Author: ಅನುಶ್ರೀ ಬಂಡಾಡಿ, ಬೆಂಗಳೂರು
..ವರ್ಷ ಇನ್ನೂ ಹತ್ತು ತುಂಬಿಲ್ಲ. ಬಾಲ್ಯದ ಆ ಹೊಳಪೇ ಇಲ್ಲದ ಕಂಗಳಲ್ಲಿ, ಹಿರಿಯರೆಲ್ಲ ‘ನೈಜ expression’ ಬರಬೇಕು ಅಂತ ಒತ್ತಾಯಿಸುತ್ತಾರೆ. ಬಾಗಿ, ಬಳುಕಿ, ಪಲ್ಟಿಹೊಡೆದು ಕುಣಿಯಬೇಕು. ‘ಅದ್ಭುತ’ ಸಿನಿಮಾ ತಾರೆಯಂತೆ ತುಂಡು ಬಟ್ಟೆ ಹಾಕಿ ಆ ಪುಟಾಣಿ ಹೆಜ್ಜೆಹಾಕುತ್ತಿದ್ದರೆ, ಹಲ್ಲುಗಿಂಜುತ್ತಾ ಚಪ್ಪಾಳೆ ತಟ್ಟುತ್ತಾ ‘ಪ್ರೋತ್ಸಾಹಿಸು’ವ ಹೆತ್ತವರು. ಸರಿಯಾಗಿ ಮಾತನಾಡಲೂ ಬರದಿದ್ದ ಮಗು, ಹಾಡಿನ ಸಾಲುಗಳಿಗೆ ಸ್ಪಷ್ಟವಾಗಿ ‘lip movement’ ಕೊಡಬೇಕು. ಇದನ್ನೆಲ್ಲ ತೂಗಿ, ಸುರಿದು, ಅಳೆಯುವುದಕ್ಕೆ ಮತ್ತೊಂದೆರಡು ‘ಜಡ್ಜ್ ಗಳು’. – ಇದಿಷ್ಟು ಇಂದಿನ ರಿಯಾಲಿಟಿ ಷೋಗಳಲ್ಲಿ ಒಂದಾದ ಡಾನ್ಸ್ ಸ್ಪರ್ಧೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಇಂಥವು ಮುಖ್ಯವಾಗಿ ಮಕ್ಕಳನ್ನೇ ಸ್ಪರ್ಧಿಗಳನ್ನಾಗಿ ಮಾಡಿಕೊಳ್ಳುತ್ತವೆ. ಅದೆಂಥಾ ‘ರಿಯಾಲಿಟಿ’ಯ ಹಪಹಪಿಯೋ ದೇವರೇ ಬಲ್ಲ. ಆಟದ ಬಯಲಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಾ ಇರಬೇಕಾದ ಮಕ್ಕಳು, ಬಿಡುವಿನ ವೇಳಯಲ್ಲೆಲ್ಲ ಡಾನ್ಸ್ ಪ್ರಾಕ್ಟೀಸ್ ಮಾಡಬೇಕು. ಇನ್ನು ಆ ಹಾಡುಗಳೋ, ಶುದ್ಧ ಸಾಹಿತ್ಯವಿಲ್ಲದ, ಕಿವಿಗಡಚಿಕ್ಕುವ ಸಂಗೀತವಿರುವ, so called ‘ಸೂಪರ್ ಹಿಟ್’ಗಳು.
ಛೆ, ಶಾಸ್ತ್ರೀಯ ನೃತ್ಯದ ಮಧುರ ಕಂಪು ಇಂದಿನವರ ಕಣ್ಮನ ತಣಿಸುತ್ತಿಲ್ಲವೇ? ಇಂಥ ಸ್ಪರ್ಧೆಗಳಲ್ಲಿ ‘ಶಾಸ್ತ್ರೀಯ ಸುತ್ತು’ ಬಂದಾಗ ಮಾತ್ರ, ಒಂದು ನೃತ್ಯವನ್ನು ಕಲಿಸಿಕೊಡುವಂತೆ ಗುರುಗಳ ಬಳಿ ದುಂಬಾಲು ಬೀಳುವವರ ಸಂಖ್ಯೆ ಯಾಕೆ ಹೆಚ್ಚಾಗ್ತಾ ಇದೆ? ನಾವು ಯಾವ ಕಡೆಗೆ ಹೋಗ್ತಾ ಇದ್ದೇವೆ? ಶಾಸ್ತ್ರೀಯ ಸಂಗೀತ, ನೃತ್ಯ ಎಂದರೆ ಅದು ಬರೇ ಬೋರ್. . . ಅಂತ ಮೂಗುಮುರೀತಾರೆ ಈಗಿನ ಮಕ್ಕಳು!
ಇಂಥ ಪರಿಸ್ಥಿತಿಗೆ ಹಿರಿಯರೇ ಹೊಣೆ ತಾನೇ? ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಧಾರೆಯೆರೆಯಬೇಕಾದ ಗುರುತರ ಜವಾಬ್ದಾರಿ ಹಿರಿಯರದ್ದು. ಈ ನಿಟ್ಟಿನತ್ತ ಎಷ್ಟು ಜನ ಹೆಜ್ಜೆ ಹಾಕಿದ್ದಾರೆ? ಮಾಧ್ಯಮಗಳ ಬಣ್ಣ ಬಣ್ಣದ ಆಮಿಷದ ಪಾಶ ನಮ್ಮನ್ನೆಲ್ಲ ಬಲಿತೆಗೆದುಕೊಳ್ತಾ ಇದೆ. ಅದಕ್ಕೊಂದು ಕಡಿವಾಣ ಹಾಕಲೇಬೇಕು. ‘ಕಾಲಾಯ ತಸ್ಮೈ ನಮಃ’ ಎಂದು ಕೈಕಟ್ಟಿ ಕುಳಿತರೆ ಒಂದು ಸುಂದರ ಭವಿಷ್ಯ ನಮ್ಮ ಕೈತಪ್ಪಿ ಹೋದೀತು. ಅತ್ತ ಕಡೆ ಸ್ವಲ್ಪ ಗಮನ ಹರಿಸೋಣ.
( ಲೇಖಕರು ಮಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ, ಹವ್ಯಾಸಿ ಪತ್ರಕರ್ತೆ)