Author: ಮನೋರಮಾ. ಬಿ.ಎನ್
ಕೆಲವರು ಕಾರಣಪುರುಷರು. ಅದಕ್ಕಾಗಿಯೇ ಎಂಬಂತೆ ಹುಟ್ಟಿ ಬಂದವರು. ಆಗಿನ ಕಾಲಕ್ಕೆ ರುಕ್ಮಿಣಿಯಂತೆ ಖಾಲಿಜಾಗವನ್ನು ತುಂಬಿ ನಿಂತವರು ಯಾರೂ ಇಲ್ಲ. ಹೇಗೆ ಅವರು ಇತಿಹಾಸವೋ, ಅಂತೆಯೇ ಇತಿಹಾಸವನ್ನೂ ಬರೆದವರು. ಬದುಕಿನುದ್ದಕ್ಕೂ ಶಿಕ್ಷಣವಾಗಿ ನೃತ್ಯವನ್ನು ಹೊಸೆದೆವರು, ಹೆಣೆದವರು. ಆವರೆಗೆ ಇದ್ದ ಹಿತ್ತಾಳೆಯ ಗೋಪುರ ಅವಳಿಗೆ ಬೇಡವಾಗಿತ್ತು. ಈಗ ಕಲೆಯ ಬಗೆ ಸಾಮಾಜಿಕ ಜಾಗೃತಿ ಹಬ್ಬಿಸುವುದು ಅವಶ್ಯವಿತ್ತು.
‘ಜಗತ್ತಿನ ಪ್ರತಿಯೊಂದು ಕಣಕ್ಕೂ ಅದರದ್ದೇ ಆದ ಲಯವಿರುತ್ತದೆ. ಪ್ರತಿಯೊಂದರ ಬೆಳವಣಿಗೆ ಮತ್ತು ಪತನವೂ ಆ ಅನೂಹ್ಯವಾದ ಲಯಶಕ್ತಿಯನ್ನು ಆಧರಿಸಿರುತ್ತದೆ’ ಎಂದು ನಂಬಿದ್ದರು ರುಕ್ಮಿಣಿ. ಆದರೆ ವ್ಯತ್ಯಾಸ ಮತ್ತು ವಕ್ರಚಲನೆಗಳಿಂದಾಗಿ ಲಯದ ತಾಳ ತಪ್ಪಿದ್ದಾಗ ಅಪಶಬ್ದ, ಅಪತಾಳದಲ್ಲಿ ಸೇರಿದಂತಾಗುತ್ತದೆ. ಕಲೆಯನ್ನು ವಾತಾಯನದಲ್ಲಿಟ್ಟರೆ ಅದರೆಡೆಗೆ ಇರುವ ವಿಮರ್ಶಕ ದೃಷ್ಟಿ ನಷ್ಟವಾಗುತ್ತದೆ ಇದನ್ನು ಗಮನಿಸಿ ನೃತ್ಯದ ಚಲನೆಯನ್ನು ಕ್ರಮಬದ್ಧವಾಗಿ ಮಾಡುವುದು ಕರ್ತವ್ಯ ಎಂಬ ಅರಿವು ರುಕ್ಮಿಣಿಗೆ ಇತ್ತು.
ಕಲೆಯೆಂಬುದು ಹೆದರಿಕೆಯಾಗಲೀ, ಅಸಹ್ಯವಾಗಲೀ ಇಲ್ಲದ ಮುಕ್ತ ಸೃಷ್ಟಿಶೀಲ ವಾತಾವರಣದಲ್ಲಿ ಮಾತ್ರ ಬೆಳೆಯುತ್ತದೆ. ಇದಕ್ಕಾಗಿ ಯುವ ಮನಸ್ಸುಗಳು ಸೂಕ್ತ ವೇದಿಕೆಯನ್ನು ಹುಡುಕಬೇಕು. ತಮ್ಮನ್ನೇ ಕಲೆಯೊಳಗೆ ಕಾಣಬೇಕು. ಅದಕ್ಕಾಗಿ ಎಳೆಯರಿಗೆ ಪ್ರಾರಂಭದಿಂದಲೇ ಕಲೆಯನ್ನು ಕಲಿಸುವ ವ್ಯವಸ್ಥೆ ಮಾಡಿದರು. ಗಿಳಿಪಾಠಕ್ಕಿಂತಲೂ ಸ್ವಯಂಶೋಧನೆ ಅಗತ್ಯವೆಂದು ಅರಿತು ಮಾರಿಯಾ ಅವರ ಪ್ರೇರಣೆಯಿಂದ ೧೯೩೯ರಲ್ಲಿ ಮಾಂಟೆಸ್ಸರಿ ಮಕ್ಕಳ ಶಾಲೆಯನ್ನು ತೆರೆದರು. ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿ ಎಂದು ನಂಬಿದ್ದ ಅವರಿಗೆ ಔಪಚಾರಿಕ ತರಗತಿಗಳಲ್ಲಿ ಆರೋಗ್ಯಯುತ ಮನಸ್ಸುಗಳನ್ನು ಹುಟ್ಟುಹಾಕುವುದು ದುರ್ಲಭ ಮತ್ತು ಅವರನ್ನು ಕಲೆ, ರಸದ ಕುರಿತಂತೆ ಸಂವೇದನಾಶೀಲವಾಗುವಂತೆ ಮಾಡುವುದು ಅಸಾಧ್ಯ ಎಂಬ ಅರಿವಿತ್ತು.
ಸಾದಿರ್‌ನ್ನು ಭರತನಾಟ್ಯವೆಂದು ಆಧ್ಯಾತ್ಮೀಕರಣ, ಸಂಸ್ಕೃತೀಕರಣ ಮಾಡಿ, ಪಠ್ಯಕ್ಕೆ ಸೀಮಿತ ಮಾಡಿದರು ರುಕ್ಮಿಣಿ; ಇದು ದೇವದಾಸಿಯರಿಂದ ನಾಟ್ಯವನ್ನು ಕಿತ್ತುಕೊಂಡು ಬ್ರಾಹ್ಮಣ್ಯದ ಒಳಗೆ ಕುಳಿತುಕೊಳ್ಳುವಂತೆ ಮಾಡಿಬಿಟ್ಟಿತು ಎಂಬ ವಾದವಿದೆ. ‘ಭರತನಾಟ್ಯ ಎಲ್ಲಾ ನಾಟ್ಯದ ತಾಯಿಬೇರು. ಭಾಗವತಮೇಳ ಮತ್ತು ಕೂಚಿಪುಡಿಯು ಭರತನಾಟ್ಯದ ವಿಶಾಲ ಆವರಣದೊಳಗೆ ಸಂಕಲಿತವಾಗಿದೆ ’ ಎಂಬುದು ಆಕೆಯ ಕಲ್ಪನೆ. ಭಾರತದ ಆತ್ಮವನ್ನು ಭರತನಾಟ್ಯ ಬಿಂಬಿಸುತ್ತದೆ. ರಸದೃಷ್ಟಿಯಲ್ಲಿ ಮತ್ತು ಪಾರಮ್ಯದಲ್ಲಿ ಭರತನಾಟ್ಯಕ್ಕೆ ಅಗ್ರಸ್ಥಾನವೆಂಬುದು ಅವರ ಹೇಳಿಕೆ. ಒಂದೊಮ್ಮೆ ಕಾಲಕ್ಕೆ ರಾಷ್ಟ್ರೀಯ ಐಕ್ಯತೆಗೆ ಭಂಗ ತರುವ ಸದಿರ್‌ನ ಹೀನ ಸ್ಥಿತಿ, ನಿಷೇಧ ಈಗ ಹೊಸರೂಪದೊಂದಿಗೆ ರಾಷ್ಟೀಯ ಪ್ರಜ್ಞೆಯ ದ್ಯೋತಕವಾಗಿ ಮುನ್ನಡೆದದ್ದು ಒಂದು ಇತಿಹಾಸವೇ ಸರಿ.
೧೯೩೦- ಸುಧಾರಣೆಯ ಪರ್ವಕಾಲ. ಕಲೆಯ ದೃಷ್ಟಿಯಿಂದ ಸಾಂಸ್ಕೃತಿಕ ಸಂಸ್ಥೆಗಳ ಸಾಮಾಜಿಕ ನೆಲೆಗಟ್ಟು ಭದ್ರವಾಗುತ್ತಾ ಜನರ ಮನಸ್ಥಿತಿಯಲ್ಲಿ ಬದಲಾವಣೆಯಾಗುತ್ತಾ ಬಂತು. ಸಂವಹನದಿಂದಾಗಿ ಕಲೆಗಾಗಿ ಮನಸ್ಸನ್ನು ತೆರೆದುಕೊಂಡು ಮುಡಿಪಿಡುವುದು, ಅಧ್ಯಯನ ಪ್ರವೃತ್ತಿ ಬೆಳೆಯುತ್ತಾ ಸಾಗಿತ್ತು. ಇಂದು ಸಾಹಿತ್ಯ, ಭಾಷೆ, ಸಂಗೀತಕ್ಕೆ ಸಂಬಂಧಿಸಿದಂತೆ ಭರತನಾಟ್ಯದಲ್ಲಿ ಸ್ಥಳೀಯವಾಗಿ ಮತ್ತು ಜಾಗತಿಕ ನೆಲೆಗಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳಾಗಿವೆ.
ಹಿರಿಯ ಕಲಾವಿದೆ ಬಾಲಸರಸ್ವತಿ ರುಕ್ಮಿಣೀಯಂತೆಯೇ ಸಾದಿರ್‌ನ ಪುನರುಜ್ಜೀವನಕ್ಕೆ ತಮ್ಮ ಕಲಾ ಕುಟುಂಬದ ಆಸರೆಯಲ್ಲಿ ದುಡಿದು, ನೃತ್ಯದ ಮಹಾನ್ ಗುಣಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರೂ, ನಾಟ್ಯಶಾಸ್ತ್ರವನ್ನು ಪ್ರತಿನಿಧಿಯಂತೆ ಬಳಸಿದರೂ, ತಮ್ಮ ಮದರಾಸ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದರೂ, ನಟರಾಜನನ್ನು ರಂಗದಲ್ಲಿಡುವುದಕ್ಕಾಗಲೀ ಅಥವಾ ನಟರಾಜನನ್ನು ಸ್ತುತಿಸುವ ಪದ್ಯಗಳನ್ನು ಅಭಿನಯಿಸುವುದಕ್ಕಾಗಲೀ ಒಪ್ಪುತ್ತಿರಲಿಲ್ಲ.
ಬಾಲಾ ಸರಸ್ವತಿ ಮತ್ತು ರುಕ್ಮಿಣಿ ಅವರ ನಡುವಿನಲ್ಲಿ ಸಾಕಷ್ಟು ಬೌದ್ಧಿಕ ಸಂಘರ್ಷಗಳಿತ್ತು ಎಂಬುದು ಜನಜನಿತ ಅನಿಸಿಕೆ. ಆದರೆ ರುಕ್ಮಿಣೀ ಎಂದಿಗೂ ಬಾಲಸರಸ್ವತಿ ಅವರನ್ನು ತೆಗಳುವ ಗೋಜಿಗೆ ಹೋಗಲೇ ಇಲ್ಲ. ಬದಲಾಗಿ ಅವರ ಮಾರ್ಗವನ್ನು ಪ್ರಶಂಸಿಸುತ್ತಲೇ ತಮಗೆ ಆ ಶೈಲಿ ಒಗ್ಗುವುದಿಲ್ಲ ಎಂದು ಒಪ್ಪಿಕೊಂಡಿದ್ದರು.
ಕಲಾಕ್ಷೇತ್ರದ ಅಂದಿನ ೨ ಪ್ರಧಾನ ಉದ್ದೇಶಗಳು –ಎಲ್ಲ ಸಹಜ ಕಲೆಗಳ ಐಕ್ಯಕ್ಕೆ ಒತ್ತು ಕೊಡುವುದು ಮತ್ತು ಕಲೆಯ ಗುರ್ತಿಸುವಿಕೆಗಾಗಿ ಅಗತ್ಯವೆನಿಸುವ ಧಾರ್ಮಿಕ, ರಾಷ್ಟ್ರೀಯ, ವೈಯಕ್ತಿಕ ಸಮರ್ಥ ಬೆಳವಣಿಗೆಗಾಗಿ ಕೆಲಸ ಮಾಡುವುದು. ನೃತ್ಯ, ಚಿತ್ರಕಲೆ, ಸಂಗೀತಕ್ಕೆ ೧೯೪೨ರಲ್ಲಿ ಡಿಪ್ಲೋಮ ಪ್ರಾರಂಭವಾಯಿತು. ತಮಿಳಿನ ಶ್ರೇಷ್ಠ ಪಂಡಿತರೆನಿಸಿದ್ದ ಮಹಾಮಹೋಪಾಧ್ಯಾಯ ಡಾ.ಯು.ವಿ. ಸ್ವಾಮಿನಾಥ ಅಯ್ಯರ್ ದಕ್ಷಿಣ ಭಾರತದಾದ್ಯಂತ ಪ್ರವಾಸ ಕೈಗೊಂಡ ಅಂದಿನ ಕಾಲದ ಬಹುದೊಡ್ಡ ವಾಗ್ಮಿ. ಸಂಗಮ ವಂಶದ ಕಾಲದಿಂದಲೂ ಹಲವು ದಾಖಲೆಗಳು ಅಯ್ಯರ್ ಅವರ ಬಳಿಯಿದ್ದವು. ಅದಾಗಲೇ ರುಕ್ಮಿಣಿಗೆ ಒಂದಷ್ಟು ತಮಿಳು ಗ್ರಂಥ, ಓಲೆಗರಿಗಳನ್ನು ಕಾಣಿಕೆಯಾಗಿ ಪಡೆದಿದ್ದರು. ಜೊತೆಗೆ ಅವುಗಳ ಪೈಕಿ ಕೆಲವೊಂದು ಸಾಹಿತ್ಯಗಳನ್ನು ಕಲಾಕ್ಷೇತ್ರದ ಶೈಕ್ಷಣಿಕ ಪ್ರಕಟಣೆಯ ಸಲುವಾಗಿ ಭಾಷಾಂತರಿಸಲು ಮತ್ತು ಮುದ್ರಿಸಲು ರುಕ್ಮಿಣಿ ಮೊದಲ್ಗೊಂಡರು. ಹಾಗಾಗಿ ೧೯೪೩ರಲ್ಲಿ ಗ್ರಂಥಾಲಯ ಜನ್ಮ ತಾಳಿದಾಗ ಅಯ್ಯರ್ ಅವರಿಂದ ಪಡೆದ ಅದೆಷ್ಟೋ ಗ್ರಂಥಗಳನ್ನು ರುಕ್ಮಿಣಿ ಈ ಗ್ರಂಥಾಲಯಕ್ಕೆ ಕೊಡುಗೆ ನೀಡಿ ಅಯ್ಯರ್ ಅವರ ಹೆಸರನ್ನೇ ಸ್ಮರಣಾರ್ಥವಾಗಿ ಇರಿಸಿದರು.
೧೯೪೪ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದೊಂದಿಗೆ ಕಲಾಕ್ಷೇತ್ರದ ಸಂಗೀತದ ಡಿಪ್ಲೋಮಾ ಕೋರ್ಸ್ ಅಫಿಲಿಯೇಟ್ ಆಯಿತು. ಮುಂದಿನ ೧೦ ವರ್ಷಗಳ ಅವಧಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೂ ಸಂಗೀತ, ಚಿತ್ರಕಲೆ ಮತ್ತು ನೃತ್ಯದಲ್ಲಿ ಅರೆಕಾಲಿಕ ಕೋರ್ಸ್, ಪೋಸ್ಟ್ ಡಿಪ್ಲೋಮಾ ಕೋರ್ಸ್‌ಗಳು ಪ್ರಾರಂಭವಾದವು. ೧೯೫೦ ರ ಹೊತ್ತಿಗೆ ಭಾರತದೆಲ್ಲೆಡೆಯಿಂದಷ್ಟೇ ಅಲ್ಲದೆ ; ಟಿಬೆಟ್, ನೇಪಾಳ, ಭೂತಾನ್, ಮಲೇಷ್ಯಾ, ಶ್ರೀಲಂಕಾ, ಸಿಂಗಾಪುರ್, ಇಂಡೋನೇಷ್ಯಾ, ಯೂರೋಪ್, ಆಸ್ಟ್ರೇಲಿಯಾ, ಅಮೆರಿಕಾದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅಪೇಕ್ಷಿಗಳಾಗಿ ಕಾಲಿಡಲು ಸಾಧ್ಯವಾಯಿತು. ನಾರಾಯಣ ಮೆನನ್ ಹೇಳುವಂತೆ ‘ ಎಲ್ಲಿ ಸಾಹಿತ್ಯ, ಕಲೆ, ತತ್ವಶಾಸ್ತ್ರ, ವಿಜ್ಞಾನ ಒಂದಕ್ಕೊಂದು ಸೇರಿಕೊಳ್ಳುವುದೋ ಅಲ್ಲಿ ಕಲೆಯ ಅರಳುವಿಕೆ ಸಾಧ್ಯ. ಕಲಾಕ್ಷೇತ್ರ ಅಂತಹುದೊಂದು ಶಿಸ್ತುಬದ್ಧವಾದ ಸಾಂಗತ್ಯ’.
ಒಮ್ಮೆ ಮೀನಾಕ್ಷಿ ಸುಂದರಂ ಪಿಳ್ಳೈ ರಾಗಮಾಲಿಕಾ ವರ್ಣವನ್ನು ರುಕ್ಮಿಣಿಗೆ ಕಲಿಸುತ್ತಿದ್ದರು. ಶಬ್ದಾರ್ಥಗಳನ್ನು ಹೇಳಿ ಸಂಚಾರಿ ಭಾವವನ್ನು ೪ ಆವರ್ತನಕ್ಕೆ ಮಾಡು ಎಂದರಂತೆ. ರಾವಣ ಕೈಲಾಸವನ್ನು ಎತ್ತಿದಾಗ ಶಿವನ ಉಗ್ರತೆ ಸಂಚಾರಿ ಭಾವವಸ್ತು. ರುಕ್ಮಿಣೀ ‘ಎಲ್ಲಿಂದ ಪ್ರಾರಂಭಿಸಲಿ’ ಪ್ರಶ್ನಿಸಿದಾಗ ಒಂದಾನೊಂದು ಕಾಲದಲ್ಲಿ ಎಂಬಂತೆ ಸೂಚಿ ಹಸ್ತವನ್ನು ತೋರಿ ಅಭಿನಯಿಸು ಎಂದರಂತೆ. ತಾಳದ ಕೊನೆಯ ಭಾಗ ಇನ್ನೇನು ಮುಗಿಯಲು ಅರೆಕ್ಷಣ ಇದೆ ಎಂದಾಗ ಅಭಿನಯ ಪೂರ್ಣವಾಯಿತು; ಸಂಬೋಧನಾ ಹಸ್ತವನ್ನು ಸೂಚಿಸಿದ ಮೀನಾಕ್ಷಿ ಪೂರ್ಣಗೊಳಿಸಿ ಇದೇ ಸಂಚಾರಿ ಭಾವವನ್ನು ಈ ವರ್ಣಕ್ಕೆ ಅಳವಡಿಸು ಎಂದರು. ಅಷ್ಟೊಂದು ದೊಡ್ಡ ವಿದ್ವಾಂಸರಾದರೂ ರುಕ್ಮಿಣಿ ಅವರ ಸೃಷ್ಟಿಶೀಲ ಅಭಿವ್ಯಕ್ತಿಯ ಬಗ್ಗೆ ಅವರಲ್ಲಿ ಮೆಚ್ಚುಗೆ ಇತ್ತು ;ಆದರೆ ಎಂದೂ ಬಾಯಿಬಿಟ್ಟು ಹೇಳಲಿಲ್ಲ !
(ಸಶೇಷ)