ಅಂಕಣಗಳು

Subscribe


 

ಕಲಾಪತ್ರಕರ್ತ ಎ. ಈಶ್ವರಯ್ಯ

Posted On: Wednesday, January 2nd, 2019
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ಸಂಗೀತ ಛಾಯಾಗ್ರಹಣ, ಲಲಿತಕಲೆಗಳ ವಿಮರ್ಶೆ ಕುರಿತಂತೆ ತಲ್ಪಸ್ಪರ್ಶಿಯಾದ ಅರಿವು ಹೊಂದಿದ್ದ ಹಿರಿಯ ಪತ್ರಕರ್ತ ಎ. ಈಶ್ವರಯ್ಯ (೭೮)

ಜನನ : ೧೯೪೦ರ ಆಗಸ್ಟ್ ೧೨

ನಿಧನ : ವಯೋಸಹಜ ಅಸೌಖ್ಯದಿಂದ ಡಿಸೆಂಬರ್ ೩೦, ೨೦೧೮ರಂದು ಬೆಳಗ್ಗೆ ಉಡುಪಿಯ ವಿಬುಧಪ್ರಿಯನಗರದ ತಮ್ಮ ಸ್ವಗೃಹದಲ್ಲಿ

ಕುಟುಂಬ : ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿ

ಮನೆತನ : ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರದ ಜಮೀನುದಾರ ಹಾಗೂ ಪಟೇಲರಾಗಿದ್ದ ಅನಂತಪುರ ನಾರಾಯಣಯ್ಯರ ಪುತ್ರ. ಸರೋವರ ಕ್ಷೇತ್ರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆ ಆಡಳಿಕ್ಕೊಳಪಡುವ ಮೊದಲು ಇದ್ದ ಆನುವಂಶಿಕ ಮೊಕ್ತೇಸರರ ಕುಟುಂಬ. ಕ್ಷೇತ್ರದ ಭಂಡಾರ ಸಾಮಗ್ರಿಗಳನ್ನು ಎ.ಈಶ್ವರಯ್ಯ ಅವರ ಮೂಲ ತರವಾಡು ಮನೆಯಲ್ಲೇ ಸಂರಕ್ಷಿಸಿಡಲಾಗುತ್ತಿದೆ.

ಶಿಕ್ಷಣ : ಬದಿಯಡ್ಕ ಪಂಚಾಯಿತಿ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಉಡುಪಿ ಎಂಜಿ‌ಎಂ ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿ. ಪ್ರಾಥಮಿಕ ವಿದ್ಯಾಭ್ಯಾಸದ ಕಾಲದಲ್ಲಿಯೇ ಕರ್ನಾಟಕ ಸಂಗೀತಾಭ್ಯಾಸವನ್ನು ಮಾಡಿದ್ದ ಅವರು ಕೊಳಲು ಸೇರಿದಂತೆ ಹಲವು ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಯಕ್ಷಗಾನ ಭಾಗವತಿಕೆ ತಿಳಿದವರಾಗಿದ್ದರು.

ಆಸಕ್ತಿ, ಅನುಭವ, ವೃತ್ತಿ : ಎಳವೆಯಿಂದಲೇ ಸಾಹಿತ್ಯ, ನಾಟಕದಲ್ಲಿ ಮೇಲೆ ಆಸಕ್ತಿ ಹೊಂದಿದ್ದ ಈಶ್ವರಯ್ಯನವರು ತನ್ನ ಸಹೋದರ ಶ್ರೀಕೃಷ್ಣಯ್ಯ ಅನಂತಪುರ ಅವರೊಂದಿಗೆ ಶಾಲೆಯಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಪದವಿಯ ಬಳಿಕ ಕೆಲವು ವರ್ಷ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರ ಲೇಖನಗಳು ಸುಧಾ, ಮಯೂರ, ಕಸ್ತೂರಿ, ಪ್ರಜಾಮತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಆ ದಿನಗಳಲ್ಲಿ ಉಡುಪಿಯ ಸಾಹಿತ್ಯ ದಿಗ್ಗಜ ಕು.ಶಿ.ಹರಿದಾಸ ಭಟ್ಟರು ತಮ್ಮ ಈ ವಿದ್ಯಾರ್ಥಿಯ ಪ್ರತಿಭೆಯನ್ನು ಬಹುವಾಗಿ ಮೆಚ್ಚಿ ಪತ್ರಿಕಾರಂಗ ಸೇರುವಂತೆ ಈಶ್ವರಯ್ಯನವರಿಗೆ ಸೂಚನೆ ನೀಡಿ ಜತೆಗೆ ಶಿಫಾರಸ್ಸು ಮಾಡಿದ್ದರು. ಹಾಗೆಂದೇ ನೇರವಾಗಿ ಅವರು ಪ್ರವೇಶಿಸಿದ್ದು ಪತ್ರಿಕೋದ್ಯಮವನ್ನು. ೧೯೭೨ರಲ್ಲಿ “ಉದಯವಾಣಿ’ಗೆ ಸಹಾಯಕ ಸಂಪಾದಕರಾಗಿ ಸೇರಿದ ಈಶ್ವರಯ್ಯನವರು, ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ “ಉದಯವಾಣಿ’ ಸಮೂಹದಲ್ಲಿಯೇ ಸೇವೆ ಸಲ್ಲಿಸಿದರು. ಸೇರಿದ ಕೆಲವೇ ತಿಂಗಳಲ್ಲಿ ‘ತುಷಾರ’ ಮಾಸಪತ್ರಿಕೆಯ ಸಂಪಾದಕರಾದರು. ನಾಡಿನ ಪ್ರಸಿದ್ಧ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳನ್ನು ’ತುಷಾರ’ದ ಮೂಲಕವೇ ಅವರು ಮೊದಲು ಬೆಳಕಿಗೆ ತಂದಿದ್ದರು. ಪೂರ್ಣಚಂದ್ರ ತೇಜಸ್ವಿ ಅವರ ’ಕರ್ವಾಲೊ’ ಇದಕ್ಕೊಂದು ಉತ್ತಮ ನಿದರ್ಶನ. ಕನ್ನಡದ ಬೇರೆ ಮಾಸ ಪತ್ರಿಕೆಗಳ ಸಂಪಾದಕರು ಆ ದಿನಗಳಲ್ಲಿ ಪ್ರಕಟಿಸಲು ಅನುಮಾನಿಸಿದ್ದ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಹಸ್ತಪ್ರತಿಯನ್ನು ಓದಿ ಮೆಚ್ಚಿದ ಈಶ್ವರಯ್ಯನವರು ಅದನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ಆ ದಿನಗಳಲ್ಲಿ ಅದು ದೊಡ್ಡ ಮಟ್ಟದ ಸಾಹಿತ್ಯ ಚರ್ಚೆಗೆ ಅನುಕೂಲವಾಯಿತು. ತುಷಾರದಲ್ಲಿ ಅವರು ಬರೆಯುತಿದ್ದ ’ಸರಸ’ ಲಘು ಹಾಸ್ಯಮಿಶ್ರಿತ ಲಲಿತ ಪ್ರಬಂಧಗಳ ಅಂಕಣ ಭಾರೀ ಜನಪ್ರಿಯತೆಯನ್ನು ಪಡೆದಿದ್ದು, ಪುಸ್ತಕ ರೂಪದಲ್ಲೂ ಹೊರ ಬಂದಿತ್ತು. ತಮ್ಮ ಪತ್ರಿಕೆಯ ಮೂಲಕ ಕಲಾತ್ಮಕ ಛಾಯಾಚಿತ್ರಗಳಿಗೂ ವಿಶೇಷ ಅವಕಾಶ ನೀಡುತಿದ್ದ ಅವರು, ಚಿತ್ರ-ಲೇಖನವೆಂಬ ಪ್ರಕಾರಕ್ಕೂ ವಿಶೇಷ ಅವಕಾಶ ಕಲ್ಪಿಸುತಿದ್ದರು. ಇದರಿಂದ ತೇಜಸ್ವಿಯವರ ಛಾಯಾಗ್ರಹಣದ ಪ್ರತಿಭೆಯೂ ಅನಾವರಣಗೊಂಡಿತು.

ಲೇಖಕರಾಗಿ, ಕಥೆಗಾರರಾಗಿ ಖ್ಯಾತಿ ಪಡೆದಷ್ಟೇ, ವಿಮರ್ಶೆ ಹಾಗೂ ಒಳ್ಳೆಯ ಛಾಯಾಗ್ರಾಹಕರೂ ಆಗಿ ಪರಿಣಿತಿಯನ್ನು ಪಡೆದಿದ್ದವರು. ಛಾಯಾಗ್ರಹಣದ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿದ್ದ ಅವರು, ಈ ಕುರಿತು ಅಂಕಣವನ್ನೂ ಬರೆಯುತ್ತಿದ್ದರು. ’ತುಷಾರ’ದ ಸಂಪಾದಕರಾಗಿ ಎರಡು ದಶಕಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿದ್ದ ಅವರು ಪತ್ರಿಕೆಯ ಮೂಲಕ ನಾಡಿನ ನೂರಾರು ಯುವ-ಪ್ರತಿಭಾನ್ವಿತ ಬರಹಗಾರರು, ಸಾಹಿತಿಗಳನ್ನು ಬೆಳಕಿಗೆ ತಂದಿದ್ದರು. ಬಳಿಕ ಉದಯವಾಣಿ ಪುರವಣಿ ವಿಭಾಗ ಸಂಪಾದಕರಾಗಿ ಪತ್ರಿಕೆ ಗುಣಮಟ್ಟ ಹೆಚ್ಚಿಸುವಲ್ಲಿ ಕಾರಣೀಭೂತರಾದರು. ಪತ್ರಕರ್ತರಾಗಿ ಸಂಗೀತ, ಯಕ್ಷಗಾನ, ಲಲಿತಕಲಾರಂಗಗಳಿಗೆ ವಿಶೇಷ ಆದ್ಯತೆ ನೀಡುತಿದ್ದ ಅವರು ಪ್ರತಿ ಶುಕ್ರವಾರದ “ಕಲಾವಿಹಾರ’ದಲ್ಲಿ ಗುಣಮಟ್ಟದ ಲೇಖನ, ಸಂವಾದಗಳನ್ನು ನಡೆಸಿ ಕಲಾಕ್ಷೇತ್ರದ ಬೆಳವಣಿಗೆಯ ಸಂಬಂಧ ಅಪಾರ ಶ್ರಮ ವಹಿಸಿದ್ದರು. ಕಲಾವಿಮರ್ಶೆಗೆಂದೇ ವಾರದಲ್ಲಿ ಪತ್ರಿಕೆಯ ಒಂದು ಪುಟವನ್ನು ‘ಲಲಿತರಂಗ’ ಎಂಬ ಹೆಸರಲ್ಲಿ ಮೀಸಲಿಟ್ಟರು. ನೃತ್ಯ ಪ್ರದರ್ಶನ, ನಾಟಕ, ಯಕ್ಷಗಾನ ಪ್ರದರ್ಶನ, ತಾಳಮದ್ದಳೆ -ಹೀಗೆ ಹಲವು ಪ್ರಕಾರಗಳ ಸದಭಿರುಚಿಯ ವಿಮರ್ಶೆ ಈ ಪುಟದಲ್ಲಿ ಪ್ರಕಟವಾಗತೊಡಗಿತು. ಎಲೆಮರೆಯ ಹೂವಿನಂತಿದ್ದ ಅನೇಕ ಕಲಾವಿದರು ಪರಿಚಯ ಸಾಧ್ಯವಾಯಿತು. ಆಂಗ್ಲ ಭಾಷೆ, ಸಾಹಿತ್ಯದಲ್ಲಿ ಅಪಾರ ಜ್ಞಾನ ಹೊಂದಿದ್ದ ಇವರು ಬರೆಯುತ್ತಿದ್ದ ಸಿನೆಮಾ, ಸಂಗೀತ ಲೇಖನಗಳು ಫಿಲ್ಮ್‌ಫೇರ್ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಉದಯವಾಣಿ’ಯಲ್ಲಿ “ಈಶ’ ಕಾವ್ಯನಾಮದಲ್ಲಿ ರಾಜಕೀಯ ವಿಶ್ಲೇಷಣಾತ್ಮಕ ಬರೆಹಗಳನ್ನು ಬರೆಯುತ್ತಿದ್ದರು. ಹೀಗೆ ಉದಯವಾಣಿ ಮಣಿಪಾಲದಲ್ಲಿ ಸುಮಾರು ಮೂರೂವರೆ ದಶಕ ಕರ್ತವ್ಯ ಸಲ್ಲಿಸಿ ನಿವೃತ್ತರಾದರು.

ನಿವೃತ್ತಿಯ ನಂತರವೂ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದ್ದಾಗಿರಲಿಲ್ಲ. ಫೋಟೋ ಕ್ಲಬ್ ಸ್ಥಾಪಿಸಿದ ಈಶ್ವರಯ್ಯನವರು ಅಭಿರುಚಿ ಸಂಘಟನೆಯ ಸ್ಥಾಪಕರೂ ಹೌದು. ಮಂಗಳೂರು ಸಂಗೀತ ಸಂಗಮ ಅಧ್ಯಕ್ಷಸ್ಥಾನ, ಮಂಗಳೂರು ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಈಶ್ವರಯ್ಯ ಅವರನ್ನು ಅರಸಿಕೊಂಡು ಬಂದಿತ್ತು. ನಿವೃತ್ತರಾದ ಬಳಿಕ ೨೦೦೮ರಿಂದ ಉಡುಪಿಯಲ್ಲಿ ರಾಗಧನಶ್ರೀ ಸಂಗೀತ ಮಾಸಿಕದ ಸಂಪಾದಕರಾಗಿದ್ದದಷ್ಟೇ ಅಲ್ಲದೆ, ’ರಾಗಧ್ವನಿ’ ಸಂಸ್ಥೆ ಹುಟ್ಟುಹಾಕಿದ್ದರು. ಯುವ ಬರಹಗಾರರು, ಸಾಹಿತಿಗಳು ಹಾಗೂ ಯುವ ಛಾಯಾಗ್ರಾಹಕರಿಗೆ ಸದಾ ಬೆಂಬಲವಾಗಿ ನಿಲ್ಲುತಿದ್ದ ಅವರು ನೇರನಿಷ್ಟುರವಾದ ನಡೆನುಡಿಗೂ ಹೆಸರಾಗಿದ್ದರು. ಆಳವಾದ ಒಳನೋಟ, ವಿದ್ವತೂರ್ಣ ವಿಚಾರ ಮಂಡಿಸುವ ವಾಗ್ಮಿಗಳೂ ಆಗಿದ್ದ ಈಶ್ವರಯ್ಯನವರ ಭಾಷಣ, ಉಪನ್ಯಾಸಗಳು ಅನೇಕ ಕಲಾಮನಸ್ಸುಗಳಿಗೆ ಮನಸ್ಸಿಗೆ ಪ್ರಕಾಶವನ್ನು ತೋರಿವೆ.

ಪ್ರಶಸ್ತಿ-ಪುರಸ್ಕಾರ, ಅಭಿನಂದನೆ : ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಮಂಗಳೂರಿನ ರಾಜ್ಯಮಟ್ಟದ ಸಂದೇಶ ಪ್ರಶಸ್ತಿ, ಲಲಿತಕಲಾ ಅಕಾಡೆಮಿ, ಪೇಜಾವರ ಮಠದ ರಾಮವಿಟ್ಟಲ ಪ್ರಶಸ್ತಿ ಪೊಲ್ಯ ಯಕ್ಷಗಾನ ಪ್ರಶಸ್ತಿ, ವ್ಯಾಸ ಸಾಹಿತ್ಯ ಪ್ರಶಸ್ತಿ, ಮೂಡಬಿದರೆಯ ನುಡಿಸಿರಿ ಪ್ರಶಸ್ತಿ ಮುಂತಾದ ಅನೇಕ ಸನ್ಮಾನ, ಗೌರಗಳು. ಈಶ್ವರಯ್ಯನವರಿಗೆ ೭೦ ತುಂಬಿದಾಗ ೨೦೧೦ರಲ್ಲಿ ಉಡುಪಿ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಇವರ ಎಲ್ಲ ಕ್ಷೇತ್ರಗಳ ಬಗೆಗೆ ವಿಚಾರ ಸಂಕಿರಣ, ಅಭಿನಂದನೆ ನಡೆದಿತ್ತು. ಕಳೆದೆರಡು ವರುಷಗಳಿಂದ ಈಶ್ವರಯ್ಯನವರ ಹೆಸರಿನಲ್ಲಿ ವಿಮರ್ಶಾ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತಿದೆ. ಇವರ ಬದುಕು-ಬರೆಹಗಳ ಬಗ್ಗೆ ನಿತ್ಯಾನಂದ ಪಡ್ರೆ ಅವರು ಕೃತಿಯೊಂದನ್ನು ರಚಿಸಿದ್ದಾರೆ.

ನೂಪುರ ಭ್ರಮರಿಯೊಂದಿಗಿನ ನಂಟು : ನೂಪುರ ಭ್ರಮರಿಯು ಕಲಾಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಮರ್ಶಾ ಪ್ರಶಸ್ತಿಯೊಂದನ್ನು ೨೦೧೧ರಲ್ಲಿ ಆರಂಭಿಸಿದಾಗ, ಬೆನ್ನುತಟ್ಟಿ ಪ್ರೋತ್ಸಾಹಿಸಿದುದಷ್ಟೇ ಅಲ್ಲದೆ, ಸೂಕ್ತ ಮಾರ್ಗದರ್ಶನವನ್ನು ಮಾಡಿದ್ದರು ಈಶ್ವರಯ್ಯನವರು. ಅವರನ್ನೇ ಸನ್ಮಾನ ಸ್ವೀಕರಿಸಲು ಆಹ್ವಾನಿಸಿದಾಗ ತನಗಿಂತಲೂ ಯುವ ಅಥವಾ ಎಲೆಮರೆಯ ಬರೆಹಗಾರರನ್ನುಗೆ ಪಾತ್ರವಾಗಿತ್ತು.ಗುರುತಿಸಲು ಸೂಚನೆ ನೀಡಿ ಕ್ಷೇತ್ರವನ್ನು ಬೆಳೆಸುವ ಕುರಿತು ಕಾಳಜಿ ವ್ಯಕ್ತಪಡಿಸಿದ್ದರು. ೨೦೧೭ರಲ್ಲಿ ನಿತ್ಯಾನಂದ ರಾವ್ ಅವರ ಮುಂದಾಳುತನದಲ್ಲಿ ಸನಾತನ ನಾಟ್ಯಾಲಯದಲ್ಲಿ ಜರುಗಿದ ಈಶ್ವರಯ್ಯನವರ ಜನ್ಮದಿನ ಸಂಭ್ರಮಾಚರಣೆಯ ಪ್ರಯುಕ್ತದ ವಿಮರ್ಶಕರ ಗೋಷ್ಠಿಯಲ್ಲಿ ಪಾಲ್ಗೊಂಡು ವಿಮರ್ಶೆಯ ಕುರಿತ ನೆಲೆಗಳ ಬಗ್ಗೆ ಮಾತನಾಡುವ ಸದವಕಾಶ ನೂಪುರ ಭ್ರಮರಿಯ ಸಂಪಾದಕಿ ಡಾ.ಮನೋರಮಾ ಬಿ.ಎನ್ ಅವರಿಗೆ ಅಯಾಚಿತವಾಗಿಯೇ ಲಭಿಸಿತ್ತು. ಖ್ಯಾತನಾಮರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೇಲಾಗಿ ಈಶ್ವರಯ್ಯನವರನ್ನು ಕಂಡು ಭೇಟಿ ಮಾಡಿ ಆಶೀರ್ವಾದ ಪಡೆದು ಅವರ ಹೆಸರಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ. ಮನೋರಮಾ ಅವರೊಂದಿಗೆ ಬಹಳ ಪ್ರೀತಿಯಿಂದಲೇ ಮಾತನಾಡಿ, ಆಲಿಸಿದ್ದರು ಈಶ್ವರಯ್ಯನವರು. ಡಾ.ಮನೋರಮಾ ಬಿ ಎನ್ ಅವರು ಆಡಿದ ವಿಮರ್ಶೆಯ ಕುರಿತ ಒಳನೋಟ ನೆರೆದವರಲ್ಲಿ ಅಪಾರ ಮೆಚ್ಚುಗೆಯನ್ನು ಗಳಿಸಿತ್ತು. ಆ ನಂತರದಲ್ಲಿಯೂ ಉದಯವಾಣಿಯ ಕಲಾವಿಹಾರ ವಿಭಾಗದವರು ಕೇಳಿ ಬರೆಸಿದ್ದ ಡಾ.ಮನೋರಮಾ ಅವರು ಲೇಖನಕ್ಕೆ ಸಂಬಂಧಿಸಿದಂತೆ ಕರಾವಳಿಯ ಕೆಲವು ನೃತ್ಯಕಲಾವಿದರು ಮನೋಕ್ಲೇಶವನ್ನೆಬ್ಬಿಸಿಕೊಂಡು ಈಶ್ವರಯ್ಯನವರ ತನಕ ದೂರು ತೆಗೆದುಕೊಂಡು ಹೋದಾಗ ಅವರು ವಿಮರ್ಶೆಯ ಸಾಧ್ಯತೆ ಬಾಧ್ಯತೆಗಳನ್ನು ಮನದಟ್ಟು ಮಾಡಿಸಿ ನ್ಯಾಯಸಮ್ಮತವಾಗಿಯೇ ಆ ದೂರನ್ನು ಪಕ್ಕಕ್ಕೆ ಸರಿಸಿದ್ದರು ಎಂದು ತಿಳಿದುಬಂದಿತ್ತು. ಕಲೆ ಮತ್ತು ವಿಮರ್ಶೆಯ ಕುರಿತ ಅವರ ಪ್ರೀತಿ, ಅದನ್ನು ಪ್ರೀತಿಸಿಕೊಂಡು ಬರುವವರ ಕಳಕಳಿಯ ಬಗೆಗೆ ಅವರಿಗೆ ಅಪಾರ ನಂಬಿಕೆಯಿತ್ತು.

Leave a Reply

*

code