಬ್ಬಳಿಗೇ ಅಲ್ಲ.., ಅಕಾಡೆಮಿಯ ಅವರ ಕಳೆದ ವರುಷದ ಅವಧಿಯಲ್ಲೇ ಸುಮಾರು ಅಮೂಲ್ಯ ೧೦ ಪುಸ್ತಕಗಳ ಮುದ್ರಣ.. ಇದೀಗ ಅವೆಲ್ಲ ಅನಾವರಣವಾಗಬೇಕಾದ ಹೊತ್ತಿಗೆ ಅವರೇ ಕಣ್ಣೆದುರಿಗಿಲ್ಲ….! ನಮಗೆ ಭಾಗ್ಯವಿಲ್ಲ…

ಇವುಗಳೊಂದಿಗೆ ಅನೇಕಾನೇಕ ಕಾರ್ಯಕ್ರಮಗಳು, ಸಹಾಯ ಧನ ಒದಗಿಸುವಿಕೆ..,  ಅದೆಷ್ಟೋ ವರುಷಗಳಿಂದ ನೆನೆಗುದಿಗೆ ಬಿದ್ದಿದ್ದ ಯಕ್ಷಗಾನ ಪಠ್ಯಪುಸ್ತಕ ಮುದ್ರಣವು ಸರ್ಕಾರದಿಂದ ಆಗಿಸುವ ಹಿನ್ನೆಲೆಯಲ್ಲಿ ಅವರ ಸತತ ಪ್ರಯತ್ನವನ್ನು ಬಲ್ಲವರೇ ಬಲ್ಲರು. ಕೋವಿಡ್ ಲಾಕ್ ಡೌನ್ ಕಾಲೋತ್ತರದ ಬಳಿಕವೂ ಅವರ ವಯಸ್ಸಿನ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಉಭಯಕುಶಲೋಪರಿಯ ನಡುವೆಯೂ ಅವರು ಮಾರ್ನುಡಿಯುತ್ತಿದ್ದದ್ದು ತಮ್ಮ ಪಾಲಿನ ಕರ್ತವ್ಯಗಳಿಗೆ ಅಕಾಡೆಮಿಗೆ ತೆರಳುವ ಕುರಿತ ಆಸಕ್ತಿ, ಕಲಾವಿದರಿಗೆ ಸಹಾಯ ನೀಡುವ ಔದಾರ್ಯ. ಎಲ್ಲರ ಬಗ್ಗೆಯೂ ಕಳಕಳಿ. ಎಂ.ಎ ಹೆಗಡೆಯವರಂಥ ಅಧ್ಯಕ್ಷರ ದಿಕ್ಸೂಚೀ ಮನಸ್ಥಿತಿಯನ್ನು ಇನ್ನೆಲ್ಲಿ ನಿರೀಕ್ಷಿಸಲು ಸಾಧ್ಯ? ನಿಷ್ಕಾಮಕರ್ಮಯೋಗಿ !! ಅವರಿಗೆ ಸಲ್ಲುವ ಅಭಿಧಾನ.

***

ನನ್ನ ತಂದೆ ಬಿ.ಜಿ.ನಾರಾಯಣ ಭಟ್ಟರ (ನೂಪುರ ಭ್ರಮರಿಯ ಸಂಸ್ಥಾಪಕ ನಿರ್ದೇಶಕರು) ಅಗಲಿಕೆಯ ನಂತರ ನನ್ನೊಳಗಿನ ಜೀವಂತಿಕೆಯನ್ನು ಪುನರ್‌ಸ್ಥಪಿಸಿಕೊಳ್ಳುತ್ತಲೇ ಅವರಿಗೊಂದು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಹೊತ್ತಿಗೇ ಅವರು ಬಹುವಾಗಿ ನೆಚ್ಚಿದ ಯಕ್ಷಗಾನ ಮತ್ತು ಅದರ ಅನ್ವಯದ ಅಭಿವ್ಯಕ್ತಿಯನ್ನು ಸಂಶೋಧನಾ ಸಂಬಂಧಿಯಾದ ಪ್ರಸ್ತುತಿಯಾಗಿಸಿ ಯಕ್ಷಭಾಣಿಕಾವೆಂದು ಮಾಡುವ ಯೋಚನೆ; ಪೂರಕವಾಗಿ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ಬಂದು ಉಡುಪಿಯಲ್ಲಿ ೨೦೦೪ರಲ್ಲಿ ನಡೆಸಿದ ನಾಟ್ಯಶಾಸ್ತ್ರ-ಯಕ್ಷಗಾನ ದ ತೌಲನಿಕ ವಿವೇಚನೆಯ ಬಳಿಕ ಅಂಥಹುದೇ ದಾರಿಯಲ್ಲಿ ಪರಸ್ಪರ ಸೋದರ ಕಲೆಗಳ ಸಹಸಂಬಂಧವನ್ನು ಚಿಂತಿಸುವ ದಿಸೆಯಲ್ಲಿ ಹಿರಿಯ ಕಲಾವಿದರು, ವಿದ್ವಾಂಸರ ಮೇಳೈಸುವಿಕೆಯಲ್ಲಿ ವಿಚಾರಸಂಕಿರಣವನ್ನೊಂದನ್ನು ಏರ್ಪಡಿಸುವ ಗುರಿ. ಉಜಿರೆ ಅಶೋಕ ಭಟ್ಟರ ಸೂಚನೆಯಂತೆ ನಾನು ನೇರ ಕೈಚಾಚಿದ್ದು ಅಕಾಡೆಮಿಗೆ. ಫೋನಾಯಿಸಿದ್ದು ಎಂ.ಎ.ಹೆಗಡೆ ಅವರಿಗೇ. ಅವರ ಮುಖಚರ್ಯೆಯ ಅಂಗಭಾಗವೇ ಆಗಿದ್ದ ವೀಳ್ಯದೆಲೆ‌ಅಡಿಕೆಯ ರಸವನ್ನು ಮೆಲ್ಲುತ್ತಾ ಮಾಡೋಣ ಎಂದಿದ್ದರು. ಮುಂದೆ ಅದರ ಸವಾಲು ಬಾಧ್ಯತೆಗಳನ್ನು ಚರ್ಚಿಸಿದಾಗೆಲ್ಲಾ ಸಂಪನ್ಮೂಲ ವ್ಯಕ್ತಿಗಳ ಏರ್ಪಾಡಿನಲ್ಲಿ ಕುಂದುಂಟಾಗದಂತೆ ನೋಡಿಕೊಳ್ಳುತ್ತಾ, ತಮ್ಮ ಸಲಹೆಸೂಚನೆಗಳೊಂದಿಗೆ ಮುನ್ನಡೆಸುತ್ತಾ ಅಕಾಡೆಮಿ ಇಂಥದ್ದನ್ನೆಲ್ಲಾ ಮಾಡಬೇಕು. ನೀವು ಮಾಡಿ. ನಾವಿದ್ದೇವೆ  ಎಂದ ಮಾತು ಇಂದಿಗೂ ಕಿವಿಯಲ್ಲುಳಿದಿದೆ. ಅವರಾಗಿಯೇ ಮುತುವರ್ಜಿ ವಹಿಸಿ ಉದ್ಘಾಟಕರನ್ನು ಕರೆಸುವಲ್ಲಿಂದ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಮಾತಾಡಿ…. ಬರೆದಷ್ಟೂ ಮುಗಿಯದು… ಅದಾಗಿ ವಿಚಾರಸಂಕಿರಣದ ಅಧ್ಯಯನಲೇಖನಗಳೆಲ್ಲವನ್ನೂ ಒಂದೆಡೆ ಸೇರಿಸಿ ಪ್ರಕಟಿಸುವ ಹಿನ್ನೆಲೆಯಲ್ಲಿಯೂ ನನ್ನ ಪ್ರಶ್ನೆಗೆ ಅವರ ಪ್ರತ್ಯುತ್ತರ ಖಂಡಿತಾ ಮಾಡಿಸುವ. ಆಗಬೇಕಾದದ್ದು. ಅದಾಗಿ ಲೇಖನಗಳನ್ನು ಓದಿ, ಪ್ರತಿಕ್ರಿಯೆ ಹೇಳಿ, ತಿದ್ದುಪಡಿ ಸೂಚಿಸಿ, ಶೀರ್ಷಿಕೆ ಕೊಟ್ಟು, ಆಶಯನುಡಿ ಬರೆದು, ಮುಖಪುಟ ಮಾಡಿಸುವ ಸಂಬಂಧ ಮಾತನಾಡಿ ಒಪ್ಪಿಗೆ ಕೊಟ್ಟು……ಕಿರಿಯರನ್ನು ಕೈಹಿಡಿದು ನಡೆಸುವ , ನಡೆಯುವವರನ್ನು ಜೊತೆಯಲ್ಲಿ ಕಾಯುವ, ನಗೆಚಟಾಕಿಗಳೊಂದಿಗೆ ಕಾಲ-ಸನ್ನಿವೇಶವನ್ನು ವಿಮರ್ಶಿಸುತ್ತಾ, ವ್ಯವಸ್ಥೆಯನ್ನು ಹಗುರ ಮಾಡುವ  ವೈಶಾಲ್ಯ ಮನಸ್ಥಿತಿ ಅವರದ್ದು. 

ಓ ಮೊನ್ನೆ ಮೊನ್ನೆ.., ಯಕ್ಷಗಾನಕ್ಕೆ ನಾಟ್ಯಶಾಸ್ತ್ರಾನ್ವಯ ಮತ್ತು ವಿವಿಧ ದೇಶೀಯ ಗ್ರಂಥಗಳ ನನ್ನ ಅಧ್ಯಯನವು ಸಮಾಪನಗೊಳ್ಳುತ್ತಿರುವುದನ್ನು ಅದರ ಅಧ್ಯಾಯಂಶಗಳ ಸಹಿತ ತಿಳಿಸಿ ಅದಕ್ಕೊಂದು ಒಳ್ಳೆಯ ಆಶಯನುಡಿಯನ್ನು ಬರೆದುಕೊಡಲಾದೀತೇ ಎಂದು ಕೇಳಿದಾಗಲೂ ಅವರಾಡಿದ ಮಾತು- ಅದನ್ನು ಬರೆದುಕೊಡುವುದು ಹೇಗೂ ಇದೆ. ಆದರೆ ಪ್ರಕಟಣೆ ಎಲ್ಲಿಂದ ಮಾಡಿಸಬೇಕೆಂದಿದ್ದೀರಿ? ಎಂದೇ? ನಿಶ್ಚಯ ಮಾಡಿಲ್ಲ ಸರ್ ಎಂದಿದ್ದೆ. ಅವರ ಮುಂದಿನ ಮಾತು ಅಕಾಡೆಮಿಯಿಂದಲೇ ಮಾಡಿಸುವ ಸಂಕ್ಷಿಪ್ತವಾಗಿ ತಮ್ಮ ನಿರ್ಧಾರ ಹೇಳಿದ್ದರು. ಅರೆ.., ಮತ್ತೊಂದು ಪುಸ್ತಕ ನನ್ನದೇ ಅಕಾಡೆಮಿಯಿಂದ ಮುದ್ರಣವಾಗುವುದಾದರೆ ಅದರಿಂದ ನಿಮಗೆ ತೊಂದರೆಯಾದೀತೇ ಎಂದು ನಾನೇ ಸಂದೇಹಿಸಿ ಕೇಳಿದಾಗಲೂ ಅವರ ಉತ್ತರ  ಅದೆಲ್ಲಾ ನಿಮಗೆ ತಲೆಬಿಸಿ ಯಾಕೆ. ಆಗದಿರೋದು ಈಗ ಆಗುತ್ತಿದೆ ಎಂದಾಗ ಅದನ್ನು ಅಕಾಡೆಮಿಯೇ ಮಾಡುವುದಾದರೆ ಯಾರಾದರೂ ಯಾಕೆ ಅಡ್ಡಿ ಮಾಡಬೇಕು? ಆ ಚಿಂತೆ ನಿಮಗೆ ಬೇಡ. ಅದಕ್ಕೆ ಚಿತ್ರಗಳನ್ನು ಬರೆಸುವ ವಿಷಯದಲ್ಲಿಯೂ ಕಲಾವಿದರೊಂದಿಗೆ ಮಾತನಾಡಿ. ಅಂದಹಾಗೆ ನಿಮ್ಮ ತಂದೆಯವರು ಬರೆದ ಯಕ್ಷಗಾನ ಪ್ರಸಂಗಗಳಿವೆಯೆಂದಿದ್ದಿರಲ್ಲ. ಅವೇನಾಯ್ತು? ಎಂದು ಮತ್ತೆ ವಿಚಾರಿಸಿದ್ದರು.

***

ಸರ್ಕಾರದ ವಿವಿಧ ಅಕಾಡೆಮಿಗಳ ಪೈಕಿ ಅವರಂತೆ ದನಿ ಎತ್ತಿದವರು, ಅವರಂತೆ ಕೆಲಸ ಮಾಡಿದವರು ಮತ್ತೊಬ್ಬರು ಸಿಗಲಾರರು ಎಂದು ಉಳಿದ ಅಕಾಡೆಮಿಯ ಎಷ್ಟೊ ಗೆಳೆಯರಲ್ಲಿ ಹೇಳಿಕೊಳ್ಳುವುದಿತ್ತು. ಒಂದು ಅಕಾಡೆಮಿ ಹೇಗೆ ಕೆಲಸ ಮಾಡಬೇಕು? ಯಾವುದು ಅದರ ಆಶಯವಾಗಿರಬೇಕು? ಅಕಾಡೆಮಿಯ ಕರ್ತವ್ಯ ಎಂದರೆ ಏನು ? ಅಕಾಡೆಮಿಕ್ ಅಂದರೆ ಏನು?- ಎಂಬ ಬಗ್ಗೆ ಸ್ಪಷ್ಟತೆಯಿದ್ದ ಅಪರೂಪದ ಅಧ್ಯಕ್ಷರು ಅವರು. ಮೇಲಾಗಿ ಸಜ್ಜನ, ಪರೋಪಕಾರಿ, ನೇರ ನುಡಿಯ ಸೌಜನ್ಯಶೀಲ, ಅರ್ಥವಂತಿಕೆಯ ಅಧ್ಯಯನಶೀಲ.

ಲೋಕದಲ್ಲಿ ಹೆಚ್ಚಿನ ಆಘಾತವಾಗುವುದು ಸಜ್ಜನರ ಅಗಲಿಕೆ ! ಅದರಲ್ಲೂ ತಮಗೆಂದು ಕುರಿತಾಗಿ ಏನನ್ನೂ ಬಯಸದ ನಿಷ್ಕಾಮಕರ್ಮಿಗಳು ! ಅವರು ಬಿಟ್ಟುಹೋಗುವ ಮೌನ ಹೃದಯದಲ್ಲಿ ವರುಷಾನುಗಟ್ಟಲೆ ಗಾಢವಾಗುತ್ತಲೇ ಬಲಿಯುತ್ತದೆ. ಆ ವ್ಯಕ್ತಿಯ ಅನುಪಸ್ಥಿತಿಯು ಉಂಟುಮಾಡುವ ಶೂನ್ಯ ಭಾವ ಆ ವ್ಯಕ್ತಿತ್ವದ ಘನವಂತಿಕೆಯಷ್ಟೇ ಅಲ್ಲ, ಲೋಕಕ್ಕೆ ಅವರಿಂದಾಗುತ್ತಿದ್ದ, ಆಗಬೇಕಿದ್ದ ಮತ್ತಷ್ಟು ಮಗದಷ್ಟು ಉಪಕಾರದ ಹಿರಿಮೆಗೆ ನಿದರ್ಶನ.ಕ್ಕಾಗಿ ಅಂಥ ಸಜ್ಜನ, ಕರ್ಮಯೋಗಿಯ ಸ್ಥಾನವನ್ನು ಬೇರೊಬ್ಬರಿಂದ ತುಂಬಲಾಗದಷ್ಟೇ. ಹೃದಯಭಾರವಾಗಿದೆ.

ಹೆಗಡೆಯವರೇ,, ನಿಮ್ಮೊಂದಿಗೆ ಆಡಬೇಕಿದ್ದ ಮಾತುಗಳು ಉಳಿದುಹೋಗಿದೆ. ಮನೆಯ ಸದಸ್ಯರನ್ನು ಕಳಕೊಂಡ ಸಂಕಟ ನಮಗೆ. 

 ಸಾಷ್ಟಾಂಗ ನಮಸ್ಕಾರಗಳೊಂದಿಗೆ…..ನೂಪುರ ಭ್ರಮರಿಯ ನೆನಪುಗಳು!

 

(ಫೋಟೋ ಗಳು: ಪೂಜಾ ಬಾಲಸುಬ್ರಹ್ಮಣ್ಯ, ಬೆಂಗಳೂರು.

ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನೂಪುರ ಭ್ರಮರಿ ೨೦೧೯ ಡಿಸೆಂಬರ್ ೧೫ ರಂದು ಬೆಂಗಳೂರಿನಲ್ಲಿ ನಡೆಸಿದ  ರಾಜ್ಯಮಟ್ಟದ ನಾಟ್ಯಶಾಸ್ತ್ರ, ಯಕ್ಷಗಾನ ಮತ್ತು ಸಾಂಪ್ರದಾಯಿಕ ಕಲೆಗಳ ಸಹಸಂಬಂಧ ಕುರಿತ  ವಿಚಾರಸಂಕಿರಣದ್ದು.)

Leave a Reply

*

code