Author: Editor
ಮೊಗೆಮೊಗೆದು ಪ್ರೀತಿ ಸುರಿಸುವ ಆ ಹೊಳೆಯುವ ಕಣ್ಣ್ಣುಗಳಲ್ಲಿ ಮಾತೃತ್ವದ ಮಮತೆಯ ಸುಧೆ. ಹಾರ್ದ ಒಡನಾಟದಲ್ಲಿ ಹ್ಲಾದವೆನಿಸುವ ಕಲಾಕಂಪಿನ ತಂಪು. ಉಡುತ್ತಿದ್ದ ಬಿಳಿಸೀರೆಯ ಅಂಚು ಅಂಚಿನಲ್ಲೂ ಅನುಭವದ ಪಾಕಕ್ಕೆ ಹರಳುಗಟ್ಟಿದ ನಿರ್ಭಿಡೆಯ ನಿಲುವು. ಸದಭಿರುಚಿಯ ಕಲಾಪ್ರಯತ್ನಗಳಿಗೆ ಮುಕ್ತಮನಸ್ಸಿನ ಬಿಚ್ಚು ಮಾತು, ಅನಗತ್ಯ ವಾದಸರಣಿಗಳಿಂದ ದೂರವುಳಿದು ಕಲೆಯನ್ನೇ ನಿರಂತರ ಧ್ಯಾನಗೈಯುವ ಅಧ್ಯಯನನಿಷ್ಠೆ, ಕಲಾಕೈಂಕರ್ಯದಲ್ಲಿ ಅವಿರತ ತೊಡಗಿಸಿಕೊಂಡವರನ್ನು ಎಂದೆಂದಿಗೂ ಪ್ರೀತಿಸಿ ಆದರಿಸುವ ಪಕ್ವತೆ, ಸದಾ ಸ್ಮಿತಪೂರ್ವಾಭಿಭಾಷಿಣಿ- ಅಂತಹ ತಾಯಿ, ಕರಾವಳಿಯ ನಾಟ್ಯಕಲಾ ತಪಸ್ವಿನಿ ಜಯಲಕ್ಷ್ಮಿ ಆಳ್ವ ಇಂದು ನಮ್ಮೊಂದಿಗಿಲ್ಲ. ಆದರೆ ಕಲಾಕ್ಷೇತ್ರವನ್ನೂ ಒಳಗೊಂಡಂತೆ ಅವರು ನೂಪುರ ಭ್ರಮರಿಯೊಂದಿಗೆ ಇಟ್ಟುಕೊಂಡಿದ್ದ ಬೆಚ್ಚನೆಯ ಅನುಬಂಧ, ಯಾವುದೇ ಲೇಖನವನ್ನಾದರೂ ಆಸಕ್ತಿಯಿಂದ ಓದಿಸಿಕೊಳ್ಳುತ್ತಿದ್ದ ಮಮತೆಯನ್ನು ಎಂದೆಂದಿಗೂ ಮರೆಯುವಂತಿಲ್ಲ.
ತವರೂರು ಕುಂಭಕೋಣಂ. ಮಾತೃಭಾಷೆಯಾಗಿ ಕಲಿತದ್ದು ತಮಿಳು. ಆದರೇನಾಯಿತು? ರಾಮಕೃಷ್ಣ ಆಳ್ವ ಅವರ ಸತಿಯಾಗಿ ಕರ್ನಾಟಕಕ್ಕೆ ಬಂದ ಮೇಲೆ, ಕನ್ನಡ ಕಲಿತು ಕನ್ನಡತಿಯಾಗಿ ಬೆಳೆದವರು ಕರಾವಳಿಯ ನೃತ್ಯಸರಸ್ವತಿ ಜಯಲಕ್ಷ್ಮೀ ಆಳ್ವ. ಭರತನಾಟ್ಯದ ಪಂದನಲ್ಲೂರು ಪದ್ಧತಿಯ ಮೇರುಗುರುಗಳಾದ ಕಲಾಕ್ಷೇತ್ರದಲ್ಲಿ ರುಕ್ಮಿಣೀ ಅರುಂಡೇಲ್ ಅವರೊಂದಿಗೆ ಸೇವೆ ಸಲ್ಲಿಸಿದ ಗುರು ಕೆ.ಎನ್. ದಂಡಾಯುಧ ಪಾಣಿ ಪಿಳ್ಳೈ ಅವರ ಪಟ್ಟ ಶಿಷ್ಯೆ. ಸ್ವರ್ಣಂ ಸರಸ್ವತಿ, ಗೌರಿ ಅಮ್ಮಾಳ್, ಕರುಣಾಕರ್ ಪಣಿಕ್ಕರ್ ಅವರಲ್ಲಿಯೂ ಅಭಿನಯ ಮತ್ತು ಕಥಕಳಿಯನ್ನು ಅಭ್ಯಾಸ ಮಾಡಿದ್ದರು.
ಜಯಲಕ್ಷ್ಮೀ ಅವರ ಅಜ್ಜನಿಗೆ ಯಕ್ಷಗಾನದಂತಹ ಕಲೆಗಳಲ್ಲಿ ಪರಿಶ್ರಮ ಇತ್ತು. ಅಕ್ಕ ಜಾನಕಿ ಕೂಡಾ ಸಂಗೀತ ಕಲಾವಿದೆ. ಹಾಗಾಗಿ ಸಣ್ಣದರಿಂದಲೇ ಹಾಡುವ ಪರಿಪಾಠ. ನೃತ್ಯ ಕಲಿಯಬೇಕೆಂಬ ಆಸೆಯಿತ್ತಾದರೂ, ಆಗಿನ ಕಾಲಕ್ಕೆ ಹೇಳಿಕೊಡುವವರು ಯಾರು? ಮತ್ತೊಂದೆಡೆ ಮನೆಯಲ್ಲಿ ಒಪ್ಪುವರೇ ಅನ್ನುವ ಅಂಜಿಕೆ. ಆಗಲೇ ಗುರು ದಂಡಾಯುಧಪಾಣಿ ಪಿಳ್ಳೈ ಅವರಲ್ಲಿ ಕಲಿಯುವ ಯೋಗ ಕೂಡಿಬಂದದ್ದು. ಸ್ನೇಹಿತರೊಬ್ಬರ ಮನೆಗೆ ಆಗಾಗ ನೃತ್ಯ ಕಲಿಸಲು ಬರುತ್ತಿದ್ದ ಗುರುಗಳನ್ನು ಕಂಡು ಮಾತನಾಡಿದ್ದರು ಜಯಲಕ್ಷ್ಮಿ.
ನಂತರ ೧೯೪೮ರ ಮಾರ್ಚ್ ೭ರಲ್ಲಿ ರಂಗಪ್ರವೇಶವಾಗಿ ನೃತ್ಯ ಕ್ಷೇತ್ರಕ್ಕೆ ಕಾಲಿಟ್ಟ ಜಯಲಕ್ಷ್ಮಿ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ತಮ್ಮ ವಜ್ರಮಹೋತ್ಸವ ಸಮಾರಂಭದಲ್ಲಿ ಖ್ಯಾತಿವೆತ್ತ ಶಿಷ್ಯೆಯರೊಂದಿಗೆ, ಓರಗೆಯ ಹಿರಿಯ ಕಲಾವಿದರೊಂದಿಗೆ ’ಪಂಚಕನ್ಯಾ’ ನೃತ್ಯರೂಪಕದಲ್ಲಿ ತಮ್ಮ ಮೊಮ್ಮಗಳೊಂದಿಗೆ ಸೀತೆಯಾಗಿ ಅಭಿನಯಿಸಿ ೭೫ರಲ್ಲೂ ೨೫ರ ಹುರುಪು ತೋರಿದ್ದರು.
ಮೃಣಾಲಿನಿ ಸಾರಾಭಾಯಿಯವರ ದರ್ಪಣ ತಂಡದೊಂದಿಗೆ ರೋಮ್, ಇಟಲಿ, ಸ್ವಿಜರ್‌ಲ್ಯಾಂಡ್, ಜರ್ಮನ್, ರಷ್ಯಾ ಮುಂತಾದ ದೇಶಗಳಲ್ಲಿ ನೃತ್ಯಪ್ರದರ್ಶನ ನೀಡಿದವರು ಜಯಲಕ್ಷ್ಮಿ ಆಳ್ವ. ಒಮ್ಮೆ ಮುಂಬೈಯ ಕಲಾತರಂಗದಲ್ಲಿ ‘ಸೌಗಂಧ’ ನೃತ್ಯರೂಪಕ ಪ್ರದರ್ಶನಗೊಂಡಾಗ ಅದನ್ನು ನಿರ್ದೇಶಿಸಿದ್ದ ಜಯಲಕ್ಷ್ಮಿ ಅವರಿಗೆ ಶಿವರಾಮ ಕಾರಂತರ ಸಂಬಂಧಿ, ಮುಂಬೈಯಲ್ಲಿ ಪ್ರಸಿದ್ಧ ಉದ್ಯಮಿಯಾಗಿದ್ದ ಮಂಗಳೂರಿನ ರಾಮಕೃಷ್ಣ ಆಳ್ವರ ಪರಿಚಯವಾಯಿತು. ಒಲವು ಅಂಕುರಿಸಿ ಮದುವೆಯಾಗಿ ೧೯೫೯ರಲ್ಲಿ ಮುಂಬೈನಲ್ಲಿ ಚಿತ್ರಾಂಬಲಂ ನೃತ್ಯ ಕೇಂದ್ರವನ್ನು ಪ್ರಾರಂಭಿಸಿದರಾದರೂ, ಪತಿಯ ಆಶಯವಿದ್ದದ್ದು ಕರಾವಳಿಯ ಪಾಲಿಗೆ ನೃತ್ಯಕ್ಕೊಂದು ಶಾಸ್ತ್ರೀಯವಾದ ಆಯಾಮ ತಂದುಕೊಡುವಂತೆ ಮಂಗಳೂರಿನಲ್ಲಿ ತಮಿಳುನಾಡಿನ ಕಲಾಕ್ಷೇತ್ರದ್ದೇ ಮಾದರಿಯ ನೃತ್ಯಕೇಂದ್ರವನ್ನು ಬೆಳೆಸಬೇಕೆಂದು. ಹಾಗಾಗಿ ತಮ್ಮ ನೃತ್ಯಶಾಲೆಯನ್ನು ಕರ್ನಾಟಕಕ್ಕೆ ೧೯೭೪ರಲ್ಲಿ ವಿಸ್ತರಿಸಿ, ಮಂಗಳೂರಿನಲ್ಲಿ ಶ್ರೀದೇವಿ ನೃತ್ಯ ಕೇಂದ್ರವೆಂಬ ನೂತನ ಅಭಿದಾನದಲ್ಲಿ ನೃತ್ಯಜೀವನಕ್ಕೆ ಮೊದಲಿಟ್ಟರು. ವಿಶಾಲವಾದ ನೃತ್ಯಪರಿಸರದ ಬೆಳವಣಿಗೆಗೆಂದು ಹಿರಿಯ ಸಾಂಸ್ಕೃತಿಕ ನೇತಾರರನ್ನು ಕರೆಸಿ, ಸಭೆಯನ್ನೂ ನಡೆಸಿ ಸಮಿತಿಯನ್ನು ರಚಿಸಿದರು. ದುರದೃಷ್ಟವಶಾತ್ ಈ ಆಶಯ ಪೂರ್ಣವಾಗುವ ಮೊದಲೇ ರಾಮಕೃಷ್ಣ ಆಳ್ವರು ವಿಧಿವಶರಾದರು. ಆದರೇನಾಯಿತು? ಪತಿಯ ಕನಸನ್ನು ಪೂರೈಸುವ ಹಾದಿಯಲ್ಲಿ ದುಡಿದು ಯಶಸ್ವಿಯಾದ ಜಯಲಕ್ಷ್ಮೀ ಆಳ್ವರು ಮಗಳು ಡಾ.ಆರತಿ ಶೆಟ್ಟಿ, ಮೊಮ್ಮಗಳು ಸಾತ್ವಿಕಾ ಶೆಟ್ಟಿಯನ್ನು ನೃತ್ಯದ ಜ್ಯೋತಿಯಲ್ಲೇ ಬೆಳಗಿಸಿದರು.
ಜಯಲಕ್ಷ್ಮೀ ಅವರ ಯೌವನ ಕಾಲದ ಭಾವಚಿತ್ರಗಳನ್ನು ಕಂಡರೆ ಯಾವುದೇ ಚಲನಚಿತ್ರ ತಾರೆಯ ಸೌಂದರ್ಯವೂ ಮರೆಯಾಗಬೇಕೆಂಬಷ್ಟರ ಮಟ್ಟಿಗಿನ ಅನುಭೂತಿ ಕೊಡುತ್ತದೆ. ಗುಣಕ್ಕೊಪ್ಪುವ ಸಹಜ ಸೌಂದರ್ಯ ಅವರದ್ದು. ಸೋನಾಲ್ ಮಾನ್‌ಸಿಂಗ್, ವಹೀದಾ ರೆಹಮಾನ್, ಜಯಾ, ಶ್ರೀಲೇಖಾಮೆಹ್ತಾ, ಅದಿತಿ ಮೆಹ್ತಾ, ಮಾಯಾ ಕುಲಕರ್ಣಿ, ಪ್ರಭಾವತಿ ಶಾಸ್ತ್ರಿ, ಪೂಜಾರಾವ್, ಚಂದಿಕುಸುಮ್, ನಿಖಿತಾ ರಮಣಿ, ರೇಖಾಶ್ರೋಫ್, ಪೂರ್ಣಿಮಾ ಕಾಂತವಾಲ ಮುಂತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಪ್ರತಿಭಾವಂತ ಕಲಾವಿದರು ಇವರ ಗರಡಿಯಲ್ಲಿ ಪಳಗಿದವರೇ ! ಇಂದಿನ ನೃತ್ಯಕ್ಷೇತ್ರದ ಹಿರಿಯ ಅತಿರಥ ಮಹಾರಥರಾದ ಡಾ.ಪದ್ಮಾ ಸುಬ್ರಹ್ಮಣ್ಯಂ, ಡಾ.ವೈಜಯಂತಿಮಾಲಾಬಾಲಿಯಂತಹ ಹಲವರು ಇವರ ಓರಗೆಯ ಮಿತ್ರರು ! ಹಾಗಾಗಿಯೇ ಅದೆಷ್ಟೋ ಮಹಾನ್ ಕಲಾವಿದರು ಜಯಲಕ್ಷ್ಮಿ ಅವರ ಒಂದೇ ಒಂದು ಕರೆಗೂ ಪ್ರೀತಿಯಿಂದ ಓಗೊಟ್ಟು ಮಂಗಳೂರಿಗೆ ಓಡೋಡಿ ಬರುತ್ತಿದ್ದದ್ದಿದೆ. ಆಶೀಷ್ ಖೋಕರ್ ಅವರ ನೃತ್ಯವಾರ್ಷಿಕ ‘ಅಟೆಂಡೆನ್ಸ್’ನ ೨೦೦೮-೦೯ರ ಸಂಚಿಕೆ ಜಯಲಕ್ಷ್ಮಿ ಆಳ್ವ ಅವರಿಗೆ ಅರ್ಪಣೆಗೊಂಡಿತ್ತು.
ಕಲಾಶಿಕ್ಷಣದ, ಶೈಲಿ, ಕಲಾಪರೀಕ್ಷೆಗಳ ಸಮಗ್ರ ಚಿಂತನೆ, ಪ್ರಗತಿಪರ ದೃಷ್ಟಿಕೋನವಿದ್ದ ಜಯಲಕ್ಷ್ಮಿ ಅಮ್ಮ, ಮಕ್ಕಳಲ್ಲಿ ಕಲಿಯುವುದರಲ್ಲಿ ಸ್ಪರ್ಧೆ ಬೇಕೇ ವಿನಾ ವೇದಿಕೆ ಹತ್ತುವುದೇ ಉದ್ದೇಶ ಆಗಬಾರದು ಎನ್ನುತ್ತಿದ್ದವರು. ಹಾಗಾಗಿಯೇ ಬೇಗಬೇಗ ವೇದಿಕೆ ಹತ್ತಬೇಕು ಎಂದು ಅವಸರಿಸಿದವರಿಗೆ ನೃತ್ಯ ಕಲಿಸಿದವರಲ್ಲ. ಕಲಾಪರೀಕ್ಷೆಗಳ ಒಳಿತು-ಕೆಡುಕುಗಳೆಡೆಗೆ ಸದಾ ಚಿಂತಿಸುತ್ತಿದ್ದ ಆಳ್ವರಿಗೆ ಪರೀಕ್ಷೆಗಳ ಹೆಸರಿನಲ್ಲಿ ನೃತ್ಯಶಿಕ್ಷಕರು ನಡೆಸುವ ಹಣದ ವಹಿವಾಟು ಕೊಂಚವೂ ಸಹನೆ ತರುತ್ತಿರಲಿಲ್ಲ. ಅಂತೆಯೇ ರಂಗಪ್ರವೇಶದ ತೋರಿಕೆಯ ಆಡಂಬರ, ಗುಣಮಟ್ಟವಿಲ್ಲದ ನೃತ್ಯಪ್ರದರ್ಶನಗಳ ಬಗ್ಗೆ ಜಯಲಕ್ಷ್ಮಿ ಅವರಿಗೆ ಬಹಳ ಬೇಸರವಿತ್ತು. ಹಾಗಾಗಿಯೇ ಅವರೇ ರೂಪಿಸಿಕೊಂಡ ರಂಗಪ್ರವೇಶಕ್ರಮದಲ್ಲಿ ಹಲವು ಚಿಕಿತ್ಸಕ ನೋಟಗಳಿದ್ದವು. ಡಾ. ಪದ್ಮಾಸುಬ್ರಹ್ಮಣ್ಯಂ, ಎನ್.ಎಸ್. ಜಯಲಕ್ಷ್ಮಿ, ಪಾರ್ವತಿ ಕುಮಾರ್ ಅವರಂತಹ ನೃತ್ಯದಿಗ್ಗಜರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮಾಡಿ, ಅರ್ಹತಾ ಪತ್ರಗಳನ್ನು ಕೊಟ್ಟು ಕಡಿಮೆ ಖರ್ಚಿನಲ್ಲಿ ರಂಗಪ್ರವೇಶ ಮಾಡಿಸುವುದು ವೈಶಿಷ್ಟ್ಯವಾಗಿತ್ತು. ಪ್ರತಿಭಾವಂತ ಬಡ-ಮಧ್ಯಮ ವರ್ಗದ ಮಕ್ಕಳಿಗೆ, ಪೋಷಕರಿಗೆ ತಪ್ಪು ಮಾಹಿತಿ ಕೊಟ್ಟು ‘ಶಾಸ್ತ್ರೀಯ ನೃತ್ಯವೆಂದರೆ ದುಬಾರಿ’ ಎಂಬ ಭಾವನೆ ಮೂಡಿಸಿದರೆ ಒಂದಾನೊಂದು ಕಾಲದಲ್ಲಿದ್ದಂತೆ ನೃತ್ಯವನ್ನು ನಾವೇ ಕೆಳಮಟ್ಟಕ್ಕೆ ದೂಡಿದಂತಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಿದ್ದ ಅವರು, ನಾವು ಕೊಡುವ ವಿದ್ಯೆ ಶಾಶ್ವತ ಆಗಿರಬೇಕೇ ವಿನಾ ಆಡಂಬರದ ಖರ್ಚು ಅಲ್ಲ, ಅದರಲ್ಲೂ ಇಂದಿನ ಕಾಲದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಆಯಾಯ ಪ್ರದೇಶದ ಆಡಳಿತ ಭಾಷೆಯನ್ನುಪಯೋಗಿಸಿ ಜನರಿಗೆ ತಿಳಿವಳಿಕೆ ಕೊಡುವ ಕೆಲಸ ಆಗಬೇಕು ಎಂದು ಆಗಾಗ್ಗೆ ಹೇಳುತ್ತಿದ್ದರು.
ನೃತ್ತದ ಅಂಶ ನೃತ್ಯದಲ್ಲಿ ಯಾವ ಪ್ರಮಾಣದಲ್ಲಿರಬೇಕು ಎಂಬ ಹದವನ್ನರಿತಿದ್ದ ಜಯಲಕ್ಷ್ಮಿ ಆಳ್ವರು ಇಂದಿನ ಕಾಲದಲ್ಲಿ ವರ್ಣದಂತಹ ನೃತ್ಯಬಂಧಗಳಲ್ಲಿ ಭಾವಾಭಿನಯದ ವ್ಯಾಪ್ತಿಯ ಖಚಿತತೆಗೆ ಹೊಂದದಂತೆ ನಿರ್ಭಾವುಕವಾಗಿ ಜತಿಗಳ ಸಂಯೋಜನೆ ಮಾಡಿ ರಸಭಂಗವನ್ನುಂಟು ಮಾಡುತ್ತಾರೆ ಎಂದು ಅಷ್ಟೋ ಸಲ ಆಪ್ತವಾಗಿ ಹೇಳುತ್ತಿದ್ದರು. ಅಷ್ಟೇ ಅಲ್ಲ, ಇಂದಿನ ಗುರುಪರಂಪರೆಗಳ ಮೇಲೆ ಅತೀವಿಶ್ವಾಸವಿರಿಸಿಕೊಂಡು ಕಲೆಯನ್ನು ಸಾಂಪ್ರದಾಯಿಕತೆಯ ಹೆಸರಿನಲ್ಲಿ ಕೆಳದೂಡುವುದರೆಡೆಗೆ ಅತೀವ ಸಂಕಟವಿತ್ತು. ಆಗೆಲ್ಲಾ ತಮ್ಮ ಗುರುಗಳೊಂದಿಗಿನ ಒಡನಾಟದಲ್ಲಿ ನೃತ್ಯಶಿಸ್ತಿನ ನಡವಳಿಕೆಯ ಜೀವನವನ್ನು ಹಂಚಿಕೊಳ್ಳುತ್ತಿದ್ದ ಜಯಲಕ್ಷ್ಮಿ ಅಮ್ಮ, ಅಂದಿನ ಪಾಠ ಪ್ರವಚನದ ಮಟ್ಟ, ಪ್ರಬುದ್ಧತೆಯನ್ನು ನೆನೆದು ಹನಿಗೂಡುತ್ತಿದ್ದರು.
ನೃತ್ಯದ ಕುರಿತು ಆಳವಾದ ಚಿಕಿತ್ಸಕ ನೋಟಗಳಿಂದಲೇ ಗಮನ ಸೆಳೆದಿದ್ದ ಜಯಲಕ್ಷ್ಮಿಆಮ್ಮ, ಕಲಾಶೈಲಿಗಳ ಬಗ್ಗೆ ಇರುವಂತಹ ವಿರೋಧಾಭಾಸಗಳಿಂದಾಗಿ ಕಲಿಯುವವರು ಸಮಸ್ಯೆಗೆ ಒಳಗಾಗುತ್ತಾರೆಂದು ಆಗಾಗ್ಗೆ ಹೇಳುತ್ತಿದ್ದರು. ‘ನೃತ್ಯಶೈಲಿ ಅಂದರೆ ನಾವು ಕಲಿತಿದ್ದನ್ನು ಯಾವ ತರಹ ಬಳಸಿಕೊಳ್ಳುತ್ತೇವೆಯೋ ಅದು. ಸಂಯೋಜನೆ ಮಾಡುವುದು ಶೈಲಿಯೇ ಹೊರತು ಕಲಿಯುವಾಗಲೇ ಮಾಡಿಕೊಳ್ಳುವುದಲ್ಲ’ ಎಂಬುದು ಅವರ ಬಲವಾದ ಅನಿಸಿಕೆ. ‘ಭರತನಾಟ್ಯದ ಅಭಿನಯವೆಂದರೆ ಏಕಪಾತ್ರಾಭಿನಯ ಅಲ್ಲ. ಆದರೆ ಅಭಿನಯದಲ್ಲಿ ಅದೇ ಜಾಸ್ತಿಯಾಗಿದೆ. ಬೇರೆ ಬೇರೆ ಪಾತ್ರಗಳನ್ನು ಒಬ್ಬಳೇ ಒಂದೇ ಬಾರಿಗೆ ಮಾಡುತ್ತಾ ಹೋಗುವುದು ಇಂದಿನ ಭರತನಾಟ್ಯದ ದುರಂತ’ ಎನ್ನುವುದು ಅವರ ಖಚಿತವಾದ ಅಭಿಪ್ರಾಯವಾಗಿತ್ತು. ಹಾಗೆಂದು ಈ ಕುರಿತು ಎಂದಿಗೂ ಬಿರುಸಾಗಿ ವೇದಿಕೆಯಲ್ಲಿ ಬಿಡುನುಡಿಯಾಡಿದವರಲ್ಲ. ಕಲೆಯಲ್ಲಾಗುತ್ತಿರುವ ಅಪಸವ್ಯಗಳ ಬಗ್ಗೆ ನೊಂದುಕೊಂಡರೂ ಸರಿಯೇ, ಮತ್ತೊಬ್ಬರ ಮನ ನೋಯಿಸುವ ಒಂದಿನಿತೂ ಸಂಗತಿಗಳಿಗೆ ಅವಕಾಶ ಕೊಡ ಸಜ್ಜನಿಕೆಯ ಮೃದುಮೂರ್ತಿ ಈ ತಾಯಿ.
ಚಿತ್ರಾಂಬಲ ಕೊರವಂಜಿ, ಸ್ವಾತಿ ತಿರುನಾಳ ರಾಮಾಯಣ, ಕೃಷ್ಣಕೀರ್ತನ, ಕೃಷ್ಣತುಲಾಭಾರ, ವಸಂತಾವಳಿ, ಬಾಲರಾಮಾಯಣ, ನವಗ್ರಹ ನವಸಂಧಿ, ನೃತ್ಯಗೋವಿಂದ, ಕರಾವಳಿಗಾಥಾ, ಪಂಚಕನ್ಯಾ ಮುಂತಾದುವುಗಳು ಜಯಲಕ್ಷ್ಮೀ ಆಳ್ವರು ಸಂಯೋಜಿಸಿದ ನೃತ್ಯಬ್ಯಾಲೆಗಳು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ(೧೯೮೬), ನಾಟ್ಯರಾಣಿ ಶಾಂತಲಾ (೧೯೯೫), ಡಾ.ಡಿ.ವಿರೇಂದ್ರ ಹೆಗ್ಗಡೆಯವರಿಂದ ದಕ್ಷಿಣ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೭), ಅಖಿಲ ಕರ್ನಾಟಕ ನೃತ್ಯಕಲಾ ಪರಿಷತ್‌ನ ನೃತ್ಯಕಲಾಶಿರೋಮಣಿ(೨೦೦೪), ಉಡುಪಿ ಪೇಜಾವರ ಮಠದಿಂದ ರಾಮವಿಠ್ಠಲ ಪ್ರಶಸ್ತಿ(೨೦೦೫), ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡಶ್ರೀ(೨೦೦೩), ಮೈಸೂರಿನ ಭಾರತೀಯ ನಾಟ್ಯಕಲಾ ಪರಿಷತ್‌ನ ನೃತ್ಯಕಲಾಸಿಂಧು(೨೦೦೦), ಉಡುಪಿ ಸಂಸ್ಕಾರ ಭಾರತಿಯ ನಾಟ್ಯಕಲಾರತ್ನ(೨೦೦೧), ಚೆನ್ನೈಯ ಸ್ತ್ರೀರತ್ನ(೧೯೯೮) ಮತ್ತು ನಾಟ್ಯ ಕಲಾಸರಸ್ವತಿ(೧೯೪೯), ಮುಂಬೈನ ಸೇವಾಭಾರಿಯಿಂದ ಜೀವಮಾನ ಸಾಧಕಿ (೨೦೧೧), ಕರ್ನಾಟಕಶ್ರೀ(೨೦೦೩), ರಾಜ್ಯೋತ್ಸವ ಪ್ರಶಸ್ತಿ, ತುಳು ಕೂಟ, ರೋಟರಿ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾ ಪುರಸ್ಕಾರ- ಸನ್ಮಾನ ಇವರ ಕಲಾಕೌಸ್ತುಭಕ್ಕೆ ಪಾತ್ರವಾದ ಪ್ರಶಸ್ತಿಕುಸುಮಗಳು.
ನೃತ್ಯದ ಮೇಲೆ ಆಸಕ್ತಿ ಇದ್ದ ಮಾತ್ರಕ್ಕೆ ಎಲ್ಲರೂ ಕಲಾವಿದರೇ ಆಗಬೇಕೆಂದೇನೂ ಇಲ್ಲ. ಕೆಲವರಿಗೆ ಕಲಾವಿದರಾಗಿ ಬೆಳೆಯುವ ಯೋಗವಿರುತ್ತದೆ. ಮತ್ತೂ ಕೆಲವರಿಗೆ ಅದನ್ನು ಕಲಿಸುವ ಕಲೆಯಿರುತ್ತದೆ; ಮತ್ತೊಂದಷ್ಟು ಮಂದಿಗೆ ಅದನ್ನು ಉತ್ತಮವಾಗಿ ಬರೆವಣಿಗೆಯಲ್ಲಿ ಕಟ್ಟಿಕೊಡುವ ಸಾಮರ್ಥ್ಯವಿರುತ್ತದೆ. ಕೆಲವರಿಗೆ ಅದರೊಳಗೆ ಹುಡುಕಿ ಹೊಸತನ್ನು, ಮರೆಯಾಗಿದ್ದನ್ನು ತೆಗೆಯುವ ತಾಕತ್ತು ಇರುತ್ತದೆ, ವಿಮರ್ಶೆ ಮಾಡುವ ಶಕ್ತಿ ಇರುತ್ತದೆ. ಅದರಲ್ಲಿ ಈಗೀಗ ಒಳ್ಳೆಯ ವಿಮರ್ಶೆ ಬರೆಯುವವರು ಕಡಿಮೆ ಆಗಿದ್ದಾರೆ. ಮೊದಲು ಕಲೆಯನ್ನು ಅನುಭವಿಸಬೇಕು. ಅದರ ಒಳ ಹೂರಣ ಗೊತ್ತಿದ್ದರೆ ಮಾತ್ರ ಏನನ್ನೇ ಆದರೂ ಬರೆಯುವುದಕ್ಕೆ ಸಾಧ್ಯ. ಯಾವುದರಲ್ಲಿ ಯಾರಿಗೆ ಹೆಚ್ಚು ಶ್ರಮ, ಪ್ರತಿಭೆ ಇದೆಯೋ ಅದನ್ನು ಮಾಡಬೇಕು. ಒಟ್ಟಿನಲ್ಲಿ ಕಲೆಗೆ ಎಲ್ಲವೂ ಬೇಕು ಎಂದು ನೂಪುರ ಭ್ರಮರಿಯ ಬರೆವಣಿಗೆ, ಸಂಪಾದಕ ವರ್ಗದ ಗುಣಮಟ್ಟದ ಶ್ರಮ-ಉತ್ಸಾಹಗಳಿಗೆ ಸದಾ ನೀರೆರೆಯುತ್ತಿದ್ದ ಜಯಲಕ್ಷ್ಮಿ ಅಮ್ಮ ಇಂದು ಮರೆಯಾಗಿದ್ದಾರೆ ನಿಜ. ಆದರೆ ಅವರ ಸ್ಮರಣೆ, ಚಿಂತನೆ ಎಂದೆಂದಿಗೂ ಹಸಿರು.