ಅಂಕಣಗಳು

Subscribe


 

ರಘುರಾಮಾಭಿನಂದನಮ್ – ತಪ್ಪಿದ ಒತ್ತು (ಕಲೌಚಿತ್ಯ ಮೀರಿದ ಕಲಾವಿದ ಗೌರವ?)

Posted On: Thursday, August 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಜಿ.ಎನ್.ಅಶೋಕವರ್ಧನ, ಮಂಗಳೂರು

ಕಲಾಸಾಧಕರ ಅಭಿನಂದನಾ ಕಾರ್ಯಕ್ರಮ ಸಂಘಟಿಸುವುದರಲ್ಲಿ ಮೊದಲಿನಿಂದಲೂ ಯಕ್ಷಗಾನಕ್ಕೇ ಹಿರಿದುಸ್ಥಾನ. ಕಲಾಕ್ಷೇತ್ರದಲ್ಲಿ ಸಂಗೀತ, ನೃತ್ಯಾದಿ ಕಲೆಗಳ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲ್ಪಡುವುದೇ ದಶಕಕ್ಕೆ ಒಂದೋ ಎರಡೋ ಎಂಬಂತೆ ಆಗಿದೆ. ಹೀಗಿದ್ದಾಗ ಕರಾವಳಿ ಕರ್ನಾಟಕದ ಕಲೆಯು ತನ್ನ ಸಾಧಕಶ್ರೇಷ್ಠರಿಗೆ ವೈಭವೋಪೇತವಾದ ಅಭಿನಂದನಾ ಸಮಾರಂಭಗಳನ್ನು, ಸಂಚಿಕೆಗಳನ್ನೂ ಅರ್ಪಿಸುವುದು ನಿಜಕ್ಕೂ ಯಕ್ಷಗಾನದ ಹೆಚ್ಚುಗಾರಿಕೆಯೇ ಸೈ.

ಅದರಲ್ಲೂ ಈ ವರ್ಷದಲ್ಲಿ ಮಂಗಳೂರಿನ ಪುರಭವನವು ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಷಷ್ಟ್ಯಬ್ದ ವಿಶೇಷಕ್ಕೆ ಅನುರೂಪವಾಗಿ ಭವ್ಯವೆನಿಸುವಂತಹ ಅಭಿನಂದನ ಸಮಾರಂಭಕ್ಕೆ ಮೂರು ದಿನಗಳ ಕಾಲ ಸಾಕ್ಷಿಯಾಯಿತು. ಅದುವೇರಘುರಾಮಾಭಿನಂದನಂ. ಈ ಸಂದರ್ಭ ಹಲವು ಹಿರಿಯ ಕಲಾವಿದರನ್ನು, ಸಂಘಟಕರನ್ನು, ಯಕ್ಷಸಂಸ್ಥೆಗಳನ್ನು ಸಮ್ಮಾನಿಸಲಾಯಿತು. ಹೊಳ್ಳರ ಭಾಗವತಿಕೆ ಡಿವಿಡಿ, ಸಮ್ಮಾನ ಸಂಪುಟ, ಅಭಿನಂದನಾ ಗ್ರಂಥಗಳು ಅನಾವರಣಗೊಂಡವು.Puttige Ragurama Holla ತಾಳಮದ್ದಳೆ, ಗಾನತಾಳಮದ್ದಳೆ, ಯಕ್ಷಗಾನ ಬಯಲಟ, ಪ್ರಾತ್ಯಕ್ಷಿಕೆ, ವಿಚಾರಗೋಷ್ಠಿಗಳು ಪುತ್ತಿಗೆ ರಘುರಾಮ ಹೊಳ್ಳರ ಸಾರಥ್ಯದಲ್ಲಿ ಮುನ್ನಡೆದವು. ಹೆಸರಾಂತ ಕಲಾವಿದರು, ಅಧಿಕಾರಿಗಳು, ಮಠಾಧೀಶರು, ಸಾಮಾಜಿಕ ಧುರೀಣರು, ಶೈಕ್ಷಣಿಕ ತಜ್ಞರು, ಕಲಾಪೋಷಕರು ಕಾರ್ಯಕ್ರಮದ ಅಂಗಭಾಗವಾಗಿದ್ದರು. ಅಷ್ಟೇ ಅಲ್ಲ, ಅಭಿನಂದನಾ ಸಮಿತಿಯ ಆಯೋಜಕರು ಹೊಳ್ಳರಿಗೆ5,55,555 ರೂ.ಗಳ ವಿಶಿಷ್ಟ ನಿಧಿಯ ಗೌರವಾರ್ಪಣೆಯನ್ನು ಮಾಡಿದರು ಎಂದರೆ ಸಮಾರಂಭದ ವ್ಯಾಪ್ತಿಯನ್ನು ಒಮ್ಮೆ ಅಂದಾಜಿಸಬಹುದು ! ಇಂಥ ಸಮಾರಂಭಗಳು ಕಲಾಸೇವೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡ ಕಲಾವಿದರನ್ನು ಗೌರವಿಸುವ ಬಹುದೊಡ್ಡ ಪ್ರಶಸ್ತಿಯೇ ಸರಿ. ಕಲಾವಿದರ ಸೇವೆಯನ್ನು ಗುರುತಿಸುವ ಸಮಾರಂಭಗಳು ಗುಣಮಟ್ಟದಲ್ಲೂ ಸಾಂಖ್ಯಿಕವಾಗಿಯೂ ಪ್ರಗತಿಯನ್ನು ಕಾಣುತ್ತಲೇ ಇರಬೇಕು ಎನ್ನುವುದೇ ನೂಪುರ ಭ್ರಮರಿಯ ಅಂಬೋಣ.

ಈ ಕಾರ್ಯಕ್ರಮದ ಕುರಿತಾಗಿ ತಮ್ಮ ಅನುಭವಗಳನ್ನು ನಲ್ಲಿ ಹಂಚಿಕೊಂಡಿದ್ದಾರೆ ಕಲಾಸಹೃದಯಿ, ಪುಸ್ತಕೋದ್ಯಮಿ ಜಿ.ಎನ್.ಅಶೋಕವರ್ಧನರು. ಮೇಲ್ನೋಟಕ್ಕೆ ಇದು ಅಭಿನಂದನ ಕಾರ್ಯಕ್ರಮದ ಕುರಿತ ಅನಿಸಿಕೆಯ ಅಲೆಯೆಂದೆನಿಸಿದರೂ ; ಪ್ರಸ್ತುತ ಯಕ್ಷಗಾನದ ಸಮಾರಂಭಗಳ ಹಲವು ನೆಲೆಗಳು ಇಲ್ಲಿ ಸೂಕ್ಷ್ಮವಾಗಿ ತೆರೆದುಕೊಂಡಿವೆ. ಆದ್ದರಿಂದಲೇ ಈ ಸಲ ನೂಪುರ ಭ್ರಮರಿಯ ಅಂಗಳದಲ್ಲಿ ಚರ್ಚೆಗಾಗಿ ಈ ಅನಿಸಿಕೆಯ ತುಣುಕನ್ನು ಪ್ರಕಟಿಸುತ್ತಿದ್ದೇವೆ. ಇದು ನಿಮಗಾಗಿ, ನಿಮ್ಮ ಅನಿಸಿಕೆಗಾಗಿ. ಬನ್ನಿ. ಕಲಾಕ್ಷೇತ್ರದ ಸಾಧ್ಯತೆಗಳೆಡೆಗೆ ತಮ್ಮ ನೋಟವನ್ನು ಹೊರತನ್ನಿ.

ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಅಭಿನಂದನ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಜುಲೈ ೫, ೬ ಮತ್ತು ೭ರಂದು ಬಹು ವೈಭವದಿಂದಲೇ ನಡೆಯಿತು. ನಾನು ಕಂಡಂತೆ, ಇದಕ್ಕೆ ಸಂವಾದಿಯಾಗಿ ಕೆಲವು ಸಮಯದ ಹಿಂದೆ ಉಡುಪಿಯಲ್ಲಿ ನಡೆದ ಗೋವಿಂದ ವೈಭವ – ಸೂರಿಕುಮೇರು ಗೋವಿಂದ ಭಟ್ಟರ ಅಭಿನಂದನ ಕಾರ್ಯಕ್ರಮ. ಹಾಗೇ ನಾನು ಭಾಗಿಯಾಗದಿದ್ದರೂ ಬಾಯಿಮಾತುಗಳಲ್ಲಿ ಕೇಳಿದಂತೆ, ಪತ್ರಿಕಾ ವರದಿಗಳಲ್ಲಿ ಕಂಡಂತೆ ಕೋಳ್ಯೂರು, ಚಿಟ್ಟಾಣಿ, ಭಾಸ್ಕರಾನಂದ ಕುಮಾರ್ ಮುಂತಾದವರ ‘ವ್ಯಕ್ತಿವಿಶಿಷ್ಟ’ ಕಲಾಪ ಕೇಂದ್ರಿತ ಬಹುದಿನಗಳ ಸಮ್ಮಾನವೂ ಇಲ್ಲಿ ನೆನೆಸುವುದು ಪ್ರಸ್ತುತವೇ ಇದೆ. ರಘುರಾಮ ಹೊಳ್ಳರು ಅಥವಾ ನಾನು ಹೆಸರಿಸಿದ ಇತರ ಕಲಾವಿದರು ಗೌರವಯೋಗ್ಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಘಟಕರ ಶ್ರಮ (ತನು), ಅಭಿಮಾನ (ಮನ), ಧನ ಯಾವ ಕಾರಣಕ್ಕು ಸಣ್ಣದೂ ಅಲ್ಲ. 

felicitation to senior artiste in raghuramabhinandanam

felicitation to senior artiste in raghuramabhinandanam

ಆದರಿದು ಸಮ್ಮಾನಿತ ಕಲಾವಿದರನ್ನು ಸಕಲಕಲಾವಲ್ಲಭ (ಹೊಳ್ಳರು ಮದ್ದಳೆ ಕುಕ್ಕಿದರು, ಚಂಡೆ ಬೊಟ್ಟಿದರು, ಕರ್ನಾಟಕ ಸಂಗೀತಕ್ಕೆ ಕಂಠ ಶೋಷಿಸಿದರು.ಬಣ್ಣ ಮೆತ್ತಿ ಗೆಜ್ಜೆ ಕಟ್ಟುವುದೊಂದು ಬಾಕಿಯಾಯಿತು!) ಎಂದು ಪ್ರಮಾಣಿಸುವ, ಅವರಿಗಾಗಿ ನಾಮ-ವಿಶೇಷಣಗಳನ್ನು ಸೂರೆಗೊಳ್ಳುವ, ಒಟ್ಟಾರೆ ವ್ಯಕ್ತಿಪೂಜೆ ನಡೆಸುವ ಧೋರಣೆ ತಾಳುವುದು ಆರೋಗ್ಯಕರವಲ್ಲ. ಈ ಕಲಾವಿದರಿಗೆ ಮಾಧ್ಯಮವಾಗಿ ಒದಗಿದ ಮತ್ತು ಜನಧನಗಳನ್ನು ಪ್ರೇರಿಸಿದ (ಮೇಳ ಕಲಾಪ) ಯಕ್ಷಗಾನ ಇಲ್ಲಿ ಹಿನ್ನಡೆಯನ್ನೇ ಕಾಣುತ್ತದೆ. ವೈಯಕ್ತಿಕ ದೌರ್ಬಲ್ಯಗಳು ಕಲಾಪ್ರಕಾರಕ್ಕೆ ಪ್ರತಿಭಾ ಕೊಡುಗೆಗಳಾಗಿ ಮಾನ್ಯತೆ ಪಡೆಯುತ್ತವೆ; ಮರವನ್ನು ಕೀರ್ತಿಸುವಲ್ಲಿ ಬಂದಣಿಕೆಗೆ ಮಾನ್ಯತೆ ಒದಗಿಸಿದಂತಾಗುತ್ತದೆ. ಆಕಸ್ಮಿಕಗಳು ಸಂಪ್ರದಾಯದ ಭಾಗವೇ ಅಗಿಬಿಡುವ ಅಪಾಯವಿದೆ! ಶಿವರಾಮ ಕಾರಂತ, ಮುಳಿಯ ಮಹಾಬಲ ಭಟ್ಟ, ಕುಶಿ ಹರಿದಾಸ ಭಟ್ಟ, ರಾಘವ ನಂಬಿಯಾರ್, ಅಮೃತ ಸೋಮೇಶ್ವರ, ದಾಮ್ಲೆ-ಶಿಶಿಲ, ರಾ.ಗಣೇಶ್‌ರಂಥ ವಿದ್ವಾಂಸ-ಸಂಘಟಕರು ನಡೆಸಿದ ಎಷ್ಟೋ (ಆರ್ಥಿಕವಾಗಿ) ಬಡ ಯಕ್ಷಗಾನೀಯ ಕಲಾಪಗಳು ಇಂದಿಗೂ ಸ್ಮರಣೀಯವಾಗುವುದು ಈ ವಿಭಿನ್ನತೆಯಲ್ಲೇ.

ರಘುರಾಮಾಭಿನಂದನಮ್ ಕಾರ್ಯಕ್ರಮದ ಮೂರೂ ದಿನಗಳ ಆಯ್ದ ಕಲಾ ಕಲಾಪಗಳಿಗೆ (ಸಭಾ ಕಲಾಪಗಳನ್ನು ಆದಷ್ಟು ನಿವಾರಿಸಿ) ನಾನು ಹಾಜರಾಗಿದ್ದೆ. ಹಾಗೆ ನಾನು ಅನುಭವಿಸಿದ ಕೆಲವು ಕಲಾಪಗಳ ಕುರಿತು ಸಮೀಕ್ಷಿಸುವುದಾದರೆ…

 ragurama holla falicitation

ಸಮಯ ಸುಸ್ತು! (ಶಿಸ್ತು?): ರಾತ್ರಿಯಿಡೀ ನಡೆಯುವ ಯಕ್ಷಗಾನ ಬಯಲಾಟಗಳು ಇಂದು ಜನಮನ್ನಣೆ (ಅನುಕೂಲ) ಕಳೆದುಕೊಂಡಿವೆ. ಸಹಜವಾಗಿ ಕಾಲಮಿತಿಯ ಆಟಗಳು ರೂಢಿಸಿವೆ. ಒಟ್ಟಾರೆ ಸಮಯದ ಶಿಸ್ತು ಇಂದು ಯಾವುದೇ ಕಲಾಪಕ್ಕೆ ಅನಿವಾರ್ಯ ಸಂಗಾತಿ. ಆದರೆ ಕಾಲದ ಪರಿವೆಯೇ ತಮಗಿಲ್ಲವೆಂಬಂತೆ ಮೂರು ದಿನದ ಎಲ್ಲಾ ಕಲಾಪಗಳು ನಡೆದುವು. ವಿಪರೀತ ತಡವಾಗಿ ಶುರುವಾಗುವುದು, ಯಾವುದೇ ತಾರ್ಕಿಕ ಕಾರಣ, ಗುಣಾತ್ಮಕ ಕಡಿವಾಣವಿಲ್ಲದೆ ಲಂಬಿಸುವುದು ಅಸಹನೀಯವಾಗಿತ್ತು. ಮೊದಲ ದಿನ ಹೊಳ್ಳರ ಆಯ್ಕೆಯ ವಿಶಿಷ್ಟ ತುಣುಕುಗಳ ಪ್ರದರ್ಶನ ನಡೆಯಬೇಕಾದ ಸಮಯ (ನಾನು ಆಮಂತ್ರಣ ಪತ್ರಿಕೆಯನ್ನಷ್ಟೇ ಆಧರಿಸಿ ಹೇಳುತ್ತಿದ್ದೇನೆ) ಸಂಜೆ ಆರೂವರೆಯಿಂದ ಹತ್ತು. ಅದು ಶುರುವಾದ ಸಮಯ ಏಳೂವರೆ. ಉದ್ಘಾಟನಾ ಸಭೆಯ ನೆಪದಲ್ಲಿ ಐದೂವರೆ ಗಂಟೆಯಿಂದಲೇ ಕುಳಿತಿದ್ದ ನನ್ನ ಸಹನೆ ಹತ್ತೂವರೆ ಗಂಟೆಗೆ (ಮತ್ತೂ ಮೂರು ತುಣುಕುಗಳು ಬಾಕಿಯಿರುವುದು ಕಂಡು) ಕಡಿಯಿತು; ಸಭಾತ್ಯಾಗ ಮಾಡಿದೆ. ಮರುದಿನ ತಿಳಿದಂತೆ ಅದು ಹನ್ನೆರಡೂವರೆಯವರೆಗೂ ಲಂಬಿಸಿತಂತೆ. ಎರಡೂವರೆ ಗಂಟೆಯಲ್ಲಾಗಬೇಕಿದ್ದುದನ್ನು ದುಪ್ಪಟ್ಟು ಸಮಯದಲ್ಲಿ ‘ಚಂದಗಾಣಿಸಿದ್ದರು.’ ಇವು ಮುಖ್ಯ ಕಲಾವಿದ – ಹೊಳ್ಳರ ಆರೋಗ್ಯದ ಮೇಲೂ ಹಿಂಬಾಲಿಸಿದ ಕಲಾಪಗಳ ಮೇಲೂ ಪರಿಣಾಮ ಬೀರಿದ್ದು ಕಂಡಂತೆಯೇ ಇದೆ.

puttige

ಎರಡನೇ ದಿನದ ಗಾನತಾಳಮದ್ದಳೆಗೆ ನಿಗದಿತ ಸಮಯ ಬೆಳಗ್ಗೆ ಒಂಭತ್ತರಿಂದ ಹನ್ನೆರಡೂವರೆ. ಅದು ನಡೆದದ್ದು ಹತ್ತೂಕಾಲರಿಂದ ಎರಡೂ ಮುಕ್ಕಾಲು! ಮೂರನೆಯ ದಿನದ ತಾಳಮದ್ದಳೆಗೆ ನಿಗದಿತ ಸಮಯ ಮಧ್ಯಾಹ್ನ ಒಂದೂವರೆಯಿಂದ ಸಂಜೆ ನಾಲ್ಕೂವರೆ. ಅದು ನಡೆದದ್ದು ಎರಡೂವರೆಯಿಂದ ರಾತ್ರಿ ಏಳು. ಇಲ್ಲಿ ಇನ್ನೊಂದು ತಮಾಷೆ – ಅಭಿನಂದನ ಸಮಿತಿಯೇ ಆ ದಿನ ಕೊಟ್ಟ ಒಂದು ಪತ್ರಿಕಾ ಜಾಹೀರಾತು ಒಂದೂವರೆಯಿಂದ ನಾಲ್ಕೂವರೆಯವರೆಗೆ ತಾಳಮದ್ದಳೆಯನ್ನು ಸರಿಯಾಗಿಯೇ ತೋರಿಸಿದರೂ ಐದೂವರೆಯಿಂದ ಏಳರ ತನಕ ನಡೆಯಬೇಕಿದ್ದ ಗೌರವಾರ್ಪಣೆಯನ್ನು ಮೂರೂವರೆಯಿಂದ ಆರೂವರೆಯವರೆಗೆ ಘೋಷಿಸಿತ್ತು. ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ಕಲಾಪಗಳು! ಸಾವಿರಾರು ರೂಪಾಯಿ ಮೌಲ್ಯದ ಜಾಹೀರಾತಿನ ತಪ್ಪನ್ನು ಕೇವಲ ‘ಕಣ್ತಪ್ಪು’ ಎಂದೋ ಸಭೆಯಲ್ಲಿ ಕ್ಷಮಾಯಾಚನೆ ಮೂಲಕವೋ ಹಗುರಮಾಡಬಹುದೇ?

ಗಾನತಾಳಮದ್ದಳೆ: ಹೀಗೊಂದು ಪ್ರದರ್ಶನ ಹಿಂದೆ ಕೆಲವು ನಡೆದದ್ದಿದೆಯಾದರೂ ನನಗೆ ಇದೇ ಪ್ರಥಮ ಅನುಭವ. ತಾಳಮದ್ದಳೆಗೆ ಆಯ್ದ ಪ್ರಸಂಗ – ಅಂಬಾ ಶಪಥ.. ಪಾತ್ರಧಾರಿಗಳಾಗಿ ಬಂದ ಭಾಗವತರುಗಳನ್ನು ಅಲ್ಲಲ್ಲೇ ಪರಿಚಯಿಸುತ್ತೇನೆ. ಪಾತ್ರ ಹಂಚಿಕೆಯಲ್ಲಿ ತಿಟ್ಟು ಬೇಧವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಾದರೂ ತೆಂಕುತಿಟ್ಟಿನಲ್ಲಿ ಭಾಗವತನೇ ಆಗಿ ಪದ್ಯಾಣ ಗಣಪತಿ ಭಟ್, ಮದ್ದಳೆ, ಚಂಡೆಗಳನ್ನು ಹಾಡಿಕೆಗನುಗುಣವಾಗಿ – ಪದ್ಮನಾಭ ಉಪಾಧ್ಯಾಯ, ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರೂ ಬಡಗುತಿಟ್ಟಿನಲ್ಲಿ ಎ.ಪಿ. ಪಾಠಕ್, ಇಡಗುಂಜಿ ಕೃಷ್ಣ ಯಾಜಿಯವರೂ ಹಂಚಿಕೊಂಡು ನಿರ್ವಹಿಸಿದರು.

raguramabhinandanam

ಪ್ರಸಂಗ ಸಂಯೋಜಕರ ನೆಲೆಯಲ್ಲಿ ವಿವಿಧ ಪಾತ್ರಗಳಿಗೆ ಪದ್ಯಗಳನ್ನು ಹಂಚಿ, ಮುದ್ರಿಸಿಕೊಟ್ಟದ್ದು ನನ್ನ ಅರಿವಿಗೆ ಬಂತು. ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸ್ವತಂತ್ರವಾಗಿ ಇಡಿಯ ಪ್ರಸಂಗವನ್ನು ಹಾಡಿ, ನಡೆಸಿದ ಅನುಭವಿಗಳೇ ಇರಬಹುದು. ಆದರೆ ತಿಟ್ಟು, ಪ್ರಾದೇಶಿಕತೆ, ಗುರುಪಾಠಗಳ ವಿಭಿನ್ನತೆಯಲ್ಲಿ ಪ್ರಸಂಗದ ನಡೆ ಭಿನ್ನವಿರುವುದು ತಪ್ಪೇನಲ್ಲ. ಹಾಗಾಗಿ ಇಲ್ಲಿನ ಒಟ್ಟಂದಕ್ಕೆ ಅವಶ್ಯವಾದ ಒಂದು ಪಾತ್ರಾನುಕ್ರಮವನ್ನು ಹಂಚಿದಂತೆ ಕಾಣಲಿಲ್ಲ. ಅಥವಾ ಹಂಚಿದ್ದರೂ ಪ್ರದರ್ಶನ ಪೂರ್ವ ಎಲ್ಲ ಒಟ್ಟು ಕುಳಿತು ಸ್ಪಷ್ಟಪಡಿಸಿಕೊಳ್ಳದ ಕೊರತೆಯೂ ಇದಾಗಿರಬಹುದು. ಕೆಲವೆಡೆಗಳಲ್ಲಿ ಸಣ್ಣ ಗೊಂದಲವೂ ವೃಥಾ ವೇಳೆಗಳೆದದ್ದೂ ಸೇರಿ ಒಂದು ಕಲಾಕೃತಿಯಾಗಿ ಕಳೆಗಟ್ಟುವಲ್ಲಿ ಕೊರತೆಯೇ ಆಯಿತು.

ಇನ್ನೊಂದು ಅನಿಸಿಕೆ, ಪ್ರಸ್ತುತ ಸಂದರ್ಭದಲ್ಲಿ (ಪದ್ಯಾಣದವರನ್ನುಳಿದು) ಭಾಗವತರುಗಳು ನಿತ್ಯದ ಸ್ಥಿತಪ್ರಜ್ಞೆಯನ್ನು ಕಳಚಿಕೊಂಡು ಪಾತ್ರಭಾವ ಹೆಚ್ಚು ತಾಳಬೇಕಿತ್ತು. (ಕುಬಣೂರು ಶ್ರೀಧರರಾಯರು ಇದ್ದ ಸಣ್ಣ ಅವಕಾಶದಲ್ಲಿ ಇದನ್ನು ಚೆನ್ನಾಗಿಯೇ ತೋರಿಕೊಟ್ಟರು.) ಎಂದಿಗಿಂತ ಹೆಚ್ಚಿನ (ಸಾಹಿತ್ಯದ) ಉಚ್ಚಾರಣಾ ಶುದ್ಧಿ, ಕಡಿಮೆ ಕುಣಿತದ ನಡೆಗಳನ್ನು ಕೊಡುವುದೂ ಅಪೇಕ್ಷಣೀಯವಿತ್ತು. ಅವುಗಳ ಕೊರತೆಯಲ್ಲಿ ಇದು ಯಕ್ಷಗಾನ ರಾಗ ವೈವಿಧ್ಯ ಎಂದೇ ಕೆಲವೆಡೆಗಳಲ್ಲಿ ಪ್ರಚಾರದಲ್ಲಿರುವ ಇನ್ನೊಂದೇ ಪ್ರಯೋಗ-ಪ್ರದರ್ಶನದಿಂದ ಭಿನ್ನವಾಗಿ ನಿಲ್ಲಲಿಲ್ಲ. ಒಂದೆರಡು ಕಡೆಗಳಲ್ಲಿ ಕೇವಲ ಹಿಮ್ಮೇಳ ಅಂದರೆ – ಚಂಡೆ ಮದ್ದಳೆ, ಚಕ್ರತಾಳಗಳನ್ನು, ತುಸು ಮೆರೆಸುವ ಉದ್ದೇಶಕ್ಕೆ ತನಿ ನುಡಿಕೆಗೆ ಅವಕಾಶ ಮಾಡಿದ್ದು ಔಚಿತ್ಯಪೂರ್ಣವಾಗಿತ್ತು. (ಇದನ್ನೇ ಆಟದಲ್ಲಿ ಕೊಟ್ಟು ವೇಷಧಾರಿಗಳನ್ನು ‘ಬಳಲಿಸಿ ಕೊಲ್ಲುವ’ ಕ್ರಮ ನನಗೆ ಹಿಡಿಸದು.)

ಸಕಲಕಲಾವಲ್ಲಭತ್ವ: ಈ ಪ್ರಸಂಗಾವಧಿಯಲ್ಲಿ ಹೊಳ್ಳರು ಬಲಿಪರೊಡನೆ ದ್ವಂದ್ವ ಭಾಗವತಿಕೆ (ಹೊಸದೇನಲ್ಲ), ಮದ್ದಳೆಗಾರಿಕೆ ಮತ್ತು ಚಂಡೆ ವಾದನದ ಪ್ರದರ್ಶನಗಳನ್ನು ಕೊಟ್ಟರು. ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ| ಮೋಹನ ಆಳ್ವರು ಹೊಳ್ಳರ ಪ್ರತಿಭೆಗೆ ಸಾಕ್ಷಿಯಾಗಿ, ತಮ್ಮ ಸಂಸ್ಥೆಯ ಆವರಣದಲ್ಲಿ ವಂದೇ ಮಾತರಂನ್ನು ಯಕ್ಷಗಾನೀಯ ಶೈಲಿಯಲ್ಲಿ ಹೊಳ್ಳರು ಹಾಡಿದ್ದನ್ನು ಸ್ಮರಿಸಿದ್ದರು. (ಯೂ ಟ್ಯೂಬಿನಲ್ಲಿ ಇದರದೇ ಇನ್ನೊಂದು ಅತಿರೇಕ ರೂಪ, ಭಾಗವತ ಕೊಳಗಿ ಕೇಶವ ಹೆಗಡೆಯವರ ಹಾಡಿಕೆಯಲ್ಲಿದೆ. ಅದರಲ್ಲಿ ವಂದೇಮಾತರಂಗೆ ಯಕ್ಷ-ನೃತ್ಯವನ್ನೂ ನೋಡಬಹುದು!) ಸಾಹಿತ್ಯದ ಅರ್ಥ ವಿಸ್ತರಿಸದ, ಭಾವ ಪ್ರಚೋದಿಸದ ಯಕ್ಷ-ಗಾಯನ ಸೋನಿಯಾಗಾಂಧಿಯ ತಲೆಯ ಮೇಲಿಟ್ಟ ಮುಟ್ಟಾಳೆಯಂತೆ ಉಭಯ ಪ್ರಕಾರಗಳಿಗೆ ಮಾಡುವ ಅವಮಾನ. ಯಕ್ಷ-ಪರಿಚಿತರು ರಾಗ ಬಣ್ಣಗಳ ಪೂರ್ವಾಗ್ರಹಕ್ಕೆ ತುತ್ತಾಗಿ, ಇತರರು ಕೇವಲ ನಾವೀನ್ಯಕ್ಕಾಗಿ ಇಂಥವನ್ನು ಕೊಂಡಾಡುವುದು ಸಹಜವೇ ಇದೆ. ಚಪ್ಪಾಳೆ, ಶಿಳ್ಳೆಗಳ ಗದ್ದಲವನ್ನು ಜನನಾಡಿ ಎಂದು ಗುರುತಿಸಬಾರದು. ಇಂದು ಭಿನ್ನ ಕಾರಣಗಳಿಗೆ ಸಮಾಜದಲ್ಲಿ ‘ಮೇಲೇರಿದವರು’ ಔಚಿತ್ಯ ಮೀರಿದ ಇಂಥ ಕಲಾಪಗಳನ್ನು ಪ್ರೋತ್ಸಾಹಿಸುವುದು ನಡೆದೇ ಇದೆ. ಅವರು ಪರಿಶ್ರಮ, ಅನುಭವದ ಸೋಂಕೂ ಇಲ್ಲದ ವಿಚಾರಗಳ ಮೇಲೆ ಅಪ್ಪಣೆ ಕೊಡಿಸುವುದಂತು ಕೇಳುಗರಿಗೆ ನಿತ್ಯ ನರಕ. ಬೀಜದ ಬಲದಿಂದ ಗಿಡ ವಿಕಸಿಸುತ್ತದೆ, ಕೃತಕ ಒಳಸುರಿಗಳಿಂದ ಕೇವಲ ಕೊಬ್ಬುತ್ತದೆ!yakshagana programme in raghuramabhinandanam

ಅಮಲಿನವಾಗಲಿ: ಜಟಾಯು ಅರ್ಥಧಾರಿ ಪ್ರಸಂಗದ ನಡೆಯನ್ನು ಪಾತ್ರ ಪೋಷಣೆಯಿಂದ ತಪ್ಪಿಸಿ, ವೈಯಕ್ತಿಕ ಮಟ್ಟಕ್ಕಿಳಿಸಿದರು. ವಿಟ್ಲ ಶಂಭು ಶರ್ಮರು ಬಳಸಿದ ಮಾತುಗಳು ಪ್ರಭಾಕರ ಜೋಷಿಯವರನ್ನು ಉದ್ದೇಶಿಸಿದ ನಿಂದಾನುಡಿಗಳಂತೆ ತೋರಿದ್ದು ರಸಭಂಗವನ್ನೇ ಉಂಟು ಮಾಡಿತು. ಶೇಣಿ ಸಾಮಗರ ಕಾಲದಲ್ಲಿ ಆಗೀಗ ನಡೆದಿದೆ ಎಂದಷ್ಟೇ ನಾನು ಕೇಳಿದ್ದ ಸನ್ನಿವೇಶ ಇಲ್ಲಿ ಶರ್ಮರಿಂದ ಏಕಪಕ್ಷೀಯವಾಗಿ ವಿಕಸಿಸಿತ್ತು. ಸಂಧಾನ ರಾವಣ (ಉಡುವೆಕೋಡಿ) ಮಾರೀಚನ (ಮೂಡಂಬೈಲು) ನುಡಿಗಳೆದುರು ಪಾತ್ರಪೋಷಣೆಯಲ್ಲಿ ವಿಫಲನಾದರೂ ಅಪಹರಣ ರಾವಣ (ಜೋಶಿ) ಜಟಾಯುವನ್ನೂ ಅರ್ಥಧಾರಿಯನ್ನೂ (ಶರ್ಮ) ಏಕಕಾಲಕ್ಕೆ ಕಥಾಮುಖಕ್ಕೆ ಎಳೆದು ಸನ್ನಿವೇಶವನ್ನು ಕಾಪಾಡುವಲ್ಲಿ ಯಶಸ್ವಿಯಾದ. ರಾವಣನ ಭಂಡತನ ಕುಟಿಲತೆಗಳನ್ನಷ್ಟೇ ಬಳಸಿ, ಮಾತುಗಳು ಕಡಿವಾಣ ಕಳಚದ ಎಚ್ಚರವಹಿಸಿ ಜೋಶಿ, ಪ್ರಸಂಗಕ್ಕೆ ಮಂಗಳ ಹಾಡಿಸಿದರು. ಸಾವಿರಕ್ಕೆ ಸಮೀಪದ ಸಭೆಯಲ್ಲಿ ಬಂದ ನಾಲ್ಕೆಂಟೇ ಶಿಳ್ಳೆ, ಚಪ್ಪಾಳೆಗಳು ದೊಡ್ಡದಾಗಿಯೇ ಕೇಳಿದ್ದರೂ ಖಂಡಿತಕ್ಕೂ ಬಹುಮತವಲ್ಲ. ಯಾರೂ ಯಕ್ಷಗಾನೇತರ ರೋಚಕತೆಯನ್ನು ಆಟ ಕೂಟಗಳಿಗೆ ತರಬಾರದು, ಉತ್ತೇಜಿಸಬಾರದು. ಯಕ್ಷಗಾನ ಅಮಲಿನವಾಗಬೇಕು ; ಅಮಲಿನದ್ದಾಗಬಾರದು !!

Leave a Reply

*

code