ಅಂಕಣಗಳು

Subscribe


 

‘ನೃತ್ಯ ಮತ್ತು ಸಂಶೋಧನೆ: ಎಲ್ಲ ಆಸಕ್ತರನ್ನು ತಲುಪಬೇಕಾದ ಅವಶ್ಯಕತೆ’

Posted On: Saturday, April 27th, 2013
1 Star2 Stars3 Stars4 Stars5 Stars (No Ratings Yet)
Loading...

Author: ಡಾ.ಎಚ್.ಎಸ್.ಗೋಪಾಲ ರಾವ್, ನೃತ್ಯಸಂಶೋಧನ ಸಮ್ಮೇಳನದ ಅಧ್ಯಕ್ಷರು

ನೃತ್ಯಸಂಶೋಧಕರ ವಿಭಾಗ ಆಯೋಜಿಸಿರುವ ಈ ವಾರ್ಷಿಕ ಸಮ್ಮೇಳನದಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಅಭಿವ್ಯಕ್ತಿಸಲು ನನಗಿರುವ ಅರ್ಹತೆಯ ಬಗ್ಗೆ ಹಲವು ಬಾರಿ ಆಲೋಚಿಸಿದ್ದರೂ, ತೃಪ್ತಉತ್ತರ ದೊರೆತಿಲ್ಲ. ಭಾರತೀಯ ಸಂಸ್ಕøತಿಯ, ಅದರಲ್ಲೂ ವಿಶೇಷವಾಗಿ, ಕರ್ನಾಟಕ ಸಂಸ್ಕøತಿಯ ವಿದ್ಯಾರ್ಥಿಯಾದ ನನಗೆ ಕರ್ನಾಟಕ ಸಂಸ್ಕøತಿಯ ಯಾವುದೇ ವಿಷಯವಾದರೂ ಪ್ರಿಯವಾದದ್ದೆ. ಹೃದಯಕ್ಕೆ ಹತ್ತಿರವಾಗುವ ಮನುಷ್ಯನ ಯಾವುದೇ ಒಳ್ಳೆಯ ಚಟುವಟಿಕೆಗಳ ಬಗ್ಗೆ ನನಗೆ ಹೆಚ್ಚಿನ ಕುತೂಹಲ. ಅದರಲ್ಲೂ ಪರಂಪರೆಗೆ ಸಂಬಂಧಿಸಿದ ಯಾವುದೇ ವಿಚಾರಗಳು ನನ್ನ ಕುತೂಹಲವನ್ನು ಮತ್ತಷ್ಟು ಕೆರಳಿಸುತ್ತವೆ.

ಆದ್ದರಿಂದ ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾದ ನೃತ್ಯವು ನನ್ನ ಅಧ್ಯಯನದ ಒಂದು ಭಾಗವಾಗಿದೆ. ಸ್ವತಃ ನರ್ತಕನಾಗದಿದ್ದರೂ, ಬಣ್ಣ ಹಚ್ಚಿಕೊಂಡು ಒಂದಷ್ಟು ನಟನೆಯ ಗೀಳು ಹಚ್ಚಿಕೊಂಡಿರುವ ಯಾರನ್ನೇ ಆದರೂ, ಪ್ರದರ್ಶನ ಕಲೆಗಳು ಆಕರ್ಷಿಸುತ್ತವೆ. ಗಾಯಕನಲ್ಲದಿದ್ದರೂ ಗಾಯನದ ಬಗ್ಗೆ, ವಾದಕನಲ್ಲದಿದ್ದರೂ ವಾದ್ಯಗಳ ಬಗ್ಗೆ, ನರ್ತಕನಲ್ಲದಿದ್ದರೂ ನರ್ತನದ ಬಗ್ಗೆ ಆಸಕಿ ಬೆಳೆಸಿಕೊಳ್ಳುವುದು ಸಂಸ್ಕøತಿಯ ವಿದ್ಯಾರ್ಥಿಗಳಿಗೆ ಸಹಜ ಪ್ರಕ್ರಿಯೆ. ಅದು ಯಾವುದೇ ಪ್ರದರ್ಶನ ಕಲೆಗಿರುವ ಶಕ್ತಿ. ಯಾವುದೇ ರೀತಿಯ ದೈಹಿಕ ಊನಗಳೂ ಮಾನಸಿಕ ಆಕರ್ಷಣೆಯನ್ನು ದೂರವಿಡಲಾರವು.

ಪ್ರಾಗಿತಿಹಾಸ ಕಾಲದ ನನ್ನ ಹಿರಿಯರಿಗೆ ಕುಣಿತವನ್ನು ರೇಖಾಚಿತ್ರಗಳ ಮೂಲಕ ದಾಖಲಿಸುವ ಆಸಕ್ತಿ ಇತ್ತು. ಈ ಮಾತಿಗೆ ಉದಾಹರಣೆಯಾಗಿ ಅನೇಕ ಚಿತ್ರಗಳು ನೆನಪಿಗೆ ಬರುತ್ತವೆ. ಸಿಂಧೂ ನದಿಯ ಬಯಲಿನ ನಾಗರೀಕತೆಯ ಸಂದರ್ಭದಲ್ಲೇ ನೃತ್ಯ ಭಂಗಿಯ ಮೂರ್ತಿಯ ರಚನೆಗೆ ಅವಕಾಶವಿತ್ತು. ಕ್ರಿ.ಪೂ. 3ನೆಯ ಶತಮಾನದ ಹೊತ್ತಿಗೆ, ನಾಟ್ಯಕಲೆಯು ಶಾಸ್ತ್ರೀಯ ಚೌಕಟ್ಟನ್ನು ಪಡೆದಿತ್ತು. ಇವೆಲ್ಲವೂ ನಾಟ್ಯಶಾಸ್ತ್ರದ ಪ್ರಾಚೀನತೆಯ ದಾಖಲೆಗಳು.

ಕಾವ್ಯಾಭ್ಯಾಸಿಗಳಿಗೆ ನಾಟ್ಯಶಾಸ್ತ್ರದ ಪರಿಚಯ ಇರಲೇಬೇಕು. ಭರತನ ನಾಟ್ಯಶಾಸ್ತ್ರವು ಭಾರತೀಯ ಕಾವ್ಯಮೀಮಾಂಸೆಯ ಅವಿಭಾಜ್ಯ ಅಂಗ. ರಸತತ್ವದ ತಿಳಿವಳಿಕೆಗೆ ಪೀಠಿಕೆ ಹಾಕುವುದೇ ಭರತನ ನಾಟ್ಯಶಾಸ್ತ್ರ. ಕ್ರಿ.ಪೂ.3ನೆಯ ಶತಮಾನದ ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನವೊಂದು ಸಿದ್ಧವಾಗಲು ಸುಮಾರು 12-13 ಶತಮಾನಗಳು ಬೇಕಾಯಿತು. ನಾಟ್ಯಶಾಸ್ತ್ರಕ್ಕೆ ಅಭಿನವಗುಪ್ತ ವ್ಯಾಖ್ಯಾನ ಬರೆದದ್ದು ಕ್ರಿ.ಶ.ಸುಮಾರು 10ನೆಯ ಶತಮಾನದಲ್ಲಿ. ಇದರಿಂದ ತಿಳಿಯುವ ಒಂದು ಅಂಶವೆಂದರೆ, ಭರತನ ನಾಟ್ಯಶಾಸ್ತ್ರ ಕುರಿತು ವ್ಯಾಖ್ಯಾನ ಬರೆಯಲು ಆ ಮೊದಲು ಯಾರೂ ಪ್ರಯತ್ನಿಸಲಿಲ್ಲ ಎನ್ನುವುದಕ್ಕಿಂತ, ಬರೆಯುವ ಸಾಹಸವನ್ನು ಯಾರೂ ಮಾಡಲಿಲ್ಲ ಎನ್ನಬಹುದು. ಅಂದಿನಿಂದ ಇಂದಿನವರೆಗೂ ಭರತನ ನಾಟ್ಯಶಾಸ್ತ್ರ ವಿದ್ವಾಂಸರ ಆಸ್ತಿಯಾಗಿಯೇ ಉಳಿದಿದೆ. ಹಾಗೆಯೇ ಪ್ರದರ್ಶನ ಕಲೆಯಾಗಿಯೂ ಭರತನ ಹೆಸರನ್ನು ನೆನಪಿಸುವ ಮತ್ತಾವುದೇ ಹೆಸರಿನ ನಾಟ್ಯವು ವಿದ್ವಾಂಸರ ಸ್ವತ್ತಾಗಿಯೇ ಉಳಿದಿರುವುದು ವಾಸ್ತವ. ಇದು ಹೀಗೇಕೆ? ನಾಟ್ಯಶಾಸ್ತ್ರ ಸುಲಭಗ್ರಾಹ್ಯವಲ್ಲವೆ? ಅಷ್ಟು ಕಠಿಣವಾದ ವಿಷಯಗಳು ಅದರಲ್ಲೇನಿವೆ? ಆಲೋಚನೆ ಹೀಗೇ ಮುಂದುವರಿದರೆ, ನಿರಂತರ ಪ್ರಶ್ನೆಗಳು ಎದುರಾಗುತ್ತವೆ.

ಸಂಶೋಧನೆಯಲ್ಲಿ ಇಂತಹ ಪ್ರಶ್ನೆಗಳಿಗೆ ಅವಕಾಶವಿದೆ. ಪ್ರಶ್ನೆಗಳಿಲ್ಲದೆ ಸಂಶೋಧನೆ ಮುಂದುವರಿಯುವಂತಿಲ್ಲ. ಭರತನ ನಾಟ್ಯಕ್ಕೆ ಸಂಬಂಧಿಸಿದಂತೆ ಹೇಳಿರುವ ಎಲ್ಲ ವಿಚಾರಗಳೂ ಹಾಗೆಯೇ ಮುಂದುವರಿದಿವೆಯೇ? ಬದಲಾವಣೆಗಳಾಗಿವೆ ಎನ್ನುವುದಾದರೆ, ಅದು ಎಂತಹ ಬದಲಾವಣೆ? ಧನಾತ್ಮಕವೇ? ಋಣಾತ್ಮಕವೇ? ಈ ಎಲ್ಲ ಪ್ರಶ್ನೆಗಳು ನನ್ನದಾದರೂ ಉತ್ತರ ಹೇಳಬೇಕಾದವರು ಭರತನ ವಿಷಯದಲ್ಲಿ ಪರಿಣತರಾದ ವಿದ್ವಾಂಸರು. ಭಾರತದಲ್ಲಿ ಪ್ರಚಲಿತದಲ್ಲಿರುವ ಭರತನಾಟ್ಯ, ಯಕ್ಷಗಾನ, ಕಥಕ್, ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಮಣಿಪುರಿ ಇತ್ಯಾದಿ ನೃತ್ಯ ಪ್ರಕಾರಗಳನ್ನೂ ಭರತನ ನಾಟ್ಯದ ವ್ಯಾಪ್ತಿಗೆ ಸೇರಿಸಲಾಗುತ್ತಿದೆಯೆ? ಕೇವಲ ವಾಗ್ವಾದಕ್ಕೆ ಅವಕಾಶ ನೀಡುವ ಪ್ರಶ್ನೆಗಳಿಂದ ಸ್ಪಷ್ಟ ಉತ್ತರ ಲಭಿಸುವಂತಿಲ್ಲ.

ಪ್ರಶ್ನೆಗಳು ಸಂವಾದಕ್ಕೆ ಅವಕಾಶ ಕಲ್ಪಿಸಿದರೆ, ಆಗ ಇಡಿಯಾಗಿ ನೃತ್ಯ, ನೃತ್ಯ ಸಂಶೋಧನೆ ಇತ್ಯಾದಿ ವಿಷಯಗಳು ಆಸಕ್ತಿಯ ಕೇಂದ್ರಗಳಾಗಿ, ಪಾರದರ್ಶಕವಾಗುತ್ತವೆ. ಯಾವುದೇ ವಿಷಯದಲ್ಲಿ, ವಿಶೇಷವಾಗಿ ಲಲಿತಕಲೆಗಳ ವಿಷಯದಲ್ಲಿ ಮುಕ್ತತೆ ಇದ್ದಷ್ಟೂ ಅವು ಮತ್ತಷ್ಟು ಪರಿಪಕ್ವವಾಗುವ ಅವಕಾಶಗಳು ದೊರೆಯುತ್ತವೆ. ಜನತೆಯನ್ನು ತಲುಪದ ಯಾವುದೇ ಜ್ಞಾನ ನಷ್ಟದ ಹಾದಿಯಲ್ಲಿ ಸವೆದುಹೋಗುತ್ತದೆ. ಹಾಗಾಗದಿರಲು ಅದು ಬಳಕೆಗೆ ಲಭ್ಯವಾಗಬೇಕು. ಸಂಗೀತವಾಗಲೀ, ನೃತ್ಯವಾಗಲೀ, ಕೆಲವೇ ಕೆಲವರಿಗಷ್ಟೇ ಸೀಮಿತವಾಗುವುದು ಒಳಿತಲ್ಲ. ಈ ನಿಟ್ಟಿನಲ್ಲಿ ತೆರೆದ ಮನಸ್ಸಿನ ವಿಚಾರ ವಿನಿಮಯ ಆಗುವುದರಿಂದ, ಮರೆತುಹೋಗಿರುವ ಎಷ್ಟೋ ವಿಷಯಗಳನ್ನು ನೆನಪು ಮಾಡಿಕೊಳ್ಳಬಹುದು; ಹೊಸ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟುಕೊಳ್ಳಬಹುದು. ಇದನ್ನು ಸ್ಪಷ್ಟಪಡಿಸಲು ಒಂದು ವಿಚಾರವನ್ನು ನೆನಪು ಮಾಡಿಕೊಳ್ಳಬಯಸುತ್ತೇನೆ.

ಕೇಶವ ನೃತ್ಯಶಾಲೆಯ ಶ್ರೀ ಹೆಚ್.ಆರ್.ಕೇಶವಮೂರ್ತಿ ಅವರ ಜೊತೆಗೆ, ಹಲವು ವರ್ಷಗಳ ಹಿಂದೆ, ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ನೃತ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸುತ್ತಿದ್ದಾಗ, ಕನ್ನಡ ಕಾವ್ಯಗಳಲ್ಲಿರುವ ಕೆಲವು ರಸಘಟ್ಟಿಯಂತಹ ಸನ್ನಿವೇಶಗಳನ್ನು ರೂಪಕಗಳಾಗಿ ನೃತ್ಯದ ಮೂಲಕ ಪ್ರದರ್ಶಿಸಿದರೆ, ಅದರಿಂದ ಕಾವ್ಯ ಮತ್ತು ನೃತ್ಯ ಕ್ಷೇತ್ರಗಳಿಗೆ ಪರಸ್ಪರ ಪ್ರಯೋಜನವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ನಂತರದ ಕೆಲವು ತಿಂಗಳುಗಳಲ್ಲೇ ಕೇಶವಮೂರ್ತಿಯವರು ಪಂಪನ ಆದಿಪುರಾಣದ ನೀಲಾಂಜನೆಯ ನೃತ್ಯ ಪ್ರಸಂಗವನ್ನು ನೃತ್ಯರೂಪಕವಾಗಿ ರಂಗಕ್ಕೆ ತಂದರು. ಇದರಿಂದ ಕಾವ್ಯವೂ ಪ್ರೇಕ್ಷಕರನ್ನು ತಲುಪಿತು ಮತ್ತು ನೃತ್ಯಕ್ಕೆ ಕಾವ್ಯದ ಸ್ಪರ್ಷವೂ ಲಭಿಸಿತು. ಇಂತಹ ಪರಸ್ಪರ ಅವಲಂಬನೆಗಳಿಂದ ಒಳಿತು ಸಾಧಿತವಾಗುತ್ತದೆ.

ಮನುಷ್ಯ ಮುಕ್ತವಾಗಿ ಮಾಡಿದ ನೃತ್ಯಗಳು, ಬರೆದ ಚಿತ್ರಗಳು, ಹಾಡಿದ ಹಾಡುಗಳು ಬಯಲಿನಿಂದ ದೇವಾಲಯದ ಕಕ್ಷೆಗೆ ಸೇರಿದಂತೆ, ನೃತ್ಯವು ನವರಂಗದ ಮಧ್ಯಕ್ಕೆ ಪ್ರವೇಶ ಪಡೆದು, ಪ್ರಯೋಗಗಳು ಮತ್ತು ಕಾರ್ಯಕ್ರಮಕ್ಕೆ ಒಂದು ಚೌಕಟ್ಟು ದೊರೆತಿರುವ ಸಾಧ್ಯತೆಗಳು ಹೆಚ್ಚು. ದೇವಾಲಯಗಳು ಹೆಸರಿಗಷ್ಟೇ ದೇವಸ್ಥಾನಗಳು. ಅಲ್ಲಿ ನಿಜವಾಗಿ ನಡೆದದ್ದು ದೇವರ ಹೆಸರಿನಲ್ಲಿ ಪ್ರಾರ್ಥನೆ ಮತ್ತು ಕಲೆಯ ಪ್ರಯೋಗಗಳು. ವಾಸ್ತುವಿನ ಹೆಸರಿನಲ್ಲಿ ಕಟ್ಟಡ ನಿರ್ಮಾಣವಾದರೆ, ದೇವರ ಸೇವೆಯ ಹೆಸರಿನಲ್ಲಿ, ವಿಶೇಷವಾಗಿ ರಂಗಭೋಗದ ಹೆಸರಿನಲ್ಲಿ ಕಾವ್ಯ, ಗಾಯನ, ವಾದನ ಮತ್ತು ನೃತ್ಯ ಕಲೆಗಳಲ್ಲಿ ಹೊಸ ಆವಿಷ್ಕಾರಗಳು ಮತ್ತು ಪ್ರಯೋಗಗಳು ನಡೆದಿವೆ.

ದೇವಾಲಯಗಳು ಉಳ್ಳವರ ಆಸ್ತಿಯಾದಾಗ, ರಂಗಭೋಗದ ಕಲಾವಿದರೂ ಅವರ ಆಸ್ತಿಯಾಗಿರುವ ಸಾಧ್ಯತೆಗಳಿವೆ. ಕ್ರಮೇಣ ರಂಗಭೋಗದ ಕಲಾವಿದರು ಅರಮನೆಗಳಲ್ಲಿ ಮತ್ತು ಶ್ರೀಮಂತರ ಮಹಲುಗಳಲ್ಲಿ ಅವಕಾಶ ಪಡೆದು, ದೇವಾಲಯಗಳಲ್ಲಿ ರಂಗಭೋಗವಾಗಿದ್ದ ಗಾಯನ ಮತ್ತು ನೃತ್ಯಗಳು ಶ್ರೀಮಂತರ ಭೋಗಕ್ಕೆ ಸೀಮಿತವಾಗಿರುವ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಯಬೇಕಾದ ಅವಶ್ಯಕತೆ ಇದೆ. ಶ್ರೀಮಂತರ ಖಾಸಗಿ ಆಸಕ್ತಿಯಾದ ಕಲೆಯ ಯಾವುದೇ ಪ್ರಕಾರ ನಿಂತ ನೀರಂತಾಗುವುದು ಅನಿವಾರ್ಯ. ಹಾಗೆ ನೃತ್ಯವೂ ನಿಂತ ನೀರಂತಾಗಿರಬಹುದಲ್ಲವೆ? ಸ್ವತಂತ್ರ ಪ್ರವೃತ್ತಿಯ ಯಾವ ಕಲಾವಿದರಿಗೆ ತಾನೆ ಯಾರೋ ಒಬ್ಬ ಶ್ರೀಮಂತನ ಶೋಕಿಯ ಸರಕಾಗಿರಲು ಇಷ್ಟವಾಗುತ್ತದೆ? ಜೀವನ ನಡೆಸುವ ಅನಿವಾರ್ಯತೆಯು ಎದುರಾದಾಗ ಕೆಲವು ಕಲಾವಿದರು ಬೇರೆ ದಾರಿಯಿಲ್ಲದೆ ಬದಲಾವಣೆಗಳನ್ನು ಒಪ್ಪಿಕೊಂಡಿರಬಹುದು. ಎಲ್ಲರೂ ಅಲ್ಲ. ಹೀಗೆ ಹಲವು ಬದಲಾವಣೆಗಳಿಗೆ ಒಡ್ಡಿಕೊಳ್ಳಬೇಕಾಗಿ ಬಂದ ನೃತ್ಯ ಕಲಾವಿದರಲ್ಲಿ ಕೆಲವರಾದರೂ, ಪರಂಪರೆಯ ಶ್ರೇಷ್ಠತೆ ಮತ್ತು ಪಾವಿತ್ರ್ಯವನ್ನು ಉಳಿಸುವ ಸಾಹಸ ಮಾಡಿದ್ದಾರೆ. ಅಂತಹ ಕಲಾವಿದರಿಗೆ ನನ್ನ ಸಾಷ್ಟಾಂಗ ನಮನಗಳು.

ಸ್ವಾತಂತ್ರ್ಯಾನಂತರ ಭಾರತದಲ್ಲಿ ನೃತ್ಯಕಲೆಗೆ ಗೌರವ ಲಭಿಸಿರುವುದನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳಬೇಕಾಗಿದೆ. ಈಗ ಉಳಿದು ಬಂದಿರುವ ನೃತ್ಯಕಲೆ ಸಾಗಿಬಂದಿರುವ ಹಾದಿಯನ್ನು ತಿಳಿಯುವ ಪ್ರಯತ್ನದಲ್ಲಿ ಅಜ್ಞಾತ ನೃತ್ಯ ಕಲಾವಿದರು ಅನುಭವಿಸಿರಬಹುದಾದ ನೋವು ಮತ್ತು ನಲಿವುಗಳ ಪರಾಮರ್ಶನೆ ಆಗಬೇಕಾದ ಅವಶ್ಯಕತೆ ಇದೆ. ಅದೆಷ್ಟು ಪ್ರಯೋಗಗಳು ನೃತ್ಯ ಕ್ಷೇತ್ರದಲ್ಲಿ ಆಗಿವೆ ಎಂಬುದರ ಒಂದು ಅಂದಾಜಾದರೂ ಆಗಬೇಕಾಗಿದೆ. ಈ ಯಾವ ಕೆಲಸಗಳೂ ಆಗಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಆಗಬೇಕಾದ ಕೆಲಸಗಳು ಅಗಾಧವಾಗಿವೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ.

ಕ್ರಿ.ಶ.802ರ ಒಂದು ಶಾಸನವು(ಮಣ್ಣೆ ಶಾಸನ) ಜಿನಮಂದಿರದಲ್ಲಿ ‘ವಾರವಿಲಾಸಿನೀ ವಿರಚಿತ ನೃತ್ತ ಗೀತ ಬಾದ್ಯ ಬಲಿ ವಿಲೇಪನ ಸೇವೆ’ ನಡೆಯುತ್ತಿದ್ದುದನ್ನು ದಾಖಲಿಸಿದೆ. ರಾಜಕುಟುಂಬದವರೂ ನೃತ್ಯಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದಕ್ಕೆ ಬೇಲೂರಿನ ಹಲವು ಶಾಸನಗಳು ಸಾಕ್ಷಿಯಾಗಿವೆ. ದೇವಾಲಯಗಳಲ್ಲಿ ರಂಗಭೋಗದ ಹೆಸರಿನಲ್ಲಿ ನರ್ತನ ಸೇವೆ ನಡೆಯುತ್ತಿದ್ದುದಕ್ಕೆ ಅನೇಕ ಶಾಸನಗಳ ಸಾಕ್ಷ್ಯವಿದೆ. ಹಾಗೆಯೇ ದೇವಾಲಯಗಳ ಹೊರಭಿತ್ತಿ, ಕಂಬಗಳು, ಗೂಡುಗಳಲ್ಲಿ ಮಾತ್ರವಲ್ಲದೆ, ಸಾಲಭಂಜಿಕೆಯರಾಗಿಯೂ ನರ್ತಕರು ಮತ್ತು ನರ್ತಕಿಯರು ಅನಾವರಣಗೊಂಡಿದ್ದಾರೆ. ಆ ಶಿಲ್ಪಗಳ ಮೂಲಕ ಅಂದಿನ ದಿನಗಳಲ್ಲಿ ಪ್ರಚಲಿತವಿದ್ದ ನೃತ್ಯದ ಸ್ವರೂಪವನ್ನು ತಿಳಿಯುವ ಮತ್ತು ಅವುಗಳನ್ನು ಅನುಸರಿಸಿ, ಪುನಾರೂಪಿಸುವ ಪ್ರಯತ್ನಗಳು ಎಷ್ಟರ ಮಟ್ಟಿಗೆ ಆಗಿವೆ? ಆಗಿಯೇ ಇಲ್ಲ ಎನ್ನುವ ದಾಷ್ಟ್ರ್ಯ ನನಗಿಲ್ಲ. ಡಾ.ಪದ್ಮಾ ಸುಬ್ರಹ್ಮಣ್ಯಂ, ಡಾ.ಚೂಡಾಮಣಿ ನಂದಗೋಪಾಲ್, ಡಾ.ಹೇಮಾ ಗೋವಿಂದರಾಜು, ಡಾ.ತುಳಸಿ ರಾಮಚಂದ್ರ, ಡಾ.ಕರುಣಾ ವಿಜಯೇಂದ್ರ ಮತ್ತಿನ್ನೂ ಕೆಲವರು ಈ ನಿಟ್ಟಿನಲ್ಲಿ ಮಾಡಿರುವ ಅಧ್ಯಯನವನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಆಗಬೇಕಾಗಿರುವ ಕೆಲಸದ ಮುಂದೆ ಆಗಿರುವ ಕೆಲಸ ಕಡಿಮೆ ಎಂದೇ ಹೇಳಬೇಕು.

ದೇವಸ್ಥಾನಗಳ ಆಶ್ರಯ ತಪ್ಪಿ, ರಾಜಾಸ್ಥಾನಗಳಿಗೆ ಬಂದ ನರ್ತನ ಕಲೆ, ಕ್ರಮೇಣ ಶ್ರೀಮಂತರ ನಡುಮನೆಗಳನ್ನು ತಲುಪಿದ್ದು ಈಗ ಇತಿಹಾಸ. ಈಗ ನರ್ತನ ಕಲೆ ಯಾವ ಸ್ಥಿತಿ ತಲುಪಿದೆ ಎಂಬುದನ್ನು ಪರಾಮರ್ಶಿಸುವುದು ಅವಶ್ಯಕ. ಯಾವುದೇ ಆಶ್ರಯವಿಲ್ಲದೆ, ಪ್ರೋತ್ಸಾಹವಿಲ್ಲದೆ, ಒಂದು ಪ್ರದರ್ಶನ ಕಲೆ ಬೆಳೆಯುವುದು ಸುಲಭವಲ್ಲ. ಸಾಮಾನ್ಯವಾಗಿ ಯಾವುದೇ ಪ್ರದರ್ಶನ ಕಲೆ ಸ್ವತಂತ್ರವಲ್ಲ; ಪರಸ್ಪರ ಆಲಂಬನ-ಅವಲಂಬನ ಇದ್ದೇ ಇರುತ್ತದೆ. ನೃತ್ಯ ಕಲೆ ಎಂದಾಗ ಜೊತೆಗೆ ಸಾಹಿತ್ಯ, ಗಾಯನ, ವಾದನ ಇತ್ಯಾದಿ ನೆರವು ಅತ್ಯವಶ್ಯಕ. ಪರಾವಲಂಬಿಯಾದ ಯಾವುದೇ ಕಲೆ ಊರ್ಜಿತಗೊಳ್ಳಲು ಆರ್ಥಿಕ ನೆರವಿನ ಜೊತೆಗೆ ನೈತಿಕ ಬೆಂಬಲವೂ ಬೇಕು.

ನೃತ್ಯಕಲೆಯನ್ನು ವೃತ್ತಿಪರ ಅಥವಾ ಪ್ರವೃತ್ತಿಪರ ಎಂದು ಪ್ರತ್ಯೇಕಿಸುವುದು ಸುಲಭವಲ್ಲ. ಪ್ರವೃತ್ತಿಪರವಾಗಿರಲು ಕಲಾವಿದರು ಆರ್ಥಿಕವಾಗಿ ಬಲಾಢ್ಯರಾಗಿರಬೇಕು. ಒಂದು ಅಥವಾ ಎರಡು ಪ್ರದರ್ಶನಗಳಿಗಾದರೆ ಹೇಗೋ ಹಣ ಹೊಂದಿಸಬಹುದು. ನಿರಂತರ ಪ್ರಯತ್ನಗಳು ನಡೆಯಲು ಹಣಬಲದ ಜೊತೆಗೆ ಜನಬಲವೂ ಅವಶ್ಯಕ. ಇದನ್ನೆಲ್ಲ ನಿಭಾಯಿಸುವುದು ಕಷ್ಟ. ಹಾಗೆಂದು ಕಲಾವಿದರು ಸುಮ್ಮನಿರಲು ಸಾಧ್ಯವಿಲ್ಲ. ಹೇಗಾದರೂ ಪ್ರಯೋಗಗಳು ಆಗುತ್ತಿರಬೇಕು. ಅಂತಹ ಹೊತ್ತಿನಲ್ಲಿ ಒಗ್ಗೂಡಿ ಪ್ರಯತ್ನಗಳು ನಡೆದಾಗ ಒಂದಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಬಹುದು. ಆದರೆ ಇದು ಸುಲಭವಲ್ಲ ಮತ್ತು ತಾರ್ಕಿಕವಾಗಿಯೂ ಸಾಧ್ಯವಾಗಲಾರದು ಎಂಬ ಅನುಮಾನ ಯಾರಿಗಾದರೂ ಬರಬಹುದು.

ಯಾವುದೇ ಕ್ಷೇತ್ರದ ಕಲಾವಿದರಲ್ಲಿ ಸಾಮರಸ್ಯವನ್ನು ಕಾಣುವುದು ಕಷ್ಟ ಎಂಬುವುದು ಅನುಭವದ ಹಿನ್ನೆಲೆಯ ಮಾತು. ಒಂದೊಂದು ತಂಡವೂ ತನ್ನದೇ ಆದ ಗೊತ್ತು ಗುರಿಗಳನ್ನು ಹೊಂದಿರುತ್ತದೆ ಮತ್ತು ಅದೇ ಅಂತಿಮ ಎಂದೂ ಭಾವಿಸುತ್ತದೆ. ಇದನ್ನು ಸರಿ ಅಥವಾ ತಪ್ಪು ಎಂದು ಹೇಳಲಾಗುವುದಿಲ್ಲ. ‘ನನ್ನ ಗುರು ಹೇಳಿಕೊಟ್ಟದ್ದು ನನಗೆ ಗುರಿ. ಅದನ್ನು ಪ್ರಶ್ನಿಸುವ ದಾಷ್ಟ್ರ್ಯ ನನಗೆ ಬೇಡ’ ಎಂಬ ಮನೋಭಾವ ಬಹುತೇಕ ಎಲ್ಲ ಕ್ಷೇತ್ರಗಳ ವಿದ್ಯಾರ್ಥಿಗಳ ಮನೋಭೂಮಿಕೆಯೂ ಆಗಿದೆ. ಇದನ್ನು ಮೀರುವ ಶಕ್ತಿಯನ್ನು ಗುರುಗಳೇ ಶಿಷ್ಯರಲ್ಲಿ ತುಂಬಬೇಕು. ನಾವು ತೋರಿಸಿರುವ ದಾರಿಯಲ್ಲಿ ನಿಮ್ಮ ಮುಂದಿನ ಹೆಜ್ಜ್ಜೆಗಳನ್ನಿಡುತ್ತಾ, ಇನ್ನೂ ದೂರದ ಹಾದಿಯನ್ನು ಪತ್ತೆ ಮಾಡಿ, ಅದರಲ್ಲಿ ನಡೆಯಿರಿ ಎಂದು ಗುರುಗಳು ಶಿಷ್ಯರಿಗೆ ಮಾರ್ಗದರ್ಶನ ಮಾಡಬೇಕು. ಅಂತಹ ಸಂದರ್ಭದಲ್ಲಿ ಮರೆತುಹೋದ ಎಷ್ಟೋ ವಿಷಯಗಳು ನೆನಪಿಗೆ ಬರುವ ಸಾಧ್ಯತೆಗಳಿರುತ್ತವೆ ಮತ್ತು ಹೊಸ ವಿಚಾರಗಳು ಬೆಳಕಿಗೆ ಬರುತ್ತವೆ.

ಪ್ರದರ್ಶನ ಕಲೆಗಳು ಮಾತ್ರವೇ ಅಲ್ಲದೆ, ಮಾನವಿಕವಾದ ಯಾವುದೇ ಕಲಾಪ್ರಕಾರದಲ್ಲೂ ಪ್ರತಿಷ್ಠೆಯು ಮಹತ್ವದ ಪಾತ್ರ ವಹಿಸುತ್ತದೆ. ನಾನು ಅಥವಾ ನಾವು ಯಾರಿಗೂ ಕಡಿಮೆಯಿಲ್ಲ ಮತ್ತು ನಮ್ಮ ದಾರಿ ಸರಿಯಾಗಿದೆ ಮತ್ತು ಅದರಲ್ಲೇ ನಾವು ನಡೆಯುತ್ತೇವೆ ಎಂಬ ಅಚಲ ನಿರ್ಧಾರಕ್ಕೆ ಪಕ್ಕಾದವರನ್ನು, ಪ್ರಶ್ನಿಸಿ ಯಾವುದೇ ಮುಜುಗರಕ್ಕೂ ಅವಕಾಶ ಕಲ್ಪಿಸುವುದು ಅನವಶ್ಯಕ. ಆದರೆ, ಪ್ರಶ್ನಿಸುವ ಪ್ರಯತ್ನ ಮಾಡುವವರು, ಪ್ರಶ್ನೆಗೆ ಗುರಿಯಾಗುವುದನ್ನು ತಪ್ಪಿಸಿಕೊಂಡರೆ ಸಾಕು. ಯಾರ ಮನಸ್ಸಿಗೂ ನೋವಾಗದ ಹಾಗೆ, ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಹೊಣೆ ಎಂದು ಯಾರಾದರೂ ಒಬ್ಬರು ತಿಳಿದರೂ ಒಂದು ಪ್ರಮುಖ ವಿಘ್ನ ನಿವಾರಣೆ ಆಗುತ್ತದೆ. ನಂತರ ಮುಂದಿನ ಹಾದಿ ಅಷ್ಟೇನೂ ಕಲ್ಲು-ಮುಳ್ಳುಗಳ ಹಾದಿಯಾಗಿರುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಕೇವಲ ಪ್ರತಿಷ್ಠೆಯು ಎಲ್ಲ ಒಳಿತುಗಳಿಗೂ ಅಡ್ಡಿಯಾಗಿರುತ್ತದೆ. ಅದರ ನಿವಾರಣೆಗೆ ಮುಂದಾಗಲು ಯಾರಾದರೂ ಒಬ್ಬರು ಮುಂದಾಗಬೇಕಾದ್ದು ಅನಿವಾರ್ಯ. ಇದರಿಂದ ಒಳಿತು ಸಾಧಿತವಾಗುತ್ತದೆ ಎಂಬ ಆಶಾಭಾವ ಬೇಕು.

ಭರತನ ನಾಟ್ಯಶಾಸ್ತ್ರ ಮತ್ತು ಭರತನಾಟ್ಯ ಎಂಬ ಎರಡು ವಿಚಾರಗಳಲ್ಲಿ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ಇಲ್ಲಿ ಅನವಶ್ಯಕ. ಭರತನ ನಾಟ್ಯಶಾಸ್ತ್ರದಲ್ಲಿರುವ ಎಲ್ಲವನ್ನೂ ಪಾಲಿಸಲಾಗುತ್ತಿಲ್ಲ ಎಂದು ತಿಳಿಯಲಾಗಿದೆ. ಭರತನ ನಾಟ್ಯಶಾಸ್ತ್ರದಲ್ಲಿ ಅನುಸರಿಸಲಾಗದಿರುವ ಎಷ್ಟು ವಿಷಯಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬಹುದು ಮತ್ತು ಕೈಬಿಡಲೇಬೇಕಾದ ಎಷ್ಟು ವಿಷಯಗಳಿವೆ ಎಂಬ ಬಗ್ಗೆ ವಿದ್ವಾಂಸರು ನಿರ್ಧರಿಸಲು ಅವಕಾಶ ಕಲ್ಪಿಸಬಹುದು. ಆಗ ಭರತನ ನಾಟ್ಯಶಾಸ್ತ್ರದ ಪೂರ್ಣ ಪ್ರಯೋಜನ ಲಭಿಸಿದಂತಾಗುತ್ತದೆ.
ಭರತನ ಮಾರ್ಗವೇ ಅಂತಿಮ ಎಂದೇನೂ ಅಲ್ಲ. ಸ್ಥಳೀಯವಾದ ದೇಸಿಯೂ ನೃತ್ಯದ ಸೊಗಸನ್ನು ಹೆಚ್ಚಿಸಲು ಅವಕಾಶ ಕಲ್ಪಿಸಬಹುದು. ಮಾರ್ಗ ಮತ್ತು ದೇಸಿ ಎಂದು ವಾಗ್ವಾದಕ್ಕೆ ನಿಲ್ಲುವುದರ ಬದಲು ಎರಡರ ಸಹಯೋಗವನ್ನು ಸಾಧಿಸಿದರೆ ಪ್ರಮಾದವೇನೂ ಆಗಲಾರದು.

ಪ್ರದರ್ಶನ ಕಲೆಗೆ ಸಂಬಂಧಿಸಿದಂತೆ ವೇದಿಕೆಯ ಮೇಲೆ ಮತ್ತು ಹಿಂದೆ ಪ್ರಮುಖವಾಗಿರುವವರ ಬಗ್ಗೆ ಮಾತ್ರ ಮುತುವರ್ಜಿ ವಹಿಸಿದರೆ ಸಾಲದು. ವೇದಿಕೆಯ ಮುಂದೆ ಸಹೃದಯನ ಸ್ಥಾನದಲ್ಲಿ ಕೂರುವವರ ಬಗ್ಗೆ ಎಷ್ಟು ಗಂಭೀರ ಚಿಂತನೆಗಳನ್ನು ಮಾಡಲಾಗಿದೆ ಎಂದೂ ಪರಾಮರ್ಶಿಸಿಕೊಳ್ಳುವುದು ಅವಶ್ಯಕ. ನಮಗೆ ಸರಿ ಅನಿಸಿದ್ದನ್ನು ಅವರಿಗೆ ನಾವು ಕೊಡುತ್ತಿದ್ದೇವಷ್ಟೇ ಹೊರತು, ಅವರಿಗೆ ಏನು ಬೇಕು ಎಂದು ಯಾರೂ ಚಿಂತಿಸಿದಂತಿಲ್ಲ. ಇದರಿಂದ ಸಹೃದಯನ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಉಪೇಕ್ಷೆ ಮಾಡಿದಂತೆ ಕಾಣುತ್ತದೆ.

ಇತ್ತೀಚಿನ ದಿನಗಳಲ್ಲಿ ನೃತ್ಯ ಪ್ರದರ್ಶನಗಳು ಆಹ್ವಾನಿತರಿಗೆ ಮಾತ್ರ ಸೀಮಿತಗೊಳ್ಳುತ್ತಿವೆ ಎಂದು ಭಾಸವಾಗುತ್ತದೆ. ಆಸಕ್ತರಿಗೆ ಕೆಲವು ಸಂದರ್ಭದಲ್ಲಿ ತಿಳಿಯದೆಯೇ ಪ್ರದರ್ಶನ ಮುಗಿದಿರುತ್ತದೆ. ಇದು ಸಹೃದಯನಿಗಾಗುವ ಅನ್ಯಾಯ. ನೃತ್ಯಾಸಕ್ತರೆಲ್ಲರಿಗೂ ಪ್ರದರ್ಶನದ ವಿಷಯ ತಿಳಿಯುವುದು ಒಳಿತು. ಜೊತೆಗೆ ವಿಚಾರ ಸಂಕಿರಣಗಳೂ ಆಯೋಜಿತವಾದರೆ ನೃತ್ಯ ಕ್ಷೇತ್ರವು ಮತ್ತಷ್ಟು ಶ್ರೀಮಂತವಾಗುವ ಸಾಧ್ಯತೆಗಳಿವೆ. ವಿಚಾರ ಸಂಕಿರಣಗಳಲ್ಲಿ ಈವರೆಗೆ ಪ್ರಕಟಗೊಂಡಿರುವ ನೃತ್ಯಕ್ಕೆ ಸಂಬಂಧಿಸಿದ ಶಾಸ್ತ್ರ ಗ್ರಂಥಗಳು; ಅವುಗಳನ್ನು ಕುರಿತು ಪ್ರಕಟವಾಗಿರುವ ವ್ಯಾಖ್ಯಾನಗಳು ಮತ್ತು ಪ್ರಯೋಗಗಳ ಬಗ್ಗೆ ಅಭ್ಯಾಸಿಗಳಿಗೆ ತಿಳಿಸುವುದು ಅವಶ್ಯಕ.

ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ಅವರ ಪ್ರಯತ್ನದಿಂದ ಸಿಂಹಭೂಪಾಲನ ಲಾಸ್ಯರಂಜನ ಬೆಳಕಿಗೆ ಬಂದಿದೆ. ರಾ.ಸತ್ಯನಾರಾಯಣ ಅವರ ಪ್ರಯತ್ನದಿಂದ ‘ಅಕಬರೀಯ ಕಾಳಿದಾಸ’ ಎಂದು ಹೆಸರಾಗಿದ್ದ ಸಾತನೂರಿನ ಪಂಡರೀಕ ವಿಠಲನ ನರ್ತನನಿರ್ಣಯ ಮತ್ತು ಇತರ ಕೃತಿಗಳು ಬೆಳಕಿಗೆ ಬಂದವು. ಇನ್ನೂ ಬೆಳಕಿಗೆ ಬಾರದಿರಬಹುದಾದ ನೃತ್ಯ ಸಂಬಂಧೀ ಕೃತಿಗಳನ್ನು ಪತ್ತೆ ಮಾಡುವ ಮತ್ತು ಬೆಳಕಿಗೆ ತರುವ ಪ್ರಯತ್ನಗಳು ಆಗಬೇಕಾಗಿದೆ. ಈಗಾಗಲೇ ಪ್ರಕಟವಾಗಿರುವ ಕೃತಿಗಳನ್ನು ಆಸಕ್ತರಿಗೆ ಪರಿಚಯಿಸುವ ಕೆಲಸವೂ ಆಗಬೇಕಾಗಿದೆ.

ನೃತ್ಯವು ಸ್ವತಂತ್ರ ಕಲಾಪ್ರಕಾರವಲ್ಲ ಎಂಬುದು ಸರ್ವವೇದ್ಯ. ಸಂಗೀತ ಮತ್ತು ವಾದ್ಯಗಳನ್ನು ಹೊರತುಪಡಿಸಿ ನೃತ್ಯ ಆಗುವುದಿಲ್ಲ. ಆದ್ದರಿಂದ ಪರಸ್ಪರಾವಲಂಬಿಗಳಾದ ಎಲ್ಲ ಲಲಿತಕಲೆಗಳ ಬಗೆಗೂ ಸಮಾನ ಆಸಕ್ತಿ ಮತ್ತು ವಿಶ್ವಾಸಗಳನ್ನು ರೂಢಿಸಿಕೊಳ್ಳುವುದು ಅವಶ್ಯಕ. ನಾನು ಕೇಳಿ ತಿಳಿದಿರುವಂತೆ ನೃತ್ಯಕ್ಕೆ ಕೆಲವೇ ಕೃತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ನೃತ್ಯಕ್ಕೆ ಹೊಂದಿಕೆಯಾಗುವ ಬೇರೆ ಕೃತಿಗಳು ಇಲ್ಲವೆ ಎಂಬ ಅನುಮಾನ ಯಾರನ್ನಾದರೂ ಕಾಡಬಹುದು.

ಅಂತಹ ಕೃತಿಗಳನ್ನು ಹುಡುಕುವ ಮತ್ತು ಬಳಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರಬೇಕು. ದಾಸರ ಕೀರ್ತನೆಗಳು ಪ್ರಯೋಗಕ್ಕೆ ಅನುಕೂಲಕರವಲ್ಲವೆ? ನಮ್ಮ ಪ್ರಾಚೀನ ಕಾವ್ಯಗಳ ಕೆಲವು ರಸಘಟ್ಟಗಳು ಪ್ರಯೋಗಾತ್ಮಕ ಸಾಮಥ್ರ್ಯ ಪಡೆದಿವೆ. ಕೆಲವು ವಚನಗಳನ್ನು ನೃತ್ಯ ರೂಪಕಗಳಿಗೆ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೆ? ಡಿ.ವಿ.ಜಿ.ಅವರ ಅಂತಃಪುರ ಗೀತೆಗಳನ್ನು ಕೆಲವು ನೃತ್ಯ ಸಂಯೋಜಕರು ಬಳಸಿಕೊಂಡಿರುವುದನ್ನು ಕಂಡಿದ್ದೇನೆ ಮತ್ತು ಕೇಳಿ ತಿಳಿದಿದ್ದೇನೆ. ಡಿ.ವಿ.ಜಿ., ಮಾಸ್ತಿ, ಕುವೆಂಪು, ಬೇಂದ್ರೆ ಅವರ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಿಕೊಳ್ಳುವ ಅವಕಾಶಗಳನ್ನು ನಾವಾಗಿ ಮಾಡಿಕೊಳ್ಳಬೇಕು. ಸ್ಥಳೀಯ ಭಾಷೆಯ ಕೃತಿಗಳು ಅನುಕೂಲಕರವಲ್ಲ ಎಂಬ ತಾತ್ಸಾರ ಭಾವ ಸರಿಯಲ್ಲ. ಈಗಂತೂ ನೃತ್ಯರೂಪಕಗಳಿಗೆ ಶತಾವಧಾನಿ ಆರ್,ಗಣೇಶ್ ಅವರಂತಹ ಹಲವು ವಿದ್ವಾಂಸರು ಗೀತೆಗಳನ್ನು ರಚಿಸಿಕೊಡಬಲ್ಲರು. ಪ್ರಯೋಗಕ್ಕೆ ಅಣಿಯಾದರೆ ಕೃತಿಗಳ ಕೊರತೆ ಎದುರಾಗಲಾರದು.

ಕರ್ನಾಟಕದಲ್ಲಿ, ಬಾದಾಮಿ ಚಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಕಾಲದ ವಾಸ್ತುಗಳಲ್ಲಿನ ಶಿಲ್ಪಗಳನ್ನು ಆಧರಿಸಿ, ನೃತ್ಯ ವಿದ್ವಾಂಸರು ಕಳೆದುಹೋಗಿರುವ ನೃತ್ಯ ಶೈಲಿಗಳ ಪುನರುಜ್ಜೀವನಕ್ಕೆ ಪ್ರಯತ್ನಿಸಿದರೆ, ಒಳ್ಳೆಯ ಫಲ ದೊರೆಯುತ್ತದೆ. ಆಯಾ ಕಾಲದ ದೇವಾಲಯಗಳ ಭಿತ್ತಿ, ಕಂಬ ಇತ್ಯಾದಿಗಳ ಮೇಲಿನ ಉಬ್ಬುಶಿಲ್ಪಗಳಲ್ಲದೆ. ಅಲ್ಲಲ್ಲಿ ಕಾಣುವ ದುಂಡುಶಿಲ್ಪಗಳನ್ನು ಆಧರಿಸಿ, ಅಂದಿನ ನೃತ್ಯ ಶೈಲಿಯನ್ನು ಪುನಾರೂಪಿಸುವ ಪ್ರಯತ್ನಗಳು ನಡೆದರೆ, ಒಳ್ಳೆಯ ಫಲ ದೊರೆಯುತ್ತದೆ ಎಂಬ ಆಶಾವಾದ ನನ್ನಂತಹ ಸಂಸ್ಕøತಿಯ ಅಭ್ಯಾಸಿಗಳಿಗಿದೆ.

ನಿಮ್ಮ ಸಂಸ್ಥೆಯಿಂದ ಪ್ರದರ್ಶನಕ್ಕಷ್ಟೇ ಮಿತಿಗೊಳಿಸಿಕೊಂಡಿರುವ ಕಲಾವಿದರನ್ನು ಸಂಶೋಧನೆಯತ್ತ ಸೆಳೆಯುವ ಸಾಹಸದ ಕೆಲಸದಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸುತ್ತೇನೆ. ನಾಲ್ಕು ಗೋಡೆಗಳ ನಡುವೆ ಸೀಮಿತಗೊಂಡಿರುವ ನೃತ್ಯವನ್ನು ದಿಗಂತವನ್ನೇ ಭಿತ್ತಿ ಮಾಡಿಕೊಂಡು ವಿಶಾಲ ವ್ಯಾಪ್ತಿಗೆ ವರ್ಗಾಯಿಸಿದಾಗ, ಮತ್ತೊಮ್ಮೆ ಲಾಸ್ಯ-ತಾಂಡವ ನಮಗೆ ದಕ್ಕಬಹುದು. ‘ನಮ್ಮ ಶಾಲೆಯೇ ಶ್ರೇಷ್ಠ; ನಾವು ಕಲಿತದ್ದೇ ಅಂತಿಮ’ ಎಂಬ ಮಿತಿಗಳಿಂದ ಹೊರಬಂದು ನಿಸರ್ಗವನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಕೃತಿಯೊಡನೆ ನರ್ತಿಸಿದಾಗ, ಮತ್ತೊಬ್ಬ ಭರತ ಮುನಿ ಜನ್ಮ ತಾಳುತ್ತಾನೆ. ನೃತ್ಯ ಪರಂಪರೆ ನಿರಂತರತೆಯನ್ನು ಸಾಧಿಸುತ್ತದೆ. ನಮಗೆ ಬೇಕಾಗಿರುವುದು ಅಂತಹ ನಿರಂತರತೆ; ಹಿಂದಿನದನ್ನು ಮರೆಯದೆ, ಇಂದಿನ ವಾಸ್ತವಗಳನ್ನು ಅರಿತು, ಒಳ್ಳೆಯದನ್ನು ನಿರೀಕ್ಷಿಸುತ್ತಾ ಮುನ್ನಡೆದಾಗ ನಮ್ಮ ಮುಂದಿನ ಪೀಳಿಗೆಯೂ ನಮ್ಮಂತೆಯೇ ಆನಂದವನ್ನು ಪಡೆಯುತ್ತದೆ.

ಕಾಳಿದಾಸನ ಮಾಳವಿಕಾಗ್ನಿಮಿತ್ರ ನಾಟಕದ ಒಂದು ಮಾತು ಕೆಳಕಂಡಂತಿದೆ:

ದೇವಾನಾಮಿದಮಾಮನಂತಿ ಮುನಯಃ ಶಾಂತಂಕ್ರತುಂ ಚಾಕ್ಷುಷಂ
ರುದ್ರೇಣೇದಮುಮಾಕೃತವ್ಯತಿಕರೇ ಸ್ವಾಂಗೇಭಿಭಕ್ತಂ ದ್ವಿಧಾ |
ತ್ರೈಗುಣ್ಯೋದ್ಭವಮತ್ರ ಲೋಕ ಚರಿತಂ ನಾನಾ ರಸಂ ದೃಶ್ಯತೇ
ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂಸಮಾರಾಧನಂ ||

(ನಾಟ್ಯವು ದೈವಪ್ರಿಯವಾದ ಯಜ್ಞವೆಂದು ಮುನಿಗಳು ಭಾವಿಸುತ್ತಾರೆ. ರುದ್ರ ಮತ್ತು ಉಮಾ ಎಂಬ ತನ್ನ ದ್ವಿರೂಪಗಳಿಂದ ಶಿವನು ಲೋಕಕ್ಕೆ ತಾಂಡವ ಮತ್ತು ಲಾಸ್ಯ ಎಂಬ ಎರಡು ವಿಧಾನಗಳನ್ನು ನೀಡಿದ್ದಾನೆ. ನಾನಾ ರಸಗಳಿಂದ ಕೂಡಿದ ಲೋಕಚರಿತವನ್ನು ತ್ರಿಗುಣಗಳ ಮೂಲಕ ನಾಟ್ಯವು ತೋರ್ಪಡಿಸುತ್ತದೆ. ಭಿನ್ನರುಚಿಗಳಿಂದ ಕೂಡಿದ ಜನಬಾಹುಳ್ಯಕ್ಕೂ ಆಕರ್ಷಕವಾದ ರಂಜನೆಯನ್ನು ನೀಡುವ ಸಾಧನ ನಾಟ್ಯ.

ಪಂಪನ ಆದಿಪುರಾಣದಲ್ಲಿನ ನೀಲಾಂಜನೆಯ ನೃತ್ಯ ಪ್ರಸಂಗದಲ್ಲಿ ಕವಿಯು ಹೇಳುವ ಈ ಮಾತುಗಳು ನಾಟ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಎನಿಸುತ್ತದೆ.

ಧರೆ ರಂಗಂ ಗಗನಂ ಮನೋಹರಕರಂ ನಾಟ್ಯಾಲಯಂ ನರ್ತಕಂ
ಸುರರಾಜಂ ಸಭೆ ದೇವಮತ್ರ್ಯ ಸಭೆ ಸಂದಾರಾಧ್ಯನೀಶಂ ಜಗ
ದ್ಗುರು ತನ್ನøತ್ಯಫಲ ತ್ರಿವರ್ಗವಿಭವಂತಾನೆಂದೊಡೇಮಾತೊ ಸಾ
ಸಿರಮುಂ ನಾಲಗೆಯುಳ್ಳ ವಾಸುಕಿಯುಮಿನ್ನೇನೆಂದವಂ ಬಣ್ಣಿಪಂ
ಹೀಗೆ ಕವಿಗಳಿಂದ ವರ್ಣಿಸಲ್ಪಟ್ಟಿರುವ ನಾಟ್ಯ ನಮ್ಮೆಲ್ಲರಿಗೆ ಮುದ ನೀಡಲಿ. ಶುಭಂ ಭೂಯಾತ್.

Leave a Reply

*

code