ಅಂಕಣಗಳು

Subscribe


 

ಹೀಗೊಂದು ಸ್ವಗತ… ಹೆಜ್ಜೆಯ ಅನುರಣಿಸುವ ಗೆಜ್ಜೆ ನಾ…

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಅನುಶ್ರೀ ಬಂಡಾಡಿ, ಬೆಂಗಳೂರು

ನೂಪುರ ಭ್ರಮರಿಯ ನಲ್ಮೆಯ ಓದುಗರಿಗೆಲ್ಲಾ ಆತ್ಮೀಯ ನಮಸ್ಕಾರ.
ನಾನ್ಯಾರೆಂದು ತಿಳೀತಾ?
ನನ್ನ ಹೆಸರು ಕೇಳಿದಾಕ್ಷಣ ಆ ನನ್ನ ಚಿತ್ರ ನಿಮ್ಮ ಕಣ್ಣಮುಂದೆ ಬರುವುದು ನಿಶ್ಚಿತ. ನಾಟ್ಯದ ಒಂದು ಪ್ರಮುಖ ಅಂಗವೇ ಆಗಿರುವ ಈ ನಿಮ್ಮ ‘ಗೆಜ್ಜೆ’ಯ ಪ್ರತ್ಯೇಕ ಪರಿಚಯ ಬೇಕಿಲ್ಲ ತಾನೇ? ಆದರೂ ನನ್ನ ಬಗೆಗೊಂದಿಷ್ಟು ಅಂತರಾಳದ ಮಾತುಗಳು…
ನಿಜಕ್ಕೂ ಹೆಮ್ಮೆಯೆನಿಸುತ್ತದೆ ನೃತ್ಯಗಾರರು ಲಯಬದ್ಧವಾಗಿ ಹೆಜ್ಜೆ ಹಾಕುತಿರೆ ನಾನು ಅದಕ್ಕೆ ಧ್ವನಿಯಾಗುವೆ. ನಾನಿದ್ದರೇ ತಾನೇ ನೃತ್ಯವದು ಸೊಗ ‘ಸಾಗುವುದು”..? ನೃತ್ಯದ ಆ ಸಾರ್ಥಕತೆಗೆ ಕಾರಣವಾದಾಗ ನಾನು ಧನ್ಯ!
ಭರತನಾಟ್ಯದ ರಂಗಪ್ರವೇಶವಾಗುವ ಮೊದಲಿಗೇ ನನ್ನ ಹೆಸರಿದೆ. ”ಗೆಜ್ಜೆಪೂಜೆ”- ಆಲಿಸುವಾಗಲೇ ಅದೇನೋ ಖುಷಿ ನೀಡುವ ಮಾತು. ಈಗ ಮಾತ್ರ ಯಾವ್ಯಾವುದೋ ದ್ವಂದ್ವಾರ್ಥದ ಕಾರಣದಿಂದ ಆ ಹೆಸರು ಅಷ್ಟಾಗಿ ಬಳಕೆಯಲ್ಲಿಲ್ಲದಿರುವುದು ವಿಷಾದನೀಯ. ಅದಿರಲಿ, ಈ ಗೆಜ್ಜೆಪೂಜೆಯಾಗದೇ ಯಾರೂ ರಂಗದ ಮೇಲೆ ಗೆಜ್ಜೆ ಕಟ್ಟಿ ನರ್ತಿಸುವಂತಿಲ್ಲ. ಆ ಸಮಾರಂಭವದು ಅದೆಷ್ಟು ವೈಭವೋಪೇತವೆನ್ನುತ್ತೀರಿ! ನೃತ್ಯ ಕಲಿತು ಮೊದಲ ಬಾರಿಗೆ ಅದನ್ನು ಪ್ರದರ್ಶಿಸುವ ಆ ನೃತ್ಯಗಾರರ ಅದಮ್ಯ ಉತ್ಸಾಹದಲ್ಲಿ ನಾನೂ ಲೀನವಾಗುತ್ತೇನೆ.
ನನ್ನನ್ನು ಕಾಲಿಗೆ ಕಟ್ಟಿಕೊಂಡಾಗ ಅವರಲ್ಲಿ ಅದೊಂದು ಅಪೂರ್ವ ಚೈತನ್ಯ ಸಮ್ಮಿಳಿತವಾಗುತ್ತದೆ. ನನ್ನ ನಾದವೇ ಹೆಜ್ಜೆಯ ನಂತರದ ಹೆಜ್ಜೆಗೆ ಸ್ಫೂರ್ತಿ ನೀಡುತ್ತದೆ. ಸುಮಧುರ ಹಿನ್ನಲೆ ಸಂಗೀತಕ್ಕೆ ಮತ್ತಷ್ಟು ಕಾಂತಿ ನನ್ನಿಂದ ದೊರೆಯುತ್ತದೆಯೆಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ನೃತ್ಯಗಾರರು ಸರಿಯಾಗಿ ತಾಳಬದ್ಧವಾಗಿ ಹೆಜ್ಜೆ ಹಾಕಿದರೇನೇ ಅದು ಸೊಗಸು. ಆದರೆ, ಒಂದು ವೇಳೆ ತಪ್ಪು-ತಪ್ಪಾಗಿ ಹೆಜ್ಜೆ ಹಾಕಿದರೋ ತಕ್ಷಣ ನನಗೆ ತಿಳಿಯುತ್ತದಾದರೂ ಏನೂ ಮಾಡುವಂತಿಲ್ಲ. ಆಗ ನೃತ್ಯದ ಸೊಗಸೆಲ್ಲಾ ಮಾಯ!
ನನ್ನ ಇತಿಹಾಸ ನೃತ್ಯದಷ್ಟೇ ಹಳೆಯದು. ಅಂದಿನಿಂದ ಇಂದಿನವರೆವಿಗೂ ನೃತ್ಯದೊಂದಿಗೆ ಸದಾ ನಾನಿದ್ದೇನೆ. ಕೇವಲ ಭರತನಾಟ್ಯ ಮಾತ್ರವಲ್ಲ, ಕಥಕ್, ಕೂಚಿಪುಡಿ, ಯಕ್ಷಗಾನ, ಜಾನಪದ- ಹೀಗೆ ತರಹೇವಾರಿ ಕಲಾಪ್ರಕಾರಗಳಲ್ಲಿ ನಾನು ಇರಲೇಬೇಕು. ನನ್ನ ವ್ಯಾಪ್ತಿಯದು ಬಹು ವಿಶಾಲ.
ಇನ್ನು, ನನ್ನ ಹೆಸರನ್ನಿರಿಸಿ ನಡೆಯುತ್ತಿರುವ, ಮುನ್ನುಗ್ಗುತ್ತಿರುವ ಈ ಚೆಂದದ  ಪತ್ರಿಕೆಯ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ! ನಾಟ್ಯ-ನೃತ್ಯಗಳಿಗಾಗಿಯೇ ಮೀಸಲಿರಿಸಿ ಅದರ ಕೀರ್ತಿಯನ್ನು ಮತ್ತಷ್ಟು ಪಸರಿಸುತ್ತಿರುವ ‘ನೂಪುರ ಭ್ರಮರಿ’ಗೆ ಈ ಮೂಲಕ ನನ್ನ ಮನದಾಳದ ನಮನ.
(ಲೇಖಕರು ದ್ವಿತೀಯ ಬಿ‌ಎಸ್ಸಿ ವಿದ್ಯಾರ್ಥಿನಿ, ಆಕಾಶವಾಣಿ ಉದ್ಘೋಷಕರು)

Leave a Reply

*

code