Author: ಮನೋರಮಾ. ಬಿ.ಎನ್
ಭರತ ಕಲೆಗಳ ಆದ್ಯ ಗುರು ಭರತಮುನಿಗೆ ಭಾರತದಲ್ಲೇ ಮೊತ್ತ ಮೊದಲನೆಯ ಬಾರಿಗೆ ದೇವಾಲಯವನ್ನೂ ಮತ್ತು ಕಲೆಗಳ ಕುರಿತಾದ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶದಲ್ಲಿರುವ ಭರತನೃತ್ಯದ ಅಗ್ರಮಾನ್ಯ ಕಲಾವಿದೆ ಡಾ. ಪದ್ಮಾಸುಬ್ರಹ್ಮಣ್ಯಂ ಅವರು ನಿಧಿ ಸಂಗ್ರಹಣೆಗಾಗಿ ಒಂದುವಾರದ ಭರತನಾಟ್ಯ ಶಿಬಿರವನ್ನು ನಿರುಪಮ ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪೆನಿಯ ಆವರಣದಲ್ಲಿ ಜುಲೈ ೪ರಿಂದ ೧೦ರ ವರೆಗೆ ಆಯೋಜಿಸಿದ್ದರು. ನೃತ್ಯ ಗುರು ಮತ್ತು ವಿದ್ಯಾರ್ಥಿಗಳ ವಿಭಾಗದಲ್ಲಿ ಜರುಗಿದ ಈ ಕಮ್ಮಟವು ಕರ್ನಾಟಕದ ಕಲಾವಿದರಿಗೆ ನೃತ್ಯಕಲೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನವನ್ನು ಕೊಟ್ಟದ್ದು ನಿಜಕ್ಕೂ ಅಭಿನಂದನೀಯ.
ಶಿಬಿರದ ಎರಡು ದಿನಗಳು ಅಂಗೋಪಾಂಗ ಬೇಧ, ಚಾರಿ, ಕೆಲವು ಕರಣಗಳ ಅಭ್ಯಾಸ ನೃತ್ಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣದ ನವೀನ ಮುಖಗಳನ್ನು ಪರಿಚಯಿಸಿದರೆ ; ಉಳಿದ ದಿನಗಳು ಡಾ.ಪದ್ಮಾ ಅವರು ಪುರಂದರದಾಸರ ಕೀರ್ತನೆ ‘ಹಿಡಕೋ ಬಿಡಬ್ಯಾಡ’ ವರ್ಣ ಹಾಗೂ ಪದ್ಮಾ ಅವರ ತಾಯಿ ಮೀನಾಕ್ಷಿ ಸುಬ್ರಹ್ಮಣ್ಯಂ ರಚಿತ ಕೃಷ್ಣನ ಕುರಿತ ನಾಮಾವಳಿಗೆ ಸಂಯೋಜಿಸಿದ ನರ್ತನವು ಕಲಿಕೆಯಲ್ಲಿ ಅರಳಿತ್ತು. ಸಾಮಾನ್ಯವಾಗಿ ವರ್ಣ ಮುಂತಾದ ಭರತನಾಟ್ಯದ ಸಂಪ್ರದಾಯದ ಕಟ್ಟುನಿಟ್ಟುಗಳಿಂದ ಆಚೆಗಿನ ರಸಭಾವದಲ್ಲಿ ಮಿಂದೇಳುವ ಪದ್ಮಾ ಅವರು ಈ ಬಾರಿ ವರ್ಣ, ಭಜನ್ ಕಲಿಕೆಗೆ ಶಿಬಿರವನ್ನು ಸೀಮಿತವಾಗಿಸಿದರೇನೋ ಎಂದೆನಿಸಿದರೂ; ಕಣ್ತೆರೆಸುವ ಅವರ ಆಹ್ಲಾದರೂಪದ ಸಾಕ್ಷಾತ್ಕಾರ ಮತ್ತು ಅವರ ಅನುಭವ, ಅಭಿನಯಾದಿ ಸಂದರ್ಭಗಳು ಬೆಂಗಳೂರನ್ನೂ ಒಳಗೊಂಡಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ನೃತ್ಯ ಕಲಾವಿದರಿಗೆ ಚಿಂತಾನಾರ್ಹ ದೃಷ್ಟಿಯನ್ನಿತ್ತಿದೆ. ಈ ನಿಟ್ಟಿನಲ್ಲಿ ಸಮಯದ ಅಭಾವವೋ, ಅಭಿಲಾಷಿತಾರ್ಥಿಗಳ ಅಂತರ್ಗತ ಅಭ್ಯಾಸ-ನಿಲುವುಗಳಿಂದಲೋ ಅಥವಾ ಕರಣ, ಚಾರಿ ಅನುಷ್ಠಾನ- ಅಧ್ಯಯನದ ಅಲಭ್ಯತೆಯ ಪರಿಣಾಮವೋ, ಉದ್ದೇಶಿತಾರ್ಥದ ರಾಜಿಗೋ ಶಿಬಿರ ಹಾಗೂ ನೃತ್ಯ ತರಬೇತಿಯ ಕುರಿತಂತೆ ಇದ್ದ ನಿರೀಕ್ಷೆಗಳು ಫಲಗೂಡದೇ ಕೊರತೆಗಳಾಯಿತೇನೋ ಎಂದು ಅನಿಸಿದ್ದು ದಿಟ. ಆದರೂ ಮೊಗೆದಷ್ಟೇ ದಕ್ಕುವುದು ಎಂಬ ಉಕ್ತಿಯೂ ಅನ್ವಯವೇ ಹೌದು.
ಶತಾವಧಾನಿ ಡಾ. ಆರ್. ಗಣೇಶ್ ನಾಟ್ಯಶಾಸ್ತ್ರ ಮತ್ತು ಕಲೆಗಳ ಕುರಿತಂತೆ ಇತ್ತ ಏಳು ದಿನಗಳ ಉಪನ್ಯಾಸವೂ ಬೋಧಪ್ರದವಷ್ಟೆ ಅಲ್ಲದೆ ನೆರೆದ ಶಿಬಿರಾರ್ಥಿಗಳ ಕಣ್ಣುಗಳನ್ನು ಹನಿಗೂಡಿಸಿದ ಭಾವುಕ ಕ್ಷಣಗಳನ್ನು ತಂದಿತ್ತಿತು. ಒಂದರ್ಥದಲ್ಲಿ ಶಿಬಿರದ ಮುಖ್ಯ ಸತ್ತ್ವ ಶತಾವಧಾನಿ ಗಣೇಶರ ಉಪನ್ಯಾಸದಲ್ಲೇ ಕೇಂದ್ರೀಕೃತವಾಗಿತ್ತೆಂದರೂ ತಪ್ಪಲ್ಲ. ಅಷ್ಟೇ ಅಲ್ಲ; ಭರತಾಲಯ ನಿರ್ಮಾಣದಲ್ಲಿ ಕರ್ನಾಟಕದ ಶಿಬಿರಾರ್ಥಿಗಳ ಪಾಲ್ಗೊಳ್ಳುವಿಕೆಯ ಧನ್ಯತೆಯನ್ನು ಮನತುಂಬಿ ಸ್ಮರಿಸುವುದರೊಂದಿಗೇ; ಶಿಬಿರಾರ್ಥಿಗಳ ಉತ್ಸಾಹವನ್ನು ಕಂಡು ಸಂತುಷ್ಟರಾದ ‘ಪದ್ದು ಅಕ್ಕ’ ಮತ್ತೊಮ್ಮೆ ಮಗದೊಮ್ಮೆ ಶಿಬಿರವನ್ನು ಆಯೋಜಿಸಲು ಉತ್ಸುಕರಾಗಿರುವುದು ನಮ್ಮ ಹೆಮ್ಮೆ. ಅಂದಹಾಗೇ ಡಾ.ಪದ್ಮಾ ಅವರು ಯೋಜಿಸಿದ ಭರತಮುನಿಯ ಆಲಯದಂತಹ ಉದಾತ್ತ ಆಶಯ, ಹನಿ ಹನಿಗೂಡಿ ಹಳ್ಳವಾಗಿಸುವ ಉದ್ದೇಶದ ಪ್ರಯತ್ನಗಳು ನಮ್ಮ ನಾಡಿನಲ್ಲೂ ಮೂಡಿಬಂದು ಕರ್ನಾಟಕದ ಮಸುಕಾದ ನೃತ್ಯ ಪರಂಪರೆಯನ್ನು, ನರ್ತನದೆಡೆಗಿನ ಕಾಳಜಿಯನ್ನು ಸಮೃದ್ಧವಾಗಿಸಲಿ