Author: - ಮನೂ ‘ಬನ’
ಸಾಮಾನ್ಯವಾಗಿ ಯಾವುದೇ ಧೀಮಂತರ ದೇಹಾಂತವಾದಾಗ ಅದು ಆ ಕ್ಷೇತ್ರಕ್ಕೆ ತುಂಬಲಾರದ ನಷ್ಬ ಎಂದು ರೂಢಿಯಲ್ಲಿ ಹೇಳುವುದು ಸಹಜ. ಆದರೆ ಕಾಲನ ಕರೆಗೆ ಓರ್ವ ಕಲವಿದ ಓಗೊಡಲೇಬೇಕು ಎಂದಾದಾಗ ಸೂತಕದ ದುಃಖದೊಂದಿಗೆ ಸಂಕಟವೂ ಜೊತೆಗೂಡುತ್ತದೆ. ಅದೂ ರಂಗದಲ್ಲಿ ಚೈತನ್ಯದಿಂದಿರುವಾಗಲೇ ಹಠಾತ್ತನೆ ಶಾಶ್ವತವಾಗಿ ನೇಪಥ್ಯಕ್ಕೆ ಹೊರಳಿಕೊಂಡರಂತೂ ಆ ನಷ್ಟವನ್ನು ಭರಿಸಲಾಗದೆ ಮನಸ್ಸು ಸಾಕಷ್ಟು ಚಡಪಡಿಸುತ್ತದೆ.
ತೆಂಕು ಬಡಗು ತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದ, ತಾಳಮದ್ದಳೆಯ ಅಸಾಮಾನ್ಯ ಅರ್ಥಧಾರಿ- ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು ಇತ್ತೀಚೆಗೆ ತಮ್ಮ ಪಾತ್ರ ಮುಗಿಸಿ ಪವಡಿಸಿದಾಗ ಅನ್ನಿಸಿದ್ದೂ ಇದೇ. ಮಾರ್ಚ್ 18, 2014. ಕುಂದಾಪುರ ತಾಲ್ಲೂಕಿನ ತಲ್ಲೂರು ಎಂಬಲ್ಲಿ ಯಕ್ಷಗಾನ ಮುಗಿಸಿ, ಯಡ್ತಾಡಿ ಎಂಬಲ್ಲಿಗೆ ಇತರ ಕಲಾವಿದರೊಂದಿಗೆ ವಾಹನದಲ್ಲಿ ಬರುತ್ತಿದ್ದ ವೇಳೆ. ಯುವ ಚಂಡೆ ಕಲಾವಿದ ಚೈತನ್ಯ ಪದ್ಯಾಣ ಮಾತುಕತೆಯಲ್ಲಿ ಜೊತೆಯಿದ್ದ. ಇದ್ದಕ್ಕಿದ್ದಂತೆ ಅಸಾಧ್ಯವೆನಿಸಿದ ತಲೆಶೂಲೆ; ವಾಂತಿ ಮಾಡಿಕೊಂಡರು.
ಹಿಂದಿನ ದಿನ ಮೇಳದ ಟೆಂಟಿನಲ್ಲಿ ವೇಷ ಹಾಕುವಾಗ ತಲೆನೋವು ಕಾಣಿಸಿಕೊಂಡಿತ್ತಾದರೂ ಚೆನ್ನಪ್ಪ ಶೆಟ್ರು ಅದಕ್ಕೆಂದು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲವಂತೆ. ತಲೆನೋವು ಕಾಡುತ್ತಿದ್ದರೂ ಹೆಚ್ಚು ಲಕ್ಷ್ಯ ಮಾಡದೆ ತಮ್ಮ ಪಾಲಿನ ಪಾತ್ರವನ್ನು ಸಮರ್ಥವಾಗಿಯೇ ಮುಗಿಸಿಬಂದಿದ್ದರು. ಆದರೆ ಮತ್ತಾವಾಗ ಇದ್ದಕ್ಕಿದ್ದಂತೆ ಶೂಲೆ ಮರುಕಳಿಸಿ ವಾಂತಿಯಾಯಿತೋ, ಇದ್ಯಾವುದೋ ಸಾಮಾನ್ಯವಾದ ತಲೆನೋವಲ್ಲ ಎಂಬುದು ಅಕ್ಕಪಕ್ಕದ ಕಲಾವಿದರಿಗೆ ಕಂಡು ದಿಗಿಲಾಯಿತು. ತತ್ಕ್ಷಣವೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರ ಪರಿಶೀಲನೆ ತಿಳಿಸಿದ್ದು ಮಿದುಳು ಕಾಂಡದಲ್ಲಿ ಹಾನಿ(ಬ್ರೈನ್ ಸ್ಟೆಮ್ ಡ್ಯಾಮೇಜ್)ಉಂಟಾಗಿದೆ, ಬದುಕುವುದು ಅನುಮಾನ ಎಂದೇ !
ಅದಾಗಿ ಮೂರುದಿನ ಕಳೆದಿದೆ..ಮಾರ್ಚ್ 22ರ ಮುಂಜಾವು.. ‘ಮಾತಿನಮಲ್ಲ’ ಶಾಶ್ವತವಾಗಿ ಮಾತು ಮುಗಿಸಿ ಮೌನಿಯಾಗಿದ್ದರು. ಶಿವನ ಶೂಲವೇ ಶೂಲೆಯಾಗಿ ಬಂತೋ ಏನೋ ! ‘ಚೆನ್ನಪ್ಪ’ ‘ಸಿದ್ಧ’ರಾಗಿ ಹೊರಟುಬಿಟ್ಟಿದ್ದರು. ಬದುಕು ಮಾಗುವಷ್ಟೂ ಕಾಲ ಯಕ್ಷಗಾನದ ನುಡಿಬೆಡಗಿಗೆ ಬಣ್ಣದ ವರ್ಣಮಾಲೆಯನ್ನೇರಿಸುವ ಮನಸ್ಸು ಅವರಿಗಿತ್ತಾದರೂ; ಬಾಳ್ವೆಯ ಬತ್ತಿಯಲ್ಲಿ ಎಣ್ಣೆ ತೀರಿಹೋಗುತ್ತಿದ್ದ ಅಂದಾಜು ಇತ್ತೋ ಇಲ್ಲವೋ?
ರಾಯಿ ಗ್ರಾಮದ ವಾಸು – ಲಲಿತಮ್ಮ ಚೆನ್ನಪ್ಪರ ತಂದೆತಾಯಿ. 1970ರಲ್ಲಿ ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಕುರಿಯ ಶಾಸ್ತ್ರಿ ಮತ್ತು ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯವನ್ನು, ಉಡುಪಿ ಯಕ್ಷಗಾನ ಕೇಂದ್ರದಿಂದ ಬಡಗುತಿಟ್ಟಿನ ಯಕ್ಷಗಾನ ನಾಟ್ಯ ಕಲಿತವರು. ಅಗರಿ ಭಾಗವತರು, ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ಶಿಮಂತೂರು ನಾರಾಯಣ ಶೆಟ್ಟರು ಹಾಗೂ ನೆಡ್ಲೆ ನರಸಿಂಹ ಭಟ್ಟರಂತಹ ಹಿರಿತಲೆಗಳ ಮರ್ಗದರ್ಶನವೂ ಜೊತೆಗಿತ್ತು.
ಸುಮಾರು 15 ವರ್ಷ ಬಡಗುತಿಟ್ಟಿನಲ್ಲಿ, 28 ವರ್ಷಗಳ ಕಾಲ ತೆಂಕುತಿಟ್ಟಿನ ಒಡನಾಟದಲ್ಲಿ ಶೇಣಿ, ಮಲ್ಪೆ ಸಾಮಗರು, ತೆಕ್ಕಟ್ಟೆ , ಪೆರ್ಲ, ಮೂಡಂಬೈಲು ಶಾಸ್ತ್ರಿ, ಬೋಳಾರ ನಾರಾಯಣ ಶೆಟ್ಟಿ,, ಅಳಕೆ ರಾಮಯ್ಯ ರೈ ಮೊದಲಾದ ಘಟಾನುಘಟಿಗಳೊಡನೆ ಪಳಗಿದರೆಂದರೆ ಅದು ಸುಮ್ಮನೆಯ ಮಾತೇ?
ಆದ್ದರಿಂದಲೇ ಸಿದ್ಧಕಟ್ಟೆ ನೇರನಡೆಯ ನಿಷ್ಠುರಿ, ನಿವ್ರ್ಯಸನಿ. ತಾನು ನಂಬುವ ತತ್ತ್ವದಲ್ಲಿ ರಾಜಿ ಮಾಡಿಕೊಂಡವರಲ್ಲ. ಒಂದುವೇಳೆ ಸಂಶಯವಿದ್ದರೆ ಪುಸ್ತಕದ ಮೊರೆಹೋಗಿ ಹುಡುಕಿ ತೆಗೆಯುವವರೆಗೆ ಬಿಡುವವರಲ್ಲ. ಮೇಲ್ನೋಟಕ್ಕೆ ಸೌಮ್ಯವಾಗಿ ಕಂಡುಬರುತ್ತಿದ್ದ ಅವರ ಪಾತ್ರನಿರ್ವಹಣೆ ಬಹಳ ಆಳವಾಗಿ ತೀಕ್ಷ್ಣವಾಗಿ ಪ್ರೇಕ್ಷಕನನ್ನು ತಲುಪುತ್ತಿದ್ದವು; ಹಾಗೆಯೇ ಸತ್ತ್ವ ಇಲ್ಲದಿರುವ ನುಡಿನಡೆ ಕಂಡರೆ ಸಾಕು, ಇದಿರು ಕಲಾವಿದನನ್ನು ಬಂಗಾರದ ಸೂಜಿಯಿಂದ ಸ್ವಾರಸ್ಯಪೂರ್ಣವಾಗಿ ಕುಟುಕುತ್ತಿದ್ದವು, ಮುಳ್ಳಿನ ಕೀವನ್ನು ತೆಗೆಯುತ್ತಿದ್ದವು.
ಆಗಿನ ಕಾಲಕ್ಕೆ ಅವರು ಓದಿದ್ದು ಕೇವಲ ಐದನೇ ತರಗತಿ. ಆದರೇನಾಯಿತು? ಎಂತಹ ವಾಕ್ಕೋವಿದನನ್ನೂ ಶ್ರುತಿಬದ್ಧವಾಗಿ ಸಮದಂಡಿಯಾಗಿ ಉದ್ವೇಗದ ವಾಗ್ಯುದ್ಧವಿಲ್ಲದೆ ಮಣಿಸಬಲ್ಲ ಸಾಮಥ್ರ್ಯ, ಪಾಂಡಿತ್ಯಪೂರ್ಣವಾದ ಸಂಸ್ಕೃತ-ಕನ್ನಡದ ಅರ್ಥವತ್ತಾದ ಅಲಂಕಾರ, ಸುಸ್ಪಷ್ಟ ಉಚ್ಛಾರಣೆ, ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡುವ ಸಮ್ಮೋಹನಶಕ್ತಿ. ಇದಕ್ಕೆ ಕಾರಣ ಪುರಾಣಾದಿ ಗ್ರಂಥಗಳ ವಿಸ್ತೃತ ಅಧ್ಯಯನ. ನಿರಂತರ ಓದಿನ ಫಲವಾಗಿ ವಿಚಾರ ಮಂಡನೆಯೂ ನಿಕಷದಷ್ಟು ಸೂಕ್ಷ್ಮ. ತಾವೊಬ್ಬರೇ ಅಲ್ಲ, ಸಹ ಕಲಾವಿದರೂ ಅಧ್ಯಯನ ಮಾಡಬೇಕೆಂಬ ತುಡಿತ ಅವರದ್ದು. ಹಾಗೆಂದೇ ಆ ನೆಲೆಯಲ್ಲಿ ಮಾರ್ಗದರ್ಶನವು ಅನೇಕ ಕಲಾವಿದರಿಗೆ ಸಂದಿದೆ.
ಅವರ ಮಾತಿನ ಧಾರೆಯಂತೆಯೇ ತಿರುಗಾಟದ ವಿಸ್ತಾರವೂ ಅನನ್ಯ. ಧರ್ಮಸ್ಥಳ, ಕಟೀಲು, ಕದ್ರಿ, ಮದವೂರು, ಬಪ್ಪನಾಡು, ಕುಂಬಳೆ, ಸಾಲಿಗ್ರಾಮ, ಪೆರ್ಡೂರು, ಎಡನೀರು ಮತ್ತಿತರ ಯಕ್ಷಗಾನ ಮೇಳಗಳಲ್ಲಿ ತಿರುಗಾಟವಾಗಿ ಪ್ರಸಕ್ತ ಹೊಸನಗರ ಶ್ರೀ ರಾಮಚಂದ್ರಾಪುರ ಯಕ್ಷಗಾನ ಮೇಳದಲ್ಲಿ ಅಗ್ರಶ್ರೇಣಿಯ ಕಲಾವಿದರಾಗಿದ್ದರು. ಶ್ರೀರಾಮ, ಬ್ರಹ್ಮ, ಪರಶುರಾಮ, ದ್ರೋಣ, ವಿಷ್ಣು, ಮಹೇಶ್ವರ, ಶ್ರೀಕೃಷ್ಣ, ಹನುಮಂತ, ಹರಿಶ್ಚಂದ್ರ ಮೊದಲಾದ ಪಾತ್ರಗಳಷ್ಟೇ ಅಲ್ಲ, ಬಣ್ಣ ಹಚ್ಚಿದ ಎಲ್ಲ ಬಗೆಯ ಕಥಾಭಿತ್ತಿಗೂ ಅವರು ನೀಡುತ್ತಿದ್ದ ಸೊಗಸಾದ ಅಲಂಕಾರಗಳನ್ನು ಬಲ್ಲವರೇ ಬಲ್ಲರು ! ಕೌರವ, ಮಾಗಧ, ರಾವಣ, ಭೀಷ್ಮ ಮೊದಲಾದ ಪಾತ್ರಗಳಿಗೆ ಧ್ವನಿಯಾದಾಗೆಲ್ಲಾ ಸಾಕ್ಷಾತ್ ಆ ಪ್ರತಿನಾಯಕ ಪಾತ್ರಗಳೂ ಕೂಡಾ ನಾಯಕರಂತೆ ಮೈದಳೆಯುತ್ತಿದ್ದವು. ಅದಕ್ಕಾಗಿ ಆ ಪಾತ್ರಗಳೂ ಕೂಡಾ ಕೈಎತ್ತಿ ಮುಗಿದರೆ ಅತಿಶಯವಿಲ್ಲ ! ಅದರಲ್ಲೂ ಸಾಮಾನ್ಯ-ವಿದ್ವದ್ರಸಿಕರೆಂಬ ಭೇದವಿಲ್ಲದೆ ಎಲ್ಲ ಬಗೆಯ ಸಹೃದಯರಿಗೂ ಮೆಚ್ಚುಗೆಯಾಗಬೇಕೆಂದರೆ ಬೋಧ-ಮೋದದ ಸಾಂಗತ್ಯ ಕಲೆಯಲ್ಲಿ ಎಷ್ಟರಮಟ್ಟಿಗೆ ಇರಬೇಕು ಎಂಬ ಅರಿವು ಸಹಜವಾಗಿಯೇ ಅವರಲ್ಲಿ ಪ್ರಕಾಶಿಸಿರಬೇಕು.
ಮುಂಬಯಿಯಲ್ಲಿ ನಿಧಿ ಸಮರ್ಪಣೆ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದಿಂದ ಸಮ್ಮಾನ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದಿಂದ ಕುರಿಯ ಪ್ರಶಸ್ತಿ ಹಾಗೂ ಸಮ್ಮಾನ ಸೇರಿದಂತೆ ಹತ್ತಾರು ಪ್ರಶಸ್ತಿ, ನೂರಾರು ಸಮ್ಮಾನಗಳು ಸಿದ್ಧಕಟ್ಟೆಯವರ ಪಾಲಿಗೆ ಸಂದಿವೆ.
ಬಂಟ್ವಾಳದ ಮಾವಿನಕಟ್ಟೆಯ ಸಿಹಿಗುಳಿಗೆ ‘ಸಿದ್ಧಕಟ್ಟೆ’ ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಮಾತಿನಿಂದ ಯಕ್ಷಾಂಗಣದ ಅಕ್ಷಯನಿಧಿಯಾಗಿದ್ದ ಕಲಾಕಾರನಿಗೆ ಇದೀಗ ಮೌನದ ನುಡಿನಮನ ಅಂಜಲಿ ಸಲ್ಲಿಸಬೇಕಾದ ಪ್ರಸಕ್ತಿ ಪ್ರಾಪ್ತವಾಗಿದೆ. ಆದರೆ ಕಲಾವಿದನ ರಂಗಾಭಿವ್ಯಕ್ತಿಯ ನೆನಪುಗಳು ಇನ್ನೂ ಮಾತುಗಳನ್ನಾಡುತ್ತಲೇ ಇದೆ !