Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು
ಇದೀಗ ಅತ್ಯಂತ ಪ್ರಸಿದ್ಧವಾದ ಗಂಗಾವತರಣದ ರಂಗರೂಪಕದತ್ತ ಹೊರಳೋಣ. ಗಂಗಾವತರಣವು ಬಹುಶಃ ಎಲ್ಲ ಕಲಾಮಾಧ್ಯಮಗಳಲ್ಲೂ ಮೆಯ್‌ವರಿದ ಕಥಾನಕ. ಕವಿಗಳು ಕಲಾಕರರಿಗೆ ಈ ವಸ್ತು ಕಾಮಧೇನುವಿದ್ದಂತೆ -ಎಲ್ಲ ತರಹದ ಎಲ್ಲ ಸ್ತರದ ರಸಸಂಛನ್ನ ಕಥಾಗತಿ ಇರುವಂತಹದ್ದು. ವಾಚಿಕಕ್ಕೂ ನಿರ್ವಾಚಿಕಕ್ಕೂ ಒಗ್ಗಿಬರುವ ಕಥಾವರಣ. ಇಲ್ಲಿಯ ತೊಡಕಿರುವುದು ಸನ್ನಿವೇಶಗಳ ಆಯ್ಕೆಯಲ್ಲಿ. ಈ ಕತೆಯ ಮೂಲರೂಪ ಸಿಗುವುದು ವಾಲ್ಮೀಕಿರಾಮಾಯಣದ ಬಾಲಕಾಂಡದಲ್ಲಿ. ಅದನ್ನೇ ಕಲ್ಪನಾನುಶೀಲವಾಗಿ ತಮತಮಗೆ ಬೇಕಾದಂತೆ ಸಾಕಷ್ಟು ಸರ್ಜನಶೀಲರು ವಿಸ್ತರಿಸಿದ್ದಾರೆ. ಪ್ರಸ್ತುತ ನಾನು ಇಲ್ಲಿ ಉಲ್ಲೇಖಿಸುತ್ತಿರುವ ಕಥಾಭಿತ್ತಿ ಪೂರ್ಣಶಃ ವಾಲ್ಮೀಕಿನಿಬದ್ಧವಾದುದು. ವಿಶೇಷತಃ ಈ ರೂಪಕದಲ್ಲಿ ನಾಟ್ಯಭಾಗವನ್ನು ತುಸು ಹೆಚ್ಚಾಗಿಯೇ ಅಳವಡಿಸಿಕೊಳ್ಳಲಾಗಿದೆ-ಅವಕಾಶಸಾಧ್ಯತೆ ಇದೆ ಎನ್ನುಅ ನೆಲೆಯಲ್ಲಿ ಆಸಕ್ತ ಪ್ರಯೋಗಶೀಲರು ಪರಿಶೀಲಿಸಬೇಕಾಗಿ ಪ್ರಾಂಜಲ ಪ್ರಾರ್ಥನೆ.
ರಂಗಸಜ್ಜಿಕೆ : ರಂಗದ ಹಿನ್ನೆಲೆಯಲ್ಲಿ ಕೈಲಾಸಪರ್ವತ. ಈಶ್ವರ ವೀರಭಂಗಿಯಲ್ಲಿ ನಿಲ್ಲುವಷ್ಟು ಅವಕಾಶ ಇಅಬೇಕು. ಈಶ್ವರನ ತಲೆಯ ಮೇಲುಭಾಗದಲ್ಲಿ ಅಟ್ಟಣಿಗೆ. ಅಲ್ಲಿ ಗಂಗೆಯ ಕಲಾಪ. ಆ ಅಟ್ಟಣಿಗೆಯಿಂದ ಗಂಗೆ ಇಳಿದು ಬರಲು ಅನುಕೂಲ ಇರುವಂತೆ ಕೈಲಾಸಪರ್ವತದ ಮಗ್ಗುಲಲ್ಲಿ ಮೆಟ್ಟಿಲು ಇರಬೇಕು. ರಂಗದ ಮುನ್ನೆಲೆಯಲ್ಲಿ ಜಹ್ನುಋಷಿಯ ಆಶ್ರಮಕ್ಕಾಗಿ ಒಂದು ಗೋಡೆ ಹಾಗೂ ಹುಲ್ಲಿನ ಮಾಡು. ಇದಿಷ್ಟು ಪರಿಕರ ಇದ್ದರೆ ಚೆನ್ನ.
ರಂಗಮಧ್ಯದಲ್ಲಿ ತಪೋನಿರತನಾದ ಭಗೀರಥ.
ಝಂಪೆತಾಳ- ಪಿತೃಮುಕ್ತಿಗಾಗಿ ತರ್ಪಣ ನೀಡೆ ಗಂಗೆಯನು
ಧರೆಗೆ ಕರೆತರಲೆಂದು ರಾಜಾಭಗೀರಥನು
ಗೋಕರ್ಣ ಕ್ಷೇತ್ರದಲಿ ಘೋರ ತಪವಾಚರಿಸೆ
ಬ್ರಹ್ಮದೇವನು ತೋರ್ದನು
(ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ.)
(ಬ್ರಹ್ಮನ ಮಾತು ) ಏಕತಾಳ-
ವತ್ಸ ಭಗೀರಥ ! ಮೆಚ್ಚಿದೆ ತಪಸಿಗೆ ಹೈಮವತಿಯು ಶುಭ್ರಳು ಗಂಗೆ
ದಿವಿಯಿಂ ಧುಮುಕುವ ವೇಗದ ಭರವನು ತಳೆದುಕೊಳ್ಳಲಾರದು ಭೂಮಿ
ಗಂಗಾಪತನದ ರಭಸವ ಭರಿಸಲು ಪ್ರಾರ್ಥಿಸು ಶಂಕರನನ್ನು (ಬ್ರಹ್ಮನ ನಿರ್ಗಮನ)
ರೂಪಕತಾಳ- (ಭಗೀರಥನ ತಪೋಭಂಗಿ)
ನೆಲದ ಮೇಲೆ ತುದಿಯ ಕಾಲಿನಲ್ಲಿ ನಿಂತನು
ಊರ್ಧ್ವಬಾಹುವಾಗಿ ಕಠಿನತಪವಗೈದನು
ತಪಸಿಗೊಲಿದು ಶಿವನು ಪ್ರತ್ಯಕ್ಷನಾದನು
ಗಂಗೆಯನ್ನು ಶಿರದಿ ಧರಿಸಿಕೊಳುವೆನೆಂದನು (ಶಿವನ ನಿರ್ಗಮನ)
(ಇನ್ನು ಮುಂದೆ ಭಗೀರಥ ಪ್ರಾಂಜಲನಾಗಿ ಗಂಗೆಯನ್ನು ಪ್ರಾರ್ಥಿಸುವುದು. ಪದ್ಯಾನುಗುಣವಾಗಿ ಹಿಂದಿನ ಪರದೆ ಸರಿಯುವುದು. ಅಲ್ಲಿ ಕೈಲಾಸದಲ್ಲಿ ಸಿದ್ಧನಾಗಿ ವೀರಭಂಗಿಯಲ್ಲಿ ನಿಂತ ಶಿವ. ಶಿವನ ನೆತ್ತಿಯ ಮೇಲುಗಡೆಯ ಅಟ್ಟದಲ್ಲಿ ಗಂಗೆ. ಗಂಗೆಯ ಎಲ್ಲಾ ಅಟಾಟೋಪದ ನಾಟ್ಯವು ಆ ಅಟ್ಟಣಿಗೆಯಲ್ಲಿ ನಡೆಯುತ್ತದೆ.)
(ಝಂಪೆತಾಳ)ಕೈಮುಗಿದು ಗಂಗೆಯನ್ನು ಧ್ಯಾನಿಸೆ ಭಗೀರಥನು
ಗಗನಾಗ್ರ ಫಳಫಳಿಸಿ ದಿಕ್ಕಿಲ್ಲ ಥಳಥಳಿಸಿ
ತ್ರೈಭುವನಧಾವಲ್ಯ ಮಡುಗಟ್ಟಿ ಮಗುಚಿತೆನೆ
ಓಂಖಾರಗರ್ಭನಿರ್ಭೇದ ಘೋಷವು ಮೊರೆದು
ಸಿಡಿಸಿಡಿವ ನೊರೆಯಿಂದ ಬಾಂದಳವ ಘುಡುಘುಡಿಸಿ
ಶಿವನನೂ ಕೊಚ್ಚಿ ಸೆಳೆದೊಯ್ವಹಂಕಾರದಲಿ
ಧುಮುಧುಮಿಸಿ ಧುಮುಧುಮಿಸಿ ಧುಮುಕಿದಳು ಗಂಗೆ
(ಗಂಗೆಯು ಅಟ್ಟದ ಮೇಲೆ ಧುಮುಕುವ ಆಂಗಿಕ ತೋರುತ್ತಾಳೆ. ಕೆಳಗೆ ನಿಂತ ಶಿವ, ಆ ಜಪ್ಪುವಿಕೆಯ ಅಹಂಕಾರವನ್ನು ದೇಹದ ಸಮತೋಲನದ ಹೊಯ್ದಾಟದಲ್ಲಿ ಅಭಿನಯಿಸುತ್ತಾನೆ.)
(ತ್ರಿಪುಟತಾಳ) ಗಂಗೆ ಗರ್ವವನರಿತ ಧೂರ್ಜಟಿ ಹುಬ್ಬುಗಳ ಗಂಟಿಕ್ಕಿದ
ಒತ್ತಡದಿ ನೆತ್ತಿಯನು ಗುದ್ದುವ ದುರ್ಮದಕೆ ತಡೆಹಾಕಿದ
ನಿಡುಜಟಾಮಂಡಲದ ಗುಹೆಯಲಿ ಗಂಗೆಯನು ನಿರ್ಬಂಧಿಸೆ
ಹೊರಬರುವ ಹದಗಾಣದೇ ಚಡಪಡಿಸಿ ಸುತ್ತಿದಳೊಳಗಡೆ
(ಶಿವನು ಜಟೆ ಬಿಗಿವ ಭಂಗಿ ತೋರುತ್ತಿರುವಾಗಲೇ ಅಟ್ಟದಲ್ಲಿದ್ದ ಗಂಗೆ, ನಿರ್ಬಂಧಕ್ಕೊಳಗಾದುದನ್ನು ತೋರಿಸುವುದು. ಇಷ್ಟೆಲ್ಲಾ ಆಗುವಾಗ ರಂಗಮಧ್ಯದಲ್ಲಿದ್ದ ಭಗೀರಥನು ಇನ್ನೇನು ಗಂಗೆ ಬರುತ್ತಾಳೆ ಎಂಬ ನಿರೀಕ್ಷೆಯನ್ನು ಪ್ರಕಟಿಸಿ ಆಶಾಭಾವದಲ್ಲಿ ದೂರದಲ್ಲಿ ದೃಷ್ಟಿನೆಟ್ಟು ಕಾಯುತ್ತಿರಬೇಕು. ಇನ್ನೂ ಗಂಗೆ ಬಾರದ ಕಾರಣ…)
(ರೂಪಕತಾಳ) ಮತ್ತೆ ಗೈದ ಘೋರ ತಪವ ನೃಪ ಭಗೀರಥ
ಶಿವ ಜಟಾಕಟಾಹದಿಂದ ಬಿಟ್ಟ ಗಂಗೆಯ
ಹರನ ಜಡೆಯ ಇರುಕಿನಿಂದ ತೂರಿಬಂದಳು
ಇರುವ ನೆಲೆಯ ತೊರೆದು ನೆಲಕೆ ತೆರೆದು ಬಂದಳು
(ಲೈಟ್ ಆಫ್ ಮಾಡಬೇಕು. ಶಿವನ ನಿರ್ಗಮನ ತಕ್ಷಣ ಬೆಳಕು. ಗಂಗೆಯು ಬೆಟ್ಟದ ಮೆಟ್ಟಿಲಿಳಿದು ಬಾಗಿ ಬಳುಕಿ ಇಳಿದು ಬರುವುದು. ಭಗೀರಥ ಸ್ವಾಗತಿಸುವುದು.)
ಬಾಗಿ ಬಳುಕಿ ಏರಿ ಇಳೀದು ಹರಿದು ಬಂದಳು
ಬಂಡೆ ಹಾರಿ ಕಣಿವೆ ನುಸುಳೀ ಹಾಡಿ ಬಂದಳು
ಲೋಕ ಪಾಪ ತಾಪ ಕಳೆದು ಇಳಿದು ಬಂದಳು
(ಸಾಧ್ಯವಾದರೆ ಒಂದಷ್ಟು ನಾಗರಿಕರು ಗಂಗಾಸ್ನಾನ ಮಾಡಿ ಧನ್ಯರಾಗುವ ದೃಶ್ಯವನ್ನು ಅಳವಡಿಸಿಕೊಳ್ಳಬಹುದು. ಹಾಗೆ ಮಾಡುವುದಾದಲ್ಲಿ ಗಂಗೆ ಹಾಗೂ ಭಗೀರಥರು ನರ್ತಿಸುತ್ತಲೇ ಪ್ರಜಾಜನರನ್ನು ಕಂಡು ಸಂಭ್ರಮಿಸುವುದನ್ನು ತೋರಿಸಬಹುದು. ಜನರೆಲ್ಲಾ ನಿರ್ಗಮಿಸಿದ ಮೇಲೆ, ಗಂಗೆಗೆ ಮುನ್ನೆಲೆಯಲ್ಲಿರುವ ಜಹ್ನು ಆಶ್ರಮ, ಅಲ್ಲಿ ಧ್ಯಾನಸ್ಥಿತಿಯಲ್ಲಿ ಕುಳಿತ ಜಹ್ನು ಕಾಣಿಸಿದಾಗ, ಗಂಗೆಯ ದುರ್ಮದ ಮೇರೆ ಮೀರುತ್ತದೆ.)
(ತ್ರಿಪುಟತಾಳ) ಜಹ್ನು ಋಷ್ಯಾಶ್ರಮದಿ ಕಾಣಲು ಯಾಗಶಾಲೆಯು ಗಂಗೆಯು
ಕೊಬಿದಳು ಮತ್ತುಬ್ಬಿದಳು ಬೊಬ್ಬುಳಿಯ ಅಬ್ಬರಗೈದಳು
ನುಗ್ಗಿ ಬಹ ಗಂಗಾಪ್ರವಾಹಕೆ ಕೊಚ್ಚಿ ಹೋಗಲು ಆಶ್ರಮ
ಕ್ರುದ್ಧಮುನಿ ಗಂಗೆಯನು ಏಕಾಪೋಶನದಿ ಕುಡಿದುರುಬಿದ
(ಗಂಗೆ ಮದವೇರಿ ಆಶ್ರಮದತ್ತ ನುಗ್ಗುವ ಅಭಿನಯ ಮಾಡುವಾಗ, ಸಾಧ್ಯವಾದರೆ ಆಶ್ರಮದ ಮಾಡನ್ನು ಕೆಡವಬಹುದು. ಏರುನೀರಲ್ಲಿ ತೇಲಿ ಮುಳುಗುವ ಋಷಿ ಗಂಗೆಯನ್ನು ಆಪೋಷಿಸುತ್ತಾನೆ. ಗಂಗೆಯ ಜಹ್ನುವಿನ ಬೆನ್ನಿನ ಹಿಂದೆ ಸ್ತಬ್ಧಳಾಗಿ ಅಡಗುತ್ತಾಳೆ. ಗಂಗೆಯ ಉಡಾಫೆಯನ್ನು ಕಕ್ಕಾವಿಕ್ಕಿಯಾಗಿ ಕಂಡ ಭಗೀರಥ, ಜಹ್ನುವಿನ ಮೊರೆಹೊಗುತ್ತಾನೆ.)
(ಏಕತಾಳ) ಗಂಗೆಯ ಕಾಣದೆ ಕಂಗಾಲಾದ ಭಗೀರಥ ಜಹ್ನುವ ಸ್ತುತಿಗೈದ
ಗಂಗೆ ನಿಮ್ಮ ಮಗಳಂತೆಯೆ ಕಾಣಿರಿ ಲಕ್ಷಿಸಿ ಲೋಕಾಲೋಕ ಹಿತ
ನಕ್ಕ ಜಹ್ನು, ಕಿವಿಗಳ ಮೂಲಕ ಹೊರಹೊರಡಿಸಿದನು ಜಾಹ್ನವಿಯನ್ನು
ಗಾಂಭೀರ್ಯದಿ ಮೈದುಂಬಿ ಹೊಮಿ ದಯೆ ಚಿಮ್ಮುತ ಹರಿದಳು ಮುಮ್ಮುಂದು
(ಲೈಟ್ ಆಫ್ ಆಗಬೇಕು. ಜಹ್ನು ನಿರ್ಗಮನ. ತಕ್ಷಣ ಬೆಳಕು. ಭಗೀರಥ ಗಂಗೆಯನ್ನು ರಸಾತಳಕ್ಕೆ ಕರೆದೊಯ್ಯುವುದು.)
(ಝಂಪೆತಾಳ) ಕರೆದೊಯ್ಯೆ ಗಂಗೆಯ ರಸಾತಲಕೆ, ಪಿತೃಗಣದ
ಭಸ್ಮರಾಶಿಯು ಪುಣ್ಯಜಲದಿ ಕರಗೆ
ಗಂಗಾಜದಿ ಭಗೀರಥನು ತರ್ಪಣವಿತ್ತು
ಪಿತೃಮುಕ್ತಿಯಿಂದ ಹೊಂದಿದ ಧನ್ಯತೆ
(ಗಂಗೆ ವರದಮುದ್ರೆಯಲ್ಲಿ ಅನುಗ್ರಹಭಂಗಿಯಲ್ಲಿ ನಿಂತು, ಗಂಗಾಪದತಲದಲಿ ಭಗೀರಥ ಊರ್ಧ್ವಬಾಹುವಾಗಿ ನಮಿಸುವ ನಿಲುವಲ್ಲಿ ಮುಕ್ತಾಯ)
ಈ ರೂಪಕದಲ್ಲಿ ಗಂಗೆಯ ಅಷ್ಟೂ ಚಲನೆಗೆ ನಾಟ್ಯದ ಸ್ವರ, ಜತಿಗಳನ್ನೆಲ್ಲಾ ಬಳಸಿಕೊಳ್ಳಬಹುದು. ಶಿವನ ಜಟೆಯಿಂದ ಇಳಿದವಳು ಉದ್ದಕ್ಕೂ ಸಂಚರಿಸುವುದನ್ನು ನೃತ್ಯದಲ್ಲಿ ತಂದರೆ ಸೊಗಯಿಸುತ್ತದೆ. ಬಹ್ವಾಹಾರ್ಯದಲ್ಲಿ ಈ ಕಥಾನಕವನ್ನು ಹೇಗೂ ಮಾಡಬಹುದು. ಆದರೆ ಏಕಾಹಾರ್ಯದಲ್ಲಿ ಮಾಡಿದಲ್ಲಿ, ನಿಜವಾಗಿಯೂ ಪಂಥಾಹ್ವಾನ.