Author: -ವಿದ್ವಾನ್ ಮಹೇಶ ಭಟ್ ಹಾರ್ಯಾಡಿ, ಉಡುಪಿ
ಇದನ್ನು ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ‘ಮಾಮವ ಮೀನಾಕ್ಷಿ…’ ಎಂಬ ವರಾಳಿರಾಗದ ಕೃತಿಯ ಸ್ವರವಿನ್ಯಾಸದಲ್ಲಿಯೇ ಹಾಡಬಹುದು. ದೀಕ್ಷಿತರ ಕೃತಿಯಲ್ಲಿ ‘ಶ್ಯಾಮೇ ಶಂಕರಿ’ ಎಂಬಲ್ಲಿ ನೆರವಲ್ ಮಾಡುವಾಗ ‘ಅಂಬ’ ಎಂದು ಸೇರಿಸಿಕೊಳ್ಳುವಂತೆ ‘ದೀನ’ ಎಂದು ಸೇರಿಸಿಕೊಳ್ಳಬಹುದು. ನೃತ್ಯಕ್ಕೆ ಅಳವಡಿಸುವಾಗ ಅದಕ್ಕೆ ತಕ್ಕುದಾದ ರಾಗ-ತಾಳಗಳನ್ನು ಅಳವಡಿಸಿಕೊಳ್ಳಬಹುದು.
ಮಾಮವ ಶ್ರೀರಾಮ ವೀತದುಷ್ಕಾಮ
(ಮಾಮ್ ಅವ ಶ್ರೀರಾಮ ವೀತ-ದುಷ್ಕಾಮ)
ಕಾರುಣ್ಯವಲ್ಲರೀಮೂಲ
(ಕಾರುಣ್ಯ-ವಲ್ಲರೀ-ಮೂಲ)
ಸುಕೃತಜಾಲ ತಮಾಲನೀಲ ||ಪ||
(ಸುಕೃತ-ಜಾಲ ತಮಾಲ-ನೀಲ)
ಭೂಮಿಜಾಹೃದೀಶ್ವರ ಅರಿವ್ರಾತಭೀಕರ
(ಭೂಮಿಜಾ-ಹೃದೀಶ್ವರ ಅರಿ-ವ್ರಾತ-ಭೀಕರ)
(ದೀನ)ಭಕ್ತೇ ಕಿಂ ತವ ನಾಸ್ತಿ ದಯಾ? ಪರಾತ್ಪರ
ಪಾಪದಾವಾನಲಪಯೋಧರ
(ಪಾಪ-ದಾವ-ಅನಲ-ಪಯೋಧರ)
ವಾತಸುತಲಸಿತಹೃನ್ಮಂದಿರ ||
(ವಾತ-ಸುತ-ಲಸಿತ-ಹೃನ್ಮಂದಿರ)
ಲಕ್ಷ್ಮಣಾನವರತನಿಷೇವಿತ
(ಲಕ್ಷ್ಮಣ-ಅನವರತ-ನಿಷೇವಿತ)
ವಾಣೀವತ್ಸಲವಚನಸ್ತುತ
(ವಾಣೀ-ವತ್ಸಲ-ವಚನ-ಸ್ತುತ)
ಸೌಜನ್ಯಾಂಭೋಧಿರಸಾಮೃತ
(ಸೌಜನ್ಯ-ಅಂಭೋಧಿ-ರಸ-ಅಮೃತ)
ಪುರಂದರಾದ್ಯಮರಕೀರ್ತಿತ ||
(ಪುರಂದರ-ಆದಿ-ಅಮರ-ಕೀರ್ತಿತ)
ಪ್ರತಿಪದಾರ್ಥ : ಮಾಮ್ – ನನ್ನನ್ನು; ಅವ – ರಕ್ಷಿಸು ; ಶ್ರೀರಾಮ – ರಾಮಚಂದ್ರನೇ; ವೀತದುಷ್ಕಾಮ – ಕೆಟ್ಟ ಕಾಮನೆಗಳಿಲ್ಲದವನೇ; ಕಾರುಣ್ಯವಲ್ಲರೀಮೂಲ – ಕರುಣೆಯೆಂಬ ಬಳ್ಳಿಗೆ ಬೇರಾಗಿರುವವನೇ; ಸುಕೃತಜಾಲ – ಪುಣ್ಯದ ರಾಶಿಯೇ ಆಗಿರುವವನೇ; ತಮಾಲನೀಲ – ಹೊಂಗೆಯಂತೆ ಕಪ್ಪಗಿರುವವನೇ; ಭೂಮಿಜಾಹೃದೀಶ್ವರ – ಭೂದೇವಿಯ ಮಗಳಾದ ಸೀತೆಯ ಮನಸ್ಸಿನ ಒಡೆಯನೇ; ಅರಿವ್ರಾತಭೀಕರ – ಶತ್ರುಗಳ ಸಮೂಹಕ್ಕೆ ಭೀತಿಯನ್ನುಂಟುಮಾಡುವವನೇ; [ದೀನ]ಭಕ್ತೇ – ದೀನನಾದ ಈ ಭಕ್ತನ ಮೇಲೆ ; ಕಿಂ ತವ ನಾಸ್ತಿ ದಯಾ – ನಿನಗೆ ಕರುಣೆಯಿಲ್ಲವೇ? ; ಪರಾತ್ಪರ – ಪರಕ್ಕೂ ಪರನಾದವನೇ ; ಪಾಪದಾವಾನಲಪಯೋಧರ – ಪಾಪವೆನ್ನುವ ಕಾಡ್ಗಿಚ್ಚಿಗೆ ಮೋಡವಾಗಿರುವವನೇ ; ವಾತಸುತಲಸಿತಹೃನ್ಮಂದಿರ – ವಾಯುವಿನ ಮಗನಾದ ಹನುಮಂತನಿಂದ ಶೋಭಿಸುತ್ತಿರುವ ಮನಸ್ಸೆಂಬ ಮಂದಿರವನ್ನುಳ್ಳವನೇ; ಲಕ್ಷ್ಮಣಾನವರತನಿಷೇವಿತ – ಲಕ್ಷ್ಮಣನಿಂದ ನಿರಂತರವಾಗಿ ಸೇವಿಸಲ್ಪಟ್ಟವನೇ; ವಾಣೀವತ್ಸಲವಚನಸ್ತುತ – ವಾಣೀವತ್ಸಲನ ಮಾತುಗಳಿಂದ ಕೊಂಡಾಡಲ್ಪಟ್ಟವನೇ; ಸೌಜನ್ಯಾಂಭೋಧಿರಸಾಮೃತ – ಒಳ್ಳೆಯತನ ಎಂಬ ಸಾಗರದ ರಸರೂಪವಾದ ಅಮೃತವಾಗಿರುವವನೇ; ಪುರಂದರಾದ್ಯಮರಕೀರ್ತಿತ – ಇಂದ್ರನೇ ಮೊದಲಾದ ದೇವತೆಗಳಿಂದ ಸ್ತುತನಾದವನೇ.