Author: Editor
ಸಹೃದಯ ಸದ್ರತ್ನ- ಮೊದಲ ಪುರಸ್ಕಾರ ಸಲ್ಲುತ್ತಿರುವುದು ಶ್ರೀ ಸುಬ್ಬುಕೃಷ್ಣ ಇವರಿಗೆ. ಬೆಂಗಳೂರು ಮಹಾನಗರದ ದೈನಂದಿನದ ಒಂದಲ್ಲೊಂದು ಕಲಾಂಗಣದಲ್ಲಿ ಕಾಣಿಸುವ ಇವರು ಪ್ರತಿಯೊಂದು ಕಲಾಕಾರ್ಯಕ್ರಮವನ್ನೂ ಬಿಡುಗಣ್ಣಿನಿಂದ ಕಂಡು, ಆಸ್ವಾದಿಸಿ,ಭಾವಾರ್ಣವದಲ್ಲಿ ಸಾನಂದವಾಗಿ ವಿಹರಿಸುವವರು. ತಾನು ಮಾತ್ರ ಕಲೆಯಿಂದ ಖುಷಿ ಪಡುವ ಭಾವಲೋಭಿಯಲ್ಲ ಇವರು. ತಾನು ಕಂಡುದರ ಧನಾಂಶಗಳನ್ನು ಹೆಕ್ಕಿ ಹೆಣೆದು ಕಲಾವಿದರನ್ನು ಮುಕ್ತವಾಗಿ ಶ್ಲಾಘಿಸಿ, ತನ್ನ ಸಂತೋಷಾನುಭವವನ್ನು ಅಕ್ಷರೀಕರಿಸಿ ವಿವರವಾದ ಕಲಾವಲೋಕಲೇಖವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಜನರಿಗೆ ಹಂಚುವವರು. ಜೊತೆಗೆ ತಮ್ಮದೇ ಕೃಷ್ಣ ಕಲಾಕೇಂದ್ರದಿಂದ ಮಾಸಿಕ ಕಲಾಕಾರ್ಯಕ್ರಮಗಳನ್ನು ಅವಿರತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.