ಅಂಕಣಗಳು

Subscribe


 

‘ನೃತ್ಯಪ್ರಾಚೀನತೆಯ ಕಡೆಗೆ ದೃಷ್ಟಿ ಹರಿಸಿ ವ್ಯಾಖ್ಯಾನಿಸಿ’

Posted On: Saturday, April 27th, 2013
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ನೃತ್ಯಸಂಶೋಧನ ಸಮ್ಮೇಳನದ ಅಧ್ಯಕ್ಷೀಯ ಭಾಷಣ

ಸುಧಾರಣೆಗಳು, ಬದಲಾವಣೆಗಳು ಹಲವು ಇರುತ್ತವೆ. ಆದರೆ ಮೂಲದಲ್ಲಿರುವುದನ್ನು ಗುರುತಿಸುವುದು ಬಹಳ ಮುಖ್ಯ. ಅಭಿಜಾತ ಕಲೆ-ಸಾಹಿತ್ಯವು ಭಾರತೀಯ ಸಂಸ್ಕೃತಿಯ ‘ಮಾಸ್ಟರ್ ಮೈಂಡ್’. ಪ್ರಾಚೀನ ಕಾವ್ಯಗಳಲ್ಲಿ ಬಳಸಿರುವ ನೃತ್ಯಸಂಬಂಧಿಯಾದ ವಿವರಗಳು ಮನೋಜ್ಞವಾಗಿವೆ. ಹೊಸರೀತಿಯಲ್ಲಿ ಬಗೆಬಗೆಯ ಆಕರ್ಷಕವಾದ ಸೊಗಸಿನ ಸಂಗತಿಗಳು ಕಾವ್ಯಗಳಲ್ಲಿ ದೊರೆಯುತ್ತವೆ. ನೃತ್ಯಪರಂಪರೆಯ ಶಾಸ್ತ್ರ, ಆಗಮಗಳು ಹಳತು ಇರುವುದಷ್ಟೂ ಶುದ್ಧರೂಪದಲ್ಲಿರುತ್ತವೆ. ಅವುಗಳಲ್ಲಿ ಕಳಂಕ, ಕಳಪೆ, ಮಾಲಿನ್ಯ ಬಹಳಷ್ಟು ಕಡಿಮೆ.

ಅಂತಹ ಶುದ್ಧರೂಪದಲ್ಲಿರುವುದನ್ನು ವಿಶ್ವರೂಪಕ್ಕೆ ವ್ಯಾಖ್ಯಾನ ಮಾಡುವ, ತಿಳಿಯುವ ಕಾರ್ಯವಾಗಬೇಕು. ಅದರ ಪ್ರಾಚೀನತೆಯ ಕಡೆಗೆ ದೃಷ್ಟಿ ಹರಿಸಿದಷ್ಟೂ ಗುರುತಿಸಬೇಕು, ಓದಿ ಸಂತೋಷಪಡಬೇಕು, ಸಂಶೋಧಿಸಬೇಕು, ವ್ಯಾಖ್ಯಾನಿಸಬೇಕು. ಅಷ್ಟೇ ಏಕೆ, ಪುತಿನ ಅವರ ಗೋಕುಲ ನಿರ್ಗಮನ ಅಥವಾ ಅಂತಃಪುರ ಗೀತೆಗಳಂತಹ ಕಾವ್ಯವನ್ನು ಬಳಸಿ ನರ್ತನವಾಡುವುದು ಅದೆಷ್ಟು ಸೊಗಸಲ್ಲವೇ?
ಕರ್ನಾಟಕ ನೃತ್ಯಪರಂಪರೆಯ ಬಗ್ಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಕನ್ನಡ ಕಾವ್ಯದಲ್ಲಿ ನರ್ತನಕ್ಕೆ ಸಂಬಂಧಿಸಿದ ಅಧ್ಯಯನ ವಿಚಾರಗಳು ಗಾಢವಾಗಿ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂದಿಗೆ ನರ್ತನಕ್ಕೆ ಸಂಬಂಧಿಸಿದ ನಿಘಂಟಿಗೆ ಸಾಕಷ್ಟು ಅವಕಾಶಗಳಿವೆ.

ಪಾರಿಭಾಷಿಕ ಪದಕೋಶಗಳನ್ನೇ ನಿರ್ಮಾಣ ಮಾಡಬಹುದು. ಪ್ರಾಚೀನ ಸಾಹಿತ್ಯದ ವಿವರಣಾತ್ಮಕ ಪದಗಳ ಪದಕೋಶ ಅಗತ್ಯ ಆಗಬೇಕು. ಉದಾಹರಣೆಗೆ ಹೇಳುವುದಾದರೆ ನಮ್ಮಲ್ಲಿ ಹಲವು ಉರ್ದು ಪರ್ಶಿಯನ್ ಶಬ್ದಗಳು ಸೇರಿಕೊಂಡಿವೆ. ಅದರಲ್ಲೂ ತಾಫೆ ಎಂಬ ಅಪಶಬ್ದವು ನೃತ್ಯಕ್ಕೆ ಅನ್ವಯವಾಗುತ್ತಿದ್ದ ಕಾಲವೊಂದಿತ್ತು. ಇದಕ್ಕೆ ಸರಿಸುಮಾರು ಹತ್ತಿರದಲ್ಲಿರುವ ಪದ ‘ತೇಪೆ ಹಾಕುವುದು’ ಕೆಳಮಟ್ಟದ ಅರ್ಥವನ್ನು ಕೊಡುತ್ತದೆ. ಹೀಗಿರುವಾಗ ನೃತ್ಯದಲ್ಲಿ ಬಳಸುವ/ಬಳಸುತ್ತಿದ್ದ ಶಬ್ದಗಳ ಬಳಕೆ, ಸ್ವಾರಸ್ಯದ ಕುರಿತ ಚರ್ಚೆ ನಡೆದರೆ ನರ್ತನದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ಅನುಕೂಲವಾಗುತ್ತದೆ.

ಅಷ್ಟೇ ಅಲ್ಲ, ನರ್ತನದ ಗತಿಯಲ್ಲಿರುವ, ನರ್ತನದ ವರ್ಣನೆಗೆ ಬಳಸಿರುವ ಛಂದಸ್ಸಿನ ಅಧ್ಯಯನ ತಳಮಟ್ಟದಿಂದ ನಡೆಯಬೇಕು. ಕ್ಲಿಷ್ಟ ಪಾರಿಭಾಷಿಕ ಪದಗಳ ಕುರಿತ ವಿವರಣೆ ನೂಪುರ ಭ್ರಮರಿಯಲ್ಲಿ ಬರುವಂತಾಗಲಿ. ನೂಪುರ ಭ್ರಮರಿಯ ಕಾರ್ಯಗಳು ಬಹಳ ಮೇಲ್ದರ್ಜೆಯಲ್ಲಿ ನಡೆಯುತ್ತಿವೆ. ಆಶೀರ್ವಾದ ತುಂಬಿದ ಅಭಿನಂದನೆಗಳು.

Leave a Reply

*

code