Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ
ರಂಗದಲ್ಲಿ ಇದ್ದಷ್ಟು ಹೊತ್ತೂ ಪ್ರೇಕ್ಷಕರ ಎರಡೂ ಕಣ್ಣುಗಳನ್ನು ಸೆಳೆಯುವವನೊಬ್ಬನಿದ್ದರೆ ಅದು ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತ್ರ ಅಂತ ಹೇಳಿದವರು ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆ. ಅದು ನಿಜ ಅನ್ನುವುದು ಚಿಟ್ಟಾಣಿಯವರ ಯಕ್ಷಗಾನವನ್ನು ನೋಡಿದ ಯಾರಿಗೇ ಆದರೂ ಅನಿಸಿಬಿಡುತ್ತದೆ. ಚಿಟ್ಟಾಣಿಯವರ ವಯಸ್ಸು ಎಪ್ಪತ್ತಾರಕ್ಕೆ ಬಂದು ನಿಂತಿದ್ದರೂ ರಂಗದ ಮೇಲೆ ಇನ್ನೂ ಇಪ್ಪತ್ತಾರೇ!
ಪ್ರಾಯಶಃ ಈ ಕುರಿಯ ವಿಠಲ ಶಾಸ್ತ್ರಿ, ಶೇಣಿ, ಕಾಳಿಂಗ ನಾವಡ, ಚಿಟ್ಟಾಣಿ,… ಇಂತಹವರೆಲ್ಲಾ ಶತಮಾನಕ್ಕೊಬ್ಬರು ಸಿಗುತ್ತಾರೆ. ಅವರಿದ್ದಾಗ ನಾವು ನೋಡಿ-ಕೇಳಿ ಅನುಭವಿಸಿದರೆ ಸರಿ, ಮತ್ತವರು ಸಿಗುವುದಿಲ್ಲ! ಈ ಹಿನ್ನಲೆಯಲ್ಲಿ ಚಿಟ್ಟಾಣಿ ಇನ್ನೂ ರಂಗದಿಂದ ವಿರಮಿಸದಿರುವುದು ನಮ್ಮ ಪುಣ್ಯ! ಅವರೇ ಹೇಳುವ ಪ್ರಕಾರ ಅವರಿನ್ನೂ ಐದಾರು ವರ್ಷ ಕುಣಿದಾರು!!
ನಿಮಗೆ ಗೊತ್ತಿರಬಹುದು, ಚಿಟ್ಟಾಣಿಯವರ ಗದಾಯುದ್ಧದ ಕೌರವ, ಭಸ್ಮಾಸುರ ಮೋಹಿನಿಯ ಭಸ್ಮಾಸುರ, ಚಂದ್ರಹಾಸ ಚರಿತ್ರೆಯ ದುಷ್ಟಬುದ್ಧಿ, ಕೀಚಕ ವಧೆಯ ಕೀಚಕ, ಕಾಳಿದಾಸದ ಕಲಾಧರ, ಕಾರ್ತವೀರ್ಯಾರ್ಜುನ, ಶೃಂಗಾರ ರಾವಣ… ಇಂಥಾ ಹಲವಾರು ಪಾತ್ರಗಳು ಪ್ರೇಕ್ಷಕನನ್ನು ಮೈಮರೆಸುತ್ತವೆ. ಅದರಲ್ಲೂ ಭಸ್ಮಾಸುರನಿಗೊಂದು ರೂಪ ಕೊಟ್ಟು ಈ ಪಾತ್ರ ಹೀಗಿರಬೇಕು ಎಂದು ತೋರಿಸಿಕೊಟ್ಟವರೇ ಚಿಟ್ಟಾಣಿ! ಕೆರೆಮನೆ ಶಂಭು ಹೆಗಡೆ ಚಂದ್ರಹಾಸ ಚರಿತ್ರೆಯ ಮದನನಿಗೆ ಹೇಗೆ ಹೊಸ ರೂಪ ತಂದು, ತೋರಿಸಿದರೋ ಹಾಗೆ ಭಸ್ಮಾಸುರನಿಗೆ ಚಿಟ್ಟಾಣಿ.
ಚಿಟ್ಟಾಣಿಯವರ ನಾಟ್ಯ, ಹಾವಭಾವ, ನಯನ ಸಂವಹನ ಇವುಗಳೆಲ್ಲಾ ನಿಜಕ್ಕೂ ಅದ್ಭುತ. ‘ನೀಲಗಗನದೊಳು ಮೇಘಗಳ…’, ‘ಎಲ್ಲೆಲ್ಲು ಸೊಬಗಿದೆ, ಎಲ್ಲೆಲ್ಲು ಸೊಗಸಿದೆ…’, ‘ಕಂಡನು ಭಸ್ಮಾಸುರನು ಮೋಹಿನಿಯನ್ನು…’, ‘ಭಾವಕಿ ಸೌಂದರ್ಯ ನೋಡೇ…’ ‘ನಿನ್ನಯ ಬಲುಹೇನು…’, ‘ನೋಡಿರಿ ಧರ್ಮಜ…’ ಇಂತಹ ಅದೆಷ್ಟೋ ಹಾಡುಗಳ ಕುಣಿತ ಅನೇಕರ ಕರವಾಣಿಗಳಲ್ಲಿ ವೀಡಿಯೋಗಳಾಗಿ ಹರಿದಾಡುತ್ತಿವೆ!
ಚಿಟ್ಟಾಣಿ ರಂಗಕ್ಕೆ ಬಂದರೆ ಸಾಕು ; ಮತ್ತೆ ಕೊನೆವರೆಗೂ ಪ್ರೇಕ್ಷಕನ ಕಣ್ಣುಗಳು ಅವರ ಮೇಲೆಯೇ. ವಿಶೇಷವೆಂದರೆ ತನ್ನ ಎದುರು ಪಾತ್ರಧಾರಿ ಕುಣಿಯುವಾಗಲೂ ಬದಿಯಲ್ಲಿ ನಿಂತ ಚಿಟ್ಟಾಣಿ ತನ್ನ ಕಣ್ಣುಗಳ ಚಲನೆಗಳಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಆನೆ ಇದ್ದರೂ ಮರ್ಯಾದೆ ಸತ್ತರೂ ಮರ್ಯಾದೆ ಅನ್ನುವಂತೆ ಚಿಟ್ಟಾಣಿ ಕುಣಿಯುತ್ತಿದ್ದರೂ ಪ್ರೇಕ್ಷಕ ಮರುಳು, ರಂಗದ ಬದಿಯಲ್ಲಿ ನಿಂತಿದ್ದರೂ ಪ್ರೇಕ್ಷಕ ಮರುಳು! ಹೀಗೆ ಸುಮ್ಮನೆ ನಿಂತಿದ್ದಾಗಲೂ ಕಲಾಭಿಮಾನಿಗಳನ್ನು ತನ್ನೆಡೆಗೆ ಸೆಳೆಯುವ ಚಿಟ್ಟಾಣಿ ಇಂದಿಗೂ ಯಕ್ಷರಂಗದ ಅನಭಿಷಿಕ್ತ ದೊರೆಯೇ ಹೌದು.
ಇಂಥಾ ಚಿಟ್ಟಾಣಿ ಕುಡಿತದ ಚಟಕ್ಕೆ ದಾಸರಾಗಿದ್ದರು! ಕುಡಿಯದೆ ರಂಗಕ್ಕೆ ಬರುತ್ತಿರಲಿಲ್ಲ. ಕೊನೆಕೊನೆಗೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿತ್ತೆಂದರೆ ಕುಡಿಯದೆ ವೇಷ ಮಾಡಲಾಗದು, ಕುಡಿದರೆ ನಡೆಯಲಾಗದು ಅನ್ನುವವರೆಗೂ! ಒಮ್ಮೆ ಶಿಂಗ್ಯಾ ಬಾಳ್ಯಾ ಪ್ರಸಂಗ ಏರ್ಪಾಡಾಗಿತ್ತು. ಚಿಟ್ಟಾಣಿ ಶಿಂಗ್ಯನ ಪಾತ್ರ ಮಾಡಬೇಕಿತ್ತು. ಆದರೆ ಅವರು ಪೂರ್ತಿ ಟೈಟಾಗಿ ಮನೆಯಲ್ಲಿದ್ದರು! ವೇಷ ಮಾಡುವುದಿರಲಿ, ಎದ್ದು ನಿಲ್ಲಲೂ ಆಗದ ಪರಿಸ್ಥಿತಿ. ಆದರೆ ಚಿಟ್ಟಾಣಿ ಬರುತ್ತಾರೆಂದು ಜನ ನೆರೆದಿದ್ದರು. ಕೊನೆಗೆ ಸಂಘಟಕರು ಕಾರನ್ನು ತಂದು ಚಿಟ್ಟಾಣಿಯವರನ್ನು ಎತ್ತಿಹಾಕಿಕೊಂಡು ಹೋದರು. ಆದರೂ ಅವರಿಗೆ ವೇಷ ಮಾಡಲಾಗಲಿಲ್ಲ. ರಂಗಕ್ಕೆ ಬಂದು ಒಂದೆರಡು ಮಾತಾಡಿ ಜನರನ್ನು ಸಮಾಧಾನಪಡಿಸಿದರು. ಅವರ ‘ವೇಷ’ವನ್ನೂ, ಅವಸ್ಥೆಯನ್ನೂ ಕಂಡ ಅಭಿಮಾನಿಗಳು ಸುಮ್ಮನಾದರು!
ಈಗ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಚಿಟ್ಟಾಣಿ ತನ್ನ ಗತಕಾಲದ ಕುಡಿತದ ಬಗೆಗೆ ಹೇಳುವುದು ಹೀಗೆ. ನನ್ನೊಳಗಿನ ಕಲಾವಿದನ ಜೊತೆಗೆ ಒಬ್ಬ ಕುಡುಕನೂ ಬೆಳೆದಿದ್ದ. ಹೆಂಡಕ್ಕೆ ಒಂದು ಅಭಿಮಾನೀ ದೇವತೆಯಿದ್ದರೆ ಅವಳಿಗೆ ನನ್ನ ದೇಹವೇ ಅರಮನೆಯಾಗಿತ್ತು. ಹೆಂಡವನ್ನು ಬಿಟ್ಟರೆ ನನ್ನ ಹತ್ತಿರ ವೇಷವೇ ಸಾಧ್ಯವಿಲ್ಲ ಎಂಬ ಮನೋವ್ಯಾಧಿ ನನ್ನನ್ನು ಅಂಟಿಕೊಂಡಿತ್ತು
ಹಾಗಂತ ಒಮ್ಮೆ ವೇಷ ಕಟ್ಟಿ ರಂಗಕ್ಕಿಳಿದರೆ ಚಿಟ್ಟಾಣಿ ಪಾದರಸವೇ. ಒಮ್ಮೆ ಮುಂಬಯಿಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ಏರ್ಪಾಡಾಗಿತ್ತು. ಭಸ್ಮಾಸುರ ಮಾಡಬೇಕಿದ್ದ ಚಿಟ್ಟಾಣಿಗೆ ಕಾಲಿನಲ್ಲಿ ಕುರುವಾಗಿ ಅತ್ತಿತ್ತ ನಡೆಯಲಾಗದ ಸ್ಥಿತಿ. ಹಾಗಂತ ಯಕ್ಷಗಾನ ರದ್ದು ಮಾಡುವಂತಿರಲಿಲ್ಲ. ರದ್ದು ಮಾಡದಿದ್ದರೆ ಚಿಟ್ಟಾಣಿ ಕುಣಿಯದೆ ಇರುವಂತಿರಲಿಲ್ಲ! ಚಿಟ್ಟಾಣಿ ಹಿಂದು ಮುಂದು ನೋಡದೆ ವೇಷ ಕಟ್ಟಿದರು. ಕುರುಹರಿದು ರಕ್ತ ದರದರನೆ ಸುರಿಯುತ್ತಿದ್ದರೂ ಭಸ್ಮಾಸುರನ ಅಬ್ಬರ ನಿಲ್ಲಲಿಲ್ಲ. ಯಕ್ಷಗಾನ ಮುಗಿದ ತಕ್ಷಣ ಚಿಟ್ಟಾಣಿಯವರನ್ನು ಆಸ್ಪತ್ರೆಗೆ ಸೇರಿಸಲಾಯಿತು!
ಕುಡಿಯದೆ ಬದುಕಬಲ್ಲೆ ಆದರೆ ಕುಣಿಯದೆ ಬದುಕಲಾರೆ ಅನ್ನುವ ಚಿಟ್ಟಾಣಿಯವರು ಯಕ್ಷರಂಗದ ಬಹುದೊಡ್ಡ ಆಸ್ತಿ. ಆದರೆ ಇಂಥಾ ಕಲಾವಿದನಿಗೆ ಇನ್ನೂ ಕೇಂದ್ರ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬರದಿರುವುದು ಮಾತ್ರ ದುರದೃಷ್ಟಕರ!
ಅಂದಹಾಗೆ ಚಿಟ್ಟಾಣಿ ಇಪ್ಪತ್ತೈದರ ವಯಸ್ಕರಾಗಿದ್ದಾಗ ಹುಡುಗಿಯೊಬ್ಬಳನ್ನು(ಈಗ ಹುಡುಗಿಯಲ್ಲ!!) ಲವ್ ಮಾಡಿದ್ದರು. ಆ ಕಥೆ ಭಾರೀ ಛಲೋ ಇದೆ. ಚಿಟ್ಟಾಣಿ ಆಕೆಯನ್ನೇ ಮದುವೆಯಾದರಾ? ಇಲ್ಲವಾ?…
ಹಾಂ, ಗಡಿಬಿಡಿ ಮಾಡಬೇಡಿ. ಅದನ್ನು ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ.