Author: ಮನೋರಮಾ. ಬಿ.ಎನ್
ಲಕ್ಷಣ: ಎರಡು ಸರ್ಪಶೀರ್ಷ ಹಸ್ತಗಳನ್ನು ಕಿರುಬೆರಳುಗಳ ಅಂಚಿನಲ್ಲಿ ಮಣಿಕಟ್ಟಿನವರೆಗೂ ಜೋಡಿಸಿ ಹಿಡಿಯುವುದು. ಅಧಿದೇವತೆ : ಕಿನ್ನರೇಶ್ವರ. ಪುಷ್ಪಪುಟ ಎಂದರೆ ಹೂಗಳ ಪಾತ್ರೆ. ಪುಷ್ಪಾಂಜಲಿಯನ್ನು ಅರ್ಪಿಸುವ ನೃತ್ಯಬಂಧ ಆರಂಭವಾಗುವುದೇ ಈ ಹಸ್ತದ ಮೂಲಕ. ಆದ್ದರಿಂದಲೇ ೧೦೮ ಕರಣಗಳ ಪೈಕಿ ಮೊದಲನೇಯ ಕರಣವಾದ ತಲಪುಷ್ಪಪುಟವು ಇದೇ ಹಸ್ತದ ಹೆಸರು ಮತ್ತು ಬಳಕೆಯಿಂದ ವಿನ್ಯಾಸಗೊಳಿಸಲ್ಪಟ್ಟಿದೆ.
ಈ ಹಸ್ತದ ಬಳಕೆ ಮಣಿಪುರಿ, ಕಥಕ್ ಮುಂತಾದ ನೃತ್ಯಗಳಲ್ಲೂ ಹೇರಳವಾಗಿ ಇದೆ. ಆಗಮವೇದವು ಈ ಹಸ್ತವನ್ನು ಅಂಜಲಿ ಮುದ್ರೆ, ಪ್ರಾರ್ಥನಾ ಮುದ್ರೆ, ಪುಷ್ಪಪುಟ ಮುದ್ರೆ ಎಂಬುದಾಗಿ ಕರೆದಿದ್ದು ಮಾನಸಿಕ ಪವಿತ್ರತೆಗೆ, ಒಳ್ಳೆಯ ನಡೆ-ನುಡಿಗಳನ್ನು ಜಾಗೃತಗೊಳಿಸಲು, ಭಾವನಾತ್ಮಕವಾದ ಆರೋಗ್ಯಕ್ಕೆ, ಧನಾತ್ಮಕ ಭಾವನೆ ಸೃಜಿಸಲು, ದೇವತಾಹ್ವಾನಕ್ಕೆ ಬಳಕೆಯಾಗುತ್ತದೆ. ಕೆಲವೊಮ್ಮೆ ಹಸ್ತಗಳನ್ನು ಬಟ್ಟಲುಗಳ ಆಕಾರದಲ್ಲಿ ತೊಡೆಯ ಮೇಲಿಟ್ಟು ಬೆರಳುಗಳನ್ನು ಸಡಿಲವಾಗಿ ಬಿಟ್ಟು, ಹೆಬ್ಬೆರಳು ತೋರುಬೆರಳಿನ ಹೊರವಲಯ ಸ್ಪರ್ಶಿಸುವಂತಿರುವ ಲಕ್ಷಣವನ್ನೂ ಆಗಮಗ್ರಂಥಗಳು ಹೇಳಿವೆ.
ವಿನಿಯೋಗ : ಮಂಗಳಾರತಿ, ಹೂವು ಅಥವಾ ಹಣ್ಣುಗಳನ್ನು ಸ್ವೀಕರಿಸುವುದು, ಅಥವಾ ಕೊಡುವುದು, ಸಂಧ್ಯಾ ಕಾಲದಲ್ಲಿ ಅರ್ಘ್ಯ ಬಿಡುವುದು, ಮಂತ್ರ ಪುಷ್ಪ ಸಲ್ಲಿಸುವಿಕೆ.
ಇತರೇ ವಿನಿಯೋಗ : ಕರುಣಾಭಿನಯ, ದಾನ, ಭಕ್ತಿಯಿಂದ ರಾಜಾಜ್ಞೆ ಕೇಳುವುದು, ಪ್ರತಿಗ್ರಹ, ನೀರನ್ನು ತರುವುದು, ಪುಷ್ಪಾಂಜಲಿ, ಹೋಮ ಮಾಡುವುದು, ದವಸ-ಧಾನ್ಯ, ಕರುಣೆಗೆ ಪಾತ್ರರಾದವರು, ಕೇಳುವುದು, ಹಿಡಿದುಕೊಳ್ಳುವುದು, ದೇವರನ್ನು ಪೂಜಿಸುವುದು, ಅರ್ಪಿಸುವುದು, ಪೂಜಾಸಾಮಗ್ರಿಗಳು, ದೋಣಿ, ಶುದ್ಧನಾಟ್ಯ.
ನಿತ್ಯ ಜೀವದಲ್ಲಿ ಕೊಡುವುದು, ಪಡೆಯುವುದು, ವಸ್ತುಗಳನ್ನು ಹಾಕುವುದು, ಮಂಗಳಾರತಿ, ಅರ್ಘ್ಯ ಬಿಡುವುದು ಇತ್ಯಾದಿಗಳ ಬಳಕೆಗೆ ಬಳಸುತ್ತಾರೆ.