ಅಂಕಣಗಳು

Subscribe


 

ಮರೆಯಾದ ಮಹಾಬಲ : ಕಳಚಿತು ಕೆರೆಮನೆಯ ಮತ್ತೊಂದು ಕೊಂಡಿ

Posted On: Tuesday, December 15th, 2009
1 Star2 Stars3 Stars4 Stars5 Stars (1 votes, average: 4.00 out of 5)
Loading...

Author: ಮನೋರಮಾ. ಬಿ.ಎನ್

keremaneಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದ ಮಹಾಬಲರ ಜ್ಯೋತಿ ಅಸ್ತಂಗತವಾಗಿದೆ.

ಇಡಗುಂಜಿಯ ದೇವರ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ ಇಹಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಅವರಣ್ಣ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ. ಕೆಲವು ತಿಂಗಳಿಂದ ವೃದ್ಧಾಪ್ಯ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಬಲ ಹೆಗಡೆ ವಿಟ್ಲ ಸಮೀಪದ ಅಳಿಕೆಯಲ್ಲಿರುವ ಪುತ್ರ, ಪ್ರಾಧ್ಯಾಪಕ ಡಾ. ರಾಮ ಹೆಗಡೆ ಅವರ ಮನೆಯಲ್ಲಿ ಮಧ್ಯಾಹ್ನ ಊಟ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದರು. keremanemahabala-hegde3

ತಂದೆ ತಾಯಿ : ಶ್ರೀರಾಮ ಹೆಗಡೆ – ಮಾದೇವಿ

ಜನನ : ೧೯೨೭ರ ಜೂನ್ ೩೦ರಂದು.

ಮರಣ : ಅಕ್ಟೋಬರ್ ೩೦, ೨೦೦೯ ( ತಮ್ಮ ೮೨ನೇ ವರ್ಷ ವಯಸ್ಸಿನಲ್ಲಿ)

ಶಿಕ್ಷಣ : ಚಿತ್ರಾಪುರದ ಶ್ರೀಪಾದರಾಯರಿಂದ ಹಿಂದೂಸ್ಥಾನಿ ಸಂಗೀತದ ಪ್ರಾರಂಭಿಕ ಅಭ್ಯಾಸ, ಅನಂತರ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಸಂಗೀತ ಶಿಕ್ಷಣ, ನಾಲ್ಕನೇ ತರಗತಿ ವರೆಗೆ ವಿದ್ಯಾಭ್ಯಾಸ. ಕನ್ನಡ ಪರೀಕ್ಷೆಗಳಲ್ಲಿ ಉತ್ತೀರ್ಣ.

ಮೇಳ ಅನುಭವ : ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು.

ಪ್ರಶಸ್ತಿ-ಪುರಸ್ಕಾರ : ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೧), ಚೆನ್ನೈಯ ಶ್ರುತಿ ಸಂಸ್ಥೆ, ಬೆಂಗಳೂರಿನ ಗಾನಕಲಾ ಪರಿಷತ್, ಕರ್ನಾಟಕ ಜನಪದ-ಯಕ್ಷಗಾನ ಅಕಾಡೆಮಿಯ ಜೀವನ ಸಾಧನೆ ಪ್ರಶಸ್ತಿ (೨೦೦೫) ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪ್ರಶಸ್ತಿ.

ಸಂಸಾರ : ನಾಲ್ವರು ಮಕ್ಕಳು. ಮೊದಲ ಪುತ್ರಿ ಅನಸೂಯ ಹಾಗೂ ಎರಡನೇ ಮಗ ವಿಷ್ಣು ನಿಧನರಾಗಿದ್ದಾರೆ. ಪತ್ನಿ ಮಹಾದೇವಿ, ಪುತ್ರ ಪ್ರಾಧ್ಯಾಪಕ ಡಾ. ರಾಮ ಹೆಗಡೆ, ಪುತ್ರಿ ಲಲಿತ. ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಮಹಾಬಲರ ಅಳಿಯ.

ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿ. ಅಪ್ಪಟ ತುಂಟ. ಪುಂಡಾಟ. ಆಲೆಮನೆಯ ಕೊಪ್ಪರಿಗೆಯಲ್ಲಿ ಉಚ್ಚೆ ಹುಯ್ಯುವ ಮಟ್ಟಿಗಿನ ದಾಂಧಲೆ. ಆದರೆ ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರಿಗೆ ‘ಮಾಣಿ ಫಟಿಂಗನಾದರೆ ಕಷ್ಟ’ ಎಂದು ಕಂಡದ್ದೇ ; ಮಹಾಬಲರ ೧೪ನೇ ವರ್ಷದಲ್ಲಿ ಬಂಕಿಕೊಂಡ್ಲ ಎಂಬ ಊರಲ್ಲಿ ‘ವೃಷಸೇನ’ ವೇಷ ಹಾಕಿಸಿದರು. ಹೀಗೆ, ರಂಗಕ್ಕೆ ಪ್ರವೇಶಿಸಿದ ಮಹಾಬಲರು ನಂತರ ಶರಧಿ ಗಂಭೀರ. ಕೊನೆಗೆ, ೬೦ಕ್ಕೂ ಅಧಿಕ ವರ್ಷ ರಂಗದ ಜೊತೆಗಿನ ಅವಿನಾಭಾವ ಸಂಬಂಧದ ಅನಂತರ ವೇಷ ಕಳಚಿ ರಂಗದಿಂದ ನಿವೃತ್ತರಾದುದು ೭೫ರ ಹರೆಯದಲ್ಲಿ.

ಮಹಾಬಲ ಹೆಗಡೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಅಂದಿನ ಪ್ರಸಿದ್ಧ ಕಲಾವಿದರೆಲ್ಲರೊಂದಿಗೂ ಪಾತ್ರ ಹಾಕಿ ಕುಣಿದಿದ್ದರು. ೧೯೮೨ರಲ್ಲಿ ಭಾರತ ಸರ್ಕಾರದ ಸಾಂಸ್ಕೃತಿಕ ತಂಡದಲ್ಲಿ ಯಕ್ಷಗಾನವನ್ನು ಪ್ರತಿನಿಧಿಸಿ ಯುರೋಪ್ ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಹಾಗಂತ ಮಹಾಬಲರನ್ನ ಯಕ್ಷಗಾನಕ್ಕೇ ಸೀಮಿತಗೊಳಿಸಿದರೆ ಅಪರಾಧವಾದೀತು. ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದವರು ಮಹಾಬಲರು. ಸಂಗೀತ, ಸಾಹಿತ್ಯ, ನಾಟಕ, ಭಜನೆ, ಮದ್ದಳೆವಾದನ.., ಹೀಗೆ ಎಲ್ಲದರಲ್ಲೂ ಅವರು ಮಹಾಬಲರೆ ! ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ; ಸಂಜೆ ವೇಳೆ, ಮನೆಯಲ್ಲಿ ಕುಳಿತು ಎಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆ ಇಟ್ಟುಕೊಂಡು ಹಾಡುವುದನ್ನು ಬಿಟ್ಟಿರಲಿಲ್ಲ !

ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು ಸಾಕಷ್ಟು ಚಿಂತನೆ ಮಾಡಿದವರವರು. ಶಾಸ್ತ್ರೀಯ ಸಂಗೀತವನ್ನು ಕಲಿತರೂ ಅಲ್ಲಿ ಅವರ ಹುಡುಕಾಟ ಯಕ್ಷಗಾನಗಳಲ್ಲಿನ ಶಾಸ್ತ್ರೀಯತೆಯನ್ನು ಹುಡುಕುವುದಾಗಿತ್ತು. ಭಾಗವತಿಕೆಯಲ್ಲಿ ರಾಗದ ಖಚಿತತೆ ಬಯಸುತ್ತಿದ್ದರು. ಶ್ರುತಿಬದ್ಧವಾಗಿ ಹಾಡಿಕೊಂಡೇ ಅಭಿನಯಿಸಿ ಅರ್ಥ ಹೇಳುವುದು ಅವರಿಗೆ ಸಿದ್ಧಿಸಿತ್ತು. ಅದಕ್ಕಾಗಿಯೇ ಅವರಿಗೆ ಎಂತಹ ಭಾಗವತ ಹಾಡಿದರೂ ಸರಿ ಬರುತ್ತಿರಲಿಲ್ಲ. ಕಡು ನಿಷ್ಠುರವಾಗಿಯೇ ನಡೆದುಕೊಳ್ಳುತ್ತಿದ್ದರು. ಮೊಟ್ಟ ಮೊದಲು ಬಡಗಿನ ಚೆಂಡೆಗೆ ಶೃತಿಯನ್ನು ಅಳವಡಿಸಿದ್ದೂ ಮಹಾಬಲರೇ !

30-keremane-mahabala-hegde1ಶಾಸ್ತ್ರೀಯ ಸಂಗೀತ ಒಂದು ಬದ್ಧತೆಯನ್ನು, ಶಿಸ್ತನ್ನು, ಕ್ರಮವನ್ನು, ಆಚಾರವನ್ನು ಬಯಸುವ ಕಲೆ. ಆದರೆ ಯಕ್ಷಗಾನದ ಸ್ವರೂಪ ಸ್ವಚ್ಛಂದ. ಹಾಗಾಗಿ ತಮ್ಮ ಕಲಾ ಬದುಕಿನಲ್ಲಿ ಯಕ್ಷಗಾನದ ಶಾಸ್ತ್ರೀಯ ಅಂಶವನ್ನೇ ಹುಡುಕಿ ತಪ್ಪು-ಸರಿಗಳನ್ನು ಎತ್ತಿ ತೋರಿಸುತ್ತಿದ್ದರು. ವಿಶ್ವಾಮಿತ್ರ ಮೇನಕೆಯಲ್ಲಿ ಅಭಿನಯಿಸುವಾಗ ಗಂಗಾಧರ ಶಾಸ್ತ್ರಿಯವರ “ಎಲ್ಲೆಲ್ಲೂ ಸೊಬಗಿದೆ, ಸುತ್ತೆಲ್ಲ ಸೊಗಸಿದೆ” ಎನ್ನುವ ಪದ್ಯವನ್ನು ಸುಮಾರು ೧೯೫೫ ರಲ್ಲಿ ಬಳಸಿಕೊಂಡರೂ ; ಅದು ಯಕ್ಷಗಾನಕ್ಕೆ ಹೊಂದುವುದಿಲ್ಲ ಎಂದು ತಿಳಿದಾಗ ನಿರ್ದಾಕ್ಷಿಣ್ಯವಾಗಿ ಬಿಸಾಡಿದರು. ರಂಗ ಪಯಣದಲ್ಲಿ ಅನೇಕ ಪ್ರಯೋಗವನ್ನು ಮಾಡಿ ಯಕ್ಷಗಾನಕ್ಕೆ ಪೂರಕವಾದದ್ದನ್ನಷ್ಟೇ ಉಳಿಸಿಕೊಂಡವರು. ಪ್ರಯೋಗವೆಂಬುದು ವಿಕಸನವೇ ಹೊರತು ಪ್ರತ್ಯೇಕತೆಯಲ್ಲ, ಕಲಾವಿದನ ಅಭಿನಯ ಕೇವಲ ಬಣ್ಣ ಬದಲಿಸುವುದಷ್ಟೇ ಅಲ್ಲ ಎಂದು ನಂಬಿದ್ದರು. ಹಾಗಾಗಿ ಮಹಾಬಲ ಹೆಗಡೆಯವರ ಪಾತ್ರಗಳು ಶಾಸ್ತ್ರದ ಆಧಾರದಿಂದ ಸೃಜನಶೀಲವಾಗಿ ಹೊಸ ನಾಯಕತ್ವದ ಆಯಾಮಕ್ಕೆ ಕಾರಣವಾಯಿತು. ಕಲಾವಿದನ ರಂಗ ಪಯಣದ ಅನುಭವಜನ್ಯ ಪ್ರಯೋಗಗಳೇ ಕಲೆಯ ಮೇಲಿನ ಹಿಡಿತವನ್ನು ಕಟ್ಟಿಕೊಡುತ್ತವೆ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದ ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್ ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಅನುಪಮ. ಜೊತೆಗೆ ಪಾತ್ರದ ವ್ಯಕ್ತಿತ್ವವನ್ನು ಸಮಕಾಲೀನ ಸಂದರ್ಭಕ್ಕೆ ಬೆಸೆಯುತ್ತಾ ; ಪ್ರೇಕ್ಷಕವರ್ಗದಲ್ಲಿ ಜಾಗೃತಿ, ಚಿಂತನೆ ತರುತ್ತಿದ್ದ ಅವರ ವಾಕ್ಪಟುತ್ವ, ಪಾತ್ರಕ್ಕೆ ತಕ್ಕುದಾದ ಕಂಠ, ಭಾವಾಭಿನಯ, ಸೂಕ್ತವಾದ ನಡೆ-ನುಡಿ ಮತ್ತು ನೃತ್ಯಾಭಿನಯ, ಲಯಬದ್ಧ ಕುಣಿತ ಅವರದ್ದು. ವಿಶಿಷ್ಟವಾದ ಚೌತಾಳರ ಕುಣಿತ ಮಹಾಬಲರದ್ದೇ. ನಾಟ್ಯಶಾಸ್ತ್ರದಲ್ಲಿ ಬರುವ ಸಾತ್ವತೀ ಮತ್ತು ಆರಭಟೀ ವೃತ್ತಿಗೆ ಮಾದರಿಯಾಗಬಲ್ಲ ಪಾತ್ರವನ್ನು ಕಟ್ಟಿಕೊಟ್ಟವರು ಮಹಾಬಲರು. ಹಾಗಾದ್ದರಿಂದಲೋ ಏನೋ, ಇವರ ಗಂಭೀರ, ವೀರ ಭಾವಗಳಂತೆ ಕರುಣಾರಸ ಅಷ್ಟೊಂದು ಪ್ರಸಿದ್ಧಿಯಲ್ಲ.

ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದೇ ಆಗಿದೆ. ಆದರೆ ಉಪಮಾ – ರೂಪಕ ಅಲಂಕಾರಗಳಿಂದಾಗಿ ಮಹಾಬಲರದ್ದು ವಿಪುಲವಾದ ಸಾಹಿತ್ಯದ ಅಧ್ಯಯನದಿಂದ ಅರಿವು ಪಡೆದು ಸಂಸ್ಕಾರಗೊಂಡ ಭಾಷೆ. ನೇರ ತೂಕ ತಪ್ಪದ ಗತ್ತಿನ ಮಾತು. ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ, ಪ್ರಸಿದ್ಧಿ ಗಳಿಸಿದ್ದರು. ಹಾಗಾಗಿ ಮಾತಿನ ವ್ಯಂಗ್ಯ ವೈಶಿಷ್ಟ್ಯಕ್ಕೆ ಒಂದರ್ಥದಲ್ಲಿ ಕಾರಣವೇ ನಾಟಕ ರಂಗದ ಅನುಭವ. ರಂಗಕ್ಕೆ ಒಗ್ಗುವ ಹಾಗೆ ಪ್ರಾದೇಶಿಕ ಪದಗಳ (ಗ್ರಾಮೀಣ/ ಗಾಂವಟಿ ಶಬ್ದ) ಬಳಕೆಯೂ ಮಹಾಬಲ ಹೆಗಡೆ ಶೈಲಿ ವೈಶಿಷ್ಟ್ಯ.

ರಂಗದ ಕುರಿತಾದ ಅಧ್ಯಯನದಿಂದ ವೈಚಾರಿಕ ಸಂಪನ್ನರೆನಿಸಿದವರು ಹೆಗಡೆ. ಇವೆಲ್ಲದಕ್ಕೆ ಬೇಕಾದ ಪೂರ್ವಾಧ್ಯಯನದಲ್ಲಿ ಅವರಿಗಿದ್ದ ಆಸಕ್ತಿ, ಕಲಾಭಿಮಾನಿಗಳಿಗೆ ಹೇಗೆ ಭಾವ-ರಸ ಉಣಬಡಿಸಬಹುದೆಂಬ ಕುರಿತಾದ ಅವರ ಚಿರಂತನ ಚಿಂತನೆ ; ಯಕ್ಷಗಾನ ಕಲಾವಿದರು ಹೇಗಿರಬೇಕು ಎಂಬುದಕ್ಕೆ ಮಾದರಿ. keremanemahabala-hegde4

ಖ್ಯಾತ ವಿದ್ವಾಂಸ ದಿ| ಕು.ಶಿ. ಹರಿದಾಶಭಟ್ಟರು ತಮ್ಮ ಅಂಕಣ ‘ಲೋಕಾಭಿರಾಮ’ದಲ್ಲಿ ಕಿರುತೆರೆಯಲ್ಲಿ ಪ್ರಸಾರವಾದ, ಆ ಕಾಲದಲ್ಲಿ ಇಡೀ ದೇಶವನ್ನೇ ಬೆರಗುಗೊಳಿಸಿದ ಮಹಾಭಾರತ ಸರಣಿಯ ಬಗೆಗೆ ಬರೆಯುತ್ತಾ, ಭೀಷ್ಮನ ಪಾತ್ರಧಾರಿಯ ಮುಕೇಶ್ ಖನ್ನಾನ ಕುರಿತು ಹೊಗಳುವಾಗ ಮಹಾಬಲ ಹೆಗಡೆಯವರ ಭೀಷ್ಮನನ್ನು ಹೊರತುಪಡಿಸಿ ಎಂದು ವಿವರಿಸಿದ್ದರು.

ಮಹಾಬಲರ ಭೀಷ್ಮ ಮಾತ್ರವಲ್ಲ ; ಅವರು ನಿರ್ವಹಿಸಿ ಹೆಸರು ಪಡೆದ ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವ, ಹಾಸ್ಯಪಾತ್ರ, ಸ್ತ್ರೀಪಾತ್ರಗಳು ..ಹೀಗೆ ಮಹಾಬಲರ ಪಾತ್ರ ಸಾಕ್ಷಾತ್ಕಾರದಲ್ಲಿ ದೈವೀಸಿದ್ಧಿಯನ್ನು ನಾಟ್ಯಧರ್ಮಿಯಲ್ಲಿ ಮಿಳಿತ ಮಾಡುವುದನ್ನು ಪ್ರೇಕ್ಷಕ ಅನುಭವಿಸಿದ್ದಾನೆ. ಒಂದರ್ಥದಲ್ಲಿ ಮಹಾಬಲರು ಯಕ್ಷಗಾನದ ಸವ್ಯಸಾಚಿ ಅಂದರೆ ಅತಿಶಯವಲ್ಲ!

“ವಿನಾ ದೈನ್ಯೇನ ಜೀವನಂ” ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಮಹಾಬಲ ಹೆಗಡೆ. ಮಹಾ ಸ್ವಾಭಿಮಾನಿ. ಒಂದು ಬಗೆಯ ‘ಮೂಡಿ’ಯೂ ಕೂಡಾ ! ಹಣದ ವಿಷಯದಲ್ಲಿ ಒಂದು ಕಾಸು ಕಡಿಮೆ ತೆಗೆದುಕೊಂಡವರಲ್ಲ; ಒಂದು ಕಾಸು ಹೆಚ್ಚು ಕೊಟ್ಟವರಲ್ಲ. ತಮಗೆ ಬರಬೇಕಾದ್ದನ್ನು ಬಿಟ್ಟವರಲ್ಲ; ಕೊಡಬೇಕಾದ್ದನ್ನು ತಪ್ಪಿಸಿದವರಲ್ಲ. ಯಾರೆದುರೂ ಕೈ ಚಾಚಿದವರಲ್ಲ. ಮಾತು ತಪ್ಪಿದವರಲ್ಲ. ಯಾವುದನ್ನೇ ಆದರೂ ಶಿಸ್ತುಬದ್ಧವಾಗಿ ಸ್ವೀಕರಿಸುವದು ಮತ್ತು ಅಳವಡಿಸಿಕೊಳ್ಳುವದು ಅವರ ಅಭ್ಯಾಸ. ‘ನನಗೆ ವ್ಯವಸ್ಥಿತವಾಗಿ ಸುಳ್ಳು ಹೇಳಿ ಕಾರ್ಯ ಸಾಧಿಸಿಕೊಳ್ಳಲು ಬರುವುದಿಲ್ಲ. ಹುಡುಗಾಟಿಕೆಗೆ, ತಮಾಷೆಗೆ ಸುಳ್ಳು ಹೇಳುವುದುಂಟು; ಉಳಿದಂತೆ ಉದ್ದೇಶಪೂರ್ವಕ ಸುಳ್ಳು ಹೇಳುವ ಅಭ್ಯಾಸ ಇಲ್ಲ’ ಎಂದಿದ್ದರು. ಕಪಟ, ಕೃತ್ರಿಮ ವರ್ತನೆಗಳಿಂದ ಬಹಳ ದೂರ.

ಹೊಗಳಿಕೆಗಳನ್ನು ಬೇಡವೆನ್ನಲಿಲ್ಲ. ಹಾಗಂತ ರಚನಾತ್ಮಕವಾಗಿದ್ದರೆ, ಟೀಕೆಗೂ ಮೈಯೊಡ್ಡಲು ಹಿಂಜರಿದವರಲ್ಲ. ಆದರೆ ತಮಗೆ ಸಲ್ಲದ ಪ್ರಶಂಸೆ ಬಂದರೆ ಅಷ್ಟೇ ವಿನಯದಿಂದ ಹಿಂದಿರುಗಿಸುತ್ತಿದ್ದರು. ಜೊತೆಗೆ ತಾನು ಹೇಳಿಕೊಟ್ಟದ್ದನ್ನು ಇನ್ನೊಬ್ಬರು ಪ್ರತಿಪಾದಿಸಿದಾಗ ಕರುಬುವ ಮಂದಿಯಿರುವ ಕಾಲದಲ್ಲಿ ಮಹಾಬಲರು ‘ತಮ್ಮ ಅನುಭವಗಳು ನಿಜವಾದುವಲ್ಲಾ’ ಎಂದುಕೊಂಡು ಸಂಭ್ರಮಿಸುತ್ತಿದ್ದರು. ಆದರೆ ತಮ್ಮ ಅರ್ಹತೆ ಗುರುತಿಸದಿದ್ದಾಗ ಅಸಮಾಧಾನ ಹೊಂದಿದ್ದೂ ಇದೆ. ಇತ್ತೀಚೆಗೆ ಅಕ್ಟೋಬರ್ ೧೫ರಂದು ದೇರಾಜೆ ಸೀತಾರಾಮಯ್ಯ ಪ್ರಶಸ್ತಿಯನ್ನು ಕೊಡಲಾಗಿತ್ತು. ಇದು ಅವರಿಗೆ ದೊರೆತ ಕೊನೆಯ ಪ್ರಶಸ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಮನೆಯಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

kremaneಶಂಭು ಹೆಗಡೆ ತೀರಿಕೊಂಡಿದ್ದು ಇಡಗುಂಜಿ ತೇರಿನ ದಿನ ; ರಥ ಸಪ್ತಮಿಯಂದು. ಮಹಾಬಲ ಹೆಗಡೆ ಏಕಾದಶಿಯಂದು. ಶುಭ ಸಂದರ್ಭಗಳೇ.. ಆದರೆ ಅಶುಭ ವಾರ್ತೆ. ಮಹಾಬಲ ಹೆಗಡೆ, ಶಂಭು ಹೆಗಡೆ ಜೋಡಿ ಯಕ್ಷಗಾನದಲ್ಲಿನ ಅಮೃತ ಗಳಿಗೆಗಳಲ್ಲೊಂದು. ಈಗ ಕೆರೆಮನೆಯ ಜೋಡಿ ಕಲಾದಿಗಂತದಿಂದ ಮರೆಯಾಗಿದೆ. ಯಕ್ಷಗಾನದ ವೈಭವಪೂರ್ಣ ಅಧ್ಯಾಯಕ್ಕೊಂದು ತೆರೆ ಬಿದ್ದಿದೆ. ಮರೆಯಾದ ಚೇತನಕ್ಕಿದೋ ಅಕ್ಷರಾಂಜಲಿ..

Leave a Reply

*

code